ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಪುರುಷರ ಕಬಡ್ಡಿಯಲ್ಲಿ  ಚೌಧರಿ ಬನ್ಸಿಲಾಲ್ ವಿಶ್ವವಿದ್ಯಾಲಯವನ್ನು ಮಣಿಸಿ ಚಿನ್ನ ಗೆದ್ದ ಕೋಟಾ ವಿಶ್ವವಿದ್ಯಾಲಯ


ಪ್ರೊ ಕಬಡ್ಡಿ ಲೀಗ್‌ನ ಆಯೋಜಕರು ಮುಂದಿನ ಋತುವಿನಲ್ಲಿ ಈ ಆಟಗಾರರನ್ನು ಪರಿಗಣಿಸುತ್ತಾರೆ ಎಂದು ಭಾವಿಸುತ್ತೇನೆ: ಶ್ರೀ ಅನುರಾಗ್ ಠಾಕೂರ್

Posted On: 03 MAY 2022 6:05PM by PIB Bengaluru

ಕೋಟಾ ವಿಶ್ವವಿದ್ಯಾನಿಲಯ ಮತ್ತು ಚೌಧರಿ ಬನ್ಸಿಲಾಲ್ ವಿಶ್ವವಿದ್ಯಾನಿಲಯದ ಪುರುಷರ ತಂಡಗಳು ಇಂದು ಬೆಂಗಳೂರಿನಲ್ಲಿ ನಡೆದ ಪುರುಷರ ಕಬಡ್ಡಿ ಸ್ಪರ್ಧೆಗಳ ಅಂತಿಮ ಪಂದ್ಯದಲ್ಲಿ ರಸದೌತಣ ಬಡಿಸಿದವು. ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 ಕ್ಕೆ ಭವ್ಯವಾದ ಪ್ರದರ್ಶನದ ಮೂಲಕ ಮುಕ್ತಾಯ ಹಾಡಿದವು.

ದಿನದ ಆರಂಭಿಕ ಪಂದ್ಯವು ಕುರುಕ್ಷೇತ್ರ ವಿಶ್ವವಿದ್ಯಾಲಯ ಮತ್ತು ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ನಡುವಿನ ಮಹಿಳೆಯರ ಫೈನಲ್ ಆಗಿತ್ತು. ಆರಂಭದಿಂದಲೇ ಪ್ರಾಬಲ್ಯ ಸಾಧಿಸಿದ ಕುರುಕ್ಷೇತ್ರದ ಮಹಿಳೆಯರು ಸುಲಭವಾಗಿ ಗೆಲುವು ಸಾಧಿಸಿದರು.
ಕೇಂದ್ರ ಕ್ರೀಡಾ, ಯುವ ವ್ಯವಹಾರಗಳು ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ಹಾಜರಿಯಲ್ಲಿ ನಂತರ ನಡೆದ ಪುರುಷರ ಫೈನಲ್ ಪಂದ್ಯವು ನಿಜವಾದ ಹೈಲೈಟ್ ಆಗಿತ್ತು. ಜೊತೆಗೆ ಪ್ರೊ ಕಬಡ್ಡಿ ಲೀಗ್ ಆಟಗಾರರಾದ ಪವನ್ ಶೆರಾವತ್, ಅಜಯ್ ಠಾಕೂರ್ ಮತ್ತು ನವೀನ್ ಕುಮಾರ್ ಉಪಸ್ಥಿತರಿದ್ದರು. ಉತ್ತಮ ಗುಣಮಟ್ಟದ ಸ್ಪರ್ಧೆಯಿಂದ ಆಕರ್ಷಿತರಾದ ಸಚಿವರು, ಒಂಬತ್ತನೇ ಋತುವಿನ ಪ್ರೊ ಕಬಡ್ಡಿ ಲೀಗ್‌ಗೆ ಎರಡೂ ಅಂತಿಮ ತಂಡಗಳ ಆಟಗಾರರನ್ನು ಸೇರಿಸಬೇಕೆಂದು ವಿನಂತಿಸಿದರು.

