ಪ್ರಧಾನ ಮಂತ್ರಿಯವರ ಕಛೇರಿ
ಪರೀಕ್ಷಾ ಪೇ ಚರ್ಚಾ 2022 ರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜೊತೆ ಪ್ರಧಾನ ಮಂತ್ರಿ ಅವರ ಸಂವಾದದ ಕನ್ನಡ ಅವತರಣಿಕೆ.
Posted On:
01 APR 2022 9:39PM by PIB Bengaluru
ನಿಮ್ಮೆಲ್ಲರಿಗೂ ನಮಸ್ಕಾರ!. ಇದು ನನಗೆ ಬಹಳ ಇಷ್ಟವಾದ ಕಾರ್ಯಕ್ರಮ, ಆದರೆ ಕೊರೊನಾ ಕಾರಣದಿಂದ ನಿಮ್ಮನ್ನು ಭೇಟಿಯಾಗಲು ನನಗೆ ಸಾಧ್ಯವಾಗಲಿಲ್ಲ. ಇಂದಿನ ಕಾರ್ಯಕ್ರಮ ನನಗೆ ಬಹಳ ವಿಶೇಷವಾದುದು. ಯಾಕೆಂದರೆ ನಿಮ್ಮನ್ನು ಬಹಳ ದೀರ್ಘ ಅಂತರದ ಬಳಿಕ ಭೇಟಿಯಾಗುವ ಅವಕಾಶ ನನಗೆ ಲಭಿಸಿದೆ. ನಿಮಗೆ ಪರೀಕ್ಷೆಯ ಬಗ್ಗೆ ಯಾವುದೇ ಭಯ, ಆತಂಕ ಇದೆ ಎಂದು ನನಗನಿಸುವುದಿಲ್ಲ. ನಾನು ಹೇಳಿದ್ದು ಸರಿಯಲ್ಲವೇ ?. ಒಂದು ವೇಳೆ ಅದಿದ್ದರೆ ನಿಮ್ಮ ಪೋಷಕರಿಗೆ ನಿಮ್ಮ ಸಾಧನೆಯ ಬಗ್ಗೆ ಚಿಂತೆ ಇರಬಹುದು. ಹೇಳಿ ಯಾರು ಚಿಂತೆಯಲ್ಲಿದ್ದಾರೆ, ನೀವೋ ನಿಮ್ಮ ಕುಟುಂಬವೋ. ಆತಂಕ ಚಿಂತೆ ಇರುವವರು ಕೈಗಳನ್ನು ಮೇಲೆತ್ತಿ. ಆಗಲಿ, ಈಗಲೂ ಆತಂಕ, ಚಿಂತೆಯಲ್ಲಿರುವ ವಿದ್ಯಾರ್ಥಿಗಳು ಇದ್ದಾರೆ, ತಮ್ಮ ಪೋಷಕರು ಚಿಂತಾಕ್ರಾಂತರಾಗಿ ಇದ್ದಾರೆ ಎಂದು ನಂಬಿರುವವರು ಇದ್ದಾರೆ. ನನಗನಿಸುತ್ತದೆ ವಿದ್ಯಾರ್ಥಿಗಳೇ ಹೆಚ್ಚು ಪಾಲು ಚಿಂತಾಕ್ರಾಂತರಾಗಿದ್ದಾರೆ ಎಂಬುದಾಗಿ. ನಾಳೆ, ಹೊಸ ವರ್ಷ ವಿಕ್ರಮ ಸಂವತ್ಸರ ಆರಂಭಗೊಳ್ಳುತ್ತದೆ. ಏಪ್ರಿಲ್ ತಿಂಗಳಿಡೀ ನಮ್ಮ ದೇಶದಲ್ಲಿ ಹಲವು ಹಬ್ಬಗಳಿವೆ. ಬರಲಿರುವ ಎಲ್ಲಾ ಹಬ್ಬಗಳಿಗೂ ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ. ಹಬ್ಬಗಳ ಮಧ್ಯದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಮತ್ತು ಅದರಿಂದಾಗಿ ಮಕ್ಕಳಿಗೆ ಹಬ್ಬಗಳ ಸಂಭ್ರಮವನ್ನು ಆಚರಿಸಲು ಆಗುವುದಿಲ್ಲ. ಪರೀಕ್ಷೆಗಳೇ ಹಬ್ಬಗಳಾಗಿ ಬದಲಾದರೆ? ಹಬ್ಬಗಳು ಬಹಳ ವರ್ಣರಂಜಿತವಾಗುತ್ತವೆ. ಆದುದರಿಂದ ಇಂದಿನ ಕಾರ್ಯಕ್ರಮದ ಗಮನ ಪರೀಕ್ಷೆಗಳ ಕಾಲದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುವುದು ಹೇಗೆ, ಅವುಗಳನ್ನು ವರ್ಣರಂಜಿತವಾಗಿಸುವುದು ಹೇಗೆ ಮತ್ತು ನಾವು ಪರೀಕ್ಷೆಗಳನ್ನು ಉತ್ಸಾಹದಿಂದ ಹೇಗೆ ಎದುರಿಸಬೇಕು ಎಂಬುದಾಗಿದೆ. ಇಂದು ನಾವು ಈ ವಿಷಯಗಳನ್ನು ಚರ್ಚಿಸಲಿದ್ದೇವೆ. ಹಲವು ಸ್ನೇಹಿತರು ನನಗೆ ಪ್ರಶ್ನೆಗಳನ್ನು ಕಳುಹಿಸಿದ್ದಾರೆ. ಕೆಲವರು ಆಡಿಯೋಗಳನ್ನು ಮತ್ತು ವೀಡಿಯೋ ಸಂದೇಶಗಳನ್ನೂ ನನಗೆ ಕಳುಹಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಮಾತನಾಡಿ ಮಾಧ್ಯಮ ಪ್ರತಿನಿಧಿಗಳೂ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನಿಗದಿತ ಸಮಯ ಮಿತಿಯಲ್ಲಿ ನಾನು ಸಾಧ್ಯವಾದಷ್ಟು ಪ್ರಶ್ನೆಗಳಿಗೆ ಉತ್ತರಿಸಲು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ. ಈ ಸಾರಿ ನಾನು ಸ್ವಲ್ಪ ಭಿನ್ನವಾಗಿ ಪ್ರಯತ್ನಿಸುತ್ತೇನೆ. ಕಳೆದ ಐದು ಆವೃತ್ತಿಗಳಲ್ಲಿ ಕೆಲವರು ತಮಗೆ ತಮ್ಮ ವಿಚಾರವನ್ನು ಹಂಚಿಕೊಳ್ಳಲು ಅವಕಾಶ ಸಿಗಲಿಲ್ಲ ಎಂದು ದೂರಿರುವುದು ನಮ್ಮ ಅನುಭವಕ್ಕೆ ಬಂದಿದೆ. ಇಂದು ನಾವು ಸಮಯ ಮಿತಿಯಲ್ಲಿ ಸಾಧ್ಯವಾದಷ್ಟನ್ನು ಚರ್ಚಿಸಲು ಬಯಸುತ್ತೇವೆ. ನನಗೆ ಸಮಯ ಸಿಕ್ಕಿದಾಗೆಲ್ಲ, ನಾನು ಉಳಿದ ಪ್ರಶ್ನೆಗಳಿಗೆ ಆಡಿಯೋ, ವೀಡಿಯೋ ಅಥವಾ ನಮೋ ಆಪ್ ನಲ್ಲಿ ಬರಹದ ಪಠ್ಯಗಳ ಮೂಲಕ ಉತ್ತರಿಸಲು ಪ್ರಯತ್ನಿಸುತ್ತೇನೆ. ಮೈಕ್ರೋ ಸೈಟ್ ನಿಂದಾಗಿ ನಮೋ ಆಪ್ ನಲ್ಲಿ ಈ ಬಾರಿ ಹೊಸ ಪ್ರಯೋಗವನ್ನು ಮಾಡಲಾಗಿದೆ. ನೀವದಕ್ಕೆ ಭೇಟಿ ನೀಡಬಹುದು ಮತ್ತು ಅದರ ಬಳಕೆ ಮಾಡಿಕೊಳ್ಳಬಹುದು. ಹಾಗಾಗಿ, ನಾವೀಗ ಕಾರ್ಯಕ್ರಮವನ್ನು ಆರಂಭ ಮಾಡೋಣ. ಮೊದಲು ಕೇಳುವವರು ಯಾರು?.
ನಿರೂಪಕರು: ಧನ್ಯವಾದಗಳು ಗೌರವಾನ್ವಿತ ಪ್ರಧಾನ ಮಂತ್ರಿ ಸರ್. ನಿಮ್ಮ ಪ್ರೇರಣಾದಾಯಕ ಮತ್ತು ಮಾಹಿತಿ ಪೂರ್ಣ ಮಾತುಗಳು ಸದಾ ಧನಾತ್ಮಕ ಶಕ್ತಿಯನ್ನು ಮತ್ತು ಆತ್ಮ ವಿಶ್ವಾಸವನ್ನು ತುಂಬುತ್ತವೆ. ನಾವೆಲ್ಲರೂ ನಿಮ್ಮ ವಿಸ್ತಾರವಾದ ಅನುಭವ ಮತ್ತು ಮಾಹಿತಿ ಪೂರ್ಣ ಸಲಹೆಗಳಿಗಾಗಿ ಕಾತರದಿಂದ ಕಾಯುತ್ತಿದೇವೆ. ಸರ್, ನಾವು ಈ ಕಾರ್ಯಕ್ರಮವನ್ನು ನಿಮ್ಮ ಆಶೀರ್ವಾದದೊಂದಿಗೆ ಮತ್ತು ಅನುಮತಿಯೊಂದಿಗೆ ಆರಂಭಿಸಲು ಬಯಸುತ್ತೇವೆ. ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ಚಾರಿತ್ರಿಕ ನಗರಿ ಮತ್ತು ಭಾರತದ ರಾಜಧಾನಿ ದಿಲ್ಲಿಯ ವಿವೇಕಾನಂದ ಶಾಲೆಯ 12 ನೇ ತರಗತಿಯ ವಿದ್ಯಾರ್ಥಿ ಖುಷಿ ಜೈನ್ ತಮಗೆ ಪ್ರಶ್ನೆಯನ್ನು ಕೇಳಲಿಚ್ಚಿಸುತ್ತಾರೆ. ಖುಷಿ, ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ.
ಕಾರ್ಯಕ್ರಮ ಖುಷಿಯೊಂದಿಗೆ ಆರಂಭವಾಗುತ್ತಿರುವುದು ಉತ್ತಮ ಸಂಗತಿ. ನಾವು ಕೂಡಾ ಪರೀಕ್ಷೆ ಮುಗಿಯುವವರೆಗೆ ಅಲ್ಲಿ ಸಂತೋಷದ ವಾತಾವರಣ ಇರಬೇಕು ಎಂದು ಬಯಸುತ್ತೇವೆ.
ಖುಷಿ: ಗೌರವಾನ್ವಿತ ಪ್ರಧಾನ ಮಂತ್ರಿ, ಸರ್, ನನ್ನ ಹೆಸರು ಖುಷಿ ಜೈನ್. ನಾನು ದಿಲ್ಲಿಯ ಆನಂದ ವಿಹಾರದ ವಿವೇಕಾನಂದ ಶಾಲೆಯ ಹನ್ನೆರಡನೇ ತರಗತಿ ವಿದ್ಯಾರ್ಥಿ. ಸರ್, ನಾವು ಆತಂಕದ ಸ್ಥಿತಿಯಲ್ಲಿರುವಾಗ ನಾವು ನಮ್ಮ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು?. ತಮಗೆ ಧನ್ಯವಾದಗಳು.
ನಿರೂಪಕರು: ಧನ್ಯವಾದಗಳು, ಖುಷಿ. ಸರ್ ಇನ್ನೋರ್ವ ವಿದ್ಯಾರ್ಥಿ, ಎ.ಶ್ರೀಧರ ಶರ್ಮಾ, ಶ್ರೀಮಂತ ಸಾಕ್ಷರತಾ ಪರಂಪರೆ ಇರುವ ಛತ್ತೀಸ್ ಗಢದ ಬಿಲಾಸ್ಪುರದವರು, ಅವರು ಕೂಡಾ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರು ಕೂಡಾ ಪ್ರಧಾನ ಮಂತ್ರಿ ಅವರೆದುರು ತಮ್ಮ ಪ್ರಶ್ನೆಯನ್ನು ಮಂಡಿಸಲು ಕಾತರದಿಂದಿದ್ದಾರೆ. ಶ್ರೀಧರ, ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ
ಎ.ಶ್ರೀಧರ ಶರ್ಮಾ: ನಮಸ್ಕಾರ ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಗೆ. ನಾನು ಎ.ಶ್ರೀಧರ ಶರ್ಮಾ, ಛತ್ತೀಸ್ ಗಢದ ಬಿಲಾಸ್ಪುರದ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇ ಹೈಯರ್ ಸೆಕೆಂಡರಿ ಸ್ಕೂಲ್ ನಂಬರ್ 1, ಇದರ ಕಲಾ ವಿಭಾಗದ ಹನ್ನೆರಡನೇ ತರಗತಿಯ ವಿದ್ಯಾರ್ಥಿ. ಸರ್, ನಾನು ಪರೀಕ್ಷಾ ಒತ್ತಡವನ್ನು ನಿಭಾಯಿಸುವುದು ಹೇಗೆ? ಉತ್ತಮ ಅಂಕಗಳು ಮತ್ತು ಗ್ರೇಡ್ ಗಳು ನನಗೆ ದೊರೆಯದಿದ್ದರೆ ಏನಾಗುತ್ತದೆ ಮತ್ತು ನಾನು ನನ್ನ ಕುಟುಂಬದವರ ನಿರಾಸೆಯನ್ನು ಹೇಗೆ ಎದುರಿಸಲಿ?
ನಿರೂಪಕರು:ಧನ್ಯವಾದಗಳು ಶ್ರೀಧರ. ಸಂತ ಮಹಾತ್ಮಾ ಗಾಂಧೀಜಿ ಅವರು ತಮ್ಮ ಸತ್ಯಾಗ್ರಹ ಚಳವಳಿಯನ್ನು ಆರಂಭ ಮಾಡಿದ ಸಾಬರಮತಿ ನೆಲದಿಂದ ನಾನು ಕೇನಿ ಪಟೇಲ್ ಅವರನ್ನು ಆಹ್ವಾನಿಸುತ್ತೇನೆ. ವಡೋದರದ ಹತ್ತನೇ ತರಗತಿ ವಿದ್ಯಾರ್ಥಿಯಾದ ಅವರು ತಾನು ಎದುರಿಸುತ್ತಿರುವ ಇಂತಹದೇ ಸವಾಲಿನ ಬಗ್ಗೆ ತಮ್ಮ ಮಾರ್ಗದರ್ಶನವನ್ನು ಕೋರುತ್ತಿದ್ದಾರೆ.
ಕೇನಿ ಪಟೇಲ್: ಪ್ರಧಾನ ಮಂತ್ರಿ ಸರ್ ನಮಸ್ಕಾರಗಳು. ನನ್ನ ಹೆಸರು ಕೇನಿ ಪಟೇಲ್. ನಾನು ಗುಜರಾತಿನ ವಡೋದರದ ಟ್ರೀ ಹೌಸ್ ಹೈಸ್ಕೂಲಿನ ವಿದ್ಯಾರ್ಥಿ. ಮತ್ತು ಹತ್ತನೆ ತರಗತಿಯಲ್ಲಿದ್ದೇನೆ. ನನ್ನ ಪ್ರಶ್ನೆ ಏನೆಂದರೆ ಮುಂಚಿತವಾಗಿಯೇ ಇಡೀ ಪಠ್ಯಕ್ರಮವನ್ನು ಸೂಕ್ತ ಪುನರ್ಮನನದೊಂದಿಗೆ ಪೂರ್ಣಗೊಳಿಸುವ ಒತ್ತಡವನ್ನು ನಿಭಾಯಿಸುವುದು ಹೇಗೆ? ಮತ್ತು ಪರೀಕ್ಷಾ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡುವುದು ಹಾಗು ವಿಶ್ರಾಂತಿ ಪಡೆಯುವುದು ಹೇಗೆ. ಧನ್ಯವಾದಗಳು ಸರ್.
ನಿರೂಪಕರು: ಧನ್ಯವಾದಗಳು ಕೇನಿ. ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ಖುಷಿ, ಶ್ರೀಧರ ಶರ್ಮಾ ಮತ್ತು ಕೇನಿ ಪಟೇಲ್ ಪರೀಕ್ಷಾ ಒತ್ತಡದಿಂದ ಕಂಗಾಲಾಗಿದ್ದಾರೆ. ದೇಶಾದ್ಯಂತ ಇತರ ಹಲವಾರು ವಿದ್ಯಾರ್ಥಿಗಳೂ ಪರೀಕ್ಷಾ ಒತ್ತಡಕ್ಕೆ ಸಂಬಂಧಿಸಿ ಇಂತಹದೇ ಪ್ರಶ್ನೆಗಳನ್ನು ಕೇಳಿದ್ದಾರೆ. ಬಹುತೇಕ ಎಲ್ಲಾ ವಿದ್ಯಾರ್ಥಿಗಳೂ ಪರೀಕ್ಷಾ ಒತ್ತಡದಿಂದ ಬಾಧಿತರಾಗಿದ್ದಾರೆ. ಮತ್ತು ಅವರು ನಿಮ್ಮ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದಾರೆ. ಈಗ ಗೌರವಾನ್ವಿತ ಪ್ರಧಾನ ಮಂತ್ರಿ ಅವರು!.
ಪ್ರಧಾನ ಮಂತ್ರಿ: ನೀವು ಏಕಕಾಲಕ್ಕೆ ಹಲವಾರು ಪ್ರಶೆಗಳನ್ನು ಕೇಳಿರುವಿರಿ, ಇದರಿಂದ ನಾನು ಗಾಬರಿಯಾದೆ. ನಿಮ್ಮ ಮನಸ್ಸಿನಲ್ಲಿ ಯಾಕೆ ಭಯ ಇಟ್ಟುಕೊಳ್ಳುತ್ತೀರಿ ಎಂದು ನಾನು ಕೇಳಬಯಸುತ್ತೇನೆ. ನೀವು ಇದೇ ಮೊದಲ ಬಾರಿ ಪರೀಕ್ಷೆ ಕೊಡಲು ಹೋಗುತ್ತಿರುವುದೋ?. ಇದೇ ಮೊದಲ ಬಾರಿಗೆ ಪರೀಕ್ಷೆಗೆ ಕೂಡಲು ಹೋಗುತ್ತಿರುವ ಯಾರೊಬ್ಬರೂ ನಿಮ್ಮಲ್ಲಿಲ್ಲ. ನೀವೆಲ್ಲರೂ ಅನೇಕ ಪರೀಕ್ಷೆಗಳಿಗೆ ಹೋಗಿದ್ದೀರಿ. ಈ ರೀತಿಯಲ್ಲಿ ನೀವು ನಿಮ್ಮ ಈ ಹಂತದ ಪರೀಕ್ಷೆಯ ಕೊನೆಯನ್ನು ತಲುಪಿದ್ದೀರಿ. ಇಂತಹ ಬಹಳ ದೊಡ್ಡ ಸಮುದ್ರವನ್ನು ದಾಟಿದ ಬಳಿಕ ದಡದಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗುವ ಭಯ ಇಲ್ಲಿ ಹೊಂದಿಕೆಯಾಗುವುದಿಲ್ಲ. ಮೊದಲಿಗೆ, ಪರೀಕ್ಷೆ ಎಂಬುದು ಜೀವನದ ಸಹಜ ಭಾಗ ಎಂಬುದನ್ನು ನಿಮ್ಮ ಮನಸ್ಸಿಗೆ ಸ್ಪಷ್ಟ ಮಾಡಿ. ನಮ್ಮ ಬೆಳವಣಿಗೆಯ, ಅಭಿವೃದ್ಧಿಯ ಮಾರ್ಗದಲ್ಲಿ ಇವೆಲ್ಲ ಬಹಳ ಸಣ್ಣ ಹಂತಗಳು. ಮತ್ತು ಅವುಗಳ ಮೂಲಕ ನಾವು ಸಾಗಲೇ ಬೇಕು. ಮತ್ತು ನೀವು ಅನೇಕ ಪರೀಕ್ಷೆಗಳನ್ನು ಬರೆದಿರುವುದರಿಂದ ಆ ಹಂತವನ್ನು ದಾಟಿದ್ದೀರಿ. ಈ ರೀತಿಯಲ್ಲಿ ನೀವು “ಎಕ್ಸಾಂ ಪ್ರೂಫ್’ ಆಗಿದ್ದೀರಿ. ಮತ್ತು ಈ ನಂಬಿಕೆ ನಿಮಗಿದ್ದರೆ, ಆಗ ನಿಮ್ಮ ಅನುಭವಗಳು ಭವಿಷ್ಯದ ಯಾವುದೇ ಪರೀಕ್ಷೆಗೆ ನಿಮಗೆ ಶಕ್ತಿಯನ್ನು ಒದಗಿಸುತ್ತವೆ. ನೀವು ಹಾದು ಬಂದಿರುವ ಅನುಭವಗಳನ್ನು ಕ್ಷುಲ್ಲಕ ಎಂದು ಪರಿಗಣಿಸಬೇಡಿ. ಎರಡನೆಯದಾಗಿ ಆತಂಕಕ್ಕೆ ಕಾರಣ ತಯಾರಿಯ ಕೊರತೆ ಅಲ್ಲವೇ?. ನನ್ನಲ್ಲಿ ನಿಮಗೆ ಸಲಹೆಗಳಿವೆ. ಪರೀಕ್ಷೆಗೆ ಬಹಳ ಸಮಯ ಇಲ್ಲದೇ ಇರುವುದರಿಂದ ನೀವು ಈ ಹೊರೆಯೊಂದಿಗೆ ಬದುಕಲು ಇಚ್ಛಿಸುತ್ತೀರೋ ಅಥವಾ ನಿಮ್ಮ ಪೂರ್ವ ತಯಾರಿಯ ವಿಶ್ವಾಸದೊಂದಿಗೆ ಮುನ್ನಡೆಯಲು ಬಯಸುತ್ತೀರೋ. ನೀವು ಕೆಲವು ಸಂಗತಿಗಳನ್ನು ಬಿಟ್ಟಿರಬಹುದು. ಒಂದು ಅಥವಾ ಇನ್ನೊಂದು ವಿಷಯದಲ್ಲಿ ನಿಮ್ಮ ಪ್ರಯತ್ನ ಸಾಕಷ್ಟು ಆಗಿರದಿದ್ದರೆ ಏನಾಗುತ್ತದೆ?. ಆದರೆ ನೀವು ತಯಾರಿ ಮಾಡಿರುವುದರಲ್ಲಿ ನಿಮಗೆ ಪೂರ್ಣ ಭರವಸೆ, ಆತ್ಮವಿಶ್ವಾಸ ಇರಬೇಕು. ಅದು ಇತರ ಸಂಗತಿಗಳನ್ನು ಬದಿಗೊತ್ತುತ್ತದೆ ಮತ್ತು ನಿಮಗೆ ಅದನ್ನು ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಆದುದರಿಂದ ನೀವು ಯಾವುದೇ ಒತ್ತಡಕ್ಕೆ ಒಳಗಾಗಬೇಡಿ ಎಂದು ನಾನು ನಿಮ್ಮನ್ನು ಕೋರುತ್ತೇನೆ. ಭಯದ ವಾತಾವರಣ ಬೆಳೆಯಲು ಬಿಡಬೇಡಿ. ನಿಮ್ಮ ಪರೀಕ್ಷಾ ಸಮಯದಲ್ಲಿಯೂ ಅದೇ ಸರಳ ದೈನಂದಿನ ಚಟುವಟಿಕೆ ಇರಲಿ. ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ನಿಮ್ಮನ್ನು ಅಸ್ತವ್ಯಸ್ತ ಮಾಡುತ್ತದೆ. ಬೇರೊಬ್ಬರು ಏನು ಮಾಡುತ್ತಿರುವರೋ, ಅದನ್ನು ಅನುಕರಿಸಲು ಹೋಗಬೇಡಿ. ಬರೇ ನಿಮ್ಮ ಸ್ನೇಹಿತ ಅನುಸರಿಸುತ್ತಿದ್ದಾನೆ ಮತ್ತು ಉತ್ತಮ ಅಂಕ ಗಳಿಸುತ್ತಿದ್ದಾನೆ ಎಂಬುದಕ್ಕಾಗಿ ನೀವು ಕೂಡಾ ಅದನ್ನು ಅನುಸರಿಸಲು ಹೋಗುತ್ತೀರಿ. ಅದನ್ನು ಮಾಡಬೇಡಿ. ನೀವು ಬಹಳ ದೀರ್ಘ ಕಾಲದಿಂದ ಏನು ಮಾಡಿಕೊಂಡು ಬಂದಿರುವಿರೋ ಅದನ್ನು ಅನುಸರಿಸಿ. ಮತ್ತು ಅದರಲ್ಲಿ ವಿಶ್ವಾಸ ಇಡಿ. ನನಗೆ ಭರವಸೆ, ವಿಶ್ವಾಸವಿದೆ-ನೀವು ಸುಸೂತ್ರವಾಗಿ, ಆರಾಮವಾಗಿ ಪರೀಕ್ಷೆಗಳನ್ನು ಹಬ್ಬದ ಮನೋಭಾವದಲ್ಲಿ ಮತ್ತು ಉತ್ಸಾಹದಿಂದ ಬರೆಯುತ್ತೀರಿ ಮತ್ತು ಯಶಸ್ಸು ಸಾಧಿಸುತ್ತೀರಿ.
ನಿರೂಪಕರು:: ಧನ್ಯವಾದಗಳು, ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಪರೀಕ್ಷೆಗಳನ್ನು ಸಹಜ ಅನುಭವ ಎಂಬುದನ್ನು ಒಪ್ಪಿಕೊಳ್ಳಲು ಕಲಿಸಿಕೊಟ್ಟಿರುವುದಕ್ಕೆ ಮತ್ತು ನಮ್ಮಲ್ಲೇ ವಿಶ್ವಾಸ ಇಡುವುದನ್ನು ಕಲಿಸಿಕೊಟ್ಟಿರುವುದಕ್ಕೆ, ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಮುಂದಿನ ಪ್ರಶ್ನೆಯು ಪರಂಪರೆಯ ಪ್ರಖ್ಯಾತ ತಾಣವಾದ ಮತ್ತು ರಾಷ್ಟ್ರೀಯ ಉದ್ಯಾನವನಗಳ ಕರ್ನಾಟಕದ ಮೈಸೂರಿನಿಂದ ಬಂದಿದೆ. ಇಲ್ಲಿಯ ಹನ್ನೊಂದನೇ ತರಗತಿಯ ತರುಣ್ ಎಂ.ಬಿ. ಅವರು ತಮ್ಮ ಸಮಸ್ಯೆಗೆ ಪರಿಹಾರ ಕೇಳುತ್ತಿದ್ದಾರೆ. ತರುಣ್, ನಿಮ್ಮ ಪ್ರಶ್ನೆ ಕೇಳಬಹುದೇ, ದಯವಿಟ್ಟು.
ತರುಣ್: ಶುಭ ಮುಂಜಾನೆ ಸರ್. ನಾನು ತರುಣ್ ಎಂ.ಬಿ. ಕರ್ನಾಟಕದ ಮೈಸೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 11 ನೇ ತರಗತಿ ಕಲಿಯುತ್ತಿದ್ದೇನೆ. ಐದನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ 2022 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಒದಗಿಸಿದುದಕ್ಕಾಗಿ ನಾನು ನನ್ನ ವಿನೀತ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದೀಜಿ ಸರ್ ಅವರಿಗೆ ನನ್ನ ಪ್ರಶ್ನೆ- ಯೂ ಟ್ಯೂಬ್, ವಾಟ್ಸ್ ಆಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಆಪ್ ಗಳಂತಹ ಗಮನ ಕೇಂದ್ರೀಕರಣಕ್ಕೆ ಅಡ್ಡಿಯಾಗುವಂತಹ ಸಂಗತಿಗಳಿರುವಾಗ ಬೆಳಿಗ್ಗೆ ಓದುವಾಗ ವಿದ್ಯಾರ್ಥಿಯೊಬ್ಬ ಓದಿನಲ್ಲಿ ಹೇಗೆ ಗಮನ ಕೇಂದ್ರೀಕರಿಸಬಹುದು. ಇದರಿಂದಾಗಿ ಆನ್ ಲೈನ್ ಮೂಲಕ ಕಲಿಕೆ ಬಹಳ ಕಷ್ಟವಾಗಿದೆ ಸರ್. ಇದಕ್ಕೇನಾದರೂ ಪರಿಹಾರ ಇದೆಯೇ? ಧನ್ಯವಾದಗಳು ಸರ್.
ನಿರೂಪಕರು:: ತರುಣ್ ನಿಮಗೆ ಧನ್ಯವಾದಗಳು. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ದಿಲ್ಲಿ ಕಂಟೋನ್ಮೆಂಟ್ ಮಂಡಳಿಯ ಸಿಲ್ವರ್ ಓಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಶಹೀದ್ ಅಲಿ ಇದೇ ವಿಷಯದಲ್ಲಿ ತಮ್ಮ ಪ್ರಶ್ನೆಯನ್ನು ಕೇಳಲು ಕಾತರದಿಂದಿದ್ದಾರೆ. ಶಹೀದ್, ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ಶಹೀದ್: ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಗೆ ನಮಸ್ಕಾರ ಸರ್, ನಾನು ಶಹೀದ್ ಅಲಿ ಮತ್ತು ನಾನು ದಿಲ್ಲಿ ಕಂಟೋನ್ಮೆಂಟ್ ಮಂಡಳಿಯ ಸಿಲ್ವರ್ ಓಕ್ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿ. ಕಳೆದ ಎರಡು ವರ್ಷಗಳಿಂದ ನಾವು ನಮ್ಮ ಕಲಿಕೆಯನ್ನು ಆನ್ ಲೈನ್ ಮಾದರಿಯಲ್ಲಿ ನಡೆಸುತ್ತಿದ್ದೇವೆ. ಅಂತರ್ಜಾಲದ ಬಳಕೆ ನಮ್ಮಲ್ಲನೇಕರನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಆನ್ ಲೈನ್ ಆಟಗಳತ್ತ ಆಕರ್ಷಿಸಿದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ನಾವೇನು ಮಾಡಬೇಕು?. ದಯವಿಟ್ಟು ನಮಗೆ ಮಾರ್ಗದರ್ಶನ ಮಾಡಿ.
ನಿರೂಪಕರು:: ಧನ್ಯವಾದಗಳು, ಶಹೀದ್. ಗೌರವಾನ್ವಿತ ಸರ್, ಕೇರಳದ ತಿರುವನಂತಪುರಂನಿಂದ ಹತ್ತನೇ ತರಗತಿ ವಿದ್ಯಾರ್ಥಿ ಕೀರ್ತನಾ ನಾಯರ್ ಕೂಡಾ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಮತ್ತು ನಿಮ್ಮಿಂದ ಮಾರ್ಗದರ್ಶನವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಸರ್, ಕೀರ್ತನಾ ಪ್ರಶ್ನೆ ಟೈಮ್ಸ್ ನೌ ನಿಂದ ಈಗ ಬಂದಿದೆ. ಕೀರ್ತನಾ ನಿಮ್ಮ ಪ್ರಶ್ನೆ ಕೇಳಿ.
ಕೀರ್ತನಾ: ಹಾಯ್, ನಾನು ಕೇರಳದ ತಿರುವನಂತಪುರಂನ 10 ನೇ ತರಗತಿ ವಿದ್ಯಾರ್ಥಿ. ನಮಗೆಲ್ಲ ತಿಳಿದಿರುವಂತೆ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ನಮ್ಮ ತರಗತಿಗಳು ಆನ್ ಲೈನ್ ಗೆ ವರ್ಗಾವಣೆಯಾಗಿವೆ. ನಮ್ಮ ಮನೆಯಲ್ಲಿ ಮೊಬೈಲ್, ಸಾಮಾಜಿಕ ಮಾಧ್ಯಮಗಳು ಇತ್ಯಾದಿಗಳೆಂದು ಬಹಳಷ್ಟು ಗಮನವನ್ನು ಬೇರೆಡೆ ಸೆಳೆಯುವ ವಸ್ತುಗಳಿವೆ. ಸರ್, ನನ್ನ ಪ್ರಶ್ನೆ ನಾವು ಆನ್ ಲೈನ್ ತರಗತಿಗಳ ಮೂಲಕ ಕಲಿಕೆಯನ್ನು ಹೇಗೆ ಸುಧಾರಿಸಬಹುದು?.
ನಿರೂಪಕರು:: ಧನ್ಯವಾದಗಳು ಕೀರ್ತನಾ. ಗೌರವಾನ್ವಿತ ಸರ್, ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ಮಾತ್ರ ಸವಾಲೊಡ್ಡಿದ್ದಲ್ಲ, ಶಿಕ್ಷಕರನ್ನೂ ಕಾಡಿದೆ. ಕೃಷ್ಣಗಿರಿಯ ಶಿಕ್ಷಕ ಶ್ರೀ ಚಂದಚೂಡೇಶ್ವರನ್ ಎಂ ನಿಮ್ಮಿಂದ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನಿರೀಕ್ಷಿಸುತ್ತಿದ್ದಾರೆ. ಸರ್, ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ಚಂದಚೂಡೇಶ್ವರನ್ ಎಂ: ನಮಸ್ತೆ, ಗೌರವಾನ್ವಿತ ಪ್ರಧಾನ ಮಂತ್ರಿ ಸರ್. ನಾನು ತಮಿಳುನಾಡಿನ ಹೊಸೂರಿನ ಅಶೋಕ್ ಲೈಲ್ಯಾಂಡ್ ಶಾಲೆಯಿಂದ ಬಂದಿರುವ ಚಂದಚೂಡೇಶ್ವರನ್. ನನ್ನ ಪ್ರಶ್ನೆ ಏನೆಂದರೆ-ಶಿಕ್ಷಕನಾಗಿ ಆನ್ ಲೈನ್ ಬೋಧನೆ ಮಾಡುತ್ತಿರುವುದರಿಂದ ಕಲಿಕೆ ಒಂದು ಸವಾಲಾಗಿದೆ. ಇದನ್ನು ಎದುರಿಸುವುದು ಹೇಗೆ ಸರ್?. ಧನ್ಯವಾದಗಳು.
