ಉಪರಾಷ್ಟ್ರಪತಿಗಳ ಕಾರ್ಯಾಲಯ

ಮುಕ್ತ ಮತ್ತು ನಿರ್ಭೀತ ಮಾಧ್ಯಮವಿಲ್ಲದೆ ಸದೃಢ ಮತ್ತು ಸಕ್ರಿಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ: ಉಪರಾಷ್ಟ್ರಪತಿ


ಸುದ್ದಿಯನ್ನು ಅಭಿಪ್ರಾಯದೊಂದಿಗೆ ಬೆರೆಸಬಾರದು, ಉತ್ತಮ ಪತ್ರಿಕೋದ್ಯಮ ಘಟನೆಗಳ ನಿಸ್ಪಕ್ಷಪಾತ ಮತ್ತು ನೈಜ ವರದಿಯನ್ನು ಆಧರಿಸಿರುತ್ತದೆ: ಉಪರಾಷ್ಟ್ರಪತಿ

ಸಂಸತ್ತು ಮತ್ತು ರಾಜ್ಯದ ಶಾಸನಸಭೆಗಳಲ್ಲಿ ನಡೆಯುವ ರಚನಾತ್ಮಕ ಭಾಷಣಗಳನ್ನು ಪ್ರಮುಖವಾಗಿ ಬಿತ್ತರಿಸುವಂತೆ ಮಾಧ್ಯಮಗಳಿಗೆ ಕರೆ ನೀಡಿದ ಶ್ರೀ ನಾಯ್ಡು

ರಾಜಕೀಯ ಪಕ್ಷಗಳು ನೀತಿ ಸಂಹಿತೆ ಮೂಲಕ ಸದಸ್ಯರನ್ನು ಸ್ವಯಂ ನಿರ್ಬಂಧಗೊಳಿಸಬೇಕು: ಉಪರಾಷ್ಟ್ರಪತಿ

50ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಬೆಂಗಳೂರು ಪ್ರೆಸ್ ಕ್ಲಬ್ ಗೆ ಉಪರಾಷ್ಟ್ರಪತಿ ಭೇಟಿ

Posted On: 24 APR 2022 3:19PM by PIB Bengaluru

ಮುಕ್ತ, ಸ್ವತಂತ್ರ ಮತ್ತು ನಿರ್ಭೀತ ಪತ್ರಿಕಾ ಮಾಧ್ಯಮವಿಲ್ಲದೆ ಸದೃಢ ಮತ್ತು ಸಕ್ರಿಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯನಾಯ್ಡು ಅವರು ಇಂದು ಬಲವಾಗಿ ಪ್ರತಿಪಾದಿಸಿದರು. ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಲು ಭಾರತಕ್ಕೆ ಸದೃಢ, ಸ್ವತಂತ್ರ ಮತ್ತು ಸಕ್ರಿಯ ಮಾಧ್ಯಮದ ಅಗತ್ಯವಿದೆ ಎಂದು ಸಲಹೆ ನೀಡಿದ ಶ್ರೀ ವೆಂಕಯ್ಯ ನಾಯ್ಡು ಅವರು ಮಾಧ್ಯಮಗಳಲ್ಲಿನ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ  ಎಚ್ಚರಿಕೆ ನೀಡಿದರು. ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿಗಾರಿಕೆಗೆ ಕರೆ ನೀಡಿದ ಅವರು, “ಸುದ್ದಿಯನ್ನು ಅಭಿಪ್ರಾಯಗಳೊಂದಿಗೆ ಬೆರೆಸಬಾರದು’’ ಎಂದು ಅವರು ಒತ್ತಿ ಹೇಳಿದರು.

ಬೆಂಗಳೂರು ಪ್ರೆಸ್ ಕ್ಲಬ್‌ನ 50 ನೇ ವಾರ್ಷಿಕೋತ್ಸವದ ಅಂಗವಾಗಿ  ಪ್ರೆಸ್ ಕ್ಲಬ್‌ನಲ್ಲಿ  ಅಲ್ಲಿ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಗಳು,  ಸಾಂವಿಧಾನಿಕ ಕಾನೂನಿನ ನಿಯಮವನ್ನು ಬಲಪಡಿಸುವ ವಿಚಾರಕ್ಕೆ ಬಂದರೆ, ಮುಕ್ತ ಮತ್ತು ನ್ಯಾಯಸಮ್ಮತ ಮಾಧ್ಯಮ  ಸ್ವತಂತ್ರ ನ್ಯಾಯಾಂಗಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. 

