ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಹಿಮಾಚಲ ಪ್ರದೇಶದಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ 'ಸಂಸದ್ ಮೊಬೈಲ್ ಸೇವೆ' ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

Posted On: 16 APR 2022 5:45PM by PIB Bengaluru

ನಾಲ್ಕು ವರ್ಷಗಳಿಂದ ಪ್ರಯಾಸ್‌ ಸ್ವಯಂಸೇವಾ ಸಂಸ್ಥೆಯ ಮೂಲಕ ನಡೆಸಲಾಗುತ್ತಿರುವ ‘ಸಂಸದ ಸಂಚಾರಿ ಆರೋಗ್ಯ ಸೇವಾ ಆಸ್ಪತ್ರೆ’ಯು ಸಾಕಷ್ಟು ಸಾಧನೆಗಳನ್ನು ಮಾಡಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಬೃಹತ್ ವೈದ್ಯಕೀಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದ ಆಸ್ಪತ್ರೆಯ ತಂಡವನ್ನು ಅವರು ಅಭಿನಂದಿಸಿದರು. 

ಶ್ರೀ ಅನುರಾಗ್ ಠಾಕೂರ್ ಮಾತನಾಡಿ, “ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರು ಬಡವರ ಕಲ್ಯಾಣದ ಉತ್ತಮ ಪ್ರತಿಪಾದಕರಾಗಿದ್ದರು. ಅವರಿಂದ ಸ್ಫೂರ್ತಿ ಪಡೆದು, ಸ್ವಯಂಸೇವಾ ಸಂಸ್ಥೆ ಪ್ರಯಾಸ್ ಮೂಲಕ ನನ್ನ ಸಂಸದೀಯ ಕ್ಷೇತ್ರದಲ್ಲಿ ಸಂಸದ ಸಂಚಾರಿ ಆರೋಗ್ಯ ಸೇವೆಯನ್ನು 14 ಏಪ್ರಿಲ್ 2018 ರಂದು ಪ್ರಾರಂಭಿಸಿದೆ. ಉತ್ತಮ ಆರೋಗ್ಯ ಸೌಲಭ್ಯಗಳು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅವಶ್ಯಕತೆಯಾಗಿದೆ, ಆದರೆ ಅನೇಕ ಬಾರಿ ಆರೋಗ್ಯ ಕೇಂದ್ರಗಳ ಕೊರತೆ ಅಥವಾ ವೈದ್ಯರ ಅಲಭ್ಯತೆಯಿಂದಾಗಿ ದೂರದ ಪ್ರದೇಶಗಳ ಜನರು ಉತ್ತಮ ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಂಚಾರಿ ಆಸ್ಪತ್ರೆ ಸೇವೆಯು ಜನತೆಗೆ ವರದಾನವಾಗಿ ಪರಿಣಮಿಸಿದೆ. ಈ 4 ವರ್ಷಗಳ ಅವಧಿಯಲ್ಲಿ ಜನರ ಮುಖದಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಸಂಸದ ಸಂಚಾರಿ ಆರೋಗ್ಯ ಸೇವೆ ಮಾಡಿರುವುದು ಸಂತಸದ ಸಂಗತಿಯಾಗಿದೆ. ಕೇವಲ 4 ವರ್ಷಗಳ ಅವಧಿಯಲ್ಲಿ 6,22,354 ಕಿ.ಮೀ ಕ್ರಮಿಸಿ ಸುಮಾರು 7,151,32 ಜನರಿಗೆ ಅವರ ಮನೆ ಬಾಗಿಲಿನಲ್ಲಿಯೇ ಉಚಿತ ತಪಾಸಣೆ, ಸಲಹೆ ಮತ್ತು ಚಿಕಿತ್ಸೆಯನ್ನು ನೀಡಿರುವುದು ಒಂದು ಸಾಧನೆಯಾಗಿದೆ, ಇದಕ್ಕಾಗಿ ನಾನು ಇಡೀ ಆಸ್ಪತ್ರೆ ತಂಡವನ್ನು ಅಭಿನಂದಿಸುತ್ತೇನೆ.” ಎಂದರು.
ಸಾಂಕ್ರಾಮಿಕ ಸಮಯದಲ್ಲಿಯೂ ಆಸ್ಪತ್ರೆಯ ಸೇವೆಗಳು ನಿಲ್ಲಲಿಲ್ಲ ಎಂದು ಶ್ರೀ ಅನುರಾಗ್ ಠಾಕೂರ್ ಹೇಳಿದರು. ಬಿಲಾಸ್‌ಪುರದಲ್ಲಿ ಡೆಂಗ್ಯೂ ಹರಡಿದ ಸಮಯದಿಂದ ಕೊರೊನಾ ಸಾಂಕ್ರಾಮಿಕದ ಅವಧಿಯವರೆಗೆ, ಆಸ್ಪತ್ರೆ ಸೇವೆಯು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ತನ್ನ ಕೆಲಸವನ್ನು ಮಾಡಿದೆ. ಕೋವಿಡ್ ನಿಗ್ರಹದಿಂದ ಔಷಧಗಳ ವಿತರಣೆ ಮತ್ತು ಅದರ ಪ್ರಾಥಮಿಕ ತನಿಖೆಯವರೆಗೆ ಆಸ್ಪತ್ರೆಯ ಸೇವೆಯು ತನ್ನ ಕೊಡುಗೆಯನ್ನು ನೀಡಿದೆ. ಆಸ್ಪತ್ರೆಯ ಸೇವೆಗಳ ಫಲಾನುಭವಿಗಳಲ್ಲಿ ಶೇ.65 ರಷ್ಟು ಮಹಿಳೆಯರು ಮತ್ತು ವೃದ್ಧರು ಸೇರಿದ್ದಾರೆ. ಸಂಚಾರಿ ಘಟಕದಲ್ಲಿ ನಿಯೋಜನೆಗೊಂಡಿರುವ ಶೇ.50ರಷ್ಟು ಆರೋಗ್ಯ ಕಾರ್ಯಕರ್ತರು ಮಹಿಳೆಯರಾಗಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದೆ. ಸಾಮಾನ್ಯ ಜ್ವರದ ಚಿಕಿತ್ಸೆಯಿಂದ ಹಿಡಿದು ಸ್ತನ ಕ್ಯಾನ್ಸರ್ ತಪಾಸಣೆಯವರೆಗೆ ಈ ಸಂಚಾರಿ ಆಸ್ಪತ್ರೆ ತನ್ನ ಸೇವೆಯನ್ನು ನೀಡುತ್ತಿದ್ದು, ಕಾಲಕಾಲಕ್ಕೆ ದೇಶದ ಪ್ರಮುಖ ವೈದ್ಯಕೀಯ ತಜ್ಞರ ಮೂಲಕ ಜನರಿಗೆ ಚಿಕಿತ್ಸೆ ನೀಡಲಾಗಿದೆ. 7 ಲಕ್ಷ ಫಲಾನುಭವಿಗಳ ಈ ಪಯಣವು ಯಾವುದೇ ವಿರಾಮವಿಲ್ಲದೆ ಮುಂದುವರಿಯಲಿದೆ ಎಂದು ಸಚಿವರು ಹೇಳಿದರು.
ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್, ಪಂಚಾಯತ್ ರಾಜ್ ಸಚಿವ ಶ್ರೀ ವೀರೇಂದ್ರ ಕನ್ವರ್, ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಶ್ರೀ ಸತ್ಪಾಲ್ ಸತ್ತಿ, ಚಿಂತಪೂರ್ಣಿ ಶಾಸಕ ಶ್ರೀ ಬಲ್ಬೀರ್ ಸಿಂಗ್, ನಹಾನ್ ಶಾಸಕ ಶ್ರೀ ರಾಜೀವ್ ಬಿಂದಾಲ್ ಮತ್ತಿತರರು ಸಂಸದ ಸಂಚಾರಿ ಆರೋಗ್ಯ ಸೇವೆಯು ನಾಲ್ಕು ವರ್ಷ ಪೂರ್ಣಗೊಳಿಸಿದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಚ್‌ಪಿಎಸ್‌ಐಡಿಸಿ ಉಪಾಧ್ಯಕ್ಷ ಪ್ರೊ.ರಾಮ್‌ಕುಮಾರ್‌ ಸಮಾರಂಭದ ವಿಶೇಷ ಅತಿಥಿಯಾಗಿದ್ದರು
.

***



(Release ID: 1817364) Visitor Counter : 136