ಭೂವಿಜ್ಞಾನ ಸಚಿವಾಲಯ
ನೀಲಿ ಆರ್ಥಿಕ ನೀತಿ
Posted On:
27 JUL 2022 12:48PM by PIB Bengaluru
ಕೇಂದ್ರ ಭೂ ವಿಜ್ಞಾನ ಸಚಿವಾಲಯ ದೇಶಕ್ಕೆ ಅಗತ್ಯವಾಗಿರುವ ನೀಲಿ ಆರ್ಥಿಕತೆ ಕುರಿತ ರಾಷ್ಟ್ರೀಯ ನೀತಿಯನ್ನು ಅಂತಿಮಗೊಳಿಸುತ್ತಿದೆ.
ಭಾರತದ ನೀಲಿ ಆರ್ಥಿಕತೆಯ ಕರಡು ನೀತಿಯ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ನೀಲಿ ಆರ್ಥಿಕ ನೀತಿಯ ಕರಡು ಚೌಕಟ್ಟು, ಕರಾವಳಿ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗಾಗಿ ಕಡಲ ವಲಯದ [ಜೀವಂತ, ನಿರ್ಜೀವ ಸಂಪನ್ಮೂಲಗಳು, ಪ್ರವಾಸೋದ್ಯಮ, ಸಾಗರ ಶಕ್ತಿ ಮತ್ತಿತರ] ಎಲ್ಲಾ ಕ್ಷೇತ್ರಗಳ ಬಳಕೆಯನ್ನು ಅತ್ಯುತ್ತಮಗೊಳಿಸುತ್ತದೆ. ನೀಲಿ ಆರ್ಥಿಕತೆ ಹಾಗೂ ಸಾಗರ ಆಡಳಿತಕ್ಕಾಗಿ ರಾಷ್ಟ್ರೀಯ ಲೆಕ್ಕಪತ್ರ ಚೌಕಟ್ಟು, ಕರಾವಳಿ ಪ್ರಾದೇಶಿಕ ಯೋಜನೆ, ಪ್ರವಾಸೋದ್ಯಮ, ಸಮುದ್ರ ಮೀನುಗಾರಿಕೆ, ಜಲಚರಗಳು ಮತ್ತು ಮೀನು ಸಂಸ್ಕರಣೆಯಂತಹ ಪ್ರಮುಖ ಶಿಫಾರಸ್ಸು ದಾಖಲೆಗಳನ್ನು ಈ ನೀತಿ ಒಳಗೊಂಡಿದೆ. ಇದಲ್ಲದೇ ಉತ್ಪಾದನೆ, ಬೆಳವಣಿಗೆಯಾಗುತ್ತಿರುವ ಕೈಗಾರಿಕಾ ವಲಯ, ವ್ಯಾಪಾರ, ತಂತ್ರಜ್ಞಾನ, ಸೇವೆಗಳು ಮತ್ತು ಕೌಶಲ್ಯಾಭಿವೃದ್ಧಿ, ಸಾಗಣೆ, ಮೂಲ ಸೌಕರ್ಯ ಮತ್ತು ಬಂದರು, ಕರಾವಳಿ ಹಾಗೂ ಆಳ ಸಮುದ್ರ ಗಣಿಗಾರಿಕೆ, ಭದ್ರತೆ ಹಾಗೂ ಕಡಲಾಚೆಯ ಇಂಧನ ವಲಯ, ಕಾರ್ಯತಂತ್ರದ ಆಯಾಮಗಳು ಹಾಗೂ ಅಂತರರಾಷ್ಟ್ರೀಯ ಚಟುವಟಿಕೆಗಳನ್ನು ಈ ನೀತಿ ಹೊಂದಿದೆ.
ರಾಷ್ಟ್ರೀಯ ನೀಲಿ ಆರ್ಥಿಕತೆ ಕುರಿತ ಸಲಹಾ ಮಂಡಳಿ [ಬಿ.ಇ.ಎ.ಸಿ] ಸಂಬಂಧಪಟ್ಟ ಸಚಿವಾಲಯಗಳು ಹಾಗೂ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡಿದೆ. ಜೊತೆಗೆ ಕರಾವಳಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೈಗಾರಿಕಾ ವಲಯದ ಪ್ರತಿನಿಧಿಗಳು ಸಹ ಮಂಡಳಿಯಲ್ಲಿದ್ದಾರೆ.
