ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ‘ಶ್ಯೂರ್ ವಿಷನ್’ ಜಾಹೀರಾತನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ ಹಾಗು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಪ್ರತಿಪಾದನೆಗಾಗಿ ರೂ. 10 ಲಕ್ಷ ದಂಡವನ್ನು ವಿಧಿಸಿದೆ.
"ಇದು ನೈಸರ್ಗಿಕವಾಗಿ ದೃಷ್ಟಿಯನ್ನು ಸುಧಾರಿಸುತ್ತದೆ; ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ; ಸಿಲಿಯರಿ ಸ್ನಾಯುಗಳು ಶಕ್ತವಾಗುವಂತೆ ಮಾಡುತ್ತದೆ; ವಿಶ್ವದ ಅತ್ಯುತ್ತಮ ಯುನಿಸೆಕ್ಸ್ ಕಣ್ಣ ದೃಷ್ಟಿಯ ತಿದ್ದುಪಡಿಯ ಉಪಕರಣ" ಎಂಬ ಜಾಹೀರಾತಿನಲ್ಲಿ ಮಾಡಿದ ಉತ್ಪನ್ನದ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ತನ್ನ ಪ್ರತಿಪಾದನೆಯನ್ನು ಸಮರ್ಥಿಸಲು ಕಂಪನಿಯು ವಿಫಲವಾಗಿದೆ.
Posted On:
28 MAR 2022 3:50PM by PIB Bengaluru
ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ‘ಶ್ಯೂರ್ ವಿಷನ್’ ಜಾಹೀರಾತನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ ಮತ್ತು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಪ್ರತಿಪಾದನೆಗಾಗಿ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಮುಖ್ಯ ಆಯುಕ್ತರು ಮತ್ತು ಆಯುಕ್ತರನ್ನು ಒಳಗೊಂಡಿರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಇತ್ತೀಚೆಗೆ ತನ್ನ ಉತ್ಪನ್ನ "ಶ್ಯೂರ್ ವಿಷನ್" ಗಾಗಿ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ಶ್ಯೂರ್ ವಿಷನ್ ಇಂಡಿಯಾ ವಿರುದ್ಧ ಆದೇಶವನ್ನು ನೀಡಿತು, ಇದು " ಶ್ಯೂರ್ ವಿಷನ್ ನೈಸರ್ಗಿಕವಾಗಿ ದೃಷ್ಟಿ ಸುಧಾರಿಸುತ್ತದೆ; ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ; ಸಿಲಿಯರಿ ಸ್ನಾಯುಗಳ ತಾಲೀಮಿನ ಮೂಲಕ ಶಕ್ತಗೊಳಿಸುತ್ತದೆ; ವಿಶ್ವದ ಅತ್ಯುತ್ತಮ ಯುನಿಸೆಕ್ಸ್ ದೃಷ್ಟಿ ತಿದ್ದುಪಡಿ ಉಪಕರಣ" ಎಂದು ಕಂಪನಿಯು ಜಾಹೀರಾತಿನಲ್ಲಿ ಮಾಡಿದ ಉತ್ಪನ್ನದ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ತನ್ನ ಪ್ರತಿಪಾದನೆಯನ್ನು ಸಮರ್ಥಿಸಲು ಸಾಧ್ಯವಾಗಲಿಲ್ಲ.
ಅದರ ಉತ್ಪನ್ನ "ಶ್ಯೂರ್ ವಿಷನ್" ಗಾಗಿ ತಪ್ಪುದಾರಿಗೆಳೆಯುವ ಜಾಹೀರಾತಿನ ಕುರಿತು ಶ್ಯೂರ್ ವಿಷನ್ ಇಂಡಿಯಾ ವಿರುದ್ಧ ದೂರೊಂದನ್ನು ಪ್ರಾಧಿಕಾರವು ಸ್ವೀಕರಿಸಿತು. ನಂತರ, ಸಿಸಿಪಿಎ ದೂರಿನ ಮೇಲೆ ಅಗತ್ಯ ಕ್ರಮವನ್ನು ಪ್ರಾರಂಭಿಸಿತು. 25.02.2022 ರಂದು, ಕಂಪನಿಯು ಜಾಹೀರಾತಿನಲ್ಲಿ ಮಾಡಿದ ಪ್ತತಿಪಾದನೆಯನ್ನು ತನಿಖೆ ಮಾಡಲು ಮಹಾ ನಿರ್ದೇಶಕ (ತನಿಖೆ) ಅವರಿಗೆ ನಿರ್ದೇಶಿಸುವ ಆದೇಶವನ್ನು ಸಿಸಿಪಿಎ ಮಾಡಿತು.
ಮಹಾ ನಿರ್ದೇಶಕ (ತನಿಖೆ)ರು ಸಲ್ಲಿಸಿದ ತನಿಖಾ ವರದಿಯ ಪ್ರಕಾರ, ಕಂಪನಿಯ ಪ್ರತಿಪಾದನೆಯು ಅತಿರೇಕವೆಂದು ಕಂಡುಬಂದಿದೆ ಮತ್ತು ಜಾಹೀರಾತು ಮಾಡಲಾದ ಉತ್ಪನ್ನದ ಕುರಿತು ಕಂಪನಿ ಅಥವಾ ಯಾವುದೇ ಇತರ ಸಂಸ್ಥೆಯು ನಡೆಸಿದ ಯಾವುದೇ ಸಂಶೋಧನೆಯ ಉಲ್ಲೇಖ ಮತ್ತು ದಾಖಲೆಯನ್ನು ಒದಗಿಸದೇ ಇರುವುದರಿಂದ ಅದನ್ನು ರದ್ದುಗೊಳಿಸಬೇಕು ಎಂದಿದೆ. ಇದಲ್ಲದೆ, "ಶ್ಯೂರ್ ವಿಷನ್" ಉತ್ಪನ್ನದಲ್ಲಿ ಕಂಪನಿಯು ಬಳಸುವ ಪಿನ್‌ಹೋಲ್ ತಂತ್ರಜ್ಞಾನವು ಪ್ರಾಥಮಿಕ "ರೋಗನಿರ್ಣಯ" ವಿಧಾನವಾಗಿದ್ದು, ಜಾಹೀರಾತಿನಲ್ಲಿ ಹೇಳಿಕೊಂಡಂತೆ "ಚಿಕಿತ್ಸಾ" ವಿಧಾನವಲ್ಲ. ಆದ್ದರಿಂದ, ಕಂಪನಿಯ ಪ್ರತಿಪಾದನೆಯು ತಪ್ಪುದಾರಿಗೆಳೆಯುವ ಮತ್ತು ನ್ಯಾಯಸಮ್ಮತವಲ್ಲದ್ದು ಎಂದು ಮಹಾ ನಿರ್ದೇಶಕ (ತನಿಖೆ)ರು ಅಭಿಪ್ರಾಯಪಟ್ಟಿದ್ದಾರೆ.
ಸಿಸಿಪಿಎ ಮುಂದೆ ವಿಚಾರಣೆಯ ಸಮಯದಲ್ಲಿ, ಕಂಪನಿಯು "ಇದು ಕಣ್ಣಿನ ದೃಷ್ಟಿಯನ್ನು ಸ್ವಾಭಾವಿಕವಾಗಿ ಸುಧಾರಿಸುತ್ತದೆ; ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ; ಸಿಲಿಯರಿ ಸ್ನಾಯುಗಳ ವ್ಯಾಯಾಮದ ಮೂಲಕ ಶಕ್ತಗೊಳಿಸುತ್ತದೆ; ವಿಶ್ವದ ಅತ್ಯುತ್ತಮ ಯುನಿಸೆಕ್ಸ್ ದೃಷ್ಟಿ ತಿದ್ದುಪಡಿ ಉಪಕರಣ" ಎಂದು ಹೇಳಲಾಗಿದೆ ಎಂಬುದನ್ನು ಒಪ್ಪಿಕೊಂಡಿದೆ ಎನ್ನುವುದನ್ನು ಸಹ ಉಲ್ಲೇಖಿಸಬಹುದು. ಉತ್ಪನ್ನದ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ/ಪ್ರಯೋಗಾಲಯ ಪರೀಕ್ಷಾ ವರದಿಯ ಮೂಲಕ ಸಮರ್ಥನೆ ಇಲ್ಲದೆ ಜಾಹೀರಾತಿನಲ್ಲಿ. ಅವರ ಪ್ರತಿಪಾದನೆಯನ್ನು ದೃಢೀಕರಿಸಲು ಅವರು ಯಾವುದೇ ನಿರ್ದಿಷ್ಟ ಮಾರುಕಟ್ಟೆ ಅಧ್ಯಯನ/ಸಮೀಕ್ಷೆಯನ್ನು ನಡೆಸಿರುವುದಿಲ್ಲ.
ಇದನ್ನು ಗಮನದಲ್ಲಿಟ್ಟುಕೊಂಡು, ಸಿಸಿಪಿಎ ಯು , ಉತ್ಪನ್ನದ "ಶ್ಯೂರ್ ವಿಷನ್" ಅನ್ನು ಯಾವುದೇ ವಿಶ್ವಾಸಾರ್ಹ ವೈಜ್ಞಾನಿಕ ಅಧ್ಯಯನವಿಲ್ಲದೆ ಪ್ರಕಟಿಸಲಾಗಿದೆ ಮತ್ತು ಕಂಪನಿಯು ಜಾಹೀರಾತಿನಲ್ಲಿ ಮಾಡಿದ ತಮ್ಮ ಪ್ರತಿಪಾದನೆಯನ್ನು ರುಜುವಾತುಪಡಿಸಲು ಯಾವುದೇ ಮಾರ್ಕೆಟಿಂಗ್ ಸಂಶೋಧನೆಯನ್ನು ನಡೆಸಲಿಲ್ಲ, ಇದರಿಂದಾಗಿ ದೃಷ್ಟಿ ಸಂಬಂಧಿತ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಹಕರ ಸೂಕ್ಷ್ಮತೆಯನ್ನು ದುರುಪಯೋಗ ಪಡಿಸುತ್ತಿದೆ. ಇದಲ್ಲದೆ, ಉತ್ಪನ್ನದ ಹೆಸರು "ಶ್ಯೂರ್ ವಿಷನ್" ಸ್ವತಃ ಗ್ರಾಹಕರ ಮನಸ್ಸಿನಲ್ಲಿ ಸ್ಪಷ್ಟ ದೃಷ್ಟಿಯ ಖಚಿತತೆಯ ಸುಳ್ಳು ಮತ್ತು ನಕಲಿ ಕಲ್ಪನೆ ಮತ್ತು ಕಟ್ಟುಕತೆಯನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ಈ ಜಾಹೀರಾತು ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ಹೇಳಿದೆ.
ಆದ್ದರಿಂದ, "ಇದು ಕಣ್ಣಿನ ದೃಷ್ಟಿಯನ್ನು ಸ್ವಾಭಾವಿಕವಾಗಿ ಸುಧಾರಿಸುತ್ತದೆ; ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ; ಸಿಲಿಯರಿ ಸ್ನಾಯುಗಳಿಗೆ ವ್ಯಾಯಾಮ ಮಾಡಿಸುತ್ತದೆ; ವಿಶ್ವದ ಅತ್ಯುತ್ತಮ ಯುನಿಸೆಕ್ಸ್ ದೃಷ್ಟಿ ತಿದ್ದುಪಡಿ ಉಪಕರಣ" ಎಂಬ ಸಮರ್ಥನೆಗಳನ್ನು ಮಾಡುವ "ಶ್ಯೂರ್ ವಿಷನ್" ಉತ್ಪನ್ನದ ಜಾಹೀರಾತುಗಳನ್ನು ನಿಲ್ಲಿಸುವಂತೆ ಸಿಸಿಪಿಎ ಪ್ರಾಧಿಕಾರವು ಶ್ಯೂರ್ ವಿಷನ್ ಇಂಡಿಯಾಗೆ ನಿರ್ದೇಶಿಸಿದೆ ಮತ್ತು ದಂಡವನ್ನು ವಿಧಿಸಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಸೆಕ್ಷನ್ 21(1) ಮತ್ತು (2) ನಿಬಂಧನೆಗಳ ಅಡಿಯಲ್ಲಿ ಕಂಪನಿಯ ಮೇಲೆ ₹10,00,000 ದಂಡವನ್ನು ವಿಧಿಸಿದೆ.
ಈ ಹಿಂದೆ, ಸಿಸಿಪಿಎ ಪ್ರಾದಿಕಾರವು ತಪ್ಪುದಾರಿಗೆಳೆಯುವ ಜಾಹೀರಾತಿಗಾಗಿ ಸೆನ್ಸೋಡೈನ್ ಟೂತ್‌ಪೇಸ್ಟ್‌ಗಾಗಿ ನಾಪ್‌ಟೋಲ್ ಮತ್ತು ಜಿಎಸ್‌ಕೆ ಗೆ ತಲಾ ₹10,00,000 ದಂಡವನ್ನು ವಿಧಿಸಿದೆ. ಅವುಗಳ ಜಾಹೀರಾತನ್ನು ಸ್ಥಗಿತಗೊಳಿಸುವಂತೆಯೂ ಸೂಚಿಸಲಾಗಿದೆ.
ಕೋವಿಡ್ -19 ಸಾಂಕ್ರಾಮಿಕದ ಸುತ್ತ ಗ್ರಾಹಕರ ಸೂಕ್ಷ್ಮತೆಯ ಹಿನ್ನೆಲೆಯಲ್ಲಿ, ಸಿಸಿಪಿಎ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಂಡಿತು, ಆ ಮೂಲಕ 13 ಕಂಪನಿಗಳು ತಮ್ಮ ಜಾಹೀರಾತುಗಳನ್ನು ಹಿಂತೆಗೆದುಕೊಂಡಿವೆ ಮತ್ತು 3 ಕಂಪನಿಗಳು ಜಾಹೀರಾತುಗಳನ್ನು ಸರಿಪಡಿಸಿವೆ.
ಇದಲ್ಲದೆ, ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳ ವಿರುದ್ಧ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು, ಸಿಸಿಪಿಎ ಎರಡು ಸಲಹೆಗಳನ್ನು ಸಹ ನೀಡಿದೆ. ಮೊದಲ ಸಲಹೆಯನ್ನು 20.01.2021 ರಂದು ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವ ಮತ್ತು ಯಾವುದೇ ಸಮರ್ಥ ಮತ್ತು ವಿಶ್ವಾಸಾರ್ಹ ವೈಜ್ಞಾನಿಕ ಪುರಾವೆಗಳಿಂದ ಬೆಂಬಲಿತವಾಗಿಲ್ಲದ ತಪ್ಪುದಾರಿಗೆಳೆಯುವ ಪ್ರತಿಪಾದನೆಗಳನ್ನು ಮಾಡುವುದನ್ನು ನಿಲ್ಲಿಸಲು ಉದ್ಯಮದವರಿಗೆ ಕರೆ ನೀಡಲಾಯಿತು. ಎರಡನೇ ಸಲಹೆಯನ್ನು 01.10.2021 ರಂದು ನೀಡಲಾಗಿದ್ದು, ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020ರ ನಿಬಂಧನೆಗಳ ಅನುಸರಣೆಯನ್ನು ಎತ್ತಿ ತೋರಿಸುತ್ತದೆ, ಇದರಿಂದಾಗಿ ಪ್ರತಿ ಮಾರುಕಟ್ಟೆಯ ಇ-ಕಾಮರ್ಸ್ ಘಟಕವು ನಿಯಮ 6(5) ಅಡಿಯಲ್ಲಿ ಮಾರಾಟಗಾರರಿಂದ ಒದಗಿಸಲಾದ ಮಾರಾಟಗಾರರ ಕುಂದುಕೊರತೆ ಅಧಿಕಾರಿಯ ಹೆಸರು, ಹುದ್ದೆ ಮತ್ತು ಸಂಪರ್ಕ ಮಾಹಿತಿಯನ್ನೊಳಗೊಂಡ ಎಲ್ಲಾ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸುವ ಅಗತ್ಯವಿದೆ.
ಗ್ರಾಹಕರ ಹಕ್ಕುಗಳ ಉಲ್ಲಂಘನೆ, ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಸಾರ್ವಜನಿಕರ ಹಿತಾಸಕ್ತಿಗೆ ಹಾನಿಯುಂಟುಮಾಡುವ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿಯಂತ್ರಿಸಲು ಮತ್ತು ಗ್ರಾಹಕರಿಗೆ ಹಕ್ಕುಗಳ ಸಂರಕ್ಷಣೆಗಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಸೆಕ್ಷನ್ 10 ರ ಅಡಿಯಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು (ಸಿಸಿಪಿಎ) ಸ್ಥಾಪಿಸಲಾಗಿದೆ.
**
(Release ID: 1810841)
Visitor Counter : 245