"ನಾನು ಲೀಗ್‌ನ ಕೆಲವು ಸೂಪರ್‌ಸ್ಟಾರ್‌ಗಳೊಂದಿಗೆ ಪಂದ್ಯ ನೋಡಲು ಕುಳಿತಿದ್ದೆ ಮತ್ತು ಅವರಿಗೂ ಇಲ್ಲಿ ಆಡುವ ಹುಡುಗರಿಗೂ ಎಷ್ಟು ವ್ಯತ್ಯಾಸವಿದೆ ಎಂದು ನಾನು ಅವರನ್ನು ಕೇಳಿದೆ. ಇಲ್ಲಿನ ಕೆಲವು ಆಟಗಾರರು ಖಂಡಿತವಾಗಿಯೂ ಲೀಗ್‌ ತಂಡಗಳಲ್ಲಿ ಆಡಬಹುದು ಎಂದು ಅವರು ಹೇಳಿದರು” ಎಂದು ಶ್ರೀ ಠಾಕೂರ್ ಹೇಳಿದರು.
"ಇದನ್ನು ಕೇಳಿದ ನಂತರ, ಲೀಗ್‌ನ ಆಯೋಜಕರು ಮುಂದಿನ ಋತುವಿನಲ್ಲಿ ಆಟಗಾರರನ್ನು ಸೇರಿಸಿಕೊಳ್ಳುವುದನ್ನು ಪರಿಗಣಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಭಾರತೀಯ ಕ್ರೀಡೆಯಲ್ಲಿ ಬದಲಾವಣೆಯ ಕ್ಷಣವಾಗಿದೆ" ಎಂದು ಶ್ರೀ ಠಾಕೂರ್ ಹೇಳಿದರು. ವಿಶ್ವವಿದ್ಯಾನಿಲಯದ ಕ್ರೀಡಾಕೂಟವು ನಮ್ಮ ಕ್ರೀಡಾ ವ್ಯವಸ್ಥೆಯಲ್ಲಿ ಪ್ರಾಧಾನ್ಯತೆಯನ್ನು ಮರಳಿ ಪಡೆಯಲು ಒಂದು ಅವಕಾಶವಾಗಿದೆ ಎಂದು ಅವರು ಹೇಳಿದರು.
ಅಂತಿಮ ಪಂದ್ಯವು ಮುಕ್ಕಾಲು ಭಾಗದವರೆಗೂ ಬಿಗಿಯಾಗಿಯೇ ಕಂಡುಬಂದಿತು, ಕೋಟಾ ವಿಶ್ವವಿದ್ಯಾಲಯ ಮತ್ತು ಸಿ ಬಿ ಎಲ್‌ ಯು ಪರಸ್ಪರರಿಗೆ ಒಂದಿಂಚೂ ಜಾಗ ಬಿಡದಂತೆ ಆಡಿದವು. ದ್ವಿತೀಯಾರ್ಧದ ಅರ್ಧದ ತನಕ, ಎರಡೂ ತಂಡಗಳು ಗರಿಷ್ಠ ಎರಡು ಪಾಯಿಂಟ್‌ಗಳ ಅಂತರದಲ್ಲಿಯೇ ಸೆಣಸುತ್ತಿದ್ದವು. ನಂತರ ಕೋಟಾ ವಿಶ್ವವಿದ್ಯಾಲಯವು ಆಲ್ ಔಟ್ ಮೂಲಕ ಮುನ್ನಡೆ ಸಾಧಿಸಿತು. ಅಂತಿಮವಾಗಿ ಕೋಟಾ ವಿವಿ 15 ಪಾಯಿಂಟ್‌ಗಳಿಂದ ಜಯಗಳಿಸಿ ಕ್ರೀಡಾಕೂಟದ ಮೊದಲ ಚಿನ್ನದ ಪದಕ ಪಡೆದುಕೊಂಡಿತು.
"ಮೊದಲಾರ್ಧದಲ್ಲಿ ನಾವೆಲ್ಲರೂ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದೆವು" ಎಂದು ಕೋಟಾದ ನಾಯಕ ಆಶಿಶ್ ಹೇಳಿದರು. "ವಾತಾವರಣ, ದೀಪಗಳು, ಧ್ವನಿ ಮತ್ತು ಸಂದರ್ಭವು ನಮ್ಮನ್ನು ಕಂಗೆಡಿಸಿತು. ದ್ವಿತೀಯಾರ್ಧದಲ್ಲಿ, ನಮ್ಮ ತರಬೇತುದಾರರು ಆಟದ ಮೇಲೆ ಮಾತ್ರ ಗಮನಹರಿಸುವಂತೆ ಹೇಳಿದರು, ನಂತರ ಫಲಿತಾಂಶವು ನಮ್ಮ ಪರವಾಗಿತ್ತು “ ಎಂದು ಅವರು ಹೇಳಿದರು
.

***



(Release ID: 1822450) Visitor Counter : 146