ಪ್ರಧಾನ ಮಂತ್ರಿಯವರ ಕಛೇರಿ
ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ಸಪ್ತಾಹ 2022 ಉದ್ಘಾಟಿಸಿದ ಪ್ರಧಾನಿ
ಡಿಜಿಟಲ್ ಇಂಡಿಯಾ ಸಪ್ತಾಹ 2022 ರ ಧ್ಯೇಯ ವಾಕ್ಯ: ನವ ಭಾರತದ ತಂತ್ರಜ್ಞಾನ ದಶಕಕ್ಕೆ ವೇಗವರ್ಧನೆ (ಕ್ಯಾಟಲೈಸಿಂಗ್ ನ್ಯೂ ಇಂಡಿಯಾಸ್ ಟೆಕ್ಕೇಡ್)
ಪ್ರಧಾನಮಂತ್ರಿಯವರಿಂದ ‘ಡಿಜಿಟಲ್ ಇಂಡಿಯಾ ಭಾಷಿಣಿ’, ‘ಡಿಜಿಟಲ್ ಇಂಡಿಯಾ ಜೆನೆಸಿಸ್’ ಮತ್ತು ‘Indiastack.global’ ಗೆ ಚಾಲನೆ; 'ಮೈ ಸ್ಕೀಮ್ ' ಮತ್ತು ಮೇರಿ ಪೆಹಚಾನ್' ರಾಷ್ಟ್ರಕ್ಕೆ ಸಮರ್ಪಣೆ
ಚಿಪ್ಸ್ ಟು ಸ್ಟಾರ್ಟ್ಅಪ್ ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿತವಾಗಿರುವ 30 ಸಂಸ್ಥೆಗಳ ಮೊದಲ ಸಮೂಹವನ್ನು ಘೋಷಿಸಿದ ಪ್ರಧಾನಿ
"ಭಾರತವು ಉದ್ಯಮ 4.0, ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ"
"ಭಾರತವು ಆನ್‌ಲೈನ್‌ನಿಂದಾಗಿ ಸರತಿ ಸಾಲುಗಳಿಗೆ ಅಂತ್ಯ ಹಾಡಿದೆ"
"ಡಿಜಿಟಲ್ ಇಂಡಿಯಾವು ಸರ್ಕಾರವನ್ನು ನಾಗರಿಕರ ಮನೆ ಬಾಗಿಲಿಗೆ ಮತ್ತು ಫೋನ್‌ಗಳಿಗೆ ತಲುಪಿಸಿದೆ"
"ಭಾರತದ ಫಿನ್‌ಟೆಕ್ ಪ್ರಯತ್ನವು ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ನೈಜ ಪರಿಹಾರವಾಗಿದೆ"
"ನಮ್ಮ ಡಿಜಿಟಲ್ ಪರಿಹಾರಗಳಲ್ಲಿ ಪ್ರಮಾಣ, ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿವೆ"
“ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು 300 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದೆ.”
"ಭಾರತವು ಚಿಪ್ ಪಡೆದುಕೊಳ್ಳುವ ರಾಷ್ಟ್ರದ ಬದಲು ಚಿಪ್ ತಯಾರಕನಾಗಲು ಬಯಸುತ್ತದೆ."
