ಜಲ ಶಕ್ತಿ ಸಚಿವಾಲಯ
ಜಲ ಜೀವನ್ ಮಿಷನ್ 50% ಕಾರ್ಯ ಪೂರ್ಣಗೊಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ
9.6 ಕೋಟಿ (50%) ಗ್ರಾಮೀಣ ಕುಟುಂಬಗಳು ಈಗ ತಮ್ಮ ಮನೆ ಆವರಣದಲ್ಲಿ ನಲ್ಲಿ ನೀರಿನ ಸಂಪರ್ಕ ಹೊಂದಿವೆ
ಪಂಜಾಬ್, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಬಿಹಾರದಲ್ಲಿ 90%ಗಿಂತ ಹೆಚ್ಚಿನ ವ್ಯಾಪ್ತಿಯೊಂದಿಗೆ 'ಹರ್ ಘರ್ ಜಲ್' ರಾಜ್ಯಗಳಾಗುವತ್ತ ವೇಗದ ಪ್ರಗತಿ ಸಾಧಿಸುತ್ತಿವೆ
6 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 108 ಜಿಲ್ಲೆಗಳು, 1,222 ಬ್ಲಾಕ್‌ಗಳು, 71,667 ಗ್ರಾಮ ಪಂಚಾಯಿತಿಗಳು ಮತ್ತು 1,51,171 ಗ್ರಾಮಗಳು "ಹರ್ ಘರ್ ಜಲ್" ಆಗಿ ಪರಿವರ್ತನೆಯಾಗಿವೆ
Posted On:
28 MAY 2022 2:00PM by PIB Bengaluru
ಪ್ರತಿ ಗ್ರಾಮೀಣ ಮನೆಗೂ ಸುರಕ್ಷಿತ ಕುಡಿಯುವ ನೀರು ಒದಗಿಸುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಕೋನಕ್ಕೆ ಅನುಗುಣವಾಗಿ, ದೇಶವು 50% ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕ ಪಡೆಯುವ ಹೊಸ ಮೈಲಿಗಲ್ಲು ಸಾಧಿಸಿದೆ. ಗೋವಾ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳು, ದಾದ್ರ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು, ಪುದುಚೇರಿ ಮತ್ತು ಹರಿಯಾಣ ಈಗಾಗಲೇ 100% ಗೃಹ ನಲ್ಲಿ ನೀರು ಸಂಪರ್ಕ ಸಾಧಿಸಿವೆ. ಪಂಜಾಬ್, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಬಿಹಾರ 90%ಗಿಂತ ಹೆಚ್ಚಿನ ಕಾರ್ಯ ಪೂರ್ಣಗೊಂಡಿದ್ದು, 'ಹರ್ ಘರ್ ಜಲ್' ಸ್ಥಾನಮಾನ ಪಡೆಯುವತ್ತ ವೇಗವಾಗಿ ಪ್ರಗತಿ ಸಾಧಿಸುತ್ತಿವೆ.
ಮಹಾತ್ಮ ಗಾಂಧೀಜಿ ಅವರ “ಗ್ರಾಮ ಸ್ವರಾಜ್ಯ” ಕನಸಾದ ಸಾಧಿಸುವ ನಿಟ್ಟಿನಲ್ಲಿ, ಜಲ ಜೀವನ್ ಮಿಷನ್ ಮೊದಲಿನಿಂದಲೂ ನೀರು ಸರಬರಾಜು ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 9.59 ಕೋಟಿಗಿಂತ ಹೆಚ್ಚಿನ ಗ್ರಾಮೀಣ ಕುಟುಂಬಗಳು ತಮ್ಮ ಮನೆ ಆವರಣದಲ್ಲಿ ನಲ್ಲಿ ನೀರು ಪಡೆಯುತ್ತಿವೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕುಡಿಯುವ ನೀರಿನ ಹುಡುಕಾಟದಲ್ಲಿ ಸುಡುವ ಬಿಸಿಲು, ಮಳೆ ಮತ್ತು ಹಿಮದಲ್ಲಿ ದೂರದವರೆಗೆ ನಡೆದುಕೊಂಡು ಹೋಗುವ ಶತಮಾನದಷ್ಟು ಹಳೆಯದಾದ ಪರದಾಟಕ್ಕೆ ಇದರಿಂದ ಕೊನೆ ಹಾಡಿದಂತಾಗಿದೆ. 'ಹರ್ ಘರ್ ಜಲ್' ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, 2024ರ ವೇಳೆಗೆ ಪ್ರತಿ ಗ್ರಾಮೀಣ ಮನೆಯಲ್ಲಿ ನಲ್ಲಿ ನೀರಿನ ಸಂಪರ್ಕ ಖಚಿತಪಡಿಸಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವದಲ್ಲಿ ಜಲಶಕ್ತಿ ಸಚಿವಾಲಯದ ಅಡಿ ಜಲ ಜೀವನ್ ಮಿಷನ್ ಜಾರಿಗೊಳಿಸಲಾಗಿದೆ.
2019ರಲ್ಲಿ ಜಲ ಜೀವನ್ ಮಿಷನ್ ಆರಂಭಿಸುವ ಸಮಯದಲ್ಲಿ, ಕೇವಲ 3.23 ಕೋಟಿ ಕುಟುಂಬಗಳು ಅಂದರೆ ಗ್ರಾಮೀಣ ಜನಸಂಖ್ಯೆಯ 17% ಜನರು ನಲ್ಲಿ ಕುಡಿಯುವ ನೀರಿನ ಸೌಲಭ್ಯ ಹೊಂದಿದ್ದರು. ದಿನನಿತ್ಯ ಮನೆಯ ಅಗತ್ಯಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಹೊರೆ ಹೆಚ್ಚಾಗಿ ಮಹಿಳೆಯರು ಮತ್ತು ಯುವತಿಯರ ಮೇಲೆ ಬಿದ್ದಿತ್ತು. ಬೇಸಿಗೆಯಲ್ಲಿ ನೀರಿನ ಹೆಚ್ಚಿದ ಅಗತ್ಯದ ಕಾರಣದಿಂದಾಗಿ, ಹೆಣ್ಣು ಮಕ್ಕಳ ಶಾಲಾ ಹಾಜರಾತಿ ಗಮನಾರ್ಹವಾಗಿ ಕಡಿಮೆಯಾಗಿತ್ತು ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿವೆ. ಜಲ ಜೀವನ್ ಮಿಷನ್ ಪ್ರಾರಂಭವಾದ ನಂತರ ಮತ್ತು ಅವರ ಮನೆ ಆವರಣದೊಳಗೆನಲ್ಲಿ ನೀರಿನ ಸಂಪರ್ಕ ಸೌಲಭ್ಯ ಒದಗಿಸಿದ ನಂತರ, ಈ ನಿಟ್ಟಿನಲ್ಲಿ ಗಣನೀಯ ಸುಧಾರಣೆ ಗಮನಿಸಲಾಗಿದೆ. 27.05.2022 ಮೇ 27ರ ವರೆಗೆ ಅನ್ವಯವಾಗುವಂತೆ, ದೇಶದ 108 ಜಿಲ್ಲೆಗಳು, 1,222 ಬ್ಲಾಕ್‌ಗಳು, 71,667 ಗ್ರಾಮ ಪಂಚಾಯಿತಿಗಳು ಮತ್ತು 1,51,171 ಗ್ರಾಮಗಳು “ಹರ್ ಘರ್ ಜಲ್” ಆಗಿವೆ. ಇದರಲ್ಲಿ ಎಲ್ಲಾ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಒದಗಿಸಲಾಗಿದೆ.
ಈ ವರ್ಷ ರಾಷ್ಟ್ರವು ‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಿಸುತ್ತಿರುವ ಸುಸಂದರ್ಭದಲ್ಲಿ, ‘ವಾಶ್ ಪ್ರಬುದ್ಧ್ ಗಾಂವ್’ ಗುರಿ ಸಾಧಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಚರ್ಚಿಸಲು ದೇಶದ ಉದ್ದಗಲಕ್ಕೂ ವಿಶೇಷ ಗ್ರಾಮಸಭೆಗಳನ್ನು ಕರೆಯಲಾಗುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸರಪಂಚರು(ಸ್ಥಳೀಯ ಆಡಳಿತ ಮುಖ್ಯಸ್ಥರು) ಮತ್ತು ಪಾನಿ ಸದಸ್ಯರನ್ನು ಉದ್ದೇಶಿಸಿ ಸಂವಾದ ನಡೆಸಿದ್ದಾರೆ, ಅವರು 'ಹರ್ ಘರ್ ಜಲ್' ಅಡಿ ರಚಿಸಲಾದ ನೀರು ಸರಬರಾಜು ಮೂಲಸೌಕರ್ಯದ ಅಂತಿಮ ಪಾಲಕರು ಮತ್ತು ಪಾಲುದಾರರು ಆಗಿರುವುದರಿಂದ ಈ ಕಾರ್ಯಕ್ರಮದ ಜವಾಬ್ದಾರಿ ವಹಿಸುವಂತೆ ಅವರನ್ನು ಪ್ರೇರೇಪಿಸಿದ್ದಾರೆ. ಜಲಜೀವನ ಮಿಷನ್ ಅಡಿ, ಸಮುದಾಯದ ತೊಡಗಿಸಿಕೊಳ್ಳುವಿಕೆ, ಪಾನಿ ಸಮಿತಿಗಳ ಸಾಮರ್ಥ್ಯ ಹೆಚ್ಚಿಸುವುದು, ಕಾರ್ಯಾಚರಣೆ ಮತ್ತು ನಿರ್ವಹಣೆಯ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಕಾರ್ಯಕ್ರಮಗಳ ಅನುಷ್ಠಾನ ಬೆಂಬಲ ಏಜೆನ್ಸಿಗಳ (ಐಎಸ್ಎ) ಮೂಲಕ ರಾಜ್ಯ ಸರ್ಕಾರದಿಂದ ಎಲ್ಲಾ ಪಂಚಾಯಿತಿಗಳಿಗೆ ಬೆಂಬಲ ನೀಡಲಾಗುತ್ತದೆ.
***
(Release ID: 1829316)
Visitor Counter : 221