ಜಲ ಶಕ್ತಿ ಸಚಿವಾಲಯ

3 ನೇ ರಾಷ್ಟ್ರೀಯ ಜಲ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ, ಜಲಶಕ್ತಿ ಅಭಿಯಾನ: ಮಳೆ ಹಿಡಿಯಿರಿ ಅಭಿಯಾನ 2022ಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ


ಜಲ ಆಂದೋಲನವನ್ನು ಜನ ಆಂದೋಲನವಾಗಿ ಪರಿವರ್ತಿಸಲು, ಜಲಶಕ್ತಿ ಅಭಿಯಾನ ಮತ್ತು ಜಲ ಜೀವನ ಅಭಿಯಾನವನ್ನು 2019 ರಲ್ಲಿ ಪ್ರಾರಂಭಿಸಲಾಯಿತು: ಶ್ರೀ ರಾಮನಾಥ್ ಕೋವಿಂದ್.

"ಈ ಪ್ರಶಸ್ತಿಗಳು ಭಾರತದ ಜನರ ಮನಸ್ಸಿನಲ್ಲಿ ಜಲ ಪ್ರಜ್ಞೆಯನ್ನು ಉಂಟು ಮಾಡುತ್ತವೆ ಮತ್ತು ನಡೆವಳಿಕೆಯಲ್ಲಿ ಬದಲಾವಣೆ ತರಲು ನೆರವಾಗುತ್ತವೆ ಎಂದು ನಾನು ಬಲವಾಗಿ ನಂಬುತ್ತೇನೆ".

ರಾಷ್ಟ್ರೀಯ ಜಲ ಪ್ರಶಸ್ತಿಗಳು ಜಲಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಬಾಧ್ಯಸ್ಥರು ಮತ್ತು ಜನರನ್ನು ಉತ್ತೇಜಿಸುತ್ತವೆ: ಶ್ರೀ ಗಜೇಂದ್ರ ಸಿಂಗ್ ಶೇಖಾವತ್

ಬೃಹತ್ ನೋಯ್ಡಾದಲ್ಲಿ ನವೆಂಬರ್ 1 ರಿಂದ 5 ರವರೆಗೆ ಆಯೋಜಿಸಲಾಗುವ ಭಾರತದ ಜಲ ಸಪ್ತಾಹ - 2022 ರ ಪ್ರಥಮ ಮಾಹಿತಿ ಕರಪತ್ರದ ಬಿಡುಗಡೆ 

Posted On: 29 MAR 2022 4:58PM by PIB Bengaluru

ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿಂದು ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವ ಇಲಾಖೆ ಸ್ಥಾಪಿಸಿರುವ 3 ನೇ ರಾಷ್ಟ್ರೀಯ ಜಲ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ, ಜಲಶಕ್ತಿ ಅಭಿಯಾನ: ಮಳೆ ನೀರು ಹಿಡಿಯಿರಿ (ಕ್ಯಾಚ್ ದಿ ರೈನ್) ಅಭಿಯಾನ 2022ಕ್ಕೆ ಚಾಲನೆ ನೀಡಿದರು. 
ಬೃಹತ್ ನೋಯ್ಡಾದ ಭಾರತೀಯ ಎಕ್ಸ್ಪೋ ಕೇಂದ್ರದಲ್ಲಿ 2022ರ ನವೆಂಬರ್ 1 ರಿಂದ 5 ರವರೆಗೆ ಆಯೋಜಿಸಲು ಉದ್ದೇಶಿಸಲಾಗಿರುವ ಭಾರತದ ಅಂತಾರಾಷ್ಟ್ರೀಯ ಜಲಸಂಪನ್ಮೂಲ ಕಾರ್ಯಕ್ರಮವಾದ ಭಾರತ ಜಲ ಸಪ್ತಾಹ -2022 ರ 7 ನೇ ಆವೃತ್ತಿಯ ಪ್ರಥಮ ಮಾಹಿತಿ ಕರಪತ್ರವನ್ನು ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು, ಜಲಶಕ್ತಿ ಖಾತೆ ರಾಜ್ಯ ಸಚಿವರುಗಳಾದ ಶ್ರೀ ಬಿಶ್ವೇಶ್ವರ್ ಟುಡು ಮತ್ತು ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್  ಮತ್ತು ಎರಡೂ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಇಂದು ಬಿಡುಗಡೆ ಮಾಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು, ಜಲವೇ ಜೀವನ (ಜಲ್  ಹಿ ಜೀವನ್ ಹೈ) ಎಂದು ಹೇಳುವುದು ಸರಿ ಮತ್ತು ಪ್ರಕೃತಿಯು ನಮಗೆ ನದಿಗಳು ಮುಂತಾದ ಜಲಸಂಪನ್ಮೂಲಗಳನ್ನು ನೀಡಿದೆ ಎಂದು ಹೇಳಿದರು. ಆದರೆ, ದುರದೃಷ್ಟವಶಾತ್ ನಾವು ನಮ್ಮನ್ನು ಪೋಷಿಸುವ ಪ್ರಕೃತಿಯಿಂದ ಈಗ ಬೇರ್ಪಟ್ಟಿದ್ದೇವೆ ಎಂದು ಭಾವಿಸುವಂತಾಗಿದೆ. ನಗರೀಕರಣದಿಂದಾಗಿ ಸಾಂಪ್ರದಾಯಿಕ ಜಲ ಸಂರಕ್ಷಣಾ ಕಾಯಗಳು ಕಣ್ಮರೆಯಾಗುತ್ತಿದ್ದು, ನೀರಿನ ನಿರ್ವಹಣೆಯ ಸವಾಲಿನ ಬಗ್ಗೆ ಇಂದು ವೈಜ್ಞಾನಿಕವಾಗಿ ಮಾತನಾಡುವಂತಾಗಿದೆ. ಭಾರತವು ಸಾಂಪ್ರದಾಯಿಕವಾಗಿ ತನ್ನ ನದಿಗಳನ್ನು ಗೌರವಿಸುತ್ತದೆ ಮತ್ತು ಜಲ ಭದ್ರತೆಯನ್ನು ಸಾಧಿಸುವುದು ಬಹಳ ಮುಖ್ಯ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. 
ಜೀವನ, ಜೀವನೋಪಾಯ ಮತ್ತು ಅಭಿವೃದ್ಧಿಗೆ ನೀರಿನ ಮಹತ್ವವನ್ನು ನಾವೆಲ್ಲರೂ ಗುರುತಿಸಿದ್ದೇವೆ ಎಂದು ರಾಷ್ಟ್ರಪತಿ ಹೇಳಿದರು. ನೀರಿನ ಅಭಾವ, ಪ್ರವಾಹ ಮತ್ತು ಬರಗಳು ಕಡುಬಡವರ ಮತ್ತು ಅತ್ಯಂತ ದುರ್ಬಲರ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಜಲಸಂಪನ್ಮೂಲಗಳ ಲಭ್ಯತೆಯು ಸೀಮಿತವಾಗಿದೆ ಮತ್ತು ಮಳೆಯ ಮೇಲೆ ಅವಲಂಬಿತವಾಗಿದೆ. ಜಲಚಕ್ರದಲ್ಲಿನ ಬದಲಾವಣೆಗಳ ರೂಪದಲ್ಲಿ ವ್ಯಕ್ತವಾಗುತ್ತಿರುವ ಹವಾಮಾನ ಬದಲಾವಣೆಯು ನಮ್ಮ ನೀರಿನ ಭದ್ರತೆಗೆ ಬೆದರಿಕೆ ಹಾಕುತ್ತದೆ. ಸುಮಾರು 3-4 ದಶಕಗಳ ಹಿಂದೆ, ನೀರನ್ನು ಖರೀದಿಸುವ ಅಗತ್ಯವಿರಲಿಲ್ಲ. ಇಂದು, ನಾವು ಕೆಲವು ಭಾಗಗಳಲ್ಲಿ ನೀರಿಗಾಗಿ ಗಲಭೆಗಳಾಗುತ್ತಿರುವ ಬಗ್ಗೆ ಕೇಳುತ್ತೇವೆ. ಭಾರತದಲ್ಲಿ ವಿಶ್ವದ ಜನಸಂಖ್ಯೆಯ ಸುಮಾರು ಶೇ.18ರಷ್ಟಿದ್ದರೂ, ವಿಶ್ವದ ಶುದ್ಧ ನೀರಿನ ಸಂಪನ್ಮೂಲದ ಕೇವಲ ಶೇ.4 ರಷ್ಟನ್ನು ಮಾತ್ರ ಭಾರತ ಹೊಂದಿರುವುದರಿಂದ ಪರಿಸ್ಥಿತಿ ವಿಶೇಷ ಸವಾಲಿನದ್ದಾಗಿದೆ. ಮುಂದಿನ ಯುದ್ಧವು ನೀರಿಗಾಗಿ ನಡೆಯಲಿದೆ ಎಂದು ಸಹ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ, "ನಾವೆಲ್ಲರೂ ಜಾಗರೂಕರಾಗಿರಬೇಕು ಮತ್ತು ಸಿದ್ಧರಾಗಿರಬೇಕು ಎಂದರು. ಜಲಶಕ್ತಿ ಸಚಿವಾಲಯವು ನೀರಿನ ವಲಯದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ" ಎಂದರು.
