ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ಗುಪ್ತಚರ ಗ್ರಿಡ್ (ಎನ್‌ಎಟಿಗ್ರಿಡ್) ಬೆಂಗಳೂರು ಕ್ಯಾಂಪಸ್ ಉದ್ಘಾಟಿಸಿದರು


ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕರ ಭದ್ರತೆ ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ

ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಮೊದಲ ದಿನದಿಂದಲೇ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ.

ಆಧುನಿಕ ಅಪರಾಧಗಳನ್ನು ನಿಲ್ಲಿಸಲು, ನಾವು ಎರಡು ಹೆಜ್ಜೆ ಮುಂದಕ್ಕೆ ಯೋಚಿಸಬೇಕು, ಎನ್‌ಎಟಿಗ್ರಿಡ್ ಇದರಲ್ಲಿ ವಿಶೇಷ ಮತ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ

ಎನ್‌ಎಟಿಗ್ರಿಡ್ ನಿರಂತರ ಉನ್ನತೀಕರಣಕ್ಕಾಗಿ ಅಂತರ್ನಿರ್ಮಿತ ಕಾರ್ಯವಿಧಾನವನ್ನು ಹೊಂದಿರಬೇಕು, ಎನ್‌ಎಟಿಗ್ರಿಡ್ ದೇಶದೊಳಗೆ ನಡೆದಿರುವ ವಿವಿಧ ಅಪರಾಧಗಳ ಕಾರ್ಯಾಚರಣಾ ಡೇಟಾಬೇಸ್ ಅನ್ನು ರಚಿಸಲು ಅಧ್ಯಯನ ಗುಂಪನ್ನು ಹೊಂದಿರಬೇಕು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಎನ್‌ಎಟಿಗ್ರಿಡ್ ಅನ್ನು ಸಿ-ಡಿಎಸಿ ಅನುಷ್ಠಾನಗೊಳಿಸುತ್ತಿದೆ.
ತ್ವರಿತ ಮತ್ತು ಪರಿಣಾಮಕಾರಿ ವಿಶ್ಲೇಷಣೆ ನಡೆಸಬೇಕಾದರೆ ಮಾಹಿತಿಯನ್ನು ಹುದುಗಿಸಿಡಬಾರದು, ಏಕೆಂದರೆ ಇದು ಮಾಹಿತಿಯ ವಿಶ್ಲೇಷಣೆ ಮತ್ತು ಸಮಯೋಚಿತ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ.

ಪ್ರವೇಶಿಸಬಹುದಾದ, ಕೈಗೆಟುಕುವ, ಲಭ್ಯವಿರುವ, ಜವಾಬ್ದಾರಿಯುತ ಮತ್ತು ಕಾರ್ಯಸಾಧ್ಯವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾಹಿತಿಯನ್ನು ವಿಶ್ಲೇಷಿಸುವುದು ಮುಖ್ಯವಾಗಿದೆ

ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ ಪೊಲೀಸ್ ತಂತ್ರಜ

Posted On: 03 MAY 2022 5:17PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ಗುಪ್ತಚರ ಗ್ರಿಡ್ (ಎನ್‌ಎಟಿಗ್ರಿಡ್) ಬೆಂಗಳೂರು ಕ್ಯಾಂಪಸ್‌ ಅನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಶ್ರೀ ಅಮಿತ್ ಶಾ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಮೊದಲ ದಿನದಿಂದಲೇ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದೆ ಎಂದು ಹೇಳಿದರು.


