ಪ್ರಧಾನ ಮಂತ್ರಿಯವರ ಕಛೇರಿ
ಪಾಟ್ನಾದಲ್ಲಿ ಬಿಹಾರ ವಿಧಾನಸಭೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
Posted On:
12 JUL 2022 9:02PM by PIB Bengaluru
ನಮಸ್ಕಾರ!
ಈ ಐತಿಹಾಸಿಕ ಸಂದರ್ಭದಲ್ಲಿ ಉಪಸ್ಥಿತರಿರುವ ಬಿಹಾರದ ರಾಜ್ಯಪಾಲ ಶ್ರೀ ಫಗು ಚೌಹಾಣ್ ಜೀ,
ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜೀ, ವಿಧಾನಸಭೆ ಸ್ಪೀಕರ್ ಶ್ರೀ
ವಿಜಯ್ ಸಿನ್ಹಾ ಜೀ, ಬಿಹಾರ ವಿಧಾನ ಪರಿಷತ್ತಿನ ಕಾರ್ಯಾಧ್ಯಕ್ಷ ಶ್ರೀ ಅವಧೇಶ್ ನರೇನ್ ಸಿಂಗ್ ಜಿ,
ಉಪ ಮುಖ್ಯಮಂತ್ರಿ ಶ್ರೀಮತಿ ರೇಣು ದೇವಿ ಜೀ, ತಾರ್ಕಿಶೋರ್ ಪ್ರಸಾದ್ ಜೀ, ವಿರೋಧ ಪಕ್ಷದ
ನಾಯಕ ಶ್ರೀ ತೇಜಸ್ವಿ ಯಾದವ್ ಜೀ, ಎಲ್ಲಾ ಮಂತ್ರಿಗಳೇ, ಶಾಸಕರೇ, ಇತರ ಗಣ್ಯರೇ,
ಮಹಿಳೆಯರೇ ಮತ್ತು ಮಹನೀಯರೇ!
ಬಿಹಾರ ವಿಧಾನಸಭೆಯ ಶತಮಾನೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ, ಬಿಹಾರದ ಜನತೆಗೆ,
ಶುಭಾಶಯಗಳು. ತಮ್ಮ ಮೇಲೆ ಹರಿಸಲಾದ ಪ್ರೀತಿಗಿಂತ ಹಲವಾರು ಪಟ್ಟು ಹೆಚ್ಚು ಪ್ರೀತಿಯನ್ನು
ಹಿಂದಿರುಗಿಸುವುದು ಬಿಹಾರದ ಜನತೆಯ ಸ್ವಭಾವವಾಗಿದೆ. ಬಿಹಾರ ವಿಧಾನಸಭೆ ಸಂಕೀರ್ಣಕ್ಕೆ
ಭೇಟಿ ನೀಡಿದ ದೇಶದ ಮೊದಲ ಪ್ರಧಾನಿ ಎಂಬ ಹೆಚ್ಚುಗಾರಿಕೆ ಇಂದು ನನ್ನದಾಗಿದೆ, ಆ ಅದೃಷ್ಟ
ನನಗೆ ಲಭಿಸಿದೆ. ಈ ವಾತ್ಸಲ್ಯಕ್ಕಾಗಿ ಬಿಹಾರದ ಜನತೆಗೆ ಮತ್ತು ಮುಖ್ಯಮಂತ್ರಿಗಳು ಹಾಗು
ಗೌರವಾನ್ವಿತ ಸಭಾಧ್ಯಕ್ಷರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಸ್ವಲ್ಪ ಸಮಯದ ಹಿಂದೆ ಶತಾಬ್ದಿ ಸ್ಮೃತಿ ಸ್ತಂಭವನ್ನು ಉದ್ಘಾಟಿಸುವ ಅವಕಾಶವೂ ನನಗೆ
ದೊರೆತಿದೆ. ಈ ಸ್ತಂಭವು ಬಿಹಾರದ ಭವ್ಯ ಗತಕಾಲದ ಸಂಕೇತವಾಗಿರುವುದು ಮಾತ್ರವಲ್ಲದೆ,
ಬಿಹಾರದ ವಿವಿಧ ಆಕಾಂಕ್ಷೆಗಳಿಗೆ ಸ್ಫೂರ್ತಿ, ಪ್ರೇರಣೆಯನ್ನು ಒದಗಿಸುತ್ತದೆ. ಸ್ವಲ್ಪ ಸಮಯದ
ಹಿಂದೆ, ಬಿಹಾರ ವಿಧಾನಸಭೆ ವಸ್ತುಸಂಗ್ರಹಾಲಯ ಮತ್ತು ವಿಧಾನ ಸಭಾ ಅತಿಥಿ ಗೃಹದ
ಶಂಕುಸ್ಥಾಪನೆಯನ್ನು ಸಹ ಮಾಡಲಾಗಿದೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿತೀಶ್
ಕುಮಾರ್ ಜೀ ಮತ್ತು ವಿಜಯ್ ಸಿನ್ಹಾ ಜೀ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ,
ವಿಧಾಸಸಭಾ ಸಂಕೀರ್ಣದ ಶತಾಬ್ದಿ ಉದ್ಯಾನವನದಲ್ಲಿ ಕಲ್ಪತರು ನೆಡುವ ಆಹ್ಲಾದಕರ
ಅನುಭವವೂ ನನಗೆ ದೊರಕಿದೆ. ಕಲ್ಪತರು ವೃಕ್ಷ ನಮ್ಮ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು,
ಆಶೋತ್ತರಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ ಇದೆ. ಪ್ರಜಾಪ್ರಭುತ್ವದಲ್ಲಿ ಸಂಸದೀಯ
ಸಂಸ್ಥೆಗಳು ಇಂತಹದೇ ಪಾತ್ರವನ್ನು ವಹಿಸುತ್ತವೆ. ಬಿಹಾರ ವಿಧಾನಸಭೆಯು ಈ ಪಾತ್ರವನ್ನು
ನಿರಂತರವಾಗಿ ನಿರ್ವಹಿಸುತ್ತದೆ ಮತ್ತು ಬಿಹಾರ ಹಾಗು ದೇಶದ ಅಭಿವೃದ್ಧಿಗೆ ಅಮೂಲ್ಯ
ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸಿಕೊಂಡು ಹೋಗುತ್ತದೆ ಎಂದು ನಾನು
ಭಾವಿಸುತ್ತೇನೆ.