ನಿರೂಪಕರು: ತಮಗೆ ಧನ್ಯವಾದಗಳು ಸರ್. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ತರುಣ್, ಶಾಹೀದ್, ಕೀರ್ತನಾ ಮತ್ತು ಚಂದಚೂಡೇಶ್ವರನ್ , ಸರ್ ಇವರೆಲ್ಲ ಕಳೆದ ಎರಡು ವರ್ಷಗಳಿಂದ ಆನ್ ಲೈನ್ ಶಿಕ್ಷಣ ಒಂದು ಗೀಳಾಗಿ ಕಾಡುತ್ತಿರುವ ಬಗ್ಗೆ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಚಂಚಲತೆಯ ಮನಸ್ಥಿತಿ ಬರುವ ಬಗ್ಗೆ ಬಹಳ ಆತಂಕದಿಂದಿದ್ದಾರೆ. ಗೌರವಾನ್ವಿತ ಸರ್, ನಮಗೆ ಇಂತಹ ಹಲವು ಪ್ರಶ್ನೆಗಳು ದೇಶದ ವಿವಿಧ ಭಾಗಗಳಿಂದ ಬಂದಿವೆ. ಅವುಗಳಲ್ಲಿ ಪ್ರತಿಯೊಬ್ಬರ ಆತಂಕ ಕಳವಳಗಳನ್ನು ಕ್ರೋಡೀಕರಿಸಿ ಇವುಗಳನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಮಾರ್ಗದರ್ಶನ ಮಾಡುವಂತೆ ನಾನು ಕೋರುತ್ತೇನೆ, ಸರ್.
ಪ್ರಧಾನ ಮಂತ್ರಿ: ನನ್ನ ಮನಸ್ಸಿಗೊಂದು ಪ್ರಶ್ನೆ ಬರುತ್ತಿದೆ. ನೀವು ಹೇಳುತ್ತೀರಿ ನಿಮ್ಮ ಮನಸ್ಸು ಅಲ್ಲಿ ಇಲ್ಲಿ ಎಂದು ಚಂಚಲತೆಯಿಂದ ಅಲೆಯುತ್ತದೆ ಎಂಬುದಾಗಿ. ನೀವು ಆನ್ ಲೈನ್ ಓದು ನಡೆಸುವಾಗ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ, ನೀವು ನಿಜವಾಗಿಯೂ ಓದುತ್ತಿರುವಿರೋ ಅಥವಾ ರೀಲ್ ಗಳನ್ನು ನೋಡುತ್ತಿರುವಿರೋ? ನಾನು ನಿಮಗೆ ಕೈಗಳನ್ನು ಮೇಲೆತ್ತಲು ಹೇಳುವುದಿಲ್ಲ. ಆದರೆ ನಿಮಗೆ ಗೊತ್ತಾಗಿದೆ ನಾನು ನಿಮ್ಮನ್ನು ಹಿಡಿದಿದ್ದೇನೆ ಎಂದು. ನಿಜವಾಗಿಯೂ ಆನ್ ಲೈನಿನಲ್ಲಿರುವುದರಲ್ಲಾಗಲೀ ಅಥವಾ ಆಫ್ ಲೈನಿನಲ್ಲಿರುವುದರಲ್ಲಾಗಲೂ ದೋಷ ಇಲ್ಲ. ನೀವು ಹಲವು ಬಾರಿ ಈ ಅನುಭವವನ್ನು ಹೊಂದಿರಬಹುದು ಅದೆಂದರೆ ನೀವು ತರಗತಿ ಕೋಣೆಯಲ್ಲಿ ಹಾಜರಿರುತ್ತೀರಿ, ನಿಮ್ಮ ಕಣ್ಣುಗಳು ಶಿಕ್ಷಕರ ಮೇಲಿರುತ್ತವೆ, ಆದರೆ ನಿಮ್ಮ ಮನಸ್ಸು ಶಿಕ್ಷಕರು ಏನು ಹೇಳುತ್ತಿರುವರೆಂಬುದನ್ನು ದಾಖಲಿಸಿಕೊಳ್ಳುವುದಿಲ್ಲ. ಆಫ್ ಲೈನ್ ನಲ್ಲಿರುವ ಸಂಗತಿಗಳು ಕೂಡಾ ಆನ್ ಲೈನಿನಲ್ಲಿರುತ್ತವೆ. ಅದರರ್ಥ ಮಾಧ್ಯಮ ಸಮಸ್ಯೆ ಅಲ್ಲ. ಆದರೆ ಮನ್ (ಮನಸ್ಸಿನದ್ದೇ) ಸಮಸ್ಯೆ. ನಾನು ಯಾವುದಕ್ಕಾದರೂ ಜೋಡಿಸಿಕೊಂಡಿದ್ದರೆ ಮಾಧ್ಯಮ ಎಂಬುದು ಆನ್ ಲೈನ್ ಆಗಿರಲಿ ಅಥವಾ ಆಫ್ ಲೈನ್ ಆಗಿರಲಿ ಸಮಸ್ಯೆ ಇಲ್ಲ. ಅದು ವ್ಯತ್ಯಾಸವನ್ನೂ ಉಂಟು ಮಾಡುವುದಿಲ್ಲ. ಕಾಲದೊಂದಿಗೆ ಮಾದರಿಗಳೂ ಬದಲಾಗುತ್ತವೆ. ಗುರುಕುಲದ ಕಾಲಘಟ್ಟದಲ್ಲಿ ಶತಮಾನಗಳ ಹಿಂದೆ ಮುದ್ರಣ ಕಾಗದ ಇರಲಿಲ್ಲ ಮತ್ತು ಪುಸ್ತಕಗಳೂ ಇರಲಿಲ್ಲ. ವಿದ್ಯಾರ್ಥಿಗಳು ಅವರ ಗುರುಗಳು ಹೇಳಿದ್ದನ್ನು ಕೇಳುವ ಮೂಲಕ ನೆನಪಿಟ್ಟುಕೊಳ್ಳುತ್ತಿದ್ದರು. ಅದು ತಲೆಮಾರುಗಳ ಕಾಲ ಮುಂದುವರೆದುಕೊಂಡು ಬಂದಿತು.ಆ ಮೇಲೆ ಹೊಸ ಶಕೆ ಬಂದಿತು ಮತ್ತು ಅದರ ಜೊತೆಗೆ ಮುದ್ರಿತ ವಸ್ತು ಮತ್ತು ಪುಸ್ತಕಗಳು ಬಂದವು. ವಿದ್ಯಾರ್ಥಿಗಳೂ ಹೊಸ ಮಾದರಿಗೆ ಪ್ರವೇಶ ಮಾಡಿದರು. ಈ ವಿಕಾಸ ನಿರಂತರವಾಗಿ ಸಾಗುತ್ತಿದೆ. ಮತ್ತು ಇದು ಮಾನವನ ಗುಣ ಲಕ್ಷಣ ಮತ್ತು ಆತ ಕೂಡಾ ವಿಕಾಸದ ಭಾಗ. ಇಂದು ನಾವು ಡಿಜಿಟಲ್ ಉಪಕರಣಗಳ ಮೂಲಕ ಮತ್ತು ಹೊಸ ತಾಂತ್ರಿಕ ಸಲಕರಣೆಗಳ ಮೂಲಕ ಹಲವು ಸಂಗತಿಗಳನ್ನು ಬಹಳ ಸುಲಭವಾಗಿ ಪಡೆಯಬಹುದಾಗಿದೆ. ನಾವಿದನ್ನು ಒಂದು ಅವಕಾಶ ಎಂದು ಪರಿಗಣಿಸಬೇಕೇ ಹೊರತು ಸಮಸ್ಯೆ ಎಂದಲ್ಲ. ನಾವು ಆನ್ ಲೈನ್ ಕಲಿಕೆಯನ್ನು ಒಂದು ಬಹುಮಾನ ಎಂದು ಪರಿಗಣಿಸಿ ಬಳಸಲು ಪ್ರಯತ್ನಿಸಬೇಕು. ನೀವು ನಿಮ್ಮ ಶಿಕ್ಷಕರ ಟಿಪ್ಪಣಿಗಳನ್ನು ಮತ್ತು ಆನ್ ಲೈನಿನಲ್ಲಿ ಲಭ್ಯ ಇರುವ ಗುಣಮಟ್ಟದ ವಸ್ತು ವಿಷಯಗಳನ್ನು ಹೋಲಿಸಿಕೊಂಡರೆ ಆಗ ನೀವು ನಿಮ್ಮ ಅಧ್ಯಯನಕ್ಕೆ ಮೌಲ್ಯವನ್ನು ಸೇರಿಸಬಹುದು. ನಿಮ್ಮ ಶಿಕ್ಷಕರು ನಿಮಗೆ ಏನು ಹೇಳಿಕೊಟ್ಟಿರುವರೋ ಅದನ್ನು ನೆನಪಿಟ್ಟುಕೊಳ್ಳುವುದರ ಜೊತೆಗೆ ನಿಮಗೆ ಎರಡು ಹೆಚ್ಚುವರಿ ಸಂಗತಿಗಳು ಆನ್ ಲೈನಿನಲ್ಲಿ ಲಭಿಸುತ್ತವೆ. ಇವೆರಡನ್ನು ಜೋಡಿಸಿಕೊಂಡರೆ ಅದು ನಮಗೆ ಬಹಳ ಪ್ರಯೋಜನಕಾರಿ. ಆನ್ ಲೈನಿನ ಎರಡನೇ ಪ್ರಯೋಜನ ಎಂದರೆ ಅದು ಶಿಕ್ಷಣದ ಭಾಗ. ಜ್ಞಾನ ಸಂಪಾದನೆ ಬಹಳ ಮುಖ್ಯ. ಅದು ಆನ್ ಲೈನ್ ನಿಂದ ಬರುತ್ತದೋ ಅಥವಾ ಆಫ್ ಲೈನಿನಿಂದ ಬರುತ್ತದೋ ಎಂಬುದು ಅಷ್ಟು ಮಹತ್ವದ್ದಲ್ಲ. ಆಫ್ ಲೈನ್ ಮೂಲಕ ನೀವು ಪಡೆಯುವ ಯಾವುದೇ ಜ್ಞಾನ, ಅರಿವನ್ನು ಆನ್ ಲೈನ್ ಮೂಲಕವೂ ಪಡೆದು ಅದಕ್ಕೆ ಹೆಚ್ಚು ಒತ್ತು ಕೊಡಬಹುದು. ಅದು ನಿಮ್ಮ ಮೊಬೈಲ್ ಫೋನ್ ಇರಬಹುದು ಅಥವಾ ಐಪ್ಯಾಡ್ ಇರಬಹುದು. ದಕ್ಷಿಣ ಭಾರತದ ನನ್ನ ಸ್ನೇಹಿತರು ನನಗೆ ’ವಣಕ್ಕಂ” ಎಂದು ಹೇಳುತ್ತಾರೆ. ನೀವು ಹೇಗೆ ದೋಸಾ ತಯಾರಿಸುತ್ತೀರಿ ಎಂದು ಕೇಳಿದರೆ, ನೀವು ಆನ್ ಲೈನಿನಲ್ಲಿ ಹುಡುಕಾಟ ನಡೆಸಿದರೆ ಅದಕ್ಕೆ ಬೇಕಾದ ಪದಾರ್ಥಗಳು ಮತ್ತು ಪ್ರಕ್ರಿಯೆ, ಮಾಡುವ ವಿಧಾನ ಲಭಿಸುತದೆ. ನೀವು ಬಹಳ ಅತ್ಯುತ್ತಮ ದೋಸೆಯನ್ನು ಎಲ್ಲಾ ಸಾಮಗ್ರಿಗಳನ್ನು ಬಳಸಿ ಕಂಪ್ಯೂಟರ್ ನಲ್ಲಿ ಮಾಡಬಹುದು. ಆದರೆ ಅದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆಯೇ?. ಕಂಪ್ಯೂಟರಿನಲ್ಲಿ ಹುಡುಕಾಟದ ಮೂಲಕ ನೀವು ಪಡೆದ ಜ್ಞಾನ ಮತ್ತು ಆಂತಿಮವಾಗಿ ನೀವು ಮಾಡಿದ ದೋಸೆ ಆಗ ಅದು ಖಂಡಿತವಾಗಿ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ. ಹಾಗಾಗಿ ನಿಮ್ಮ ತಳಹದಿಯನ್ನು ಗಟ್ಟಿ ಮಾಡಿಕೊಳ್ಳಲು ಆನ್ ಲೈನ್ ಬಳಸಿರಿ. ಆದರೆ ಅದನ್ನು ಜೀವನದಲ್ಲಿ ವಾಸ್ತವಕ್ಕೆ ತರಲು ನೀವು ಆಫ್ ಲೈನ್ ಆಗಬೇಕಾಗುತ್ತದೆ. ಶಿಕ್ಷಣದಲ್ಲಿಯೂ ಇದು ಸತ್ಯ. ಮೊದಲು ನಿಮಗೆ ಜ್ಞಾನ ಸಂಪಾದನೆಗೆ ಬಹಳ ಸೀಮಿತ ಸಲಕರಣೆಗಳಿದ್ದವು. ನಿಮ್ಮಲ್ಲಿ ಪುಸ್ತಕಗಳಿದ್ದವು, ಶಿಕ್ಷಕರು ಮತ್ತು ನಿಮ್ಮ ಸುತ್ತ ಪರಿಸರ ಇರುತ್ತದೆ. ಇಂದು ಅಲ್ಲಿ ಅಸಂಖ್ಯಾತ ಸಂಪನ್ಮೂಲಗಳಿವೆ. ನಿಮಗೆ ಬೇಕಾದಷ್ಟನ್ನು ನೀವು ಪಡೆದುಕೊಳ್ಳಬಹುದು. ಆದುದರಿಂದ ಆನ್ ಲೈನನ್ನು ಒಂದು ಅವಕಾಶ ಎಂದು ಪರಿಗಣಿಸಿ. ಆದರೆ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಲು ಇಚ್ಛಿಸಿರುವಿರಾದರೆ ಆಗ ಅಲ್ಲಿ ಕೂಡಾ ಸಲಕರಣೆಗಳು ಲಭ್ಯ ಇವೆ. ಪ್ರತೀ ಸಲಕರಣೆ ಕೂಡಾ ನಿಮಗೆ ಇದನ್ನು ಮಾಡಿ ಅಥಾವ ಇನ್ನೇನನ್ನಾದರೂ ಮಾಡುವ ಬಗ್ಗೆ ಎಚ್ಚರಿಕೆ ನೀಡುತ್ತದೆ. ಅಥವಾ ವಿರಾಮ ಪಡೆಯಿರಿ ಮತ್ತು ಹದಿನೈದು ನಿಮಿಷಗಳ ಬಳಿಕ ಮರಳಿ ಬನ್ನಿರಿ ಎಂದು ಹೇಳುತ್ತದೆ. ನೀವು ಇಂತಹ ಸಲಕರಣೆಗಳನ್ನು ನಿಮ್ಮನ್ನು ನೀವು ಶಿಸ್ತಿಗೆ ಒಳಪಡಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಬಹುದು. ಅನೇಕ ಮಕ್ಕಳು ಆನ್ ಲೈನಿನಲ್ಲಿ ಇಂತಹ ಸಲಕರಣೆಗಳಿಂದ ಗರಿಷ್ಠ ಪ್ರಯೋಜನ ಪಡೆಯುತ್ತಿರುವುದನ್ನು ಮತ್ತು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ಜೀವನದಲ್ಲಿ ನಿಮ್ಮೊಂದಿಗೆ ನೀವು ಜೋಡಿಸಿಕೊಂಡಿರುವುದೂ ಬಹಳ ಮುಖ್ಯ. ಐಪ್ಯಾಡ್ ಗಳಿಂದ ಅಥವಾ ಮೊಬೈಲ್ ಫೋನುಗಳಿಂದ ಪಡೆಯುವ ಸಂತೋಷ ತಮ್ಮನ್ನು ತಾವು ಅನ್ವೇಷಿಸಿಕೊಳ್ಳುವಾಗ ದೊರೆಯುವ ಸಂತೋಷಕ್ಕಿಂತ ಸಾವಿರ ಪಾಲು ಹೆಚ್ಚಿನದು. ನೀವು ಆನ್ ಲೈನಿನಲ್ಲಾಗಲೀ, ಆಫ್ ಲೈನಿನಲ್ಲಾಗಲೀ ಇಲ್ಲದಿರುವಾಗ ನಿಮ್ಮ ದೈನಂದಿನ ಬದುಕಿನಲ್ಲಿ ಸ್ವಲ್ಪ ಕಾಲ ವಿರಾಮ ತೆಗೆದುಕೊಳ್ಳಿ, ಅಂತರ್ಮುಖಿಯಾಗಿ. ನೀವು ನಿಮ್ಮೊಳಗೇ ಹೆಚ್ಚು ಹೆಚ್ಚು ಆಳಕ್ಕೆ ಇಳಿದಷ್ಟೂ ನೀವು ಹೆಚ್ಚು ಹೆಚ್ಚು ಶಕ್ತಿಯ ಅನುಭವ ಪಡೆಯುತ್ತೀರಿ. ನೀವು ಇದನ್ನೆಲ್ಲ ಮಾಡಬಲ್ಲಿರಾದರೆ ಆಗ ನಿಮಗೆ ಸಮಸ್ಯೆ ಬರುತ್ತದೆ ಎಂದು ನಾನು ಭಾವಿಸಲಾರೆ.
ನಿರೂಪಕರು::ಗೌರವಾನ್ವಿತ ಪ್ರಧಾನ ಮಂತ್ರಿಯವರು ನಮಗೆ ನಾವು ಯಾವಾಗ ಗಮನ ಕೇಂದ್ರೀಕರಿಸಬೇಕು ಮತ್ತು ನಮ್ಮ ಕಲಿಕೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ, ನಾವು ಖಂಡಿತವಾಗಿಯೂ ಯಶಸ್ಸು ಗಳಿಸುತ್ತೇವೆ. ಧನ್ಯವಾದಗಳು ಸರ್. ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಗೆ ವೇದ ಕಾಲದ ನಾಗರಿಕತೆಯ ಮತ್ತು ಇಂಡಸ್ ನಾಗರಿಕತೆಯ ಸ್ಥಾನವಾದ ಹರ್ಯಾಣಾದ ಪಾಣಿಪತ್ ನಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಸುಮನ ರಾಣಿ ಅವರು ಪ್ರಶ್ನೆಯನ್ನು ಮಂಡಿಸಲು ಬಯಸುತ್ತಾರೆ. ಸುಮನ ರಾಣಿ ಮೇಡಂ ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿರಿ.
ಸುಮನ ರಾಣಿ: ನಮಸ್ಕಾರ, ಪ್ರಧಾನ ಮಂತ್ರಿ ಸರ್. ನಾನು ಪಾಣಿಪತ್ ನ ಡಿ.ಎ.ವಿ.ಪೊಲೀಸ್ ಪಬ್ಲಿಕ್ ಶಾಲೆಯ ಟಿ.ಜಿ.ಟಿ ಸಾಮಾಜಿಕ ವಿಜ್ಞಾನದ ಸುಮನ ರಾಣಿ. ಸರ್, ನನ್ನ ಪ್ರಶ್ನೆ ವಿದ್ಯಾರ್ಥಿಗಳಿಗೆ ಅವರ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಲು ಹೊಸ ಶಿಕ್ಷಣ ನೀತಿ ಹೇಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ? ಧನ್ಯವಾದಗಳು ಸರ್.
ನಿರೂಪಕರು: ಧನ್ಯವಾದಗಳು ಮೇಡಂ. ಸರ್, ಪೂರ್ವದ ಸ್ಕಾಟ್ ಲ್ಯಾಂಡ್ ಎಂದು ಜನಪ್ರಿಯವಾಗಿರುವ ಮೇಘಾಲಯದ ಪೂರ್ವ ಖಾಸೀ ಹಿಲ್ ನ 9 ನೇ ತರಗತಿ ವಿದ್ಯಾರ್ಥಿ ಶೀಲಾ ವೈಷ್ಣವ್ ಈ ವಿಷಯದ ಬಗ್ಗೆ ತಮ್ಮಲ್ಲಿ ಪ್ರಶ್ನೆಯನ್ನು ಕೇಳಲು ಇಚ್ಛಿಸಿದ್ದಾರೆ. ಶೀಲಾ, ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ಶೀಲಾ ವೈಷ್ಣವ್: ಶುಭ ಮುಂಜಾನೆ ಸರ್. ನಾನು ಮೇಘಾಲಯದ ಪೂರ್ವ ಖಾಸೀ ಹಿಲ್ ನ ಜವಾಹರ ನವೋದಯ ವಿದ್ಯಾಲಯದ ಶೀಲಾ ವೈಷ್ಣವ್, 9 ನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಗೆ ನನ್ನ ಪ್ರಶ್ನೆ –ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಸ್ತಾವನೆಗಳು ಹೇಗೆ ನಿರ್ದಿಷ್ಟವಾಗಿ ವಿದ್ಯಾರ್ಥಿಗಳ ಜೀವನವನ್ನು ಮತ್ತು ಸಾಮಾನ್ಯವಾಗಿ ಸಮಾಜವನ್ನು ಸಶಕ್ತೀಕರಣಗೊಳಿಸುತ್ತವೆ ಹಾಗು ಹೇಗೆ ನವ ಭಾರತಕ್ಕೆ ಹಾದಿ ಮಾಡಿಕೊಡುತ್ತವೆ. ತಮಗೆ ಧನ್ಯವಾದಗಳು ಸರ್.
ನಿರೂಪಕರು: ಧನ್ಯವಾದಗಳು, ಶೀಲಾ. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ದೇಶಾದ್ಯಂತದಿಂದ ಇನ್ನಷ್ಟು ಇಂತಹ ಪ್ರಶ್ನೆಗಳು ಬಂದಿವೆ. ಮತ್ತು ವಿದ್ಯಾರ್ಥಿಗಳು ತಮ್ಮ ಆಸಕ್ತಿ ಬೇರೊಂದರಲ್ಲಿದೆ ಆದರೆ ತಾವು ಅದಕ್ಕಿಂತ ಬೇರೆ ಯಾವುದನ್ನೋ ಕಲಿಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರೇನು ಮಾಡಬೇಕು?. ದಯವಿಟ್ಟು ನಮಗೆ ಮಾರ್ಗದರ್ಶನ ಮಾಡಿ.
ಪ್ರಧಾನ ಮಂತ್ರಿ : ಬಹಳ ಗಂಬೀರವಾದ ಪ್ರಶ್ನೆಯನ್ನು ಕೇಳಲಾಗಿದೆ ಮತ್ತು ಕಡಿಮೆ ಸಮಯದಲ್ಲಿ ಇದಕ್ಕೆ ವಿವರವಾದ ಉತ್ತರವನ್ನು ಕೊಡುವುದು ಕಷ್ಟ. ಎಲ್ಲಕ್ಕಿಂತ ಮೊದಲು ನಾವು ಇದನ್ನು ಹೊಸ ಶಿಕ್ಷಣ ನೀತಿ ಎಂದು ಹೇಳುವುದಕ್ಕೆ ಬದಲು ನಾವಿದನ್ನು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಹೇಳಬೇಕು. ಎನ್.ಇ.ಪಿ.ಯಲ್ಲಿರುವ ಎನ್ ಎಂಬುದನ್ನು ಹಲವರು ಹೊಸದು ಎಂದು ಹೇಳುತ್ತಾರೆ. ನಿಜವಾಗಿಯೂ ಇದು ರಾಷ್ತ್ರೀಯ ಶಿಕ್ಷಣ ನೀತಿ. ಮತ್ತು ನೀವು ಈ ಬಗ್ಗೆ ಕೇಳಿರುವುದಕ್ಕೆ ನನಗೆ ಮೆಚ್ಚುಗೆ ಇದೆ. ಈ ಮಟ್ಟದಲ್ಲಿ ಶಿಕ್ಷಣದ ನೀತಿ ರೂಪಿಸುವಲ್ಲಿ ಬಹಳಷ್ಟು ಮಂದಿ ಭಾಗಿಯಾಗಿರುವುದು ಬಹುಶಃ ಒಂದು ದಾಖಲೆ. ನಾವು ಈ ನೀತಿ ರೂಪಿಸುವ ನಿಟ್ಟಿನಲ್ಲಿ 2014 ರಿಂದ ತೊಡಗಿಸಿಕೊಂಡಿದ್ದೆವು. ಈ ವಿಷಯದ ಬಗ್ಗೆ ಪ್ರತೀ ಹಂತದಲ್ಲಿಯೂ ಗಂಭೀರ ಚಿಂತನೆಗಳು ನಡೆದಿವೆ. ಶಿಕ್ಷಕರು ಮತ್ತು ಗ್ರಾಮಗಳ ವಿದ್ಯಾರ್ಥಿಗಳನ್ನು ಮತ್ತು ಪಟ್ಟಣಗಳು ಹಾಗು ದೂರದ ಹಳ್ಳಿಗಾಡಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಇದರಲ್ಲಿ ಒಳಗೊಳಿಸಿಕೊಂಡಿದ್ದೆವು. ದೇಶಾದ್ಯಂತ ಸುಮಾರು ಆರು-ಏಳು ವರ್ಷಗಳಿಂದ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ಎಲ್ಲಾ ಮಾಹಿತಿಯನ್ನು ಕ್ರೋಡೀಕರಿಸಿ ಸಾರಾಂಶವನ್ನು ತಯಾರಿಸಲಾಯಿತು ಮತ್ತು ವಿಜ್ಞಾನ ಹಾಗು ತಂತ್ರಜ್ಞಾನ ಕ್ಷೇತ್ರಗಳ ವಿದ್ವಾಂಸರನ್ನು ಒಳಗೊಂಡ ಉನ್ನತ ತಜ್ಞರು ಇದರ ಕರಡನ್ನು ರೂಪಿಸಿದರು. ಮತ್ತು ಅದರ ಬಗ್ಗೆ ಗಂಭೀರ ಚಿಂತನ ಮಂಥನ ನಡೆಯಿತು. ಕರಡನ್ನು ಮತ್ತೆ ಜನರ ಮುಂದಿಡಲಾಯಿತು. ಮತ್ತು ಸುಮಾರು 15-20 ಲಕ್ಷ ಮಾಹಿತಿಗಳು, ಸಲಹೆಗಳು ಬಂದವು. ಈ ರೀತಿಯಲ್ಲಿ ಸಮಗ್ರ ಚರ್ಚೆ, ವಿಶ್ಲೇಷಣೆಯ ಬಳಿಕ ಶಿಕ್ಷಣ ನೀತಿ ಬಂದಿತು. ಯಾವುದೇ ರಾಜಕೀಯ ಪಕ್ಷ ಅಥವಾ ಸರಕಾರ ಏನೇ ಮಾಡಿದರೂ ಅಲ್ಲಿ ಪ್ರತಿಭಟನೆಯ ಧ್ವನಿ ಇದ್ದೇ ಇರುತ್ತದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಭಾರತದ ಪ್ರತಿಯೊಂದು ವರ್ಗವೂ ಸ್ವಾಗತಿಸಿರುವುದು ನನಗೆ ಸಂತೋಷ ತಂದಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರಿಗೆ ಅಭಿನಂದನೆಗಳು ಸಲ್ಲಬೇಕು. ಈ ನೀತಿಯನ್ನು ರೂಪಿಸಿದ್ದು ಸರಕಾರವಲ್ಲ, ಅದನ್ನು ಜನತೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೇಶದ ಭವಿಷ್ಯಕ್ಕಾಗಿ ರೂಪಿಸಿದರು. ಮೊದಲು ದೈಹಿಕ ಶಿಕ್ಷಣ ಮತ್ತು ತರಬೇತಿಯನ್ನು ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸಲಾಗುತ್ತಿತ್ತು. ಐದು, ಆರನೇ ಅಥವಾ ಏಳನೇ ತರಗತಿಯಲ್ಲಿರುವವರಿಗೆ ಇದು ಗೊತ್ತಿದೆ. ಈಗ ಈ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದನ್ನು ಪಠ್ಯಕ್ರಮದ ಭಾಗವನ್ನಾಗಿಸಲಾಗಿದೆ. ಆಟವಾಡದೆ ಯಾರೂ ಬೆಳವಣಿಗೆ ಸಾಧಿಸಲಾರರು. ನಿಮಗೆ ಬೆಳವಣಿಗೆ ಬೇಕಿದ್ದರೆ, ವ್ಯಕ್ತಿತ್ವ ಅರಳಬೇಕಿದ್ದರೆ ಕ್ರೀಡೆ ಅವಶ್ಯ. ಅದು ತಂಡ ಸ್ಫೂರ್ತಿಯನ್ನು ಒಳಗೊಂಡಿರುತ್ತದೆ, ನಿಮ್ಮ ಎದುರಾಳಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಾಮರ್ಥ್ಯವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ನೀವು ಪುಸ್ತಕಗಳಲ್ಲಿ ಕಲಿತಿದ್ದುದನ್ನು ಕ್ರೀಡೆಯ ಕ್ಷೇತ್ರದಲ್ಲಿ ಬಹಳ ಸುಲಭವಾಗಿ ಕಲಿಯಬಹುದು. ಮೊದಲು ಇದನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಹೊರಗಿಡಲಾಗಿತ್ತು ಮತ್ತು ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸಲಾಗಿತ್ತು. ಈಗ ಇದಕ್ಕೆ ಪ್ರತಿಷ್ಠೆ ಲಭಿಸಿದೆ ಮತ್ತು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೊಸ ಹುರುಪಿನಿಂದ ಭಾಗವಹಿಸುತ್ತಿರುವುದರಿಂದ ನೀವು ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಅಲ್ಲಿ ಅನೇಕ ಸಂಗತಿಗಳಿದ್ದರೂ ನಾನು ಒಂದು ವಿಷಯವನ್ನು ಪ್ರಮುಖವಾಗಿ ಹೇಳಲು ಬಯಸುತ್ತೇನೆ. ನಾವು 20 ನೇ ಶತಮಾನದ ನೀತಿಗಳನ್ನು ಹಿಡಿದುಕೊಂಡು 21 ನೇ ಶತಮಾನವನ್ನು ನಿರ್ಮಾಣ ಮಾಡಲು ಸಾಧ್ಯವೇ? ನಾನು ನಿಮ್ಮೆಲ್ಲರನ್ನೂ ಕೇಳುತ್ತಿದ್ದೇನೆ?. ನಾವು 20 ನೇ ಶತಮಾನದ ಧೋರಣೆಗಳು, ವ್ಯವಸ್ಥೆಗಳು ಮತ್ತು ನೀತಿಗಳೊಂದಿಗೆ 21 ನೇ ಶತಮಾನಕ್ಕೆ ಮುಂದಡಿ ಇಡಲು ಸಾಧ್ಯವೇ?. ನನಗೆ ಗಟ್ಟಿಯಾಗಿ ಹೇಳಿ.
ನಿರೂಪಕರು: ಇಲ್ಲ ಸರ್.