Posted On:
04 JUL 2022 7:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ಸಪ್ತಾಹ 2022 ಅನ್ನು ಉದ್ಘಾಟಿಸಿದರು, ಇದರ ಧ್ಯೇಯವಾಕ್ಯ ʼನವ ಭಾರತದ ತಂತ್ರಜ್ಞಾನ ದಶಕಕ್ಕೆ ವೇಗವರ್ಧನೆʼ (ಕ್ಯಾಟಲೈಸಿಂಗ್ ನ್ಯೂ ಇಂಡಿಯಾಸ್ ಟೆಕ್ಡೇಡ್). ಕಾರ್ಯಕ್ರಮದಲ್ಲಿ ಪ್ರಧಾನಿಯವರು ತಂತ್ರಜ್ಞಾನದ ಲಭ್ಯತೆಯನ್ನು ಹೆಚ್ಚಿಸುವ, ಜೀವನವನ್ನು ಸುಲಭಗೊಳಿಸುವ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನವನ್ನು ನೀಡಲು ಸೇವಾ ವಿತರಣೆಯನ್ನು ಸುಗಮಗೊಳಿಸುವ ಉದ್ದೇಶದ ಬಹು ಡಿಜಿಟಲ್ ಉಪಕ್ರಮಗಳಿಗೆ ಚಾಲನೆ ನೀಡಿದರು. ಅವರು ಚಿಪ್ಸ್ ಟು ಸ್ಟಾರ್ಟ್ಅಪ್ (ಸಿ2ಎಸ್) ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿಸುವ 30 ಸಂಸ್ಥೆಗಳ ಮೊದಲ ಸಮೂಹವನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಶ್ರೀ ರಾಜೀವ್ ಚಂದ್ರಶೇಖರ್, ರಾಜ್ಯದ ಸಚಿವರು, ಜನಪ್ರತಿನಿಧಿಗಳು, ಸ್ಟಾರ್ಟಪ್ ಮತ್ತು ಇತರ ಕ್ಷೇತ್ರಗಳ ಭಾಗೀದಾರರು ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮವು 21ನೇ ಶತಮಾನದಲ್ಲಿ ಭಾರತವನ್ನು ನಿರಂತರವಾಗಿ ಆಧುನೀಕರಿಸುವ ಬಗ್ಗೆ ಒಂದು ನೋಟವನ್ನು ನೀಡುತ್ತದೆ ಎಂದು ಹೇಳಿದರು. ಮನುಕುಲದ ಬೆಳವಣಿಗೆಗೆ ತಂತ್ರಜ್ಞಾನದ ಸೂಕ್ತ ಬಳಕೆಯು ಎಷ್ಟು ಕ್ರಾಂತಿಕಾರಿಯಾಗಿದೆ ಎಂಬುದನ್ನು ಭಾರತವು ಡಿಜಿಟಲ್ ಇಂಡಿಯಾದ ಮೂಲಕ, ಉದಾಹರಣೆಯಾಗಿ ನೀಡಿದೆ. ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಭಿಯಾನವು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿಸ್ತರಿಸಿಕೊಳ್ಳುತ್ತಿರುವುದು ನನಗೆ ಸಂತೋಷಕೊಟ್ಟಿದೆ ಎಂದು ಅವರು ಹೇಳಿದರು.
“ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದ ದೇಶವನ್ನು ಹಿಂದಕ್ಕೆ ಬಿಟ್ಟು ಕಾಲವು ಮುಂದೆ ಸಾಗುತ್ತದೆ ಎಂದು ಪ್ರಧಾನಿ ಹೇಳಿದರು. ಮೂರನೇ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಭಾರತ ಇದಕ್ಕೆ ಬಲಿಯಾಗಿತ್ತು. ಆದರೆ ಇಂದು ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಉದ್ಯಮ 4.0 ನಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು ಎಂದರು. ಈ ವಿಷಯದಲ್ಲೂ ಗುಜರಾತ್ ಮುಂದಾಳತ್ವ ವಹಿಸಿರುವುದಕ್ಕೆ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