ಮೇ 2019 ರಲ್ಲಿ, ಹಿಂದಿನ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ವಿಲೀನಗೊಳಿಸಿದ ನಂತರ ಜಲಶಕ್ತಿ ಸಚಿವಾಲಯವನ್ನು ರಚಿಸಲಾಯಿತು. ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಇದನ್ನು ರೂಪಿಸಲಾಯಿತು. ಹವಾಮಾನ ವೈಪರೀತ್ಯವನ್ನು ತಗ್ಗಿಸಲು, ನದಿ ಪುನಶ್ಚೇತನ, ನೀರಿನ ಭದ್ರತೆಗೆ ಆದ್ಯತೆ ನೀಡುವುದು, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಮತ್ತು ಅಣೆಕಟ್ಟುಗಳ ಪುನಶ್ಚೇತನ ಇತ್ಯಾದಿಗಳನ್ನು ಒಳಗೊಂಡಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.
ಜಲ ಆಂದೋಲನವನ್ನು ಜನ ಆಂದೋಲನವಾಗಿ ಪರಿವರ್ತಿಸಲು, ಜಲಶಕ್ತಿ ಅಭಿಯಾನ ಮತ್ತು ಜಲ ಜೀವನ ಅಭಿಯಾನವನ್ನು 2019ರಲ್ಲಿ ಪ್ರಾರಂಭಿಸಲಾಯಿತು, ಇದರಲ್ಲಿ ಹಲವಾರು ಮರುಪೂರಣ ವಿನ್ಯಾಸಗಳನ್ನು ರಚಿಸಲಾಯಿತು ಮತ್ತು ಕೋಟ್ಯಂತರ ಜನರು ಇದರಲ್ಲಿ ಸೇರಿಕೊಂಡರು. 2022ರ ಮಾರ್ಚ್ 22 ರಂದು, ಭಾರತದ ಪ್ರಧಾನಮಂತ್ರಿಯವರು "ಮಳೆಯ ನೀರು ಬಿದ್ದಾಗ, ಅದು ಎಲ್ಲಿ ಬೀಳುತ್ತದೋ, ಅಲ್ಲಿ ಅದನ್ನು ಹಿಡಿಯಿರಿ (ಕ್ಯಾಚ್ ದಿ ರೈನ್, ವೇರ್ ಇಟ್ ಫಾಲ್ಸ್ ವೆನ್ ಇಟ್ ಫಾಲ್ಸ್") ಅಭಿಯಾನವನ್ನು ಪ್ರಾರಂಭಿಸಿದರು. ಜಲಶಕ್ತಿ ಅಭಿಯಾನ: ಮಳೆ ನೀರು ಹಿಡಿಯಿರಿ 2022ನ್ನು 2022 ರ ಮಾರ್ಚ್ 29 ರಿಂದ 2022 ರ ನವೆಂಬರ್ 30ರವರೆಗೆ ನಡೆಸುವುದಕ್ಕೆ ಚಾಲನೆ ನೀಡಲು ನನಗೆ ಸಂತೋಷವೆನಿಸುತ್ತದೆ. ಸ್ಪ್ರಿಂಗ್ ಶೆಡ್ ಅಭಿವೃದ್ಧಿ, ನೀರಿನ ಜಲಾನಯನ ಪ್ರದೇಶಗಳ ರಕ್ಷಣೆ, ಜಲ ವಲಯದಲ್ಲಿ (ಜಂಡರ್ ಮೈನ್ ಸ್ಟ್ರೀಮಿಂಗ್) ಲಿಂಗತ್ವ ಮುಖ್ಯವಾಹಿನಿಗೆ ತರುವುದು ಈ ಅಭಿಯಾನಕ್ಕೆ ಸೇರ್ಪಡೆಯಾದ ಕೆಲವು ಹೊಸ ಅಂಶಗಳಾಗಿವೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಲಿಂಗತ್ವ ಮುಖ್ಯವಾಹಿನಿಗೆ ತರುವುದು ಖಂಡಿತವಾಗಿಯೂ ನೀರಿನ ಆಡಳಿತ / ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವನ್ನು ಉತ್ತೇಜಿಸುತ್ತದೆ ಎಂಬ ಖಾತ್ರಿ ನನಗಿದೆ. 