ಸ್ನೇಹಿತರೇ,
ಬಿಹಾರ ವಿಧಾನಸಭೆಯು ತನ್ನದೇ ಆದ ಇತಿಹಾಸವನ್ನು ಹೊಂದಿದೆ ಮತ್ತು ಈ ವಿಧಾನ ಸಭಾ
ಕಟ್ಟಡದಲ್ಲಿ ಹಲವಾರು ಪ್ರಮುಖ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸ್ವಾತಂತ್ರ್ಯ
ಪೂರ್ವದಲ್ಲಿ ರಾಜ್ಯಪಾಲ ಸತ್ಯೇಂದ್ರ ಪ್ರಸನ್ನ ಸಿನ್ಹಾ ಅವರು ಸ್ಥಳೀಯ ಕೈಗಾರಿಕೆಗಳನ್ನು
ಉತ್ತೇಜಿಸಲು ಮತ್ತು ದೇಶೀಯ ಚರಕ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಲು ಇದೇ
ಸಭೆಯಿಂದ ಮನವಿ ಮಾಡಿದ್ದರು. ಸ್ವಾತಂತ್ರ್ಯದ ನಂತರ, ಜಮೀನ್ದಾರಿ ಪದ್ಧತಿ ರದ್ದು ಕಾಯ್ದೆಯನ್ನು
ಈ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು
ಹೋಗಿ, ನಿತೀಶ್ ಜಿ ಅವರ ಸರ್ಕಾರವು ಬಿಹಾರ ಪಂಚಾಯತ್ ರಾಜ್ ನಂತಹ ಕಾಯ್ದೆಯನ್ನು
ಜಾರಿಗೆ ತಂದಿತು. ಈ ಕಾಯ್ದೆಯ ಮೂಲಕ, ಪಂಚಾಯತ್ ರಾಜ್ ನಲ್ಲಿ ಮಹಿಳೆಯರಿಗೆ ಶೇಕಡಾ 50
ರಷ್ಟು ಮೀಸಲಾತಿ ನೀಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಬಿಹಾರ
ಪಾತ್ರವಾಯಿತು..ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಜೀವನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ
ಸಮಾನ ಭಾಗವಹಿಸುವಿಕೆ ಮತ್ತು ಸಮಾನ ಹಕ್ಕುಗಳಿಗಾಗಿ ಒಬ್ಬರು ಹೇಗೆ ಕೆಲಸ ಮಾಡಬಹುದು
ಎಂಬುದಕ್ಕೆ ಈ ವಿಧಾನ ಸಭೆ ಒಂದು ಉದಾಹರಣೆಯಾಗಿದೆ. ಇಂದು ಈ ಸಂಕೀರ್ಣದಲ್ಲಿ, ನಾನು
ನಿಮ್ಮೊಂದಿಗೆ ವಿಧಾನಸಭೆಯ ಕಟ್ಟಡದ ಬಗ್ಗೆ ಮಾತನಾಡುತ್ತಿರುವಾಗ, ಕಳೆದ 100 ವರ್ಷಗಳಲ್ಲಿ ಈ
ಕಟ್ಟಡವು ಹಲವಾರು ಮಹಾನ್ ವ್ಯಕ್ತಿಗಳ ಧ್ವನಿಗಳಿಗೆ ಸಾಕ್ಷಿಯಾಗಿದೆ ಎಂಬ ಸಂಗತಿಯೂ ನನ್ನ
ಮನಸ್ಸಿಗೆ ಕಾಣುತ್ತದೆ. ಸಮಯದ ಅಭಾವದಿಂದಾಗಿ ಅವರಲ್ಲಿ ಪ್ರತಿಯೊಬ್ಬರ ಬಗ್ಗೆಯೂ
ಮಾತನಾಡಲು ಸಾಧ್ಯವಿಲ್ಲ ಆದರೆ ಈ ಕಟ್ಟಡವು ಇತಿಹಾಸದ ಸೃಷ್ಟಿಕರ್ತರಿಗೆ ಸಾಕ್ಷಿಯಾಗಿದೆ
ಮಾತ್ರವಲ್ಲದೇ ಇತಿಹಾಸವನ್ನು ಸೃಷ್ಟಿಸಿದೆ. ಧ್ವನಿಯ ಶಕ್ತಿಯು ಶಾಶ್ವತವಾಗಿದೆ ಎಂದು
ಹೇಳಲಾಗುತ್ತದೆ. ಈ ಐತಿಹಾಸಿಕ ಕಟ್ಟಡದಲ್ಲಿ ಹೇಳಲಾದ ವಿಷಯಗಳು ಮತ್ತು ಬಿಹಾರದ
ಅಭಿವೃದ್ಧಿಗೆ ಸಂಬಂಧಿಸಿದ ನಿರ್ಣಯಗಳು ಇಂದಿಗೂ ಶಕ್ತಿಯಾಗಿ ಅಸ್ತಿತ್ವದಲ್ಲಿವೆ. ಇಂದಿಗೂ ಆ
ಮಾತುಗಳು ಇಲ್ಲಿ ಪ್ರತಿಧ್ವನಿಸುತ್ತಿವೆ.