ಪ್ರಧಾನ ಮಂತ್ರಿ : ನಾವು ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ. ಆಗ ನಾವು 21 ನೇ ಶತಮಾನಕ್ಕೆ ತಕ್ಕಂತೆ ಎಲ್ಲಾ ನಮ್ಮ ವ್ಯವಸ್ಥೆಗಳನ್ನು ಮತ್ತು ನೀತಿಗಳನ್ನು ಜೋಡಿಸಬೇಕಲ್ಲವೇ?. ನಾವು ನಮ್ಮನ್ನು ಸುಧಾರಣೆ, ವಿಕಾಸಕ್ಕೆ ಒಡ್ಡಿಕೊಳ್ಳದಿದ್ದರೆ ನಾವು ನಿಂತಲ್ಲಿಯೇ ಸ್ಥಗಿತಗೊಂಡು ಹಿಂದೆ ಬೀಳುತ್ತೇವೆ. ಈಗಾಗಲೇ ಬಹಳಷ್ಟು ಸಮಯ ನಷ್ಟವಾಗಿದೆ ಮತ್ತು ದೇಶ ತೊಂದರೆಗಳನ್ನು ಎದುರಿಸಿದೆ. ಪೋಷಕರ ಆಶಯಗಳಿಂದಾಗಿ, ಸಂಪನ್ಮೂಲಗಳಿಂದಾಗಿ, ಅಥವಾ ಹತ್ತಿರದಲ್ಲಿರುವ ಸೌಲಭ್ಯಗಳಿಂದಾಗಿ ನಮಗೆ ನಮ್ಮ ಇಷ್ಟದ ಶಿಕ್ಷಣವನ್ನು ಪಡೆಯುವುದಕ್ಕೆ ಕೆಲವೊಮ್ಮೆ ಸಾಧ್ಯವಾಗದೆ ಇರುವುದನ್ನು ನಾವು ಕಾಣುತ್ತೇವೆ. ಒತ್ತಡದಿಂದಾಗಿ ಮತ್ತು ಪ್ರತಿಷ್ಠೆಯಿಂದಾಗಿ ನಾವು ಒಂದು ಮಾದರಿಯನ್ನು ಅನುಸರಿಸುತ್ತೇವೆ. ನಾವು ವೈದ್ಯರಾಗಬೇಕು ಎಂದು ಬಯಸುತ್ತೇವೆ, ಆದರೆ ನಮ್ಮ ಆಸಕ್ತಿ ಬೇರೆಲ್ಲೋ ಇರುತ್ತದೆ. ಕೆಲವರು ವನ್ಯ ಜೀವಿಗಳಲ್ಲಿ, ಪೈಂಟಿಂಗ್ ಅಥವಾ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರಬಹುದು, ಆದರೆ ವೈದ್ಯಕೀಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೊದಲು ನೀವು ಒಂದು ಶಿಕ್ಷಣ ವಿಭಾಗಕ್ಕೆ ಸೇರಿದರೆ ನೀವದನ್ನು ಪೂರ್ಣ ಮಾಡಬೇಕಾಗಿತ್ತು. ಈಗ ನಿಮಗೆ ಒಂದು ಅಥವಾ ಎರಡು ವರ್ಷಗಳ ನಂತರ ನಿಮಗೆ ಇಂತಹ ಶಿಕ್ಷಣ ವಿಭಾಗ ಸರಿ ಹೊಂದುವುದಿಲ್ಲ ಎಂದಾದರೆ ಆಗ ಆ ನಿರ್ದಿಷ್ಟ ಶಿಕ್ಷಣ ವಿಭಾಗದಲ್ಲಿಯೇ ಮುಂದುವರಿದು ಉ ಅದನ್ನು ಪೂರ್ಣಗೊಳಿಸಬೇಕು ಎಂಬುದು ಕಡ್ಡಾಯವಿಲ್ಲ. ಈಗ, ರಾಷ್ಟ್ರೀಯ ಶಿಕ್ಷಣ ನೀತಿ ನಿಮಗೆ ಘನತೆಯೊಂದಿಗೆ ಹೊಸ ವಿಭಾಗವನ್ನು ಅಥವಾ ಪಠ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಒದಗಿಸುತ್ತದೆ. ಜಗತ್ತಿನಾದ್ಯಂತ ಕೌಶಲ್ಯಗಳ ಮಹತ್ವ ಹೆಚ್ಚಾಗಿರುವುದು ನಮಗೆಲ್ಲ ತಿಳಿದೇ ಇದೆ. ಬರೇ ಶಿಕ್ಷಣ ಮತ್ತು ಜ್ಞಾನ ಸಂಪತ್ತು ಸಾಕಾಗುವುದಿಲ್ಲ. ಅಲ್ಲಿ ಕೌಶಲ್ಯಗಳ ಅಗತ್ಯ ಇದೆ. ನಾವೀಗ ಅದನ್ನು ಪಠ್ಯಕ್ರಮದ ಭಾಗವನ್ನಾಗಿ ಮಾಡಿದ್ದೇವೆ. ಇದರಿಂದ ಯಾರಿಗೇ ಆದರೂ ಅವರ ಸಂಪೂರ್ಣ ಅಭಿವೃದ್ಧಿಗೆ ಅವಕಾಶಗಳು ಲಭ್ಯವಾಗುತ್ತವೆ. ಇಂದು ನಾನು ವಸ್ತುಪ್ರದರ್ಶನ ನೋಡಿ ಬಹಳ ಸಂತೋಷಪಟ್ಟಿದ್ದೇನೆ. ಶಿಕ್ಷಣ ಇಲಾಖೆಯು ಇದನ್ನು ಸಣ್ಣ ಪ್ರಮಾಣದಲ್ಲಿ ಆಯೋಜನೆ ಮಾಡಿದೆ, ಅದು ರಾಷ್ತ್ರೀಯ ಶಿಕ್ಷಣ ನೀತಿಯನ್ನು ಪ್ರತಿಫಲಿಸುತ್ತದೆ. ಇದು ಬಹಳ ಪರಿಣಾಮಕಾರಿಯಾಗಿರುವುದಕ್ಕಾಗಿ ನಾನು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ಎಂಟು ಅಥವಾ ಹತ್ತನೇ ತರಗತಿಯ ವಿದ್ಯಾರ್ಥಿಗಳು 3 ಡಿ ಪ್ರಿಂಟರ್ ಗಳನ್ನು ತಯಾರಿಸುವುದು ಅಥವಾ ವೇದಿಕ್ ಗಣಿತದ ಆಪ್ ಗಳನ್ನು ನಡೆಸುವುದು ಮತ್ತು ಜಗತ್ತಿನಾದ್ಯಂತದ ವಿದ್ಯಾರ್ಥಿಗಳು ಅದನ್ನು ಕಲಿಯುವುದನ್ನು ನೋಡುವುದು ಬಹಳ ಸಂತೋಷ ಕೊಡುವ ಸಂಗತಿ. ಇಬ್ಬರು ಸಹೋದರಿಯರಾದ ನಂದಿತಾ ಮತ್ತು ನಿವೇದಿತಾ ಅವರನ್ನು ಭೇಟಿಯಾದಾಗ ನನಗೆ ಆಶ್ಚರ್ಯವಾಯಿತು. ಇಂತಹ ಸಂಗತಿಗಳನ್ನು ವಿರೋಧಿಸುವ ವರ್ಗವೊಂದು ನಮ್ಮ ದೇಶದಲ್ಲಿದೆ. ಆದರೆ ಅವರು ತಮ್ಮ ವಿದ್ಯಾರ್ಥಿಗಳನ್ನು ಜಗತ್ತಿನಾದ್ಯಂತ ಹುಡುಕಿಕೊಂಡಿದ್ದಾರೆ. ಅವರು ಸ್ವತಃ ವಿದ್ಯಾರ್ಥಿಗಳು, ಆದರೆ ಗುರುಗಳಾಗಿದ್ದಾರೆ. ನೀವು ನೋಡಿ, ಅವರು ತಂತ್ರಜ್ಞಾನವನ್ನು ಪೂರ್ಣವಾಗಿ ಬಳಸಿಕೊಂಡಿದ್ದಾರೆ, ಅವರು ತಂತ್ರಜ್ಞಾನಕ್ಕೆ ಹೆದರಿಲ್ಲ. ಅದೇ ರೀತಿ ನಾನು ದೂರದೃಷ್ಟಿಯ ಚಿಂತನಾಕ್ರಮವನ್ನು ಒಳಗೊಂಡ ಕೆಲವು ವಿಗ್ರಹಗಳನ್ನು, ಶಿಲ್ಪಗಳನ್ನು ಮತ್ತು ಪೈಂಟಿಂಗ್ ಗಳನ್ನು ನೋಡಿದೆ. ಇದರರ್ಥ ರಾಷ್ಟ್ರೀಯ ಶಿಕ್ಷಣ ನೀತಿ ವ್ಯಕ್ತಿತ್ವ ಅಭಿವೃದ್ಧಿಗೆ ಬಹಳಷ್ಟು ಅವಕಾಶಗಳನ್ನು ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ನಿಮಗೆ ಹೇಳುತ್ತೇನೆ, ನೀವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಕಟವಾಗಿ ಅನುಸರಿಸಿದರೆ ಮತ್ತು ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರೆ, ಆಗ ಅಲ್ಲಿ ಅನೇಕ ಪ್ರಯೋಜನಗಳಿವೆ. ದೇಶಾದ್ಯಂತ ನಾನು ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಶಾಲೆಗಳಿಗೆ ಕೋರಿಕೊಳ್ಳುವುದೇನೆಂದರೆ ಅದನ್ನು ಅನುಷ್ಠಾನಕ್ಕೆ ತರಲು ಹೊಸ ವಿಧಾನಗಳನ್ನು ಶೋಧಿಸಿ. ಅಲ್ಲಿ ಹೆಚ್ಚು ವಿಧಾನಗಳಿದ್ದಷ್ಟೂ ಹೆಚ್ಚು ಹೆಚ್ಚು ಅವಕಾಶಗಳಿರುತ್ತವೆ. ನಾನು ನಿಮಗೆಲ್ಲ ಶುಭವನ್ನು ಹಾರೈಸುತ್ತೇನೆ.
ನಿರೂಪಕರು: ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಅರ್ಥವನ್ನು ಮರು ವ್ಯಾಖ್ಯಾನಿಸಲಿದೆ ಎಂಬುದು ನಮಗೀಗ ಸ್ಪಷ್ಟವಾಗಿ ಮನದಟ್ಟಾಗಿದೆ ಮತ್ತು ಇದರಿಂದ ನಮ್ಮ ಭವಿಷ್ಯವೂ ಉಜ್ವಲವಾಗಲಿದೆ. ಆಟ ಆಡಿದರೆ ನಾವು ಬೆಳೆಯುತ್ತೇವೆ. ಗೌರವಾನ್ವಿತ ಸರ್, ಗಾಜಿಯಾಬಾದಿನ ಕೈಗಾರಿಕಾ ಪಟ್ಟಣದ ರಾಜಕೀಯ ಕಣ್ವ ಇಂಟರ್ ಕಾಲೇಜಿನ ರೋಶ್ನಿ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಮಾರ್ಗದರ್ಶನ ಮತ್ತು ಸಹಾಯ ಕೇಳುತ್ತಿದ್ದಾರೆ. ರೋಶ್ನಿ ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ.
ರೋಶ್ನಿ: ನಮಸ್ಕಾರ ಸರ್!. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ನನ್ನ ಹೆಸರು ರೋಶ್ನಿ ಮತ್ತು ನಾನು ಉತ್ತರ ಪ್ರದೇಶದ ಗಾಜಿಯಾಬಾದ್ ನ ವಿಜಯ ನಗರದ ಸರಕಾರಿ ಬಾಲಕಿಯರ ಇಂಟರ್ ಕಾಲೇಜಿನ 11 ನೇ ತರಗತಿಯ ವಿದ್ಯಾರ್ಥಿ. ಸರ್, ನನ್ನ ಪ್ರಶ್ನೆ-ಪರೀಕ್ಷೆಯ ಕುರಿತಂತೆ ಭಯ ಪಡುವುದು ವಿದ್ಯಾರ್ಥಿಗಳೋ ಅಥವಾ ಅವರ ಪೋಷಕರು ಮತ್ತು ಶಿಕ್ಷಕರೋ?.ನಮ್ಮ ಪೋಷಕರು ಅಥವಾ ಶಿಕ್ಷಕರು ನಿರೀಕ್ಷಿಸುವಂತೆ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೋ ಅಥವಾ ಅವುಗಳನ್ನು ಹಬ್ಬಗಳಂತೆ ಪರಿಗಣಿಸಿ ಹರ್ಷದಿಂದಿರಬೇಕೋ? ದಯವಿಟ್ಟು ನಮಗೆ ಮಾರ್ಗದರ್ಶನ ಮಾಡಿ, ಧನ್ಯವಾದಗಳು.
ನಿರೂಪಕರು: ನಿಮಗೆ ಧನ್ಯವಾದಗಳು ರೋಶ್ನಿ. ಗುರುಗಳ ಭೂಮಿ, ಪಂಚ ನದಿಗಳ ನಾಡು, ಸಮೃದ್ಧ ರಾಜ್ಯ ಪಂಜಾಬಿನ ಭಟಿಂಡಾದಿಂದ ಹತ್ತನೇ ತರಗತಿ ವಿದ್ಯಾರ್ಥಿ ಕಿರಣ್ ಪ್ರೀತ್ ಈ ವಿಷಯದ ಬಗ್ಗೆ ಪ್ರಶ್ನೆ ಕೇಳಲು ಬಯಸುತ್ತಾರೆ. ಕಿರಣ್ ಪ್ರೀತ್, ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ.
ಕಿರಣ್ ಪ್ರೀತ್ : ಗೌರವಾನ್ವಿತ ಪ್ರಧಾನ ಮಂತ್ರಿ ಸರ್ ಅವರಿಗೆ ಶುಭ ಮುಂಜಾನೆ. ನನ್ನ ಹೆಸರು ಕಿರಣ್ ಪ್ರೀತ್ ಕೌರ್, 10 ನೇ ತರಗತಿ ವಿದ್ಯಾರ್ಥಿ. ನಾನು ಪಂಜಾಬಿನ ಭಟಿಂಡಾದ ಡೂನ್ ಪಬ್ಲಿಕ್ ಸೀನಿಯರ್ ಸೆಕೆಂಡರಿ ಸ್ಕೂಲ್, ಕಲ್ಯಾಣ್ ಸುಖಾ ಇಲ್ಲಿ ಕಲಿಯುತ್ತಿದ್ದೇನೆ. ಸರ್, ನಿಮಗೆ ನನ್ನ ಪ್ರಶ್ನೆ-ನನಗೆ ಉತ್ತಮ ಫಲಿತಾಂಶ ಬಾರದೆ ಇದ್ದರೆ ನಾನು ನಮ್ಮ ಕುಟುಂಬದ ನಿರಾಶೆಯನ್ನು ಹೇಗೆ ಎದುರಿಸಲಿ. ನನಗೆ ನನ್ನ ಪೋಷಕರ ಬಗ್ಗೆ ನಕಾರಾತ್ಮಕ ಭಾವನೆಯೇನೂ ಇಲ್ಲ, ಯಾಕೆಂದರೆ ಅವರಿಗೆ ನಾನು ಮಾಡುವುದಕ್ಕಿಂತ ಹೆಚ್ಚಿನ ಆಶ್ವಾಸನೆ ಬೇಕಾಗಿದೆ. ಧನ್ಯವಾದಗಳು ಸರ್, ದಯವಿಟ್ಟು ಮಾರ್ಗದರ್ಶನ ಮಾಡಿ.
ನಿರೂಪಕರು: ಧನ್ಯವಾದಗಳು, ಕಿರಣ್ ಪ್ರೀತ್. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ನಮ್ಮಲ್ಲಿರುವ ಅನೇಕರಂತೆ, ರೋಶ್ನಿ ಮತ್ತು ಕಿರಣ್ ಪ್ರೀತ್ ಅವರೂ ತಮ್ಮ ಪೋಷಕರು ಮತ್ತು ಶಿಕ್ಷಕರ ನಿರೀಕ್ಷೆಗಳನ್ನು ಹೇಗೆ ನಿಭಾಯಿಸುವುದು ಎಂಬ ಸವಾಲನ್ನು ಎದುರಿಸುತ್ತಿದ್ದಾರೆ. ನಾವು ನಿಮ್ಮ ಸಲಹೆಯನ್ನು ಎದುರು ನೋಡುತ್ತಿದ್ದೇವೆ. ಗೌರವಾನ್ವಿತ ಸರ್.
ಪ್ರಧಾನ ಮಂತ್ರಿ: ರೋಶ್ನಿ ನೀವು ಈ ಪ್ರಶ್ನೆ ಕೇಳಿದಾಗ ಭಾರೀ ಕರತಾಡನ ಬಂತು, ಇದಕ್ಕೆ ಏನು ಕಾರಣ?. ನನಗನಿಸುತ್ತದೆ; ನೀವು ವಿದ್ಯಾರ್ಥಿಗಳಿಗಾಗಿ ಪ್ರಶ್ನೆ ಕೇಳಿದ್ದಲ್ಲ, ಅದು ಬಹಳ ಜಾಣತನದಿಂದ ಪೋಷಕರಿಗಾಗಿ ಮತ್ತು ಶಿಕ್ಷಕರಿಗಾಗಿ ಕೇಳಿದ್ದು. ಮತ್ತು ಪೋಷಕರಿಗೆ ಹಾಗು ಶಿಕ್ಷಕರಿಗೆ, ಎಲ್ಲರಿಗೂ ಪ್ರಯೋಜನವಾಗುವಂತಹದನ್ನು ನಾನು ಇಲ್ಲಿಂದ ಏನಾದರೂ ಹೇಳಬೇಕು ಎಂಬ ಇಚ್ಛೆಯನ್ನು ನೀವು ಹೊಂದಿರುವಿರಿ ಎಂಬುದಾಗಿ ನಾನು ಭಾವಿಸುತ್ತೇನೆ. ಇದರ ಅರ್ಥ ನಿಮ್ಮ ಮೇಲೆ ನಿಮ್ಮ ಶಿಕ್ಷಕರಿಂದ ಮತ್ತು ಪೋಷಕರಿಂದ ಒತ್ತಡ ಇದೆ ಮತ್ತು ನೀವು ನಿಮ್ಮನ್ನು ಅನುಸರಿಸಬೇಕೋ ಅಥವಾ ಅವರು ಹೇಳಿದಂತೆ ಕೇಳಬೇಕೋ ಎಂಬ ಗೊಂದಲಕ್ಕೆ ಒಳಗಾಗಿದ್ದೀರಿ. ನಾನು ಪೋಷಕರಿಗೆ ಮತ್ತು ಶಿಕ್ಷಕರಿಗೆ ಮನವಿ ಮಾಡಿಕೊಳ್ಳುತ್ತೇನೆ; ನಿಮ್ಮ ಬಾಲ್ಯಾವಸ್ಥೆಯಲ್ಲಿ ಈಡೇರದ ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ. ಹೀಗೆ ನೀವು ನಿಮ್ಮ ಮಗುವಿನಲ್ಲಿ ನಿಮ್ಮದೇ ಕನಸುಗಳನ್ನು ತುಂಬಲು ಮತ್ತು ನಿರೀಕ್ಷೆಗಳನ್ನು ಹೇರಲು ಆರಂಭ ಮಾಡುತ್ತೀರಿ. ಮಗು ನಿಮಗೆ ಗೌರವ ಕೊಡುತ್ತದೆ ಮತ್ತು ಪೋಷಕರ ಮಾತುಗಳಿಗೆ ಬಹಳಷ್ಟು ಗೌರವ ಕೊಡುತ್ತದೆ. ಇನ್ನೊಂದೆಡೆ ಶಿಕ್ಷಕರು ಕೂಡಾ ಶಾಲೆಯ ಸಂಪ್ರದಾಯದ ಅನ್ವಯ ಮಾಡುವಂತೆ ಪ್ರೋತ್ಸಾಹ ನೀಡುತ್ತಾರೆ. ಗೊಂದಲದ ಮತ್ತು ವಿರೋಧಾಭಾಸದ ಸಂಕೇತಗಳಲ್ಲಿ ಮಗು ಹಾದು ಹೋಗಬೇಕಾಗಿರುವುದು ಅದಕ್ಕೆ ಬಹಳ ಕಳವಳಕಾರಿ ಸಂಗತಿಯಾಗುತ್ತದೆ. ಹಿಂದಿನ ದಿನಗಳಲ್ಲಿ ಶಿಕ್ಷಕರು ಕುಟುಂಬದ ಜೊತೆ ಸಂಪರ್ಕದಲ್ಲಿರುತ್ತಿದ್ದರು. ಕುಟುಂಬದ ಎಲ್ಲರನ್ನೂ ಶಿಕ್ಷಕರು ಬಲ್ಲವರಾಗಿದ್ದರು. ಮತ್ತು ಕುಟುಂಬವು ಅವರ ಮಕ್ಕಳ ಬಗ್ಗೆ ಯಾವ ಚಿಂತನೆಯನ್ನು ಹೊಂದಿದೆ ಎಂಬುದನ್ನು ಅರಿತಿರುತ್ತಿದ್ದರು. ಶಿಕ್ಷಕರ ರೀತಿ ನೀತಿಗಳ ಬಗೆಗೂ ಪೋಷಕರಿಗೆ ತಿಳಿದಿರುತ್ತಿತ್ತು. ಈ ರೀತಿಯಲ್ಲಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಸಂಬಂಧಿಸಿ ಅದು ಶಾಲೆಯಲ್ಲಿರಲಿ ಅಥವಾ ಮನೆಯಲ್ಲಿರಲಿ ಸಮಾನ ವೇದಿಕೆಯಲ್ಲಿ ಇರುತ್ತಿದ್ದರು. ಈಗ ಏನಾಗಿದೆ?. ಪೋಷಕರಿಗೆ ಮಗು ಇಡೀ ದಿನ ಏನು ಮಾಡಿದೆ ಎಂಬುದನ್ನು ನೋಡಲು ಸಮಯ ಇಲ್ಲ. ಶಿಕ್ಷಕರು ಪಠ್ಯಕ್ರಮವನ್ನು ಪೂರ್ಣಗೊಳಿಸುವುದರ ಬಗ್ಗೆಯೇ ಚಿಂತಾಕ್ರಾಂತರಾಗಿರುತ್ತಾರೆ. ಅವರು ಉತ್ತಮವಾಗಿ ಕಲಿಸುತ್ತಾರೆ, ಆದರೆ ಅವರು ತಮ್ಮ ಜವಾಬ್ದಾರಿ ಪಠ್ಯಕ್ರಮವನ್ನು ಪೂರ್ಣಗೊಳಿಸುವುದು ಎಂದು ಭಾವಿಸುತ್ತಾರೆ. ಆದರೆ ಮಗುವಿನಲ್ಲಿ ಬೇರೆಯೇ ಯೋಜನೆ ಇರುತ್ತದೆ. ಆದುದರಿಂದ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಶಕ್ತಿ ಮತ್ತು ದೌರ್ಬಲ್ಯಗಳ ಬಗ್ಗೆ, ಅವರ ಆಸಕ್ತಿಗಳು, ಧೋರಣೆಗಳು, ನಿರೀಕ್ಷೆಗಳು ಮತ್ತು ಆಶೋತ್ತರಗಳ ಬಗ್ಗೆ ನಿಕಟವಾಗಿ ಗಮನ ಹರಿಸದಿದ್ದರೆ, ಮತ್ತು ಮಗುವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ, ಮಗುವನ್ನು ಅನಗತ್ಯವಾಗಿ ಮುಂದಕ್ಕೆ ಹೋಗುವಂತೆ ಒತ್ತಡ ಹಾಕಿದರೆ, ಆ ಮಗು ಮುಗ್ಗರಿಸುತ್ತದೆ. ಆದುದರಿಂದ, ನಾನು ರೋಶ್ನಿಯ ಪರವಾಗಿ ಎಲ್ಲ ಪೋಷಕರಿಗೆ ಮತ್ತು ಶಿಕ್ಷಕರಿಗೆ ಹೇಳಬಯಸುತ್ತೇನೆ, ನಿಮ್ಮ ಆಶಯಗಳು ಮತ್ತು ನಿರೀಕ್ಷೆಗಳೊಂದಿಗೆ ಮಗುವಿನ ಮೇಲೆ ಹೊರೆಯನ್ನು ಹೊರಿಸಬೇಡಿ. ನಿಮ್ಮ ನಿರೀಕ್ಷೆಗಳಿಗೆ ಮಗು ಸರಿಹೊಂದದೇ ಇರಬಹುದು ಎಂಬುದನ್ನು ಪ್ರತಿಯೊಬ್ಬ ಪೋಷಕರೂ ಅಂಗೀಕರಿಸಬೇಕು, ಆದರೆ ದೇವರು ಆ ಮಗುವನ್ನು ವಿಶೇಷ ಶಕ್ತಿ ಕೊಟ್ಟು ಕಳುಹಿಸಿದ್ದಾನೆ. ಆತನ ಸಾಮರ್ಥ್ಯವನ್ನು ಗುರುತಿಸದೇ ಇರುವುದು ನಿಮ್ಮ ದೋಷ. ಅವರ ಕನಸುಗಳನ್ನು ಅರ್ಥ ಮಾಡಿಕೊಳ್ಳಲು ಸಮರ್ಥರಾಗಿರದೇ ಇರುವುದು ನಿಮ್ಮ ದೋಷ. ಮತ್ತು ಇದರ ಫಲಿತವಾಗಿ ನಿಮ್ಮ ಮತ್ತು ನಿಮ್ಮ ಮಕ್ಕಳ ನಡುವೆ ಅಂತರ ಸೃಷ್ಟಿಯಾಗುತ್ತದೆ. ಮತ್ತು ನಾನು ಮಕ್ಕಳಿಗೆ ಅವರ ಪೋಷಕರ ಹಾಗು ಶಿಕ್ಷಕರ ಸಲಹೆಗಳಿಗೆ ಕಿವಿ ಕೊಡಬೇಡಿ ಎಂದು ಹೇಳಲಾರೆ. ಅದು ಸರಿಯಾದ ಸಲಹೆ ಅಲ್ಲ. ನೀವು ಅವರನ್ನು ಕೇಳಿ ಮತ್ತು ಅವರು ಏನು ಹೇಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಆದರೆ ಸುಲಭದಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಸಂಗತಿಗಳನ್ನು ನಾವು ಒಪ್ಪಿಕೊಳ್ಳಬೇಕು. ನೋಡಿ, ಭೂಮಿ ಕೂಡಾ ಜೀವರಹಿತವಾಗಿ ಕಾಣುತ್ತದೆ. ನೀವು ಒಂದು ಬೀಜ ಬಿತ್ತಿದರೆ ಏನೂ ಬೆಳೆದಿಲ್ಲ ಎಂದು ನಿಮಗೆ ಕಾಣಬಹುದು, ಆದರೆ ಅದೇ ನೆಲದಲ್ಲಿ ಇನ್ನೊಂದು ಬೀಜ ಬಿತ್ತಿದರೆ ಅದು ಮೊಳಕೆ ಒಡೆದು ಬಹಳ ದೊಡ್ಡ ಮರವಾಗಿ ಬೆಳೆಯಬಹುದು. ಇದೆಲ್ಲ ಬೀಜವನ್ನು ಅವಲಂಬಿಸಿದೆಯೇ ಹೊರತು ಭೂಮಿಯನ್ನಲ್ಲ. ಆದುದರಿಂದ ನಿಮಗೆ ಏನನ್ನು ಸುಲಭದಲ್ಲಿ ಅರಗಿಸಿಕೊಳ್ಳಲು ಸಾಧ್ಯವೋ ಮತ್ತು ಮುನ್ನಡೆಯಲು ಸಾಧ್ಯವೋ ಎಂಬುದು ನಿಮಗೆ ಗೊತ್ತಿರುತ್ತದೆ. ಆ ನಿಟ್ಟಿನಲ್ಲಿ ನಿಮ್ಮೆಲ್ಲಾ ಪ್ರಯತ್ನಗಳನ್ನು ಹಾಕಿರಿ, ಮತ್ತು ಆಗ ನಿಮಗೆ ಹೊರೆ ಎಂಬ ಭಾವನೆ ಎಂದೂ ಬರುವುದಿಲ್ಲ. ನಿಮಗೆ ಮೊದಲು ಸಮಸ್ಯೆಗಳು ಬರಬಹುದು, ಆದರೆ ಬಳಿಕ ಕುಟುಂಬ ಅದರಲ್ಲಿ ಹೆಮ್ಮೆಯನ್ನು ಹೊಂದಲು ಆರಂಭ ಮಾಡುತ್ತದೆ. ಪೋಷಕರು ಕೂಡಾ ತಮ್ಮ ಮಗು ನಿಜವಾಗಿಯೂ ಉತ್ತಮವಾದುದನ್ನು ಮಾಡಿದೆ ಮತ್ತು ಹೆಸರು ತಂದಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಆರಂಭ ಮಾಡುತ್ತಾರೆ. ನಾಲ್ಕು ಮಂದಿಯ ಜೊತೆ ಕುಳಿತಾಗ ಅವರು ನಿಮ್ಮನ್ನು ಹೊಗಳಲು ಆರಂಭ ಮಾಡುತ್ತಾರೆ. ನಿನ್ನೆಯವರೆಗೆ ನಿಮ್ಮ ಶಕ್ತಿಯನ್ನು ಪರಿಗಣಿಸದೇ ಇದ್ದವರು ನಿಮ್ಮ ಸಾಮರ್ಥ್ಯವನ್ನು ಕೊಂಡಾಡಲು ಆರಂಭ ಮಾಡುತ್ತಾರೆ. ಮತ್ತು ಹೀಗೆ ನೀವು ಸಂತೋಷದಿಂದ ಮತ್ತು ಉತ್ಸಾಹದಿಂದ ಮುನ್ನಡೆದರೆ, ಕನಿಷ್ಠ ಆವಶ್ಯಕತೆಗಳನ್ನು ಈಡೇರಿಸಿಕೊಂಡರೆ ಮತ್ತು ನಿಮ್ಮ ಸಾಮರ್ಥ್ಯಕ್ಕೆ ಹೆಚ್ಚಿನದನ್ನು ಸೇರಿಸಿಕೊಳ್ಳುತ್ತಾ ಸಾಗಿದರೆ, ನಿಮಗೆ ಬಹಳ ಪ್ರಯೋಜನವಾಗುತ್ತದೆ.
ನಿರೂಪಕರು: ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಮಕ್ಕಳ ಪೋಷಕರು ಮತ್ತು ಶಿಕ್ಷಕರ ಆಶಯಗಳು ಮತ್ತು ಆಶೋತ್ತರಗಳ ನಡುವೆ ಮಕ್ಕಳ ಆಸಕ್ತಿ ಮತ್ತು ಆಶೋತ್ತರಗಳಿಗೆ ಹೊಸ ಪ್ರಚೋದನೆಯನ್ನು ತಾವು ನೀಡಿರುವಿರಿ. ಬಹಳ ಧನ್ಯವಾದಗಳು ತಮಗೆ. ಗೌರವಾನ್ವಿತ ಪ್ರಧಾನ ಮಂತ್ರಿ ಸರ್!. ಸಾಂಸ್ಕೃತಿಕವಾಗಿ ಶ್ರೀಮಂತವಾದ ನಗರ ದಿಲ್ಲಿಯಿಂದ ಜನಕಪುರಿಯ ಕೇಂದ್ರೀಯ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿ ವೈಭವ್, ಅವರ ಸಮಸ್ಯೆ ಬಗ್ಗೆ ನಿಮ್ಮ ಸಲಹೆಯನ್ನು ಕೋರುತ್ತಿದ್ದಾರೆ. ವೈಭವ್ ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ವೈಭವ್:ನಮಸ್ಕಾರ, ಪ್ರಧಾನ ಮಂತ್ರಿ ಸರ್. ನನ್ನ ಹೆಸರು ವೈಭವ್ ಕನೋಜಿಯಾ. ನಾನು 10 ನೇ ತರಗತಿ ವಿದ್ಯಾರ್ಥಿ. ನಾನು ಜನಕಪುರಿಯ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದೇನೆ. ಸರ್, ನನ್ನದೊಂದು ಪ್ರಶ್ನೆ ಇದೆ-ನಾವು ಸದಾ ಪ್ರೇರಣೆಯೊಂದಿಗೆ, ಉತ್ಸಾಹದೊಂದಿಗೆ ಇರುವುದು ಹೇಗೆ ಮತ್ತು ಪಠ್ಯಕ್ರಮದಲ್ಲಿ ಬಹಳಷ್ಟು ಬಾಕಿ ಇರುವಾಗ ಯಶಸ್ವಿಯಾಗುವುದು ಹೇಗೆ?.
ನಿರೂಪಕರು: ಧನ್ಯವಾದಗಳು, ವೈಭವ್. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಮಕ್ಕಳು ಮಾತ್ರವಲ್ಲ, ನಮ್ಮ ಪೋಷಕರು ಕೂಡಾ ತಾವು ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಬಯಸುತ್ತಾರೆ. ಒಡಿಶಾದ ಜಾರ್ಸುಗುಡಾದ ಪೋಷಕರಾದ ಸುಜಿತ್ ಕುಮಾರ್ ಪ್ರಧಾನ ಜೀ ಅವರೂ ಈ ವಿಷಯದಲ್ಲಿ ನಿಮ್ಮಿಂದ ಮಾರ್ಗದರ್ಶನವನ್ನು ನಿರೀಕ್ಷಿಸುತ್ತಾರೆ. ಶ್ರೀ ಸುಜಿತ್ ಪ್ರಧಾನ್ ಜೀ, ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ಸುಜಿತ್ ಪ್ರಧಾನ್: ನಮಸ್ಕಾರ ಪ್ರಧಾನ ಮಂತ್ರಿ ಅವರಿಗೆ. ನನ್ನ ಹೆಸರು ಸುಜಿತ್ ಕುಮಾರ್ ಪ್ರಧಾನ್. ನನ್ನ ಪ್ರಶ್ನೆ ಮಕ್ಕಳಿಗೆ ಅವರ ಪಠ್ಯಕ್ರಮವನ್ನು ಪೂರ್ಣಗೊಳಿಸುವಂತೆ ಉತ್ತೇಜಿಸುವುದು ಹೇಗೆ? ಧನ್ಯವಾದಗಳು.
ನಿರೂಪಕರು: ತಮಗೆ ಧನ್ಯವಾದಗಳು ಸರ್. ಗೌರವಾನ್ವಿತ ಪ್ರಧಾನ ಮಂತ್ರಿ, ಶ್ರೀಮಂತ ವಾಸ್ತುಶಿಲ್ಪ ಮತ್ತು ಪೈಂಟಿಂಗ್ ಗೆ ಖ್ಯಾತವಾಗಿರುವ ರಾಜಸ್ಥಾನದ ಜೈಪುರದಿಂದ 12 ನೇ ತರಗತಿ ವಿದ್ಯಾರ್ಥಿ ಕೋಮಲ್ ಶರ್ಮಾ ಆಕೆಯ ಸಮಸ್ಯೆಯನ್ನು ನೀವು ಪರಿಹರಿಸಬೇಕು ಎಂದು ಬಯಸುತ್ತಿದ್ದಾರೆ. ಕೋಮಲ್, ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ.
ಕೋಮಲ್: ನಮಸ್ಕಾರ, ಗೌರವಾನ್ವಿತ ಪ್ರಧಾನ ಮಂತ್ರಿ ಸರ್. ನನ್ನ ಹೆಸರು ಕೋಮಲ್ ಶರ್ಮಾ. ಜೈಪುರದ ಬಗ್ರೂನಲ್ಲಿರುವ ಸರಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ 12 ತರಗತಿ ವಿದ್ಯಾರ್ಥಿ . ನಿಮಗೆ ನನ್ನ ಪ್ರಶ್ನೆ- ಒಂದು ಪತ್ರಿಕೆಯನ್ನು ಉತ್ತಮವಾಗಿ ಬರೆಯದ ನನ್ನ ಸಹವಿದ್ಯಾರ್ಥಿಯನ್ನು (ಕ್ಲಾಸ್ ಮೇಟ್) ಹೇಗೆ ಸಂತೈಸುವುದು?
ನಿರೂಪಕರು: ಧನ್ಯವಾದಗಳು ಕೋಮಲ್. ಗೌರವಾನ್ವಿತ ಪ್ರಧಾನ ಮಂತ್ರಿ ಸರ್!. ಕತಾರಿನ 10 ನೇ ತರಗತಿ ವಿದ್ಯಾರ್ಥಿ ಆರೋನ್ ಎಬೆನ್ ಇಂತಹದೇ ಸಮಸ್ಯೆಯಲ್ಲಿದ್ದಾರೆ. ಆರೋನ್ ದಯವಿಟ್ಟು ಮುಂದುವರೆಸಿ ಮತ್ತು ನಿಮ್ಮ ಪ್ರಶ್ನೆಯನ್ನು ಕೇಳಿರಿ.
ಆರೋನ್ : ನಮಸ್ತೆ ಸರ್. ಕತಾರಿನ ದೋಹಾದ ಎಂ.ಇ.ಎಸ್. ಇಂಡಿಯನ್ ಸ್ಕೂಲ್ ನಿಂದ ಶುಭಾಶಯಗಳು!. ನಾನು ಆರೋನ್ ಎಬೆನ್, ಹತ್ತನೇ ತರಗತಿಯ ವಿದ್ಯಾರ್ಥಿ. ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಗೆ ನನ್ನ ಪ್ರಶ್ನೆ ಎಂದರೆ ನಾನು ನನ್ನನ್ನು ವಿಳಂಬ ಪ್ರವೃತ್ತಿಯಿಂದ, ಮುಂದೂಡುವ ಮನೋಭಾವದಿಂದ ಹೇಗೆ ಪಾರು ಮಾಡಿಕೊಳ್ಳಬಹುದು ಮತ್ತು ನನ್ನ ಪರೀಕ್ಷಾ ಭಯವನ್ನು ಹೇಗೆ ದೂರವಿಡಬಹುದು ಮತ್ತು ತಯಾರಿಯ ಕೊರತೆಯ ಭಾವನೆಯನ್ನು ಹೇಗೆ ದೂರ ಮಾಡಬಹುದು.
ನಿರೂಪಕರು :: ಧನ್ಯವಾದಗಳು ಆರೋನ್. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ವೈಭವ್, ಶ್ರೀ ಪ್ರಧಾನ ಜೀ, ಕೋಮಲ್ ಮತ್ತು ಆರೋನ್ ಅವರು ಪ್ರೇರಣೆಯ, ಉತ್ತೇಜನದ ಕೊರತೆಯ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು ಮತ್ತು ಶೈಕ್ಷಣಿಕ ವಿಷಯಗಳಿಗೆ ಹೇಗೆ ಬದ್ಧತೆಯಿಂದ ಇರಬೇಕು ಎಂಬ ಬಗ್ಗೆ ತಮ್ಮ ಜ್ಞಾನವನ್ನು ಪಡೆಯಲು ಕಾತರದಿಂದ ಇದ್ದಾರೆ. ಜೊತೆಗೆ ಭಾರತದಾದ್ಯಂತದ ಇತರ ಅನೇಕ ವಿದ್ಯಾರ್ಥಿಗಳೂ ಸಮಗ್ರ ಬೆಳವಣಿಗೆಯ ವ್ಯಕ್ತಿಗಳಾಗಿ ರೂಪುಗೊಳ್ಳಲು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ಭಾಗಿಯಾಗುವುದನ್ನು ಖಾತ್ರಿಪಡಿಸುವುದು ಹೇಗೆ ಎಂಬುದನ್ನು ತಿಳಿಯಲು ಇಚ್ಛಿಸುತ್ತಿದ್ದಾರೆ. ದಯವಿಟ್ಟು, ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿ, ಸರ್.