8-10 ವರ್ಷಗಳ ಹಿಂದಿನ ಪರಿಸ್ಥಿತಿಗಳನ್ನು ಅವರು ನೆನಪಿಸಿಕೊಂಡರು. ಜನನ ಪ್ರಮಾಣಪತ್ರ, ಬಿಲ್ ಪಾವತಿ, ಪಡಿತರ, ದಾಖಲಾತಿಗಳು, ಫಲಿತಾಂಶ ಮತ್ತು ಬ್ಯಾಂಕ್‌ಗಳಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಿದ್ದ ಸನ್ನಿವೇಶಗಳಿಂದ, ಭಾರತವು ಈಗ ಆನ್‌ಲೈನ್ ಆಗುವ ಮೂಲಕ ಈ ಎಲ್ಲಾ ಸರತಿ ಸಾಲುಗಳಿಗೆ ಅಂತ್ಯ ಹಾಡಿದೆ ಎಂದು ಪ್ರಧಾನಿ ಹೇಳಿದರು. ಜೀವನ ಪ್ರಮಾಣಪತ್ರ, ಮೀಸಲಾತಿ, ಬ್ಯಾಂಕಿಂಗ್ ಮುಂತಾದ ಸೇವೆಗಳು ಸುಲಭವಾಗಿ, ವೇಗವಾಗಿ ಮತ್ತು ಕೈಗೆಟುಕುವ ದರದಲ್ಲಿ ಸಿಗುತ್ತಿವೆ. ಅದೇ ರೀತಿ, ತಂತ್ರಜ್ಞಾನದ ಮೂಲಕ, ನೇರ ಲಾಭ ವರ್ಗಾವಣೆ ಅಡಿಯಲ್ಲಿ, ಕಳೆದ 8 ವರ್ಷಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ 23 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾಯಿಸಲಾಗಿದೆ. ಈ ತಂತ್ರಜ್ಞಾನದಿಂದಾಗಿ ದೇಶದ 2 ಲಕ್ಷ 23 ಸಾವಿರ ಕೋಟಿ ರೂ. ಗಳನ್ನು ಅನರ್ಹರ ಕೈಗೆ ಹೋಗದಂತೆ ಉಳಿಸಲಾಗಿದೆ ಎಂದು ಅವರು ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ಡಿಜಿಟಲ್ ಇಂಡಿಯಾ ವಹಿಸುತ್ತಿರುವ ಪಾತ್ರವನ್ನು ಒತ್ತಿ ಹೇಳಿದರು. ಡಿಜಿಟಲ್ ಇಂಡಿಯಾ ಸರ್ಕಾರವನ್ನು ನಾಗರಿಕರ ಮನೆ ಬಾಗಿಲಿಗೆ ಮತ್ತು ಫೋನ್‌ಗಳಿಗೆ ತಲುಪಿಸಿದೆ ಎಂದು ಅವರು ಹೇಳಿದರು. 1.25 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಗ್ರಾಮೀಣ ಮಳಿಗೆಗಳು ಈಗ ಇ-ಕಾಮರ್ಸ್ ಅನ್ನು ಗ್ರಾಮೀಣ ಭಾರತಕ್ಕೆ ತಲುಪಿಸಿವೆ ಎಂದು ಅವರು ಹೇಳಿದರು. ಅದೇ ರೀತಿ ತಂತ್ರಜ್ಞಾನದ ಮೂಲಕ ಗ್ರಾಮೀಣ ಆಸ್ತಿಗಳಿಗೆ ಆಸ್ತಿಯ ದಾಖಲೆಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಸಾಂಕ್ರಾಮಿಕ ಸಮಯದಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಮಾತನಾಡಿದ ಪ್ರಧಾನಿಯವರು, ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಡಿಜಿಟಲ್ ಇಂಡಿಯಾ ಸೃಷ್ಟಿಸಿದ ಶಕ್ತಿಯು, ಜಾಗತಿಕ ಸಾಂಕ್ರಾಮಿಕ ರೋಗ ಕೊರೊನಾವನ್ನು ಎದುರಿಸಲು ಭಾರತಕ್ಕೆ ಸಾಕಷ್ಟು ಸಹಾಯ ಮಾಡಿದೆ ಎಂದು ಹೇಳಿದರು. ನಾವು ಒಂದೇ ಕ್ಲಿಕ್‌ನಲ್ಲಿ ದೇಶದ ಕೋಟ್ಯಂತರ ಮಹಿಳೆಯರು, ರೈತರು, ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದೇವೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿಯ ಸಹಾಯದಿಂದ ನಾವು 80 ಕೋಟಿಗೂ ಹೆಚ್ಚು ದೇಶವಾಸಿಗಳಿಗೆ ಉಚಿತ ಪಡಿತರವನ್ನು ನೀಡಿದ್ದೇವೆ. ನಾವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪರಿಣಾಮಕಾರಿ ಕೋವಿಡ್ ಲಸಿಕೆ ಮತ್ತು ಕೋವಿಡ್ ಪರಿಹಾರ ಕಾರ್ಯಕ್ರಮವನ್ನು ನಡೆಸಿದ್ದೇವೆ. ನಮ್ಮ ಕೋವಿನ್ ಪ್ಲಾಟ್‌ಫಾರ್ಮ್ ಮೂಲಕ ಸುಮಾರು 200 ಕೋಟಿ ಲಸಿಕೆ ಡೋಸ್‌ಗಳನ್ನು ಹಾಕಲಾಗಿದೆ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.