ಕರಡು ನೀತಿ ಕುರಿತು ಸಾಮಾನ್ಯ ನಾಗರಿಕರು ಹಾಗೂ ಪಾಲುದಾರರಿಂದ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ. ಸಾಮಾನ್ಯ ನಾಗರಿಕರು, ಸಚಿವಾಲಯಗಳು/ ಇಲಾಖೆಗಳು/ ಸಂಸತ್ ಸದಸ್ಯರು, ಸರ್ಕಾರೇತರ ಸಂಘ ಸಂಸ್ಥೆಗಳು [ಎನ್.ಜಿ.ಒಗಳು], ಕೈಗಾರಿಕಾ ಪ್ರತಿನಿಧಿಗಳಿಂದ ಸ್ವೀಕರಿಸುವ ಮೌಲ್ಯಯುತ ಸಲಹೆಗಳು ಹಾಗೂ ಪ್ರತಿಕ್ರಿಯೆಗಳನ್ನು ಪರಿಗಣಿಸಲಾಗಿದೆ ಮತ್ತು ಇದಕ್ಕೆ ಅನುಗುಣವಾಗಿ ನೀತಿಯ ದಾಖಲೆಗಳನ್ನು ಪರಿಷ್ಕರಿಸಲಾಗಿದೆ.
‘ಸ್ವಚ್ಛ ಭೂಮಿ, ಸ್ವಚ್ಛ ಸಾಗರ’ ಎಂಬ ವಿಷಯದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ, ಆದರೆ ‘ಸ್ವಚ್ಛ ಸಾಗರ, ಸುರಕ್ಷಿತ ಸಾಗರ’ ಎಂಬ ವಿಷಯದೊಂದಿಗೆ ಚಟುವಟಿಕೆಗಳನ್ನು ಜಾರಿಗೊಳಿಸಲಾಗಿದೆ. 2022 ರ ಜುಲೈ 5 ರಿಂದ ದೇಶದ ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ 75 ಕಡಲ ತೀರಗಳಲ್ಲಿ 75 ದಿನಗಳ ಕಾಲ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು, ಇದು ‘ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ’ವಾದ 2022 ರ ಸೆಪ್ಟೆಂಬರ್ 17 ರ ವರೆಗೆ ಮುಂದುವರಿಯಲಿದೆ. ಭಾರತೀಯ ಕರಾವಳಿ ರಕ್ಷಣಾ ಪಡೆ, ಎಂ.ಇ.ಎಫ್ ಮತ್ತು ಸಿಸಿ, ಎಂ.ವೈ.ಎ.ಎಸ್, ಎನ್.ಡಿ.ಎಂ.ಎ, ಪರಿಸರ ಸಂರಕ್ಷಣಾ ಸಂಸ್ಥೆ ಮತ್ತು ಸರ್ಕಾರದ ಇಲಾಖೆಗಳು, ಸ್ವಯಂ ಸೇವಾ ಸಂಘಟನೆಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಹಯೋಗದಲ್ಲಿ ಎಂ.ಇ.ಎಸ್ ಸಚಿವಾಲಯ ಜಂಟಿಯಾಗಿ ಈ ಅಭಿಯಾನ ಆರಂಭಿಸಿದೆ.
ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಜನ ಜಾಗೃತಿ ಅಭಿಯಾನ, ಸ್ಪರ್ಧೆಗಳು ಮತ್ತು ಕಾರ್ಯಾಗಾರಗಳು/ವಿಚಾರ ಸಂಕಿರಣಗಳು, ಮತ್ತಿತರ ಕಾರ್ಯಕ್ರಮಗಳನ್ನು ಭೂಮಿ ದಿನ, ಸಮುದ್ರ ದಿನದಂದು ಆಯೋಜಿಸಲಾಗುತ್ತಿದೆ.
ಭೂ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ [ಸ್ವತಂತ್ರ್ಯ ನಿರ್ವಹಣೆ] ಡಾ. ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
***********
(Release ID: 1845385)
Visitor Counter : 297