ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೆಂಪು ಕೋಟೆಯಲ್ಲಿ ಶ್ರೀ ಗುರು ತೇಗ್‌ ಬಹಾದೂರ್‌ ಜೀ ಅವರ 400ನೇ ಪ್ರಕಾಶ್‌ ಪುರಬ್‌ ಆಚರಣೆಯ ಸಂದರ್ಭದಲ್ಲಿಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

Posted On: 21 APR 2022 11:36PM by PIB Bengaluru

ವಹೇ ಗುರು ಜೀ ಅವರ ಖಾಲ್ಸಾ.
ವಹೇ ಗುರು ಜಿ ಕಿ ಫತಾಹ್‌.
ವೇದಿಕೆಯಲ್ಲಿರುವ ಎಲ್ಲಾ ಗಣ್ಯರು, ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಹಿಳೆಯರು ಮತ್ತು ಮಹನೀಯರೇ ಮತ್ತು ಪ್ರಪಂಚದಾದ್ಯಂತದ ನಮ್ಮೊಂದಿಗೆ ವರ್ಚುವಲ್‌ ಮೂಲಕ ಸಂಪರ್ಕ ಹೊಂದಿರುವವರೇ!

ಗುರು ತೇಗ್‌ ಬಹಾದುರ್‌ ಜೀ ಅವರ 400 ನೇ ಪ್ರಕಾಶ್‌ ಪರ್ವಕ್ಕೆ ಸಮರ್ಪಿತವಾದ ಈ ಭವ್ಯ ಕಾರ್ಯಕ್ರಮದಲ್ಲಿನಾನು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಶಾಬಾದ್‌ ಕೀರ್ತನೆಯನ್ನು ಕೇಳಿದಾಗ ನಾನು ಅನುಭವಿಸಿದ ಶಾಂತಿಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. 
ಇಂದು ಗುರುಗಳಿಗೆ ಸಮರ್ಪಿತವಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವ ಸೌಭಾಗ್ಯವೂ ನನಗೆ ದೊರೆತಿದೆ. ಇದು ನಮ್ಮ ಗುರುಗಳ ಆಶೀರ್ವಾದ ಎಂದು ನಾನು ನಂಬುತ್ತೇನೆ. ಇದಕ್ಕೂ ಮೊದಲು 2019 ರಲ್ಲಿ ನಾವು ಗುರು ನಾನಕ್‌ ದೇವ್‌ ಜೀ ಅವರ 550 ನೇ ಪ್ರಕಾಶ್‌ ಪರ್ವವನ್ನು ಆಚರಿಸುವ ಸುಯೋಗವನ್ನು ಪಡೆದಿದ್ದೇವೆ ಮತ್ತು 2017 ರಲ್ಲಿ ನಾವು ಗುರು ಗೋವಿಂದ್‌ ಸಿಂಗ್‌ ಜೀ ಅವರ 350 ನೇ ಪ್ರಕಾಶ್‌ ಪರ್ವವನ್ನು ಆಚರಿಸಿದ್ದೇವೆ.
 ಇಂದು ನಮ್ಮ ದೇಶವು ನಮ್ಮ ಗುರುಗಳ ತತ್ವಗಳ ಮೇಲೆ ಪೂರ್ಣ ಭಕ್ತಿಯಿಂದ ಮುನ್ನಡೆಯುತ್ತಿದೆ ಎಂದು ನನಗೆ ಸಂತೋಷವಾಗಿದೆ. ಈ ಪುಣ್ಯ ಸಂದರ್ಭದಲ್ಲಿ ನಾನು ಎಲ್ಲಾ ಹತ್ತು ಗುರುಗಳ ಪಾದಗಳಿಗೆ ಗೌರವದಿಂದ ನಮಸ್ಕರಿಸುತ್ತೇನೆ. ಗುರುವಾಣಿಯಲ್ಲಿ ನಂಬಿಕೆಯಿಟ್ಟಿರುವ ತಮ್ಮೆಲ್ಲರಿಗೂ, ಎಲ್ಲ ದೇಶವಾಸಿಗಳಿಗೆ ಮತ್ತು ಜಗತ್ತಿನಾದ್ಯಂತ ಇರುವ ಜನರಿಗೆ ನಾನು ಪ್ರಕಾಶ್‌ ಪರ್ವದ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. 