ಸ್ನೇಹಿತರೇ,
ದೇಶವು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವ ಸಮಯದಲ್ಲಿ ಬಿಹಾರ
ವಿಧಾನಸಭೆ ಭವನದ ಈ ಶತಮಾನೋತ್ಸವ ಆಚರಣೆ ನಡೆಯುತ್ತಿದೆ. 'ವಿಧಾನ ಸಭೆ ಕಟ್ಟಡ
ನಿರ್ಮಾಣವಾಗಿ 100 ವರ್ಷಗಳು ಮತ್ತು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ'
ಎಂಬುದು ಕೇವಲ ಕಾಕತಾಳೀಯವಲ್ಲ. ಈ ಕಾಕತಾಳೀಯ ಸಂಗತಿ ಕೂಡಾ ಹಂಚಿಕೊಳ್ಳಲಾದ ಗತ
ಕಾಲ ಮತ್ತು ಅರ್ಥಪೂರ್ಣ ಸಂದೇಶವನ್ನು ಹೊಂದಿದೆ. ಒಂದು ಕಡೆ ಬಿಹಾರದಲ್ಲಿ ಚಂಪಾರಣ್
ಸತ್ಯಾಗ್ರಹದಂತಹ ಚಳವಳಿಗಳು ನಡೆದರೆ, ಮತ್ತೊಂದೆಡೆ ಈ ನೆಲವು ಪ್ರಜಾಪ್ರಭುತ್ವದ
ಮೌಲ್ಯಗಳು ಮತ್ತು ಆದರ್ಶಗಳ ಹಾದಿಯಲ್ಲಿ ನಡೆಯಲು ಭಾರತಕ್ಕೆ ದಾರಿ ತೋರಿಸಿದೆ. ವಿದೇಶಿ
ಆಡಳಿತ ಮತ್ತು ವಿದೇಶಿ ವಿಚಾರಗಳಿಂದಾಗಿ ಭಾರತವು ತನ್ನ ಪ್ರಜಾಪ್ರಭುತ್ವವನ್ನು ಪಡೆದುಕೊಂಡಿದೆ
ಎಂದು ದಶಕಗಳಿಂದ ನಮಗೆ ತಿಳಿಸಲಾಗಿದೆ; ಮತ್ತು ಇಲ್ಲಿನ ಜನರು ಸಹ ಕೆಲವೊಮ್ಮೆ ಈ
ವಿಷಯಗಳನ್ನು ಹೇಳುತ್ತಾರೆ. ಆದರೆ, ಯಾರಾದರೂ ಇದನ್ನು ಹೇಳಿದಾಗ, ಅವರು ಬಿಹಾರದ
ಇತಿಹಾಸ ಮತ್ತು ಪರಂಪರೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎನ್ನಬಹುದು. ಪ್ರಪಂಚದ
ಹೆಚ್ಚಿನ ಭಾಗಗಳು ನಾಗರಿಕತೆ ಮತ್ತು ಸಂಸ್ಕೃತಿಯ ಕಡೆಗೆ ತಮ್ಮ ಮೊದಲ ಹೆಜ್ಜೆಗಳನ್ನು
ಇಡುತ್ತಿದ್ದಾಗ, ವೈಶಾಲಿಯಲ್ಲಿ ಆಗಲೇ ಅತ್ಯಾಧುನಿಕ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುತ್ತಿತ್ತು.
ವಿಶ್ವದ ಇತರ ಪ್ರದೇಶಗಳಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ತಿಳುವಳಿಕೆ ಬೆಳೆಯಲು
ಪ್ರಾರಂಭಿಸಿದಾಗ, ಲಿಚ್ಛಾವಿ ಮತ್ತು ವಜ್ಜಿಸಂಘದಂತಹ ಗಣರಾಜ್ಯಗಳು ತಮ್ಮ ಉತ್ತುಂಗ ಸ್ಥಿತಿಯಲ್ಲಿ
ಕಾರ್ಯನಿರ್ವಹಿಸುತ್ತಿದ್ದವು.
ಸ್ನೇಹಿತರೇ,
ಭಾರತದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯು ಈ ರಾಷ್ಟ್ರ ಮತ್ತು ಅದರ ಸಂಸ್ಕೃತಿಯಷ್ಟೇ
ಪ್ರಾಚೀನವಾದುದಾಗಿದೆ. ಸಾವಿರಾರು ವರ್ಷಗಳ ಹಿಂದೆ, ಇದನ್ನು ನಮ್ಮ ವೇದಗಳಲ್ಲಿ ಹೇಳಲಾಗಿದೆ
- त्वां विशो वृणतां राज्याय त्वा-मिमाः प्रदिशः पंच देवीः।.. ಅಂದರೆ, ರಾಜನನ್ನು ಎಲ್ಲಾ
ಪ್ರಜೆಗಳು ಆಯ್ಕೆ ಮಾಡಬೇಕು, ಮತ್ತು ವಿದ್ವಾಂಸರ ಸಮಿತಿಗಳು ಆಯ್ಕೆ ಮಾಡಬೇಕು. ಇದನ್ನು
ಸಾವಿರಾರು ವರ್ಷಗಳ ಹಿಂದೆಯೇ ವೇದಗಳಲ್ಲಿ ಹೇಳಲಾಗಿದೆ. ಇಂದಿಗೂ, ನಮ್ಮ ಸಂವಿಧಾನದಲ್ಲಿ,
ಸಂಸದರು-ಶಾಸಕರು, ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ರಾಷ್ಟ್ರಪತಿಗಳ ಆಯ್ಕೆಯು ಈ
ಪ್ರಜಾಸತ್ತಾತ್ಮಕ ಮೌಲ್ಯದ ಮೇಲೆ ನಿಂತಿದೆ. ಭಾರತವು ಪ್ರಜಾಪ್ರಭುತ್ವವನ್ನು ಸಮಾನತೆಯ
ಸಾಧನವೆಂದು ಪರಿಗಣಿಸುವುದರಿಂದ ಪ್ರಜಾಪ್ರಭುತ್ವವು ಒಂದು ಕಲ್ಪನೆಯಾಗಿ ಸಾವಿರಾರು
ವರ್ಷಗಳಿಂದ ಇಲ್ಲಿ ಜೀವಂತವಾಗಿದೆ. ಭಾರತವು ಸಹಬಾಳ್ವೆ ಮತ್ತು ಸಾಮರಸ್ಯದ ಕಲ್ಪನೆಯನ್ನು
ನಂಬುತ್ತದೆ. ನಾವು ಸತ್ಯವನ್ನು ನಂಬುತ್ತೇವೆ; ನಾವು ಸಹಕಾರದಲ್ಲಿ ನಂಬಿಕೆ ಇಟ್ಟಿದ್ದೇವೆ; ನಾವು
ಸಾಮರಸ್ಯದಲ್ಲಿ ಮತ್ತು ಏಕೀಕೃತ ಸಮಾಜದ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಅದಕ್ಕಾಗಿಯೇ ನಮ್ಮ
ವೇದಗಳು ನಮಗೆ ಈ ಮಂತ್ರವನ್ನು ನೀಡಿವೆ – सं गच्छध्वं सं वदध्वं, सं वो मनांसि
जानताम्॥ ಅಂದರೆ, ನಾವು ಒಟ್ಟಿಗೆ ನಡೆಯೋಣ, ಒಟ್ಟಿಗೆ ಮಾತನಾಡೋಣ, ಪರಸ್ಪರರ
ಮನಸ್ಸುಗಳು ಅಥವಾ ಆಲೋಚನೆಗಳನ್ನು ತಿಳಿದುಕೊಳ್ಳೋಣ ಮತ್ತು ಅರ್ಥಮಾಡಿಕೊಳ್ಳೋಣ.
