ರಕ್ಷಣಾ ಸಚಿವಾಲಯ
ರಕ್ಷಣಾ ಮಂತ್ರಿಯವರು ವೈ-3023 ದುನಗಿರಿ, ಪ್ರಾಜೆಕ್ಟ್ 17A ಯುದ್ಧನೌಕೆಗೆ ಜಿಆರ್ಎಸ್ಇ ಲಿಮಿಟೆಡ್, ಕೋಲ್ಕತ್ತಾದಲ್ಲಿ ಚಾಲನೆ ನೀಡಿದರು
ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ಭದ್ರತಾಪಡೆ ಮತ್ತು ಇತರ ಸಂಸ್ಥೆಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ಸದಾ ಮುಂದೆ ಇರಲು ಮೂಲಸೌಕರ್ಯವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ರಕ್ಷಣಾ ಮಂತ್ರಿ ಪುನರುಚ್ಚರಿಸಿದರು
Posted On:
15 JUL 2022 4:26PM by PIB Bengaluru
ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅವರು ಜುಲೈ 15, 2022 ರಂದು ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಜಿಆರ್ಎಸ್ಇ) ನಿರ್ಮಿಸಿದ ಪ್ರಾಜೆಕ್ಟ್ 17ಎ ಫ್ರಿಗೇಟ್ ವೈ- 3023 ದುನಗಿರಿಗೆ ಚಾಲನೆ ನೀಡಿದರು. ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಭಾರತೀಯ ನೌಕಾಪಡೆಯ ಇತರ ಹಿರಿಯ ಅಧಿಕಾರಿಗಳು ಮತ್ತು ರಕ್ಷಣಾ ಸಚಿವಾಲಯದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪಿ17ಎ ಫ್ರಿಗೇಟ್ಗಳು ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು ಮತ್ತು ಪ್ಲಾಟ್ಫಾರ್ಮ್ ನಿರ್ವಹಣಾ ವ್ಯವಸ್ಥೆಗಳೊಂದಿಗೆ P17 (ಶಿವಾಲಿಕ್ ಕ್ಲಾಸ್) ಯುದ್ಧನೌಕೆ (ಫ್ರಿಗೇಟ್) ಗಳ ಮುಂದಿನ ಆವೃತ್ತಿಯಾಗಿದೆ. ಏಳು ಪಿ17ಎ ಫ್ರಿಗೇಟ್ಗಳು ಮಜಗಾಂವ್ ಡಾಕ್ ಲಿಮಿಟೆಡ್ (ಎಮ್ಡಿಎಲ್) ಮತ್ತು ಜಿಆರ್ಎಸ್ಇ ನಲ್ಲಿ ನಿರ್ಮಾಣದ ವಿವಿಧ ಹಂತಗಳಲ್ಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಮಂತ್ರಿಯವರು ಯುದ್ಧನೌಕೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ವಾವಲಂಬನೆಗಾಗಿ ರಾಷ್ಟ್ರದ ಅನ್ವೇಷಣೆಯನ್ನು ಸಾಕಾರಗೊಳಿಸುವಲ್ಲಿ ನೌಕಾ ವಿನ್ಯಾಸ ನಿರ್ದೇಶನಾಲಯ ಮತ್ತು ಇತರ ನೌಕಾ ತಂಡಗಳ ಪ್ರಯತ್ನಗಳನ್ನು ಶ್ಲಾಘಿಸಿದರು. ವಿವಿಧ ಸವಾಲುಗಳ ನಡುವೆಯೂ ಹಡಗು ಉತ್ಪಾದನೆಯ ಕ್ಷೇತ್ರದಲ್ಲಿ ತನ್ನ ನಿರಂತರ ಬೆಂಬಲಕ್ಕಾಗಿ ಮತ್ತು ಭಾರತೀಯ ನೌಕಾಪಡೆಯು ತನ್ನ ಹಡಗುಗಳನ್ನು ಹೊಂದುವ ಯೋಜನೆಯನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತಿರುವುದಕ್ಕಾಗಿ ಜಿಆರ್ಎಸ್ಇ ಯನ್ನು ಶ್ಲಾಘಿಸಿದರು. ಸಮುದ್ರ, ಆಕಾಶ ಮತ್ತು ನೀರೊಳಗಿನ ಶತ್ರುಗಳನ್ನು ನಾಶಮಾಡುವ ಬಹು ಆಯಾಮದ ಸಾಮರ್ಥ್ಯಗಳೊಂದಿಗೆ 'ದುನಗಿರಿ' ವಿಶ್ವ ದರ್ಜೆಯ ನಿಗೂಢ ಫ್ರಿಗೇಟ್ ಆಗಲಿದೆ ಎಂದು ರಕ್ಷಣಾ ಮಂತ್ರಿ ಹೇಳಿದರು.
ಪ್ರಪಂಚದ ಬದಲಾಗುತ್ತಿರುವ ಸನ್ನಿವೇಶದಲ್ಲಿ ನಮ್ಮ ಮೂಲಸೌಕರ್ಯ ಮತ್ತು ಉಪಕರಣಗಳನ್ನು ಹೆಚ್ಚಿಸುವ ಅಗತ್ಯದ ಬಗ್ಗೆ ಮಾತನಾಡಿದ ರಕ್ಷಣಾ ಮಂತ್ರಿಗಳು, ದೇಶಗಳ ನಡುವಿನ ಆರ್ಥಿಕ, ರಾಜಕೀಯ ಮತ್ತು ವ್ಯಾಪಾರ ಸಂಬಂಧಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಎಂದು ಹೇಳಿದರು. ಹಿಂದೂ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಭದ್ರತಾ ಸವಾಲುಗಳು ನಿರಂತರವಾಗಿ ಹೆಚ್ಚುತ್ತಿವೆ. ಪ್ರಧಾನಮಂತ್ರಿಯವರ 'ಸಾಗರ್' ನ ಗುರಿಯನ್ನು ಸಾಧಿಸಲು, ಅಂದರೆ ' ನಾಡಿನಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ' ಮತ್ತು ಭಾರತದ ರಾಷ್ಟ್ರೀಯ ಕಡಲ ಹಿತಾಸಕ್ತಿಗಳನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು, ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ಭದ್ರತಾಪಡೆ ಮತ್ತು ಇತರ ಸಂಸ್ಥೆಗಳು ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಇದರಿಂದ ದೇಶವು ಈ ಸವಾಲುಗಳನ್ನು ಎದುರಿಸುವಲ್ಲಿ ಎಲ್ಲರಿಗಿಂತ ಮುಂದಿರುತ್ತದೆ.
ರಕ್ಷಣಾ ಮಂತ್ರಿಯವರು ಬಂಗಾಳದ ವೀರ ಪುತ್ರರಾದ ಜತೀಂದ್ರನಾಥ ಮುಖರ್ಜಿ (ಬಾಗಾ), ಖುದಿರಾಮ್ ಬೋಸ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು ಮತ್ತು ನಮ್ಮ ದೇಶವು 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವಾಗ ರಾಷ್ಟ್ರಕ್ಕೆ ಅವರ ಅವಿಸ್ಮರಣೀಯ ಕೊಡುಗೆಗಳನ್ನು ಉಲ್ಲೇಖಿಸಿದರು. ಬಂಗಾಳದ ವೀರ ಮಹಿಳೆಯರು, ಬೇಗಂ ರುಕೈಯಾ, ಬೀನಾ ದಾಸ್ ಮತ್ತು ಇತರ ಅನೇಕರ ಪಾತ್ರವನ್ನು ಅವರು ಶ್ಲಾಘಿಸಿ, ಅವರು ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಸರನ್ನು ತಂದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್, ರಾಷ್ಟ್ರದ ಕಡಲ ಹಿತಾಸಕ್ತಿಗಳನ್ನು ಸಂರಕ್ಷಿಸುವುದು, ರಕ್ಷಿಸುವುದು ಮತ್ತು ಉತ್ತೇಜಿಸುವುದು ಭಾರತೀಯ ನೌಕಾಪಡೆಯ ಪ್ರಾಥಮಿಕ ಆದ್ಯತೆಯಾಗಿದೆ, ಇದು ದೇಶದ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತದೆ. ದುನಗಿರಿ ಯೋಜನೆಯು 3000 ಕ್ಕೂ ಹೆಚ್ಚು ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಜೊತೆಗೆ, ದೇಶಾದ್ಯಂತ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಜೊತೆಗೆ 29 ಭಾರತೀಯ ಮೂಲ ಉಪಕರಣ ತಯಾರಕರು ಈ ಯೋಜನೆಗೆ ಕೊಡುಗೆ ನೀಡುತ್ತಿವೆ. ಹೀಗಾಗಿ, ನೌಕಾಪಡೆಯ ಬಜೆಟ್ ಆರ್ಥಿಕತೆಗೆ ಮತ್ತು ರಾಷ್ಟ್ರ-ನಿರ್ಮಾಣಕ್ಕೆ ಮಹತ್ವದ 'ಮರು-ಹೂಡಿಕೆʼಯಾಗಿದೆ. ನೌಕಾಪಡೆಯ ಸುಮಾರು 1,75,000 ಕೋಟಿ ರೂಪಾಯಿಗಳ ಹೂಡಿಕೆಯ ಮೊತ್ತದ 88% ಭವಿಷ್ಯದ ಒಪ್ಪಂದಗಳು ಭಾರತೀಯ ಉದ್ಯಮಗಳ ಮೂಲಕ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ನೇವಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (ಎನ್ಡಬ್ಲ್ಯೂಡಬ್ಲ್ಯೂಎ) ಅಧ್ಯಕ್ಷರಾದ ಶ್ರೀಮತಿ ಕಲಾ ಹರಿ ಕುಮಾರ್ ಅವರು ಸಾಂಪ್ರದಾಯಿಕ ಗೌರವಗಳನ್ನು ನೆರವೇರಿಸಿದರು ಮತ್ತು ಹಡಗಿಗೆ ದುನಗಿರಿ ಎಂದು ಹೆಸರಿಸಿದರು. ನೆರೆದವರ ಹರ್ಷೋದ್ಗಾರದ ನಡುವೆ ಹೂಗ್ಲಿ ನದಿಯ ನೀರಿಗೆ ಹಡಗು ಇಳಿಯಿತು.
*********
(Release ID: 1841925)
Visitor Counter : 245