ಸ್ನೇಹಿತರೇ, 
ಕೆಂಪು ಕೋಟೆಯು ಹಲವಾರು ಪ್ರಮುಖ ಅವಧಿಗಳಿಗೆ ಸಾಕ್ಷಿಯಾಗಿದೆ. ಈ ಕೋಟೆಯು ಗುರು ತೇಗ್‌ ಬಹಾದುರ್ ಸಾಹಿಬ್‌ ಅವರ ಬಲಿದಾನವನ್ನು ಕಂಡಿರುವುದು ಮಾತ್ರವಲ್ಲದೆ, ದೇಶಕ್ಕಾಗಿ ಮಡಿದ ಜನರ ಆತ್ಮವನ್ನು ಪರೀಕ್ಷಿಸಿದೆ. ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ, ಹಲವಾರು ಭಾರತೀಯ ಕನಸುಗಳು ಇಲ್ಲಿಂದ ಪ್ರತಿಧ್ವನಿಸಿವೆ. ಆದ್ದರಿಂದ, ‘ಆಜಾದಿ ಕಾ ಅಮೃತ ಮಹೋತ್ಸವ’ದ ಸಮಯದಲ್ಲಿ ಕೆಂಪು ಕೋಟೆಯಲ್ಲಿ ನಡೆಯುವ ಈ ಕಾರ್ಯಕ್ರಮವು ಹೆಚ್ಚು ವಿಶೇಷವಾಗಿದೆ. 
ಸ್ನೇಹಿತರೇ,
ಇಂದು ನಾವು ಎಲ್ಲಿಗೆ ತಲುಪಿದ್ದೇವೆಯೋ ಅಲ್ಲೆಲ್ಲಾ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ಸಾಧ್ಯವಾಗಿದೆ. ಸ್ವತಂತ್ರ ಭಾರತದ ಕನಸನ್ನು ನನಸಾಗಿಸಲು ಕೋಟಿಗಟ್ಟಲೆ ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಭಾರತ; ಪ್ರಜಾಸತ್ತಾತ್ಮಕ ಭಾರತ; ಭಾರತವು ವಿಶ್ವದಲ್ಲಿ ಪರೋಪಕಾರದ ಸಂದೇಶವನ್ನು ಹರಡುತ್ತಿದೆ.
ಭಾರತವು ಕೇವಲ ಒಂದು ದೇಶವಲ್ಲ, ಆದರೆ ನಮಗೆ ಒಂದು ಶ್ರೇಷ್ಠ ಪರಂಪರೆ ಮತ್ತು ಶ್ರೇಷ್ಠ ಸಂಪ್ರದಾಯವಾಗಿದೆ.
ಋುಷಿಗಳು, ಯತಿಗಳು ಮತ್ತು ಗುರುಗಳು ತಮ್ಮ ನೂರಾರು ಸಾವಿರ ವರ್ಷಗಳ ತಪಸ್ಸಿನಿಂದ ಈ ಭೂಮಿಯನ್ನು ಅಲಂಕರಿಸಿದ್ದಾರೆ ಮತ್ತು ತಮ್ಮ ಆಲೋಚನೆಗಳಿಂದ ಅದನ್ನು ಶ್ರೀಮಂತಗೊಳಿಸಿದ್ದಾರೆ. ಈ ಸಂಪ್ರದಾಯವನ್ನು ಗೌರವಿಸಿ, ಹತ್ತು ಗುರುಗಳು ಅದರ ಗುರುತನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಆದ್ದರಿಂದ ಸ್ನೇಹಿತರೇ, 
ಭಾರತದ ಸ್ವಾತಂತ್ರ್ಯ, ಹಲವಾರು ವರ್ಷಗಳ ವಸಾಹತುಶಾಹಿಯಿಂದ ಭಾರತದ ಸ್ವಾತಂತ್ರ್ಯವನ್ನು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರಯಾಣದಿಂದ ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಅದಕ್ಕೆ; ಇಂದು ದೇಶವು ‘ಆಜಾದಿ ಕಾ ಅಮೃತ್‌ ಮಹೋತ್ಸವ’ ಮತ್ತು ಗುರು ತೇಗ್‌ ಬಹಾದುರ್ ಜೀ ಅವರ 400 ನೇ ಪ್ರಕಾಶ್‌ ಪರ್ವವನ್ನು ಇದೇ ರೀತಿಯ ನಿರ್ಣಯಗಳೊಂದಿಗೆ ಆಚರಿಸುತ್ತಿದೆ.