ಇದನ್ನು ಈ ವೇದ ಮಂತ್ರದಲ್ಲಿ ಮತ್ತಷ್ಟು ಹೇಳಲಾಗಿದೆ - – समानो मन्त्र: समिति: समानी।
ಅಂದರೆ, ನಾವು ಒಟ್ಟಾಗಿ ಯೋಚಿಸೋಣ, ನಮ್ಮ ಸಮಿತಿಗಳು, ನಮ್ಮ ಸಭೆಗಳು ಮತ್ತು ಸದನಗಳು
ಸಮಾಜದ ಕಲ್ಯಾಣಕ್ಕಾಗಿ ಸಮಾನ ಮನಸ್ಕವಾಗಿರಲಿ, ಮತ್ತು ನಮ್ಮ ಹೃದಯಗಳು ಒಂದಾಗಲಿ. ಒಂದು
ರಾಷ್ಟ್ರವಾಗಿ ಭಾರತ ಮಾತ್ರ ಪ್ರಜಾಪ್ರಭುತ್ವವನ್ನು ತನ್ನ ಹೃದಯ ಮತ್ತು ಆತ್ಮದಿಂದ ಸ್ವೀಕರಿಸುವ
ಮಹಾನ್ ಮನೋಭಾವವನ್ನು ಪ್ರಸ್ತುತಪಡಿಸಲು ಸಾಧ್ಯವಾಗಿದೆ. ಅದಕ್ಕಾಗಿಯೇ, ನಾನು ವಿಶ್ವದ ವಿವಿಧ
ದೇಶಗಳಿಗೆ ಭೇಟಿ ನೀಡಿದಾಗ ಅಥವಾ ಯಾವುದೇ ಪ್ರಮುಖ ಜಾಗತಿಕ ವೇದಿಕೆಯಲ್ಲಿ ಉಪಸ್ಥಿತನಿದ್ದಾಗ,
ಒಂದು ವಿಷಯವನ್ನು ಬಹಳ ಹೆಮ್ಮೆಯಿಂದ ಹೇಳುತ್ತೇನೆ. ಕೆಲವು ಕಾರಣಗಳಿಂದಾಗಿ ನಮ್ಮ ಕಿವಿಗಳು
ನಮ್ಮ ಮನಸ್ಸನ್ನು ಬಂಧಿಸಿರುವ ಒಂದು ಪದದಿಂದ ತುಂಬಿಕೊಂಡಿವೆ. ನಾವು ವಿಶ್ವದ ಅತಿದೊಡ್ಡ
ಪ್ರಜಾಪ್ರಭುತ್ವ ಎಂದು ನಮಗೆ ಪದೇ ಪದೇ ಹೇಳಲಾಗುತ್ತಿದೆ ಮತ್ತು ಅದನ್ನು ಮತ್ತೆ ಮತ್ತೆ ಕೇಳುವುದರಿಂದ
ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಆದ್ದರಿಂದ, ನಾನು ಜಾಗತಿಕ ವೇದಿಕೆಗೆ ಹೋದಾಗಲೆಲ್ಲಾ, ಭಾರತವು
ವಿಶ್ವದ 'ಪ್ರಜಾಪ್ರಭುತ್ವದ ತಾಯಿ' ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಾವು ಮತ್ತು ಬಿಹಾರದ ಜನರು
ವಿಶ್ವದ ಮುಂದೆ ಭಾರತವು 'ಪ್ರಜಾಪ್ರಭುತ್ವದ ತಾಯಿ' ಎಂಬ ಈ ಮಾತನ್ನು ಹರಡುತ್ತಲೇ ಇರಬೇಕು.
ಬಿಹಾರದ ಭವ್ಯ ಪರಂಪರೆ ಮತ್ತು ಪಾಲಿಯಲ್ಲಿರುವ ಐತಿಹಾಸಿಕ ದಾಖಲೆಗಳು ಸಹ ಇದಕ್ಕೆ ಜೀವಂತ
ಪುರಾವೆಗಳಾಗಿವೆ. ಬಿಹಾರದ ಈ ವೈಭವವನ್ನು ಯಾರೂ ಅಳಿಸಲು ಅಥವಾ ಮರೆಮಾಚಲು ಸಾಧ್ಯವಿಲ್ಲ.
ಈ ಐತಿಹಾಸಿಕ ಕಟ್ಟಡವು ಕಳೆದ 100 ವರ್ಷಗಳಿಂದ ಬಿಹಾರದ ಈ ಪ್ರಜಾಸತ್ತಾತ್ಮಕ ಪರಂಪರೆಯನ್ನು
ಬಲಪಡಿಸಿದೆ. ಆದ್ದರಿಂದ, ಇಂದು ಈ ಕಟ್ಟಡವು ನಮ್ಮೆಲ್ಲರ ಗೌರವಕ್ಕೆ ಅರ್ಹವಾಗಿದೆ ಎಂದು ನಾನು
ನಂಬುತ್ತೇನೆ.
ಸ್ನೇಹಿತರೇ,
ಈ ಕಟ್ಟಡದ ಇತಿಹಾಸವು ಬಿಹಾರದ ಅಂತಃಪ್ರಜ್ಞೆಗೆ ಸಂಬಂಧಿಸಿದೆ, ಅದು ವಸಾಹತುಶಾಹಿಯ
ಅವಧಿಯಲ್ಲೂ ಅದರ ಪ್ರಜಾಸತ್ತಾತ್ಮಕ ಮೌಲ್ಯಗಳ ಕುಸಿತಕ್ಕೆ ಅವಕಾಶ ನೀಡಲಿಲ್ಲ. ಅದರ
ಸ್ಥಾಪನೆಯ ಸಮಯದಲ್ಲಿ ಮತ್ತು ನಂತರ ಅದಕ್ಕೆ ಸಂಬಂಧಿಸಿದ ಘಟನೆಗಳನ್ನು ನಾವು ಮತ್ತೆ ಮತ್ತೆ
ನೆನಪಿಸಿಕೊಳ್ಳಬೇಕು. ಶ್ರೀ ಬಾಬು ಎಂದೇ ಚಿರಪರಿಚಿತರಾದ ಶ್ರೀ ಕೃಷ್ಣಸಿಂಗ್ ಅವರು ಚುನಾಯಿತ
ಸರ್ಕಾರದ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬ್ರಿಟಿಷ್ ಸರ್ಕಾರವು
ಭರವಸೆ ನೀಡಿದರೆ ಮಾತ್ರ ತಾವು ಸರ್ಕಾರ ರಚಿಸುವುದಾಗಿ ಬ್ರಿಟಿಷರಿಗೆ ಷರತ್ತು ವಿಧಿಸಿದ್ದರು.
