ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ [ಪಿಎಂ-ಜೆಎವೈ]ಯ ಸಾರ್ವಜನಿಕ ಡ್ಯಾಶ್ ಬೋರ್ಡ್ ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಣ


ಸಾರ್ವಜನಿಕರು ಮತ್ತು ಪಿಎಂ-ಜೆಎವೈ ನಡುವೆ ಡ್ಯಾಶ್ ಬೋರ್ಡ್ ನಲ್ಲಿ ಪ್ರಗತಿಯ ಸಮಗ್ರ ನೋಟವನ್ನು ಒದಗಿಸುವ ಮೂಲಕ ಕಾರ್ಯನಿರ್ವಹಿಸಲಿದೆ.

Posted On: 06 JUN 2022 5:17PM by PIB Bengaluru

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ [ಎನ್.ಎಚ್.ಎ]ದಡಿ ಬರುವ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ[ಎಬಿ ಪಿಎಂ-ಜೆಎವೈ]ಯಡಿ ಹೊಸದಾಗಿ ನವೀಕರಿಸಿದ ಮತ್ತು ಕ್ರಿಯಾತ್ಮಕ ಸಾರ್ವಜನಿಕ ಡ್ಯಾಶ್ ಬೋರ್ಡ್ ಇದೀಗ ಪಿಎಂ-ಜೆಎವೈ ಯೋಜನೆ ಕುರಿತು ಸಮಗ್ರ ರೀತಿಯಲ್ಲಿ ದತ್ತಾಂಶ ಒದಗಿಸಲಿದೆ.

ಪಿಎಂ-ಜೆಎವೈ ಯೋಜನೆಯಡಿ ಡ್ಯಾಶ್ ಬೋರ್ಡ್ ಸ್ಥಾಪನೆ ಮತ್ತೊಂದು ಪ್ರಮುಖ ಕ್ರಾಂತಿಕಾರಕ ಕ್ರಮವಾಗಿದ್ದು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾರದರ್ಶಕವಾಗಿ ಅನುಕೂಲಕರ ರೀತಿಯಲ್ಲಿ ಪ್ರಗತಿಯ ಮಾಹಿತಿ ಒದಗಿಸಲಿದೆ. ಎರಡೂ ಕಡೆಗಳಲ್ಲಿ ಇದು ಸಂವಾದಾತ್ಮಕ ವ್ಯವಸ್ಥೆಯನ್ನು ಹೊಂದಿದ್ದು, ಮಾಹಿತಿ ಒಳಗೊಂಡ ಪಟ್ಟಿಗಳಲ್ಲಿ ಯೋಜನೆಯ ಕಾರ್ಯಕ್ಷಮತೆಯ ಸೂಚಕಗಳನ್ನು ಪ್ರದರ್ಶಿಸುತ್ತದೆ. ದೈನಂದಿನ ರೀತಿಯಲ್ಲಿ ಯೋಜನೆಯ ಕಾರ್ಯದಕ್ಷತೆಯನ್ನು ಅರ್ಥಮಾಡಿಕೊಳ್ಳಲು ಸಾರ್ವಜನಿಕರು ಮತ್ತು ಪಿಎಂ-ಜೆಎವೈ ಪರಿಸರ ವ್ಯವಸ್ಥೆಯ ಪಾಲುದಾರರಿಗೆ ಇದು ಆಳವಾದ ಒಳನೋಟ ಒದಗಿಸುತ್ತದೆ.   

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ. ಆರ್.ಎಸ್. ಶರ್ಮಾ ಅವರು ಡ್ಯಾಶ್ ಬೋರ್ಡ್ ನ ಹಿನ್ನೆಲೆಯ ಚಿಂತನೆ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ. “ ಪಿಎಂ-ಜೆಎವೈ ನ ನವೀಕೃತ ಡ್ಯಾಶ್ ಬೋರ್ಡ್ ಸೂಕ್ತ ಸಮಯದಲ್ಲಿ ಸಾರ್ವಜನಿಕರಿಗೆ ದತ್ತಾಂಶ ಮತ್ತು ವಿಶ್ಲೇಷಣೆಯ ವಿವರಗಳನ್ನು ಒದಗಿಸಲಿದೆ. ದೀರ್ಘ ಕಾಲದಲ್ಲಿ ಇದು ಸಾರ್ವಜನಿಕ ವಲಯಕ್ಕೆ ದತ್ತಾಂಶ ಕೇಂದ್ರಿತ ಮತ್ತು ಪುರಾವೆ ಆಧಾರಿತ ನೀತಿ ನಿರೂಪಣೆ ಮತ್ತು ಅತ್ಯುತ್ತಮವಾಗಿ ಪಾರದರ್ಶಕತೆ ಹಾಗೂ ಜವಾಬ್ದಾರಿತನವನ್ನು ತರಲಿದೆ. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ದ್ಯೇಯೋದ್ದೇಶಕ್ಕೆ ಇದು ಹೊಂದಿಕೆಯಾಗುತ್ತದೆ” ಎಂದರು.    

