ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ತಂತ್ರಜ್ಞಾನದಿಂದ ಭ್ರಷ್ಟಾಚಾರ ಮುಕ್ತ ಮತ್ತು ಸೋರಿಕೆ ಮುಕ್ತ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯ: ಶ್ರೀ ರಾಜೀವ್ ಚಂದ್ರಶೇಖರ್.
ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ಇ-ಕುಂದುಕೊರತೆ ಪೋರ್ಟಲ್ ಗೆ ಚಾಲನೆ ನೀಡಿದ ಮಾನ್ಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು
Posted On:
11 APR 2022 6:48PM by PIB Bengaluru
ನಮ್ಮ ದೇಶ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಆದರೆ ನಮ್ಮ ಸಾಮರ್ಥ್ಯಕ್ಕೆ ಹೋಲಿಸಿದರೆ ಸದಾ ನಾವು ಕಡಿಮೆ ಪ್ರದರ್ಶನ ನೀಡಿದ್ದೇವೆ, ಇದು ಸಾಮಾನ್ಯವಾಗಿ ಚರ್ಚೆಯಾಗುತ್ತಿರುತ್ತದೆ. ಆದರೆ ನಾವು ಇದನ್ನು 2020-21ನೇ ಸಾಲಿಗೆ ತ್ವರಿತವಾಗಿ ತಿರುಗಿಸಿ ನೋಡಿದರೆ, ಭಾರತದ ಬಗ್ಗೆ ಅದರ ತಲೆಯ ಮೇಲೆ ಸುತ್ತುತ್ತಿರುವ ಹಳೆಯ ನಿರೂಪಣೆಗಳ ಬದಲಾಗಿ, ತಂತ್ರಜ್ಞಾನವು ಹೇಗೆ ಬದಲಾಗಿದೆ ಎಂಬುದನ್ನು ನಾವು ಕಾಣಬಹುದು ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಬೆಂಗಳೂರಿನಲ್ಲಿಂದು ಹೇಳಿದರು.
ಬೆಂಗಳೂರಿನ ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಉಚ್ಚನ್ಯಾಯಾಲಯದಲ್ಲಿ ಕಾನೂನು ವೃತ್ತಿಪರರಿಗೆ ತ್ವರಿತ ನ್ಯಾಯದಾನದಲ್ಲಿ ತಂತ್ರಜ್ಞಾನ ಬಳಕೆ ಎಂಬ ವಿಷಯದ ಕುರಿತು ಪ್ರಧಾನ ಭಾಷಣ ಮಾಡಿದ ಶ್ರೀ ರಾಜೀವ್ ಚಂದ್ರಶೇಖರ್, ಪ್ರಜಾಪ್ರಭುತ್ವ ಎಂದರೆ ಸೋರಿಕೆ ಮತ್ತು ಸೋರುತ್ತಿರುವ ಸರ್ಕಾರಗಳನ್ನು ಸೂಚಿಸುತ್ತವೆ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು . ಆದರೆ ಕಳೆದ 6 ವರ್ಷಗಳಲ್ಲಿ ಪ್ರಸ್ತುತ ಸರ್ಕಾರವು ಸಂಪೂರ್ಣವಾಗಿ ತಂತ್ರಜ್ಞಾನದ ಆಧಾರದ ಮೇಲೆ ಒಂದು ಚೌಕಟ್ಟನ್ನು ರೂಪಿಸಿದ್ದು, ಅದು ಫಲಾನುಭವಿಯ ಹೆಸರಿನಲ್ಲಿ ಬಿಡುಗಡೆಯಾದ ಪ್ರತಿ ಪೈಸೆಯನ್ನೂ , ಯಾವುದೇ ವಿಳಂಬವಿಲ್ಲದೆ ಅಥವಾ ಯಾವುದೇ ಸೋರಿಕೆಯಿಲ್ಲದೆ ನೇರವಾಗಿ ಅವರ ಖಾತೆಯನ್ನು ತಲುಪಿಸುತ್ತಿದೆ ಎಂದರು.
ಪ್ರಜಾಪ್ರಭುತ್ವಗಳೂ ಸೋರಿಕೆ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತವಾಗಬಹುದು ಎಂಬುದನ್ನು ತಂತ್ರಜ್ಞಾನವು ಸಾಬೀತುಪಡಿಸಿದೆ. ವಿಶ್ವದ ಬೃಹತ್ ಲಿಖಿತ ಸಂವಿಧಾನದಲ್ಲಿ ಸಮಗ್ರವಾಗಿ ವ್ಯಾಖ್ಯಾನಿಸಲಾದ ಕಾನೂನಿನ ನಿಯಮದಿಂದ ಆಡಳಿತ ನಡೆಸುತಿರುವ ಭಾರತದಲ್ಲಿ, ನ್ಯಾಯದಾನ ಒಂದು ಸುದೀರ್ಘ ಪ್ರಕ್ರಿಯೆಯಾಗಿದೆ ಮತ್ತು ಈ ಕಾರಣದಿಂದಾಗಿಯೇ ನ್ಯಾಯದಾನದ ವಿಳಂಬ, ನ್ಯಾಯದ ನಿರಾಕರಣೆ' ಎಂಬ ಪದಗುಚ್ಛದ ರಚನೆಗೆ ಕಾರಣ ಎಂದು ತಾವು ಭಾವಿಸುವುದಾಗಿ ಅವರು ಹೇಳಿದರು.
ಪರೋಕ್ಷ ತೆರಿಗೆಗಳ ಇತಿಹಾಸದಲ್ಲಿ ಏಕೈಕ ಅತಿದೊಡ್ಡ ಸುಧಾರಣೆಯಾದ ಜಿಎಸ್ಟಿ, ಕಪ್ಪು ಆರ್ಥಿಕತೆಯ ಕಾರಣದಿಂದಾಗಿ ಭಾರತದಲ್ಲಿ ತೆರಿಗೆಗಳಿಂದ ಬರುವ ಆದಾಯವು ಹೆಚ್ಚಾಗಲು ಸಾಧ್ಯವಿಲ್ಲ ಎಂಬ ಮತ್ತೊಂದು ಹಳೆಯ ಅಪವಾದವನ್ನು ಹೇಗೆ ಛಿದ್ರಗೊಳಿಸಿತು ಎಂಬುದರ ಬಗ್ಗೆಯೂ ಅವರು ಉಲ್ಲೇಖಿಸಿದರು. ಇತ್ತೀಚಿನ ಅಂಕಿಅಂಶಗಳು ಜಿಎಸ್ಟಿ ಸಂಗ್ರಹದಲ್ಲಿ ಶೇ.34ರಷ್ಟು ಹೆಚ್ಚಳವಾಗಿರುವುದನ್ನು ತೋರಿಸುತ್ತವೆ, 2020-21ರಲ್ಲಿ ಸಂಗ್ರಹವಾದ 22 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ 2021-22ರಲ್ಲಿ 27 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದರು.
ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮಿಷಿನ್ ಲರ್ನಿಂಗ್ ಸೇರಿದಂತೆ ಇತ್ತೀಚಿನ ಉದಯೋನ್ಮುಖ ತಂತ್ರಜ್ಞಾನಗಳನ್ನು ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಮತ್ತು ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳನ್ನು ತಗ್ಗಿಸಲು ಬಳಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ಇರುವ ಮತ್ತೊಂದು ಹಳೆಯ ಅಪವಾದವನ್ನೂ ತೊಡೆದುಹಾಕಬಹುದು ಎಂದು ಅವರು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಮತ್ತು ಕೋವಿಡ್ ಪ್ರೇರಿತ ಲಾಕ್ ಡೌನ್ ಗಳ ಸಮಯದಲ್ಲಿ ಎದುರಾಗಿದ್ದ ಸವಾಲುಗಳನ್ನು ಎದುರಿಸಲು ಕರ್ನಾಟಕ ಹೈಕೋರ್ಟ್ ಪ್ರಯತ್ನಗಳನ್ನು ಉಲ್ಲೇಖಿಸಿದ ಸಚಿವರು, ಸಂಕಷ್ಟದ ನಡುವೆಯೂ ನ್ಯಾಯದಾನವನ್ನು ಖಚಿತಪಡಿಸಿಕೊಳ್ಳಲು ತ್ವರಿತವಾಗಿ ವರ್ಚುವಲ್ ವಿಚಾರಣೆಗಳಿಗೆ ಬದಲಾಗುವ ಮೂಲಕ ತಂತ್ರಜ್ಞಾನದ ಸಮಯೋಚಿತ ಬಳಕೆ ಮತ್ತು ಅಳವಡಿಕೆ ಮಾಡಿಕೊಂಡಿದ್ದನ್ನು ಅವರು ಶ್ಲಾಘಿಸಿದರು.
ಗೌರವಾನ್ವಿತ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಗೌರವಾನ್ವಿತ ನ್ಯಾಯಮೂರ್ತಿ ಅಲೋಕ್ ಆರದೆ ಅವರು ಸಾಂಕ್ರಾಮಿಕ ರೋಗದ ಸಮಯದಲ್ಲಿ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ನ್ಯಾಯಾಂಗವು ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು. ನ್ಯಾಯಾಂಗವು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ನ್ಯಾಯದಾನ ಮಾಡುವ ಪ್ರಕ್ರಿಯೆಯಲ್ಲಿ ಅದನ್ನು ಸಮಗ್ರವಾಗಿ ಬಳಸಿತೆಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸರ್ಕಾರದ ಮಾನ್ಯ ಸಣ್ಣ ನೀರಾವರಿ, ಕಾನೂನು, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಪರಿಸ್ಥಿತಿಗೆ ಅನುಗುಣವಾಗಿ ನಾವು ಬದಲಾಗಬೇಕಾಗಿದೆ ಎಂದು ಹೇಳಿದರು. ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ಲಭ್ಯವಿರುವ ಜ್ಞಾನವನ್ನು ನಾವು ಬಳಸಿಕೊಳ್ಳಬೇಕು ಮತ್ತು ವಿಶೇಷವಾಗಿ ನ್ಯಾಯಾಂಗದಲ್ಲಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಬೇಕು. ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಮತ್ತು ಕಾನೂನಿನೊಂದಿಗೆ ಅದರ ಸಂಯೋಗದ ಬಗ್ಗೆ ಇತ್ತೀಚಿನ ಮಾಹಿತಿ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಹೇಳಿದರು. ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವುದು ಮೊದಲ ಆದ್ಯತೆಯಾಗಬೇಕು ಎಂದೂ ಅವರು ಹೇಳಿದರು.
ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ಶ್ರೀ ವಿವೇಕ್ ಸುಬ್ಬಾರೆಡ್ಡಿ ತಮ್ಮ ಭಾಷಣದಲ್ಲಿ ತಾಂತ್ರಿಕ ಸೌಲಭ್ಯದ ಕೊರತೆಯಿಂದಾಗಿ ವಕೀಲರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿ, ಸಾಧ್ಯವಿರುವ ಕಡೆಗಳಲ್ಲೆಲ್ಲಾ ನ್ಯಾಯಾಲಯಗಳಲ್ಲಿ ವಕೀಲರಿಗೆ ತಂತ್ರಜ್ಞಾನ ಬಳಸಿ ಕೆಲಸ ಮಾಡಲು ಸ್ಥಳಾವಕಾಶವನ್ನು ಒದಗಿಸುವಂತೆ ವಿನಂತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಸ್ವಾಗತ ಭಾಷಣ ಮಾಡಿದರು.
***
(Release ID: 1815799)
Visitor Counter : 165