"ದೇಶದಲ್ಲಿನ ನೀರಿನ ಅಭಾವದ ಸಮಸ್ಯೆಯನ್ನು ನಿಭಾಯಿಸುವಲ್ಲಿ ಬಹಳ ದೂರ ಸಾಗಲಿರುವ ಈ ಅಭಿಯಾನವನ್ನು ಹುರುಪು ಮತ್ತು ಉತ್ಸಾಹದಿಂದ ಕೈಗೊಳ್ಳಲು ರಾಜ್ಯ ಸರ್ಕಾರಗಳು ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜಾಗಿವೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಶ್ರೀ ಕೋವಿಂದ್ ಹೇಳಿದರು. ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಆಯೋಜಿಸಿದ್ದಕ್ಕಾಗಿ ನಾನು ಜಲಶಕ್ತಿ ಸಚಿವಾಲಯವನ್ನು ಅಭಿನಂದಿಸಲು ಬಯಸುತ್ತೇನೆ, ಇದು ಪರಿಣಾಮಕಾರಿ ನೀರಿನ ನಿರ್ವಹಣೆಗಾಗಿ ಜನಾಂದೋಲನವನ್ನು ರೂಪಿಸಲು ಅತ್ಯಂತ ಸೂಕ್ತ ಮತ್ತು ಸಮಯೋಚಿತ ಉಪಕ್ರಮವಾಗಿದೆ. "
"ಜಲಶಕ್ತಿ ಸಚಿವಾಲಯವು ರಾಜ್ಯಗಳು, ಸಂಸ್ಥೆಗಳು, ವ್ಯಕ್ತಿಗಳು ಇತ್ಯಾದಿಗಳಿಗೆ 11 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ನನಗೆ ಸಂತೋಷ ತಂದಿದೆ. ಕೆಲವು ವಿಜೇತರು ಜಲ ನಿರ್ವಹಣಾ ಕ್ಷೇತ್ರದಲ್ಲಿ ಅನುಕರಣೀಯ ಕಾರ್ಯ ಮಾಡಿದ್ದಾರೆ. ಈ ರೀತಿಯ ಉದಾಹರಣೆಗಳಲ್ಲಿ ನೀರಿನ ಸುರಕ್ಷಿತ ಭವಿಷ್ಯದ ಬಗ್ಗೆ ನಮ್ಮ ಭರವಸೆಗಳು ಅಡಗಿವೆ. ನಾನು ಎಲ್ಲಾ ವಿಜೇತರನ್ನು ಅಭಿನಂದಿಸುವುದಲ್ಲದೆ, ನಮ್ಮೆಲ್ಲರಿಗೂ ಪ್ರೇರಣೆಯಾಗಿ ಮುಂದುವರಿಯುವಂತೆ ವಿನಂತಿಸುತ್ತೇನೆ. ಈ ಪ್ರಶಸ್ತಿಗಳು ಭಾರತದ ಜನರ ಮನಸ್ಸಿನಲ್ಲಿ ಜಲ ಪ್ರಜ್ಞೆಯನ್ನು ತರುತ್ತವೆ ಮತ್ತು ನಡೆವಳಿಕೆಯ ಬದಲಾವಣೆಯನ್ನು ತರಲು ಸಹಾಯ ಮಾಡುತ್ತವೆ ಎಂದು ನಾನು ಬಲವಾಗಿ ನಂಬುತ್ತೇನೆ. ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಈ ಉಪಕ್ರಮಗಳಲ್ಲಿ ಭಾಗವಹಿಸಿದ ಎಲ್ಲರಿಗೂ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಸ್ವಾಗತ ಭಾಷಣ ಮಾಡಿದ ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು, ಜಲಸಂರಕ್ಷಣಾ ಅಭಿಯಾನಕ್ಕೆ ಹೊಸ ಶಕ್ತಿಯನ್ನು ತುಂಬಿದ ರಾಷ್ಟ್ರಪತಿಯರಿಗೆ ಕೃತಜ್ಞತೆ ಸಲ್ಲಿಸಿದರು. ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಅಗ್ರ 3 ರಾಜ್ಯಗಳು ಸೇರಿದಂತೆ ಎಲ್ಲಾ ವಿಜೇತರನ್ನು ಅವರು ಜಲ ನಿರ್ವಹಣಾ ಕ್ಷೇತ್ರದಲ್ಲಿ ಮಾಡಿದ ಕಾರ್ಯಕ್ಕಾಗಿ ಅಭಿನಂದಿಸಿದರು. ಋಗ್ವೇದವನ್ನು ಉಲ್ಲೇಖಿಸಿದ ಶ್ರೀ ಶೇಖಾವತ್, ಭಾರತವು ಸಾಂಪ್ರದಾಯಿಕವಾಗಿ ಜಲಸಂಪನ್ಮೂಲಗಳನ್ನು ಗೌರವಿಸಿದೆ ಎಂದು ಹೇಳಿದರು. ದೇಶದಲ್ಲಿ ಕೇವಲ ಶೇ.8ರಷ್ಟು ಮಳೆ ನೀರನ್ನು ಮಾತ್ರ ಕೊಯ್ಲು ಮಾಡಲಾಗುತ್ತದೆ ಎಂಬ ವಾಸ್ತವಾಂಶದ ಹಿನ್ನೆಲೆಯಲ್ಲಿ ಮಳೆನೀರು ಕೊಯ್ಲಿನ ಮಹತ್ವವನ್ನು ಒತ್ತಿ ಹೇಳಿದ ಅವರು, ಈ ಕಾರಣಕ್ಕಾಗಿಯೇ ಮಳೆ ನೀರು ಹಿಡಿಯಿರಿ ಅಭಿಯಾನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು ಎಂದರು.