“ಭಾರತದ ಫಿನ್‌ಟೆಕ್ ಪ್ರಯತ್ನವು ನಿಜವಾಗಿಯೂ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಪರಿಹಾರವಾಗಿದೆ. ಅದರಲ್ಲಿರುವ ತಂತ್ರಜ್ಞಾನ ಭಾರತದ ಸ್ವಂತದ್ದು ಅಂದರೆ ಜನರಿಂದ. ದೇಶವಾಸಿಗಳು ಅದನ್ನು ತಮ್ಮ ಜೀವನದ ಭಾಗವಾಗಿಸಿಕೊಂಡರು ಅಂದರೆ ಜನರಿಗಾಗಿ, ಇದು ದೇಶವಾಸಿಗಳ ವಹಿವಾಟುಗಳನ್ನು ಸುಲಭಗೊಳಿಸಿತು, ಅಂದರೆ ಜನರಿಗೋಸ್ಕರವಾಗಿದೆ ಎಂದು ಪ್ರಧಾನಿ ಹೇಳಿದರು. ಜಾಗತಿಕ ಮಟ್ಟದಲ್ಲಿ ಶೇಕಡಾ 40 ರಷ್ಟು ಡಿಜಿಟಲ್ ವಹಿವಾಟು ಭಾರತದಲ್ಲಿ ನಡೆಯುತ್ತದೆ. ನಮ್ಮ ಡಿಜಿಟಲ್ ಪರಿಹಾರಗಳಲ್ಲಿ ಪ್ರಮಾಣ, ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿವೆ ಎಂದು ಅವರು ಹೇಳಿದರು.
ಮುಂದಿನ ನಾಲ್ಕೈದು ವರ್ಷಗಳಲ್ಲಿ ಉದ್ಯಮ 4.0 ಕ್ಕಾಗಿ 14-15 ಲಕ್ಷ ಯುವಜನರಿಗೆ ಕೌಶಲ್ಯ, ಉನ್ನತ ಕೌಶಲ್ಯ ಮತ್ತು ಮರುಕೌಶಲ್ಯವನ್ನು ನೀಡುವ ಕುರಿತು ಗಮನ ಕೇಂದ್ರೀಕರಿಸುವುದಾಗಿ ಪ್ರಧಾನಮಂತ್ರಿ ತಿಳಿಸಿದರು. ಅದು ಬಾಹ್ಯಾಕಾಶ, ಮ್ಯಾಪಿಂಗ್, ಡ್ರೋನ್, ಗೇಮಿಂಗ್ ಮತ್ತು ಅನಿಮೇಷನ್ ಆಗಿರಬಹುದು, ಡಿಜಿಟಲ್ ತಂತ್ರಜ್ಞಾನದ ಭವಿಷ್ಯವನ್ನು ವಿಸ್ತರಿಸಲು ಹೊರಟಿರುವ ಅನೇಕ ಕ್ಷೇತ್ರಗಳನ್ನು ನಾವೀನ್ಯತೆಗಾಗಿ ತೆರೆಯಲಾಗಿದೆ. IN-SPAce ಮತ್ತು ಹೊಸ ಡ್ರೋನ್ ನೀತಿಯಂತಹ ಅವಕಾಶಗಳು ಈ ದಶಕದ ಮುಂಬರುವ ವರ್ಷಗಳಲ್ಲಿ ಭಾರತದ ತಾಂತ್ರಿಕ ಸಾಮರ್ಥ್ಯಕ್ಕೆ ಹೊಸ ಶಕ್ತಿಯನ್ನು ನೀಡುತ್ತವೆ ಎಂದರು.