ಪ್ರಧಾನ ಮಂತ್ರಿ: ಪ್ರೇರಣೆ, ಉತ್ತೇಜನ ನೀಡುವುದಕ್ಕೆ ಚುಚ್ಚುಮದ್ದು ಇದೆ ಎಂದು ಯಾರಾದರೂ ತಿಳಿದುಕೊಂಡಿದ್ದರೆ ಅದು ದೊಡ್ಡ ತಪ್ಪು. ಮತ್ತು ಅವರದನ್ನು ತೆಗೆದುಕೊಂಡಿದ್ದರೆ ಆಗ ಅಲ್ಲಿ ಪ್ರೇರಣೆಯ ಯಾವ ಸಮಸ್ಯೆಯೂ ಇರುವುದಿಲ್ಲ. ನಿಮ್ಮನ್ನು ನೀವು ನೋಡಿಕೊಳ್ಳಿ ಮತ್ತು ನಿಮ್ಮ ಉತ್ಸಾಹ ಭಂಗ ಮಾಡುವ ಸಂಗತಿಗಳನ್ನು ಪತ್ತೆ ಮಾಡಿರಿ. ದಿನದ ಕಾಲ, ಅಥವಾ ವಾರ ಇಲ್ಲವೇ ತಿಂಗಳ ಕಾಲ ನಿಮ್ಮನ್ನು ನೀವು ನೋಡಿಕೊಂಡ ಬಳಿಕ ನಿಮಗೆ ಯಾವುದು ಕಷ್ಟವಾಗುತ್ತಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ನಿಮ್ಮನ್ನು ಪ್ರೇರೇಪಿಸುವ ಸಂಗತಿಗಳನ್ನು ಗುರುತಿಸಲು ಪ್ರಯತ್ನಿಸಿ. ಒಂದು ವೇಳೆ ನೀವು ಬಹಳ ಉತ್ತಮವಾದ ಸಂಗೀತವನ್ನೂ, ಹಾಡನ್ನೋ ಕೇಳಿದಿರಿ ಮತ್ತು ಅದರ ಸಂಗೀತದಿಂದ ಪ್ರಭಾವಿತರಾದಿರಿ ಎಂದಿಟ್ಟುಕೊಳ್ಳೋಣ. ನಿಮಗೆ ಇದು ಕೂಡಾ ಚಿಂತನೆಯ ಹಾದಿ ಎಂಬ ಭಾವನೆ ಉದಿಸಬಹುದು. ಆ ಬಳಿಕ ನೀವು ಹೊಸದಾಗಿ ಯೋಚನೆಗೆ ತೊಡಗಿ. ಇದು ನಿಮಗೆ ಯಾರೊಬ್ಬರೂ ಹೇಳಿದ್ದಲ್ಲ, ಆದರೆ ನೀವು ನಿಮ್ಮನ್ನು ತಯಾರು ಮಾಡಿಕೊಳ್ಳುತ್ತೀರಿ. ನಿಮಗೆ ಉತ್ಸಾಹ ತುಂಬುವ, ಪ್ರೇರಣೆ ನೀಡುವ ಸಂಗತಿಗಳು ಯಾವುವು ಎಂಬುದನ್ನು ನೀವು ಗುರುತಿಸಿಕೊಂಡಿದ್ದೀರಿ ಮತ್ತು ಅದನ್ನು ಮಾಡುವ ಬಗ್ಗೆ ಭಾವನೆಯನ್ನು ರೂಪಿಸಿಕೊಂಡಿದ್ದೀರಿ. ಆದುದರಿಂದ ನಿಮ್ಮನ್ನು ನೀವು ವಿಶ್ಲೇಷಣೆಗೆ ಒಳಪಡಿಸಿಕೊಳ್ಳುವುದು ಬಹಳ ಮುಖ್ಯ. ಬೇರೊಬ್ಬರ ಸಹಾಯಕ್ಕಾಗಿ ನಿರೀಕ್ಷೆ ಮಾಡಬೇಡಿ. ನಿಮ್ಮ ಮನಸ್ಥಿತಿ ಸರಿ ಇಲ್ಲ ಎಂದು ಯಾರಿಗೂ ಪದೇ ಪದೇ ಹೇಳಬೇಡಿ. ಇದರಿಂದ ಏನಾಗುತ್ತದೆ ಎಂದರೆ ನಿಮ್ಮಲ್ಲಿ ಒಂದು ದೌರ್ಬಲ್ಯ ಬೆಳೆಯುತ್ತದೆ. ಮತ್ತು ನೀವು ಸಹಾನುಭೂತಿ ಪಡೆಯಲು ಪ್ರಯತ್ನ ಮಾಡುತ್ತೀರಿ.ನೀವು ನಿಮ್ಮ ತಾಯಿಯವರಿಂದಲೂ ಅಂತಹದೇ ಸಹಾನುಭೂತಿ ಮತ್ತು ಪ್ರೋತ್ಸಾಹವನ್ನು ನಿರೀಕ್ಷೆ ಮಾಡುತ್ತೀರಿ. ಅಂತಿಮವಾಗಿ ಆ ದೌರ್ಬಲ್ಯ ನಿಮ್ಮಲ್ಲಿ ಬೆಳೆಯುತ್ತಾ ಹೋಗುತ್ತದೆ. ನಿಮ್ಮಲ್ಲಿ ಕೆಲವು ಉತ್ತಮ ಸಂದರ್ಭಗಳು ಇರಬಹುದು, ಆದರೆ ಯಾವತ್ತೂ ಸಹಾನುಭೂತಿ ಪಡೆಯಲು ಪ್ರಯತ್ನಿಸಬೇಡಿ. ಯಾವತ್ತಿಗೂ!. ನಿಮಗೆ ನಿಮ್ಮ ಜೀವನದಲ್ಲಿಯ ಸಮಸ್ಯೆಗಳು ಮತ್ತು ಹತಾಶೆಯ ವಿರುದ್ಧ ನೀವೇ ಹೋರಾಡಬಲ್ಲಿರಿ ಎಂಬ ವಿಶ್ವಾಸ ನಿಮ್ಮಲ್ಲಿ ಇರಬೇಕು. ಎರಡನೆಯದಾಗಿ ನಾವು ಕೆಲವು ಸಂಗತಿಗಳನ್ನು ಗಮನಿಸುವ ಮೂಲಕ ಪ್ರೇರಣೆಯನ್ನು ಪಡೆಯುತ್ತೇವೆ.ಉದಾಹರಣೆಗೆ ನಿಮ್ಮ ಕುಟುಂಬದಲ್ಲಿ ಎರಡು ಅಥವಾ ಮೂರು ವರ್ಷದ ಮಗು ಇರಬಹುದು ಮತ್ತು ಅದಕ್ಕೆ ಒಂದು ವಸ್ತು ಬೇಕಾಗಿರುತ್ತದೆ, ಆದರೆ ಅದಕ್ಕೆ ಆ ವಸ್ತು ಇರುವಲ್ಲಿಗೆ ತಲುಪುವುದು ಕಷ್ಟಸಾಧ್ಯವಾಗಿರುತ್ತದೆ. ನೀವದನ್ನು ದೂರದಿಂದ ಗಮನಿಸುತ್ತ ಇರುತ್ತೀರಿ. ಆ ಮಗು ಅದಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದು ಮುಗ್ಗರಿಸುತ್ತದೆ. ಮತ್ತೆ ಎದ್ದು ಮತ್ತೆ ಪ್ರಯತ್ನವನ್ನು ಮುಂದುವರಿಸುತ್ತದೆ. ಆ ಮಗು ನಿಮಗೆ ಪಾಠವನ್ನು ಕಲಿಸುತ್ತಿದೆ. ಆ ಮಗುವಿಗೆ ಅಲ್ಲಿಗೆ ತಲುಪುವುದು ಕಷ್ಟ, ಆದರೆ ಆ ಮಗು ತನ್ನ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಆ ಮಗುವಿಗೆ ಈ ಪ್ರೇರಣೆಯನ್ನು ಶಾಲೆಯಲ್ಲಿ ಕಲಿಸಲಾಯಿತೇ? ಆ ಎರಡೂವರೆ ವರ್ಷದ ಮಗುವಿಗೆ ಪ್ರಧಾನ ಮಂತ್ರಿ ಏನಾದರೂ ವಿವರಿಸಿ ಹೇಳಿದರೇ?. ಯಾರಾದರೂ ಆ ಮಗುವಿಗೆ ಮತ್ತೆ ಎದ್ದು ನಿಲ್ಲು ಮತ್ತು ಓಡು ಎಂದು ಹೇಳಿಕೊಟ್ಟರೇ?. ಇಲ್ಲ!. ದೇವರು ಇಂತಹ ಬುದ್ಧಿಯನ್ನು ಆನುವಂಶೀಯವಾಗಿ ನಮಗೆಲ್ಲರಿಗೂ ದಯಪಾಲಿಸಿದ್ದಾರೆ. ಅದು ನಮಗೆ ಏನನ್ನಾದರೂ ಮಾಡುವುದಕ್ಕೆ ಚಾಲಕ ಶಕ್ತಿಯಾಗಿರುತ್ತದೆ. ದಿವ್ಯಾಂಗ ವ್ಯಕ್ತಿಗಳು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ನಡೆಸಲು ತಮ್ಮದೇ ವಿಧಾನಗಳನ್ನು ಕಂಡುಕೊಂಡಿರುವುದನ್ನು ನೀವು ನೋಡಿರುತ್ತೀರಿ ಮತ್ತು ಅವರು ಅದನ್ನು ಚೆನ್ನಾಗಿ ಮಾಡುತ್ತಿರುತ್ತಾರೆ. ಅವರ ದೇಹದಲ್ಲಿ ಅಷ್ಟೆಲ್ಲಾ ಕೊರತೆಗಳಿದ್ದರೂ ಅವರು ಸೋಲುವುದಿಲ್ಲ ಮತ್ತು ಅವರ ಕೊರತೆಗಳನ್ನೇ ಅವರ ಶಕ್ತಿಯನ್ನಾಗಿಸಿಕೊಂಡಿರುತ್ತಾರೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆಯೇ. ಅವರನ್ನು ಗಮನಿಸುವ ಮೂಲಕ ನೀವು ಕೂಡಾ ಪ್ರೇರಣೆ ಪಡೆಯಬಹುದು. ನಾವು ನಮ್ಮ ಪರಿಸರವನ್ನು, ಸುತ್ತಮುತ್ತಲಿನ ಸಂಗತಿಗಳನ್ನು ಧನಾತ್ಮಕವಾಗಿ ಗಮನಿಸಬೇಕು ಮತ್ತು ಅವರ ದೌರ್ಬಲ್ಯಗಳನ್ನು ಮೇಲ್ನೋಟಕ್ಕೆ ಗಮನಿಸುತ್ತಿರಬೇಕು. ನಾವು ಬಹಳ ಸೂಕ್ಷ್ಮವಾಗಿ ಅವರು ತಮ್ಮ ದೌರ್ಬಲ್ಯವನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಹೌದು ಆ ಬಳಿಕ ಅವರನ್ನು ನಿಮ್ಮೊಂದಿಗೆ ಹೋಲಿಸಿಕೊಳ್ಳಿ, ತುಲನೆ ಮಾಡಿ. ಮತ್ತು ಆಗ ದೇವರು ನಿಮಗೆ ಎಲ್ಲ ಅಂಗಗಳೂ ಸರಿಯಾಗಿ ಕಾರ್ಯನಿರ್ವಹಿಸುವ ಸಮರ್ಥ ದೇಹಪ್ರಕೃತಿಯನ್ನು ಒದಗಿಸಿದ್ದಾನೆ ಎಂಬುದನ್ನು ಅರಿತುಕೊಳ್ಳುತ್ತೀರಿ. ಹಾಗಿರುವಾಗ ನೀವೇಕೆ ಹತಾಶರಾಗಬೇಕು. ಎರಡನೆಯದಾಗಿ, ನೀವು ನಿಮ್ಮದೇ ಪರೀಕ್ಷೆಯನ್ನು ಎಂದಾದರೂ ಬರೆದಿರುವಿರಾ? ನೀವು ನಿಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಯಾಕೆ ಯಾರಾದರೂ ನಿಮ್ಮ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು?. ನಾನು ನನ್ನ ಪುಸ್ತಕ ’ಎಕ್ಸಾಂ ವಾರಿಯರ್ಸ್” ನಲ್ಲಿ ಬರೆದಿದ್ದೇನೆ ಏನೆಂದರೆ ನೀವು ಕೆಲವೊಮ್ಮೆ ಪರೀಕ್ಷೆಗೆ ಪತ್ರ ಬರೆಯಬೇಕು ಎಂಬುದಾಗಿ. “ಹಾಯ್, ಪ್ರೀತಿಯ ಪರೀಕ್ಷೆಯೇ, ನಾನು ಇಷ್ಟೊಂದು ತಯಾರಿ ಮಾಡಿದ್ದೇನೆ, ನನ್ನ ಶಿಕ್ಷಕರ ಜೊತೆ ಹಲವಾರು ಗಂಟೆಗಳ ಕಾಲ ಕುಳಿತುಕೊಂಡಿದ್ದೇನೆ, ನನ್ನ ತಾಯಿಯ ಜೊತೆ ಇಷ್ಟೊಂದು ಸಮಯವನ್ನು ಕಳೆದಿದ್ದೇನೆ ಮತ್ತು ನನ್ನ ನೆರೆಮನೆಯ ವಿದ್ಯಾರ್ಥಿಯಿಂದ ಬಹಳಷ್ಟನ್ನು ಕಲಿತಿದ್ದೇನೆ. ನನಗೆ ಸವಾಲೆಸೆಯಲು ಮತ್ತು ನನ್ನ ಪರೀಕ್ಷೆ ತೆಗೆದುಕೊಳ್ಳಲು ನೀನ್ಯಾರು?. ನಾನು ನಿನ್ನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತೇನೆ. ಯಾರ ಕೈ ಮೇಲಾಗುತ್ತದೆ ಎಂಬುದನ್ನು ನೋಡೋಣ”. ಇದನ್ನು ಕೆಲ ಕಾಲ ಮಾಡಿ. ಕೆಲವೊಮ್ಮೆ ನೀವು ಯೋಚಿಸುತ್ತಿರುವುದು ತಪ್ಪು ಎಂಬ ಭಾವನೆ ನಿಮಗೆ ಬರಬಹುದು. ನೀವಿದನ್ನು ಮಾಡಿ. ಮರುಮನನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದನ್ನು ನೀವು ಮಾಡಿದಿರಾದರೆ ನಿಮಗೆ ಹೊಸ ಚಿಂತನೆ ದೊರಕುತ್ತದೆ. ಉದಾಹರಣೆಗೆ ನೀವು ನಿಮ್ಮ ತರಗತಿ ಕೋಣೆಗಳಲ್ಲಿ ಏನನ್ನೋ ಕಲಿತುಕೊಂಡಿದ್ದೀರಿ. ಬಳಿಕ ನೀವು ನಿಮ್ಮ ಮೂರು ನಾಲ್ಕು ಸ್ನೇಹಿತರ ಜೊತೆ ಕುಳಿತುಕೊಳ್ಳಿ ಮತ್ತು ಅವರಿಗೆ ನೀವು ತರಗತಿಗಳಲ್ಲಿ ಏನು ಕಲಿತುಕೊಂಡಿದ್ದೀರಿ ಎಂಬುದನ್ನು ವಿವರಿಸಿ. ನಿಮ್ಮ ಸ್ನೇಹಿತರೂ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕು. ಪ್ರತಿಯೊಬ್ಬರೂ ತರಗತಿಗಳಲ್ಲಿ ಕಲಿತುಕೊಂಡದ್ದನ್ನು ಹಂಚಿಕೊಳ್ಳುತ್ತಾರೆ. ಅದೇ ಪ್ರಕ್ರಿಯೆಯನ್ನು ನಿಮ್ಮ ಸ್ನೇಹಿತರಿಂದ ಪುನರಾವರ್ತಿಸಿ, ಪ್ರತಿಯೊಬ್ಬರೂ ತರಗತಿಗಳಲ್ಲಿ ತಾವು ಕಲಿತದ್ದನ್ನು ಹಂಚಿಕೊಳ್ಳುತ್ತಾರೆ. ಆಗ ನೀವೆಲ್ಲರೂ ಒಂದು ಅಂಶವನ್ನು ಮರೆತಿರಬಹುದು. ಆದರೆ ನಿಮ್ಮ ಸ್ನೇಹಿತರೊಬ್ಬರು ಅದನ್ನು ಅರಿಯುತ್ತಾರೆ. ನೀವೆಲ್ಲರೂ ಯಾವುದೇ ಪುಸ್ತಕಗಳಿಲ್ಲದೆ ತರಗತಿಯ ಪಾಠಗಳನ್ನು ಪುನರಾವರ್ತಿಸುತ್ತಿರುವಾಗ ಮತ್ತು ಚರ್ಚೆಗಳ ಮೂಲಕ ಅದನ್ನು ಮಾಡುವಾಗ ನಿಮಗೆ ತನ್ನಿಂದ ತಾನಾಗಿಯೇ ಅದನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ನೀವಿದನ್ನು ಗಮನಿಸಿರಬಹುದು. ಯಾವುದೇ ದೊಡ್ಡ ಘಟನೆ ನಡೆದಾಗ, ಟಿ.ವಿ. ಪತ್ರಕರ್ತರು ರಾಜಕೀಯ ನಾಯಕರ ಮೈಕ್ ಎದುರು ಹಿಡಿಯುತ್ತಾರೆ ಮತ್ತು ಆತ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಕೆಲವರಿಗೆ ಪ್ರಾಂಪ್ಟ್ ಮಾಡಬೇಕಾಗುತ್ತದೆ. ಇನ್ನೊಂದೆಡೆ ಅಲ್ಲಿ ಅಪಘಾತ ಆಗಿರುತ್ತದೆ.ಮತ್ತು ಆಗ ಟಿ.ವಿ. ಪತ್ರಕರ್ತರು ಗ್ರಾಮೀಣ ಮಹಿಳೆಯಿಂದ ಪ್ರತಿಕ್ರಿಯೆ ಕೇಳುತ್ತಾರೆ. ಆಕೆಗೆ ಟಿ.ವಿ.ಎಂದರೆ ಏನು ಎಂಬುದೇ ಗೊತ್ತಿಲ್ಲ. ಆದರೆ ನೀವು ನೋಡಿ, ಆಕೆ ಇಡೀ ಘಟನೆಯನ್ನು ವಿವರಿಸುತ್ತಾರೆ; ಭಾರೀ ಆತ್ಮವಿಶ್ವಾಸದೊಂದಿಗೆ. ಹೇಗೆ?, ಯಾಕೆಂದರೆ ಆಕೆ ಏನನ್ನು ನೋಡಿದ್ದಾರೋ ಅದನ್ನು ಪೂರ್ಣವಾಗಿ ಜೀರ್ಣಿಸಿಕೊಂಡಿದ್ದಾರೆ ಮತ್ತು ಅದರಿಂದಾಗಿ ಅವರಿಗೆ ಇಡೀ ಘಟನೆಯನ್ನು ಮರು ವಿವರಿಸುವುದಕ್ಕೆ ಸಾಧ್ಯವಾಗಿದೆ. ಆದುದರಿಂದ ನೀವು ಮುಕ್ತ ಮನಸ್ಸಿನಿಂದ ತೊಡಗಿಸಿಕೊಂಡರೆ ನಿರಾಸೆ, ಹತಾಶೆಗಳು ಎಂದೂ ನಿಮ್ಮ ಬಾಗಿಲನ್ನು ಬಡಿಯಲಾರವು ಎಂಬುದು ನನ್ನ ನಂಬಿಕೆ.
ನಿರೂಪಕರು :ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ನಮಗೆ ಯೋಚಿಸುವ, ಗಮನಿಸುವ ಮತ್ತು ನಂಬುವ ಮಂತ್ರವನ್ನು ಕೊಟ್ಟುದಕ್ಕಾಗಿ ಧನ್ಯವಾದಗಳು ಸರ್. ಎದುರಿಗೆ ಎಷ್ಟೇ ದೊಡ್ಡ ಶಿಖರವಿರಲಿ, ನಿಮಗೆ ಭರವಸೆ ನೀಡುತ್ತೇವೆ, ನಾವೆಂದೂ ಸೋಲುವುದಿಲ್ಲ ಎಂಬುದಾಗಿ . ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ತೆಲಂಗಾಣದ ಖಮ್ಮಮ್ ನಿಂದ ಅನೂಷಾ ಯಾದವ್, ಆಕೆ ಹನ್ನೆರಡನೇ ತರಗತಿಯ ವಿದ್ಯಾರ್ಥಿ ಮತ್ತು ತನ್ನ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಸರಾಗಿರುವಾಕೆ, ತನ್ನ ಪ್ರಶ್ನೆಗೆ ತಮ್ಮಿಂದ ಉತ್ತರ ಬಯಸುತ್ತಿದ್ದಾರೆ. ಅನೂಷಾ, ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ.
ಅನೂಷಾ: ಗೌರವಾನ್ವಿತ ಪ್ರಧಾನ ಮಂತ್ರಿ, ನಮಸ್ಕಾರ, ನನ್ನ ಹೆಸರು ಅನೂಷಾ. ನಾನು ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ 12 ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ತೆಲಂಗಾಣದ ಖಮ್ಮಮ್ ನವಳು. ಸರ್, ನಿಮಗೆ ನನ್ನ ಪ್ರಶ್ನೆ –ಶಿಕ್ಷಕರು ನಮಗೆ ಬೋಧಿಸುವಾಗ, ನಾವು ಆ ಕಾಲಕ್ಕೆ ಅದರ ಸಿದ್ದಾಂತವನ್ನು, ತಿರುಳನ್ನು ಅರ್ಥ ಮಾಡಿಕೊಂಡಿರುತ್ತೇವೆ.ಆದರೆ ಕೆಲ ಸಮಯದ ಬಳಿಕ ಅಥವಾ ಅಥವಾ ಕೆಲವು ದಿನಗಳ ಬಳಿಕ ನಾವದನ್ನು ಮರೆಯುತ್ತೇವೆ. ಈ ನಿಟ್ಟಿನಲ್ಲಿ, ದಯವಿಟ್ಟು ನಮಗೆ ಸಹಾಯ ಮಾಡಿ, ಧನ್ಯವಾದಗಳು, ಸರ್.
ನಿರೂಪಕರು :ಧನ್ಯವಾದಗಳು, ಅನೂಷಾ. ಸರ್, ನಮಗೆ ನಮೋ ಆಪ್ ಮೂಲಕ ಇನ್ನೊಂದು ಪ್ರಶ್ನೆ ಬಂದಿದೆ. ಪ್ರಶ್ನೆಯನ್ನು ಕಳುಹಿಸಿರುವ ಗಾಯತ್ರಿ ಸಕ್ಸೇನಾ ಅವರು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆಯುವಾಗ ತಮಗೆ ತಾವು ಕಲಿತ ಮತ್ತು ನೆನಪಿಟ್ಟುಕೊಂಡ ವಿಷಯದ ಶೀರ್ಷಿಕೆಯೇ ಮರೆತುಹೋಗುತ್ತದೆ ಎನ್ನುತ್ತಾರೆ. ಆದರೆ ಅವರಿಗೆ ಪರೀಕ್ಷೆಗೆ ಮೊದಲು ಮತ್ತು ನಂತರ ಅವರ ಜೊತೆಗಾರರ ಜೊತೆ ಮಾತನಾಡುವಾಗ ಅವರಿಗೆ ಸರಿಯುತ್ತರ ಸ್ಮರಣೆಗೆ ಬರುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಏನು ಮಾಡಬೇಕು?. ಸರ್ ಅನೂಷಾ ಮತ್ತು ಗಾಯತ್ರಿ ಸಕ್ಸೇನಾ ಅವರು ಮುಂದಿಟ್ಟ ನೆನಪಿನ ಶಕ್ತಿಗೆ ಸಂಬಂಧಿಸಿದ ಇಂತಹ ಪ್ರಶ್ನೆಗಳು ಇತರ ಹಲವರನ್ನೂ ಕಾಡುತ್ತಿವೆ. ಈ ನಿಟ್ಟಿನಲ್ಲಿ ದಯವಿಟ್ಟು ಅವರಿಗೆ ಮಾರ್ಗದರ್ಶನ ಮಾಡಿ. ಗೌರವಾನ್ವಿತ ಪ್ರಧಾನ ಮಂತ್ರಿ ಸರ್.
ಪ್ರಧಾನ ಮಂತ್ರಿ; ಬಹುಷಃ ಇದು ಪ್ರತೀ ವಿದ್ಯಾರ್ಥಿಯನ್ನೂ ಒಂದಲ್ಲ ಒಂದು ಹಂತದಲ್ಲಿ ಕಾಡುವ ಪ್ರಶ್ನೆ. ಪ್ರತಿಯೊಬ್ಬರೂ ನೆನಪು ಬಾರದಂತಹ ಭಾವನೆಯನ್ನು ಅನುಭವಿಸುತ್ತಾರೆ ಅಥವಾ ಮರೆತು ಹೋದ ಅನುಭವವನ್ನು ಎದುರಿಸುತ್ತಾರೆ. ಆದರೆ ಕೆಲವೊಮ್ಮೆ ಈ ಭಾವನೆಗಳು ಪರೀಕ್ಷಾ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಬರಲಾರಂಭಿಸುತ್ತವೆ. ಪರೀಕ್ಷೆಯ ಬಳಿಕ ನಿಮಗೆ ಆಶ್ಚರ್ಯವಾಗುತ್ತದೆ-“ನಾನು ಈ ವಿಷಯವನ್ನು ಇತ್ತೀಚೆಗೆ ಮನನ ಮಾಡಿಲ್ಲ, ಆದಾಗ್ಯೂ ನಾನು ಈ ಅನಿರೀಕ್ಷಿತ ಪ್ರಶ್ನೆಗೆ ಕೊಂಚ ಉತ್ತಮವಾಗಿ ಬರೆದಿದ್ದೇನೆ. ಅದರರ್ಥ ಈ ನೆನಪು ಅದೆಲ್ಲೋ ದಾಸ್ತಾನಾಗಿತ್ತು. ನಿಮಗೆ ಅದು ಗೊತ್ತಿರಲಿಲ್ಲ. ಆದರೆ ಉತ್ತರ ನಿಮ್ಮ ಮನಸ್ಸಿನಲ್ಲಿ ದಾಖಲಾಗಿತ್ತು. ಅದು ಯಾಕೆ ಎಂದರೆ ತಿರುಳನ್ನು, ಸಿದ್ಧಾಂತಗಳನ್ನು ಅರ್ಥ ಮಾಡಿಕೊಳ್ಳುವಾಗ ನಿಮ್ಮ ಮೆದುಳಿನ, ಮನಸ್ಸಿನ ದ್ವಾರಗಳು ತೆರೆದಿದ್ದವು. ಆ ದ್ವಾರಗಳು ಮುಚ್ಚಿದ್ದರೆ ನೀವು ಎಷ್ಟಾದರೂ ಪ್ರಯತ್ನಿಸಿ, ಯಾವುದೂ ನಿಮ್ಮ ಮನಸ್ಸಿನಲ್ಲಿ ಸೇರ್ಪಡೆಯಾಗುತ್ತಿರಲಿಲ್ಲ. ಕೆಲವೊಮ್ಮೆ “ಧ್ಯಾನ” ವನ್ನು ಯೋಗದ ಜೊತೆ ಸಂಯೋಜಿಸಲಾಗುತ್ತದೆ. ಧ್ಯಾನ, ಹಿಮಾಲಯ, ಋಷಿ-ಮುನಿಗಳು ನೆನಪಾಗುತ್ತಾರೆ. ನನ್ನಲ್ಲಿ ಬಹಳ ಸುಲಭವಾದ ಅರ್ಥ ಇದಕ್ಕಿದೆ: “ಧ್ಯಾನ” ಎಂದರೆ “ಗಮನ”. ನೀವು ಇಲ್ಲಿದ್ದು, ಮನೆಯಲ್ಲಿ ಅಮ್ಮ ಈಗ ಟಿ.ವಿ. ನೋಡುತ್ತಿರಬಹುದು ಎಂದು ಎಂದು ಯೋಚಿಸುತ್ತಿದ್ದರೆ ಅದರರ್ಥ ಆ ಕ್ಷಣದಲ್ಲಿ ನೀವು ಅಲ್ಲಿ ಹಾಜರಿರಲಿಲ್ಲ. ನೀವು ಮನೆಯಲ್ಲಿದ್ದಿರಿ ಮತ್ತು ನಿಮ್ಮ ಮನಸ್ಸಿನಲ್ಲಿ ನಿಮ್ಮ ಅಮ್ಮ ಟಿ.ವಿ. ನೋಡುತ್ತಿದ್ದಾರೆಯೇ ಇಲ್ಲವೇ ಎಂಬ ಚಿಂತನೆಯಲ್ಲಿ ಮಗ್ನವಾಗಿತ್ತು. ಆಕೆ ನನ್ನನ್ನು ನೋಡುತ್ತಿರಲು ಸಾಧ್ಯವೇ ಇಲ್ಲವೇ ? ಎಂಬುದನ್ನು ಯೋಚಿಸುತ್ತಿತ್ತು. ನಿಮ್ಮ ಗಮನ ಇಲ್ಲಿರಬೇಕಾಗಿತ್ತು ಆದರೆ ನಿಮ್ಮ ಗಮನ ಅಲ್ಲಿತ್ತು. ಅಂದರೆ ಅದರರ್ಥ ನಿಮ್ಮ ಗಮನ ಕೇಂದ್ರೀಕರಣ ಆಗಿರಲಿಲ್ಲ. ನೀವು ಇಲ್ಲಿದ್ದರೆ, ನಿಮ್ಮ ಗಮನ ಇಲ್ಲಿರುತ್ತಿತ್ತು. ನೀವು ಅಲ್ಲಿದ್ದಿರಿ, ಆಗ ನಿಮ್ಮ ಗಮನ ಇಲ್ಲಿರಲಿಲ್ಲ. ಆದುದರಿಂದ ಜೀವನದೊಂದಿಗೆ ಗಮನ ಮತ್ತು ಗಮನ ಕೇಂದ್ರೀಕರಣವನ್ನೂ ಅನುಸರಿಸಿ. ಇದೇನು ರಾಕೆಟ್ ವಿಜ್ಞಾನವಲ್ಲ; ನೀವು ಇದಕ್ಕಾಗಿ ಹಿಮಾಲಯಕ್ಕೆ ಹೋಗಿ ನಿಮ್ಮ ಮೂಗು ಹಿಡಿದು ಕುಳಿತುಕೊಳ್ಳಬೇಕಾಗಿಲ್ಲ.ಇದು ಬಹಳ ಸರಳ. ಆ ಕ್ಷಣದಲ್ಲಿ ಬದುಕುವುದನ್ನು ಕಲಿಯಿರಿ. ಆ ಕ್ಷಣದ ಬದುಕನ್ನು ನೀವು ಪೂರ್ಣವಾಗಿ ಅನುಭವಿದರೆ, ಆಗ ಅದು ನಿಮ್ಮ ಶಕ್ತಿಯಾಗುತ್ತದೆ.
ಬೆಳಗ್ಗೆ ಹಲವಾರು ಜನರು ಏಕ ಕಾಲದಲ್ಲಿ ಚಹಾ ಕುಡಿಯುವುದನ್ನು ಮತ್ತು ಸುದ್ದಿ ಪತ್ರಿಕೆಗಳನ್ನು ಓದುತ್ತಿರುವುದನ್ನು ನೀವು ನೋಡಿರಬಹುದು.ಇದ್ದಕ್ಕಿದ್ದಂತೆ ಮನೆಯ ಸದಸ್ಯರು ಹೇಳುತ್ತಾರೆ-ನೀರು ಬಿಸಿಯಾಗಿದೆ, ತಕ್ಷಣ ಹೋಗಿ ಸ್ನಾನ ಮಾಡಿ. ಆದರೆ ಆ ವ್ಯಕ್ತಿ ಹೇಳುತ್ತಾರೆ-“ಇಲ್ಲ ನಾನು ಸುದ್ದಿ ಪತ್ರಿಕೆಯನ್ನು ಓದಬೇಕು”. ಆಗ ಅವರು ಹೇಳುತ್ತಾರೆ-ಬೆಳಗ್ಗೆಯ ಉಪಾಹಾರ ಬಿಸಿಯಾಗಿದೆ, ಅದು ತಣ್ಣಗಾಗುವ ಮೊದಲು ಮುಗಿಸಿ ಎಂದು. ಆ ಮೇಲೂ ಆ ವ್ಯಕ್ತಿ ಹೇಳುತ್ತಾರೆ-“ಇಲ್ಲ ನನಗೆ ಸುದ್ದಿ ಪತ್ರಿಕೆ ಓದಬೇಕು” ಎಂಬುದಾಗಿ. ಆದರೆ ಸಂಜೆಯ ವೇಳೆಗೆ ಈ ಜನರ ಹತ್ತಿರ ಹೋಗಿ ಆ ದಿನ ಸುದ್ದಿ ಪತ್ರಿಕೆಯಲ್ಲಿ ಏನು ಓದಿದ್ದೀರಿ ಎಂದು ಕೇಳಿ. ನಾನು ದೃಢವಾಗಿ ಹೇಳುತ್ತೇನೆ 99% ಜನರು ಆ ದಿನದ ಸುದ್ದಿ ಪತ್ರಿಕೆಯಲ್ಲಿ ಶೀರ್ಷಿಕೆ ಏನು ಎಂಬುದಕ್ಕೆ ಉತ್ತರಿಸಲು ಕೂಡಾ ಸಮರ್ಥರಾಗುವುದಿಲ್ಲ. ಹೀಗೆ ಯಾಕೆಂದರೆ ಆ ವ್ಯಕ್ತಿಗಳು ಆ ಸಂದರ್ಭವನ್ನು ನಿಕಟವಾಗಿ ಗಮನಿಸಿರುವುದಿಲ್ಲ, ಆವರು ಆ ಕ್ಷಣಗಳನ್ನು ಅನುಭವಿಸಿರುವುದಿಲ್ಲ. ಅವರು ಅಭ್ಯಾಸಬಲದಂತೆ ಬರೇ ಪುಟಗಳನ್ನು ತಿರುಗಿಸುತ್ತಿದ್ದರಷ್ಟೇ. ಅವರ ಕಣ್ಣುಗಳು ಓದುತ್ತಿದ್ದವು ಆದರೆ ಯಾವುದೂ ದಾಖಲಾಗುತ್ತಿರಲಿಲ್ಲ. ಮತ್ತು ಯಾವುದೂ ದಾಖಲಾಗುತ್ತಿಲ್ಲದ್ದರಿಂದ ಯಾವುದು ಕೂಡಾ ಸ್ಮರಣೆಯ ಕೋಶಕ್ಕೆ ಹೋಗುತ್ತಿರಲಿಲ್ಲ. ಆದುದರಿಂದ ನಿಮ್ಮ ಅತ್ಯಂತ ಜರೂರಿನ ಅವಶ್ಯಕತೆ ಎಂದರೆ ಆ ಸಂದರ್ಭದಲ್ಲಿ ಹಾಜರಿರುವಂತೆ ನೋಡಿಕೊಂಡು ಪ್ರತಿಯೊಂದನ್ನೂ ಮಾಡುವುದು. ಮತ್ತು ನನ್ನ ನಂಬಿಕೆ ಏನೆಂದರೆ, ದೇವರ ಬಹಳ ದೊಡ್ಡ ಕೊಡುಗೆ ಏನು ಎಂದು ಯಾರಾದರೂ ನನ್ನನ್ನು ಕೇಳಿದರೆ “ವರ್ತಮಾನ”ದಲ್ಲಿ ಹಾಜರಿರುವ ಕೊಡುಗೆ ಎನ್ನುತ್ತೇನೆ. ವರ್ತಮಾನವನ್ನು ಅರಿಯುವ ಸಾಮರ್ಥ್ಯ ಇದ್ದವರಿಗೆ ಭವಿಷ್ಯ ಎಂದೂ ಪ್ರಶ್ನಾರ್ಥಕ ಚಿಹ್ನೆಯಾಗುವುದಿಲ್ಲ. ಈ ವರ್ತಮಾನದಲ್ಲಿ ಬದುಕಿ ಮತ್ತು ಈ ವರ್ತಮಾನವನ್ನು ಹೀರಿಕೊಳ್ಳಿ. ನೆನಪಿನ ಕೊರತೆಗೆ ಕಾರಣ “ಆ ಸಂದರ್ಭದಲ್ಲಿ ಬದುಕದೇ ಇರುವುದು” .ಮತ್ತು ಅದರಿಂದಾಗಿ ನಾವು ನೆನಪನ್ನು ಕಳೆದುಕೊಳ್ಳುತ್ತೇವೆ.
ಎರಡನೆಯದಾಗಿ ನೆನಪು ಜೀವನಕ್ಕೆ ಸಂಬಂಧಿಸಿದ್ದು. ನೀವು ಅದು ಪರೀಕ್ಷೆಗಾಗಿ ಮಾತ್ರ ಮುಖ್ಯ ಎಂದು ಭಾವಿಸಿದರೆ, ಆಗ ನೀವು ಅದರ ಮೌಲ್ಯವನ್ನು ಎಂದೂ ಅರ್ಥ ಮಾಡಿಕೊಳ್ಳುವುದಿಲ್ಲ. ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಹುಟ್ಟಿದ ದಿನವನ್ನು ನೆನಪಿಟ್ಟುಕೊಳ್ಳುತ್ತೀರಿ ಮತ್ತು ಅವರಿಗೆ ಅಂದು ಕರೆ ಮಾಡುತ್ತೀರಿ; ನಿಮ್ಮಲ್ಲಿ ಆ ನೆನಪು ಇರುತ್ತದೆ ಅದರಿಂದಾಗಿ ನೀವು ಆತನ ಜನ್ಮದಿನವನ್ನು ನೆನಪಿಸಿಕೊಂಡಿರಿ. ಆ ನೆನಪು ನಿಮ್ಮ ಜೀವನದ ಹರಹನ್ನು ವಿಸ್ತಾರ ಮಾಡಿಕೊಳ್ಳಲು ನೆರವಾಗುತ್ತದೆ.ನಿಮ್ಮ ಸ್ನೇಹಿತ ಕರೆ ಬಂದಾಗ ಯೋಚಿಸುತ್ತಾನೆ “ಓಹ್! ಅವನು ನನ್ನ ಜನ್ಮ ದಿನ ನೆನಪಿಟ್ಟಿದ್ದಾನೆ. ಅದರರ್ಥ ಅವನ ಜೀವನದಲ್ಲಿ ನನಗೆ ಮಹತ್ವ ಇದೆ”. ಆವನು ನಿಮ್ಮ ಜೀವನದ ಗೆಳೆಯ ಆಗುತ್ತಾನೆ. ಇದಕ್ಕೇನು ಕಾರಣ? ಇದಕ್ಕೆ ಕಾರಣ ನಿಮ್ಮ ನೆನಪು. ನೆನಪು ಎಂಬುದು ಜೀವನದಲ್ಲಿ ಬೆಳವಣಿಗೆಗೆ ಪ್ರಮುಖ ವೇಗವರ್ಧಕ. ಮತ್ತು ಆದುದರಿಂದ ನಾವು ನೆನಪುಗಳನ್ನು, ಸ್ಮರಣ ಶಕ್ತಿಯನ್ನು ಬರೇ ಪರೀಕ್ಷೆಗಳಿಗೆ, ಪ್ರಶ್ನೆಗಳಿಗೆ ಮತ್ತು ಉತ್ತರಗಳಿಗೆ ಸೀಮಿತ ಮಾಡಿಕೊಳ್ಳಬಾರದು. ನೀವದನ್ನು ವಿಸ್ತರಿಸುತ್ತ ಹೋಗಿ. ನೀವು ಹೆಚ್ಚು ಹೆಚ್ಚು ವಿಸ್ತರಿಸಿದಷ್ಟೂ ಹೆಚ್ಚು ಸಂಗತಿಗಳು ಸ್ವಯಂಚಾಲಿತ ಎಂಬಂತೆ ತನ್ನಿಂದ ತಾನೇ ಸೇರುತ್ತಲೇ ಹೋಗುತ್ತವೆ.
ಇಲ್ಲಿ ಇನ್ನೊಂದು ಉದಾಹರಣೆ ಇದೆ. ಎರಡು ಪಾತ್ರೆಗಳನ್ನು ತೆಗೆದುಕೊಳ್ಳಿ. ಎರಡರಲ್ಲೂ ನೀರು ತುಂಬಿಸಿ ಮತ್ತು ಒಂದೊಂದು ನಾಣ್ಯವನ್ನು ಅದರಲ್ಲಿ ಹಾಕಿ. ನೀರು ಶುದ್ಧವಾಗಿರುತ್ತದೆ ಮತ್ತು ಸ್ವಚ್ಛವಾಗಿರುತ್ತದೆ. ಎರಡು ಪ್ರಕರಣಗಳಲ್ಲಿಯೂ ಒಂದೇ ರೀತಿಯ ನೀರು ಇದೆ, ಒಂದೇ ರೀತಿಯ ಪಾತ್ರೆಗಳಿವೆ ಮತ್ತು ಒಂದೇ ರೀತಿಯ ನಾಣ್ಯಗಳಿವೆ. ಆದರೆ ಒಂದು ಪಾತ್ರೆ ಅಲುಗಾಡುತ್ತಿರುತ್ತದೆ. ಹಾಗಾಗಿ ನೀರು ಕೂಡಾ ಅತ್ತಿಂದಿತ್ತ ಓಡಾಡುತ್ತಿರುತ್ತದೆ. ಇನ್ನೊಂದು ಪಾತ್ರೆ ಸ್ಥಿರವಾಗಿರುತ್ತದೆ. ಪ್ರತೀ ಪಾತ್ರೆಯ ತಳದಲ್ಲಿ ನಾಣ್ಯ ಇದೆ. ಸ್ಥಿರವಾದ ನೀರಿನೊಳಗೆ ಇರುವ ನಾಣ್ಯ ನಿಮಗೆ ಈಗಲೂ ಸ್ಪಷ್ಟವಾಗಿ ಕಾಣುತ್ತದೆ. ಅದರ ಮೇಲೆ ಬರೆದಿರುವುದನ್ನೂ ಸುಲಭವಾಗಿ ಓದಬಹುದಾಗಿರುತ್ತದೆ. ಆದರೆ ಅಂತದೇ ಪಾತ್ರೆಯೊಳಗೆ ಚಲಿಸುತ್ತಿರುವ, ಅಲುಗಾಡುತ್ತಿರುವ ನೀರಿನೊಳಗಣ ನಾಣ್ಯ ಸ್ಪಷ್ಟವಾಗಿ ಕಾಣಲಾರದು. ಏನು ಕಾರಣ?. ಯಾಕೆಂದರೆ ನೀರು ಚಲಿಸುತ್ತಿದೆ. ಪಾತ್ರೆ ಅಲುಗಾಡುತ್ತಿದೆ. ಮನಸ್ಸು ಕೂಡಾ ಇದೇ ರೀತಿ ಚಲಿಸುತ್ತಿದ್ದರೆ ಮತ್ತು ನಾವು “ನಾಣ್ಯ” ವನ್ನು ನೋಡಲೆತ್ನಿಸಿದರೆ ಅದು ಸಾಧ್ಯವಾಗದು. ಇದುವೇ ಪರೀಕ್ಷಾ ಕೊಠಡಿಯಲ್ಲಿ ಸಮಸ್ಯೆಯಾಗಿರುತ್ತದೆ. ಪರೀಕ್ಷಾ ಕೊಠಡಿಯಲ್ಲಿ ನೀವು ಎದುರಿಸುವ ಸಮಸ್ಯೆ ಎಂದರೆ ನೀವು ನಿಮ್ಮ ಹತ್ತಿರ ಕುಳಿತ ವ್ಯಕ್ತಿಯ ಬಗ್ಗೆ ಚಿಂತಿಸುತ್ತ ಇರುತ್ತೀರಿ. “ಅವನು ಮೇಲೆ ನೋಡುತ್ತಿಲ್ಲ; ಅವನು ಬರೆಯುತ್ತಾ ಇದ್ದಾನೆ; ಈಗ ನಾನು ಹಿಂದೆ ಬೀಳುತ್ತೇನೆ..” ಅಂದರೆ ಮನಸ್ಸು ಈ ವಿಷಯಗಳ ಬಗ್ಗೆ ಗಮನ ಹರಿಸುತ್ತಿರುತ್ತದೆ. ನಿಮ್ಮ ಮನಸ್ಸು ಎಷ್ಟೊಂದು ಗೊಂದಲದಲ್ಲಿರುತ್ತದೆ ಎಂದರೆ ನಿಮ್ಮ ಪಾತ್ರೆಯ ಒಳಗಿರುವ ನಾಣ್ಯದಂತಿರುವ “ನೆನಪ” ನ್ನು ನೋಡಲು ನೀವು ವಿಫಲರಾಗುತ್ತೀರಿ. ಒಮ್ಮೆ ನಿಮ್ಮ ಮನಸ್ಸನ್ನು ಸ್ಥಿರವಾಗಿಸಲು ಪ್ರಯತ್ನಿಸಿ. ಮನಸ್ಸನ್ನು ಸ್ಥಿರವಾಗಿಸಲು ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ , ಆಗ ಆಳವಾದ ಉಸಿರು ತೆಗೆದುಕೊಳ್ಳಲು ಪ್ರಯತ್ನಿಸಿ. ಮೂರು ನಾಲ್ಕು ಬಾರಿ ಆಳವಾದ ಉಸಿರು ತೆಗೆದುಕೊಳ್ಳಿ. ನೇರವಾಗಿ ಕುಳಿತುಕೊಳ್ಳಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಸ್ವಲ್ಪ ಕಾಲ ಸುಮ್ಮನೆ ಕುಳಿತುಕೊಳ್ಳಿ. ಮನಸ್ಸು ಸ್ಥಿರವಾದಂತೆ ಅದು ನಾಣ್ಯವನ್ನು ಹುಡುಕಲು ಆರಂಭ ಮಾಡುತ್ತದೆ. ಪ್ರತಿಯೊಂದೂ ನಿಮ್ಮ ಸ್ಮರಣೆಯಲ್ಲಿ ಇರುತ್ತದೆ. ಮತ್ತು ಅದು ಮತ್ತೆ ಮೇಲೆದ್ದು ನೆನಪಿನಲ್ಲಿ ಬರತೊಡಗುತ್ತದೆ. ಮತ್ತು ಉತ್ತಮ ನೆನಪಿನ ಶಕ್ತಿ ಇರುವವರಿಗೆ ಅದು ದೇವರು ಹೆಚ್ಚುವರಿಯಾಗಿ ಕೊಟ್ಟ ಶಕ್ತಿಯೇನಲ್ಲ. ನಮ್ಮ ಅಂತರಂಗದ ಉತ್ಪಾದನೆಗಳನ್ನೆಲ್ಲ ದೇವರು ಸಾಧ್ಯ ಇರುವಷ್ಟೂ ಉತ್ತಮ ರೀತಿಯಲ್ಲಿ ಸೃಷ್ಟಿ ಮಾಡಿದ್ದಾರೆ. ಅದು ನಾವು ಏನನ್ನು ಕಡಿಮೆ ಮಾಡಿಕೊಳ್ಳುತ್ತೇವೆಯೋ ಅಥವಾ ಹೆಚ್ಚಿಸಿಕೊಳುತ್ತೇವೆಯೋ ಅದರ ಮೇಲೆ ಅವಲಂಬಿಸಿದೆ. ಹಾಗಾಗಿ ನೀವಿದನ್ನು ಬಹಳ ಸುಲಭದಲ್ಲಿ ಮಾಡಬಹುದು.
ನಿಮಗೆ ಹಳೆಯ ಧರ್ಮಶಾಸ್ತ್ರಗಳು ಗೊತ್ತಿದ್ದವರಿಗೆ; ಕೆಲವು ಸಂಗತಿಗಳು ಯೂಟ್ಯೂಬ್ ನಲ್ಲಿಯೂ ಲಭ್ಯ ಇವೆ. ಅಲ್ಲಿ ನೋಡಿ ಕೆಲವು ಶತಾಯುಷಿಗಳು ನೂರಾರು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡು ಸ್ಮರಿಸುತ್ತಾರೆ. ಕೆಲವೊಮ್ಮೆ ಈ ಸಂಗತಿಗಳು ನಮ್ಮ ದೇಶದಲ್ಲಿ ಬಹಳ ದೊಡ್ಡ ಪ್ರವೃತ್ತಿಗೆ ಕಾರಣವಾಗುತ್ತವೆ. ನೀವು ಕೂಡಾ ಇದನ್ನು ಹಂಚಿಕೊಂಡು ದೊಡ್ಡ ಪ್ರವೃತ್ತಿಗೆ ಕಾರಣವಾಗಬಹುದು. ಆದರೆ ನಾನು ಇಂದು ನಿಮ್ಮನ್ನು ಆ ದಿಕ್ಕಿನಲ್ಲಿ ಕೊಂಡೊಯ್ಯುವುದಿಲ್ಲ, ಯಾಕೆಂದರೆ ನಿಮಗೆ ಸಮೀಪದಲ್ಲಿಯೇ ಪರೀಕ್ಷೆಗಳಿವೆ. ಆದರೆ ನಾನು ಇಷ್ಟನ್ನು ಹೇಳಬಲ್ಲೆ-ನಿಮ್ಮ ಮನಸ್ಸನ್ನು ಸ್ಥಿರವಾಗಿಡಿ, ನಿಮಗೆ ವಿಷಯಗಳು ತಿಳಿದಿವೆ. ಅವುಗಳು ತಮ್ಮಿಂದ ತಾವೇ ಸ್ವಯಂ ಆಗಿ ನಿಮ್ಮ ಮನಸ್ಸಿನಿಂದ ಹೊರಬರಲು ಆರಂಭಿಸುತ್ತವೆ; ನೀವು ಅವುಗಳನ್ನು ನೆನಪಿಸಿಕೊಳ್ಳಲು ಆರಂಭ ಮಾಡುತ್ತೀರಿ ಮತ್ತು ಅದು ನಿಮಗೆ ಬಹಳ ದೊಡ್ಡ ಶಕ್ತಿಯಾಗುತ್ತದೆ.
ನಿರೂಪಕರು :ಗೌರವಾನ್ವಿತ ಪ್ರಧಾನ ಮಂತ್ರಿ ಜೀ, “ಗಮನ” ಕೇಂದ್ರೀಕರಿಸುವುದಕ್ಕೆ ಸಂಬಂಧಿಸಿದ ವಿಧಾನದ ಬಗ್ಗೆ ಎಲ್ಲರೂ ಮೆಚ್ಚುವಂತೆ ಅತ್ಯಂತ ಸರಳವಾಗಿ ತಾವು ತಿಳಿಸಿಕೊಟ್ಟಿರುವುದರಿಂದ ಖಂಡಿತವಾಗಿಯೂ ಪ್ರತಿಯೊಬ್ಬರ ಮನಸ್ಸಿಗೂ ನನ್ನಂತೆ ಜ್ಞಾನೋದಯವಾಗಿದೆ. ಧನ್ಯವಾದಗಳು, ಸರ್. ಗೌರವಾನ್ವಿತ ಪ್ರಧಾನ ಮಂತ್ರಿ ಜೀ, ಖನಿಜ ಸಂಪನ್ಮೂಲ ಸಮೃದ್ಧ ರಾಜ್ಯ ಮತ್ತು ಸುಂದರ ಪ್ರವಾಸೀ ತಾಣವಾದ ಜಾರ್ಖಂಡ್ ರಾಜ್ಯದ ರಾಮಘರ್ ನ 10 ನೇ ತರಗತಿ ವಿದ್ಯಾರ್ಥಿ ಶ್ವೇತಾ ಕುಮಾರಿ ತನ್ನ ಪ್ರಶ್ನೆಗೆ ನಿಮ್ಮಿಂದ ಉತ್ತರ ಬಯಸುತ್ತಾಳೆ. ಶ್ವೇತಾ, ದಯವಿಟ್ಟು ನಿಮ್ಮ ಪ್ರಶ್ನೆ ಕೇಳಿ.
ಶ್ವೇತಾ: ಗೌರವಾನ್ವಿತ ಪ್ರಧಾನ ಮಂತ್ರಿ,ನಮಸ್ಕಾರ. ನಾನು ಕೇಂದ್ರೀಯ ವಿದ್ಯಾಲಯ ಪತ್ರಾಟುವಿನ ಹತ್ತನೇ ತರಗತಿ ವಿದ್ಯಾರ್ಥಿ, ಶ್ವೇತಾ ಕುಮಾರಿ. ನಾನು ನಿಮಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ನನ್ನ ಅಧ್ಯಯನದಲ್ಲಿ, ಕಲಿಕೆಯಲ್ಲಿ ರಾತ್ರಿ ಕಾಲದಲ್ಲಿ ಉತ್ಪಾದಕತೆ ಗರಿಷ್ಠ ವಾಗಿರುತ್ತದೆ. ಆದರೆ ಎಲ್ಲರೂ ನನಗೆ ಹಗಲಿನಲ್ಲಿ ಓದಲು ಹೇಳುತ್ತಾರೆ. ನಾನೇನು ಮಾಡಬೇಕು?. ಧನ್ಯವಾದಗಳು ತಮಗೆ.
ನಿರೂಪಕರು :ಧನ್ಯವಾದಗಳು ಶ್ವೇತಾ, ಗೌರವಾನ್ವಿತ ಪ್ರಧಾನ ಮಂತ್ರಿ ಜೀ, ನಮೋ ಆಪ್ ಮೂಲಕ ಪಡೆದಿರುವ ಪ್ರಶ್ನೆಯನ್ವಯ ರಾಘವ ಜೋಷಿ ಅವರಿಗೆ ಬಹಳ ಗೊಂದಲವಿದೆ. ಪೋಷಕರು ಅವರಿಗೆ ಸದಾ ಓದು ಮೊದಲು ಎನ್ನುತ್ತಾರೆ. ಆಮೇಲೆ ಆಟ ಆಡು ಎನ್ನುತ್ತಾರೆ. ಆದರೆ ಅವರಿಗೆ ಆಟ ಆಡಿದ ನಂತರ ಓದಿದರೆ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ರಾಘವ ಮತ್ತು ಶ್ವೇತಾ ಹಾಗು ಅವರಂತಹ ಹಲವು ವಿದ್ಯಾರ್ಥಿಗಳಿಗೆ ಅವರ ಉತ್ಪಾದಕತೆ ಉತ್ತಮವಾಗಲು ಅವರೇನು ಮಾಡಬೇಕು ಎಂಬುದರ ಬಗ್ಗೆ ದಯವಿಟ್ಟು ವಿವರಿಸಿ. ದಯವಿಟ್ಟು ಅವರ ಗೊಂದಲವನ್ನು ಪರಿಹರಿಸಿ, ಗೌರವಾನ್ವಿತ ಪ್ರಧಾನ ಮಂತ್ರಿ ಸರ್.
ಪ್ರಧಾನ ಮಂತ್ರಿ: ಪ್ರತಿಯೊಬ್ಬರೂ ತಮ್ಮ ಸಮಯ ಸೂಕ್ತವಾಗಿ ಬಳಕೆಯಾಗಬೇಕು ಎಂದು ಆಶಿಸುವುದು ಸಹಜ. ತಾವು ವಿನಿಯೋಗಿಸಿದ ಸಮಯಕ್ಕೆ ಅನುಗುಣವಾಗಿ ಯಾರೇ ಆದರೂ ಅದಕ್ಕೆ ತಕ್ಕುದಾದ ಉತ್ತಮ ಮತ್ತು ಗರಿಷ್ಠ ಪ್ರಯೋಜನ ಪಡೆಯಬೇಕು ಮತ್ತು ಇದು ಬಹಳ ಉತ್ತಮವಾದ ಚಿಂತನೆ. ಮತ್ತು ನಾವು ವ್ಯಯಿಸುತ್ತಿರುವ ಸಮಯಕ್ಕೆ ಅನುಗುಣವಾಗಿ ನಾವು ಫಲಿತಾಂಶಗಳನ್ನು ಪಡೆಯುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ನೋಡಲು ಯಾವಾಗಲೂ ಪ್ರಯತ್ನಿಸುವುದು ಅವಶ್ಯಕ. ಪ್ರಯತ್ನ ಕಾಣುತ್ತದೆ ಆದರೆ ಫಲಿತಾಂಶವು ಗೋಚರಿಸುವುದಿಲ್ಲ. ಆದ್ದರಿಂದ, ಮೊದಲನೆಯದಾಗಿ, ಹೂಡಿಕೆ ಮಾಡಿದ ಸಮಯಕ್ಕೆ ಪಡೆದ ಫಲಿತಾಂಶವನ್ನು ಅಳೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಈಗ ನಾವು ಅದನ್ನು ಲೆಕ್ಕ ಹಾಕಬಹುದು ಮತ್ತು ನಾವು ಈ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ನಿಮ್ಮನ್ನು ನೀವು ಕೇಳಿಕೊಳ್ಳಿ; ಇಂದು ನಾನು ಗಣಿತದಲ್ಲಿ ಒಂದು ಗಂಟೆ ಕಳೆದಿದ್ದೇನೆ. ಹಾಗಾದರೆ, ಆ ಒಂದು ಗಂಟೆಯಲ್ಲಿ ನಾನು ಮಾಡಬೇಕಾಗಿದ್ದನ್ನು ಪೂರ್ಣಗೊಳಿಸಲು ಸಾಧ್ಯವಾಯಿತೇ? ನನಗೆ ಕಷ್ಟಕರವಾದದ್ದೆಂದು ಭಾವಿಸಲಾದ ಪ್ರಶ್ನೆಗಳನ್ನು ಸುಸೂತ್ರವಾಗಿ ನಿಭಾಯಿಸಿದ್ದೇನೆಯೇ? ಎಂಬುದಾಗಿ. ಅಂದರೆ ಅದರರ್ಥ ಫಲಿತಾಂಶ ಸುಧಾರಿಸುತ್ತಿದೆ. ಈ ವಿಶ್ಲೇಷಣೆಗಳನ್ನು ಮಾಡುವ ಅಭ್ಯಾಸವನ್ನು ನಾವು ಮಾಡಿಕೊಳ್ಳಬೇಕು. ಕೆಲವೇ ಜನರು ವಿಶ್ಲೇಷಣೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಅವರು ಒಂದರ ನಂತರ ಒಂದರಂತೆ ಸಂಗತಿಗಳನ್ನು ಪೂರ್ಣಗೊಳಿಸುತ್ತಲೇ ಸಾಗುತ್ತಾರೆ; ಅವರು ಅದನ್ನು ನಿರಂತರ ಮಾಡುತ್ತಾ ಹೋಗುತ್ತಾರೆ ಮತ್ತು ಬಳಿಕ ಅವರು ಪೂರ್ಣಗೊಂಡ ವಿಷಯಗಳಿಗೆ ಹೆಚ್ಚಿನ ಗಮನ ಆಗತ್ಯವಿಲ್ಲ, ಇತರ ಕೆಲವು ವಿಷಯಗಳಿಗೆ ಹೆಚ್ಚಿನ ಗಮನ ಬೇಕು ಎಂಬುದನ್ನು ಅರಿತುಕೊಳ್ಳುತ್ತಾರೆ. ಕೆಲವೊಮ್ಮೆ ಏನಾಗುತ್ತದೆ ಎಂದರೆ, ನಾವು ನಮ್ಮದೇ ಆದ ವೇಳಾಪಟ್ಟಿಯಲ್ಲಿ ಸರಳ ಮತ್ತು ನಮ್ಮ ಇಷ್ಟದ ವಿಷಯಗಳಿಗೆ ಆಗಾಗ ಹಿಂತಿರುಗುತ್ತಿರುತ್ತೇವೆ. ಅದು ಹೆಚ್ಚು ಖುಷಿ ಕೊಡುವುದರಿಂದ ಆ ವಿಷಯವನ್ನು ಓದುವಾಗ ನಮಗೆ ಹೆಚ್ಚು ಸಂತೋಷ ಸಿಗುತ್ತದೆ. ಇದರ ಪರಿಣಾಮ ಎಂದರೆ ನಾವು ನಮ್ಮ ನೆಚ್ಚಿನದಲ್ಲದ ಅಥವಾ ಸ್ವಲ್ಪ ಕಷ್ಟಕರವಾದ ವಿಷಯಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ.
ನಾನು ಅದನ್ನು ಸರಿಯಾದ ರೀತಿಯಲ್ಲಿ ಮಂಡಿಸದೇ ಇರಬಹುದು. ಆದರೆ ಸರಳತೆಗಾಗಿ, ನಾನು ಅದನ್ನು ನಿಮಗೆ ಹೀಗೆ ವಿವರಿಸುತ್ತೇನೆ. ಕೆಲವೊಮ್ಮೆ ನನ್ನ ದೇಹವು ಮೋಸಗಾರ ಎಂದು ನನಗೆ ಅನಿಸುತ್ತದೆ. ನೀವು ಹೇಗೆ ಕುಳಿತುಕೊಳ್ಳಬೇಕೆಂದು ನೀವು ನಿರ್ಧರಿಸುತ್ತೀರಿ. ಸ್ವಲ್ಪ ಸಮಯದ ನಂತರ ನಿಮ್ಮ ಭಂಗಿಯು ಹೇಗೆ ಬದಲಾಗುತ್ತದೆ ಎಂಬುದೂ ನಿಮಗೆ ಗೊತ್ತಾಗುವುದಿಲ್ಲ. ಇದರರ್ಥ ನಿಮ್ಮ ದೇಹವು ನಿಮ್ಮನ್ನು ಮೋಸಗೊಳಿಸುತ್ತದೆ. ನೀವು ಒಂದು ನಿರ್ದಿಷ್ಟ ರೀತಿಯಲ್ಲಿ ಕುಳಿತುಕೊಳ್ಳಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿದ್ದೀರಿ, ಆದರೆ ಸ್ವಲ್ಪ ಸಮಯದ ನಂತರ, ನಿಮ್ಮ ದೇಹವು ಸಡಿಲಗೊಳ್ಳುತ್ತದೆ. ದೇಹವು ಅದರ ಮೂಲ ಭಂಗಿಗೆ ಹಿಂತಿರುಗುತ್ತದೆ. ನಂತರ ನೀವು ಮತ್ತೆ ನಿಮ್ಮ ಭಂಗಿಯನ್ನು ಬದಲಾಯಿಸಲು ಪ್ರಯತ್ನಿಸುತ್ತೀರಿ ಆದರೆ ಅದು ಮತ್ತೆ ಅದರ ಮೂಲ ರೂಪಕ್ಕೆ ಮರಳುತ್ತದೆ. ಇದರರ್ಥ, ಈ ದೇಹವು ಹೇಗೆ ಮೋಸಗಾರವೋ, ಮನಸ್ಸು ಕೂಡ ಅದೇ ರೀತಿಯಲ್ಲಿ ಮೋಸ ಮಾಡುತ್ತದೆ. ಆದ್ದರಿಂದ ನಾವು ಈ ಮೋಸವನ್ನು ತಪ್ಪಿಸಲು ಪ್ರಯತ್ನಿಸಬೇಕು. ನಮ್ಮ ಮನಸ್ಸು ಮೋಸಗಾರನಾಗಬಾರದು. ನಮ್ಮ ಮನಸ್ಸು ಇಷ್ಟಪಡುವ ವಿಷಯಗಳಿಗೆ ನಾವು ಹೇಗೆ ಸಿಕ್ಕಿ ಬೀಳುತ್ತೇವೆ?. ಮಹಾತ್ಮ ಗಾಂಧಿಯವರು ಶ್ರೇಯಾ (ಏನನ್ನು ಮಾಡಬೇಕು) ಮತ್ತು ಪ್ರಿಯ (ನಮಗೆ ಇಷ್ಟವಾದದ್ದು) ವಾದುದರ ಬಗ್ಗೆ ಸಾಮಾನ್ಯವಾಗಿ ಮಾತನಾಡುತ್ತಿದ್ದರು. ಒಬ್ಬರು 'ಶ್ರೇಯಸ್ಕರ್' ಬದಲಿಗೆ 'ಪ್ರಿಯಾ' ಕಡೆಗೆ ಒಲವು ತೋರುತ್ತಾರೆ. ನಾವು 'ಶ್ರೇಯಸ್ಕರ್'ಗೆ ಅಂಟಿಕೊಳ್ಳಬೇಕು. ಇದು ಬಹಳ ಮುಖ್ಯ. ಮತ್ತು ಮನಸ್ಸು ವಿರುದ್ಧ ದಿಕ್ಕಿನಲ್ಲಿ ಹೋಗಿ ಮೋಸ ಮಾಡಲು ಪ್ರಯತ್ನಿಸಿದರೆ ಅದನ್ನು ಹಿಂದಕ್ಕೆ ಎಳೆಯಿರಿ. ಅದು ನಿಮ್ಮ ಉತ್ಪಾದಕತೆ ಮತ್ತು ನಿಮ್ಮ ಫಲಿತಾಂಶವನ್ನು ಹೆಚ್ಚಿಸುತ್ತದೆ. ಹಾಗಾಗಿ, ಅದಕ್ಕಾಗಿ ಪ್ರಯತ್ನಗಳು ನಡೆಯಬೇಕು.
ಎರಡನೆಯದಾಗಿ, ರಾತ್ರಿಯಲ್ಲಿ ಅಧ್ಯಯನ ಮಾಡುವುದು ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ; ಕೆಲವರು ಬೆಳಗ್ಗೆ ಅಧ್ಯಯನ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ; ಕೆಲವರು ತಿನ್ನುವುದು ಮತ್ತು ಅಧ್ಯಯನ ಮಾಡುವುದು ಉತ್ತಮ ಎಂದು ಹೇಳುತ್ತಾರೆ ಆದರೆ ಕೆಲವರು ಖಾಲಿ ಹೊಟ್ಟೆಯಲ್ಲಿ ಅಧ್ಯಯನ ಮಾಡುವುದು ಉತ್ತಮ ಎಂದು ಹೇಳುತ್ತಾರೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಅವಲಂಬಿಸಿ ಬೇರೆ ಬೇರೆಯಾಗಿರುತ್ತದೆ. ಇದು ವ್ಯಕ್ತಿಯ ಸ್ವಭಾವವನ್ನು ಅವಲಂಬಿಸಿರುತ್ತದೆ. ನಿಮ್ಮನ್ನು ನೀವೇ ಗಮನಿಸಿ ಮತ್ತು ನಿಮಗೆ ಯಾವುದು ಅನುಕೂಲಕರ ಎಂದು ನಿರ್ಧರಿಸಿ. ಅದು ನಿಮಗೆ ಅನುಕೂಲಕರವಾಗಿರಬೇಕು ಮತ್ತು ಆರಾಮದಾಯಕವಾಗಿರಬೇಕು. ನೀವು ಕುಳಿತಿರುವ ಪ್ರದೇಶ, ಕುಳಿತುಕೊಳ್ಳುವ ಭಂಗಿ ಇತ್ಯಾದಿಗಳು ಆರಾಮದಾಯಕವಾಗಿಲ್ಲದಿದ್ದರೆ, ನಿಮಗೆ ಬಹುಶಃ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ನಿರ್ದಿಷ್ಟ ವ್ಯವಸ್ಥೆ ಇದ್ದರೆ ಆ ಸೆಟ್ಟಿಂಗ್ ನಲ್ಲಿ ಮಾತ್ರ ಮಲಗಲು ಸಾಧ್ಯವಾಗುತ್ತದೆ. ಹಲವಾರು ವರ್ಷಗಳ ಹಿಂದೆ ನೋಡಿದ ಚಲನಚಿತ್ರ ನನಗೆ ಇನ್ನೂ ನೆನಪಿದೆ. ಒಂದು ದೃಶ್ಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಕೊಳೆಗೇರಿಯ ಬಳಿ ಕಳೆಯುತ್ತಾನೆ ಮತ್ತು ನಂತರ ಇದ್ದಕ್ಕಿದ್ದಂತೆ ಉತ್ತಮ ಸ್ಥಳದಲ್ಲಿ ವಾಸಿಸಲು ಹೋಗುತ್ತಾನೆ. ಅವನಿಗೆ ಅದೃಷ್ಟ ಒಲಿಯುತ್ತದೆ, ಆದರೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ತನಗೇಕೆ ನಿದ್ದೆ ಬರುವುದಿಲ್ಲ ಎಂದು ಯೋಚಿಸತೊಡಗುತ್ತಾನೆ. ನಂತರ ರೈಲ್ವೇ ನಿಲ್ದಾಣಕ್ಕೆ ಹೋಗಿ ಹಳಿಯಲ್ಲಿ ರೈಲು ಚಲಿಸುತ್ತಿರುವ ಶಬ್ದವನ್ನು ರೆಕಾರ್ಡ್ ಮಾಡಿ ಮನೆಗೆ ಬರುತ್ತಾನೆ. ಅವನು ರೆಕಾರ್ಡಿಂಗ್ ಅನ್ನು ಪ್ಲೇ ಮಾಡುತ್ತಾನೆ ಮತ್ತು ಅವನು ಸ್ವಲ್ಪ ನಿದ್ದೆಯನ್ನು ಮಾಡುತ್ತಾನೆ. ಅದು ಅವನಿಗೆ ಅನುಕೂಲಕರವಾಗಿತ್ತು, ಅದರಿಂದ ಆತನಿಗೆ ನೆಮ್ಮದಿ ಇತ್ತು. ಅದು ಎಲ್ಲರಿಗೂ ಸಾಧ್ಯ ಆಗುವುದಿಲ್ಲ. ನಿದ್ದೆ ಬರಲು ಎಲ್ಲರಿಗೂ ರೈಲಿನ ಸದ್ದು ಕೇಳಬೇಕಾದ ಅಗತ್ಯವಿಲ್ಲ ,ಆದರೆ ಆ ವ್ಯಕ್ತಿಗೆ ಅದು ಬೇಕಾಗಿತ್ತು. ಅದು ಅವನಿಗೆ ಸುಖವೆನಿಸಿತ್ತು.
ಎಂದೂ ಯಾವುದೇ ಒತ್ತಡಕ್ಕೆ ಒಳಗಾಗಬೇಡಿ. ನೀವು ಸಂತೋಷದಿಂದ ತೊಡಗುವ ಕೆಲಸಗಳಿಗೆ ಕನಿಷ್ಠ ಹೊಂದಾಣಿಕೆಗಳು ಬೇಕಾಗುತ್ತವೆ. ಆ ದಾರಿಯನ್ನು ಬಿಡುವ ಅಗತ್ಯವಿಲ್ಲ, ಆದರೆ ಆ ಆರಾಮದಾಯಕ, ಸುಖ ಎನಿಸುವ ಸ್ಥಿತಿಯಲ್ಲಿಯೂ ನಿಮ್ಮ ಕೆಲಸ ಅಧ್ಯಯನ ಮಾಡುವುದು. ನೀವು ಗರಿಷ್ಠ ಫಲಿತಾಂಶಕ್ಕಾಗಿ ಕೆಲಸ ಮಾಡಬೇಕು. ಅದರಿಂದ ಹಿಂದೆ ಸರಿಯುವ ಸಾಧ್ಯತೆಯೇ ಇಲ್ಲ. ಮತ್ತು ಜನರು ಹೇಗಿರುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ಕೆಲವೊಮ್ಮೆ ಒಬ್ಬ ವ್ಯಕ್ತಿ 12 ಗಂಟೆಗಳು, 14 ಗಂಟೆಗಳು ಅಥವಾ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂಬುದನ್ನು ನಾವು ಕೇಳುತ್ತೇವೆ ... ಇದು ಕೇಳಲು ಚೆನ್ನಾಗಿರುತ್ತದೆ. ಆದರೆ ನಿಜವಾಗಿಯೂ ದಿನಕ್ಕೆ 18 ಗಂಟೆಗಳ ಕೆಲಸ ಮಾಡುವುದು ದೊಡ್ಡ ವಿಷಯ ಮತ್ತು ನನ್ನ ಜೀವನದಲ್ಲಿ ನಾನು ಬಹಳ ಮುಖ್ಯವಾದ ಪಾಠವನ್ನು ಕಲಿತುಕೊಂಡಿದ್ದೇನೆ. ನಾನು ಗುಜರಾತಿನಲ್ಲಿದ್ದಾಗ ಕೇಕಾ ಶಾಸ್ತ್ರೀಜೀ ಎಂಬ ಮಹಾನ್ ವಿದ್ವಾಂಸರು ಇದ್ದರು. ಅವರು ಸ್ವತಃ ಐದನೇ ಅಥವಾ ಏಳನೇ ತರಗತಿಯವರೆಗೆ ಮಾತ್ರ ಓದಿದ್ದರು, ಆದರೆ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಪದ್ಮ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಗಿದೆ. ಅವರು 103 ವರ್ಷಗಳ ಕಾಲ ಬದುಕಿದ್ದರು ಮತ್ತು ನಾನು ಅಲ್ಲಿದ್ದಾಗ ಅವರ ಶತಮಾನೋತ್ಸವದ ಅಧಿಕೃತ ಸರಕಾರಿ ಕಾರ್ಯಕ್ರಮವನ್ನು ಆಯೋಜಿಸಿದ್ದೆ. ನಾನು ಅವರೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದೆ; ಅವರು ನನ್ನ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಹಲವಾರು ವರ್ಷಗಳ ಹಿಂದೆ, ಆಗ ನಾನು ಮುಖ್ಯಮಂತ್ರಿಯಾಗಿರಲಿಲ್ಲ, ನಾವು ಅವರನ್ನು ರಾಜಸ್ಥಾನದ ಯಾತ್ರಾ ಕೇಂದ್ರಗಳಿಗೆ ಕರೆದೊಯ್ಯುವ ಕಾರ್ಯಕ್ರಮವನ್ನು ಆಯೋಜಿಸಿದೆವು. ಹಾಗಾಗಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋದೆ. ನಾವೆಲ್ಲ ಒಂದೇ ವಾಹನದಲ್ಲಿದ್ದೆವು. ಅವರ ಬಳಿ ಸಾಮಾನು ಸರಂಜಾಮು ಬಹಳ ಕಡಿಮೆ ಇರುವುದು ನನ್ನ ಗಮನಕ್ಕೆ ಬಂದಿತು. ಆ ಲಗೇಜಿನಲ್ಲಿಯೂ ಹೆಚ್ಚಾಗಿ ಓದಲು ಬರೆಯಲು ಬೇಕಾದಂತಹ ಸಾಮಗ್ರಿಗಳಿದ್ದವು. ರೈಲ್ವೇ ಕ್ರಾಸಿಂಗ್ ಬಂದಾಗಲೆಲ್ಲಾ ನಾವು ನಿಲ್ಲಬೇಕಾಗಿತ್ತು. ರೈಲು ಹಾದುಹೋಗುವವರೆಗೂ ಬಾಗಿಲು ತೆರೆಯುವುದಿಲ್ಲ. ನಮಗೆ ಚಲಿಸಲು ಸಾಧ್ಯವಾಗುವುದಿಲ್ಲ. ಈಗ, ಆ ಸಮಯದಲ್ಲಿ ನಾವು ಏನು ಮಾಡುತ್ತೇವೆ? ಸಾಮಾನ್ಯವಾಗಿ ನಾವು ಇಳಿದು ತಿರುಗಾಡುತ್ತೇವೆ ಅಥವಾ ತಿಂಡಿ ತಿನ್ನುತ್ತೇವೆ. ಸಾಮಾನ್ಯವಾಗಿ ನಾವು ನಮ್ಮ ಸಮಯವನ್ನು ಹಾಗೆ ಕಳೆಯುತ್ತೇವೆ. ಆದರೆ ಅವರು ತಮ್ಮ ಚೀಲದಿಂದ ಕಾಗದವನ್ನು ಹೊರತೆಗೆದು ತಕ್ಷಣ ಬರೆಯಲು ಪ್ರಾರಂಭಿಸುತ್ತಿದ್ದರು. ಆಗ ಅವರ ವಯಸ್ಸು ಸುಮಾರು 80. ನಾವು ನಮ್ಮ ಸಮಯವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂದರೆ ಹೀಗೆ. ಅದನ್ನು ಫಲಿತಾಂಶ ಎಂದು ಕರೆಯಲಾಗುತ್ತದೆ. ನಾನು ಅವರನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದೆ. ಮತ್ತು ತೀರ್ಥಯಾತ್ರೆಯ ಸಮಯದಲ್ಲಿ, ಅವರು ವಿಶ್ರಾಂತಿ ಪಡೆಯುತ್ತಿದ್ದರು, ನಡೆಯುತ್ತಿದ್ದರು, ಸುತ್ತಲೂ ತಿರುಗುತ್ತಿದ್ದರು ಮತ್ತು ಸುತ್ತಲೂ ನೋಡುತ್ತಿದ್ದರು. ಉಳಿದೆಲ್ಲವನ್ನೂ ಪಕ್ಕಕ್ಕೆ ಇಡುತ್ತಿದ್ದರು. ಆದ್ದರಿಂದ, ಯಾವುದೇ ಸಂದರ್ಭಗಳಲ್ಲಿ, ಪರಿಸ್ಥಿತಿಗಳಲ್ಲಿ ನಿಮ್ಮ ಕೆಲಸ ಮಾಡುವುದನ್ನು ಮುಂದುವರಿಸಿ. ಇದು ಅತ್ಯಂತ ಅವಶ್ಯಕ ಎಂದು ನಾನು ಭಾವಿಸುತ್ತೇನೆ. ಇದರಿಂದ ಜೀವನದಲ್ಲಿ ಸಾಧಿಸುವುದು ಬಹಳಷ್ಟಿದೆ.
ನಿರೂಪಕರು : ಗೌರವಾನ್ವಿತ ಸರ್. ಸ್ವ –ವಿಶ್ಲೇಷಣೆಯ ಮಹತ್ವವನ್ನು ನಮಗೆ ಅರ್ಥೈಸಿಕೊಳ್ಳುವಂತೆ ಮಾಡಿದ ಮತ್ತು ನಾವು ಅತ್ಯುತ್ತಮ ಮಟ್ಟಕ್ಕೆ ಏರಲು ಸಂತೋಷದಿಂದ ಕಲಿಕೆಯನ್ನು ನಡೆಸಬೇಕು ಎಂದು ಹೇಳಿದ ತಮಗೆ ಧನ್ಯವಾದಗಳು. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ನೀಲಗಿರಿ ಅರಣ್ಯವನ್ನು ಹೊಂದಿರುವ ಸುಂದರವಾದ ಹಚ್ಚ ಹಸಿರಿನ ಭೂಮಿ ಅಂದರೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಿಂದ 9 ನೇ ತರಗತಿಯ ವಿದ್ಯಾರ್ಥಿನಿ ಎರಿಕಾ ಜಾರ್ಜ್ ಅವರು ನಿಮ್ಮ ಮಾರ್ಗದರ್ಶನವನ್ನು ಬಯಸುತ್ತಿದ್ದಾರೆ. ಎರಿಕಾ, ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ಎರಿಕಾ ಜಾರ್ಜ್: ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ನಾನು ಎರಿಕಾ ಜಾರ್ಜ್, ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಎ.ಪಿ.ಎಸ್.ನ ೯ ನೇ ತರಗತಿಯ ವಿದ್ಯಾರ್ಥಿ. ಸರ್ ನಾನು ಕೇಳಲು ಬಯಸುವ ಪ್ರಶ್ನೆಯೆಂದರೆ, ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಭಾರತದಂತಹ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸ್ಪರ್ಧೆಯಿದೆ. ಇಂತಹ ಪರಿಸ್ಥಿತಿಯಲ್ಲಿ ನಿಜವಾಗಿಯೂ ತುಂಬಾ ಪ್ರತಿಭಾವಂತ ಮತ್ತು ಜ್ಞಾನವುಳ್ಳ ಬಹಳಷ್ಟು ಜನರಿದ್ದಾರೆ. ಆದರೆ ಕಾರಣಾಂತರಗಳಿಂದ ಪರೀಕ್ಷೆಗೆ ಹಾಜರಾಗಲು ಅವರಿಗೆ ಸಾಧ್ಯವಾಗುವುದಿಲ್ಲ. ಬಹುಶಃ ಅವರು ಸರಿಯಾದ ಮಾರ್ಗವನ್ನು ಆಯ್ಕೆ ಮಾಡದಿದ್ದುದು ಇದಕ್ಕೆ ಕಾರಣವಿರಬಹುದು ಅಥವಾ ಅವರಿಗೆ ಸರಿಯಾದ ಸಲಹೆ ಲಭಿಸದೇ ಇದ್ದುದೂ ಕಾರಣವಿರಬಹುದು. ಹಾಗಾದರೆ ಸರ್, ಈ ಸಂದರ್ಭದಲ್ಲಿ, ಈ ಜನರಿಗಾಗಿ ನಾವು ಏನು ಮಾಡಬಹುದು, ಅವರ ಪ್ರತಿಭೆ ವ್ಯರ್ಥವಾಗದಂತೆ ಮತ್ತು ಅದು ಫಲಪ್ರದ ರೀತಿಯಲ್ಲಿ ಬಳಕೆಯಾಗುವಂತೆ ಏನು ಮಾಡಬಹುದು? ತಮಗೆ ಧನ್ಯವಾದಗಳು, ಸರ್.
ನಿರೂಪಕರು :ಧನ್ಯವಾದಗಳು ನಿಮಗೆ ಎರಿಕಾ, ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಹರಿಓಂ ಮಿಶ್ರಾ, ಗೌತಮ ಬುದ್ಧ ನಗರದ ಕೈಗಾರಿಕಾ ಪ್ರದೇಶದ 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ತಮ್ಮ ಮಂಡಳಿ ಪರೀಕ್ಷೆಗೆ ತಯಾರಾಗುತ್ತಿದ್ದಾರೆ ಮತ್ತು ಅವರು ಜೀ ಟಿ.ವಿ. ಆಯೋಜಿಸಿದ ಸ್ಪರ್ಧೆಯಲ್ಲಿ ಆಹ್ವಾನಿಸಲಾದ ಅದೇ ಪ್ರಶ್ನೆಯನ್ನು ಕೇಳಲು ಬಯಸಿದ್ದಾರೆ. ಹರಿ ಓಂ ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿರಿ.
ಹರಿಓಂ-ನಮಸ್ಕಾರ, ನನ್ನ ಹೆಸರು ಹರಿಓಂ ಮಿಶ್ರಾ ಮತ್ತು ನಾನು ನೊಯಿಡಾದ ಕೇಂಬ್ರಿಜ್ ಶಾಲೆಯ 12 ನೇ ತರಗತಿಯ ವಿದ್ಯಾರ್ಥಿ. ಇಂದು ಪ್ರಧಾನ ಮಂತ್ರಿ ಅವರಿಗೆ ನನ್ನ ಪ್ರಶ್ನೆ ಏನೆಂದರೆ- ಈ ವರ್ಷ ಕಾಲೇಜುಗಳ ಸೇರ್ಪಡೆ ಪ್ರಕ್ರಿಯೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲಾಗಿದೆ. ಮತ್ತು ಮಂಡಳಿ ಪರೀಕ್ಷೆಯ ವಿಧಾನದಲ್ಲಿಯೂ ಬಹಳಷ್ಟು ಬದಲಾವಣೆಗಳನ್ನು ತರಲಾಗಿದೆ. ಈ ಎಲ್ಲಾ ಬದಲಾವಣೆಗಳ ನಡುವೆ ನಾವು ವಿದ್ಯಾರ್ಥಿಗಳು ಮಂಡಳಿ ಪರೀಕ್ಷೆಗಳತ್ತ ಗಮನ ಕೇಂದ್ರೀಕರಿಸಬೇಕೋ ಅಥವಾ ಕಾಲೇಜು ಸೇರ್ಪಡೆಯ ಪ್ರಕ್ರಿಯೆಯ ಬಗ್ಗೆ ಗಮನ ಕೇಂದ್ರೀಕರಿಸಬೇಕೋ? ನಾವೇನು ಮಾಡಬೇಕು ಮತ್ತು ನಾವು ಹೇಗೆ ತಯಾರಿ ಮಾಡಿಕೊಳ್ಳಬೇಕು?.
ನಿರೂಪಕರು : ಧನ್ಯವಾದಗಳು ಹರಿಓಂ, ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಎರಿಕಾ ಮತ್ತು ಹರಿ ಓಂ ಅವರಂತೆ ದೇಶದ ವಿವಿಧ ಭಾಗಗಳಿಂದ ಅನೇಕ ವಿದ್ಯಾರ್ಥಿಗಳು ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸಬೇಕೋ, ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಗಮನ ಕೇಂದ್ರೀಕರಿಸಬೇಕೋ, ಮಂಡಳಿ ಪರೀಕ್ಷೆಗೆ ತಯಾರಿ ಮಾಡಬೇಕೋ ಅಥವಾ ಕಾಲೇಜು ಸೇರ್ಪಡೆಗೆ ತಯಾರಿ ಮಾಡಿಕೊಳ್ಳಬೇಕೋ ಎಂಬ ಬಗ್ಗೆ ಆತಂಕ ಮತ್ತು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ನಿಮ್ಮ ಮಾರ್ಗದರ್ಶನವನ್ನು ಕೋರುತ್ತಿದ್ದೇವೆ, ಮಾನ್ಯ ಪ್ರಧಾನ ಮಂತ್ರಿ ಸರ್.
ಪ್ರಧಾನ ಮಂತ್ರಿ: ಒಳ್ಳೆಯದು, ಅಲ್ಲಿ ಎರಡು ಪ್ರತ್ಯೇಕ ಮಾದರಿಯ ಪ್ರಶ್ನೆಗಳಿವೆ. ಒಂದು ಸ್ಪರ್ಧಾತ್ಮಕ ವಿಷಯಗಳದ್ದು, ಇನ್ನೊಂದು ಏಕ ಕಾಲಕ್ಕೆ ಎರಡು ಪರೀಕ್ಷೆಗಳು ಬಂದರೆ ಯಾವ ಪರೀಕ್ಷೆಗೆ ಹಾಜರಾಗಬೇಕು ಎನ್ನುವಂತಹದ್ದು. ಮತ್ತು ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಏನು ಮಾಡಬೇಕು?. ಎಂಬುದನ್ನು ಕುರಿತದ್ದು. ನೀವು ’ಪರೀಕ್ಷೆ”ಗಾಗಿ ಓದಬೇಕು ಎಂಬುದನ್ನು ನಾನು ನಂಬುವುದಿಲ್ಲ. ಅಲ್ಲಿಯೇ ತಪ್ಪು ನುಸುಳಿದೆ. “ನಾನು ಈ ಪರೀಕ್ಷೆಗೆ ಓದಬೇಕು, ಬಳಿಕ ನಾನು ಆ ಪರೀಕ್ಷೆಗೆ ಓದಬೇಕು” ಅಂದರೆ ನೀವು ಓದುತ್ತಿಲ್ಲ, ನೀವು ನಿಮ್ಮ ಕೆಲಸವನ್ನು ಹಗುರ ಮಾಡಿಕೊಳ್ಳಲು ಸರ್ವರೋಗ ನಿವಾರಕ ಪರಿಹಾರವನ್ನು ಹುಡುಕುತ್ತಿರುವಿರಿ. ಮತ್ತು ಅದರಿಂದಾಗಿ ಬಹುಷಃ ಪ್ರತೀ ಪರೀಕ್ಷೆ ಭಿನ್ನ ಭಿನ್ನವಾಗಿ ಮತ್ತು ಕಷ್ಟವಾಗಿ ಕಾಣುತ್ತಿದೆ. ಆದರೆ ವಸ್ತು ಸ್ಥಿತಿ ಏನೆಂದರೆ ನಾವು ಏನನ್ನೇ ಓದುತ್ತಿರಲಿ, ಅದನ್ನು ಸರಿಯಾಗಿ ಹೊಂದಿಸಿಕೊಂಡರೆ ಆಗ ಅದು ಮಂಡಳಿ ಪರೀಕ್ಷೆ ಇರಲಿ ಅಥವಾ ಪ್ರವೇಶ ಪರೀಕ್ಷೆ ಇರಲಿ ಅಥವಾ ಸಂದರ್ಶನ ಇರಲಿ ಅಥವಾ ಉದ್ಯೋಗಕ್ಕಾಗಿ ಸಂದರ್ಶನ ಇರಲಿ, ಅದು ನಿಮಗೆ ಸಮಸ್ಯೆಯಾಗದು. ನೀವು ಪೂರ್ಣವಾಗಿ ಅರ್ಥೈಸಿಕೊಂಡಿದ್ದರೆ ಮತ್ತು ಜ್ಞಾನವನ್ನು ಜೀರ್ಣಿಸಿಕೊಂಡಿದ್ದರೆ, ಆಗ ಪರೀಕ್ಷೆ ಯಾವ ರೀತಿಯದ್ದೇ ಆಗಿರಲಿ ಅದೊಂದು ಅಡ್ಡಿಯಾಗದು. ಆದುದರಿಂದ ನಿಮ್ಮ ಸಮಯವನ್ನು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ವ್ಯರ್ಥ ಮಾಡುವುದಕ್ಕಿಂತ ನಿಮ್ಮನ್ನು ನೀವು ಸುಶಿಕ್ಷಿತ ಮತ್ತು ಅರ್ಹ ವ್ಯಕ್ತಿಯನ್ನಾಗಿಸುವುದಕ್ಕೆ ನಿಮ್ಮ ಪ್ರಯತ್ನಗಳನ್ನು ಹಾಕಿರಿ. ವಿಷಯದ ಬಗ್ಗೆ ಸಂಪೂರ್ಣ ಪ್ರಭುತ್ವ ಪಡೆಯುವುದಕ್ಕೆ ಕಠಿಣ ಪ್ರಯತ್ನಗಳನ್ನು ಮಾಡಿರಿ. ಫಲಿತಾಂಶದ ಬಗ್ಗೆ ಚಿಂತಿಸಬೇಡಿ. ನೀವು ಆಟಗಾರರನ್ನು ನೋಡಿರಬಹುದು. ಆಟಗಾರರು ಆಯಾ ಆಟದಲ್ಲಿ ಚೆನ್ನಾಗಿ ನುರಿತವರಾಗಿರುತ್ತಾರೆ. ಅವರು ಆಟದ ಒಂದು ನಿರ್ದಿಷ್ಟ ಮಟ್ಟದವರೆಗೆ ಮಾತ್ರ ಆಡಬೇಕು ಎಂದು ಪ್ರಯತ್ನಗಳನ್ನು ಮಾಡುವುದಲ್ಲ. ಅವರು ತಹಶೀಲ್ ಮಟ್ಟದಲ್ಲಿ ಆಡುವಾಗ ಅವರು ಅಲ್ಲಿಯೂ ತಮ್ಮ ಹೆಜ್ಜೆಯನ್ನು ಮೂಡಿಸುತ್ತಾರೆ, ಜಿಲ್ಲಾ ಮಟ್ಟದಲ್ಲಿ ಆಡುವಾಗಲೂ ಅಲ್ಲಿ ಅವರು ತಮ್ಮ ಹೆಜ್ಜೆ ಗುರುತನ್ನು ಮೂಡಿಸುತ್ತಾರೆ. ಮತ್ತು ಅವರು ರಾಷ್ಟ್ರ ಮಟ್ಟದಲ್ಲಿ ಆಡುವಾಗಲೂ ಅಲ್ಲಿ ಅವರು ತಮ್ಮ ಹೆಜ್ಜೆಯನ್ನು ಮೂಡಿಸುತ್ತಾರೆ. ಮತ್ತು ಅವರು ನಿರಂತರವಾಗಿ ತಮ್ಮನ್ನು ತಾವು ವಿಕಾಸಕ್ಕೆ ಒಳಪಡಿಸುತ್ತಲೇ ಇರುತ್ತಾರೆ. ಆದುದರಿಂದ ನಾವು ವಿವಿಧ ’ಪರೀಕ್ಷೆ” ಗಳಿಗೆ ಬೇರೆ ಬೇರೆ ಮಾತ್ರೆಗಳನ್ನು ತೆಗೆದುಕೊಳ್ಳುವ ವರ್ತುಲದಿಂದ ಹೊರಗೆ ಬರಬೇಕು ಎಂಬುದಾಗಿ ನನ್ನ ಭಾವನೆ, ನಂಬಿಕೆಯಾಗಿದೆ. ಬದಲು ’ನನ್ನ ಬಳಿ ಏನು ಜ್ಞಾನ ಇದೆಯೋ ಅದರ ಜೊತೆಯಲ್ಲಿ ನಾನು ಪರೀಕ್ಷೆ ಬರೆಯುತ್ತೇನೆ” ಎಂಬ ಧೋರಣೆಯೊಂದಿಗೆ ಮುಂದೆ ಹೋಗಿ. ನಾನು ಉತ್ತೀರ್ಣನಾದರೆ ಆಗ ಸಮಸ್ಯೆ ಇಲ್ಲ. ಅನುತ್ತೀರ್ಣನಾದರೆ, ನಾನು ಬೇರೆ ದಾರಿ ಹುಡುಕುತ್ತೇನೆ” ಎಂಬ ಮನೋಭಾವವಿರಲಿ. ಹಾಗಾಗಿ ಈ ಧೋರಣೆ, ಸ್ವಭಾವ ಇರಬೇಕು ಎಂಬ ನಂಬಿಕೆ ನನ್ನದು.
ಎರಡನೆಯದಾಗಿ, ಸ್ನೇಹಿತರೇ, ನಾವು “ಸ್ಪರ್ಧೆ” ಯನ್ನು ಬದುಕಿನ ಅತಿ ದೊಡ್ಡ ಉಡುಗೊರೆ ಎಂದು ಪರಿಗಣಿಸಬೇಕು. ಅಲ್ಲಿ ಸ್ಪರ್ಧೆ ಇಲ್ಲದಿದ್ದರೆ, ಅದೆಂತಹ ಜೀವನ?. ಆಗ ನಾವು ಜೀವನದಲ್ಲಿ ಆತ್ಮತೃಪ್ತಿಯಲ್ಲಿ ಇರುತ್ತೇವೆ. ಅಲ್ಲಿ ಬೇರೇನೂ ಇರುವುದಿಲ್ಲ. ಬರೇ ನಾವಷ್ಟೇ. ಹಾಗಿರಬಾರದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಸ್ಪರ್ಧೆಯನ್ನು ಆಹ್ವಾನಿಸಬೇಕು. ಆಗ ನಾವು ಪರೀಕ್ಷಿಸಲ್ಪಡುತ್ತೇವೆ. ರಜಾ ದಿನವಾಗಿದ್ದರೂ ಅಲ್ಲಿ ಓದಲು ಏನೂ ಇರುವುದಿಲ್ಲ, ಅಲ್ಲಿ ಪರೀಕ್ಷೆಗಳು ಇರುವುದಿಲ್ಲ, ಆದರೂ ಸಹೋದರರೇ ಮತ್ತು ಸಹೋದರಿಯರೇ ಕುಳಿತು ಸ್ಪರ್ಧಿಸಿ. ಸ್ಪರ್ಧೆ ತಿನ್ನುವುದರಲ್ಲಿರಬಹುದು. ನೀವು ನಾಲ್ಕು ಚಪಾತಿ ತಿಂದರೆ, ನಾನು ಐದು ತಿನ್ನುತ್ತೇನೆ, ನೀವು ಐದು ತಿಂದರೆ, ನಾನು ಆರು ತಿನ್ನುತ್ತೇನೆ. ಹೀಗೆ ಸ್ಪರ್ಧಾತ್ಮಕ ರೀತಿಯಲ್ಲಿರಿ. ನಾವು ಜೀವನದಲ್ಲಿ ಸ್ಪರ್ಧೆಯನ್ನು ಆಹ್ವಾನಿಸುತ್ತಿರಬೇಕು. ಜೀವನದಲ್ಲಿ ಮುಂದೆ ಸಾಗಲು ಸ್ಪರ್ಧೆ ಒಂದು ಉತ್ತಮ ಹಾದಿ. ಅದು ನಮ್ಮನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತದೆ.
ಆಗ ನನ್ನ ತಲೆಮಾರು ಅಥವಾ ನನ್ನ ಪೋಷಕರ ತಲೆಮಾರು ಈಗ ನಿಮಗಿರುವಂತಹ ಅನೇಕ ಸಂಗತಿಗಳನ್ನು ಹೊಂದಿರಲಿಲ್ಲ. ನಿಮ್ಮದು ಅದೃಷ್ಟಶಾಲೀ ತಲೆಮಾರು. ಈ ಹಿಂದಿನ ಯಾವ ತಲೆಮಾರಿನವರೂ ನಿಮ್ಮಷ್ಟು ಅದೃಷ್ಟ ಶಾಲಿಗಳಾಗಿರಲಿಲ್ಲ. ಸ್ಪರ್ಧೆ ಹೆಚ್ಚಿದ್ದಷ್ಟೂ ಆಯ್ಕೆ ಕೂಡಾ ಹೆಚ್ಚಿರುತ್ತದೆ. ಅವಕಾಶಗಳು ಅಸಂಖ್ಯಾತವಾಗಿರುತ್ತವೆ. ಈ ಹಿಂದೆ ಇಷ್ಟೊಂದು ಅವಕಾಶಗಳು ಇರಲಿಲ್ಲ. ನಾನೀಗ ಹೇಳುತ್ತೇನೆ, ಅಲ್ಲಿ ಇಬ್ಬರು ರೈತರು ಇದ್ದರು. ಇಬ್ಬರಿಗೂ ಎರಡು ಎಕರೆ ಭೂಮಿ ಇತ್ತು. ಆದರೆ ಮೊದಲ ರೈತ ಕಬ್ಬು ಬೆಳೆದು ಜೀವನವನ್ನು ಸಂತೋಷದಿಂದ ಸಾಗಿಸುತ್ತಿದ್ದ. ಆತ ಅದರಿಂದ ಜೀವನ ಸಾಗಿಸುತ್ತಿದ್ದ. ಇನ್ನೋರ್ವ ರೈತ ಹೇಳುತ್ತಾನೆ-ಇಲ್ಲ-ಇಲ್ಲ, ನಾನು ಭೂಮಿಯ ಮೂರು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೆಳೆ ಬೆಳೆಯುತ್ತೇನೆ ಎಂದು. ನಾನು ಕಳೆದ ವರ್ಷ ಅದನ್ನು ಮಾಡಿದ್ದೇ, ಈ ಬಾರಿ ಬೇರೆ ಮಾಡುತ್ತೇನೆ. ನೀವು ನೋಡಿ ಓರ್ವರು ಎರಡು ಎಕರೆ ಭೂಮಿಯಲ್ಲಿ ಆರಾಮವಾಗಿ ಬದುಕು ಸಾಗಿಸುತ್ತಿದ್ದರೆ ಜೀವನ ಸ್ಥಗಿತಗೊಳ್ಳುತ್ತದೆ. ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವವರು, ವಿವಿಧ ಪ್ರಯೋಗಗಳನ್ನು ಮಾಡುವವರು, ಹೊಸ ಸಂಗತಿಗಳನ್ನು ಕೈಗೆತ್ತಿಕೊಳ್ಳುವವರು ಮತ್ತು ಹೊಸತನ್ನು ಸೇರಿಸಿಕೊಳ್ಳುವವರು ಜೀವನದಲ್ಲಿ ತಡೆದು ನಿಲ್ಲಿಸಲಾರದಂತೆ ಮುಂದೆ ಹೋಗುತ್ತಾರೆ. ಇದು ನಮ್ಮ ಬದುಕಿನಲ್ಲೂ ನಡೆಯುವ ಸಂಗತಿ. ಬಹಳಷ್ಟು ಸ್ಪರ್ಧೆ ಇರುವ ನಡುವೆಯೂ ನಮ್ಮತನವನ್ನು ತೋರಿಸುವುದಕ್ಕೆ ನಾವು ಹೆಮ್ಮೆಪಡಬೇಕು.ಮತ್ತು ನಮಗೆ ಹಲವು ಆಯ್ಕೆಗಳಿವೆ. ಈ ಸ್ಪರ್ಧೆ ಅಲ್ಲದಿದ್ದರೆ ಇನ್ನೊಂದು ಸ್ಪರ್ಧೆ. ಆ ಸ್ಪರ್ಧೆಯೂ ಅಲ್ಲದಿದ್ದರೆ, ಆಗ ಅಲ್ಲಿ ಮೂರನೇ ಸ್ಪರ್ಧೆ ಇರುತ್ತದೆ. ಒಂದು ವೇಳೆ ನಮ್ಮ ಸಾಮರ್ಥ್ಯ ಕೆಲಸ ಮಾಡದಿದ್ದರೆ, ಆಗ ಅಲ್ಲಿ ಇನ್ನೊಂದು ಪರ್ಯಾಯ ಇರುತ್ತದೆ. ಇದನ್ನು ನಾವು ಒಂದು ಅವಕಾಶ ಎಂದು ಪರಿಗಣಿಸಬೇಕು ಎಂದು ನಾನು ಭಾವಿಸುತ್ತೇನೆ. “ನಾನು ಅವಕಾಶಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಮನೋಭಾವ ನಿಮ್ಮಲ್ಲಿದ್ದರೆ , ಈ ಅವಕಾಶ ಕೈಬಿಟ್ಟು ಹೋಗಲು ನಾನು ಬಿಡುವುದಿಲ್ಲ ಎನ್ನುವವರಾದರೆ, ನಾನು ಖಂಡಿತವಾಗಿಯೂ ಹೇಳುತ್ತೇನೆ- ಸ್ಪರ್ಧೆ ಎನ್ನುವುದು ಈ ಕಾಲಮಾನದ ಬಹಳ ದೊಡ್ಡ ಕೊಡುಗೆ ಎನ್ನುವುದನ್ನು ನೀವು ಒಪ್ಪುತ್ತೀರಿ ಎಂಬುದಾಗಿ.
ನಿರೂಪಕರು: ಗೌರವಾನ್ವಿತ ಪ್ರಧಾನ ಮಂತ್ರಿ, ತಾವು ಜೀವನದಲ್ಲಿ ಯಶಸ್ಸು ತರಲು ಕಾರಣವಾಗುವಂತಹ ಜ್ಞಾನವನ್ನು ಜೀರ್ಣಿಸಿಕೊಳ್ಳಲು, ಅಳವಡಿಸಿಕೊಳ್ಳಲು ನಮಗೆ ಪ್ರೇರಣೆ ನೀಡಿರುವಿರಿ. ಗೌರವಾನ್ವಿತ ಪ್ರಧಾನ ಮಂತ್ರಿ ಅವರೇ ತಮಗೆ ಧನ್ಯವಾದಗಳು. ಗುಜರಾತಿನ ನವಸಾರಿಯ ಪೋಷಕರಾದ ಶ್ರೀಮತಿ ಸೀಮಾ ಚಿಂತನ ದೇಸಾಯಿ ಅವರು ತಮ್ಮೆದುರು ಪ್ರಶ್ನೆಯನ್ನು ಮಂಡಿಸಲು ಬಯಸುತ್ತಾರೆ. ಮೇಡಂ, ದಯವಿಟ್ಟು ಮುಂದುವರಿಸಿ.
ಸೀಮಾ ಚಿಂತನ ದೇಸಾಯಿ-ಜೈ ಶ್ರೀ ರಾಮ್, ಪ್ರಧಾನ ಮಂತ್ರಿ ಮೋದೀ ಜೀ, ನಮಸ್ತೇ. ನಾನು ನವಸಾರಿಯಿಂದ ಸೀಮಾ ಚಿಂತನ್ ದೇಸಾಯಿ, ಪೋಷಕಿ. ಸರ್, ನೀವು ಅನೇಕ ಯುವಜನತೆಯ ’ಐಕಾನ್” ಆಗಿದ್ದೀರಿ ಮತ್ತು ಇದಕ್ಕೆ ಕಾರಣ-ನೀವು ಬರೇ ಮಾತನಾಡುವುದಲ್ಲ, ನೀವು ಅದನ್ನು ಕಾರ್ಯರೂಪಕ್ಕೆ ಇಳಿಸಿ ತೋರಿಸುತ್ತೀರಿ ಎನ್ನುವುದು. ಸರ್, ನನ್ನಲ್ಲೊಂದು ಪ್ರಶ್ನೆ ಇದೆ. ಗ್ರಾಮೀಣ ಪ್ರದೇಶದ ಭಾರತೀಯ ಮನೆಗಳಲ್ಲಿರುವ ಹೆಣ್ಣು ಮಕ್ಕಳಿಗಾಗಿ ವಿವಿಧ ಯೋಜನೆಗಳು ಚಾಲ್ತಿಯಲ್ಲಿವೆ. ನಮ್ಮ ಸಮಾಜ ಅದರ ಪ್ರಗತಿಗೆ ಯಾವ ರೀತಿಯ ಕೊಡುಗೆ ನೀಡಬಹುದು?. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ. ಧನ್ಯವಾದಗಳು.
ನಿರೂಪಕರು: : ಧನ್ಯವಾದಗಳು ಮೇಡಂ. ಸರ್ ಸೀಮಾ ಚಿಂತನ್ ದೇಸಾಯಿ ಜೀ ಅವರು ಗ್ರಾಮೀಣ ಪ್ರದೇಶಗಳಲ್ಲಿಯ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಕಳಕಳಿ ಹೊಂದಿದ್ದಾರೆ ಮತ್ತು ಈ ನಿಟ್ಟಿನಲ್ಲಿ ತಮ್ಮ ಚಿಂತನೆ, ದೃಷ್ಟಿಕೋನವನ್ನು ಅರಿಯಲು ಬಯಸುತ್ತಾರೆ, ಗೌರವಾನ್ವಿತ ಪ್ರಧಾನ ಮಂತ್ರಿ ಸರ್.
ಪ್ರಧಾನ ಮಂತ್ರಿ: ಒಳ್ಳೆಯದು ಪರಿಸ್ಥಿತಿ ಬಹಳ ಬದಲಾಗಿದೆ ಎಂದು ನಾನು ನಂಬುತ್ತೇನೆ. ಈ ಹಿಂದಿನ ಕಾಲದಲ್ಲಿ ಶಿಕ್ಷಣದ ವಿಷಯ ಬಂದಾಗ ಪೋಷಕರು ತಮ್ಮ ಮಕ್ಕಳು ಶಿಕ್ಷಿತರಾಗಬೇಕು ಎಂದು ಭಾವಿಸುತ್ತಿದ್ದರು. ಅವರ ಮಿತಿಯ ಸಂಪನ್ಮೂಲಗಳಲ್ಲಿ ಮಗ ಶಿಕ್ಷಣ ಪಡೆದರೆ ಆತ ಕುಟುಂಬಕ್ಕಾಗಿ ಏನನ್ನಾದರೂ ಗಳಿಸುತ್ತಾನೆ ಎಂದು ಯೋಚಿಸುತ್ತಿದ್ದರು. ಕೆಲವೊಮ್ಮೆ ಕೆಲವು ಪೋಷಕರು “ಹೆಣ್ಣು ಮಕ್ಕಳಿಗೇಕೆ ವಿದ್ಯಾಭ್ಯಾಸ ?” ಎಂದು ಕೇಳುವುದೂ ಇದೆ. ಆಕೆಯೇನು ಕೆಲಸ ಮಾಡುವುದಿಲ್ಲ, ಆಕೆ ಅವಳ ಮಾವನ ಮನೆಗೆ ಹೋಗುತ್ತಾಳೆ ಮತ್ತು ಅಲ್ಲಿ ಜೀವನ ಸಾಗಿಸುತ್ತಾಳೆ. ಈ ಮಾನಸಿಕತೆ ಇದ್ದಂತಹ ಕಾಲಾವಧಿಯೊಂದಿತ್ತು. ಬಹುಷಃ ಇಂದು ಕೂಡಾ ಕೆಲವು ಹಳ್ಳಿಗಳಲ್ಲಿ ಈ ಮಾನಸಿಕತೆ ಜೀವಂತ ಇದ್ದಿರಬಹುದು, ಆದರೆ ಇಂದು ಬಹಳ ವ್ಯಾಪಕವಾಗಿ ಹೇಳುವುದಾದರೆ ಪರಿಸ್ಥಿತಿ ಬದಲಾಗಿದೆ ಮತ್ತು ಸಮಾಜವು ಹೆಣ್ಣು ಮಕ್ಕಳ ಸಾಮರ್ಥ್ಯ ಅರಿತುಕೊಳ್ಳುವಲ್ಲಿ ಹಿಂದೆ ಬಿದ್ದರೆ, ಆಗ ಆ ಸಮಾಜ ಎಂದೆಂದೂ ಪ್ರಗತಿ ಸಾಧಿಸಲಾರದು. ಕೆಲವೊಮ್ಮೆ ನೀವು ಇಂತಹ ಕುಟುಂಬಗಳನ್ನು ನೋಡಿರಬಹುದು. ಸಹೋದರ ಅಥವಾ ಮಗ ಇರಬೇಕು, ಅವರಿದ್ದರೆ ಇಳಿ ವಯಸ್ಸಿನಲ್ಲಿ ಅವಶ್ಯವಾದ ಬೆಂಬಲವನ್ನು ಅವರು ನೀಡುತ್ತಾರೆ ಎಂಬ ಭಾವನೆಯನ್ನು ವ್ಯಕ್ತಪಡಿಸುವಂತಹ ಕುಟುಂಬಗಳನ್ನು. ಮಗಳು ಅವಳ ಮಾವನ ಮನೆಗೆ ಹೋಗುತ್ತಾಳಾದ್ದರಿಂದ ಏನು ಪ್ರಯೋಜನ?. ಇಂತಹ ಮನಃಸ್ಥಿತಿ ನಮ್ಮ ಸಮಾಜದಲ್ಲಿ ಇನ್ನೂ ಇದೆ. ಚರಿತ್ರೆಯು ಈ ಬದಲಾವಣೆಗಳ ಅನುಭವವನ್ನು ಪಡೆದಿದೆ. ಈಗ ಈ ಸಂಗತಿಗಳನ್ನು ನಿಕಟವಾಗಿ ನೋಡಿ. ತಮ್ಮ ಪೋಷಕರ ವೃದ್ಧಾಪ್ಯದ ಬಗ್ಗೆ ಆತಂಕಗೊಂಡು ಕಾಳಜಿ ವಹಿಸಿ ಮದುವೆಯಾಗದೆ ತಮ್ಮ ಇಡೀ ಜೀವನವನ್ನು ತಮ್ಮ ಪೋಷಕರ ಸೇವೆಯಲ್ಲಿ ಕಳೆದಂತಹ ಅನೇಕ ಹೆಣ್ಣು ಮಕ್ಕಳನ್ನು ನಾನು ನೋಡಿದ್ದೇನೆ. ಗಂಡು ಮಕ್ಕಳು ಮಾಡಲಾಗದುದನ್ನು ಹೆಣ್ಣು ಮಕ್ಕಳು ಮಾಡಿದ್ದಾರೆ. ನಾಲ್ಕು ಗಂಡು ಮಕ್ಕಳು ಒಂದು ಮನೆಯಲ್ಲಿರುವ ಕುಟುಂಬಗಳನ್ನೂ ಮತ್ತು ನಾಲ್ವರು ಗಂಡು ಮಕ್ಕಳು ನಾಲ್ಕು ಬಂಗಲೆಗಳನ್ನು ಹೊಂದಿರುವ ಕುಟುಂಬಗಳನ್ನೂ ನಾನು ನೋಡಿದ್ದೇನೆ. ಅವರ ಜೀವನದ ತುಂಬಾ ಸಂತೋಷ ಮತ್ತು ಶಾಂತಿ ಇದೆ, ಅವರಿಗೆ ದುಃಖ ಎಂಬುದೇ ಗೊತ್ತಿಲ್ಲ. ಆದರೆ ಪೋಷಕರು ವೃದ್ಧಾಶ್ರಮದಲ್ಲಿ ತಮ್ಮ ಶೇಷ ಜೀವನವನ್ನು ಕಳೆಯುತ್ತಿದ್ದಾರೆ. ಅಂತಹ ಗಂಡು ಮಕ್ಕಳನ್ನೂ ನಾನು ನೋಡಿದ್ದೇನೆ. ಆದುದರಿಂದ ಬಹಳ ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ ಸಮಾಜದಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಸಮಾನರು. ಅಲ್ಲಿ ತಾರತಮ್ಯ ಇಲ್ಲ. ಇದು ಈ ಕಾಲಘಟ್ಟದ ಆವಶ್ಯಕತೆ, ಮತ್ತು ಎಲ್ಲಾ ಕಾಲಮಾನದ ಅಗತ್ಯ. ಭಾರತದಲ್ಲಿ ಕೆಲವು ಅಸ್ತವ್ಯಸ್ತಗಳಿರಬಹುದು. ಅದಕ್ಕೆ ಕೆಲವು ಕಾರಣಗಳೂ ಇವೆ. ಆದರೆ ಈ ದೇಶ ಹೆಮ್ಮೆಯಿಂದಿರಬಹುದು. ಆಡಳಿತದ ಬಗ್ಗೆ ನಾವು ಮಾತನಾಡುವುದಾದರೆ ಉತ್ತಮ ಆಡಳಿತಕ್ಕಾಗಿ ಅಹಿಲ್ಯಾ ದೇವಿ ಹೆಸರು ಸ್ಮರಣೆಗೆ ಬರುವ ಕಾಲವೊಂದಿತ್ತು. ವೀರತ್ವಕ್ಕೆ ಸಂಬಂಧಿಸಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸ್ಮರಣೆಗೆ ಬರುತ್ತಿದ್ದರು. ಅವರೆಲ್ಲ ನಮ್ಮ ಹೆಣ್ಣು ಮಕ್ಕಳು!. ಅಂದರೆ ಯಾವ ಶಕೆಯೂ ಸ್ಥಗಿತಗೊಂಡಂತಿರುವುದಿಲ್ಲ ಮತ್ತು ಇಲ್ಲಿ ಹೆಣ್ಣು ಮಕ್ಕಳು ಅವರಲ್ಲಿ ವಿದ್ವತ್ ಜ್ಞಾನ ಸಂಗ್ರಹ ಇರುವುದನ್ನು ತೋರಿಸಿಕೊಟ್ಟಿದ್ದಾರೆ. ಮೊದಲನೆಯದಾಗಿ ನಾವು ನಮ್ಮದೇ ಆದ ಮನೋಸ್ಥಿತಿಯನ್ನು ಹೊಂದಿದ್ದೇವೆ. ಎರಡನೆಯದಾಗಿ ಇಂದು ಪರಿಸ್ಥಿತಿ ಬದಲಾಗಿದೆ. ಇಂದು ಶಾಲೆಗಳಿಗೆ ಸೇರುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯು ಗಂಡು ಮಕ್ಕಳ ಸಂಖ್ಯೆಗಿಂತ ಹೆಚ್ಚಾಗಿರುವುದನ್ನು ನೀವು ಕಾಣುತ್ತೀರಿ. ಇದು ಹೊಸ ಮತ್ತು ತಾಜಾ ಅಂಕಿ ಅಂಶ. ಇಂದು ಹೆಣ್ಣು ಮಕ್ಕಳು ಆಶೋತ್ತರಗಳನ್ನು ಹೊಂದಿದ್ದಾರೆ. ಏನಾದರೂ ಮಾಡಬೇಕು ಎಂಬ ಉತ್ಸಾಹವನ್ನೂ ಹೊಂದಿದ್ದಾರೆ. ಇದಕ್ಕಾಗಿ ಬಹುಷಃ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬೇಕು. ಹಾಗಾಗಿ ನಾವು ಅವರಿಗೆ ಅವಕಾಶಗಳನ್ನು ಕೊಡಬೇಕು ಮತ್ತು ಅವಕಾಶಗಳನ್ನು ಸಾಂಸ್ಥೀಕರಣಗೊಳಿಸಬೇಕು. ಬರೇ ಒಂದು ಕುಟುಂಬ ಮಾತ್ರ ಇದನ್ನು ತನ್ನದೇ ರೀತಿಯಲ್ಲಿ ಮಾಡುತ್ತಿರುವುದಲ್ಲ. ಇಂದು ಅದು ಯಾವುದೇ ರೀತಿಯ ಕ್ರೀಡೆ ಆಗಿರಲಿ ಭಾರತದ ಹೆಣ್ಣು ಮಕ್ಕಳು ಎಲ್ಲ ಕಡೆಯೂ ದೇಶಕ್ಕೆ ಶ್ಲಾಘನೆಗಳನ್ನು ತರುತ್ತಿದ್ದಾರೆ. ವಿಜ್ಞಾನ ಕ್ಷೇತ್ರದತ್ತ ನೋಡಿರಿ. ವಿಜ್ಞಾನದ ಎಲ್ಲಾ ಪ್ರಮುಖ ಸಾಧನೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ನಮ್ಮ ಹೆಣ್ಣು ಮಕ್ಕಳಿಂದ ಬಂದಿರುವಂತಹವು. ಅವರು ವಿಜ್ಞಾನದ ಕ್ಷೇತ್ರದಲ್ಲಿ ಏನಾದರೊಂದನ್ನು ಸಾಧಿಸಿರುತ್ತಾರೆ. ಈಗ 10ನೇ,, 12 ನೇ ತರಗತಿಯ ಫಲಿತಾಂಶಗಳತ್ತ ನೋಡಿ. ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ಉತ್ತೀರ್ಣರಾಗುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚು. ಹಾಗಾಗಿ ಇಂದು ಪ್ರತೀ ಕುಟುಂಬಕ್ಕೂ ಹೆಣ್ಣು ಮಗು ಪ್ರಮುಖ ಆಸ್ತಿಯಾಗಿದ್ದಾಳೆ. ಕುಟುಂಬದಲ್ಲಿ ಆಕೆ ಬಹಳ ದೊಡ್ಡ ಶಕ್ತಿಯಾಗಿದ್ದಾಳೆ. ಮತ್ತು ಈ ಬದಲಾವಣೆ ಬಹಳ ಉತ್ತಮವಾದುದು. ಈ ಬದಲಾವಣೆ ಹೆಚ್ಚಿದಷ್ಟೂ ಅದರಿಂದ ಪ್ರಯೋಜನ ಹೆಚ್ಚಾಗುತ್ತದೆ. ಈಗ ನೀವು ನೋಡಿ, ಈ ಪ್ರಶ್ನೆ ಗುಜರಾತಿಗೆ ಸಂಬಂಧಪಟ್ಟದ್ದು. ಗುಜರಾತಿನಲ್ಲಿ ಬಹಳ ಬಲಿಷ್ಠವಾದ ಪಂಚಾಯತ್ ರಾಜ್ ವ್ಯವಸ್ಥೆ ಇದೆ. ಚುನಾಯಿತ ಪ್ರತಿನಿಧಿಗಳಲ್ಲಿ 50 ಶೇಕಡಾ ಪ್ರತಿನಿಧಿಗಳು ಮಹಿಳೆಯರು. ಕಾನೂನು ಸುವ್ಯವಸ್ಥೆಯಲ್ಲಿ ಅವರು 50 ಪ್ರತಿಶತದಷ್ಟಿದ್ದಾರೆ. ಆದರೆ ಚುನಾವಣೆಯ ಬಳಿಕ , ಚುನಾಯಿತ ಮಹಿಳೆಯರ ಸಂಖ್ಯೆ ಕೆಲವೊಮ್ಮೆ 53 ರಿಂದ 54 ಶೇಕಡಾದಷ್ಟು ಮತ್ತು 55 ಶೇಕಡಾದಷ್ಟಿರುತ್ತದೆ. ಅಂದರೆ ಆಕೆ ತನ್ನ ಮೀಸಲಾತಿ ಸ್ಥಾನದಿಂದ ಆಯ್ಕೆಯಾದರೂ ಕೆಲವೊಮ್ಮೆ ಶೇಕಡಾವಾರು ಪ್ರಮಾಣ ಸಾಮಾನ್ಯ ಕ್ಷೇತ್ರವನ್ನೂ ಗೆಲ್ಲುವುದರಿಂದ 55 ಶೇಕಡಾದವರೆಗೆ ಹೋಗುತ್ತದೆ ಮತ್ತು ಪುರುಷರ ಪ್ರಮಾಣ 45 ಶೇಕಡಾಕ್ಕೆ ಇಳಿಯುತ್ತದೆ. ಇದರರ್ಥ ಸಮಾಜದ ನಂಬಿಕೆ, ವಿಶ್ವಾಸ ತಾಯಂದಿರು ಮತ್ತು ಸಹೋದರಿಯರ ವಿಷಯದಲ್ಲಿ ಹೆಚ್ಚೇ ಇದೆ. ಅದರಿಂದಾಗಿ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗುತ್ತಿದ್ದಾರೆ. ಇಂದು ನಾವು “ಅಜಾದಿ ಕಾ ಅಮೃತ ಮಹೋತ್ಸವ” ಆಚರಿಸುತ್ತಿರುವಾಗ ಭಾರತದ ಸಂಸತ್ತಿನ ಇದುವರೆಗಿನ ಅವಧಿಯನ್ನು ಪರಿಗಣಿಸಿದರೆ ಗರಿಷ್ಠ ಸಂಖ್ಯೆಯ ಮಹಿಳಾ ಎಂ.ಪಿ.ಗಳನ್ನು ಹೊಂದಿದೆ. ಮತ್ತು ಇದು ಗ್ರಾಮಗಳಲ್ಲಿಯೂ ಕಾಣಬರುತ್ತಿದೆ. ಜನರು ಸುಶಿಕ್ಷಿತ ಹೆಣ್ಣು ಮಕ್ಕಳನ್ನು ತಮ್ಮ ಪ್ರತಿನಿಧಿಯಾಗಿ ಹೆಚ್ಚು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ. ಅಲ್ಲಿ ಐದನೇ ತರಗತಿ ಉತ್ತೀರ್ಣಳಾದ ಸಹೋದರಿ ಇದ್ದರೆ, ಆಗ ಜನರು 7 ನೇ ತರಗತಿ ಉತ್ತೀರ್ಣರಾದವರನ್ನು ಆಯ್ಕೆ ಮಾಡುತ್ತಿದ್ದಾರೆ. ಆಕೆ ಹನ್ನೊಂದನೆ ತರಗತಿ ಉತ್ತೀರ್ಣಳಾಗಿದ್ದರೆ, ಜನರು ಆಕೆಯನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ಅಂದರೆ ಶಿಕ್ಷಣಕ್ಕೆ ಗೌರವ ಕೊಡುವ ಮನೋಭಾವ ಸಮಾಜದ ಎಲ್ಲಾ ವಲಯಗಳಲ್ಲಿಯೂ ಕಾಣಬರುತ್ತಿದೆ. ಇಂದು ನೀವು ಶಿಕ್ಷಣ ವಲಯದತ್ತ ನೋಡಿರಿ. ಅಲ್ಲಿ ಪುರುಷರಿಂದ ಒಂದಲ್ಲ ಒಂದು ಹಂತದಲ್ಲಿ ಬೇಡಿಕೆ ಬರುವ ಸಾಧ್ಯತೆ ಇರುವಂತಿದೆ. ನಾನು ಯಾರಿಗೂ ಯಾವುದೇ ದಾರಿಯನ್ನು ತೋರಿಸುತ್ತಿಲ್ಲ. ಆದರೆ ಅಲ್ಲಿ ಪುರುಷರು ಶಿಕ್ಷಕ ವೃತ್ತಿಯಲ್ಲಿ ಶೇಖಡಾವಾರು ಮೀಸಲಾತಿ ಕೋರಿ ಪ್ರತಿಭಟನಾ ಮೆರವಣಿಗೆ ಸಂಘಟಿಸುವ ಸಾಧ್ಯತೆಯೂ ಇದೆ, ಯಾಕೆಂದರೆ ಇಂದು ಇರುವ ಶಿಕ್ಷಕರಲ್ಲಿ ಬಹುಪಾಲು ಶಿಕ್ಷಕರು ನಮ್ಮ ತಾಯಂದಿರು ಮತ್ತು ಸಹೋದರಿಯರು. ನರ್ಸಿಂಗ್ ವಲಯದಲ್ಲಿಯೂ ಇಂತಹದೇ ಪ್ರವೃತ್ತಿ ಕಾಣಬರುತ್ತದೆ. ಇದಕ್ಕೆ ಸೇವಾ ಮನೋಭಾವನೆ ಬೇಕು ಮತ್ತು ತಾಯ್ತನ ಬೇಕು. ಭಾರತದ ನರ್ಸಿಂಗ್ ವಲಯ ಜಗತ್ತಿನಾದ್ಯಂತ ಭಾರತದ ಹೆಮ್ಮೆಯನ್ನು ಹೆಚ್ಚಿಸುತ್ತಿದೆ. ಪೊಲೀಸ್ ವ್ಯವಸ್ಥೆಯಲ್ಲಿಯೂ ನಮ್ಮ ಹೆಣ್ಣು ಮಕ್ಕಳು ಬಹಳ ದೊಡ್ಡ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಈಗ ಎನ್.ಸಿ.ಸಿ, ಸೈನಿಕ ಶಾಲೆಗಳು, ಸೇನೆ ಸಹಿತ ಪ್ರತಿಯೊಂದು ವಿಭಾಗಗಳಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ. ಮತ್ತು ಈ ಎಲ್ಲಾ ಸಂಗತಿಗಳೂ ಸಾಂಸ್ಥೀಕರಣಗೊಳ್ಳುತ್ತಿವೆ. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವೆ ವ್ಯತ್ಯಾಸ, ವಿಭಜನೆ ಮಾಡಬಾರದು ಎಂದು ನಾನು ಸಮಾಜಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಇಬ್ಬರಿಗೂ ಸಮಾನ ಅವಕಾಶಗಳನ್ನು ಕೊಡಿರಿ. ಮತ್ತು ನಾನು ಹೇಳುತ್ತೇನೆ ಬಹುಷಃ ಸಮಾನ ಹೂಡಿಕೆ ಹಾಗು ಅವಕಾಶಗಳ ಲಭ್ಯವಾದರೆ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ.
ನಿರೂಪಕರು : ಗೌರವಾನ್ವಿತ ಪ್ರಧಾನ ಮಂತ್ರಿ ಜೀ , ಹೆಣ್ಣು ಮಕ್ಕಳು ಮನೆಯ, ಸಮಾಜದ ಮತ್ತು ರಾಷ್ಟ್ರದ ವೈಭವ, ಘನತೆ. ಅವರ ಆಶೋತ್ತರಗಳು ನಿಮ್ಮ ಆಶೋತ್ತರಗಳಿಂದಾಗಿ ಹೊಸ ರೆಕ್ಕೆಗಳನ್ನು ಪಡೆದುಕೊಂಡಿವೆ, ಧನ್ಯವಾದಗಳು ತಮಗೆ. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ನಾವು ಇಂದು ನಿಮ್ಮಿಂದ ಪ್ರೇರಣೆ ಮತ್ತು ಒಳನೋಟಗಳನ್ನು ಪಡೆದುಕೊಳ್ಳುವ ಅವಕಾಶ ಹಾಗು ಆಶೀರ್ವಾದವನ್ನು ದೊರಕಿಸಿಕೊಂಡಿದ್ದೇವೆ. ನಿಮ್ಮ ಮೌಲ್ಯಯುತ ಸಮಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಾನೀಗ ಎರಡು ಕೊನೆಯ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇನೆ. ಹೊಸ ದಿಲ್ಲಿಯ ಆರ್.ಕೆ.ಪುರಂನ ಕೇಂದ್ರೀಯ ವಿದ್ಯಾಲಯ ಸೆಕ್ಟರ್ -8ರ ಹನ್ನೆರಡನೇ ತರಗತಿ ವಿದ್ಯಾರ್ಥಿ ದುಂಪಾಲ ಪವಿತ್ರ ರಾವ್ ಈಗ ತನ್ನ ಪ್ರಶ್ನೆಗೆ ಉತ್ತರ ಪಡೆಯುವ ಕುತೂಹಲದಲ್ಲಿದ್ದಾರೆ. ಪವಿತ್ರಾ ರಾವ್, ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ಪವಿತ್ರಾ ರಾವ್: ನಮಸ್ಕಾರ ಪ್ರಧಾನ ಮಂತ್ರಿ ಸರ್, ನಾನು ಪವಿತ್ರಾ ರಾವ್, ಹೊಸದಿಲ್ಲಿಯ ಆರ್.ಕೆ.ಪುರಂನ ಕೇಂದ್ರೀಯ ವಿದ್ಯಾಲಯ ಸೆಕ್ಟರ್ -8 ರ ಹನ್ನೆರಡನೇ ತರಗತಿ ವಿದ್ಯಾರ್ಥಿ. ಗೌರವಾನ್ವಿತ ಪ್ರಧಾನ ಮಂತ್ರಿ ಜೀ , ಭಾರತವು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವಾಗ ಅದನ್ನು ಕಾಯ್ದುಕೊಳ್ಳಲು ನಮ್ಮ ಹೊಸ ತಲೆಮಾರು ಇತರ ಯಾವ ಕ್ರಮಗಳನ್ನು ಕೈಗೊಳ್ಳಬೇಕು ?. ನಿಮ್ಮ ಮಾರ್ಗದರ್ಶನದೊಂದಿಗೆ, ಭಾರತ ಸ್ವಚ್ಛವಾಗಿದೆ; ಆದರೆ ಮುಂದಿನ ತಲೆಮಾರು ಪರಿಸರ ಸಂರಕ್ಷಣೆಗೆ ಯಾವ ಕೊಡುಗೆಯನ್ನು ನೀಡಬೇಕು?. ದಯವಿಟ್ಟು ಮಾರ್ಗದರ್ಶನ ಮಾಡಿ, ತಮಗೆ ಧನ್ಯವಾದಗಳು ಸರ್.
ನಿರೂಪಕರು :: ಧನ್ಯವಾದಗಳು ಪವಿತ್ರ. ಸರ್, ಚೈತನ್ಯ ಲೇಲೆ, ಹೊಸದಿಲ್ಲಿಯ 11ನೇ ತರಗತಿ ವಿದ್ಯಾರ್ಥಿ, ಅವರ ಮನಸ್ಸಿನಲ್ಲಿ ಮೂಡಿದ ಇದೇ ರೀತಿಯ ಪ್ರಶ್ನೆಗೆ ನಿಮ್ಮಿಂದ ಉತ್ತರ ಬಯಸುತ್ತಿದ್ದಾರೆ. ಚೈತನ್ಯ, ದಯವಿಟ್ಟು ನಿಮ್ಮ ಪ್ರಶ್ನೆಯನ್ನು ಕೇಳಿ.
ಚೈತನ್ಯ: ಪ್ರಣಾಮ್, ಗೌರವಾನ್ವಿತ ಪ್ರಧಾನ ಮಂತ್ರಿ ಸರ್. ನನ್ನ ಹೆಸರು ಚೈತನ್ಯ. ನಾನು ಡಿ.ಎ.ವಿ. ಶಾಲೆಯ 11 ನೇಯ ತರಗತಿಯ ವಿದ್ಯಾರ್ಥಿ. ನಿಮಗೆ ನನ್ನ ಪ್ರಶ್ನೆ ಏನೆಂದರೆ, ನಾವು ಹೇಗೆ ನಮ್ಮ ಪರಿಸರವನ್ನು ಸ್ವಚ್ಛ ಮತ್ತು ಉತ್ತಮವಾಗಿಸಬಹುದು?. ಧನ್ಯವಾದಗಳು.
ನಿರೂಪಕರು ::: ಧನ್ಯವಾದಗಳು ಚೈತನ್ಯ. ಗೌರವಾನ್ವಿತ ಪ್ರಧಾನ ಮಂತ್ರಿ ಸರ್, ಪವಿತ್ರ ಮತ್ತು ಚೈತನ್ಯರಂತೆ ಭಾರತದ ಯುವಜನತೆ ಸ್ವಚ್ಛ ಮತ್ತು ಹಸಿರು ಭಾರತದಲ್ಲಿ ಉಸಿರಾಡಲು ಬಯಸುತ್ತಾರೆ, ಇದು ನಿಮ್ಮ ಹೃದಯಕ್ಕೆ ಹತ್ತಿರವಾದ ಕನಸು. ನಾವೆಲ್ಲರೂ ಭಾರತವನ್ನು ಮತ್ತು ನಮ್ಮ ಪರಿಸರವನ್ನು ಹೇಗೆ ಸ್ವಚ್ಛವಾಗಿಡಬೇಕು, ವಸ್ತುಶಃ ಪ್ರತಿಯೊಂದು ರೀತಿಯಲ್ಲಿಯೂ ಕಲುಷಿತವಾಗದಂತೆ ಹೇಗೆ ಇಡಬೇಕು ಎಂಬುದನ್ನು ತಿಳಿಯಲು ಬಯಸುತ್ತೇವೆ. ನಾವೆಲ್ಲರೂ ನಿಮ್ಮ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇವೆ, ಸರ್.
ಪ್ರಧಾನ ಮಂತ್ರಿ: ಒಳ್ಳೆಯದು, ಈ ವಿಷಯ ಶೀರ್ಷಿಕೆ ಪರೀಕ್ಷೆಯ ಚರ್ಚೆಗೆ ಸಂಬಂಧಿಸಿದುದಲ್ಲ. ಪರೀಕ್ಷೆಗೂ ಉತ್ತಮ ಪರಿಸರ ಅವಶ್ಯ ಇರುವಂತೆ ಭೂಮಿಗೂ ಉತ್ತಮ ಪರಿಸರ ಅವಶ್ಯ. ಮತ್ತು ನಾವು ಭೂಮಿಯನ್ನು ನಮ್ಮ ಮಾತೆ, ತಾಯಿ ಎಂದು ಪರಿಗಣಿಸುತ್ತೇವೆ. ಎಲ್ಲಕಿಂತ ಮೊದಲು, ನಾನು ಇಂದು ನನಗೆ ಅವಕಾಶ ಮಾಡಿಕೊಟ್ಟ ನಮ್ಮ ದೇಶದ ಮಕ್ಕಳಿಗೆ ಹೃದಯಾಂತರಾಳದಿಂದ ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತೇನೆ. ನಾನು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾದಾಗ, ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ನಾನು ಮಾತನಾಡಿದ್ದೆ. ನನ್ನ ಭಾಷಣದ ಬಳಿಕ ಬಹುತೇಕ ಜನರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು. ಮೋದೀಜಿ ಇದನ್ನು ಹೇಳಿದ್ದಾರೆ, ಆದರೆ ಅದು ಸಾಧ್ಯವಿದೆಯೇ ? ಎಂದು ಕೇಳಿದ್ದರು. ಆ ಸಂದರ್ಭದಲ್ಲಿ, ನಾನು ಸ್ವಚ್ಛತೆಯ ಬಗ್ಗೆ ಮಾತನಾಡಿದ್ದೆ. ಅದು ಜನರಿಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿತ್ತು. ದೇಶದ ಪ್ರಧಾನ ಮಂತ್ರಿ ಬಾಹ್ಯಾಕಾಶ, ವಿದೇಶಾಂಗ ನೀತಿ ಅಥವಾ ಮಿಲಿಟರಿ ಶಕ್ತಿಯ ಬಗ್ಗೆ ಮಾತನಾಡಬೇಕಾದವರು ಸ್ವಚ್ಛತೆಯ ಬಗ್ಗೆ ಮಾತನಾಡುತ್ತಿದ್ದಾರೆ? ಅನೇಕರಿಗೆ ಇದು ಆಶ್ಚರ್ಯದ ಸಂಗತಿಯಾಗಿತ್ತು. ಎಲ್ಲಾ ಸಂಶಯಗಳನ್ನು ಮತ್ತು ಕಳವಳಗಳನ್ನು ಸುಳ್ಳು ಮಾಡಿ, ನನ್ನ ಸ್ವಚ್ಛತೆಯ ಚಿಂತನೆಯನ್ನು ಯಶಸ್ಸು ಮಾಡಿದ್ದು ನನ್ನ ದೇಶದ ಹುಡುಗರು ಮತ್ತು ಹುಡುಗಿಯರು!. ಸ್ವಚ್ಛತೆಯ ಈ ಪ್ರಯಾಣದಲ್ಲಿ ನಾವು ಎಲ್ಲಿಗೆ ಮುಟ್ಟಿದ್ದೇವೋ, ಇದರ ಗರಿಷ್ಠ ಖ್ಯಾತಿಯನ್ನು ನಾನು ನನ್ನ ದೇಶದ ಹುಡುಗರು ಮತ್ತು ಹುಡುಗಿಯರಿಗೆ ಸಲ್ಲಿಸುತ್ತೇನೆ. 5 ಅಥವಾ 6 ವರ್ಷದ ಮಕ್ಕಳು ತಮ್ಮ ಅಜ್ಜ-ಅಜ್ಜಿಯಂದಿರಿಗೆ ದಿನವೊಂದಕ್ಕೆ ಹತ್ತು ಬಾರಿಯಾದರೂ ಮಧ್ಯಪ್ರವೇಶಿಸಿ –“ಇದನ್ನು ಇಲ್ಲಿ ಬಿಸಾಡಬಾರದು ಎಂದು ಮೋದೀಜೀ ಹೇಳಿದ್ದಾರೆ. ಇದನ್ನು ಇಲ್ಲಿ ಬಿಸಾಡಬೇಡಿ. ಮೋದೀಜೀ ಇದನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ ನೂರಾರು ಘಟನೆಗಳನ್ನು ನಾನು ಕೇಳಿದ್ದೇನೆ. ಇದು ಸಾಮೂಹಿಕ ಬೃಹತ್ ಶಕ್ತಿ ಮತ್ತು ಅದು ಬಂದಿರುವುದು ಬಹುಷಃ ಅದೇ ತಲೆಮಾರಿನಿಂದ, ನೀವು ಕೂಡಾ ಅದೇ ಉತ್ಸಾಹದಿಂದ ಈ ಪ್ರಶ್ನೆ ಕೇಳಿರುವಿರಿ. ನಾನು ನಿಮ್ಮ ಪ್ರಶ್ನೆಯನ್ನು ಸ್ವಾಗತಿಸುತ್ತೇನೆ. ಜಾಗತಿಕ ಉಷ್ಣಾಂಶ ಹೆಚ್ಚಳದಿಂದ ಪರಿಸರದ ಬಗ್ಗೆ ಇಡೀ ಜಗತ್ತೇ ಇಂದು ಕಳವಳಗೊಂಡಿದೆ. ಮತ್ತು ಇದಕ್ಕೆ ಮೂಲ ಕಾರಣ ನಮ್ಮ ಸಂಪನ್ಮೂಲಗಳ ದುರ್ಬಳಕೆ. ನಮಗೆ ದೇವರು ನೀಡಿದ ವ್ಯವಸ್ಥೆಗಳನ್ನು ನಾವು ಹಾಳುಗೆಡವಿದ್ದೇವೆ. ಇಂದು ನಾನು ನೀರು ಕುಡಿಯುತ್ತಿದ್ದರೆ, ಅಥವಾ ನನಗೆ ನೀರು ಲಭ್ಯ ಇದ್ದರೆ, ಎಲ್ಲಿಯಾದರೂ ನನಗೆ ನದಿಯನ್ನು ನೋಡಲು ಸಾಧ್ಯವಿದ್ದರೆ , ನಾನು ಮರದ ನೆರಳಿನಡಿಯಲ್ಲಿ ನಿಂತಿದ್ದರೆ; ಅದರಲ್ಲಿ ನನ್ನ ಕೊಡುಗೆ ಏನೂ ಇಲ್ಲ. ಇದು ನನಗೆ ನನ್ನ ಪೂರ್ವಜರು ಬಿಟ್ಟು ಹೋಗಿರುವಂತಹದು. ನನ್ನ ಪೂರ್ವಜರು ನನಗೆ ಕೊಟ್ಟಿರುವಂತಹದನ್ನು ನಾನು ಇಂದು ಬಳಸುತ್ತಿದ್ದೇನೆ. ಅದೇ ರೀತಿ ನಾನು ನನ್ನ ಮುಂದಿನ ಜನಾಂಗಕ್ಕೆ ಸ್ವಲ್ಪವನ್ನಾದರೂ ಬಿಟ್ಟು ಹೋಗಬೇಕೇ ಬೇಡವೇ?. ನಾನು ಉಳಿಸದಿದ್ದರೆ, ನಾನು ಅವರಿಗೆ ಕೊಡುವುದಾದರೂ ಏನನ್ನು?. ಆದುದರಿಂದ ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದಂತೆ ನಾವು ಕೂಡಾ ನಮ್ಮ ಮುಂದಿನ ತಲೆಮಾರಿಗೆ ಅದನ್ನು ಕೊಡುವ ಜವಾಬ್ದಾರಿಯನ್ನು ಅಂಗೀಕರಿಸಿ ನಮ್ಮ ಜವಾಬ್ದಾರಿಯನು ಈಡೇರಿಸಬೇಕು. ಅದು ನಮ್ಮ ಕರ್ತವ್ಯ. ಮತ್ತು ಈಗ ಇದು ಬರೇ ಸರಕಾರಿ ಕಾರ್ಯಕ್ರಮಗಳಿಂದ ಮಾತ್ರವೇ ಯಶಸ್ವಿಯಾಗಲಾರದು. ಉದಾಹರಣೆಗೆ ನಾನು “ಏಕ ಬಳಕೆ ಪ್ಲಾಸ್ಟಿಕ್” ನ್ನು ನಿವಾರಿಸಬೇಕು ಎಂದು ಹೇಳುತ್ತೇನೆ. ನಾವಿದಕ್ಕೆ ಒಪ್ಪುತ್ತೇವೆ ಮತ್ತು ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸುವ ಬಗ್ಗೆ ನಮ್ಮ ಕುಟುಂಬದಲ್ಲಿ ಚರ್ಚಿಸುತ್ತೇವೆ. ಆಗ ಮನೆಗೆ ಒಂದು ಮದುವೆ ಕಾಗದ ಬರುತ್ತದೆ. ಅದು ಬಹಳ ಸುಂದರ ಪ್ಲಾಸ್ಟಿಕ್ ಕವರನ್ನು ಒಳಗೊಂಡಿರುತ್ತದೆ. ನಾವದನ್ನು ಹೊರಗೆ ತೆಗೆಯುತ್ತೇವೆ ಮತ್ತು ಅದನ್ನು ದೂರ ಬಿಸಾಡುತ್ತೇವೆ. ಈಗ ಈ ಕ್ರಮ ನಾವು ಯಾವುದರ ಬಗ್ಗೆ ಚರ್ಚಿಸುತ್ತಿದ್ದೇವೋ ಅದಕ್ಕೆ ವಿರುದ್ಧವಾದುದು. ಹಾಗಿರುವಾಗ ನಾವು ಹೇಗೆ ಇದನ್ನು ನಮ್ಮ ದೈನಂದಿನ ಹವ್ಯಾಸಗಳಲ್ಲಿ ಅಳವಡಿಸಿಕೊಳ್ಳುವುದು?. ನೀವು ಕನಿಷ್ಠ ನಿಮ್ಮ ಕಾರ್ಯಕ್ರಮದಲ್ಲಿಯಾದರೂ ನಿಮ್ಮ ಮನೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಗೆ ಅವಕಾಶ ಇಲ್ಲ ಎಂದು ನಿರ್ಧರಿಸಿದರೆ; ಆಗ ಅದು ಪರಿಸರಕ್ಕೆ ನಮ್ಮ ಸಹಾಯ ನೀಡಿದಂತಾಗುತ್ತದೆ. ಮತ್ತು ದೇಶದ ಎಲ್ಲಾ ಮಕ್ಕಳೂ ಇದನ್ನು ಅನುಸರಿಸಲು ಆರಂಭಿಸಿದರೆ ಆಗ ಅದಕ್ಕೆ ಬೇರೇನೂ ಬೇಕಾಗದು. ಗುಜರಾತಿನಲ್ಲಿ ನಾನು ದನಗಳ ಆರೋಗ್ಯ ಮೇಳವನ್ನು ಆಯೋಜಿಸುತ್ತಿದ್ದುದನ್ನು ನೀವು ನೋಡಿರಬಹುದು. ನಾನು ಮುಖ್ಯಮಂತ್ರಿಯಾಗಿದ್ದಾಗ ಜಾನುವಾರುಗಳ ಆರೋಗ್ಯ ಮೇಳಗಳನ್ನು ನಡೆಸುತ್ತಿದ್ದೆ. ನಾನು ಗುಜರಾತಿನಲ್ಲಿ ಜಾನುವಾರುಗಳ ದಂತ ಚಿಕಿತ್ಸೆಗೆ ಏರ್ಪಾಡು ಮಾಡುತ್ತಿದ್ದೆ. ಕೆಲವು ಪ್ರಾಣಿಗಳಿಗೆ ಕೆಟರಾಕ್ಟ್ ಇರುತ್ತಿತ್ತು ಮತ್ತು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ಪ್ರಾಣಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತಿತ್ತು. ಆಗ ನಾನು ಹೊಟ್ಟೆಯಲ್ಲಿ ಕನಿಷ್ಠ 40 ಕಿಲೋಗ್ರಾಂನಷ್ಟು ಪ್ಲಾಸ್ಟಿಕ್ ಹೊಂದಿದ್ದ ದನವನ್ನು ನೋಡಿದ್ದೆ. ಮತ್ತು ಇದು ಮಾನವತೆಯ ವಿರೋಧಿ ಕೃತ್ಯ. ಈ ಭಾವನೆ ನಮ್ಮಲ್ಲಿ ಹುಟ್ಟಬೇಕು. ಹಗುರ ಪ್ಲಾಸ್ಟಿಕ್ ಬ್ಯಾಗನ್ನು ಕೊಂಡೊಯ್ಯುವುದು ಬಹಳ ಸುಲಭ ಎಂದು ಸಹಜವಾಗಿ ಕಾಣುತ್ತದೆ, ನಂತರ ಅದನ್ನು ಎಸೆಯಲಾಗುತ್ತದೆ. ನಾವೀಗ ಈ “ಬಳಸಿ ಎಸೆಯುವ” ಸಂಸ್ಕೃತಿಯಿಂದ ಪಾರಾಗಬೇಕು ಮತ್ತು “ಮರುಬಳಕೆ, ಮರುಸಂಸ್ಕರಣವನ್ನು ಅನುಸರಿಸಬೇಕು. ಮತ್ತು ಭಾರತಕ್ಕೆ ಇದೇನು ಹೊಸದಲ್ಲ. ನಾವು ಈ ಅಭ್ಯಾಸವನ್ನು ಕುಟುಂಬದಲ್ಲಿ ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ. ನಾವು ಹೆಚ್ಚು ಸಂಪನ್ಮೂಲಗಳನ್ನು ಬಳಸಿದಷ್ಟೂ ಅದರಿಂದ ಪರಿಸರಕ್ಕೆ ಹೆಚ್ಚು ಹೆಚ್ಚು ಹಾನಿಯಾಗುತ್ತದೆ. ಇನ್ನೊಂದೆಡೆ ಸಂಪನ್ಮೂಲಗಳ ಸಮತೋಲಿತ ಬಳಕೆ ಮಾಡಿದರೆ ನಮಗೆ ಪರಿಸರವನ್ನು ಉತ್ತಮವಾಗಿ ಕಾಪಿಡಲು ಸಹಾಯವಾಗುತ್ತದೆ. ಇಂದು ನಮ್ಮ ಇಲೆಕ್ಟ್ರಾನಿಕ್ ಸಲಕರಣೆಗಳತ್ತ ನೋಡಿರಿ. ಅವುಗಳು ಕೂಡಾ ಪರಿಸರಕ್ಕೆ ಸಮಸ್ಯೆಯಾಗುತ್ತಿವೆ. ಮಾಲಿನ್ಯ ಉಂಟು ಮಾಡುವ ಹಳೆಯ ವಾಹನಗಳ ಓಡಾಟವನ್ನು ಕೊನೆಗಾಣಿಸಲು ಭಾರತ ಸರಕಾರ ಇತ್ತೀಚೆಗೆ ಗುಜರಿ ನೀತಿಯನ್ನು ಜಾರಿಗೆ ತಂದಿರುವುದನ್ನು ತಾವು ನೋಡಿರಬೇಕು. ಯಾರಾದರೂ ಅದರಿಂದ ಸ್ವಲ್ಪ ಹಣ ಪಡೆದುಕೊಳ್ಳಬಹುದು ಮತ್ತು ಆ ಬಳಿಕ ಹೊಸ ಕಾರ್ ಕೊಳ್ಳಬಹುದು. ಈ ನಿಟ್ಟಿನಲ್ಲಿಯೂ ಬಹಳಷ್ಟು ಕೆಲಸಗಳನ್ನು ಅನಿಷ್ಠಾನಗೊಳಿಸಲಾಗುತ್ತಿದೆ. ಇದೇ ರೀತಿ, ನಮಗೆ ನೀರಿನ ಮಹತ್ವ, ಸಸ್ಯಗಳು ಮತ್ತು ಪ್ರಕೃತಿಯ ಮಹತ್ವ ತಿಳಿದಿದೆ. ನಾವದರ ಬಗ್ಗೆ ಸೂಕ್ಷ್ಮಗ್ರಾಹಿಗಳಾಗಿದ್ದೇವೆಯೇ? ಪರಿಸರದತ್ತ ಸೂಕ್ಷ್ಮತ್ವದ ಈ ಸ್ಫೂರ್ತಿಯನ್ನು ಹೊಂದಲು ಅದು ನಮ್ಮ ಸಹಜ ಸ್ವಭಾವವಾಗಬೇಕು. ಸಿ.ಒ.ಪಿ.-26ರಲ್ಲಿ ನಾನು ಒಂದು ವಿಷಯ ಶೀರ್ಷಿಕೆಯನ್ನು ಮುಂದಿಟ್ಟದ್ದು ನಿಮಗೆ ತಿಳಿದಿರಬೇಕು. ಯು.ಕೆ.ಯಲ್ಲಿ ಒಂದು ಸಮ್ಮೇಳನವಿತ್ತು. ನಾನು ಅಲ್ಲಿ ಜೀವನ ವಿಧಾನ ಒಂದು ಸಮಸ್ಯೆ ಎಂದು ಹೇಳಿದ್ದೆ ಮತ್ತು “ಉದ್ದೇಶದ ಜೀವನ” ಬೇಕು ಎಂದು ಪ್ರತಿಪಾದಿಸಿದ್ದೆ. ಮತ್ತು ನಾನಲ್ಲಿ “ಉದ್ದೇಶದ ಜೀವನ”ಕ್ಕಾಗಿ “ಪರಿಸರಕ್ಕಾಗಿ ಜೀವನ ವಿಧಾನ” ಎಂಬ ಪದಪುಂಜವನ್ನು ಸೃಷ್ಟಿಸಿದ್ದೆ. ನಾವು ಯುವಕರಾಗಿದ್ದರೆ, ಅಲ್ಲಿ ನಾಲ್ಕು ಮಹಡಿಗಳ ಕಟ್ಟಡ ಇದ್ದರೆ, ಆಗ ಯಾಕೆ ಲಿಫ್ಟ್ ಬಳಸುವುದು?.ನಾವು ಮೆಟ್ಟಿಲುಗಳನ್ನು ಬಳಸಲು ಪ್ರಯತ್ನಿಸೋಣ. ಇದರಿಂದ ನಮ್ಮ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಪ್ರಯೋಜನವಾಗುತ್ತದೆ. ನಾವು ನಮ್ಮ ಬದುಕಿನಲ್ಲಿ ಈ ಸಣ್ಣ ಸಣ್ಣ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು. ಮತ್ತು ಅದಕ್ಕಾಗಿಯೇ ನಾನು ಹೇಳಿದ್ದು, ನಾವು ಪಿ-3 ಆಂದೋಲನವನ್ನು ಜಗತ್ತಿನಾದ್ಯಂತ ನಡೆಸಬೇಕು ಎಂದು. ಅಂದರೆ ಪ್ರೋ-ಪ್ಲಾನೆಟ್-ಪೀಪಲ್. ಈ ಪಿ-.3 ಚಳವಳಿಗೆ ಹೆಚ್ಚು ಹೆಚ್ಚು ಜನರು ಸೇರ್ಪಡೆಗೊಂಡರೆ ಮತ್ತು ಈ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ನಡೆಸಿದರೆ ಆಗ ನಮಗೆ ಬದಲಾವಣೆಗಳನ್ನು ತರಲು ನಮಗೆ ಸಾಧ್ಯವಾಗುತ್ತದೆ ಎಂಬುದಾಗಿ ನಾನು ನಂಬುತ್ತೇನೆ. ಎರಡನೆಯದಾಗಿ ದೇಶವು ಸ್ವಾತಂತ್ರ್ಯದ 75 ನೇ ವರ್ಷದ “ಅಜಾದಿ ಕಾ ಅಮೃತ ಮಹೋತ್ಸವ”ವನ್ನು ಆಚರಿಸುತ್ತಿದೆ. ದೇಶವು ಶತಮಾನೋತ್ಸವ ಆಚರಿಸುವವರೆಗೆ ಈಗಿನ ತಲೆಮಾರಿಗೆ ಇನ್ನೂ 25 ವರ್ಷಗಳು ಇವೆ. ಅಂದರೆ ನಿಮ್ಮ ಜೀವನದಲ್ಲಿ ಇನ್ನೂ ಇಪ್ಪತ್ತೈದು ವರ್ಷಗಳು ಇವೆ. ಅದು ನಿಮ್ಮದೇ. ಜಗತ್ತಿನೆದುರು ನಮ್ಮ ತಲೆಯನ್ನು ಎತ್ತಿ ನಡೆಯುವಂತೆ ಮತ್ತು ಶತಮಾನೋತ್ಸವವನ್ನು ಹೆಮ್ಮೆಯಿಂದ ಆಚರಿಸುವಂತೆ ಮಾಡಲು ಈ 25 ವರ್ಷಗಳಲ್ಲಿ ನಿಮ್ಮ ಕೊಡುಗೆ ಏನಾಗಿರುತ್ತದೆ?. ನಾವು ನಮ್ಮ ಜೀವನವನ್ನು ಇದಕ್ಕಾಗಿ ಮುಡಿಪಾಗಿಡಬೇಕು. ಮತ್ತು ಇದಕ್ಕಾಗಿ ಅನುಸರಿಸಬೇಕಾದ ಸರಳ ವಿಧಾನ ಎಂದರೆ ನಾವು ಕರ್ತವ್ಯಕ್ಕೆ ಒತ್ತು ನೀಡುವುದು. ನಾನು ನನ್ನ ಕರ್ತವ್ಯಗಳನ್ನು ನಿರ್ವಹಿಸಿದರೆ, ನಾನು ಇನ್ನೊಬ್ಬರ ಹಕ್ಕುಗಳನ್ನು ರಕ್ಷಿಸುತ್ತಿದ್ದೇನೆ ಎಂದರ್ಥ. ಅಂದರೆ ಯಾವನೇ ವ್ಯಕ್ತಿ ಆತನ ಹಕ್ಕುಗಳಿಗಾಗಿ ಆಗ್ರಹ ಮಂಡಿಸಿ ಹೊರಗೆ ಹೋಗಬೇಕಾದ ಅಗತ್ಯ ಇಲ್ಲ. ಇಂದಿನ ಸಮಸ್ಯೆ ಎಂದರೆ ನಾವು ನಮ್ಮ ಕರ್ತವ್ಯಗಳನ್ನು ಮಾಡುವುದಿಲ್ಲ.ಅದರಿಂದಾಗಿ ಯಾರಾದರೊಬ್ಬರು ಅವರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡುತ್ತಿರುತ್ತಾರೆ. ನಮ್ಮ ದೇಶದಲ್ಲಿ ಯಾರೊಬ್ಬರೂ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಇರಬಾರದು. ಇದು ನಮ್ಮ ಕರ್ತವ್ಯ ಮತ್ತು ನಾವು ಕರ್ತವ್ಯಗಳನ್ನು ಮಾಡುವ ಮೂಲಕ ನಮ್ಮ ಕರ್ತವ್ಯವನ್ನು ಪೂರೈಸಬಹುದು. ನಾವು ಕರ್ತವ್ಯಗಳನ್ನು ನೆರವೇರಿಸಿದರೆ ನಾವು ಹೊಂದಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸಿದಂತಾಗುತ್ತದೆ. ಈಗ ನೋಡಿ, ಜಗತ್ತಿನಾದ್ಯಂತ ಇರುವ ಜನರು ನಮ್ಮ ದೇಶದಲ್ಲಿ ನಡೆಯುತ್ತಿರುವ ಈ ಸಂಗತಿಗಳನ್ನು ಚರ್ಚಿಸುತ್ತಿರುತ್ತಾರೆ. ಕೆಲವರಿಗೆ ಉತ್ತಮ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಕೀರ್ತಿ ಮೋದಿಗೆ ಸಲ್ಲುತ್ತದೆ ಎಂಬ ಭಯವಿದೆ. ಮೋದಿಯನ್ನು ಕೊಂಡಾಡಲಾಗುತ್ತದೆ ಎಂಬುದಕ್ಕಾಗಿ ಅವರು ಕೊಂಚ ಹಿಂಜರಿಯುತ್ತಾರೆ. ಆದರೆ ಶಾಲಾ ಮಕ್ಕಳಿಗೆ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಮಕ್ಕಳು ಲಸಿಕೆ ಪಡೆಯಲು ಮುಂದಾದ ವೇಗ ನಿಜವಾಗಿಯೂ ಶ್ಲಾಘನೀಯವಾದುದು. ನಿಮ್ಮಲ್ಲಿರುವವರು, ಯಾರೆಲ್ಲ ಲಸಿಕೆಗಳನ್ನು ಪಡೆದಿದ್ದೀರಿ, ನಿಮ್ಮ ಕೈಗಳನ್ನು ಮೇಲೆತ್ತಿ. ಪ್ರತಿಯೊಬ್ಬರೂ ಲಸಿಕೆ ಪಡೆದಿದ್ದೀರೋ?.ಜಗತ್ತಿನಲ್ಲಿ ಯಾರೊಬ್ಬರೂ ಇಂತಹ ಪ್ರಶ್ನೆಗಳನ್ನು ಕೇಳುವ ಧೈರ್ಯ ಮಾಡಲಾರರು. ಭಾರತದ ಮಕ್ಕಳು ಕೂಡಾ ಇದನ್ನು ತೋರಿಸಿದ್ದಾರೆ. ಅಂದರೆ ನಾವು ನಮ್ಮ ಕರ್ತವ್ಯಗಳನ್ನು ಮಾಡಿದ್ದೇವೆ. ಈ ಕರ್ತವ್ಯ ಪಾಲನೆ ಭಾರತದ ಹೆಮ್ಮೆಗೆ ಕಾರಣವಾಗಿದೆ. ಅದೇ ರೀತಿ ನಮ್ಮ ದೇಶ ಪ್ರಗತಿ ಹೊಂದಬೇಕಿದ್ದರೆ, ನಾವು ಪ್ರಕೃತಿಯನ್ನು ಮತ್ತು ನಮ್ಮ ಪರಿಸರವನ್ನು ರಕ್ಷಿಸಬೇಕಿದ್ದರೆ ಆಗ ನಾವು ಪ್ರಜ್ಞಾಪೂರ್ವಕವಾಗಿ ನಮ್ಮ ಕರ್ತವ್ಯಗಳನ್ನು ಮಾಡಲೇ ಬೇಕಾಗುತ್ತದೆ. ನಾವದನ್ನು ಮಾಡಿದರೆ, ನಾವು ಆಶಿಸಿದಂತಹ ಫಲಿತಾಂಶಗಳನ್ನು ಪಡೆಯಬಹುದು ಎಂಬ ಬಗ್ಗೆ ನನಗೆ ಖಾತ್ರಿ ಇದೆ.
ನಿರೂಪಕರು : ಪ್ರಧಾನ ಮಂತ್ರಿ ಅವರ ಪರೀಕ್ಷಾ ಪೇ ಚರ್ಚಾ- 2022, ಕೋಟ್ಯಂತರ ಮಕ್ಕಳ, ಶಿಕ್ಷಕರ ಮತ್ತು ನಮ್ಮಂತಹ ಪೋಷಕರ ಒತ್ತಡವನ್ನು ಉತ್ಸಾಹ, ಭರವಸೆ ಮತ್ತು ಯಶಸ್ಸಿಗಾಗಿ ಹಾತೊರೆಯುವ ಅಲೆಯಾಗಿ ಪರಿವರ್ತಿಸಿದೆ. ಗೌರವಾನ್ವಿತ ಪ್ರಧಾನ ಮಂತ್ರಿ ಅವರಿಗೆ ನಾವು ಬಹಳ ಬಹಳ ಕೃತಜ್ಞರಾಗಿದ್ದೇವೆ. ನಾವು ನಿಮ್ಮ ಚಿನ್ನದಂತಹ ಭಾಷಣಕ್ಕಾಗಿ ಆಭಾರಿಗಳಾಗಿದ್ದೇವೆ. ಇಲ್ಲಿಗೆ ನಮ್ಮ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯುವ ಪ್ರೇರಣೆಯ ಮತ್ತು ಪ್ರೋತ್ಸಾಹದ ಭವ್ಯ, ಸುಂದರ ಮುಂಜಾನೆಯ ಸಮಯ ಕೊನೆಗೊಳ್ಳಲಿದೆ. ನಾವು ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಇಲ್ಲಿಗೆ ಬಂದು ನಮ್ಮೊಂದಿಗೆ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿದುದಕ್ಕಾಗಿ, ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ನಮ್ಮನ್ನು ಪ್ರೇರೇಪಣೆಯೊಂದಿಗೆ ಉತ್ತೇಜಿಸಿದುದಕ್ಕಾಗಿ ನಮ್ಮ ಹೃದಯಸ್ಪರ್ಶೀ ಕೃತಜ್ಞತೆಗಳು ಮತ್ತು ವಂದನೆಗಳನ್ನು ಸಲ್ಲಿಸುತ್ತೇವೆ. ಬಹಳ ಧನ್ಯವಾದಗಳು ಸರ್.
ಪ್ರಧಾನ ಮಂತ್ರಿ: ನೀವೆಲ್ಲರೂ, ಉದ್ಘೋಷಕರು, ದಯವಿಟ್ಟು ಇಲ್ಲಿಗೆ ಬನ್ನಿ. ಪ್ರತಿಯೊಬ್ಬರನ್ನೂ ಕರೆಯಿರಿ. ನಿಮ್ಮಲ್ಲಿ ಕೆಲವರು ಇಲ್ಲಿರಬಹುದು ಮತ್ತು ಕೆಲವರು ಅಲ್ಲಿ. ನೋಡಿ ಎಲ್ಲಕ್ಕಿಂತ ಮೊದಲು, ಇಂದು, ನಾನು ಈ ಜನರಿಗೆ ಅಭಿನಂದಿಸಲು ಬಯಸುತ್ತೇನೆ. ಇವರೆಲ್ಲರೂ ಪ್ರತಿಯೊಂದನ್ನೂ ಬಹಳ ಅದ್ಭುತವಾಗಿ ಮಾಡಿದ್ದಾರೆ. ಎಲ್ಲಿಯೂ ಆತ್ಮ ವಿಶ್ವಾಸದ ಕೊರತೆ ಇರಲಿಲ್ಲ. ನೀವೂ ಇದನ್ನು ನಿಕಟವಾಗಿ ಗಮನಿಸಿರಬಹುದು. ನಾನೂ ಗಮನಿಸಿದ್ದೇನೆ. ನೀವೆಲ್ಲರೂ ಒಂದೇ ಪ್ರತಿಭೆಯನ್ನು ಹೊಂದಿರುವಿರಿ. ಇಲ್ಲಿ ಕುಳಿತಿರುವ ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ. ಜೀವನದಲ್ಲಿ ನಾವು ಸಂತೋಷವನ್ನು ಅರಸುವವರೇ ಆಗಿದ್ದರೆ, ಆಗ ನಾವು ನಿರ್ದಿಷ್ಟ ಗುಣವನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂಬುದನ್ನು ನಾನು ಹೇಳಲು ಬಯಸುತ್ತೇನೆ. ನೀವು ಆ ಗುಣವನ್ನು ಬೆಳೆಸಿಕೊಂಡರೆ ಆಗ ನೀವು ಸದಾ ಸಂತೋಷದಿಂದ ಇರುತ್ತೀರಿ. ಮತ್ತು ನಿಮ್ಮದು ಸದ್ಗುಣಗಳನ್ನು ಮೆಚ್ಚುವಂತಹ ಸ್ವಭಾವವಾಗಿರುತ್ತದೆ. ನಾವು ಓರ್ವ ವ್ಯಕ್ತಿಯಲ್ಲಿ ಯಾವುದೇ ಕೆಲ ಗುಣಗಳನ್ನು ಅಥವಾ ಮೌಲ್ಯಗಳು, ಸದ್ಗುಣಗಳನ್ನು ಕಂಡರೆ ನಾವದನ್ನು ಮೆಚ್ಚಬೇಕು. ಇದು ಆ ವ್ಯಕ್ತಿಗೆ ಶಕ್ತಿಯನ್ನು ಕೊಡುತ್ತದೆ ಮಾತ್ರವಲ್ಲದೆ ನಮಗೂ ಆ ಶಕ್ತಿಯನ್ನು ನೀಡುತ್ತದೆ. ನಾವು ನೋಡಿದಲ್ಲೆಲ್ಲ ಉತ್ತಮ ಸಂಗತಿಗಳನ್ನು ಗಮನಿಸುವುದು ಆಗ ನಮ್ಮ ಹವ್ಯಾಸವಾಗುತ್ತದೆ. ನಾವದನ್ನು ಅಂಗೀಕರಿಸಲು ಪ್ರಯತ್ನಿಸಬೇಕು, ನಮ್ಮೊಳಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಅನ್ವೇಷಣೆ ನಡೆಸಿ ಅದರ ಜೊತೆ ಸಂಪರ್ಕ ಏರ್ಪಡಿಸಿಕೊಳ್ಳಬೇಕು. ನಾವು ನಮ್ಮೊಳಗೆ ಅಸೂಯೆ ಬೆಳೆಯಲು ಬಿಟ್ಟರೆ; ಉದಾಹರಣೆಗೆ “ಓ ಇಲ್ಲ! ಅವನು ನನಗಿಂತ ಮುಂದಿದ್ದಾನೆ; ಅವನ ಕುರ್ತಾ ನನ್ನದಕ್ಕಿಂತ ಉತ್ತಮವಾಗಿದೆ; ಅವನ ಕುಟುಂಬದಲ್ಲಿ ಬಹಳ ಉತ್ತಮವಾದ ವಾತಾವರಣವಿದೆ; ಅವನಿಗೆ ಯಾವುದೇ ಸಮಸ್ಯೆ ಇಲ್ಲ” ಎಂಬಿತ್ಯಾದಿ ರೀತಿಯ ಮನಸ್ಥಿತಿಯನ್ನು , ಧೋರಣೆಯನ್ನು ಹೊಂದಿದ್ದರೆ , ಆಗ ನಾವು ನಿಧಾನವಾಗಿ ನಮ್ಮನ್ನು ನಾವು ಸಣ್ಣವರಾಗಿಸುವ ಸ್ಥಿತಿಗೆ ಹೋಗುತ್ತೇವೆ. ನಾವೆಂದೂ ದೊಡ್ಡವರಾಗುವುದಿಲ್ಲ. ನಾವು ಇತರರ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಅರ್ಹತೆಯನ್ನು ಬೆಳೆಸಿಕೊಂಡರೆ, ಇತರರ ಶಕ್ತಿಯನ್ನು ಅರ್ಥ ಮಾಡಿಕೊಂಡರೆ, ಆಗ ಆ ಗುಣಲಕ್ಷಣಗಳನ್ನು ನಮ್ಮೊಳಗೆ ರೂಢಿಸಿಕೊಳುವ ಶಕ್ತಿ ನಮ್ಮೊಳಗೆ ಬೆಳೆಯಲು ಆರಂಭಗೊಳ್ಳುತ್ತದೆ. ಮತ್ತು ನಿಮ್ಮ ಜೀವನದಲ್ಲಿ ಸಫಲತೆಯನ್ನು ಸಾಧಿಸಲು, ನಿಮಗೆ ಜೀವನದಲ್ಲಿ ಅವಕಾಶ ಸಿಕ್ಕಿದಾಗೆಲ್ಲ ಪ್ರತಿಭಾವಂತರು, ಉತ್ತಮ ಮತ್ತು ಸಾಮರ್ಥ್ಯಶೀಲರ ಜೊತೆ ಒಲವು ಇಟ್ಟುಕೊಳ್ಳಿ. ಅವರನ್ನು ತಿಳಿಯಲು, ಅರ್ಥ ಮಾಡಿಕೊಳ್ಳಲು ಮತ್ತು ಅಂಗೀಕರಿಸಲು ಯಾರಿಗೇ ಆದರೂ ವಿಶಾಲ ಹೃದಯ ಬೇಕಾಗುತ್ತದೆ. ಅಲ್ಲಿ ಅಸೂಯೆಯ ಭಾವನೆ ಇರಬಾರದು, ನಮ್ಮ ಮನಸ್ಸಿನಲ್ಲೆಂದೂ ಪ್ರತೀಕಾರದ ಭಾವನೆ ಇರಬಾರದು. ಆಗ ನಾವು ಕೂಡಾ ಬಹಳ ಸಂತೋಷದಿಂದ ಜೀವನ ನಡೆಸಲು ಸಮರ್ಥರಾಗುತ್ತೇವೆ. ಈ ಒಂದು ನಿರೀಕ್ಷೆಯೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ!. ನಾನು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ ಮತ್ತು ನಾನೀಗ ಶಿಕ್ಷಣ ಇಲಾಖೆಯನ್ನೂ ಅಭಿನಂದಿಸುತ್ತೇನೆ. ನೀವೆಲ್ಲರೂ ಎಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ ಮತ್ತು ನನಗೆ ಎಲ್ಲ ಯುವಸಮೂಹವನ್ನು ಭೇಟಿಯಾಗುವ ಅವಕಾಶ ಒದಗಿ ಬಂದಿತು. ಕೆಲವರು ಮೋದೀ ಜೀ ಯಾಕೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪರೀಕ್ಷೆಯ ಬಗ್ಗೆ ಚರ್ಚಿಸುತ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇದು ಬರೇ ಪರೀಕ್ಷೆ ಮಾತ್ರವಲ್ಲವೇ. ಶಿಕ್ಷಕರು ನಿಮಗೆ ಬಹಳಷ್ಟನ್ನು ವಿವರಿಸಿರಬಹುದು. ಅದು ನಿಮಗೆ ಪ್ರಯೋಜನಕಾರಿಯಾಗುವುದೇ ಎಂಬ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಈ ಕಾರ್ಯಕ್ರಮದಿಂದ ನನಗೆ ಬಹಳ ಪ್ರಯೋಜನವಾಗಿದೆ. ನಾನು ನಿಮ್ಮೊಂದಿಗೆ ಇದ್ದಾಗ, ನಾನು 50 ವರ್ಷ ಕಿರಿಯನಾಗುತ್ತೇನೆ ಮತ್ತು ನಿಮ್ಮಿಂದ ಏನಾದರೂ ಕಲಿತುಕೊಂಡು ನಾನು ಬೆಳೆಯಲು ಪ್ರಯತ್ನಿಸುತ್ತೇನೆ. ಅದರರ್ಥ, ನಾನು ಅದೇ ಹಳೆಯ ತಲೆಮಾರಿಗೆ ಸೇರಿದವನು ಆದರೆ ನಾನು ಸದಾ ನಿಮ್ಮ ಆಶೋತ್ತರಗಳನ್ನು ಮತ್ತು ಆಶಯಗಳನ್ನು ಅರ್ಥ ಮಾಡಿಕೊಂಡು ಅವುಗಳೊಳಗೆ ನನ್ನ ಜೀವನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಮತ್ತು ಅದಕ್ಕಾಗಿ ಈ ಕಾರ್ಯಕ್ರಮ ನನಗೆ ಪ್ರಯೋಜನಕಾರಿ; ಇದು ನನ್ನ ಶಕ್ತಿಯನ್ನು ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಅದಕ್ಕಾಗಿ ನಾನು ಇಲ್ಲಿಗೆ ಬಂದು ನಿಮ್ಮೊಂದಿಗೆ ಸಂವಾದ ನಡೆಸುತ್ತೇನೆ. ನಿಮ್ಮ ಸಮಯವನ್ನು ನೀಡಿದುದಕ್ಕಾಗಿ, ಈ ಅನುಭವದೊಂದಿಗೆ ಬೆಳೆಯಲು ನನಗೆ ಅವಕಾಶ ನೀಡಿದುದಕ್ಕಾಗಿ, ಮತ್ತು ನನಗೆ ಒಂದಷ್ಟನ್ನು ಕಲಿಯಲು ಸಹಾಯ ಮಾಡಿದುದಕ್ಕಾಗಿ ನಾನು ನಿಮಗೆ ತುಂಬಾ ಆಭಾರಿಯಾಗಿದ್ದೇನೆ.
ಬಹಳ ಬಹಳ ಧನ್ಯವಾದಗಳು ನಿಮಗೆ.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ.ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1815488)
Visitor Counter : 1130
Read this release in:
Bengali
,
Gujarati
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Odia
,
Tamil
,
Telugu
,
Malayalam