2019 ರಿಂದ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವರು ಸಭಿಕರಿಗೆ ಮಾಹಿತಿ ನೀಡಿದರು ಮತ್ತು ನೀರಿನ ನಿರ್ವಹಣೆಯ ನಿಟ್ಟಿನಲ್ಲಿ ಮತ್ತು ಇತರರಿಗೂ ಪ್ರೇರಣೆ ನೀಡುವ ನಿಟ್ಟಿನಲ್ಲಿ ವಿವಿಧ ಬಾಧ್ಯಸ್ಥರು ಮಾಡುತ್ತಿರುವ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದರು. ಜಲ ಸಂಪನ್ಮೂಲ ನಿರ್ವಹಣೆಯ ನಿಟ್ಟಿನಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ಬಾಧ್ಯಸ್ಥರನ್ನು ಮತ್ತು ಜನರನ್ನು ಉತ್ತೇಜಿಸಲು ಏಕೀಕೃತ ರಾಷ್ಟ್ರೀಯ ಜಲ ಪ್ರಶಸ್ತಿಗಳ ಅಗತ್ಯವನ್ನು ಮನಗಾಣಲಾಯಿತು. ಈ ಪ್ರಶಸ್ತಿಗಳು ನೀರಿನ ಪ್ರಾಮುಖ್ಯದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಮತ್ತು ಪರಿಣಾಮಕಾರಿ ನೀರಿನ ನಿರ್ವಹಣೆಯಲ್ಲಿ ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೇರೇಪಿಸಲು ಶ್ರಮಿಸುತ್ತವೆ ಎಂದರು.  
ಮೊದಲ ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ಜಲಶಕ್ತಿ ಸಚಿವಾಲಯವು 2018 ರಲ್ಲಿ ಪ್ರಾರಂಭಿಸಿತು. ರಾಷ್ಟ್ರೀಯ ಜಲ ಪ್ರಶಸ್ತಿಗಳು ನವೋದ್ಯಮಗಳಿಗೆ ಮತ್ತು ಪ್ರಮುಖ ಸಂಸ್ಥೆಗಳಿಗೆ ಭಾರತದಲ್ಲಿ ಅತ್ಯುತ್ತಮ ಜಲಸಂಪನ್ಮೂಲ ನಿರ್ವಹಣಾ ಪದ್ಧತಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಹಿರಿಯ ನೀತಿ ನಿರೂಪಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಚರ್ಚಿಸಲು ಉತ್ತಮ ಅವಕಾಶವನ್ನು ಒದಗಿಸಿತು.
ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆಯು ಅತ್ಯುತ್ತಮ ರಾಜ್ಯ, ಅತ್ಯುತ್ತಮ ಜಿಲ್ಲೆ, ಅತ್ಯುತ್ತಮ ಗ್ರಾಮ ಪಂಚಾಯತ್, ಅತ್ಯುತ್ತಮ ನಗರ ಸ್ಥಳೀಯ ಸಂಸ್ಥೆ, ಅತ್ಯುತ್ತಮ ಮಾಧ್ಯಮ (ಮುದ್ರಣ ಮತ್ತು ವಿದ್ಯುನ್ಮಾನ), ಅತ್ಯುತ್ತಮ ಶಾಲೆ, ಅತ್ಯುತ್ತಮ ಸಂಸ್ಥೆ / ಆರ್.ಡಬ್ಲ್ಯೂಎ / ಆವರಣ ಬಳಕೆಗಾಗಿ ಧಾರ್ಮಿಕ ಸಂಸ್ಥೆ, ಅತ್ಯುತ್ತಮ ಕೈಗಾರಿಕೆ, ಅತ್ಯುತ್ತಮ ಓನ್.ಜಿ.ಒ, ಅತ್ಯುತ್ತಮ ನೀರು ಬಳಕೆದಾರರ ಸಂಘ, ಮತ್ತು ಸಿಎಸ್.ಆರ್ ಚಟುವಟಿಕೆಗಾಗಿ ಅತ್ಯುತ್ತಮ ಉದ್ಯಮ ಸೇರಿ 11 ವಿವಿಧ ವಿಭಾಗಗಳಲ್ಲಿ ರಾಜ್ಯಗಳು, ಸಂಸ್ಥೆಗಳು, ವ್ಯಕ್ತಿಗಳು ಇತ್ಯಾದಿಗಳಿಗೆ 57 ಪ್ರಶಸ್ತಿಗಳನ್ನು ನೀಡಿದೆ. ಈ ಪ್ರವರ್ಗಗಳಲ್ಲಿ ಕೆಲವು ದೇಶದ ವಿವಿಧ ವಲಯಗಳಿಗೆ ಉಪ-ಪ್ರವರ್ಗಗಳೂ ಇವೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಂಸಾ ಪತ್ರ, ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಯಿತು. ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದವು.