ಇಂದು, ಭಾರತವು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು 300 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಚಿಪ್ ಪಡೆದುಕೊಳ್ಳುತ್ತಿದ್ದ ಭಾರತವು ಚಿಪ್ ತಯಾರಕನಾಗಲು ಬಯಸುತ್ತದೆ. ಸೆಮಿಕಂಡಕ್ಟರ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತದಲ್ಲಿ ಹೂಡಿಕೆಯು ವೇಗವಾಗಿ ಹೆಚ್ಚುತ್ತಿದೆ ಎಂದರು.
ಡಿಜಿಟಲ್ ಇಂಡಿಯಾ ಅಭಿಯಾನವು ಹೊಸ ಆಯಾಮಗಳನ್ನು ಸೇರಿಸಿಕೊಂಡು ದೇಶದ ನಾಗರಿಕರಿಗೆ ಸೇವೆ ಸಲ್ಲಿಸುತ್ತಲೇ ಇರುತ್ತದೆ ಎಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.
ಚಾಲನೆ ನೀಡಲಾದ ಉಪಕ್ರಮಗಳ ವಿವರಗಳು:
ʼಡಿಜಿಟಲ್ ಇಂಡಿಯಾ ಭಾಷಿಣಿ’ಭಾರತೀಯ ಭಾಷೆಗಳಲ್ಲಿ ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳಿಗೆ ಧ್ವನಿ ಆಧಾರಿತ ಪ್ರವೇಶವನ್ನು ಒಳಗೊಂಡಂತೆ ಸುಲಭ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ ಮತ್ತು ಭಾರತೀಯ ಭಾಷೆಗಳಲ್ಲಿ ವಿಷಯ (ಕಂಟೆಂಟ್) ವನ್ನು ರಚಿಸಲು ಸಹಾಯ ಮಾಡುತ್ತದೆ. ಭಾರತೀಯ ಭಾಷೆಗಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾ ತಂತ್ರಜ್ಞಾನ ಪರಿಹಾರಗಳನ್ನು ನಿರ್ಮಿಸುವಲ್ಲಿ ಪ್ರಮುಖ ಬಹುಭಾಷಾ ಡೇಟಾಸೆಟ್‌ಗಳ ರಚನೆಯಾಗಿದೆ. ಡಿಜಿಟಲ್ ಇಂಡಿಯಾ ಭಾಷಿಣಿ ಭಾಷಾದಾನ ಎಂಬ ಕ್ರೌಡ್‌ಸೋರ್ಸಿಂಗ್ ಉಪಕ್ರಮದ ಮೂಲಕ ಈ ಡೇಟಾಸೆಟ್‌ಗಳನ್ನು ನಿರ್ಮಿಸಲು ಬೃಹತ್ ಪ್ರಮಾಣದಲ್ಲಿ ನಾಗರಿಕರು ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸುತ್ತದೆ.
‘ಡಿಜಿಟಲ್ ಇಂಡಿಯಾ ಜೆನೆಸಿಸ್’(ಇನ್ನೋವೇಟಿವ್ ಸ್ಟಾರ್ಟ್‌ಅಪ್‌ಗಳಿಗೆ ಮುಂದಿನ ತಲೆಮಾರಿನ ಬೆಂಬಲ) - ಭಾರತದ 2 ಮತ್ತು 3ನೇ ನಗರಗಳಲ್ಲಿ ಅನ್ವೇಷಿಸಲು, ಬೆಂಬಲಿಸಲು, ಬೆಳೆಯಲು ಮತ್ತು ಯಶಸ್ವಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ರಾಷ್ಟ್ರೀಯ ಡೀಪ್-ಟೆಕ್ ಸ್ಟಾರ್ಟ್‌ಅಪ್ ಪ್ಲಾಟ್‌ಫಾರ್ಮ್ ಇದಾಗಿದೆ. ಈ ಯೋಜನೆಗೆ ಒಟ್ಟು 750 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ.