ಹಿಂದೆ ಪತ್ರಿಕೋದ್ಯಮದಲ್ಲಿ ಸುದ್ದಿಯನ್ನು ಪವಿತ್ರವಾದ ಒಂದು ಧ್ಯೇಯವೆಂದು ಪರಿಗಣಿಸಲಾಗಿತ್ತು ಎಂದು ಶ್ರೀ ವೆಂಕಯ್ಯ ನಾಯ್ಡು ಅವರು ಉತ್ತಮ ಪತ್ರಿಕೋದ್ಯಮವು ಘಟನೆಗಳ ನಿಷ್ಪಕ್ಷಪಾತ ಮತ್ತು ನೈಜ ಪ್ರಸಾರಕ್ಕೆ ಮತ್ತು ಜನರಿಗೆ ಅವುಗಳನ್ನು ನಂಬಲರ್ಹ ರೀತಿಯಲ್ಲಿ ತಲುಪಿಸುವುದರ ಮೇಲೆ ಅವಲಂಬಿತವಾಗಿದೆ ಎಂಬ ಅಂಶವನ್ನು ಬಲವಾಗಿ ಪ್ರತಿಪಾದಿಸಿದರು. 
ಖಾಸಾ ಸುಬ್ಬಾ ರಾವು, ಫ್ರಾಂಕ್ ಮೊರೇಸ್ ಮತ್ತು ನಿಖಿಲ್ ಚಕ್ರವರ್ತಿಯಂತಹ ಹಿಂದಿನ ಹಲವು ಹೆಸರಾಂತ ಸುದ್ದಿ ಸಂಪಾದಕರ ಹೆಸರುಗಳನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, ಅವರು ಎಂದಿಗೂ ಸುದ್ದಿಗೆ ತಮ್ಮ ಅಭಿಪ್ರಾಯದ  ಬಣ್ಣ ಹಚ್ಚುತ್ತಿರಲಿಲ್ಲ ಮತ್ತು ಅವರು ಸದಾ ಸುದ್ದಿ ಮತ್ತು ಅಭಿಪ್ರಾಯಗಳ ನಡುವೆ ಲಕ್ಷ್ಮಣ ರೇಖೆಯನ್ನು ಗೌರವಿಸುತ್ತಿದ್ದರು ಎಂದು ಹೇಳಿದರು. ಸ್ವಾತಂತ್ರ್ಯ ಸಂಗ್ರಾಮ ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಪಾರ ಕೊಡುಗೆ ನೀಡಿದ ಪತ್ರಿಕೋದ್ಯಮದ ದಿಗ್ಗಜರಿಂದ ಇಂದಿನ ವೃತ್ತಿಪರರ ಸ್ಫೂರ್ತಿ ಪಡೆಯಬೇಕು ಎಂದು ಅವರು ಸಲಹೆ ನೀಡಿದರು. ಸುದ್ದಿಗಳನ್ನು ಅಭಿಪ್ರಾಯಗಳೊಂದಿಗೆ ಬೆರೆಸಬಾರದು ಎಂದು ಒತ್ತಿ ಹೇಳಿದ ಅವರು, ಮಾಧ್ಯಮದ ವ್ಯಕ್ತಿಗಳು ಎಂದಿಗೂ ಸತ್ಯದೊಂದಿಗೆ ರಾಜಿಮಾಡಿಕೊಳ್ಳಬೇಡಿ ಮತ್ತು ಸದಾ ಭಯ ಅಥವಾ ನಿಸ್ಪಕ್ಷಪಾತವಿಲ್ಲದೆ ಸುದ್ದಿಯನ್ನು ಪ್ರಸ್ತುತಪಡಿಸಬೇಕೆಂದು ಸಲಹೆ ನೀಡಿದರು. 
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮದ ಮಾನದಂಡಗಳು ಭಾರಿ ಕುಸಿತವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ವೆಂಕಯ್ಯ ನಾಯ್ಡು ಅವರು, ಇತ್ತೀಚಿನ ಸಾಮಾಜಿಕ ಮಾಧ್ಯಮಗಳ ಹೆಚ್ಚಳ ನೀರನ್ನು ಮತ್ತಷ್ಟು ಕೆಸರಿನಿಂದ ರಾಡಿಗೊಳಿಸಿದೆ ಎಂದು ಹೇಳಿದರು. “ ನಾವು ಇಂದು ಸದಾ  ಅಭಿಪ್ರಾಯದೊಂದಿಗೆ ಸುದ್ದಿಗಳನ್ನು ಸೇರಿಸುವುದನ್ನು ಕಾಣುತ್ತಿದ್ದೇವೆ. ಅದು ಎಷ್ಟರಮಟ್ಟಿಗೆ ಎಂದರೆ ಪತ್ರಿಕೆಗಳಾಗಲಿ ಅಥವಾ ದೂರದರ್ಶನ ವಾಹಿನಿಗಳಾಗಲಿ ಕೆಲವು ಘಟನೆಗಳ ನೈಜ ಚಿತ್ರಣವನ್ನೇ ನೀಡುವುದಿಲ್ಲ ಎಂದು ಕೆಲವೊಮ್ಮೆ ಭಾವಿಸುವಂತಾಗಿದೆ’’ ಎಂದು ಅವರು ಹೇಳಿದರು. ಸಂಸತ್ತು ಮತ್ತು ಸರ್ಕಾರವು ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿಗಳ ವಿಷಯವನ್ನು ಪರಿಶೀಲಿಸಬೇಕು ಮತ್ತು ಸುಳ್ಳು ಸುದ್ದಿಗಳನ್ನು ಎದುರಿಸಲು ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 

ಪಕ್ಷಪಾತದ ಸುದ್ದಿ ಪ್ರಸ್ತುತಿ ಮತ್ತು ಘಟನೆಗಳನ್ನು ನಿರ್ದಿಷ್ಟ ಕಾರ್ಯಸೂಚಿ ಇಟ್ಟುಕೊಂಡು ಪ್ರಸಾರ ಮಾಡುವ ಬಗ್ಗೆ ಗಮನ ಸೆಳೆದ ಉಪರಾಷ್ಟ್ರಪತಿ, ಅಂತಹ ಪತ್ರಿಕೋದ್ಯಮದ ತೊಡಗಿರುವವರು, ತಮ್ಮ ವೃತ್ತಿಗೆ ದೊಡ್ಡ ಅಪಚಾರ ಎಸಗುತ್ತಿದ್ದಾರೆ, ಏಕೆಂದರೆ ಪತ್ರಿಕೋದ್ಯಮದ ಮೂಲಾಧಾರ ಆಡಗಿರುವುದು ಸತ್ಯಾಸತ್ಯತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಎಂದು ಅವರು  ಹೇಳಿದರು. 

ಸಾರ್ವಜನಿಕ ಭಾಷಣಗಳಲ್ಲಿ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ಶ್ರೀ ವೆಂಕಯ್ಯ ನಾಯ್ಡು ಅವರು, ಶಾಸನ ಸಭೆಗಳಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮ ಸದಸ್ಯರಿಗೆ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳುವ ಮೂಲಕ ರಾಜಕೀಯ ಪಕ್ಷಗಳು ತಮ್ಮನ್ನು ತಾವು ಸ್ವಯಂ ನಿರ್ಬಂಧಿಸಿಕೊಳ್ಳುವಂತೆ ಮಾಡಬೇಕೆಂದರು. ತಮ್ಮ ರಾಜಕೀಯ ಎದುರಾಳಿಗಳ ಮೇಲೆ ವೈಯಕ್ತಿಕ ದಾಳಿ ಮಾಡದಂತೆ ಸಾರ್ವಜನಿಕ ಪ್ರತಿನಿಧಿಗಳಿಗೆ ಸಲಹೆ ನೀಡಿದರು. ಯಾವುದೇ ಲೋಪ ದೋಷಗಳನ್ನು ನಿವಾರಿಸಲು ಪಕ್ಷಾಂತರ ವಿರೋಧಿ ಕಾನೂನನ್ನು ಮರು ಪರಿಶೀಲಿಸುವಂತೆಯೂ ಅವರು ಕರೆ ನೀಡಿದರು. 
ವಿಧಾನಮಂಡಲಗಳಲ್ಲಿ ಸದಸ್ಯರು ಚರ್ಚೆ, ಸಂವಾದ ನಡೆಸಿ ಅರ್ಥಪೂರ್ಣವಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಿ ಹೇಳಿದ ಉಪರಾಷ್ಟ್ರಪತಿ ಅವರು, ಮಾಧ್ಯಮಗಳು ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ನಡೆಸುವ ರಚನಾತ್ಮಕ ಭಾಷಣಗಳನ್ನು ಪ್ರಮುಖವಾಗಿ ಪ್ರಸಾರ ಮಾಡಬೇಕೇ ಹೊರತು ಅಡ್ಡಿಪಡಿಸುವ ಪ್ರಸಂಗಗಳನ್ನಲ್ಲ ಎಂದರು. ಮಾಧ್ಯಮಗಳು, ಸಂಸತ್ತು ಮತ್ತು ಶಾಸನ ಸಭೆಗಳಲ್ಲಿ ಕಲಾಪಕ್ಕೆ ಅಡ್ಡಿಪಡಿಸುವವರಿಗೆ ಅನಗತ್ಯ ಗಮನ ನೀಡುವುದರ ಬಗ್ಗೆ ಮತ್ತು ಸುದ್ದಿಗಳನ್ನು ವೈಭವೀಕರಿಸುವ ಬಗ್ಗೆ ಅವರು ಎಚ್ಚರಿಕೆ ನೀಡಿದರು. 

ಸಂಸದ ಶ್ರೀ ಪಿ.ಸಿ.ಮೋಹನ್, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀ.ಕೆ.ಸದಾಶಿವ ಶಣೈ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶ್ರೀ ಎಚ್.ವಿ.ಕಿರಣ್, ಬೆಂಗಳೂರು ಪ್ರೆಸ್ ಕ್ಲಬ್ನ ಉಪಾಧ್ಯಕ್ಷ ಶ್ರೀ ಎಸ್. ಶ್ಯಾಮ್ ಪ್ರಸಾದ್ , ಮಾಧ್ಯಮ ವೃತ್ತಿಪರರು ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

***



(Release ID: 1819570) Visitor Counter : 226