'ಜಲ ಸಮೃದ್ಧ ಭಾರತ' ಎಂಬ  ಸರ್ಕಾರದ ದೃಷ್ಟಿಕೋನವನ್ನು ಸಾಧಿಸಲು ದೇಶಾದ್ಯಂತದ ವೈಯಕ್ತಿಕ ಮತ್ತು ಸಂಸ್ಥೆಗಳು ಮಾಡಿದ ಉತ್ತಮ ಕಾರ್ಯ ಮತ್ತು ಪ್ರಯತ್ನಗಳ ಮೇಲೆ ಎನ್.ಡಬ್ಲ್ಯೂ.ಎಗಳು ಕೇಂದ್ರೀಕರಿಸುತ್ತವೆ. ಈ ಪ್ರಶಸ್ತಿಯು ಎಲ್ಲಾ ಜನರು ಮತ್ತು ಸಂಸ್ಥೆಗಳಿಗೆ ಬಲವಾದ ಪಾಲುದಾರಿಕೆ ಮತ್ತು ಜಲಸಂಪನ್ಮೂಲ ನಿರ್ವಹಣಾ ಚಟುವಟಿಕೆಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.
ದೇಶದ 256 ಜಿಲ್ಲೆಗಳಲ್ಲಿ 1,592 ಜಲ ಸಂಕಷ್ಟದ ವಿಭಾಗಗಳಲ್ಲಿ ಜಲಶಕ್ತಿ ಅಭಿಯಾನವನ್ನು 2019ರಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ನಂತರ, ಇದು ಜಲ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಕರೆಯಾಯಿತು,  ನಂತರ  ಜಲಶಕ್ತಿ ಅಭಿಯಾನ -2: ಅದು ಯಾವಾಗ ಬೀಳುತ್ತದೋ, ಎಲ್ಲಿ ಬೀಳುತ್ತದೋ ಆ ಸ್ಥಳದಲ್ಲಿ ಮಳೆಯನ್ನು ಹಿಡಿಯಿರಿ, ಅಭಿಯಾನಕ್ಕೆ  2021
ರ ಮಾರ್ಚ್ 22 ರಂದು ವಿಶ್ವ ಜಲ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.  ಇದನ್ನು ದೇಶದ ಎಲ್ಲಾ ಜಿಲ್ಲೆಗಳಲ್ಲಿ (ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ) ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ, ಅಂದರೆ ಮಾರ್ಚ್ 2021 ರಿಂದ 30 ನವೆಂಬರ್ 2021ರವರೆಗೆ ಕೈಗೊಳ್ಳಲಾಗಿತ್ತು. ರಾಷ್ಟ್ರೀಯ ಜಲ ಅಭಿಯಾನದ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. 2021ರ ಮಾರ್ಚ್ 22 ರಂದು ಪ್ರಾರಂಭವಾದಾಗಿನಿಂದ 2021ರ ಡಿಸೆಂಬರ್ 31ರವರೆಗೆ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಒಟ್ಟುಗೂಡಿಸಿ, 36 ಕೋಟಿಗೂ ಹೆಚ್ಚು ಅರಣ್ಯೀಕರಣ ಕಾಮಗಾರಿಗಳ ಜೊತೆಗೆ ಒಟ್ಟು 46 ಲಕ್ಷಕ್ಕೂ ಹೆಚ್ಚು ಜಲ ಸಂಬಂಧಿತ ಕಾಮಗಾರಿಗಳು ಪೂರ್ಣಗೊಂಡಿವೆ / ಪ್ರಗತಿಯಲ್ಲಿವೆ, 43,631 ತರಬೇತಿ ಕಾರ್ಯಕ್ರಮಗಳು / ರೈತ ಮೇಳಗಳನ್ನು ನಡೆಸಲಾಗಿದೆ ಮತ್ತು 306 ಜಲಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಂ.ಜಿ.ಎನ್.ಆರ್.ಇ.ಜಿಎಸ್ ಅಡಿಯಲ್ಲಿ 65000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗಿದೆ. ಜಲಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳ ಜೊತೆಗೆ,  ಅಸ್ತಿತ್ವದಲ್ಲಿರುವ ಜಲಮೂಲಗಳು / ಜಲ ವಿನ್ಯಾಸಗಳನ್ನು ಗುರುತಿಸಲು ದೂರ ಸಂವೇದಿ ಉಪಗ್ರಹ ಚಿತ್ರಗಳು ಮತ್ತು ಜಿಐಎಸ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಜಲಕಾಯಗಳ ಪಟ್ಟಿಯನ್ನು ರಚಿಸಲು ಬಳಸಲಾಯಿತು.
