ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅತ್ಯಾಧುನಿಕ ಸೈಬರ್ ಭದ್ರತಾ ಕೇಂದ್ರ

Posted On: 06 APR 2022 4:36PM by PIB Bengaluru

ಸಂವಿಧಾನದ ಏಳನೇ ಪರಿಚ್ಛೇದದಡಿ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದೆ. ಸೈಬರ್ ಅಪರಾಧ ಬೆದರಿಕೆಗಳನ್ನು ಎದುರಿಸಲು ಸೂಕ್ತ ಪ್ರಮಾಣದಲ್ಲಿ ಮೂಲ ಸೌಲಭ್ಯಗಳು, ಅತ್ಯಾಧುನಿಕ ತಂತ್ರಜ್ಞಾನದ ಗ್ಯಾಜೆಟ್ ಗಳು, ಮಾನವ ಶಕ್ತಿ ಮತ್ತು ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾಥಮಿಕ ಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರಗಳ ಉಪಕ್ರಮಗಳಿಗೆ ಕೇಂದ್ರ ಸರ್ಕಾರ ಪೂರಕವಾಗಿ ಸೂಕ್ತ ಸಲಹೆಗಳು ಮತ್ತು ಕಾನೂನು ಜಾರಿ ಸಂಸ್ಥೆ - ಎಲ್.ಇ.ಎಗೆ ಸಂಬಂಧಿಸಿದ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಿದೆ.  

ಸೈಬರ್ ಅಪರಾಧಗಳನ್ನು ಸಮಗ್ರ ಮತ್ತು ಸಂಘಟಿತವಾಗಿ ಎದುರಿಸುವ ಕಾರ್ಯವಿಧಾನವನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ.  

     i.         ದೇಶದಲ್ಲಿನ ಎಲ್ಲಾ ಸೈಬರ್ ಅಪರಾಧಗಳನ್ನು ಸಮನ್ವಯತೆ ಮತ್ತು ಸಮಗ್ರವಾಗಿ ಹತ್ತಿಕ್ಕಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ “ಭಾರತೀಯ ಸೈಬರ್ ಅಪರಾಧ ಕೇಂದ್ರ” [14ಸಿ] ಸ್ಥಾಪಿಸಿದೆ.

    ii.         ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೊಲೀಸರಿಗೆ ತನಿಖೆ ನಡೆಸಲು ಆರಂಭಿಕ ಹಂತದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ನೆರವು ನೀಡಲು 14ಸಿ ಭಾಗವಾಗಿ ನವದೆಹಲಿಯ ದ್ವಾರಕಾದ ಸೈಪಾಡ್ ನಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.  

  iii.         ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ [14ಸಿ]ದ “ಸೈಟ್ರೈನ್” ಹೆಸರಿನಡಿ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಬೃಹತ್ ಪ್ರಮಾಣದಲ್ಲಿ ಮುಕ್ತ ಆನ್ ಲೈನ್ ಕೋರ್ಸ್ ಗಳ [ಎಂ.ಒ.ಒ.ಸಿ] ವೇದಿಕೆಯನ್ನು ಸ್ಥಾಪಿಸಲಾಗಿದೆ. ಸೈಬರ್ ಅಪರಾಧ ತನಿಖೆ, ವಿಧಿ ವಿಜ್ಞಾನ ಪ್ರಯೋಗಾಲಯ, ಮತ್ತಿತರ ಕಾನೂನು ಕ್ರಮಗಳನ್ನು ಜರುಗಿಸಲು ಪೊಲೀಸ್ ಅಧಿಕಾರಿಗಳು/ ನ್ಯಾಯಾಂಗದ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಈ ವ್ಯವಸ್ಥೆಯಡಿ ಅಡಕಗೊಳಿಸಲಾಗಿದೆ. ಈವರೆಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ 12,500 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸರ್ಟಿಫಿಕೇಶನ್ ಕೋರ್ಸ್ ಗಳಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಮತ್ತು ಈ ಪೋರ್ಟಲ್ ಮೂಲಕ 3,050 ಮಂದಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ.

 iv.         14ಸಿ ಭಾಗವಾಗಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಅನ್ನು ಆರಂಭಿಸಲಾಗಿದೆ. ಸಾರ್ವಜನಿಕರಿಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಸೈಬರ್ ಅಪರಾಧ ಒಳಗೊಂಡಂತೆ ಎಲ್ಲ ಪ್ರಕರಣಗಳನ್ನು ವರದಿ ಮಾಡಿಕೊಳ್ಳಲು ಇದರಡಿ ಅವಕಾಶ ಕಲ್ಪಿಸಲಾಗಿದೆ.

   v.         ಈ ಪೋರ್ಟಲ್ ನಲ್ಲಿ ವರದಿಯಾಗುವ ಸೈಬರ್ ಅಪರಾಧ ಪ್ರಕರಣಗಳು, ಎಫ್.ಐ.ಆರ್.ಗಳಿಗೆ ಸಂಬಂಧಿಸಿದ ವಿಚಾರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಜಾರಿ ಸಂಸ್ಥೆಗಳು [ಎಲ್.ಇ.ಎಗಳು] ಕೈಗೊಂಡಿರುವ ಕ್ರಮಗಳ ಬಗ್ಗೆ ಲಭ್ಯವಿರುವ ಕಾನೂನಿನ ಪ್ರಕಾರ ಈ ವ್ಯವಸ್ಥೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ.  

 vi.         ನಾಗರಿಕರು ಮತ್ತು ಆಡಳಿತ ವ್ಯವಸ್ಥೆಯ ಹಣಕಾಸು ಸೈಬರ್ ವಂಚನೆ ಪ್ರಕರಣಗಳು ವರದಿಯಾದಲ್ಲಿ 14ಸಿ ಕೂಡಲೇ ಹಣಕಾಸು ವಂಚನೆಯಾಗಿರುವ ಬಗ್ಗೆ ವರದಿ ಮಾಡಲಿದೆ ಮತ್ತು ವಂಚಕರಿಂದ ಹಣ ಪೋಲಾಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಿದೆ.

vii.         ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಲ್.ಇ.ಎಗಳ ನಡುವೆ ಬಹುಹಂತದ ನ್ಯಾಯ ವ್ಯವಸ್ಥೆಯಲ್ಲಿ ಸಮನ್ವಯತೆ ಹೊಂದಲು  14ಸಿ ಅಡಿ ಸೈಬರ್ ಅಪರಾಧ ಹಾಟ್ ಸ್ಪಾಟ್ ಗಳ ಆಧಾರದ ಮೇಲೆ ಏಳು ಜಂಟಿ ಸೈಬರ್ ಅಪರಾಧ ಸಮನ್ವಯ ತಂಡಗಳನ್ನು ರಚಿಸಲಾಗಿದೆ.

viii.         “ರಾಜ್ಯ ಸರ್ಕಾರಗಳಿಗೆ ಪೊಲೀಸ್ ವ್ಯವಸ್ಥೆ ಆಧುನೀಕರಣಗೊಳಿಸುವ” ಕಾರ್ಯಕ್ರಮದಡಿ ರಾಜ್ಯಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು, ತರಬೇತಿ ಗ್ಯಾಜೆಟ್ ಗಳನ್ನ ಪಡೆಯಲು, ಅತ್ಯಾಧುನಿಕ ಸಂಪರ್ಕ/ಫೊರೆನ್ಸಿಕ್ ಪರಿಕರಗಳು, ಸೈಬರ್ ಪೊಲೀಸ್ ಪರಿಕರಗಳು ಪಡೆಯಲು ಹಾಗೂ ಮತ್ತಿತರ ವಲಯಗಳಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೆರವು ಒದಗಿಸುತ್ತಿದೆ.  ಸೈಬರ್ ಅಪರಾಧಗಳನ್ನು ಎದುರಿಸಲು ಅಗತ್ಯವಾಗಿರುವ ಮತ್ತು ಆದ್ಯತಾ ಕಾರ್ಯತಂತ್ರಗಳಿಗಾಗಿ ರಾಜ್ಯ ಸರ್ಕಾರಗಳು ರಾಜ್ಯ ಕ್ರಿಯಾ ಯೋಜನೆಗಳ[ಎಸ್.ಎ.ಪಿಗಳು]ನ್ನು ರಚಿಸಬೇಕಾಗುತ್ತದೆ. (2018-19, 2019-20 ಮತ್ತು 2020-21) ಹಿಂದಿನ ಮೂರು ವರ್ಷಗಳಿಗೆ ಸಂಬಂಧಿಸಿದಂತೆ 1650.20 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಸಹಾಯಧನದ ರೂಪದಲ್ಲಿ ಬಿಡುಗಡೆ ಮಾಡಿದೆ.

 ix.         ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧ ನಿಯಂತ್ರಿಸುವ ಉದ್ದೇಶದಿಂದ ಸೈಬರ್ ಹಾಗೂ ತರಬೇತಿ ಪ್ರಯೋಗಾಲಯ ಸ್ಥಾಪಿಸಲು, ಕಾನೂನು ಜಾರಿ ಸಂಸ್ಥೆಗಳ [ಎಲ್.ಇ.ಎಗಳಿಗೆ] ಸಾಮರ್ಥ್ಯ ವೃದ್ಧಿ ಮತ್ತು ಕಿರಿಯ ಸೈಬರ್ ಸಮಾಲೋಚಕರನ್ನು ನಿಯೋಜಿಸಲು, ಸರ್ಕಾರಿ ವಕೀಲರು ಮತ್ತು ನ್ಯಾಯಾಂಗ ಆಧಿಕಾರಿಗಳನ್ನು ನೇಮಿಸಿಕೊಳ್ಳಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ 99.89 ಕೋಟಿ ರೂಪಾಯಿ ಆರ್ಥಿಕ ನೆರವು ಒದಗಿಸಿದೆ. 2022 ರ ಮಾರ್ಚ್ ವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಿಸಿಪಿಡಬ್ಲ್ಯೂ ಅಡಿ ನೆರವು ನೀಡಲಾಗುತ್ತಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ನೆರವು ನೀಡುತ್ತಿದ್ದು, ಇದಕ್ಕಾಗಿ ಬಳಕೆ ಪ್ರಮಾಣ ಪತ್ರವನ್ನು ಒದಗಿಸಬೇಕಾಗುತ್ತದೆ. 28 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಬರ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚತ್ತೀಸ್ ಘಡ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಸಿಕ್ಕಿಂ, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ, ಮೇಘಾಲಯ, ನಾಗಾಲ್ಯಾಂಡ್, ದಾದ್ರಾ ಮತ್ತು ನಾಗರ್ ಹವೇಲಿ, ದಾಮನ್ ಹಾಗೂ ದಯು, ಪಂಜಾಬ್, ಅಸ್ಸಾಂ, ತ್ರಿಪುರ, ಪುದುಚೇರಿ, ಜಮ್ಮು ಮತ್ತು ಕಾಶ್ಮೀರ, ಚಂಡಿಘಡ, ರಾಜಸ್ಥಾನ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಕೇಂದ್ರಗಳಿವೆ.  

   x.         ಉತ್ತಮ ರೀತಿಯಲ್ಲಿ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಕಾನೂನು ಜಾರಿ ಸಂಸ್ಥೆ – ಎಲ್ಇಎ ಸಿಬ್ಬಂದಿ, ಸರ್ಕಾರಿ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳು ತರಬೇತಿ ಪಠ್ಯವನ್ನು ಸಿದ್ಧಪಡಿಸಿದ್ದಾರೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮನವಿ ಮಾಡಲಾಗಿದೆ. ಸಿಸಿಪಿಡಬ್ಲ್ಯೂಸಿ ಯೋಜನೆಯಡಿ 19,900 ಕ್ಕೂ ಹೆಚ್ಚು ಎಲ್ಇಎ ಸಿಬ್ಬಂದಿ, ಸರ್ಕಾರಿ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ವಿಧಿ ವಿಜ್ಞಾನ, ತನಿಖೆ, ಸೈಬರ್ ಅಪರಾಧ ಜಾಗೃತಿ ವಿಷಯದಲ್ಲಿ ತರಬೇತಿ ನೀಡಲಾಗುತ್ತಿದೆ.

 xi.         ಭಾರತೀಯ ಗಣಕಯಂತ್ರ ತುರ್ತು ಪ್ರತಿಕ್ರಿಯಾ ತಂಡ [ಸಿ.ಇ.ಆರ್.ಟಿ-ಇನ್] ರಚನೆ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಸೈಬರ್ ವಿಧಿ ವಿಜ್ಞಾನ ಪ್ರಯೋಗಾಲಯದ 2000 ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 79 ರಡಿ ನೀಡಲಾದ ಅಧಿಕಾರ ಬಳಕೆಯಲ್ಲಿ ವಿದ್ಯುನ್ಮಾನ ವಲಯದ ದತ್ತಾಂಶ ಸಂಗ್ರಹಣೆ ಮತ್ತು ಮೊಬೈಲ್ ಸಾಧನಗಳಿಂದ ಹೊರ ತೆಗೆಯಲಾದ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುವವರೆಂದು ಈ ತಂಡವನ್ನು ಸೂಚಿಸಲಾಗಿದೆ ಮತ್ತು ಈ ಕುರಿತ ವಿಶ್ಲೇಷಣೆಗಳನ್ನು ಕೈಗೊಳ್ಳುವ ಸಾಧನಗಳು ಇದರಲ್ಲಿವೆ.  

xii.         ಸೈಬರ್ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಸೈಬರ್ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಎಲ್ಇಎಗಳನ್ನು ಬೆಂಬಲಿಸುವ ವಿಧಿ ವಿಜ್ಞಾನ ವಿಶ್ಲೇಷಕರು ಬಳಸಿಕೊಳ್ಳಬಹುದಾಗಿದೆ.  ಸಿ.ಇ.ಆರ್.ಟಿ. ಕಾರ್ಯಾಗಾರಗಳ ಮೂಲಕ ಎಲ್ಇಎಗಳಿಗೆ ತರಬೇತಿ ನೀಡಲಾಗುತ್ತಿದೆ.

ರಾಜ್ಯ ಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಕುಮಾರ್ ಮಿಶ್ರಾ ಅವರು ಈ ಮಾಹಿತಿ ನೀಡಿದ್ದಾರೆ.

***


(Release ID: 1814278) Visitor Counter : 439


Read this release in: English , Urdu , Bengali