ಭಾರತದ ಅನುಮತಿಯಿಲ್ಲದೆ ಭಾರತವನ್ನು ಎರಡನೇ ಮಹಾಯುದ್ಧಕ್ಕೆ ಎಳೆಯುವುದನ್ನು
ವಿರೋಧಿಸಿ ಶ್ರೀ ಬಾಬು ಜೀ ಅವರು ಸರ್ಕಾರಕ್ಕೆ ರಾಜೀನಾಮೆ ನೀಡಿದ್ದರು. ಮತ್ತು ಬಿಹಾರದ
ಪ್ರತಿಯೊಬ್ಬ ವ್ಯಕ್ತಿಯೂ ಅದರ ಬಗ್ಗೆ ಹೆಮ್ಮೆಪಡುತ್ತಾನೆ. ಈ ಘಟನೆಯು ಬಿಹಾರವು ಪ್ರಜಾಪ್ರಭುತ್ವದ
ವಿರುದ್ಧವಾಗಿರುವ ಯಾವುದನ್ನೂ ಸ್ವೀಕರಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.
ಸಹೋದರ ಸಹೋದರಿಯರೇ, ಸ್ವಾತಂತ್ರ್ಯದ ನಂತರವೂ ಬಿಹಾರವು ತನ್ನ ಪ್ರಜಾಸತ್ತಾತ್ಮಕ
ನಿಷ್ಠೆಗೆ ಸ್ಥಿರವಾಗಿ ಮತ್ತು ಸಮಾನವಾಗಿ ಬದ್ಧವಾಗಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.
ಬಿಹಾರವು ಸ್ವತಂತ್ರ ಭಾರತಕ್ಕೆ ಡಾ. ರಾಜೇಂದ್ರ ಪ್ರಸಾದರ ರೂಪದಲ್ಲಿ ತನ್ನ ಮೊದಲ
ರಾಷ್ಟ್ರಪತಿಯನ್ನು ನೀಡಿತು. ಲೋಕನಾಯಕ ಜಯಪ್ರಕಾಶ, ಕರ್ಪೂರಿ ಠಾಕೂರ್ ಮತ್ತು ಬಾಬು
ಜಗಜೀವನರಾಂ ಅವರಂತಹ ನಾಯಕರು ಈ ನೆಲದಲ್ಲಿ ಜನಿಸಿದ್ದರು. ದೇಶದಲ್ಲಿ ಸಂವಿಧಾನವನ್ನು
ತುಳಿಯುವ ಪ್ರಯತ್ನ ನಡೆದಾಗಲೂ ಬಿಹಾರವು ಮುನ್ನೆಲೆಗೆ ಬಂದು ಅದರ ವಿರುದ್ಧ ಪ್ರತಿಭಟಿಸಿತು.
ತುರ್ತುಪರಿಸ್ಥಿತಿಯ ಆ ಕರಾಳ ಸಮಯದಲ್ಲಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ
ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ಬಿಹಾರದ ಮಣ್ಣು ತೋರಿಸಿಕೊಟ್ಟಿತು.
ಆದ್ದರಿಂದ, ಬಿಹಾರವು ಹೆಚ್ಚು ಸಮೃದ್ಧವಾದಷ್ಟೂ, ಭಾರತದ ಪ್ರಜಾಸತ್ತಾತ್ಮಕ ಶಕ್ತಿಯು
ಬಲಗೊಳ್ಳುತ್ತದೆ ಎಂದು ನಾನು ನಂಬುತ್ತೇನೆ. ಬಿಹಾರವು ಬಲವಾದಷ್ಟೂ, ಭಾರತವೂ ಹೆಚ್ಚು
ಬಲಯುತವಾಗಿರುತ್ತದೆ!
ಸ್ನೇಹಿತರೇ,
'ಆಜಾದಿ ಕಾ ಅಮೃತ ಮಹೋತ್ಸವ' ಮತ್ತು ಬಿಹಾರ ವಿಧಾನಸಭೆಯ 100 ವರ್ಷಗಳ ಈ ಚಾರಿತ್ರಿಕ
ಸಂದರ್ಭವು ನಮ್ಮೆಲ್ಲರಿಗೂ, ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಗೂ ಆತ್ಮಾವಲೋಕನದ
ಸಂದೇಶವನ್ನು ತಂದಿದೆ. ನಾವು ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ಹೆಚ್ಚು
ಬಲಯುತಗೊಳಿಸಿದಷ್ಟೂ, ನಮ್ಮ ಸ್ವಾತಂತ್ರ್ಯ ಮತ್ತು ನಮ್ಮ ಹಕ್ಕುಗಳಿಗೆ ಸಂಬಂಧಿಸಿ ನಾವು ಹೆಚ್ಚು
ಶಕ್ತಿಯನ್ನು ಪಡೆಯುತ್ತೇವೆ. ಇಂದು 21 ನೇ ಶತಮಾನದಲ್ಲಿ ಜಗತ್ತು ವೇಗವಾಗಿ ಬದಲಾಗುತ್ತಿದೆ.
ಭಾರತದ ಜನರು ಮತ್ತು ನಮ್ಮ ಯುವಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳು ಸಹ ಹೊಸ
ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚುತ್ತಿವೆ. ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ಅದಕ್ಕೆ
ಅನುಗುಣವಾಗಿ ವೇಗವಾಗಿ ಕೆಲಸ ಮಾಡಬೇಕಾಗುತ್ತದೆ. ಇಂದು, ನಾವು ಸ್ವಾತಂತ್ರ್ಯದ 75 ನೇ
ವರ್ಷದಲ್ಲಿ ನವ ಭಾರತದ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ, ಈ ನಿರ್ಣಯಗಳನ್ನು
ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯು ನಮ್ಮ ಸಂಸತ್ತು ಮತ್ತು ಶಾಸನ ಸಭೆಗಳ ಮೇಲಿದೆ.