ಜಲಶಕ್ತಿ ಅಭಿಯಾನ: ಮಳೆ ನೀರು ಹಿಡಿಯಿರಿ 2022 ರಲ್ಲಿ, ಕೆಲವು ಹೊಸ ವೈಶಿಷ್ಟ್ಯಗಳಾದ ಸ್ಪ್ರಿಂಗ್ ಶೆಡ್ ಅಭಿವೃದ್ಧಿ, ನೀರಿನ ಜಲಾನಯನ ಪ್ರದೇಶಗಳ ರಕ್ಷಣೆ, ನೀರಿನ ವಲಯದಲ್ಲಿ ಲಿಂಗತ್ವ ಮುಖ್ಯವಾಹಿನಿ (ಜಂಡರ್ ಮೈನ್ ಸ್ಟ್ರೀಮಿಂಗ್) ಸೇರಿಸಲಾದೆ. ಲಿಂಗತ್ವ ಮುಖ್ಯವಾಹಿನಿಗೆ ತರುವುದು ಜಲ ಆಡಳಿತ / ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜಲಶಕ್ತಿ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತವೆ, ಇದು ಜ್ಞಾನ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಲ್ಲಾ ಜಲ ಸಂಬಂಧಿತ ಸಮಸ್ಯೆಗಳು / ಸಮಸ್ಯೆಗಳಿಗೆ ಒಂದು ತಾಣದಲ್ಲಿ ಪರಿಹಾರವನ್ನು ನೀಡುತ್ತದೆ ಮತ್ತು ಸಾಧ್ಯವಾದಷ್ಟು ಬೇಗ ಜಿಲ್ಲಾ ಜಲ ಸಂರಕ್ಷಣಾ ಯೋಜನೆಯನ್ನು ರೂಪಿಸುತ್ತದೆ. ಈ ವರ್ಷ ಅಭಿಯಾನದ ಅಡಿಯಲ್ಲಿ ದೇಶದ ಎಲ್ಲಾ ಜಲಮೂಲಗಳನ್ನು ಗಣತಿ ಮಾಡಿದರೆ, ಅದು ದೊಡ್ಡ ಸಾಧನೆಯಾಗುತ್ತದೆ. 
ಅಭಿಯಾನದ ಪ್ರಾರಂಭದ ಸಮಯದಲ್ಲಿ ಎಲ್ಲಾ ಸರಪಂಚರು ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಗ್ರಾಮದ ಜನರಿಗೆ ಜಲ ಪ್ರತಿಜ್ಞೆ ಬೋಧಿಸಿದರು. "ಜಲಶಕ್ತಿ ಅಭಿಯಾನ: ಮಳೆಯನ್ನು ಹಿಡಿಯಿರಿ" ಅಭಿಯಾನದ ಯಶಸ್ವಿ ಅನುಷ್ಠಾನವು ತಳಮಟ್ಟದಲ್ಲಿ ಸ್ಥಳೀಯ ಸಮುದಾಯದ ಜನರ ಸಕ್ರಿಯ ಭಾಗವಹಿಸುವಿಕೆಯನ್ನು ಅವಲಂಬಿಸಿದೆ, ಅಲ್ಲಿ ಸ್ಥಳೀಯ ಸಮುದಾಯದ ಜನರು ನೀರಿನ ಸಂರಕ್ಷಣಾ ಕಾರ್ಯದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ನೀರಿನ ಕೊರತೆಯ ಸಮಸ್ಯೆಗಳನ್ನು ನಿವಾರಿಸಲು "ಜಲ ಯೋಧರಾಗಲಿದ್ದಾರೆ" ಮತ್ತು ಜಲ ಸಂರಕ್ಷಣಾ ರಚನೆಗಳ ಸ್ವತ್ತುಗಳ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿಗಳು (ಜಿಲ್ಲಾ ದಂಡಾಧಿಕಾರಿಗಳು) ಮತ್ತು ಗ್ರಾಮ ಸರಪಂಚರು "ಜಲಶಕ್ತಿಗಾಗಿ ಜನಶಕ್ತಿ" ಯ ಬಯಕೆಯನ್ನು ಪೂರೈಸುವ ಮೂಲಕ ಅಭಿಯಾನದ ಯಶಸ್ಸನ್ನು ಖಾತ್ರಿಪಡಿಸಿಕೊಳ್ಳಲು ನೀರಿನ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪ್ರೇರಣೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ "ಮಾರ್ಗದರ್ಶಕ್" ಎಂದು ಸ್ಥಳೀಯ ಜನರನ್ನು ಪ್ರೇರೇಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
2022 ರ ನವೆಂಬರ್ 1 ರಿಂದ 5 ರವರೆಗೆ ಬೃಹತ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಕೇಂದ್ರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಭಾರತದ ಅಂತಾರಾಷ್ಟ್ರೀಯ ಜಲಸಂಪನ್ಮೂಲ ಕಾರ್ಯಕ್ರಮ ಭಾರತ ಜಲ ಸಪ್ತಾಹ -2022 ರ 7 ನೇ ಆವೃತ್ತಿಯ ಕಾರ್ಯಕ್ರಮ ಪೂರ್ವದ ಪ್ರಥಮ ಮಾಹಿತಿ ಕರಪತ್ರವನ್ನು ಇಂದು ಬಿಡುಗಡೆ ಮಾಡಲಾಯಿತು. ಭಾರತ ಜಲ ಸಪ್ತಾಹ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯಗಳನ್ನು ಸೂಚಿಸುವ ಐ.ಡಬ್ಲ್ಯೂ.ಡಬ್ಲ್ಯೂ. -2022 ರ ಪರಿಚಯಾತ್ಮಕ ಚಲನಚಿತ್ರವನ್ನು ಸಮಾರಂಭದಲ್ಲಿ ಪ್ರಸ್ತುತಪಡಿಸಲಾಯಿತು. 7ನೇ ಭಾರತ ಜಲ ಸಪ್ತಾಹ -2022 ವಿಶ್ವದಾದ್ಯಂತ ತಜ್ಞರು, ಯೋಜನೆ ರೂಪಿಸುವವರು, ಅನ್ವೇಷಕರು ಮತ್ತು ಬಾಧ್ಯಸ್ಥರನ್ನು ಒಗ್ಗೂಡಿಸುತ್ತದೆ, ಸಮ್ಮೇಳನದ ವಿಷಯಗಳು ಮತ್ತು ಉಪ-ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. 7ನೇ ಐಡಬ್ಲ್ಯೂಡಬ್ಲ್ಯೂನ ಧ್ಯೇಯವಾಕ್ಯ "ನ್ಯಾಯಯುತ ಸುಸ್ಥಿರ ಅಭಿವೃದ್ಧಿಗಾಗಿ ಜಲ ಭದ್ರತೆ" ಎಂಬುದಾಗಿದೆ. 5 ದಿನಗಳ ಈ ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿಗಳು, ಚರ್ಚಾ ಗೋಷ್ಠಿಗಳು, ಪೂರಕ ಕಾರ್ಯಕ್ರಮಗಳು, ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ, ಜೊತೆಗೆ ಭವಿಷ್ಯದ ಪಾಲುದಾರರು ಮತ್ತು ಗ್ರಾಹಕರನ್ನು ಅನ್ವೇಷಿಸಲು ವ್ಯವಹಾರಕ್ಕೆ ಅವಕಾಶಗಳನ್ನು ಒದಗಿಸುತ್ತದೆ. ಇದಲ್ಲದೆ, ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಮುಖ ಯೋಜನೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಕಾರ್ಯಕ್ರಮಗಳು, ಯುವ ವೃತ್ತಿಪರರಿಗೆ ಅಧಿವೇಶನಗಳು, ಶಾಲಾ ಮಕ್ಕಳಿಗಾಗಿ ಕಾರ್ಯಕ್ರಮ, ಎನ್.ಜಿ.ಒಗಳು / ಯಶೋಗಾಥೆಗಳು ಇತ್ಯಾದಿಗಳ ಬಗ್ಗೆ ವಿಶೇಷ ಗೋಷ್ಠಿಗಳು ಇರುತ್ತವೆ, ಸಮ್ಮೇಳನವು ಜಲಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಬಾಧ್ಯಸ್ಥರನ್ನು ಒಳಗೊಳ್ಳುವ ವೇದಿಕೆಯನ್ನಾಗಿ ಮಾಡಲಾಗುತ್ತದೆ. 


***



(Release ID: 1811146) Visitor Counter : 304


Read this release in: Telugu , English , Urdu , Hindi