ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಕೇಂದ್ರ ಸಚಿವ ಶ್ರೀ ಭಗವಂತ ಖೂಬಾ ಅವರಿಂದ ಎಸ್‌ಇಎಫ್‌ಐನ ದೇಶಾದ್ಯಂತದ ಮೇಲ್ಛಾವಣಿ ಸೌರಶಕ್ತಿ ಜಾಗೃತಿ ಅಭಿಯಾನಕ್ಕೆ ಚಾಲನೆ
Posted On:
05 JUN 2022 12:04PM by PIB Bengaluru
ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಶ್ರೀ ಭಗವಂತ ಖೂಬಾ ಅವರು ದೇಶಾದ್ಯಂತದ ಮೇಲ್ಛಾವಣಿ ಸೌರಶಕ್ತಿ (ರೂಫ್‌ಟಾಪ್ ಸೋಲಾರ್) ಜಾಗೃತಿ ಅಭಿಯಾನಕ್ಕೆ ಕರ್ನಾಟಕದ ಬೀದರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಕರ್ನಾಟಕದ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್, ರಾಮಗುಂಡಂನ ಎನ್‌ಟಿಪಿಸಿ ಮುಖ್ಯ ಪ್ರಧಾನ ವ್ಯವಸ್ಥಾಪಕಶ್ರೀ ಸುನೀಲ್ ಕುಮಾರ್, ಎನ್‌ಎಸ್‌ಇಎಫ್‌ಐ ಅಧ್ಯಕ್ಷ ಶ್ರೀ ಪ್ರಣವ್ ಆರ್ ಮೆಹ್ತಾ, ಎನ್‌ಎಸ್‌ಇಎಫ್‌ಐ ಸಿಇಒ ಶ್ರೀ ಸುಬ್ರಹ್ಮಣ್ಯಂ ಪುಲಿಪಾಕ, ಕೆಆರ್‌ಇಡಿಎಲ್ ಅಧ್ಯಕ್ಷ ಶ್ರೀ ಚಂದ್ರಕಾಂತ್ ಬಸವರಾಜ್ ಪಾಟೀಲ್ ಮತ್ತು ಬೀದರ್ ಜಿಲ್ಲಾಧಿಕಾರಿ ಶ್ರೀ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.
ನಿನ್ನೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ಖೂಬಾ, ಜನರ ಒಳಗೊಳ್ಳುವಿಕೆ ಇಲ್ಲದೆ ಯಾವುದೇ ದೊಡ್ಡ ಆಲೋಚನೆಯೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ತನ್ನ ಕೊಡುಗೆಯನ್ನು ನೀಡಲು ಮೇಲ್ಛಾವಣಿ ಸೌರ ಶಕ್ತಿಯು ಸಾಮಾನ್ಯ ವ್ಯಕ್ತಿಗೆ ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದರು. "ಘರ್ ಕೆ ಉಪರ್ ಸೋಲಾರ್ ಈಸ್ ಸೂಪರ್" ಎಂಬ ಶೀರ್ಷಿಕೆಯ ಈ ಅಭಿಯಾನವು ಸ್ಥಳೀಯ ಸರ್ಕಾರ, ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯೂಎ) ಮತ್ತು ಪುರಸಭೆಗಳನ್ನು ಸೌರ ಮೇಲ್ಛಾವಣಿಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಶ್ರೀ ಖೂಬಾ ಅವರು ಭಾರತದಲ್ಲಿ ನವೀಕರಿಸಬಹುದಾದ ಇಂಧನ (ಆರ್‌ಇ) ವಲಯದ ಬೆಳವಣಿಗೆಯ ಬಗ್ಗೆ ಮಾತನಾಡಿದರು.
