ರಕ್ಷಣಾ ಸಚಿವಾಲಯ

ಭವಿಷ್ಯದ ತಂತ್ರಜ್ಞಾನಗಳಲ್ಲಿ ಪ್ರಗತಿ ಸದ್ಯದ ಅಗತ್ಯವಾಗಿದೆ: ಡಿಆರ್‌ಡಿಒದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನದ ಸಮಾರಂಭದಲ್ಲಿ ರಕ್ಷಣಾ ಸಹಾಯಕ ಸಚಿವರ ಹೇಳಿಕೆ


ದೇಶೀಯ ಖರೀದಿಯ ಮೂಲಕ ರಕ್ಷಣಾ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ: ಶ್ರೀ ಅಜಯ್ ಭಟ್

Posted On: 11 MAY 2022 1:37PM by PIB Bengaluru

ರಾಷ್ಟ್ರವು ಭವಿಷ್ಯದ ಬೆದರಿಕೆಗಳನ್ನು ಎದುರಿಸುವುದಕ್ಕೆ ಸಿದ್ಧವಾಗಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಂತಹ ತಂತ್ರಜ್ಞಾನಗಳಲ್ಲಿ ಪ್ರಗತಿ ಸಾಧಿಸುವತೆ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀ ಅಜಯ್ ಭಟ್ ವೈಜ್ಞಾನಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮೇ 11, 2022 ರಂದು ನವದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶೀಯ ಖರೀದಿಯ ಮೂಲಕ ರಕ್ಷಣಾ ವಲಯದ ಅವಶ್ಯಕತೆಗಳನ್ನು ಪೂರೈಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ತಂತ್ರಜ್ಞಾನಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ರಕ್ಷಣಾ ಪರಿಸರ ವ್ಯವಸ್ಥೆಯು ಒಗ್ಗೂಡಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.



ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ದೃಷ್ಟಿಕೋನಕ್ಕೆ ಅನುಗುಣವಾಗಿ ಸಶಸ್ತ್ರ ಪಡೆಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವ ಸ್ವಾವಲಂಬಿ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಡಿಆರ್‌ಡಿಒ ಮಾಡುತ್ತಿರುವ ಪ್ರಯತ್ನಗಳನ್ನು  ಸಚಿವರು ಶ್ಲಾಘಿಸಿದರು. “ಡಿಆರ್‌ಡಿಒ ವಿನ್ಯಾಸ, ಅಭಿವೃದ್ಧಿ ಮತ್ತು ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರ ವೇದಿಕೆಗಳು/ವ್ಯವಸ್ಥೆಗಳ ಉತ್ಪಾದನೆಯ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇದು ಖಾಸಗಿ ವಲಯದ ಒಳಗೊಳ್ಳುವಿಕೆಯನ್ನು ಹೆಚ್ಚಿಸಿದೆ. ಈ ಪ್ರಯತ್ನಗಳಿಂದಾಗಿ ಭಾರತವು ಈಗ ರಕ್ಷಣಾ ಸಾಧನಗಳನ್ನು ರಫ್ತು ಮಾಡುವ ಅಗ್ರ 25 ರಾಷ್ಟ್ರಗಳಲ್ಲಿ ಒಂದಾಗಿದೆ” ಎಂದು ಅವರು ಹೇಳಿದರು.
1998 ರಲ್ಲಿ ಪೋಖ್ರಾನ್‌ನಲ್ಲಿ ನಡೆಸಿದ ಪರಮಾಣು ಪರೀಕ್ಷೆಗಳ ಸ್ಮರಣಾರ್ಥವಾಗಿ ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 'ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ವಿಧಾನ' ಈ ವರ್ಷದ ಧ್ಯೇಯವಾಕ್ಯವಾಗಿದೆ. ರಾಷ್ಟ್ರದ ಪ್ರಗತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಸರ್ವತೋಮುಖ ಅಭಿವೃದ್ಧಿಯ ಮಹತ್ವವನ್ನು ಈ ವಿಷಯವು ಒತ್ತಿಹೇಳುತ್ತದೆ ಎಂದು ಶ್ರೀ ಅಜಯ್ ಭಟ್ ಹೇಳಿದರು.
ಈ ಸಂದರ್ಭದಲ್ಲಿ, ರಾಷ್ಟ್ರದ ತಾಂತ್ರಿಕ ಕನಸುಗಳನ್ನು ನನಸಾಗಿಸುವಲ್ಲಿ ಮಹೋನ್ನತ ಕೊಡುಗೆ ನೀಡಿದ ವೈಜ್ಞಾನಿಕ ಸಮುದಾಯಕ್ಕೆ ರಕ್ಷಣಾ ಸಹಾಯಕ ಸಚಿವರು 2019 ರ ಡಿಆರ್‌ಡಿಒ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪ್ರಶಸ್ತಿಗಳ ವರ್ಗವು ಜೀವಮಾನದ ಸಾಧನೆ, ತಂತ್ರಜ್ಞಾನ ನಾಯಕತ್ವ, ಹಿರಿಯ ವಿಜ್ಞಾನಿ ಪ್ರಶಸ್ತಿ, ಶೈಕ್ಷಣಿಕ ಶ್ರೇಷ್ಠತೆ, ಟೆಕ್ನೋ-ಮ್ಯಾನೇಜಿರಿಯಲ್, ಸ್ವಾವಲಂಬನೆ ಮತ್ತು ಕಾರ್ಯಕ್ಷಮತೆಯ ಪ್ರಶಸ್ತಿಗಳನ್ನು ಒಳಗೊಂಡಿವೆ.
ಡಿಆರ್‌ಡಿಒ ಮಾಜಿ ನಿರ್ದೇಶಕ ಡಾ.ಕೆ.ಜಿ. ನಾರಾಯಣನ್ ಅವರ ‘ರಕ್ಷಣಾ ಸಂಶೋಧನೆಯಲ್ಲಿನ ಸ್ವಾವಲಂಬನೆ ಪ್ರಯತ್ನಗಳು (1983-2018)’ ಮತ್ತು ಡಿಆರ್‌ಡಿಒ ಮಾಜಿ ಮಹಾ ನಿರ್ದೇಶಕ ಡಾ ಜಿ ಅಥೀಥನ್ ಅವರ ‘ಸೈಬರ್ ಭದ್ರತೆಗಾಗಿ ಪರಿಕಲ್ಪನೆಗಳು ಮತ್ತು ಅಭ್ಯಾಸಗಳು’ಎಂಬ ಎರಡು ಅಧ್ಯಯನ ಆಧರಿತ ಕೃತಿಗಳನ್ನು ಶ್ರೀ ಅಜಯ್ ಭಟ್ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ರಕ್ಷಣಾ ತಂತ್ರಜ್ಞಾನ ಸ್ಪೆಕ್ಟ್ರಮ್ ಅನ್ನು ಸಹ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ  ಸುಧಾರಿತ ತಂತ್ರಜ್ಞಾನಗಳ ಕುರಿತು ಡಿಆರ್‌ಡಿಒ ವಿಜ್ಞಾನಿಗಳಿಂದ ಮೂರು ಉಪನ್ಯಾಸಗಳು ಆಯೋಜನೆಯಾಗಿದ್ದವು. 
ರಕ್ಷಣಾ ಇಲಾಖೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದರ್ಶಿ ಹಾಗು ಡಿಆರ್‌ಡಿಒ ಅಧ್ಯಕ್ಷ ಡಾ ಜಿ ಸತೀಶ್ ರೆಡ್ಡಿ ಅವರು ಮಾತನಾಡಿ, ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಅಭಿನಂದಿಸಿದರು, ಸ್ವಾವಲಂಬಿ ರಕ್ಷಣಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದರು. ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷ ಶ್ರೀ ಎಸ್ ಸೋಮನಾಥ್; ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಡಿಆರ್‌ಡಿಒ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

***



(Release ID: 1824462) Visitor Counter : 181