ಆಯುಷ್ಮಾನ್ ಭಾರತ್ ಕಾರ್ಯಕ್ರಮದಲ್ಲಿ ಎಷ್ಟು ಕಾರ್ಡ್ ಗಳನ್ನು ನೀಡಲಾಗಿದೆ, ನೋಂದಣಿಯಾಗಿರುವ ಆಸ್ಪತ್ರೆಗಳು ಎಷ್ಟು ಮತ್ತು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಆಸ್ಪತ್ರೆಗಳಲ್ಲಿ ಅಧಿಕೃತ ದಾಖಲಾತಿ ಕುರಿತು ಮಾಹಿತಿ ಒದಗಿಸಲಿದೆ. ಲಿಂಗ ಮತ್ತು ವಯೋಮಿತಿಗೆ ಅನುಗುಣವಾಗಿ ಸೌಲಭ್ಯ ವಿತರಣೆಯಾಗಿದೆಯೇ ಎನ್ನುವ ವಿವರಗಳು ಡ್ಯಾಶ್ ಬೋರ್ಡ್ ನಲ್ಲಿ ಲಭ್ಯವಿದೆ. ವಯೋಮಿತಿಗೆ ಅನುಸಾರ ಆಯಷ್ಮಾನ್ ಭಾರತ್ ಕಾರ್ಡ್ ಗಳನ್ನು ಒದಗಿಸಲು, ವಿತರಣೆ ಮಾಡಿರುವ ಮಾಹಿತಿ ನೋಡಲು ಪ್ರತ್ಯೇಕ ಫಲಕವನ್ನು ಸೃಷ್ಟಿಸಲಾಗಿದೆ. 30 ರಿಂದ 44 ವಯೋಮಿತಿಯವರು ಹೆಚ್ಚಿನ ಪ್ರಮಾಣದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. 15 ರಿಂದ 29 ಮತ್ತು 45-59 ವಯೋಮಾನದವರು ನಂತರದ ಸ್ಥಾನದಲ್ಲಿದ್ದಾರೆ.

ಡ್ಯಾಶ್ ಬೋರ್ಡ್ ನಿಗದಿತ ಕಾಲಾವಧಿಯಲ್ಲಿ ಪ್ರಮುಖ ಟ್ರೆಂಡ್ ಗಳನ್ನು ಸಹ ತೋರಿಸುತ್ತದೆ. ಕಳೆದ 7 ದಿನಗಳು, 30 ದಿನಗಳು ಮತ್ತು ಒಟ್ಟಾರೆ ಯೋಜನೆ ಪ್ರಾರಂಭವಾದಾಗಿನಿಂದ ಈಗಿನ ತನಕ ಸಂಪೂರ್ಣ ಮಾಹಿತಿಯನ್ನು ಇದು ಒದಗಿಸಲಿದೆ. ಡ್ಯಾಶ‍್ ಬೋರ್ಡ್ ನಲ್ಲಿ ಅಡಕವಾಗಿರುವ ಮಾಹಿತಿ ಪ್ರಕಾರ, ನೋಂದಣಿಯಾದ ಆಸ್ಪತ್ರೆಗಳಲ್ಲಿ ಫಲಾನುಭವಿಗಳು ಪಡೆಯುವ ಆರೋಗ್ಯ ಸೌಲಭ್ಯ ಮತ್ತು ವಿಶೇಷತೆಗಳ ಬಗ್ಗೆಯೂ ವಿವರಗಳಿವೆ.  ಚಿಕಿತ್ಸೆ ಪಡೆದವರ ಸಂಖ್ಯೆ ಮತ್ತು  ಚಿಕಿತ್ಸಾ ಮೊತ್ತದ ವಿವರಗಳು ಸಹ ದೊರೆಯಲಿದೆ.

ಡ್ಯಾಶ್ ಬೋರ್ಡ್ ನಲ್ಲಿ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ದತ್ತಾಂಶಗಳು ದೊರೆಯಲಿದ್ದು, ವೆಬ್ ಪುಟದ ಮೇಲಿನ ಭಾಗದಲ್ಲಿ ಯಾವ ರಾಜ್ಯ ಎಂಬುದನ್ನು ಒತ್ತಿದರೆ ವಿವರಗಳು ಲಭ್ಯವಾಗಲಿವೆ. ಇದಲ್ಲದೇ ಬಳಕೆದಾರರು ಭಾರತದ ನೂರಾರು ಜಿಲ್ಲೆಗಳಾದ್ಯಂತ ವ್ಯಾಪಿಸಿರುವ ಯಾವುದೇ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಪಟ್ಟಿಯನ್ನು ಹುಡುಕಬಹುದು ಮತ್ತು ವೀಕ್ಷಿಸಬಹುದಾಗಿದೆ.

ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಯೋಜನೆಯ ಕ್ರಿಯಾತ್ಮಕ ಸಾರ್ವಜನಿಕ ಡ್ಯಾಶ್ ಬೋರ್ಡ್ ಗೆ ಈ ಅಧಿಕೃತ ವೆಬ್ ಜಾಲತಾಣದ ಮೂಲಕ ಪ್ರವೇಶಿಸಬಹುದು (https://pmjay.gov.in) ಅಥವಾ ನೇರವಾಗಿ ಎನ್.ಎಚ್.ಎ ಸೇತು ಡ್ಯಾಶ್ ಬೋರ್ಡ್  (pmjay.gov.in) ಮೂಲಕ ಪ್ರವೇಶ ಮಾಡಬಹುದಾಗಿದೆ.  



(Release ID: 1831676) Visitor Counter : 243