ಸ್ನೇಹಿತರೇ,
ನಮ್ಮ ಗುರುಗಳು ಯಾವಾಗಲೂ ಜ್ಞಾನ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಸಮಾಜ ಮತ್ತು ಸಂಸ್ಕೃತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದರು. ಅವರು ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಮಾನವೀಯತೆಯ ಸೇವೆಗಾಗಿ ಮಾಧ್ಯಮವಾಗಿ ಬಳಸಿದರು. ಗುರು ತೇಗ್‌ ಬಹಾದುರ್ ಜೀ ಜನಿಸಿದಾಗ, ಗುರುಗಳ ತಂದೆ ಹೇಳಿದ್ದರು.
‘‘ ದೀನ್‌ ರಚ್ಚ ಸಂಕಟ್‌ ಹರನ್‌’’
ಅಂದರೆ ಈ ಮಗು ಮಹಾನ್‌ ಆತ್ಮ. ಅವನು ತುಳಿತಕ್ಕೊಳಗಾದವರ ರಕ್ಷಕನಾಗಿರುತ್ತಾನೆ ಮತ್ತು ಪ್ರತಿ ಬಿಕ್ಕಟ್ಟನ್ನು ಹೋಗಲಾಡಿಸುತ್ತಾನೆ. ಅದಕ್ಕಾಗಿಯೇ ಶ್ರೀ ಗುರು ಹರಗೋಬಿಂದ್‌ ಸಾಹಿಬ್‌ ಅವರಿಗೆ ತ್ಯಾಗ ಮಾಲ್‌ ಎಂದು ಹೆಸರಿಟ್ಟಿದ್ದರು. ಗುರು ತೇಗ್‌ ಬಹಾದುರ್‌ ಜೀ ಕೂಡ ತಮ್ಮ ಜೀವನದಲ್ಲಿ ಈ ತ್ಯಾಗವನ್ನು ಪ್ರದರ್ಶಿಸಿದ್ದರು. ಗುರು ಗೋಬಿಂದ್‌ ಸಿಂಗ್‌ ಜೀ ಅವರ ಬಗ್ಗೆ ಬರೆದಿದ್ದಾರೆ.
‘‘ತೇಗ್‌ ಬಹಾದುರ್ ಸಿಮರಿಯೇ, ಘರ ನೌ ನಿಧಿ ಆವೈ ದೈ
ಸಬ್‌ ಥಾಯ್‌ ಹೋಇ ಸಹಾಯ’’
ಅದೇನೆಂದರೆ, ಗುರು ತೇಗ್‌ ಬಹದ್ದೂರ್‌ ಜೀ ಅವರನ್ನು ಸ್ಮರಿಸುವುದರಿಂದ ಎಲ್ಲಾ ಯಶಸ್ಸು ಸಿಗುತ್ತದೆ. ಗುರು ತೇಗ್‌ ಬಹಾದುರ್ ಜೀ ಅಂತಹ ಅದ್ಭುತ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಹೊಂದಿದ್ದರು. ಅಂತಹ ಅಸಾಧಾರಣ ಪ್ರತಿಭೆಯಿಂದ ಅವರು ಶ್ರೀಮಂತರಾಗಿದ್ದರು.
ಸ್ನೇಹಿತರೇ, 
ಇಲ್ಲಿ, ಕೆಂಪು ಕೋಟೆಯ ಹತ್ತಿರ, ಗುರು ತೇಗ್‌ ಬಹಾದುರ್‌ ಅವರ ಅಮರ ತ್ಯಾಗದ ಸಂಕೇತವಾದ ಗುರುದ್ವಾರ ಶೀಶ್ ಗಂಜ್‌ ಸಾಹಿಬ್‌ ಇದೆ. ಈ ಪವಿತ್ರ ಗುರುದ್ವಾರವು ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ರಕ್ಷಿಸಲು ಗುರು ತೇರ್‌ ಬಹಾದುರ್‌ ಜೀ ಅವರ ತ್ಯಾಗ ಎಷ್ಟು ದೊಡ್ಡದಾಗಿದೆ ಎಂಬುದನ್ನು ನೆನಪಿಸುತ್ತದೆ. ಆ ಸಮಯದಲ್ಲಿ ದೇಶದಲ್ಲಿಧಾರ್ಮಿಕ ಮತಾಂಧತೆಯ 
ಪ್ರಕ್ಷುಬ್ಧತೆಯಿತ್ತು. ಧರ್ಮವನ್ನು ತತ್ವಶಾಸ್ತ್ರ ಮತ್ತು ವಿಜ್ಞಾನದ ವಿಷಯವೆಂದು ಪರಿಗಣಿಸಿದ ಮತ್ತು ಧರ್ಮದ ಹೆಸರಿನಲ್ಲಿ ಹಿಂಸೆ ಮತ್ತು ದೌರ್ಜನ್ಯವನ್ನು ಆಶ್ರಯಿಸಿದ ಸ್ವಾರ್ಥ ಜನರು ಭಾರತದಲ್ಲಿದ್ದರು. 
ಆ ಸಮಯದಲ್ಲಿ ಭಾರತವು ಗುರು ತೇಗ್‌ ಬಹಾದುರ್‌ ಜೀ ರೂಪದಲ್ಲಿತನ್ನ ಗುರುತನ್ನು ಉಳಿಸುವ ಭರವಸೆಯ ಕಿರಣವನ್ನು ಕಂಡಿತು. ಆ ಸಮಯದಲ್ಲಿ ಗುರು ತೇಗ್‌ ಬಹಾದುರ್‌ ಜೀ, ‘ಹಿಂದ್‌ ದಿ ಚಾದರ್‌’ (ಹಿಂದೂಸ್ಥಾನದ ರಕ್ಷಕ) ಆಗುತ್ತಾ, ಔರಂಗಜೇಬನ ನಿರಂಕುಶ ಚಿಂತನೆಯ ಮುಂದೆ ಬಂಡೆಯಂತೆ ನಿಂತಿದ್ದರು. ಇದಕ್ಕೆ  ಇತಿಹಾಸವೇ ಸಾಕ್ಷಿ; ಔರಂಗಜೇಬ್‌ ಮತ್ತು ಆತನ ದುರುಳರು ಅನೇಕ ತಲೆಗಳನ್ನು ತುಂಡರಿಸಿದರೂ ನಮ್ಮ ನಂಬಿಕೆ ಮತ್ತು ಭಕ್ತಿಯನ್ನು ನಮ್ಮಿಂದ ಬೇರ್ಪಡಿಸಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಈ ಪ್ರಸ್ತುತ ಸಮಯ ಸಾಕ್ಷಿಯಾಗಿದೆ ಮತ್ತು ಈ ಕೆಂಪು ಕೋಟೆಯೂ ಸಾಕ್ಷಿಯಾಗಿದೆ.
ಗುರು ತೇಜ್‌ ಬಹಾದುರ್‌ ಜೀ ಅವರ ತ್ಯಾಗ ಭಾರತದ ಅನೇಕ ತಲೆಮಾರುಗಳಿಗೆ ತಮ್ಮ ಸಂಸ್ಕೃತಿಯ ಘನತೆ, ಗೌರವ ಮತ್ತು ಗೌರವವನ್ನು ರಕ್ಷಿಸಲು ಬದುಕಲು ಮತ್ತು ಸಾಯಲು ಪ್ರೇರೇಪಿಸಿದೆ. ಪ್ರಮುಖ ಆಡಳಿತ ಶಕ್ತಿಗಳು ಕಣ್ಮರೆಯಾಗಿವೆ. ತೀವ್ರ ಬಿರುಗಾಳಿಗಳು ಶಾಂತವಾಗಿವೆ. ಆದರೆ ಭಾರತ ಇನ್ನೂ ದೃಢವಾಗಿ ನಿಂತಿದೆ. ಅಮರವಾಗಿ ಉಳಿದಿದೆ ಮತ್ತು ಮುಂದೆ ಸಾಗುತ್ತಿದೆ. ಇಂದು ಮತ್ತೊಮ್ಮೆ ಜಗತ್ತು ಭಾರತದತ್ತ ನೋಡುತ್ತಿದೆ. ಮಾನವೀಯತೆಯ ಮಾರ್ಗದರ್ಶನವನ್ನು ಪಡೆಯಲು ಆಶಿಸುತ್ತಿದೆ. ‘ನವ ಭಾರತ’ದ ಪ್ರಭೆಯಲ್ಲಿ ಗುರು ತೇಜ್‌ ಬಹಾದುರ್‌ ಜೀ ಅವರ ಆಶೀರ್ವಾದವನ್ನು ನಾವು ಎಲ್ಲೆಡೆ ಅನುಭವಿಸಬಹುದು.
ಸಹೋದರ ಮತ್ತು ಸಹೋದರಿಯರೇ,
ಯಾವುದೇ ಸಮಯದಲ್ಲಿ ಇಲ್ಲಿ ಹೊಸ ಸವಾಲು ಎದುರಾದಾಗ ಕೆಲವು ಮಹಾನ್‌ ಆತ್ಮಗಳು ಹೊಸ ಹಾದಿಗಳನ್ನು ತೋರಿಸುವ ಮೂಲಕ ಈ ಪುರಾತನ ದೇಶಕ್ಕೆ ಮಾರ್ಗದರ್ಶನ ನೀಡುತ್ತವೆ. ನಮ್ಮ ಗುರುಗಳ ಪ್ರಭಾವ ಮತ್ತು ಜ್ಞಾನದಿಂದ ಭಾರತದ ಪ್ರತಿಯೊಂದು ಪ್ರದೇಶವೂ, ಮೂಲೆ ಮೂಲೆಯೂ ಬೆಳಗಿದೆ. ಗುರು ನಾನಕ್‌ ದೇವ್‌ ಜೀ ಇಡೀ ದೇಶವನ್ನು ಒಂದೇ ಎಳೆಯಲ್ಲಿ ಒಂದುಗೂಡಿಸಿದರು. ಗುರು ತೇಗ್‌ ಬಹಾದುರ್‌ ಅವರ ಅನುಯಾಯಿಗಳು ಎಲ್ಲೆಡೆ ಇದ್ದರು; ಪಾಟ್ನಾದಲ್ಲಿ ಪಾಟ್ನಾ ಸಾಹಿಬ್‌ ಮತ್ತು ದೆಹಲಿಯಲ್ಲಿ ರಾಕಬ್‌ಗಂಜ್‌ ಸಾಹಿಬ್; ಗುರುಗಳ ಜ್ಞಾನ ಮತ್ತು ಆಶೀರ್ವಾದದ ರೂಪದಲ್ಲಿ ನಾವು ‘ಏಕ್‌ ಭಾರತ’ ವನ್ನು ಎಲ್ಲೆಡೆ ಕಾಣಬಹುದು.
ಸಹೋದರ ಮತ್ತು ಸಹೋದರಿಯರೇ,
ನನ್ನ ಸರ್ಕಾರವು ಗುರುಗಳ ಸೇವೆಗಾಗಿ ಇಷ್ಟೊಂದು ಮಾಡುತ್ತಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷ ನಮ್ಮ ಸರ್ಕಾರವು ಸಾಹಿಬ್‌ಜದಾಸ್‌ ಅವರ ಮಹಾನ್‌ ತ್ಯಾಗದ ಸ್ಮರಣಾರ್ಥ ಡಿಸೆಂಬರ್‌ 26 ರಂದು ವೀರ್‌ ಬಾಲ್‌ ದಿವಸ್‌ ಅನ್ನು ಆಚರಿಸಲು ನಿರ್ಧರಿಸಿತ್ತು. ಸಿಖ್‌ ಸಂಪ್ರದಾಯದ ತೀರ್ಥಯಾತ್ರೆಗಳನ್ನು ಸಂಪರ್ಕಿಸಲು ನಮ್ಮ ಸರ್ಕಾರ ಅವಿರತ ಪ್ರಯತ್ನಗಳನ್ನು ಮಾಡುತ್ತಿದೆ. ದಶಕಗಳಿಂದ ಕಾಯುತ್ತಿದ್ದ ಕರ್ತಾರ್ಪುರ ಸಾಹಿಬ್‌ ಕಾರಿಡಾರ್‌ಅನ್ನು ನಿರ್ಮಿಸುವ ಮೂಲಕ ನಮ್ಮ ಸರ್ಕಾರವು ಗುರು ಸೇವೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ನಮ್ಮ ಸರ್ಕಾರವು ಪಾಟ್ನಾ ಸಾಹಿಬ್‌ ಸೇರಿದಂತೆ ಗುರು ಗೋಬಿಂದ್‌ ಸಿಂಗ್‌ ಜೀ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ರೈಲು ಸೌಲಭ್ಯಗಳನ್ನು ಆಧುನೀಕರಣಗೊಳಿಸಿದೆ.
ಪಂಜಾಬ್‌ನ ಆನಂದಪುರ ಸಾಹಿಬ್‌ ಮತ್ತು ಅಮೃತಸರದ ಅಮೃತಸರ ಸಾಹಿಬ್‌ ಸೇರಿದಂತೆ ಎಲ್ಲಾ ಪ್ರಮುಖ ಸ್ಥಳಗಳನ್ನು  ‘ ಸ್ವದೇಶ್‌ ದರ್ಶನ್‌ ಯೋಜನೆ ’ ಮೂಲಕ ಸಂಪರ್ಕಿಸುವ ತೀರ್ಥಯಾತ್ರೆ ಸರ್ಕ್ಯೂಟ್‌ ಅನ್ನು ನಾವು ನಿರ್ಮಿಸುತ್ತಿದ್ದೇವೆ. ಉತ್ತರಾಖಂಡದ ಹೇಮಕುಂಡ್‌ ಸಾಹಿಬ್‌ಗೆ ರೋಪ್‌ ವೇ ಮಾಡುವ ಕೆಲಸವೂ ಪ್ರಗತಿಯಲ್ಲಿದೆ.
ಸ್ನೇಹಿತರೇ,
ಶ್ರೀ ಗುರು ಗ್ರಂಥ ಸಾಹಿಬ್‌ ಜೀ ಅವರು ನಮ್ಮ ಸ್ವಯಂ ಸಾಕ್ಷಾತ್ಕಾರದ ಮಾರ್ಗದರ್ಶಿ ಮತ್ತು ವಿವಿಧತೆಯಲ್ಲಿ ಭಾರತದ ಏಕತೆಯ ಜೀವಂತ ರೂಪ. ಆದ್ದರಿಂದಲೇ, ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಉಂಟಾದಾಗ ಮತ್ತು ಪವಿತ್ರ ಗುರು ಗ್ರಂಥ ಸಾಹಿಬ್‌ನ ಪ್ರತಿಗಳನ್ನು ಮರಳಿ ತರುವ ಪ್ರಶ್ನೆಯು ಉದ್ಭವಿಸಿದಾಗ, ಭಾರತ ಸರ್ಕಾರವು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿತು. ನಾವು ಗುರು ಗ್ರಂಥ ಸಾಹಿಬ್‌ನ ಪ್ರತಿಗಳನ್ನು ಪೂರ್ಣ ಗೌರವದೊಂದಿಗೆ ಶಿರದ ಮೇಲೆ ಹೊತ್ತುಕೊಂಡು ಮರಳಿ ತರಲು ಸಾಧ್ಯವಾಗುವುದರ ಜತೆಗೆ ಸಂಕಷ್ಟದಲ್ಲಿರುವ ನಮ್ಮ ಸಿಖ್‌ ಸಹೋದರರನ್ನು ಉಳಿಸಲು ಸಾಧ್ಯವಾಯಿತು. ಪೌರತ್ವ ತಿದ್ದುಪಡಿ ಕಾಯ್ದೆಯು ನೆರೆಯ ದೇಶಗಳ ಸಿಖ್‌ ಮತ್ತು ಅಲ್ಪಸಂಖ್ಯಾತ ಕುಟುಂಬಗಳಿಗೆ ದೇಶದ ಪೌರತ್ವವನ್ನು ಪಡೆಯಲು ದಾರಿ ಮಾಡಿಕೊಟ್ಟಿದೆ. ನಮ್ಮ ಗುರುಗಳು ಮಾನವೀಯತೆಗೆ ಮೊದಲ ಸ್ಥಾನ ಕೊಡುವುದನ್ನು ಕಲಿಸಿದ್ದರಿಂದ ಇದೆಲ್ಲವೂ ಸಾಧ್ಯವಾಗಿದೆ. ಪ್ರೀತಿ ಮತ್ತು ಸಾಮರಸ್ಯ ನಮ್ಮ ಸಂಸ್ಕೃತಿಯ ಭಾಗವಾಗಿದೆ.
ಸ್ನೇಹಿತರೇ, 
ನಮ್ಮ ಗುರುಗಳು ಹೇಳುತ್ತಾರೆ, 
ಭೈ ಕಾಹೂ ಕೋ ದೇತ್ ನಹಿ
ನಹಿ ಭಾಯ್‌ ಮಾನತ ಆನ್‌.
ಕಹು ನಾನಕ ಸುನಿ ರೇ ಮನ,
ಜ್ಞಾನಿ ತಾಹಿ ಖಬಾನಿ 

ಅಂದರೆ, ಬುದ್ಧಿವಂತನು ಯಾರನ್ನೂ ಹೆದರಿಸುವುದಿಲ್ಲ. ಅವನು ಯಾರಿಗೂ ಹೆದರುವುದಿಲ್ಲ. ಭಾರತ ಎಂದಿಗೂ ಯಾವುದೇ ದೇಶ ಅಥವಾ ಸಮಾಜಕ್ಕೆ ಬೆದರಿಕೆಯನ್ನು ಒಡ್ಡಿಲ್ಲ. ಇಂದಿಗೂ ನಾವು ಇಡೀ ಪ್ರಪಂಚದ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದೇವೆ. ಅದೊಂದೇ ನಮ್ಮ ಆಸೆ. ಸ್ವಾವಲಂಬಿ ಭಾರತದ ಬಗ್ಗೆ ಹೇಳುವುದಾದರೆ ನಾವು ಇಡೀ ವಿಶ್ವದ ಪ್ರಗತಿಯ ಗುರಿಯನ್ನು ನಮ್ಮ ಮುಂದೆ ಇಡುತ್ತೇವೆ. ಭಾರತವು ವಿಶ್ವದಲ್ಲಿ ಯೋಗದ ಬಗ್ಗೆ ಪ್ರಚಾರ ಮಾಡುತ್ತಿದ್ದರೆ, ಅದು ಇಡೀ ಜಗತ್ತಿಗೆ ಉತ್ತಮ ಆರೋಗ್ಯ ಮತ್ತು ಶಾಂತಿಯ ಆಶಯದೊಂದಿಗೆ ಮಾಡುತ್ತದೆ. ನಾನು ನಿನ್ನೆಯಷ್ಟೇ ಗುಜರಾತ್‌ನಿಂದ ಹಿಂತಿರುಗಿದೆ. ಅಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕೇಂದ್ರ ಅನಾವರಣಗೊಂಡಿದೆ. ಈಗ ಭಾರತವು ಸಾಂಪ್ರದಾಯಿಕ ಔಷಧದ ಪ್ರಯೋಜನಗಳನ್ನು ಪ್ರಪಂಚದ ಮೂಲೆ ಮೂಲೆಗಳಿಗೆ ಕೊಂಡೊಯ್ಯುತ್ತದೆ. ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸ್ನೇಹಿತರೇ, 
ಇಂದಿನ ಭಾರತವು ಜಾಗತಿಕ ಸಂಘರ್ಷಗಳ ನಡುವೆಯೂ ಸಂಪೂರ್ಣ ಸ್ಥಿರತೆಯೊಂದಿಗೆ ಶಾಂತಿಗಾಗಿ ಶ್ರಮಿಸುತ್ತದೆ ಮತ್ತು ಕೆಲಸ ಮಾಡುತ್ತದೆ. ಜತೆಗೆ ಭಾರತವು ಇಂದು ತನ್ನ ದೇಶದ ರಕ್ಷ ಣೆ ಮತ್ತು ಭದ್ರತೆಯ ಬಗ್ಗೆ ಸಮಾನವಾಗಿ ನಿರ್ಧರಿಸುತ್ತದೆ. ಗುರುಗಳು ನೀಡಿದ ಶ್ರೇಷ್ಠ ಸಿಖ್‌ ಸಂಪ್ರದಾಯ ನಮ್ಮ ಮುಂದಿದೆ. ಹಳೆಯ ಚಿಂತನೆ, ಹಳೆ ಸಂಪ್ರದಾಯಕಗಳನ್ನು ಬದಿಗೊತ್ತಿ ಹೊಸ ವಿಚಾರಗಳನ್ನು ಗುರುಗಳು ಮುಂದಿಟ್ಟಿದ್ದರು. ಅವರ ಶಿಷ್ಯರು ಅದನ್ನು ಅಳವಡಿಸಿಕೊಂಡರು ಮತ್ತು ಕಲಿತರು. ಹೊಸ ಚಿಂತನೆಯ ಈ ಸಾಮಾಜಿಕ ಅಭಿಯಾನವು ಸೈದ್ಧಾಂತಿಕ ಆವಿಷ್ಕಾರವಾಗಿತ್ತು. ಅದಕ್ಕಾಗಿಯೇ, ಹೊಸ ಚಿಂತನೆ, ನಿರಂತರ ಪರಿಶ್ರಮ ಮತ್ತು ನೂರಕ್ಕೆ ನೂರು ಪ್ರತಿಶತ ಸಮರ್ಪಣೆ ನಮ್ಮ ಸಿಖ್‌ ಸಮಾಜದ ಗುರುತಾಗಿದೆ. 
ಇದು ಇಂದು ‘ಆಜಾದಿ ಕಾ ಅಮೃತ್‌ ಮಹೋತ್ಸವ ’ ದ ಸಂದರ್ಭದಲ್ಲಿ ದೇಶದ ಸಂಕಲ್ಪವಾಗಿದೆ. ನಮ್ಮ ಗುರುತಿನ ಬಗ್ಗೆ ನಾವು ಹೆಮ್ಮೆ ಪಡಬೇಕು. ನಾವು ‘ಸ್ಥಳೀಯತೆ’ ಬಗ್ಗೆ ಹೆಮ್ಮೆ ಪಡಬೇಕು; ನಾವು ಸ್ವಾವಲಂಬಿ ಭಾರತವನ್ನು ನಿರ್ಮಿಸಬೇಕಾಗಿದೆ. ಜಗತ್ತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ‌ವನ್ನು ಜಗತ್ತು ಗುರುತಿಸಿರುವ ಭಾರತವನ್ನು ನಾವು ನಿರ್ಮಿಸಬೇಕಾಗಿದೆ. ದೇಶದ ಅಭಿವೃದ್ಧಿ ಮತ್ತು ದೇಶದ ತ್ವರಿತ ಪ್ರಗತಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಎಲ್ಲರ ಶ್ರಮ ಅಗತ್ಯ. ಗುರುಗಳ ಆಶೀರ್ವಾದದಿಂದ ಭಾರತವು ತನ್ನ ವೈಭವದ ಶಿಖರವನ್ನು ತಲುಪುತ್ತದೆ ಎಂದು ನನಗೆ ಖಾತ್ರಿಯಿದೆ. ನಾವು ಸ್ವಾತಂತ್ರ್ಯದ ನೂರು ವರ್ಷಗಳನ್ನು ಆಚರಿಸಿದಾಗ, ಹೊಸ ಭಾರತವು ನಮ್ಮ ಮುಂದೆ ಬರಲಿದೆ.

ಗುರು ತೇಗ್‌ ಬಹಾದುರ್‌ ಜೀ ಹೇಳುತ್ತಿದ್ದರು -
ಸಾಧೋ, 
ಗೋಬಿಂದ  ಕೆ ಗುನ್‌ ಗಾವೋ.
ಮಾನಸ ಜನ್ಮ ಅಮೋಲ್‌ ಕಪಾಯೋ,
ವ್ಯರ್ಥಾ ಕಾಹೇ ಗಂವಾವೋ.

ಈ ಮನೋಭಾವದಿಂದ ನಾವು ನಮ್ಮ ಜೀವನದ ಪ್ರತಿ ಕ್ಷ ಣವನ್ನು ದೇಶಕ್ಕಾಗಿ ಮುಡಿಪಾಗಿಡಬೇಕು. ಒಟ್ಟಾಗಿ ನಾವು ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ. ಈ ನಂಬಿಕೆಯೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು !
ವಹೇ ಗುರೂಜಿಯ ಖಾಲ್ಸಾ,
ವಾ ಗುರೂಜಿಯ ಜಯ
ಹಕ್ಕು ನಿರಾಕರಣೆ: ಇದು ಪ್ರಧಾನಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

***


(Release ID: 1819610) Visitor Counter : 218