‘Indiastack.global’ - ಆಧಾರ್, ಯುಪಿಐ, ಡಿಜಿಲಾಕರ್, ಕೋವಿನ್ ಲಸಿಕಾ ಪ್ಲಾಟ್‌ಫಾರ್ಮ್, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ), ದೀಕ್ಷಾ ಪ್ಲಾಟ್‌ಫಾರ್ಮ್ ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್‌ನಂತಹ ಇಂಡಿಯಾ ಸ್ಟಾಕ್ ಅಡಿಯಲ್ಲಿ ಜಾರಿಗೊಳಿಸಲಾದ ಪ್ರಮುಖ ಯೋಜನೆಗಳ ಜಾಗತಿಕ ಭಂಡಾರ ಇದಾಗಿದೆ. ಜಾಗತಿಕ ಸಾರ್ವಜನಿಕ ಡಿಜಿಟಲ್ ಸರಕುಗಳ ಭಂಡಾರಕ್ಕೆ ಭಾರತದ ಈ ಕೊಡುಗೆಯು ಡಿಜಿಟಲ್ ಪರಿವರ್ತನೆ ಯೋಜನೆಗಳನ್ನು ನಿರ್ಮಿಸುವಲ್ಲಿ ಭಾರತವನ್ನು ನಾಯಕನ ಸ್ಥಾನದಲ್ಲಿ ಇರಿಸಲು ಸಹಾಯ ಮಾಡುತ್ತದೆ ಮತ್ತು ಅಂತಹ ತಂತ್ರಜ್ಞಾನ ಪರಿಹಾರಗಳನ್ನು ಹುಡುಕುತ್ತಿರುವ ಇತರ ದೇಶಗಳಿಗೆ ಅಪಾರ ಸಹಾಯವನ್ನು ಒದಗಿಸುತ್ತದೆ.
‘MyScheme’ - ಸರ್ಕಾರಿ ಯೋಜನೆಗಳಿಗೆ ಪ್ರವೇಶವನ್ನು ಒದಗಿಸುವ ಸೇವಾ ಶೋಧನೆಯ ವೇದಿಕೆ. ಇದು ಒಂದೇ ಕಡೆ ಹುಡುಕಾಟ ಮತ್ತು ಅನ್ವೇಷಣೆ ಮಾಡುವ ಪೋರ್ಟಲ್ ಅನ್ನು ಒದಗಿಸುವ ಗುರಿಯನ್ನು ಹೊಂದಿದೆ, ಅಲ್ಲಿ ಬಳಕೆದಾರರು ಅವರು ಅರ್ಹರಾಗಿರುವ ಕಾರ್ಯಕ್ರಮಗಳ ಬಗ್ಗೆ ಹುಡುಕಬಹುದು. ನಾಗರಿಕರಿಗೆ 'ಮೇರಿ ಪೆಹಚಾನ್'- ನಾಗರಿಕರು ಲಾಗಿನ್‌ಗಾಗಿ ನ್ಯಾಷನಲ್ ಸಿಂಗಲ್ ಸೈನ್-ಆನ್ ಅನ್ನು ಸಹ ಇದೇ ಸಂದರ್ಭದಲ್ಲಿ ಪ್ರಧಾನಿಯವರು ಸಮರ್ಪಿಸಿದರು. ನ್ಯಾಷನಲ್ ಸಿಂಗಲ್ ಸೈನ್-ಆನ್ (ಎನ್ ಎಸ್ ಎಸ್ ಒ) ಎನ್ನುವುದು ಬಳಕೆದಾರರ ದೃಢೀಕರಣ ಸೇವೆಯಾಗಿದ್ದು, ಇದರಲ್ಲಿ ಒಂದೇ ಸೆಟ್ ಆಧಾರಗಳು ಬಹು ಆನ್‌ಲೈನ್ ಅಪ್ಲಿಕೇಶನ್‌ಗಳು ಅಥವಾ ಸೇವೆಗಳಿಗೆ ಪ್ರವೇಶವನ್ನು ಒದಗಿಸುತ್ತವೆ.
ಸಿ2ಎಸ್ ಕಾರ್ಯಕ್ರಮವು ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಹಂತಗಳಲ್ಲಿ ಸೆಮಿಕಂಡಕ್ಟರ್ ಚಿಪ್‌ಗಳ ವಿನ್ಯಾಸದ ಕ್ಷೇತ್ರದಲ್ಲಿ ವಿಶೇಷ ಮಾನವಶಕ್ತಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ ಮತ್ತು ದೇಶದಲ್ಲಿ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ತೊಡಗಿರುವ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಾಂಸ್ಥಿಕ ಮಟ್ಟದಲ್ಲಿ ಮಾರ್ಗದರ್ಶನ ನೀಡುತ್ತದೆ ಮತ್ತು ಸಂಸ್ಥೆಗಳಿಗೆ ವಿನ್ಯಾಸಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡುತ್ತದೆ. ಇದು ಸೆಮಿಕಂಡಕ್ಟರ್ ಗಳಲ್ಲಿ ಬಲವಾದ ವಿನ್ಯಾಸ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತ ಸೆಮಿಕಂಡಕ್ಟರ್ ಮಿಷನ್‌ನ ಭಾಗವಾಗಿದೆ.
ಡಿಜಿಟಲ್ ಇಂಡಿಯಾ ಸಪ್ತಾಹ 2022, ಅಂಗವಾಗಿ ಗಾಂಧಿನಗರದಲ್ಲಿ ಜುಲೈ 4 ರಿಂದ 6 ರವರೆಗೆ ಭೌತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ಯಕ್ರಮವು ಡಿಜಿಟಲ್ ಇಂಡಿಯಾದ ವಾರ್ಷಿಕೋತ್ಸವವನ್ನು ಆಚರಿಸುತ್ತದೆ ಮತ್ತು ಆಧಾರ್, ಯುಪಿಐ, ಕೋವಿನ್, ಡಿಜಿಲಾಕರ್ ಮುಂತಾದ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ನಾಗರಿಕರಿಗೆ ಹೇಗೆ ಸುಲಭವಾಗಿ ಬದುಕಲು ಅನುವು ಮಾಡಿಕೊಟ್ಟಿವೆ ಎಂಬುದನ್ನು ಪ್ರದರ್ಶಿಸುತ್ತದೆ. ಇದು ಜಾಗತಿಕ ಪ್ರೇಕ್ಷಕರಿಗೆ ಭಾರತದ ತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸುತ್ತದೆ, ವ್ಯಾಪಕ ಶ್ರೇಣಿಯ ಭಾಗೀದಾರರೊಂದಿಗೆ ಸಹಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುತ್ತದೆ ಮತ್ತು ಮುಂದಿನ ತಲೆಮಾರಿಗೆ ಅವಕಾಶಗಳನ್ನು ಪ್ರಸ್ತುತಪಡಿಸುತ್ತದೆ. ಇದು ಸ್ಟಾರ್ಟ್‌ಅಪ್‌ಗಳು ಮತ್ತು ಸರ್ಕಾರ, ಕೈಗಾರಿಕೆ ಮತ್ತು ಶೈಕ್ಷಣಿಕ ಕೇತ್ರದ ನಾಯಕರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. 200 ಕ್ಕೂ ಹೆಚ್ಚು ಮಳಿಗೆಗಳೊಂದಿಗೆ ಡಿಜಿಟಲ್ ಮೇಳವನ್ನು ಆಯೋಜಿಸಲಾಗಿದೆ, ಅದು ಜೀವನವನ್ನು ಸುಲಭಗೊಳಿಸುವ ಡಿಜಿಟಲ್ ಪರಿಹಾರಗಳನ್ನು ಪ್ರದರ್ಶಿಸುತ್ತದೆ ಮತ್ತು ಭಾರತೀಯ ಯುನಿಕಾರ್ನ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿದ ಪರಿಹಾರಗಳನ್ನು ಸಹ ಪ್ರದರ್ಶಿಸುತ್ತದೆ. ಡಿಜಿಟಲ್ ಇಂಡಿಯಾ ಸಪ್ತಾಹವು ಜುಲೈ 7 ರಿಂದ 9 ರವರೆಗೆ ವರ್ಚುವಲ್ ಮಾದರಿಯಲ್ಲಿ ಇಂಡಿಯಾ ಸ್ಟಾಕ್ ನಾಲೆಡ್ಜ್ ಎಕ್ಸ್‌ಚೇಂಜ್ ಅನ್ನು ಸಹ ಹೊಂದಿರುತ್ತದೆ.
********
(Release ID: 1839311)
Visitor Counter : 309
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam