ಸಂಪುಟ

ಕಕ್ಷೆಯೊಳಗಿನ 10 ಸಂವಹನಾ ಉಪಗ್ರಹಗಳನ್ನು ಭಾರತ ಸರ್ಕಾರದಿಂದ ಮೆಸರ್ಸ್ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್ಐಎಲ್)ಗೆ ಹಸ್ತಾಂತರಿಸಲು ಕೇಂದ್ರ ಸಂಪುಟ ಅನುಮೋದನೆ

Posted On: 08 JUN 2022 4:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ, ಕಕ್ಷೆಯೊಳಗಿನ 10 ಸಂವಹನಾ ಉಪಗ್ರಹಗಳನ್ನು ಭಾರತ ಸರ್ಕಾರದಿಂದ ಬಾಹ್ಯಾಕಾಶ ಇಲಾಖೆಯ ಆಡಳಿತ ನಿಯಂತ್ರಣಕ್ಕೆ ಒಳಪಡುವ ಭಾರತ ಸರ್ಕಾರದ ಸಂಪೂರ್ಣ ಸಾರ್ವಜನಿಕ ವಲಯದ ಉದ್ದಿಮೆ,  ಮೆಸರ್ಸ್ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್ಐಎಲ್)ಗೆ ಹಸ್ತಾಂತರಿಸಲು  ಅನುಮೋದನೆ ನೀಡಿದೆ.

ಕೇಂದ್ರ ಸಂಪುಟ ಎನ್ಎಸ್ಐಎಲ್ ನ ಅಧಿಕೃತ ಷೇರು ಬಂಡವಾಳವನ್ನು 1000 ಕೋಟಿ ರೂ.ನಿಂದ 7500 ಕೋಟಿ ರೂ.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಿದೆ.

ಎನ್ಎಸ್ಐಎಲ್ ಗೆ ಈ ಸ್ವತ್ತುಗಳನ್ನು ವರ್ಗಾಯಿಸುವುದರಿಂದ ಕಂಪನಿಗೆ ಅಗತ್ಯ ಬಂಡವಾಳ ಆಧಾರಿತ ಕಾರ್ಯಕ್ರಮಗಳು/ಯೋಜನೆಗಳನ್ನು ಕೈಗೊಳ್ಳಲು ಅಗತ್ಯ ಆರ್ಥಿಕ ಸ್ವಾಯತ್ತತೆ ಲಭ್ಯವಾಗಲಿದೆ ಮತ್ತು ಆ ಮೂಲಕ ಭಾರೀ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಮತ್ತು ಆರ್ಥಿಕತೆಯ ಇತರೆ ವಲಯಗಳಿಗೂ ತಂತ್ರಜ್ಞಾನದ ಲಾಭ ದೊರಕಲಿದೆ. ಈ ಅನುಮೋದನೆಯಿಂದಾಗಿ ಬಾಹ್ಯಾಕಾಶ ವಲಯದಲ್ಲಿ ದೇಶಿಯ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುವುದಲ್ಲದೆ, ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತದ ಪಾಲು ಹೆಚ್ಚಾಗಲಿದೆ.

ಬಾಹ್ಯಾಕಾಶ ವಲಯದಲ್ಲಿ ಕೈಗೊಂಡಿರುವ ಸುಧಾರಣೆಗಳಿಂದಾಗಿ ಎನ್ಎಸ್ಐಎಲ್, ಆರಂಭದಿಂದ ಕೊನೆಯವರೆಗಿನ ವಾಣಿಜ್ಯೀಕವಾಗಿ ಬಾಹ್ಯಾಕಾಶ ಚಟುವಟಿಕೆಗಳನ್ನು ಕೈಗೊಳ್ಳಲಿದೆ ಮತ್ತು ಅದು ಪೂರ್ಣ ಪ್ರಮಾಣದಲ್ಲಿ ಉಪಗ್ರಹ ಕಾರ್ಯನಿರ್ವಾಹಕನಾಗಿ ಕಾರ್ಯ ನಿರ್ವಹಿಸಲಿದೆ. ಎನ್ಎಸ್ಐಎಲ್, ಏಕಗವಾಕ್ಷಿ ಕಾರ್ಯವಾಹಕನಾಗಿ ಕಾರ್ಯನಿರ್ವಹಣೆ ಮಾಡುವುದಲ್ಲದೆ, ಬಾಹ್ಯಾಕಾಶ ವಲಯದಲ್ಲಿ ವ್ಯವಹಾರಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಸಹಕರಿಸುತ್ತದೆ. ಎನ್ಎಸ್ಐಎಲ್ ಮಂಡಳಿಗೆ ಇದೀಗ ಮಾರುಕಟ್ಟೆ ಸ್ಥಿತಿಗತಿಗಳಿಗೆ ಅನುಗುಣವಾಗಿ ಮತ್ತು ಜಾಗತಿಕ ಟ್ರೆಂಡ್ ಗಳನ್ನು ಆಧರಿಸಿ ಉಪಗ್ರಹ ಸಂವಹನ ವಲಯದಲ್ಲಿ ಟ್ರಾನ್ಸ್ ಪಾಂಡರ್ ಗಳ ಬೆಲೆಯನ್ನೂ ನಿಗದಿಪಡಿಸುವ ಅಧಿಕಾರ ಹೊಂದಲಿದೆ. ಅಲ್ಲದೆ ಎನ್ಎಸ್ಐಎಲ್, ತನ್ನ ಆಂತರಿಕ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾಮರ್ಥ್ಯವನ್ನು ಹಂಚಿಕೆ ಹಾಗೂ ವಿತರಣೆ ಅಧಿಕಾರವನ್ನು ಅಧಿಕೃತವಾಗಿ ಹೊಂದಲಿದೆ.

*****



(Release ID: 1832415) Visitor Counter : 191