ಪ್ರಧಾನಿ ಮೋದಿಯವರು ನಿಗದಿಪಡಿಸಿರುವ ಪಂಚಾಮೃತ ಗುರಿಗಳ ಬಗ್ಗೆ ಮಾತನಾಡಿದ ಶ್ರೀ ಖೂಬಾ, 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಗುರಿಯನ್ನು ಸಾಧಿಸಲು ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಮೇಲ್ಛಾವಣಿ ಸೌರಶಕ್ತಿಯು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಈ ಗುರಿಯನ್ನು ಸಾಧಿಸಲು 2 ಮತ್ತು 3 ನೇ ಶ್ರೇಣಿ ನಗರಗಳು ಗರಿಷ್ಠ ಸಾಮರ್ಥ್ಯವನ್ನು ಹೊಂದಿವೆ. ಕರ್ನಾಟಕವೊಂದರಲ್ಲೇ 1 ಗಿಗಾವ್ಯಾಟ್ ಮೇಲ್ಛಾವಣಿ ಸೌರಶಕ್ತಿಯ ಸಾಮರ್ಥ್ಯವಿದೆ ಎಂದು ಅವರು ಹೇಳಿದರು. ಮನೆಗಳಿಗೆ ಸೋಲಾರ್ ಅಳವಡಿಸಲು ಎಂ ಎನ್ ಆರ್ ಇ ಶೇ.40 ರಷ್ಟು ಸಹಾಯಧನವನ್ನು ನೀಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರದ ಸಹಾಯಧನವನ್ನು ಬಳಸಿಕೊಂಡು ಮೇಲ್ಛಾವಣಿ ಸೌರಶಕ್ತಿ ಅಳವಡಿಸುವಂತೆ ಸಚಿವರು ಸಾರ್ವಜನಿಕರಿಗೆ ಮನವಿ ಮಾಡಿದರು. ಬೀದರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮೇಲ್ಛಾವಣಿ ಸೌರಶಕ್ತಿ ಅಳವಡಿಸಲು ಆದೇಶಿಸಿರುವುದಾಗಿ ಶ್ರೀ ಖೂಬಾ ತಿಳಿಸಿದರು.
ಶ್ರೀ ವಿ ಸುನೀಲ್ ಕುಮಾರ್ ಅವರು ಕರ್ನಾಟಕ ಸರ್ಕಾರದ ನವೀಕರಿಸಬಹುದಾದ ಇಂಧನ ಯೋಜನೆಗಳ ಬಗ್ಗೆ ಮಾತನಾಡಿದರು. ಅವರು ಪಿಎಂ-ಕುಸುಮ್ ಯೋಜನೆಯ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದರು. ಎಂ ಎನ್ ಆರ್ ಇ ಮತ್ತು ರಾಜ್ಯ ಸರ್ಕಾರವು ನೀಡುತ್ತಿರುವ ಪ್ರಯೋಜನಗಳನ್ನು ಬಳಸಿಕೊಳ್ಳುವಂತೆ ಅವರು ರೈತರಿಗೆ ಕರೆನೀಡಿದರು.
ಈ ಯೋಜನೆಯಲ್ಲಿ ರೈತರಿಗೆ ಸೌರ ಪಂಪ್‌ಗಳನ್ನು ಅಳವಡಿಸಲು ಕೇಂದ್ರ ಮತ್ತು ರಾಜ್ಯದಿಂದ ತಲಾ ಶೇ.30 ರಷ್ಟು ಸಹಾಯಧನ ನೀಡಲಾಗುತ್ತದೆ.
ಜರ್ಮನ್ ಸೋಲಾರ್ ಅಸೋಸಿಯೇಷನ್ (ಬಿಎಸ್‌ಡಬ್ಲ್ಯೂ) ಮತ್ತು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವಾಲಯದ (ಬಿಎಂಜೆಡ್) ಬೆಂಬಲದೊಂದಿಗೆ ಸೆಕ್ವಾ ಕೆವಿಪಿ ಕಾರ್ಯಕ್ರಮದಡಿಯಲ್ಲಿ ಎನ್‌ಎಸ್‌ಇಎಫ್‌ಐ 3 ವರ್ಷಗಳ ಸುದೀರ್ಘ ಪ್ಯಾನ್ ಇಂಡಿಯಾ ರೂಫ್‌ಟಾಪ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದು ಭಾರತದ 100 ಪಟ್ಟಣಗಳು ಮತ್ತು ನಗರಗಳಲ್ಲಿ, ವಿಶೇಷವಾಗಿ 2 ಮತ್ತು 3 ನೇ ಶ್ರೇಣಿಯ ಪಟ್ಟಣಗಳು/ನಗರಗಳಲ್ಲಿ ಮೇಲ್ಛಾವಣಿ ಸೌರಶಕ್ತಿಯ ಬಗ್ಗೆ ಅರಿವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
*****
(Release ID: 1831296)
Visitor Counter : 353