ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ʻಸಮಾಜಿಕ ನ್ಯಾಯ ಪಾಕ್ಷಿಕʼ ಅಭಿಯಾನಕ್ಕಾಗಿ ಕರ್ನಾಟಕಕ್ಕೆ ಭೇಟಿ ನೀಡಲಿರುವ ಶ್ರೀ ರಾಜೀವ್ ಚಂದ್ರಶೇಖರ್
Posted On:
08 APR 2022 6:10PM by PIB Bengaluru
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರು ʻಸಾಮಾಜಿಕ ನ್ಯಾಯ ಪಾಕ್ಷಿಕʼ ಅಭಿಯಾನಕ್ಕೆ (ಸಾಮಾಜಿಕ್ ನ್ಯಾಯ್ ಪಖ್ವಾಡಾ) ತಮ್ಮ ಕೊಡುಗೆ ನೀಡಲು ಒಂದು ವಾರದ ಅವಧಿಗೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.
ಕೌಶಲ್ಯ ತರಬೇತಿ ಸಂಸ್ಥೆಗಳ ಜನರು, ಕಾರ್ಯಕರ್ತರು, ಕಾನೂನು ವೃತ್ತಿಪರರು, ನವೋದ್ಯಮಗಳು, ವಿದ್ಯಾರ್ಥಿಗಳು ಮತ್ತು ಮಹಿಳಾ ಉದ್ಯಮಿಗಳೊಂದಿಗೆ ಸಂವಾದ ನಡೆಸುವ ಮೂಲಕ ಒಂದು ವಾರದ ಅವಧಿಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಏಪ್ರಿಲ್ 10ರಂದು ರಾಮ ನವಮಿ ಹಬ್ಬದ ಸಂದರ್ಭದಲ್ಲಿ ಸರ್ವಜ್ಞನಗರದಲ್ಲಿರುವ ರಾಮ ಮಂದಿರಕ್ಕೆ ಸಚಿವರು ಭೇಟಿ ನೀಡಲಿದ್ದಾರೆ.
ಏಪ್ರಿಲ್ 11ರಂದು, ಸಚಿವರು ಐಬಿಎಂ ಕಚೇರಿ ಮತ್ತು ಹೊಸದಾಗಿ ಸ್ಥಾಪಿಸಲಾದ ಸೈಬರ್ ಭದ್ರತಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ. ʻಸೈಬರ್ ಕ್ಷೇತ್ರʼ (ಸೈಬರ್ ಸ್ಪೇಸ್) ಬಳಕೆದಾರರಿಗೆ ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಹಾಗು ಉತ್ತರದಾಯಿಯನ್ನಾಗಿ ಮಾಡುವ ಅಗತ್ಯದ ಬಗ್ಗೆ ರಾಜೀವ್ ಚಂದ್ರಶೇಖರ್ ಧ್ವನಿ ಎತ್ತಿದ್ದಾರೆ. ಉಕ್ರೇನ್-ರಷ್ಯಾ ಸಂಘರ್ಷದ ನಂತರ, ಸಾರ್ವಭೌಮ ರಾಷ್ಟ್ರಗಳು ಮತ್ತು ದೈತ್ಯ ಮಾಹಿತಿ ತಂತ್ರಜ್ಞಾನ ವೇದಿಕೆಗಳು (ಬಿಗ್ ಟೆಕ್) ಅಂತರ್ಜಾಲವನ್ನು ಆಯುಧವಾಗಿ ಬಳಸುತ್ತಿರುವ ಬಗ್ಗೆ ಅವರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹೈಕೋರ್ಟ್‌ನಲ್ಲಿ "ನ್ಯಾಯ ವಿತರಣೆಯಲ್ಲಿ ಇತ್ತೀಚಿನ ತಂತ್ರಜ್ಞಾನ" ಎಂಬ ವಿಷಯದ ಕುರಿತು ಬೆಂಗಳೂರಿನ ವಕೀಲರ ಸಂಘವನ್ನುದ್ದೇಶಿಸಿ ಸಚಿವರು ಮಾತನಾಡಲಿದ್ದಾರೆ. ಜೊತೆಗೆ ಏಪ್ರಿಲ್ 11ರಂದು ಮಧ್ಯಾಹ್ನ 1.30 ಕ್ಕೆ ʻಇ-ಕುಂದುಕೊರತೆ ಪೋರ್ಟಲ್ʼ ಅನ್ನು ಉದ್ಘಾಟಿಸಲಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, ಭಾರತದ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ. ಕಾನೂನಿನ ಮೇಲೆ ದೃಢವಾದ ನಂಬಿಕೆ ಹೊಂದಿರುವ ಅವರು ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಕುರಿತಾಗಿ ʻಪಿಐಎಲ್ʼ -ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದು ಪ್ರತಿಪಾದಿಸುವುದು, ಐಟಿ ಕಾಯ್ದೆಯ ಕಠಿಣ ಸೆಕ್ಷನ್ 66 ʻಎʼ ಅನ್ನು ಸಂವಿಧಾನದ 19ನೇ ವಿಧಿಯ ಉಲ್ಲಂಘನೆ ಎಂದು ಪ್ರತಿಪಾದಿಸುವುದು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಅವರು ಪಿಐಎಲ್ ಸಲ್ಲಿಸಿದ್ದಾರೆ.
ಮರುದಿನ (ಏಪ್ರಿಲ್ 12) ಸಚಿವರು ಕನಕಪುರ ರಸ್ತೆಯ ಗುಬ್ಬಲಾಳ ಕೆರೆ, ಕೆಂಪೇಗೌಡ ನಗರದ ಕೆಂಪಾಬುಧಿ ಕೆರೆ, ಮತ್ತು ಕೋರಮಂಗಲದ ಮೇಸ್ತ್ರಿಪಾಳ್ಯ ಕೆರೆಗಳಿಗೆ ಭೇಟಿ ನೀಡಲಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ಈ ಜಲಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನ ಹಾಗೂ ಅವುಗಳನ್ನು ಯಾವುದೇ ರೀತಿಯ ಅತಿಕ್ರಮಣಗಳಿಂದ ರಕ್ಷಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೆರೆಗಳಿಗೆ ಭೇಟಿ ನೀಡಿದ ನಂತರ ಅವರು ಬಿಟಿಎಂ ಲೇಔಟ್‌ನಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಏಪ್ರಿಲ್ 13 ರಂದು ಸಚಿವರು ಬೆಂಗಳೂರಿನಲ್ಲಿ ನವೋದ್ಯಮ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಜೊತೆ ಉಪಾಹಾರ ಕೂಟದೊಂದಿಗೆ ದುಂಡುಮೇಜಿನ ಅಧಿವೇಶನವನ್ನು ನಡೆಸಲಿದ್ದಾರೆ, ನಂತರ ಬೆಂಗಳೂರು ಉತ್ತರ ಕ್ಷೇತ್ರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಲಿದ್ದಾರೆ.
ಏಪ್ರಿಲ್ 14ರಂದು ಡಾ. ಬಿ. ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿರುವ ಸಚಿವರು ಶಾಂತಿನಗರ ಕ್ಷೇತ್ರದ ಪೌರಕಾರ್ಮಿಕರೊಂದಿಗೆ ಭೋಜನ ಸವಿಯಲಿದ್ದಾರೆ.
ಇದರ ನಂತರ ಅವರು ಯಶವಂತಪುರದ ʻರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆʼಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ವಿದ್ಯಾರ್ಥಿಗಳು ಮತ್ತು ಮಹಿಳಾ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ಸಚಿವರು ಸತತ ಸಂವಾದ ನಡೆಸುತ್ತಿದ್ದು, ಉದ್ಯಮಿಗಳು ತಮ್ಮ ವ್ಯವಹಾರ ವೃದ್ಧಿಗೆ ಡಿಜಿಟಲ್ ವೇದಿಕೆಯ ಶಕ್ತಿಯನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ರಾಜೀವ್ ಚಂದ್ರಶೇಖರ್ ಸ್ವತಃ ಯಶಸ್ವಿ ಉದ್ಯಮಿಯಾಗಿದ್ದು, 1990ರ ದಶಕದಲ್ಲಿ ಅವರು ಭಾರತದಲ್ಲಿ ಸೆಲ್ಯುಲಾರ್ ವಲಯವನ್ನು ನಿರ್ಮಿಸಿದರು. ಸಚಿವರೊಂದಿಗಿನ ಸಂವಾದವು ಇಂತಹ ಅವಕಾಶಗಳಿಗಾಗಿ ಎದುರು ನೋಡುತ್ತಿರುವ ಎಲ್ಲಾ ಕೌಶಲ್ಯ ತರಬೇತಿದಾರರಿಗೆ ಒಂದು ದೊಡ್ಡ ಪ್ರೇರಣೆಯಾಗಲಿದೆ.
***
(Release ID: 1815080)
Visitor Counter : 137