ಇದಕ್ಕಾಗಿ, ನಾವು ಪ್ರಾಮಾಣಿಕತೆಯಿಂದ ಹಗಲಿರುಳು ಶ್ರಮಿಸಬೇಕು. ದೇಶದ ಸಂಸದರಾಗಿ,
ರಾಜ್ಯದ ಶಾಸಕರಾಗಿ, ನಮ್ಮ ಪ್ರಜಾಪ್ರಭುತ್ವ ಎದುರಿಸುತ್ತಿರುವ ಪ್ರತಿಯೊಂದು ಸವಾಲನ್ನು ಒಟ್ಟಾಗಿ
ಎದುರಿಸುವುದು ಮತ್ತು ಸೋಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಧ್ವನಿಗಳು ದೇಶಕ್ಕಾಗಿ,
ದೇಶದ ಕಲ್ಯಾಣಕ್ಕಾಗಿ, ಪಕ್ಷಗಳು ಮತ್ತು ವಿರೋಧ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಮೀರುವ
ಮೂಲಕ ಒಂದಾಗಬೇಕು. ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸದನವು
ಸಕಾರಾತ್ಮಕ ಸಂವಾದಗಳ ಕೇಂದ್ರವಾಗಲಿ. ರಚನಾತ್ಮಕ ಕೆಲಸಗಳಿಗಾಗಿ ನಮ್ಮ ಧ್ವನಿ ಅಷ್ಟೇ
ಬಲಯುತವಾಗಿರಲಿ! ಈ ದಿಕ್ಕಿನಲ್ಲಿಯೂ ನಾವು ನಿರಂತರವಾಗಿ ಮುಂದುವರಿಯಬೇಕು. ನಮ್ಮ
ದೇಶದ ಪ್ರಜಾತಾಂತ್ರಿಕ ಪ್ರಬುದ್ಧತೆಯು ನಮ್ಮ ನಡವಳಿಕೆಯಿಂದ ವ್ಯಕ್ತವಾಗುತ್ತದೆ. ಆದ್ದರಿಂದ,
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜೊತೆಗೆ, ನಾವು ವಿಶ್ವದ ಅತ್ಯಂತ ಪ್ರಬುದ್ಧ
ಪ್ರಜಾಪ್ರಭುತ್ವವಾಗಿ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು.
ಸ್ನೇಹಿತರೇ,
ಇಂದು ದೇಶವು ಈ ದಿಕ್ಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಸಾಕ್ಷಿಯಾಗುತ್ತಿದೆ, ಇದು ನನಗೆ
ಸಂತೋಷ ತಂದಿದೆ. ಸಂಸತ್ತಿನ ಬಗ್ಗೆ ಹೇಳುವುದಾದರೆ, ಕಳೆದ ಕೆಲವು ವರ್ಷಗಳಲ್ಲಿ ಸಂಸತ್ತಿನಲ್ಲಿ
ಸಂಸದರ ಹಾಜರಾತಿ ಮತ್ತು ಸಂಸತ್ತಿನ ಉತ್ಪಾದಕತೆಯಲ್ಲಿ ದಾಖಲೆಯ ಹೆಚ್ಚಳವಾಗಿದೆ. ಮತ್ತು
ವಿಜಯ್ ಜೀ ಅವರು ವಿಧಾನ ಸಭೆಯ ವಿವರಗಳನ್ನು ಪ್ರಸ್ತುತಪಡಿಸಿದ್ದಾರೆ. ಸಕಾರಾತ್ಮಕತೆ,
ಚಲನಶೀಲತೆ, ವ್ಯಾಪಕವಾಗಿ ಚರ್ಚಿಸಲಾದ ವಿಷಯಗಳು ಮತ್ತು ಕೈಗೊಂಡ ನಿರ್ಧಾರಗಳ ಬಗ್ಗೆ
ಅವರು ನಮಗೆ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ.
ಸ್ನೇಹಿತರೇ,
ಅದೇ ರೀತಿ ಸಂಸತ್ತಿನಲ್ಲಿ, ಕಳೆದ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯ ಉತ್ಪಾದಕತೆಯು
ಶೇಕಡಾ 129 ರಷ್ಟಿದ್ದರೆ, ರಾಜ್ಯಸಭೆಯಲ್ಲಿ ಶೇಕಡಾ 99 ರಷ್ಟು ಉತ್ಪಾದಕತೆ ದಾಖಲಾಗಿದೆ.
ಅಂದರೆ, ದೇಶವು ನಿರಂತರವಾಗಿ ಹೊಸ ನಿರ್ಣಯಗಳ ಮೇಲೆ ಕೆಲಸ ಮಾಡುತ್ತಿದೆ ಮತ್ತು
ಪ್ರಜಾಸತ್ತಾತ್ಮಕ ಚರ್ಚೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಮತ್ತು ತಾವು ಆಯ್ಕೆ ಮಾಡಿದವರು
ಸದನದಲ್ಲಿ ತಮ್ಮ ದೃಷ್ಟಿಕೋನವನ್ನು ಗಂಭೀರವಾಗಿಟ್ಟುಕೊಂಡು ಕಷ್ಟಪಟ್ಟು ದುಡಿಯುತ್ತಿದ್ದಾರೆ
ಎಂಬುದು ಜನರ ಅರಿವಿಗೆ ಬಂದಾಗ, ಪ್ರಜಾಪ್ರಭುತ್ವದಲ್ಲಿ ಅವರ ನಂಬಿಕೆಯೂ ಹೆಚ್ಚಾಗುತ್ತದೆ
ಎಂದು ನಮಗೆಲ್ಲರಿಗೂ ತಿಳಿದಿದೆ. ಈ ನಂಬಿಕೆಯನ್ನು ವಿಸ್ತರಿಸುವುದು ನಮ್ಮೆಲ್ಲರ ಜವಾಬ್ದಾರಿಯೂ
ಆಗಿದೆ.
ಸ್ನೇಹಿತರೇ
ಕಾಲ ಸರಿದಂತೆ ನಮಗೆ ಹೊಸ ಆಲೋಚನೆಗಳು ಮತ್ತು ಹೊಸ ಚಿಂತನೆಗಳು ಬೇಕಾಗುತ್ತವೆ.
ಆದ್ದರಿಂದ, ಜನರು ಬದಲಾದಂತೆ, ಪ್ರಜಾಪ್ರಭುತ್ವವು ಹೊಸ ಆಯಾಮಗಳನ್ನು ಸೇರಿಸಿಕೊಳ್ಳುತ್ತಲೇ
ಸಾಗಬೇಕಾಗುತ್ತದೆ. ಈ ಬದಲಾವಣೆಗಳಿಗಾಗಿ, ನಮಗೆ ಹೊಸ ನೀತಿಗಳ ಅಗತ್ಯವಿದೆ, ಆದರೆ
ಹಳೆಯ ನೀತಿಗಳು ಮತ್ತು ಹಳೆಯ ಕಾನೂನುಗಳನ್ನು ಕಾಲಕ್ಕೆ ಅನುಗುಣವಾಗಿ ಸುಧಾರಿಸುವ
ಅಗತ್ಯವಿದೆ. ಕಳೆದ ಕೆಲವು ವರ್ಷಗಳಲ್ಲಿ, ಸಂಸತ್ತು ಅಂತಹ ಸುಮಾರು 150 ಕಾನೂನುಗಳನ್ನು
ರದ್ದುಗೊಳಿಸಿದೆ. ಇದರಿಂದಾಗಿ, ಈ ಹಿಂದೆ ಶ್ರೀಸಾಮಾನ್ಯರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಮತ್ತು
ದೇಶದ ಪ್ರಗತಿಗೆ ಎದುರಾಗುತ್ತಿದ್ದ ಅಡೆತಡೆಗಳನ್ನು ಪರಿಹರಿಸಲಾಗಿದೆ ಹಾಗು ಹೊಸ
ವಿಶ್ವಾಸವನ್ನು ಮೂಡಿಸಲಾಗಿದೆ. ರಾಜ್ಯಮಟ್ಟದಲ್ಲಿಯೂ ಸಹ, ಅಂತಹ ಅನೇಕ ಹಳೆಯ
ಕಾನೂನುಗಳು ವರ್ಷಗಳಿಂದ ಚಾಲ್ತಿಯಲ್ಲಿವೆ. ನಾವು ಒಟ್ಟಾಗಿ ಅವುಗಳ ಬಗ್ಗೆಯೂ ಗಮನ
ಹರಿಸಬೇಕಾಗಿದೆ.
ಸ್ನೇಹಿತರೇ,
ಜಗತ್ತಿನಲ್ಲಿ, 21 ನೇ ಶತಮಾನವು ಭಾರತಕ್ಕೆ ಸೇರಿದೆ. ನಾವು ಇದನ್ನು ನಿರಂತರವಾಗಿ ಕೇಳುತ್ತಲೇ
ಇದ್ದೇವೆ. ನಾವು ಇದನ್ನು ಪ್ರಪಂಚದಾದ್ಯಂತದ ಜನರಿಂದ ಕೇಳುತ್ತಿದ್ದೇವೆ ಆದರೆ ಈ ಶತಮಾನವು
ಭಾರತಕ್ಕೆ ಕರ್ತವ್ಯಗಳನ್ನು ನಿರ್ವಹಿಸುವ ಶತಮಾನವಾಗಿದೆ ಎಂದು ನಾನು ಹೇಳುತ್ತೇನೆ. ಈ
ಶತಮಾನದಲ್ಲಿ, ಮುಂದಿನ 25 ವರ್ಷಗಳಲ್ಲಿ ನವ ಭಾರತವನ್ನು ನಿರ್ಮಿಸುವ ಸುವರ್ಣ ಗುರಿಯನ್ನು
ನಾವು ತಲುಪಬೇಕಾಗಿದೆ. ನಮ್ಮ ಕರ್ತವ್ಯಗಳು ನಮ್ಮನ್ನು ಈ ಗುರಿಗಳತ್ತ ಕರೆದೊಯ್ಯುತ್ತವೆ.
ಆದ್ದರಿಂದ, ಈ 25 ವರ್ಷಗಳು ನಮ್ಮ ದೇಶದ ಕರ್ತವ್ಯದ ಹಾದಿಯಲ್ಲಿ ನಡೆದಾಡುವ ವರ್ಷಗಳು. ಈ
25 ವರ್ಷಗಳ ಅವಧಿಯು ಕರ್ತವ್ಯ ಪ್ರಜ್ಞೆಯಿಂದ ತನ್ನನ್ನು ತಾನು ಸಮರ್ಪಿಸಿಕೊಳ್ಳುವ
ಅವಧಿಯಾಗಿದೆ. ನಾವು ನಮಗಾಗಿ, ನಮ್ಮ ಸಮಾಜಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿ ಕರ್ತವ್ಯದ
ಮನೋಭಾವದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಮ್ಮ ಕರ್ತವ್ಯಗಳ ವಿಷಯದಲ್ಲಿ
ನಾವು ಪರಿಪೂರ್ಣತೆಯ ಮಟ್ಟವನ್ನೂ ದಾಟಿ ಹೋಗಬೇಕಾಗಿದೆ. ಇಂದು, ಭಾರತವು ಬಹಳ
ವೇಗವಾಗಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಮತ್ತು ಜಾಗತಿಕ ವೇದಿಕೆಯಲ್ಲಿ
ದಾಖಲೆಗಳನ್ನು ಸ್ಥಾಪಿಸುತ್ತಿದೆ. ಈ ಸಾಧನೆಗಳ ಹಿಂದೆ ಭಾರತದ ನಾಗರಿಕರ ಬದ್ಧತೆ ಮತ್ತು
ಕರ್ತವ್ಯ ಪ್ರಜ್ಞೆ ಇದೆ. ಪ್ರಜಾಪ್ರಭುತ್ವದಲ್ಲಿ, ನಮ್ಮ ಸದನಗಳು ಜನರ ಭಾವನೆಗಳನ್ನು
ಪ್ರತಿನಿಧಿಸುತ್ತವೆ. ಆದ್ದರಿಂದ, ದೇಶವಾಸಿಗಳ ಆತ್ಮಸಾಕ್ಷಿಯು ನಮ್ಮ ಸದನಗಳ ಮತ್ತು ಜನ
ಪ್ರತಿನಿಧಿಗಳ ನಡವಳಿಕೆಯಲ್ಲಿಯೂ ಪ್ರತಿಬಿಂಬಿತವಾಗಬೇಕು. ಸದನದಲ್ಲಿ ನಾವು ನಡೆದುಕೊಳ್ಳುವ
ರೀತಿ ಮತ್ತು ಸದನದೊಳಗೆ ನಮ್ಮ ಕರ್ತವ್ಯಗಳಿಗೆ ನಾವು ನೀಡುವ ಒತ್ತು ನಮ್ಮ ದೇಶವಾಸಿಗಳಲ್ಲಿ
ಹೆಚ್ಚಿನ ಉತ್ಸಾಹ ಮತ್ತು ಸ್ಫೂರ್ತಿಯನ್ನು ಮೂಡಿಸಬಹುದು. ಮತ್ತೊಂದು ಪ್ರಮುಖ ಅಂಶವೆಂದರೆ;
ನಾವು ನಮ್ಮ ಕರ್ತವ್ಯಗಳನ್ನು ನಮ್ಮ ಹಕ್ಕುಗಳಿಂದ ಪ್ರತ್ಯೇಕ ಎಂದು ಪರಿಗಣಿಸಬಾರದು. ನಾವು
ನಮ್ಮ ಕರ್ತವ್ಯಗಳಿಗಾಗಿ ಹೆಚ್ಚು ಹೆಚ್ಚು ಕೆಲಸ ಮಾಡಿದಷ್ಟೂ, ನಮ್ಮ ಹಕ್ಕುಗಳು ಬಲಗೊಳ್ಳುತ್ತವೆ.
ಕರ್ತವ್ಯಕ್ಕೆ ನಮ್ಮ ಬದ್ಧತೆ ಎಂದರೆ ಅದು ನಮ್ಮ ಹಕ್ಕುಗಳನ್ನು ಖಾತ್ರಿಪಡಿಸಿದಂತೆ. ಆದ್ದರಿಂದ,
ನಾವೆಲ್ಲರೂ, ಸಾರ್ವಜನಿಕ ಪ್ರತಿನಿಧಿಗಳು ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ನಮ್ಮ
ಸಂಕಲ್ಪವನ್ನು ಪುನರುಚ್ಚರಿಸಬೇಕು. ಈ ನಿರ್ಣಯಗಳು ನಮ್ಮೆಲ್ಲರ ಮತ್ತು ನಮ್ಮ ಸಮಾಜದ
ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ. ಇಂದು, ನಾವು 'ಆಜಾದಿ ಕಾ ಅಮೃತಕಾಲ್' ಎಂಬ ರಾಷ್ಟ್ರದ
ನಿರ್ಣಯಗಳೊಂದಿಗೆ ಮುಂದುವರಿಯುತ್ತಿರುವಾಗ, ನಮ್ಮ ಕರ್ತವ್ಯಗಳು ಮತ್ತು ಕಠಿಣ ಪರಿಶ್ರಮದ
ವಿಷಯದಲ್ಲಿ ನಾವು ಯಾವುದೇ ಲೋಪ ಸಂಭವಿಸಲು ಬಿಡಬಾರದು. ಒಂದು ರಾಷ್ಟ್ರವಾಗಿ ನಮ್ಮ
ಏಕತೆ ನಮ್ಮ ಆದ್ಯತೆಯಾಗಿರಬೇಕು. ಕಡುಬಡವರ ಜೀವನವನ್ನು ಸುಲಭಗೊಳಿಸುವುದು ಮತ್ತು
ದಲಿತರು, ತುಳಿತಕ್ಕೊಳಗಾದವರು, ಶೋಷಿತರು, ಅವಕಾಶ ವಂಚಿತರು, ಬುಡಕಟ್ಟು ಜನರು ಮತ್ತು
ಪ್ರತಿಯೊಬ್ಬರೂ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು
ನಮ್ಮ ಸಂಕಲ್ಪವಾಗಬೇಕು. ಇಂದು, ದೇಶವು ಎಲ್ಲರಿಗೂ ವಸತಿ, ಎಲ್ಲರಿಗೂ ನೀರು, ಎಲ್ಲರಿಗೂ
ವಿದ್ಯುತ್, ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿದ್ದು, ಅದು ನಮ್ಮೆಲ್ಲರ ಸಾಮೂಹಿಕ
ಜವಾಬ್ದಾರಿಯಾಗಿದೆ. ಬಿಹಾರದಂತಹ ಶಕ್ತಿಶಾಲಿ ಮತ್ತು ಶಕ್ತಿಯುತ ರಾಜ್ಯದಲ್ಲಿ ಬಡವರು,
ದೀನದಲಿತರು, ಹಿಂದುಳಿದವರು, ಬುಡಕಟ್ಟು ಜನರು ಮತ್ತು ಮಹಿಳೆಯರ ಜೀವನ ಸುಧಾರಣೆಯೂ
ಬಿಹಾರದ ಮುನ್ನಡೆಗೆ ಮತ್ತು ಪ್ರಗತಿ ಸಾಧನೆಗೆ ಸಹಾಯ ಮಾಡುತ್ತಿದೆ. ಮತ್ತು ಬಿಹಾರವು ಪ್ರಗತಿ
ಹೊಂದಿದಾಗ, ಭಾರತವು ಅಭಿವೃದ್ಧಿ ಮತ್ತು ಯಶಸ್ಸಿನ ಹೊಸ ಎತ್ತರವನ್ನು ಮುಟ್ಟುತ್ತದೆ, ತನ್ನ
ಹಿಂದಿನ ಸುವರ್ಣ ಯುಗವನ್ನು ಅದು ಪುನರುಚ್ಚರಿಸಿದಂತಾಗುತ್ತದೆ. ಈ ಮಹತ್ವದ ಐತಿಹಾಸಿಕ
ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ಈ ಐತಿಹಾಸಿಕ ಕ್ಷಣದ ಭಾಗವಾಗಲು ನನಗೆ
ಅವಕಾಶ ನೀಡಿದ್ದಕ್ಕಾಗಿ ನಾನು ರಾಜ್ಯ ಸರ್ಕಾರ, ಸ್ಪೀಕರ್ ಮತ್ತು ಎಲ್ಲಾ ಹಿರಿಯ ಸದಸ್ಯರಿಗೆ
ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಎಲ್ಲರಿಗೂ ನನ್ನ ಶುಭ ಹಾರೈಕೆಗಳು! ಈ ನೂರು
ವರ್ಷಗಳ ಪ್ರಯಾಣವು ಮುಂಬರುವ ನೂರು ವರ್ಷಗಳಿಗೆ ಹೊಸ ಶಕ್ತಿಸಂಚಯದ ಕೇಂದ್ರವಾಗಲಿ!
ಈ ಒಂದು ಭರವಸೆ, ವಿಶ್ವಾಸದೊಂದಿಗೆ , ನಿಮಗೆ ತುಂಬಾ ಧನ್ಯವಾದಗಳು! ಹೃತ್ಪೂರ್ವಕ
ಅಭಿನಂದನೆಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ
ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
**********
(Release ID: 1841407)
Visitor Counter : 172
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam