ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಗಳ ಫ್ರಾನ್ಸ್ ಭೇಟಿ ವೇಳೆ ಬಿಡುಗಡೆ ಮಾಡಲಾದ ಭಾರತ-ಫ್ರಾನ್ಸ್ ಜಂಟಿ ಹೇಳಿಕೆ
Posted On:
04 MAY 2022 11:59PM by PIB Bengaluru
1. ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಶ್ರೀ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು 2022ರ ಮೇ 4ರಂದು ಪ್ಯಾರಿಸ್‌ಗೆ ಕೆಲ ಕಾಲ ಭೇಟಿ ನೀಡಿದ್ದ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡಿದರು.
2. ಭಾರತ ಮತ್ತು ಫ್ರಾನ್ಸ್ 1998ರಿಂದ ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳಾಗಿವೆ. ಕಾರ್ಯತಾಂತ್ರಿಕ ಪಾಲುದಾರಿಕೆಯು ಆಳವಾದ ಮತ್ತು ಸ್ಥಿರವಾದ ಪರಸ್ಪರ ನಂಬಿಕೆಯ ಭದ್ರ ಬುನಾದಿಯ ಮೇಲೆ ನಿಂತಿದೆ, ಕಾರ್ಯತಂತ್ರದ ಸ್ವಾಯತ್ತತೆಯಲ್ಲಿ ನಂಬಿಕೆ, ಅಂತಾರಾಷ್ಟ್ರೀಯ ಕಾನೂನಿಗೆ ಅಚಲವಾದ ಬದ್ಧತೆ ಮತ್ತು ಸುಧಾರಿತ ಮತ್ತು ಪರಿಣಾಮಕಾರಿ ಬಹುಪಕ್ಷೀಯತೆಯಿಂದ ರೂಪುಗೊಂಡ ಬಹುಧ್ರುವೀಯ ಜಗತ್ತಿನಲ್ಲಿ ನಂಬಿಕೆ. ಇಬ್ಬರೂ ಪ್ರಜಾಪ್ರಭುತ್ವದ ಹಂಚಿಕೆಯ ಮೌಲ್ಯಗಳು, ಮೂಲಭೂತ ಸ್ವಾತಂತ್ರ್ಯಗಳು, ಕಾನೂನಿನ ನಿಯಮ ಮತ್ತು ಮಾನವ ಹಕ್ಕುಗಳ ಗೌರವಕ್ಕೆ ಬದ್ಧವಾಗಿವೆ.
3. ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಎದುರಿಸುತ್ತಿರುವ ಜಾಗತಿಕ ಭೌಗೋಳಿಕ ರಾಜಕೀಯ ಸವಾಲುಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಫ್ರಾನ್ಸ್ ತಮ್ಮ ಸಹಕಾರ ಸಂಬಂಧಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಭವಿಷ್ಯದಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಲು ಸಜ್ಜಾಗುವ ಬದ್ಧತೆಯನ್ನು ಪುನರುಚ್ಚರಿಸಿದವು. ಅಲ್ಲದೆ ಹೊಸದಾಗಿ ಎದುರಾಗುತ್ತಿರುವ ಸವಾಲುಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆ ವಿಸ್ತರಣೆ ನಿಟ್ಟಿನಲ್ಲಿ ಹೊಸ ಕ್ಷೇತ್ರಗಳಲ್ಲಿ ಸಂಬಂಧ ವಿಸ್ತರಣೆಗೆ ಸಮ್ಮತಿಸಿದವು.
ಇಂಡೋ-ಫೆಸಿಪಿಕ್ ಪ್ರದೇಶ
4. ಭಾರತ-ಪೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಲು ಭಾರತ ಮತ್ತು ಫ್ರಾನ್ಸ್ ಪ್ರಮುಖ ಕಾರ್ಯತಂತ್ರ ಪಾಲುದಾರಿಕೆಯನ್ನು ಮಾಡಿಕೊಂಡಿವೆ. ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಾರ್ವಭೌಮತೆ ಗೌರವಿಸಲು ಭೌಗೋಳಿಕ ಏಕತೆ ಕಾಯ್ದುಕೊಳ್ಳಲು ನೌಕಾ ಸ್ವಾತಂತ್ರ್ಯ ಮತ್ತು ಪ್ರದೇಶವನ್ನು ಸಂಘರ್ಷ, ಉದ್ವಿಗ್ನತೆ ಮತ್ತು ಬಿಕ್ಕಟ್ಟು ಮುಕ್ತಗೊಳಿಸಲು ಉಭಯ ದೇಶಗಳು ಮುಕ್ತ ಹಾಗೂ ನ್ಯಾಯಸಮ್ಮತ ವಿಧಾನಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ.
5. ಭಾರತ-ಫ್ರಾನ್ಸ್ ಇಂಡೋ-ಫೆಸಿಪಿಕ್ ಸಹಭಾಗಿತ್ವದಲ್ಲಿ ರಕ್ಷಣಾ ಮತ್ತು ಭದ್ರತೆ, ವ್ಯಾಪಾರ, ಬಂಡವಾಳ ಹೂಡಿಕೆ, ಸಂಪರ್ಕ, ಆರೋಗ್ಯ ಮತ್ತು ಸುಸ್ಥಿರತೆ ಅಂಶಗಳು ಒಳಗೊಂಡಿವೆ. ದ್ವಿಪಕ್ಷೀಯ ಸಹಕಾರ ಮಾತ್ರವಲ್ಲದೆ, ಭಾರತ ಮತ್ತು ಫ್ರಾನ್ಸ್ ಪ್ರದೇಶದಲ್ಲಿನ ಮತ್ತು ಪ್ರಾದೇಶಿಕ ಸಂಘನೆಗಳಲ್ಲಿನ ಇತರೆ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ನಾನಾ ವಿಧಾನಗಳಲ್ಲಿ ಹೊಸ ಸಹಭಾಗಿತ್ವಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನೂ ಸಹ ಭಾರತ ಮತ್ತು ಫ್ರಾನ್ಸ್ ಮುಂದುವರಿಸಿವೆ. ಮೊದಲ ಭಾರತ-ಪೆಸಿಫಿಕ್ ಸಚಿವರ ವೇದಿಕೆಯ ಸಭೆ 2022ರ ಫೆಬ್ರವರಿಯಲ್ಲಿ ಪ್ಯಾರಿಸ್ ನಲ್ಲಿ ನಡೆದಿತ್ತು. ಆಗ ಐರೋಪ್ಯ ಒಕ್ಕೂಟದ ಮಂಡಳಿಯ ಅಧ್ಯಕ್ಷತೆಯನ್ನು ಫ್ರಾನ್ಸ್ ವಹಿಸಿತ್ತು. ಆಗ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಐರೋಪ್ಯ ಒಕ್ಕೂಟ ಮಟ್ಟ ಆಧರಿಸಿದ ಐರೋಪ್ಯ ಒಕ್ಕೂಟ ಕಾರ್ಯತಂತ್ರ ಮಹತ್ವದ ಕಾರ್ಯಸೂಚಿಗೆ ಚಾಲನೆ ನೀಡಲಾಗಿತ್ತು.
6. ಭಾರತ ಮತ್ತು ಫ್ರಾನ್ಸ್, ಭಾರತ ಮತ್ತು ಐರೋಪ್ಯ ಒಕ್ಕೂಟದ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದವು ಮತ್ತು ಭಾರತ-ಐರೋಪ್ಯ ಒಕ್ಕೂಟ ಸಂಪರ್ಕ ಪಾಲುದಾರಿಕೆಯ ಅನುಷ್ಠಾನದಲ್ಲಿ ಒಗ್ಗೂಡಿ, ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು 2021ರ ಮೇ ತಿಂಗಳಿನಲ್ಲಿ ಪೋರ್ಟೊದಲ್ಲಿ ನಡೆದ ಭಾರತ-ಇಯು ನಾಯಕರ ಸಭೆಯ ನಿರ್ಣಯಗಳನ್ನು ಮುಂದುವರಿಸುವ ಬದ್ಧತೆ ಪ್ರಕಟಿಸಿದವು. ಇತ್ತೀಚೆಗೆ ಭಾರತ-ಐರೋಪ್ಯ ಒಕ್ಕೂಟ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ ಆರಂಭಿಸಿರುವುದನ್ನು ಎರಡೂ ದೇಶಗಳು ಸ್ವಾಗತಿಸಿದವು ಮತ್ತು ಅದರಿಂದ ವ್ಯಾಪಾರ, ತಂತ್ರಜ್ಞಾನ ಮತ್ತು ಭದ್ರತಾ ವಲಯದ ಕಾರ್ಯತಾಂತ್ರಿಕ ಅಂಶಗಳ ಕುರಿತಂತೆ ಉನ್ನತ ಮಟ್ಟದ ಸಮನ್ವಯ ತ್ವರಿತಗೊಳಿಸಲು ನೆರವಾಗಲಿದೆ. ಜೊತೆಗೆ ವ್ಯಪಾರ, ಬಂಡವಾಳ ಹೂಡಿಕೆ ಮತ್ತು ಭೌಗೋಳಿಕ ಸೂಚಕಗಳ ಕುರಿತಂತೆ ಭಾರತ-ಐರೋಪ್ಯ ಒಕ್ಕೂಟದ ಒಪ್ಪಂದ ಮಾತುಕತೆಗಳನ್ನು ಪುನರಾರಂಭಿಸಲು ಒಪ್ಪಿದವು.
ಉಕ್ರೇನ್
7. ರಷ್ಯಾ ಪಡೆಗಳು ಉಕ್ರೇನ್ ವಿರುದ್ಧ ಅಕ್ರಮ ಮತ್ತು ಅಪ್ರಚೋದಿತ ದಾಳಿ ನಡೆಸುತ್ತಿರುವುದನ್ನು ಫ್ರಾನ್ಸ್ ಬಲವಾಗಿ ಖಂಡಿಸುವುದಾಗಿ ಪುನರುಚ್ಚರಿಸಿತು.
8. ಉಕ್ರೇನ್ ನಲ್ಲಿನ ಮಾನವೀಯ ಬಿಕ್ಕಟ್ಟು ಮತ್ತು ಸದ್ಯದ ಸಂಕಷ್ಟ ಪರಿಸ್ಥಿತಿ ಬಗ್ಗೆ ಭಾರತ ಮತ್ತು ಫ್ರಾನ್ಸ್ ತೀವ್ರ ಕಳವಳ ವ್ಯಕ್ತಪಡಿಸಿದವು. ಉಕ್ರೇನ್ ನಲ್ಲಿನ ನಾಗರಿಕರ ಸಾವನ್ನು ತೀವ್ರವಾಗಿ ಖಂಡಿಸಿದ ರಾಷ್ಟ್ರಗಳು, ಜನರ ಸಂಕಷ್ಟಗಳಿಗೆ ತಕ್ಷಣ ಅಂತ್ಯಹಾಡಲು ಉಭಯ ದೇಶಗಳು ಮಾತುಕತೆಯನ್ನು ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಉತ್ತೇಜಿಸಬೇಕು ಹಾಗೂ ತಕ್ಷಣ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ, ಕದನ ವಿರಾಮ ಘೋಷಿಸಬೇಕು ಎಂದು ಕರೆ ನೀಡಿದವು. ಉಭಯ ದೇಶಗಳು ವಿಶ್ವಸಂಸ್ಥೆಯ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಗೌರವ ನೀಡುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದವು ಹಾಗೂ ರಾಷ್ಟ್ರಗಳ ಭೌಗೋಳಿಕ ಏಕತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಬೇಕೆಂದು ಹೇಳಿದವು. ಉಕ್ರೇನ್ ನಲ್ಲಿನ ಸಂಘರ್ಷದಿಂದ ಆಗಿರುವ ಪ್ರಾದೇಶಿಕ ಮತ್ತು ಜಾಗತಿಕ ಪರಿಣಾಮಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಸಮನ್ವಯತೆಯನ್ನು ತೀವ್ರಗೊಳಿಸಲು ಒಪ್ಪಿದವು.
9. ಕೋವಿಡ್-19ನಿಂದ ಈಗಾಗಲೇ ಬಾಧಿತವಾಗಿದ್ದ ಜಾಗತಿಕ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಸದ್ಯ ಮತ್ತಷ್ಟು ಏರಿಕೆಯಾಗಿರುವುದು ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆಗಿರುವ ಈ ಬೆಳವಣಿಗೆಗಳ ಬಗ್ಗೆ ಭಾರತ ಮತ್ತು ಫ್ರಾನ್ಸ್ ತೀವ್ರ ಕಳವಳ ವ್ಯಕ್ತಪಡಿಸಿದವು. ದೀರ್ಘಾವಧಿಯಲ್ಲಿ ಸ್ಥಿತಿ ಸ್ಥಾಪಕತ್ವ ಮತ್ತು ಏಕತೆ ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮಾರುಕಟ್ಟೆಗಳನ್ನು ಖಾತ್ರಿಪಡಿಸುವ ಉದ್ದೇಶದ ಆಹಾರ ಮತ್ತು ಕೃಷಿ ಸ್ಥಿತಿ ಸ್ಥಾಪಕತ್ವ ಮಿಷನ್(ಎಫ್ಎಆರ್ ಎಂ) ಮೂಲಕ ಕೈಗೊಳ್ಳುವ ಉಪಕ್ರಮಗಳು ಸೇರಿದಂತೆ ಉಕ್ರೇನ್ ನಲ್ಲಿನ ಸಂಘರ್ಷದಿಂದ ಉಲ್ಬಣಗೊಂಡಿರುವ ಆಹಾರ ಬಿಕ್ಕಟ್ಟು ನಿವಾರಿಸಲು ಸಮನ್ವಯಿತ ಬಹು ಹಂತದ ನಿರ್ವಹಣಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಉಭಯ ದೇಶಗಳು ಬದ್ಧತೆಯನ್ನು ಘೋಷಿಸಿದವು.
10. ಅಫ್ಘಾನಿಸ್ತಾನದ ಕುರಿತಂತೆ ಭಾರತ ಮತ್ತು ಫ್ರಾನ್ಸ್ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವೀಯ ಸ್ಥಿತಿಗತಿ ಬಗ್ಗೆ ಗಂಭೀರ ಕಾಳಜಿಯನ್ನು ವ್ಯಕ್ತಪಡಿಸಿದವು ಹಾಗೂ ಸಾರ್ವಭೌಮತೆ, ಏಕತೆ ಮತ್ತು ಭೌಗೋಳಿಕ ಸಮಗ್ರತೆಯನ್ನು ಗೌರವಿಸುವ ಹಾಗೂ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವಿಲ್ಲದ ಶಾಂತಿಯುತ ಸುಭದ್ರ ಮತ್ತು ಸುಸ್ಥಿರ ಅಫ್ಘಾನಿಸ್ತಾನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಬದ್ಧತೆಯನ್ನು ಘೋಷಿಸಿದವು. ಎಲ್ಲವನ್ನೊಳಗೊಂಡ ಪ್ರಜಾಪ್ರತಿನಿಧಿ ಸರ್ಕಾರ ರಚನೆಯಾಗಬೇಕು ಮತ್ತು ಮಹಿಳೆಯರು, ಮಕ್ಕಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸಬೇಕು ಎಂದು ದೇಶಗಳು ಕರೆ ನೀಡಿದವು. ಅಲ್ಲದೆ ಅವು ವಿಶ್ವಸಂಸ್ಥೆಯ ನಿರ್ಣಯ 2593(2021)ಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚ

ರಿಸಿದವು ಮತ್ತು ಜಗತ್ತಿನ ಇತರೆ ಭಾಗಗಳಿಗೆ ಆಫ್ಘನ್ ಭೂಭಾಗವನ್ನು ಬಳಕೆ ಮಾಡಿಕೊಳ್ಳುವುದರ ವಿರುದ್ಧ ತಮ್ಮ ಶೂನ್ಯ ಸಹಿಷ್ಣುತೆಯನ್ನು ಬಲವಾಗಿ ಪ್ರತಿಪಾದಿಸಿದವು ಹಾಗೂ ಆ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಎಲ್ಲ ಸಂಸ್ಥೆಗಳ ಜೊತೆಗೆ ಒಟ್ಟಾಗಿ ಕಾರ್ಯನಿರ್ವಹಿಸಲು ಸಮ್ಮತಿ ಸೂಚಿಸಿದವು.
ಕಾರ್ಯತಾಂತ್ರಿಕ ಸಹಕಾರ
11. ಎಲ್ಲ ರಕ್ಷಣಾ ವಲಯಗಳಲ್ಲಿ ಸದ್ಯದ ಸಹಕಾರವನ್ನು ಇನ್ನಷ್ಟು ಬಲಗೊಳಿಸುವುದನ್ನು ಉಭಯ ದೇಶಗಳು ಸ್ವಾಗತಿಸಿದವು. ಜಂಟಿ ಸಮರಾಭ್ಯಾಸ(ಶಕ್ತಿ, ವರುಣ, ಪೆಗಸೆ, ಡೆಸರ್ಟ್ ನೈಟ್, ಗರುಡ) ಇವುಗಳ ಮೂಲಕ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಉತ್ತಮ ಸಂಯೋಜನೆ ಮತ್ತು ಅಂತರ ಕಾರ್ಯಾಚರಣೆ ಕುರಿತು ವಿಸ್ತೃತ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಮಧ್ಯೆ ಭಾರತ ಮತ್ತು ಫ್ರಾನ್ಸ್ ನಡುವಿನ ಸಾಗರ ಸಹಕಾರ ವಿಶ್ವಾಸದ ಹೊಸ ಮಟ್ಟವನ್ನು ತಲುಪಿದೆ ಮತ್ತು ಅವು ಅಭ್ಯಾಸಗಳ ಮೂಲಕ ಮುಂದುವರಿದಿದ್ದು, ಹಿಂದೂ ಮಹಾಸಾಗರದಲ್ಲಿ ಜಂಟಿ ವಿನಿಮಯ ಮತ್ತು ಕಾರ್ಯಾಚರಣೆಗಳು ನಡೆದಿವೆ.
12. ಭಾರತ ಮತ್ತು ಫ್ರಾನ್ಸ್ ನಡುವಿನ ದೀರ್ಘಕಾಲದ ಶಸ್ತ್ರಾಸ್ತ್ರ ಸಹಕಾರ ಉಭಯ ದೇಶಗಳ ನಡುವಿನ ಪರಸ್ಪರ ವಿಶ್ವಾಸದ ಸಂಕೇತವಾಗಿದೆ. ಆರು ಸ್ಕಾರ್ಪೆನ್ ಸಬ್ ಮೆರಿನ್ ಗಳನ್ನು ಮುಂಬೈನ ಎಂಡಿಎಲ್ ನಲ್ಲಿ ನಿರ್ಮಿಸಿರುವುದು ಫ್ರಾನ್ಸ್ ನಿಂದ ಭಾರತಕ್ಕೆ ತಂತ್ರಜ್ಞಾನ ವರ್ಗಾವಣೆಯ ಮಟ್ಟವನ್ನು ಪ್ರದರ್ಶಿಸುತ್ತದೆ. ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗ ಇದಾಗಿದೆ. ಸಾಂಕ್ರಾಮಿಕದ ನಡುವೆಯೂ ಸಕಾಲದಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಿರುವುದು ಉಭಯ ದೇಶಗಳ ನಡುವೆ ರಕ್ಷಣಾ ವಲಯದಲ್ಲಿ ಅತ್ಯುತ್ತಮ ಸಮನ್ವಯತೆಯನ್ನು ಕಾಣಬಹುದಾಗಿದೆ. ಈ ತೀವ್ರತೆಯನ್ನು ಮುಂದುವರಿಸಿಕೊಂಡು ಪರಸ್ಪರ ವಿಶ್ವಾಸದಿಂದ ಉಭಯ ದೇಶಗಳು ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ, ಉತ್ಪಾದನೆ ಮತ್ತು ರಫ್ತು ಸೇರಿದಂತೆ ಕೈಗಾರಿಕೆ ಮತ್ತು ಕೈಗಾರಿಕೆಗಳ ನಡುವಿನ ಉತ್ತೇಜನ ಹೆಚ್ಚಿಸಲು ಆತ್ಮನಿರ್ಭರ ಭಾರತ(ಸ್ವಾವಲಂಬಿ ಭಾರತ) ಪ್ರಯತ್ನಗಳಲ್ಲಿ ಫ್ರಾನ್ಸ್ ಅನ್ನು ಇನ್ನಷ್ಟು ಆಳವಾಗಿ ತೊಡಗಿಸಿಕೊಳ್ಳಲು ಸೃಜನಾತ್ಮಕ ವಿಧಾನಗಳನ್ನು ಅನ್ವೇಷಿಸಲು ಉಭಯ ದೇಶಗಳು ಒಪ್ಪಿದವು.
13. 60 ವರ್ಷಗಳ ತಾಂತ್ರಿಕ ಮತ್ತು ವೈಜ್ಞಾನಿಕ ಬಾಹ್ಯಾಕಾಶ ಸಹಕಾರ ಪರಂಪರೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಬಾಹ್ಯಾಕಾಶದಲ್ಲಿ ಎದುರಾಗಿರುವ ಸಮಕಾಲೀನ ಸವಾಲುಗಳನ್ನು ಎದುರಿಸಲು ವಿಶೇಷವಾಗಿ ಎಲ್ಲರಿಗೂ ಬಾಹ್ಯಾಕಾಶ ಸುರಕ್ಷಿತವಾಗಿ ಲಭ್ಯವಾಗುವಂತೆ ಮಾಡಲು ಭಾರತ ಮತ್ತು ಫ್ರಾನ್ಸ್ ಬಾಹ್ಯಾಕಾಶ ವಿಷಯದಲ್ಲಿ ದ್ವಿಪಕ್ಷೀಯ ಕಾರ್ಯತಂತ್ರ ಸಮಾಲೋಚನೆಗಳನ್ನು ಸ್ಥಾಪಿಸಲು ಒಪ್ಪಿಗೆ ನೀಡಿವೆ. ಇದರಲ್ಲಿ ಬಾಹ್ಯಾಕಾಶ ಮತ್ತು ರಕ್ಷಣಾ ಸಂಸ್ಥೆಗಳ ತಜ್ಞರು, ಆಡಳಿತ ಹಾಗೂ ಬಾಹ್ಯಾಕಾಶದ ಹೊರಜಗತ್ತಿನ ಭದ್ರತೆ ಮತ್ತು ಆರ್ಥಿಕ ಸವಾಲುಗಳನ್ನು ಚರ್ಚಿಸುವ ವಿಶೇಷ ವ್ಯವಸ್ಥೆಯ ಬಗ್ಗೆ ಚರ್ಚಿಸಲಿದ್ದಾರೆ. ಇದರಲ್ಲಿ ಬಾಹ್ಯಾಕಾಶಕ್ಕೆ ಅನ್ವಯವಾಗುವ ನಿಯಮಗಳು ಮತ್ತು ತತ್ವಗಳು ಹಾಗೂ ಸಹಕಾರದ ಹೊಸ ವಲಯಗಳ ಅನಾವರಣವು ಚರ್ಚೆಯಾಗಲಿದೆ. ಈ ವರ್ಷವೇ ಆದಷ್ಟು ಶೀಘ್ರ ಮೊದಲ ಮಾತುಕತೆ ನೆಡೆಸಲು ಉಭಯ ದೇಶಗಳು ಒಪ್ಪಿದವು.
14. ದಿನೇ ದಿನೇ ವೃದ್ಧಿಯಾಗುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಭಾರತ ಮತ್ತು ಫ್ರಾನ್ಸ್ ತಮ್ಮ ಸೈಬರ್ ಭದ್ರತಾ ಸಂಸ್ಥೆಗಳ ನಡುವೆ ಸಹಕಾರ ಬಲವರ್ಧನೆಗೆ ಭಾರತ ಮತ್ತು ಫ್ರಾನ್ಸ್ ಒಪ್ಪಿವೆ. ಸೈಬರ್ ಅಪರಾಧವನ್ನು ಎದುರಿಸಲು ಸೈಬರ್ ನಿಯಮಗಳು ಮತ್ತು ತತ್ವಗಳನ್ನು ಉತ್ತೇಜಿಸುವ ಪಡೆಗಳನ್ನು ಸೇರಲು ಉಭಯ ದೇಶಗಳು ಒಪ್ಪಿದವು ಹಾಗೂ ಶಾಂತಿಯುತ, ಸುಭದ್ರ ಮತ್ತು ಮುಕ್ತ ಸೈಬರ್ ಸ್ಪೇಸ್ ನಿರ್ಮಾಣಕ್ಕೆ ಕೊಡುಗೆ ನೀಡಲು ದ್ವಿಪಕ್ಷೀಯ ಸೈಬರ್ ಸಂವಾದ ಉನ್ನತೀಕರಿಸಲು ಉಭಯ ದೇಶಗಳು ಒಪ್ಪಿದವು.
15. ಉಭಯ ದೇಶಗಳು ತಮ್ಮ ನವೋದ್ಯಮ ಪೂರಕ ವ್ಯವಸ್ಥೆಯ ನಡುವೆ ಸಂಪರ್ಕ ಸಾಧಿಸಲು ಹಲವು ಉಪಕ್ರಮಗಳನ್ನು ಆರಂಭಿಸಿವೆ ಮತ್ತು ಆಯಾ ಯಶಸ್ಸನ್ನು ಆಧರಿಸಿ ಇತ್ತೀಚಿನ ಸಾರ್ವಜನಿಕ ಖಾಸಗಿ ಪಾಲುದಾರಿಕೆಯನ್ನು ಎರಡೂ ದೇಶಗಳು ಸ್ವಾಗತಿಸಿದವು. ಜಾಗತಿಕ ಒಳಿತಿಗಾಗಿ ಮತ್ತು ಜನರ ಜೀವನ ಪರಿವರ್ತಿಸಲು ಮುಕ್ತ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಮತ್ತು ಪರಿಹಾರಗಳು ಹಾಗೂ ಮುಕ್ತ, ಎಲ್ಲವನ್ನೊಳಗೊಂಡ ನವೀನ ಶಿಷ್ಟಾಚಾರ ಹಾಗೂ ಮಾನದಂಡಗಳನ್ನು ನಿರ್ಮಿಸಲು ಒಪ್ಪಿದವು. ಪ್ಯಾರಿಸ್ ನಲ್ಲಿ ನಡೆಯಲಿರುವ ಯೂರೋಪ್ ನ ಅತಿದೊಡ್ಡ ಡಿಜಿಟಲ್ ಉತ್ಸವ ವೀವಾ ಟೆಕ್ ಆವೃತ್ತಿಯಲ್ಲಿ ಈ ವರ್ಷ ಭಾರತ ಮೊದಲ ಬಾರಿಗೆ ಭಾಗವಹಿಸುತ್ತಿದೆ.
16. ಸೈಬರ್ ಭದ್ರತೆ ಮತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತ-ಫ್ರಾನ್ಸ್ ನೀಲ ನಕ್ಷೆಯನ್ನು ಅನುಷ್ಠಾನಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ, ಭಾರತ ಮತ್ತು ಫ್ರಾನ್ಸ್, ಭಾರತದಲ್ಲಿನ ಸೂಪರ್ ಕಂಪ್ಯೂಟರ್ ಗಳ ನಿರ್ಮಾಣ ಸೇರಿದಂತೆ ಸಿ-ಡಾಕ್ ಮತ್ತು ಎಟಿಒಎಸ್ ನಡುವಿನ ಫಲಪ್ರದ ತಂತ್ರಜ್ಞಾನ ಆಧಾರಿತ ಸಹಕಾರ ಸಂಬಂಧ ಬಲವರ್ಧನೆ ಇಚ್ಛೆಯನ್ನು ಉಭಯ ದೇಶಗಳು ಪುನರುಚ್ಚರಿಸಿದವು. ಅಧಿಕ ಸುರಕ್ಷಿತ ಮತ್ತು ಸಾರ್ವಭೌಮತೆಯ 5ಜಿ/6ಜಿ ದೂರಸಂಪರ್ಕ ವ್ಯವಸ್ಥೆಗಳನ್ನು ಹೊಂದುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಲು ಉಭಯ ದೇಶಗಳು ಒಪ್ಪಿದವು.
17. ವಿಶ್ವಾಸಾರ್ಹ ಕೈಗೆಟಕಬಹುದಾದ ಮತ್ತು ಕಡಿಮೆ ಇಂಗಾಲ ಶಕ್ತಿಯ ಯೋಜನೆಯಾದ ಜೈತಾಪುರ ಇಪಿಆರ್ ಯೋಜನೆಯ ಯಶಸ್ಸಿನ ಬದ್ಧತೆಗೆ ಉಭಯ ದೇಶಗಳು ಪುನರುಚ್ಚರಿಸಿದವು ಮತ್ತು ಕಳೆದ ಕೆಲವು ತಿಂಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಸ್ವಾಗತಿಸಿದವು. ಮುಂದಿನ ತಿಂಗಳುಗಳಲ್ಲಿ ಹೊಸ ಪ್ರಗತಿಯನ್ನು ಸಾಧಿಸಲು ಸಂಪರ್ಕಗಳನ್ನು ಹೆಚ್ಚಿಸಲು ಸಮ್ಮತಿಸಿದವು.
18. ಭಯೋತ್ಪಾದನಾ ನಿಗ್ರಹ ಸಹಕಾರ, ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಭಾರತ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ ಪ್ರಮುಖ ಆಧಾರವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆ, ಅಣಕು ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಎಲ್ಲ ಸ್ವರೂಪದ ಭಯೋತ್ಪಾದನಾ ಚಟುವಟಿಕೆಗಳನ್ನು ಎರಡೂ ದೇಶಗಳು ಬಲವಾಗಿ ಖಂಡಿಸಿದವು. ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆ, ಹಿಂಸಾತ್ಮಕ ಬಂಡುಕೋರರನ್ನು ಹತ್ತಿಕ್ಕುವುದು, ಭಯೋತ್ಪಾದಕರು ಅಥವಾ ಬಂಡುಕೋರರು ಅಂತರ್ಜಾಲದ ದುರ್ಬಳಕೆ ತಪ್ಪಿಸುವುದು, ಅಂತಾರಾಷ್ಟ್ರೀಯವಾಗಿ ನಿಯೋಜಿಸಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧದ ಕೃತ್ಯಗಳನ್ನು ಖಂಡಿಸುವುದು ಸೇರಿದಂತೆ ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟವನ್ನು ಒಗ್ಗೂಡಿ ನಡೆಸಲು ಎರಡೂ ದೇಶಗಳು ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದವು. 2022ರಲ್ಲಿ ಭಾರತ ಆಯೋಜಿಸಲಿರುವ 3ನೇ ಆವೃತ್ತಿಯ ‘ಭಯೋತ್ಪಾದನೆಗೆ ಯಾವುದೇ ಹಣವಿಲ್ಲ’ ಕುರಿತ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಕ್ರಿಯ ಸಮನ್ವಯತೆ ಕಾಯ್ದುಕೊಳ್ಳುವ ಬಯಕೆಯನ್ನು ಪುನರುಚ್ಛರಿಸಿದವು.
ಹವಾಮಾನ, ಶುದ್ಧ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ
19. ಪ್ಯಾರಿಸ್ ಒಪ್ಪಂದ ಅಳವಡಿಕೆಯ 7 ವರ್ಷಗಳ ನಂತರ ಮತ್ತು ಭಾರತ ಅಂತಾರಾಷ್ಟ್ರೀಯ ಸೌರಮೈತ್ರಿ ಜಂಟಿಯಾಗಿ ಆರಂಭಿಸಿದ ನಂತರ ಭಾರತ ಮತ್ತು ಫ್ರಾನ್ಸ್ ಹವಾಮಾನ ವೈಪರೀತ್ಯವನ್ನು ಎದುರಿಸಲು ಮೊದಲಿಗಿಂತಲೂ ಹೆಚ್ಚಾಗಿ ಸದೃಢವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಯಂತ್ರಣ ಮತ್ತು ಮಾರ್ಪಾಡು ಮಾಡಿಕೊಳ್ಳಲು ಒಪ್ಪಿವೆ. ಇದರಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಒಂದು ಪ್ರಮುಖ ಪರಿಹಾರವಾಗಿದೆ. ಭಾರತ ಮತ್ತು ಫ್ರಾನ್ಸ್ ಅಂತಾರಾಷ್ಟ್ರೀಯ ಸೌರಮೈತ್ರಿಯ ಉದ್ದೇಶಗಳಿಗೆ ತಮ್ಮ ಬೆಂಬಲ ಮುಂದುವರಿಕೆಯನ್ನು ಪುನರುಚ್ಚರಿಸಿದವು. ನವೀಕರಿಸಬಹುದಾದ ಮತ್ತು ಕೈಗೆಟಕಬಹುದಾದ ಹಾಗೂ ಸುಸ್ಥಿರ ಇಂಧನ ಲಭ್ಯತೆಯನ್ನು ಖಾತ್ರಿಪಡಿಸುವುದು ಸೇರಿದಂತೆ ಜಿ7 ರಾಷ್ಟ್ರಗಳ ನಡುವೆ ಇಂಧನ ಪರಿವರ್ತನೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಜಂಟಿಯಾಗಿ ಕಾರ್ಯೋನ್ಮುಖವಾಗಲು ಭಾರತ-ಫ್ರಾನ್ಸ್ ಒಪ್ಪಿಗೆ ನೀಡಿವೆ.
ಶುದ್ಧ ಇಂಧನ ಕುರಿತಂತೆ ತಮ್ಮ ಬದ್ಧತೆಯನ್ನು ಮತ್ತೆ ಮುಂದುವರಿಸಿಕೊಂಡು ಹೋಗುತ್ತಾ ಭಾರತ ತನ್ನ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಯೋಜನೆಯಡಿ ಭಾರತದಲ್ಲಿ ಹಸಿರುವ ಹೈಡ್ರೋಜನ್ ತಾಣ ನಿರ್ಮಾಣ ಉಪಕ್ರಮದಲ್ಲಿ ಭಾಗಿಯಾಗುವಂತೆ ಫ್ರಾನ್ಸ್ ಗೆ ಆಹ್ವಾನ ನೀಡಿತು. ಉಭಯ ದೇಶಗಳು ಹೈಡ್ರೋಜನ್ ಡಿಕಾರ್ಬನೈಜೇಷನ್ ನಲ್ಲಿನ ಸಹಕಾರವನ್ನು ಇನ್ನಷ್ಟು ಬೆಳೆಸುವ ಉತ್ಸುಕತೆ ತೋರಿವೆ. ಉತ್ಕೃಷ್ಟ ಕೈಗಾರಿಕಾ ಪಾಲುದಾರಿಕೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಹೈಡ್ರೋಜನ್ ಪ್ರಮಾಣೀಕರಣ ಮತ್ತು ಮಾನದಂಡ ಅಭಿವೃದ್ಧಿ ಹಾಗೂ ಈ ಸಹಕಾರವನ್ನು ಮುಂದುವರಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ನೀಲನಕ್ಷೆಯನ್ನು ಅಂತಿಮಗೊಳಿಸಲು ಉಭಯ ದೇಶಗಳು ಒಪ್ಪಿದವು. ಏಕೀಕೃತ ಪೂರೈಕೆ ಸರಣಿ ಮೂಲಕ ಏಷ್ಯಾ ಹಾಗೂ ಐರೋಪ್ಯ ಮಾರುಕಟ್ಟೆಗಳಿಗೆ ಸೌರಶಕ್ತಿ ಪೂರೈಸುವ ನಿಟ್ಟಿನಲ್ಲಿ ತಮ್ಮದೇ ಆದ ಸೌರ ಇಂಧನ ಉತ್ಪಾದನಾ ಸಾಮರ್ಥ್ಯ ವೃದ್ಧಿ ನಿಟ್ಟಿನಲ್ಲಿ ಕೈಗಾರಿಕಾ ಪಾಲುದಾರಿಕೆ ಸ್ಥಾಪನೆ ನಿಟ್ಟಿನಲ್ಲಿ ಒಗ್ಗೂಡಿ ಕಾರ್ಯ ನಿರ್ವಹಿಸಲು ಒಪ್ಪಿಗೆ ಸೂಚಿಸಿದವು.
20. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸುಸ್ಥಿರ ಹಣಕಾಸು ಬೆಂಬಲಿಸಲು ಎಎಫ್ ಡಿ ಮತ್ತು ಭಾರತೀಯ ಆಮದು-ರಫ್ತು ಎಕ್ಸಿಮ್ ಬ್ಯಾಂಕ್ ಕೈಗೊಂಡಿರುವ ಪ್ರಯತ್ನಗಳನ್ನು ಭಾರತ ಮತ್ತು ಫ್ರಾನ್ಸ್ ಸ್ವಾಗತಿಸಿದವು ಮತ್ತು ಈ ವಲಯದಲ್ಲಿ ತಮ್ಮ ಸಹಕಾರವನ್ನು ಇನ್ನಷ್ಟು ವೃದ್ಧಿಸಲು ಒಪ್ಪಿದವು. ಈ ವರ್ಷ ಅಳವಡಿಸಿಕೊಳ್ಳಲಾದ ‘ಭಾರತ-ಪೆಸಿಫಿಕ್ ಪಾರ್ಕ್ಸ್ ಸಹಭಾಗಿತ್ವ”ದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಂರಕ್ಷಿತ ಪ್ರದೇಶಗಳು ಮತ್ತು ಸ್ವಾಭಾವಿಕ ಉದ್ಯಾನವನಗಳ ಅಭಿವೃದ್ಧಿ ಮೂಲಕ ಸುಸ್ಥಿರ ಪ್ರಗತಿಯನ್ನು ಉತ್ತೇಜಿಸಲು ಮಹತ್ವಾಕಾಂಕ್ಷೆಯನ್ನು ಉಭಯ ದೇಶಗಳು ಪ್ರದರ್ಶಿಸಿವೆ.
21. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡಲು ಭಾರತ ಮತ್ತು ಫ್ರಾನ್ಸ್ ನ ಮಹತ್ವಾಕಾಂಕ್ಷೆಯು ಯುಎನ್ ಇಎ ಯ ಇತ್ತೀಚಿನ ಪ್ರಗತಿಗೆ ಪ್ರಮುಖವಾಗಿದೆ ಮತ್ತು ಪ್ಲಾಸ್ಟಿಕ್ ಜೀವನದ ಮೇಲಾಗುವ ಸಂಪೂರ್ಣ ಪರಿಣಾಮಗಳನ್ನು ಹತ್ತಿಕ್ಕಲು ಪ್ಲಾಸ್ಟಿಕ್ ಮಾಲಿನ್ಯದ ಮೇಲೆ ಕಾನೂನಿಗೆ ಬದ್ಧವಾಗಿರುವ ಅಂತರರಾಷ್ಟ್ರೀಯ ಒಪ್ಪಂದದ ಕುರಿತು ಮಾತುಕತೆ ಆರಂಭಿಸಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯಹಾಡಲು ಬಲವಾದ ಮತ್ತು ಮಹತ್ವಾಕಾಂಕ್ಷೆಯ ಕಾನೂನುಬದ್ಧ ಸಾಧನವನ್ನು ಅಳವಡಿಸಿಕೊಳ್ಳುವುದನ್ನು ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಉತ್ತೇಜಿಸುವುದನ್ನು ಮುಂದುವರಿಸುತ್ತವೆ, ಆದರೆ ರಾಷ್ಟ್ರೀಯ ಸಂದರ್ಭಗಳ ತತ್ವ ಮತ್ತು ಪ್ಲಾಸ್ಟಿಕ್ ಮಾಲಿನ್ಯವನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಗೌರವಿಸುತ್ತವೆ. ಎರಡೂ ದೇಶಗಳು ತುರ್ತು ಮತ್ತು ನಿರಂತರ ಆಧಾರದ ಮೇಲೆ ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ವಹಿಸಲು ದೇಶಗಳಿಂದ ತಕ್ಷಣದ ಸಾಮೂಹಿಕ ಸ್ವಯಂಪ್ರೇರಿತ ಕ್ರಮಗಳಿಗೆ ಕರೆ ನೀಡಿದವು.
22. ಎಎಫ್ ಡಿ ಗುಂಪು ಮತ್ತು ಇತರ ಏಜೆನ್ಸಿಗಳ ಮೂಲಕ ಭಾರತದ ಸುಸ್ಥಿರ ನಗರಾಭಿವೃದ್ಧಿ, ಜೀವವೈವಿಧ್ಯಪ, ಇಂಧನ ಪರಿವರ್ತನೆ ಮತ್ತು ಇತರ ಹವಾಮಾನ ಸಂಬಂಧಿತ ಯೋಜನೆಗಳಿಗೆ ಫ್ರಾನ್ಸ್‌ನ ಬದ್ಧತೆಯನ್ನು ಭಾರತ ಮತ್ತು ಫ್ರಾನ್ಸ್ ಸ್ವಾಗತಿಸಿವೆ.
23. ಭಾರತ ಮತ್ತು ಫ್ರಾನ್ಸ್ ನೀಲಿ ಆರ್ಥಿಕತೆ ಮತ್ತು ಸಾಗರ ಆಡಳಿತದ ದ್ವಿಪಕ್ಷೀಯ ಮಾರ್ಗಸೂಚಿಯ ಅಳವಡಿಕೆಗೆ ತೃಪ್ತಿ ವ್ಯಕ್ತಪಡಿಸಿವೆ ಮತ್ತು ಅದರ ಅನುಷ್ಠಾನವನ್ನು ಇನ್ನಷ್ಟು ತೀವ್ರಗೊಳಿಸಲು ಬದ್ಧತೆ ವ್ಯಕ್ತಪಡಿಸಿವೆ.
24. ದೊಡ್ಡ ಸಮುದ್ರಗಳನ್ನು ರಕ್ಷಣೆ ನಿಟ್ಟಿನಲ್ಲಿ ರಾಷ್ಟ್ರೀಯ ನ್ಯಾಯವ್ಯಾಪ್ತಿಯನ್ನು (ಬಿಬಿಎನ್ ಜೆ) ಹೊರತುಪಡಿಸಿ ಸಾಗರ ಜೀವ ವೈವಿಧ್ಯ ಪ್ರದೇಶಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಮೇಲೆ ಯುಎನ್ ಸಿಎಲ್ ಒಎಸ್ ಅಡಿಯಲ್ಲಿ ಅಂತರಾಷ್ಟ್ರೀಯ ಕಾನೂನಿಗೆ ಬದ್ಧವಾಗಿ ಅಂತರ್ ಸರ್ಕಾರಿ ಸಮ್ಮೇಳನದ ಪ್ರಗತಿಯನ್ನು ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಬೆಂಬಲಿಸುತ್ತದೆ.
25. ಜಿ-20 ಚೌಕಟ್ಟಿನಲ್ಲಿ ಸಮನ್ವಯ ಬಲವರ್ಧನೆಗೆ ಒಟ್ಟಾಗಿ ಕಾರ್ಯನಿರ್ವಹಿಸಲು ಎರಡೂ ದೇಶಗಳು ಒಪ್ಪಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಮತ್ತು ಪರಮಾಣು ಪೂರೈಕೆದಾರರ ಗುಂಪಿನ ಸದಸ್ಯತ್ವಕ್ಕಾಗಿ ಭಾರತದ ಪ್ರಯತ್ನಕ್ಕೆ ಫ್ರಾನ್ಸ್ ತನ್ನ ದೃಢ ಬೆಂಬಲವನ್ನು ಪುನರುಚ್ಚರಿಸಿತು.
26. 2021ರ ಅಕ್ಟೋಬರ್ 1ರಿಂದ ಜಾರಿಗೆ ಬಂದ ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ಜಾರಿ ಪಾಲನೆಯನ್ನು ಮುಂದುವರಿಸಲು ಭಾರತ ಮತ್ತು ಫ್ರಾನ್ಸ್ ಸಂಪೂರ್ಣವಾಗಿ ಬದ್ಧತೆ ವ್ಯಕ್ತಪಡಿಸಿದವು.
27. ವಿದ್ಯಾರ್ಥಿಗಳು, ಪದವೀಧರರು, ವೃತ್ತಿಪರರು ಮತ್ತು ನುರಿತ ಕೆಲಸಗಾರರ ಸಂಚಾರವನ್ನು ಹೆಚ್ಚಿಸಲು ಎರಡೂ ದೇಶಗಳು ಜಂಟಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ. ಮತ್ತು ಅನಿಯಮಿತ ವಲಸೆ ನಿಯಂತ್ರಿಸುವ ಪ್ರಯತ್ನಗಳನ್ನು ಬಲಪಡಿಸಲಾಗುವುದು. ದ್ವಿಪಕ್ಷೀಯ ವಿದ್ಯಾರ್ಥಿಗಳ ಸಂಚಾರದ ಪ್ರಯೋಜನವನ್ನು ಗುರುತಿಸಿ, ಫ್ರಾನ್ಸ್ 2025 ರ ವೇಳೆಗೆ 20000 ಭಾರತೀಯ ವಿದ್ಯಾರ್ಥಿಗಳ ಸಂಚಾರ ಉದ್ದೇಶ ಹೊಂದಿದ್ದು, ಇದು ಎರಡು ದೇಶಗಳ ನಡುವೆ ಹೊಸ ವ್ಯವಹಾರಗಳು, ನವೋದ್ಯಮಗಳು ಮತ್ತು ನಾವೀನ್ಯತೆಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ.
28. ಕಲೆ ಮತ್ತು ಸಂಸ್ಕೃತಿಯಲ್ಲಿ ಪರಸ್ಪರ ಆಸಕ್ತಿಯು ಗಮನಾರ್ಹವಾಗಿ ಬೆಳೆದಿದೆ ಮತ್ತು ನಮ್ಮ ಎರಡು ದೇಶಗಳ ಕಲಾವಿದರು ಹಬ್ಬಗಳು ಮತ್ತು ತಮ್ಮ ನಿವಾಸಗಳಲ್ಲಿ ನಡೆಯುವ ಉತ್ಸವಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಹೆಚ್ಚು ಉತ್ಸುಕರಾಗಿದ್ದಾರೆ. ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು 2022ರ ಮಾರ್ಚ್ ನಿಂದ ಬೊಂಜೌರ್ ಇಂಡಿಯಾ ಉತ್ಸವದ ಮೂಲಕ ಭಾರತದಾದ್ಯಂತ ಸರಣಿ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಅದರ ಭಾಗವಾಗಿ ಭಾರತವು ‘ನಮಸ್ತೆ ಫ್ರಾನ್ಸ್’ ಹಬ್ಬವನ್ನು ಆಯೋಜಿಸುತ್ತಿದೆ. ಪ್ಯಾರಿಸ್ ಪುಸ್ತಕೋತ್ಸವ 2022 ರಲ್ಲಿ ಭಾರತವು ಗೌರವಾನ್ವಿತ ಅತಿಥಿಯಾಗಿತ್ತು ಮತ್ತು ಮುಂಬರುವ ನವದೆಹಲಿಯ ವಿಶ್ವ ಪುಸ್ತಕ ಮೇಳದಲ್ಲಿ ಫ್ರಾನ್ಸ್ ಗೌರವ ಅತಿಥಿಯಾಗಲಿದೆ.
29. 2020ರ ಜನವರಿ 28ರಂದು ಸಹಿ ಮಾಡಿದ ವಸ್ತುಸಂಗ್ರಹಾಲಯ ಮತ್ತು ಪರಂಪರೆಯ ಸಹಕಾರದ ಉದ್ದೇಶದ ಪತ್ರವನ್ನು ಅನುಸರಿಸಿ, ಭಾರತ ಮತ್ತು ಫ್ರಾನ್ಸ್ ದೆಹಲಿಯಲ್ಲಿ ಹೊಸ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವಲ್ಲಿ ಫ್ರಾನ್ಸ್ ‘ಜ್ಞಾನ ಪಾಲುದಾರ’ (ನಾಲೆಡ್ಜ್ ಪಾರ್ಟನರ್ ) ರಾಷ್ಟ್ರವಾಗಲು ಸಾಧ್ಯತೆಗಳು ಮತ್ತು ಕಾರ್ಯವಿಧಾನವನ್ನು ಅನ್ವೇಷಿಸುತ್ತವೆ.
30. ಆದಷ್ಟು ಶೀಘ್ರ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷ ಮಾಕ್ರಾನ್ ಅವರಿಗೆ ಆಹ್ವಾನ ನೀಡಿದರು, ಭೇಟಿಯ ಸಮಯದಲ್ಲಿ ಪ್ರಸ್ತಾಪಿಸಿದ ಸಹಕಾರದ ಕ್ಷೇತ್ರಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಲು ಮತ್ತು ಗುರುತಿಸಲಾದ ಗುರಿಗಳನ್ನು ಸಾಧಿಸುವ ವಿಧಾನಗಳನ್ನು ಅಂತಿಮಗೊಳಿಸಬಹುದು ಎಂದರು.
***
(Release ID: 1822992)
Visitor Counter : 470
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam