ಪ್ರಧಾನ ಮಂತ್ರಿಯವರ ಕಛೇರಿ

5ನೇ ಬಿಮ್ ಸ್ಟೆಕ್ ಶೃಂಗಸಭೆ

Posted On: 30 MAR 2022 12:01PM by PIB Bengaluru

ಶ್ರೀಲಂಕಾ ಅಧ್ಯಕ್ಷತೆಯಲ್ಲಿಂದು ಆಯೋಜಿಸಲಾಗಿದ್ದ 5ನೇ ಬಿಮ್ ಸ್ಟೆಕ್ ಶೃಂಗಸಭೆ (ಬಹು ವಲಯದ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉಪಕ್ರಮ-BIMSTEC)ಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಈ ಬಾರಿ ಶ್ರೀಲಂಕಾ ರಾಷ್ಟ್ರವು ಬಿಮ್ ಸ್ಟೆಕ್ ನ ಪ್ರಾಯೋಜಕತ್ವ ವಹಿಸಿದೆ.
5 ನೇ ಬಿಮ್‌ಸ್ಟೆಕ್ ಶೃಂಗಸಭೆಗೆ ಮುನ್ನಾ, ಕೊಲಂಬೊದಲ್ಲಿ ಮಾರ್ಚ್ 28 ಮತ್ತು 29ರಂದು ಹಿರಿಯ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರ ಮಟ್ಟದಲ್ಲಿ ಪೂರ್ವಸಿದ್ಧತಾ ಸಭೆಗಳನ್ನು ಹೈಬ್ರಿಡ್ ಮಾದರಿಯಲ್ಲಿ  ನಡೆಸಲಾಯಿತು.


"ಬಿಮ್ ಸ್ಟೆಕ್ ಪ್ರದೇಶಗಳ ಚೇತರಿಕೆಯ ಹಾದಿ, ಸಮೃದ್ಧ ಆರ್ಥಿಕತೆ, ಆರೋಗ್ಯಕರ ಜನರು" ಎಂಬುದು ಈ ಬಾರಿಯ ಶೃಂಗಸಭೆಯ ಘೋಷವಾಕ್ಯವಾಗಿದೆ. ಕೋವಿಡ್ ನಂತರದ ಆರ್ಥಿಕ ಮತ್ತು ಅಭಿವೃದ್ಧಿ ಪರಿಣಾಮಗಳನ್ನು ಎದುರಿಸುವ ಸದಸ್ಯ ರಾಷ್ಟ್ರಗಳ ಕಾರ್ಯಕ್ರಮಗಳನ್ನು ಬೆಂಬಲಿಸುವ ಸಹಕಾರ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಚರ್ಚೆ, ಸಂವಾದ ಮತ್ತು ಸಮಾಲೋಚನೆಗಳಿಗೆ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಒತ್ತು ನೀಡಲಾಗಿದೆ. ಬಿಮ್ ಸ್ಟೆಕ್ ಸನ್ನದು ಅಂಗೀಕರಿಸಿ, ಸಹಿ ಹಾಕಿರುವುದು ಈ ಶೃಂಗಸಭೆಯ ಪ್ರಮುಖಾಂಶವಾಗಿದೆ. ಬಂಗಾಳ ಕೊಲ್ಲಿ ಸಮುದ್ರವನ್ನು ಅವಲಂಬಿಸಿರುವ ಸದಸ್ಯ ರಾಷ್ಟ್ರಗಳು ಒಳಗೊಂಡಿರುವ ಗುಂಪನ್ನು ಸಂಘಟನೆಯಾಗಿ ಔಪಚಾರಿಕಗೊಳಿಸಲಾಗಿದೆ.
ಈ ಶೃಂಗಸಭೆಯು ಬಿಮ್ ಸ್ಟೆಕ್ ಸಂಪರ್ಕ ಕಾರ್ಯಸೂಚಿಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸುತ್ತಿರುವುದನ್ನು ಮನಗಂಡಿತು. ಶೃಂಗಸಭೆಯ ನಾಯಕರು 'ಸಾರಿಗೆ ಸಂಪರ್ಕಕ್ಕಾಗಿ ಮಾಸ್ಟರ್ ಪ್ಲಾನ್' ಅಳವಡಿಸಿಕೊಳ್ಳುವುದರೊಂದಿಗೆ ಈ ಪ್ರದೇಶದಲ್ಲಿ ಭವಿಷ್ಯದ ಸಂಪರ್ಕ ಸಂಬಂಧಿತ ಚಟುವಟಿಕೆಗಳಿಗೆ ಸ್ಪಷ್ಟ ಮತ್ತು ನಿಖರ ಮಾರ್ಗಸೂಚಿ ರೂಪಿಸಿದರು.
ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ಬಿಮ್ ಸ್ಟೆಕ್ ವಲಯದಲ್ಲಿ ಪ್ರಾದೇಶಿಕ ಸಂಪರ್ಕ, ಸಹಕಾರ ಮತ್ತು ಭದ್ರತೆ ಹೆಚ್ಚಳಜ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಆಗಬೇಕಿರುವ ಕಾರ್ಯಗಳ ಕುರಿತು ಅವರು ಹಲವಾರು ಸಲಹೆಗಳನ್ನು ನೀಡಿದರು. ಬಂಗಾಳ ಕೊಲ್ಲಿಯನ್ನು ಸಂಪರ್ಕ, ಸಮೃದ್ಧಿ ಮತ್ತು ಭದ್ರತೆಯ ಸೇತುವೆಯನ್ನಾಗಿ ಪರಿವರ್ತಿಸಲು ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳು  ಶ್ರಮಿಸಬೇಕು ಎಂದು ಪ್ರಧಾನಿ ಅವರು ಸಹನಾಯಕರಿಗೆ ಕರೆ ನೀಡಿದರು.
ಸಹಕಾರ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಪ್ರತಿನಿಧಿಸುವ ಪ್ರಮುಖ 3 ಬಿಮ್ ಸ್ಟೆಕ್ ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಇತರ ನಾಯಕರೊಂದಿಗೆ ಪ್ರಧಾನ ಮಂತ್ರಿ ಮೋದಿ ಅವರು  ಸಾಕ್ಷಿಯಾದರು. ಆ ಮೂರು ಒಪ್ಪಂದಗಳೆಂದರೆ, 1. ಅಪರಾಧ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಕುರಿತ ಬಿಮ್ ಸ್ಟೆಕ್ ಒಪ್ಪಂದ. 2. ರಾಜತಾಂತ್ರಿಕ ತರಬೇತಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಕುರಿತ ಬಿಮ್ ಸ್ಟೆಕ್ ಒಪ್ಪಂದದ ತಿಳುವಳಿಕೆ ಪತ್ರ ಮತ್ತು 3. ಬಿಮ್ ಸ್ಟೆಕ್ ತಂತ್ರಜ್ಞಾನ ವರ್ಗಾವಣೆ ಸೌಲಭ್ಯ ಸ್ಥಾಪನೆಯ ಕುರಿತಾದ ಸಂಘಟನೆಯ ತಿಳಿವಳಿಕೆ ಪತ್ರ.

***



(Release ID: 1811522) Visitor Counter : 355