 ಡೇಟಾ, ವ್ಯಾಪ್ತಿ ಮತ್ತು ಸಂಕೀರ್ಣತೆಯ ವಿಷಯದಲ್ಲಿ ಹಿಂದಿನ ಭದ್ರತಾ ಸವಾಲುಗಳಿಗೆ ಹೋಲಿಸಿದರೆ ಇಂದು ಭದ್ರತಾ ಅಗತ್ಯತೆಗಳು ಗಮನಾರ್ಹವಾಗಿ ಬದಲಾಗಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆದ್ದರಿಂದ, ವಿಶ್ವಾಸಾರ್ಹ ಮೂಲಗಳಿಂದ ಪಡೆದ ಮಾಹಿತಿಗೆ ಸ್ವಯಂಚಾಲಿತ, ಸುರಕ್ಷಿತ ಮತ್ತು ತಕ್ಷಣದ ಪ್ರವೇಶವನ್ನು ಹೊಂದಲು ಕಾನೂನು ಮತ್ತು ಭದ್ರತಾ ಸಂಸ್ಥೆಗಳ ಅವಶ್ಯಕತೆಯಿದೆ. ಡೇಟಾ ಸಂಗ್ರಹಣಾ ಸಂಸ್ಥೆಗಳಿಂದ ಮಾಹಿತಿಯನ್ನು ಪ್ರವೇಶಿಸಲು ಅತ್ಯಾಧುನಿಕ ಮತ್ತು ನವೀನ ಮಾಹಿತಿ ತಂತ್ರಜ್ಞಾನ ವೇದಿಕೆಯನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಕಾರ್ಯವನ್ನು ಸರ್ಕಾರವು ರಾಷ್ಟ್ರೀಯ ಗುಪ್ತಚರ ಗ್ರಿಡ್ ಗೆ ವಹಿಸಿದೆ.
ಹವಾಲಾ ವಹಿವಾಟು, ಭಯೋತ್ಪಾದನೆಗೆ ಹಣಕಾಸು, ನಕಲಿ ಕರೆನ್ಸಿ, ಮಾದಕ ದ್ರವ್ಯ, ಬಾಂಬ್ ಬೆದರಿಕೆಗಳು, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಷ್ಟ್ರೀಯ ಡೇಟಾಬೇಸ್ ಅನ್ನು ಅಭಿವೃದ್ಧಿಪಡಿಸಲಿದೆ ಎಂದು ಗೃಹ ಸಚಿವರು ಹೇಳಿದರು. ನಿರ್ಣಾಯಕ ದತ್ತಾಂಶಗಳ ಅಡೆತಡೆಗಳನ್ನು ಈಗ ನಿವಾರಿಸಲಾಗುತ್ತಿರುವುದರಿಂದ ಗುಪ್ತಚರ ಮತ್ತು ಕಾನೂನು ಸಂಸ್ಥೆಗಳು ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಡೇಟಾ ಅನಾಲಿಟಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಹಾಯದಿಂದ, ಏಜೆನ್ಸಿಗಳ ಪ್ರಸ್ತುತ ಕಾರ್ಯ ವಿಧಾನದಲ್ಲಿ ಒಂದು ಮಾದರಿ ಬದಲಾವಣೆಯಾಗಬೇಕು. ಡೇಟಾದ ವಿವಿಧ ಮೂಲಗಳನ್ನು ಜೋಡಿಸುವ ಜವಾಬ್ದಾರಿಯನ್ನು ಎನ್‌ಎಟಿಗ್ರಿಡ್ ಪೂರೈಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
 


ಎನ್‌ಎಟಿಗ್ರಿಡ್ ನಿರಂತರ ಉನ್ನತೀಕರಣಕ್ಕಾಗಿ ಅಂತರ್ನಿರ್ಮಿತ ಕಾರ್ಯವಿಧಾನವನ್ನು ಹೊಂದಿರಬೇಕು ಎಂದು ಸಚಿವರು ಹೇಳಿದರು. ರಾಷ್ಟ್ರೀಯ ಗುಪ್ತಚರ ಗ್ರಿಡ್ ನಲ್ಲಿ ದೇಶದೊಳಗೆ ನಡೆದಿರುವ ವಿವಿಧ ಅಪರಾಧಗಳ ಕಾರ್ಯಾಚರಣೆಯ ವಿಧಾನಗಳ ಡೇಟಾಬೇಸ್ ರಚಿಸಲು ಒಂದು ಅಧ್ಯಯನ ಗುಂಪು ಇರಬೇಕು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತದ ದೃಷ್ಟಿಗೆ ಅನುಗುಣವಾಗಿ ರಾಷ್ಟ್ರೀಯ ಗುಪ್ತಚರ ಗ್ರಿಡ್ ಅನ್ನು ಸಿ-ಡಿಎಸಿ ಜಾರಿಗೊಳಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ತ್ವರಿತ ಮತ್ತು ಪರಿಣಾಮಕಾರಿ ವಿಶ್ಲೇಷಣೆ ನಡೆಯಬೇಕಾದರೆ ಮಾಹಿತಿಯನ್ನು ಹುದುಗಿಸಿ ಇಡಬಾರದು, ಏಕೆಂದರೆ ಇದು ಮಾಹಿತಿಯ ವಿಶ್ಲೇಷಣೆ ಮತ್ತು ಸಮಯೋಚಿತ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂದು ಅವರು ಹೇಳಿದರು. ಮಾಹಿತಿಯ ವಿಶ್ಲೇಷಣೆಗಾಗಿ, ಪ್ರವೇಶಿಸಬಹುದಾದ, ಕೈಗೆಟುಕುವ, ಲಭ್ಯವಿರುವ, ಜವಾಬ್ದಾರಿಯುತ ಮತ್ತು ಕಾರ್ಯಸಾಧ್ಯವಾದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅವರು ಘೋಷಿಸಿದ ಪೊಲೀಸ್ ತಂತ್ರಜ್ಞಾನ ಮಿಷನ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ರಾಷ್ಟ್ರೀಯ ಗುಪ್ತಚರ ಗ್ರಿಡ್ ಸಿಬ್ಬಂದಿಯನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಿದರು ಮತ್ತು ರಾಷ್ಟ್ರೀಯ ಗುಪ್ತಚರ ಗ್ರಿಡ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರು ಪ್ರಯತ್ನಗಳನ್ನು ಹೆಚ್ಚಿಸಬೇಕೆಂದು ಪ್ರೋತ್ಸಾಹಿಸಿದರು. ಎನ್‌ಎಟಿಗ್ರಿಡ್ ಗುಪ್ತಚರ ಇಲಾಖೆಗಳಿಗೆ ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ ಮತ್ತು ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ಬೆಂಬಲಿಗರ ವಿರುದ್ಧದ ಹೋರಾಟದಲ್ಲಿ ಅವರಿಗೆ ಅತ್ಯಾಧುನಿಕ ಸಾಧನಗಳನ್ನು ಒದಗಿಸುತ್ತದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.
 


ಸೂಕ್ತ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕಾದ ಈ ವ್ಯವಸ್ಥೆಯ ಬಳಕೆಯಲ್ಲಿ ಎಚ್ಚರಿಕೆ ಮತ್ತು ವಿವೇಚನೆ ಇರಬೇಕು ಎಂದು ಅವರು ಬಳಕೆದಾರ ಏಜೆನ್ಸಿಗಳನ್ನು ವಿನಂತಿಸಿದರು. ಸಾಧ್ಯವಾದಷ್ಟು, ಸಿಸ್ಟಮ್‌ನಿಂದ ಡೇಟಾವನ್ನು ತಮ್ಮ ದಕ್ಷತೆಯನ್ನು ಸುಧಾರಿಸಲು ಬಳಸಲಾಗುತ್ತದೆ ಎಂಬುದನ್ನು ಅವು ಖಚಿತಪಡಿಸಿಕೊಳ್ಳಬೇಕು. ಡೇಟಾದ ಗೋಪ್ಯತೆ ಮತ್ತು ಸುರಕ್ಷತೆಯು ಅತ್ಯಂತ ಗಂಭೀರವಾದ ವಿಷಯವಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಯಾವುದೇ ಸಮಯದಲ್ಲಿ ಈ ವ್ಯವಸ್ಥೆಯ ಮೂಲಕ ಯಾವುದೇ ನಾಗರಿಕರ ವೈಯಕ್ತಿಕ ಡೇಟಾಗೆ ಅನಧಿಕೃತ ಪ್ರವೇಶವಿರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಾದ ಶಿಷ್ಟಾಚಾರಗಳನ್ನು ಜಾರಿಗೆ ತರಲಾಗಿದೆ ಎಂದು ಭರವಸೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕರ್ನಾಟಕದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಉಪಸ್ಥಿತರಿದ್ದರು.
 


ಎನ್‌ಎಟಿಗ್ರಿಡ್ ಸೇವೆಗಳು 11 ಕೇಂದ್ರ ಏಜೆನ್ಸಿಗಳು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸರಿಗೆ ಲಭ್ಯವಿರುತ್ತವೆ ಎಂದು ರಾಷ್ಟ್ರೀಯ ಗುಪ್ತಚರ ಗ್ರಿಡ್ ಸಿಇಒ ಮಾಹಿತಿ ನೀಡಿದರು. ಇದು ಬಳಕೆದಾರರ ಏಜೆನ್ಸಿಗಳನ್ನು ಡೇಟಾ ಹೊಂದಿರುವವರೊಂದಿಗೆ ಜೋಡಿಸುತ್ತದೆ, ಗುಪ್ತಚರ ಸೇವೆಗಳು ಮತ್ತು ತನಿಖೆಗಳಿಗೆ ಅಗತ್ಯವಿರುವ ನೈಜ-ಸಮಯದ ಮಾಹಿತಿಗೆ ಪ್ರವೇಶವನ್ನು ನೀಡುತ್ತದೆ. ರಾಷ್ಟ್ರೀಯ ಗುಪ್ತಚರ ಗ್ರಿಡ್ ಪರಿಹಾರದ ಅಭಿವೃದ್ಧಿಗಾಗಿ ಪುಣೆಯ ಸಿ-ಡಿಎಸಿಯನ್ನು  ತಂತ್ರಜ್ಞಾನ ಪಾಲುದಾರರಾಗಿ ಮತ್ತು ಭಿಲಾಯ್ ಐಐಟಿಯನ್ನು ಯೋಜನೆ ನಿರ್ವಹಣೆಯ ಸಲಹೆಗಾರರಾಗಿ ನೇಮಿಸಲಾಗಿದೆ.

***



(Release ID: 1822380) Visitor Counter : 328