ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 27.03.2022 ರಂದು ಮಾಡಿದ ‘ಮನ್ ಕಿ ಬಾತ್’ 87 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

Posted On: 27 MAR 2022 11:30AM by PIB Bengaluru

ನನ್ನ ಪ್ರಿಯ ದೇಶಬಾಂಧವರೆ, ಕಳೆದ ವಾರ ನಾವು ಮಾಡಿದ ಸಾಧನೆ ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಭಾರತ ಕಳೆದ ವಾರ 400 ಶತಕೋಟಿ ಡಾಲರ್ ಅಂದರೆ 30 ಲಕ್ಷಕೋಟಿ ರೂಪಾಯಿಗಳ ರಫ್ತಿನ ಗುರಿಯನ್ನು ಸಾಧಿಸಿದೆ ಎಂದು ನೀವು ಕೇಳಿರಬಹುದು. ಮೊದಲ ಬಾರಿಗೆ ಕೇಳಿದಾಗ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಷಯ ಅನ್ನಿಸಬಹುದು. ಆದರೆ ಇದು ಅರ್ಥವ್ಯವಸ್ಥೆಗೂ ಮೀರಿ ಭಾರತದ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಒಂದು ಕಾಲದಲ್ಲಿ ಭಾರತದ ರಫ್ತಿನ ಅಂಕಿ ಸಂಖ್ಯೆ ಕೆಲವೊಮ್ಮೆ 100 ಶತಕೋಟಿ ಇನ್ನು ಕೆಲವೊಮ್ಮೆ 150 ಶತಕೋಟಿ  200 ಶತಕೋಟಿವರೆಗೂ ತಲುಪುತ್ತಿತ್ತು. ಈಗ ಭಾರತ 400 ಶತಕೋಟಿ ಡಾಲರ್ ತಲುಪಿದೆ. ಇದರರ್ಥ ವಿಶ್ವಾದ್ಯಂತ ಭಾರತದಲ್ಲಿ ತಯಾರಿಸಲಾದ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮತ್ತೊಂದು ಅರ್ಥ ಸರಬರಾಜು ಸರಪಳಿ ದಿನೇ ದಿನೇ ಸಶಕ್ತಗೊಳ್ಳುತ್ತಿದೆ. ಇದರ ಹಿಂದೆ ಒಂದು ಪ್ರಮುಖ ಸಂದೇಶವೂ ನೀಡುತ್ತಿದೆ. ಕನಸುಗಳಿಗಿಂತ ಹಿರಿದಾದ ಸಂಕಲ್ಪವಿದ್ದಾಗ ದೇಶ ಬೃಹತ್ ಹೆಜ್ಜೆಯನ್ನು ಇಡುತ್ತದೆ. ಸಂಕಲ್ಪಗಳ ಪೂರೈಕೆಗೆ  ಹಗಲಿರುಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಆ ಸಂಕಲ್ಪಗಳನ್ನು ಸಾಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲೂ ಹೀಗೆಯೇ ಆಗುವುದನ್ನು ನೀವು ಕಾಣಬಹುದು. ಯಾರದೇ ಸಂಕಲ್ಪ, ಪ್ರಯತ್ನಗಳು ಅವರ ಕನಸುಗಳನ್ನು ಮೀರಿ ಬೆಳೆಯುತ್ತವೆಯೋ ಆಗ ಸಫಲತೆ ಆತನ ಬಳಿ ತಾನಾಗೇ ಅರಸಿ ಬರುತ್ತದೆ. 
ಸ್ನೇಹಿತರೆ, ದೇಶದ ಮೂಲೆಮೂಲೆಗಳಿಂದ ಹೊಸ ಹೊಸ ಉತ್ಪನ್ನಗಳು ವಿದೇಶಕ್ಕೆ ತೆರಳುವಾಗ ಅಸ್ಸಾಂನ ಹೈಲಾಕಾಂಡಿಯ ಚರ್ಮದ ಉತ್ಪನ್ನಗಳಾಗಿರಲಿ, ಉಸ್ಮಾನಾಬಾದ್ ನ ಕೈಮಗ್ಗ ಉತ್ಪನ್ನಗಳೇ ಆಗಿರಲಿ, ಬೀಜಾಪುರದ ಹಣ್ಣು ತರಕಾರಿಗಳಾಗಲಿ ಅಥವಾ ಚಂದೌಲಿಯ ಕಪ್ಪು ಅಕ್ಕಿಯಾಗಲಿ ಎಲ್ಲದರ ರಫ್ತು ಹೆಚ್ಚುತ್ತಿದೆ. ಈಗ ನಿಮಗೆ ಲದ್ದಾಖ್ ನ ವಿಶ್ವ ಪ್ರಸಿದ್ಧ ಎಪ್ರಿಕಾಟ್ (ಅಕ್ರೋಟ್) ದುಬೈನಲ್ಲೂ ಲಭ್ಯ. ಸೌದಿ ಅರೇಬಿಯಾದಲ್ಲಿ ತಮಿಳುನಾಡಿನಿಂದ ರಫ್ತಾದ ಬಾಳೆಹಣ್ಣು ಸಿಗುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಹೊಸ ಹೊಸ ಉತ್ಪನ್ನಗಳನ್ನು ಹೊಸ ಹೊಸ ದೇಶಗಳಿಗೆ ರಫ್ತು ಮಾಡುತ್ತಿರುವುದೇ ಮಹತ್ವದ  ಸಂಗತಿ. ಹಿಮಾಚಲ್, ಉತ್ತರಾಖಂಡ್ ನಲ್ಲಿ ಬೆಳೆದ ಸಿರಿಧಾನ್ಯದ ಗುಜರಾತ್ ನಿಂದ ಮೊದಲ ಕಂತಿನ ಸರಕನ್ನು ಡೆನ್ಮಾರ್ಕ್ ಗೆ ರವಾನಿಸಲಾಗಿದೆ. ಆಂಧ್ರಪ್ರದೇಶದ ಕೃಷ್ಣಾ ಮತ್ತು ಚಿತ್ತೂರ ಜಿಲ್ಲೆಯ ಬೈಗನಪಲ್ಲಿ ಮತ್ತು ಸುವರ್ಣ ರೇಖಾ ಮಾವನ್ನು ದಕ್ಷಿಣ ಕೋರಿಯಾಗೆ ರಫ್ತು ಮಾಡಲಾಗಿದೆ. ತ್ರಿಪುರಾದಿಂದ ತಾಜಾ ಹಲಸನ್ನು ಲಂಡನ್ ಗೆ ವಾಯು ಮಾರ್ಗವಾಗಿ ರಫ್ತು ಮಾಡಲಾಗಿದೆ. ಅಲ್ಲದೆ ಪ್ರಥಮ ಬಾರಿಗೆ ನಾಗಾಲ್ಯಾಂಡ್ ನ ರಾಜಾ ಮೆಣಸಿನಕಾಯಿಯನ್ನು ಲಂಡನ್ ಗೆ ಕಳುಹಿಸಲಾಗಿದೆ. ಇದೇ ರೀತಿ ಭಾಲಿಯಾ ಗೋಧಿಯ ಪ್ರಥಮ ಕಂತನ್ನು ಗುಜರಾತ್ ನಿಂದ ಕೀನ್ಯಾ ಮತ್ತು ಶ್ರೀಲಂಕಾಗೆ ರಫ್ತು ಮಾಡಲಾಗಿದೆ. ಅಂದರೆ ನೀವೀಗ ಬೇರೆ ದೇಶಗಳಿಗೆ ಹೋದಾಗ ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಹಿಂದಿಗಿಂತ ಅತಿ ಹೆಚ್ಚು ಕಾಣಸಿಗುತ್ತವೆ. 
ಸ್ನೇಹಿತರೆ, ಈ ಪಟ್ಟಿ ಬಹಳ ದೊಡ್ಡದಾಗಿದೆ. ಇದು ಎಷ್ಟು ದೊಡ್ಡದಾಗಿದೆಯೋ ಮೇಕ್ ಇನ್ ಇಂಡಿಯಾ ಶಕ್ತಿಯೂ ಅಷ್ಟೇ ಪ್ರಬಲವಾಗಿದೆ. ಬೃಹತ್ ಭಾರತದ ಸಾಮರ್ಥ್ಯವೂ ಅಷ್ಟೇ ಬಲವಾಗಿದೆ. ಅಲ್ಲದೆ ಸಾಮರ್ಥ್ಯದ ಆಧಾರ – ನಮ್ಮ ಕೃಷಿಕರು, ನಮ್ಮ ಕುಶಲಕರ್ಮಿಗಳು, ನಮ್ಮ ನೇಕಾರರು, ನಮ್ಮ ಇಂಜಿನಿಯರುಗಳು, ನಮ್ಮ ಉದ್ಯಮಿಗಳು, ನಮ್ಮ ಎಂ ಎಸ್ ಎಂ ಇ ಕ್ಷೇತ್ರ ಮತ್ತು ಅನೇಕ ಭಿನ್ನ ಭಿನ್ನ ವೃತ್ತಿಗಳಲ್ಲಿ ತೊಡಗಿರುವ ಸಾವಿರಾರು ಜನರು. ಇವರೆಲ್ಲರೂ ನಿಜವಾದ ಶಕ್ತಿಯಾಗಿದ್ದಾರೆ. ಇವರ ಪರಿಶ್ರಮದಿಂದಲೇ 400 ಶತಕೋಟಿ ಡಾಲರ್ ರಫ್ತಿನ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಅಲ್ಲದೆ ಭಾರತದ ಜನತೆಯ ಈ ಸಾಮರ್ಥ್ಯ ವಿಶ್ವದ ಮೂಲೆ ಮೂಲೆಗಳಿಗೆ ಮತ್ತು ಹೊಸ ಮಾರುಕಟ್ಟೆಗಳಿಗೆ ತಲುಪುತ್ತಿದೆ ಎಂಬುದು ನನಗೆ ಸಂತೋಷವನ್ನು ನೀಡುತ್ತದೆ. ಭಾರತದ ಪ್ರತಿಯೊಬ್ಬ ನಿವಾಸಿ ಸ್ಥಳೀಯ ವಸ್ತುಗಳಿಗಾಗಿ ಧ್ವನಿಯಾಗುತ್ತಾನೆಯೋ ಆಗ ಸ್ಥಳೀಯ ವಸ್ತುಗಳು ಜಾಗತಿಕ ಮಟ್ಟ ತಲುಪುವುದು ತಡವಾಗುವುದಿಲ್ಲ. ಬನ್ನಿ ಲೋಕಲ್ ಅನ್ನು ಗ್ಲೋಬಲ್ ಗೊಳಿಸೋಣ ಮತ್ತು ನಮ್ಮ ಉತ್ಪನ್ನಗಳ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸೋಣ. 
ಸ್ನೇಹಿತರೆ, ‘ನಮ್ಮ ಮನದ ಮಾತಿನ ಶ್ರೋತೃಗಳಿಗೆ ಸ್ಥಳೀಯ ಮಟ್ಟದಲ್ಲಿ ನಮ್ಮ ಲಘು ಉದ್ಯಮಿಗಳ ಸಫಲತೆ ನಮಗೆ ಹೆಮ್ಮೆ ತರಲಿದೆ ಎಂದು ಕೇಳಿ ಸಂತೋಷ ಎನಿಸುತ್ತದೆ’ ಏಕೆಂದರೆ ಇಂದು ನಮ್ಮ  ಲಘು ಉದ್ಯಮಿಗಳು ಸರ್ಕಾರದ              ಇ-ಮಾರುಕಟ್ಟೆ ಅಂದರೆ ಜಿ ಇ ಎಂ ಮೂಲಕ ದೊಡ್ಡ ಮಟ್ಟದ ಪಾಲುದಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನದ ಮೂಲಕ ಬಹಳ ಪಾರದರ್ಶಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಜೆಮ್ ಪೋರ್ಟಲ್ ಮೂಲಕ ಸರ್ಕಾರ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸರಕನ್ನು ಖರೀದಿಸಿದೆ. ದೇಶದ ಮೂಲೆಮೂಲೆಗಳಿಂದ ಸುಮಾರು 1 ಲಕ್ಷ 25 ಸಾವಿರ ಕಿರು ಉದ್ಯಮಿಗಳು ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ದೊಡ್ಡ ಕಂಪನಿಗಳು ಮಾತ್ರ ಸರ್ಕಾರಕ್ಕೆ ತಮ್ಮ ಸರಕನ್ನು ಮಾರಾಟ ಮಾಡಬಹುದಾದಂತಹ ಒಂದು ಕಾಲವಿತ್ತು. ಆದರೆ ಈಗ ದೇಶ ಬದಲಾಗುತ್ತಿದೆ. ಹಳೆಯ ವ್ಯವಸ್ಥೆಯೂ ಬದಲಾಗಿದೆ. ಈಗ ಸಣ್ಣ ಪುಟ್ಟ ವ್ಯಾಪಾರಿಗಳು ಜೆಮ್ ಪೋರ್ಟಲ್ ಮೂಲಕ ಸರ್ಕಾರಕ್ಕೆ ತಮ್ಮ ಸರಕನ್ನು ಮಾರಾಟ ಮಾಡಬಹುದು – ಇದೇ ನವಭಾರತ. ಇದು ಕೇವಲ ದೊಡ್ಡ ದೊಡ್ಡ ಕನಸುಗಳನ್ನು ಕಾಣುವಂತೆ ಮಾಡುವುದಿಲ್ಲ  ಹೊರತಾಗಿ ಹಿಂದೆ ಯಾರೂ ತಲುಪದಂತಹ ಗುರಿ ತಲುಪುವಂತೆ ಪ್ರೋತ್ಸಾಹಿಸುತ್ತದೆ. ಇದೇ ಸಾಹಸದ ಹಿನ್ನಲೆಯಲ್ಲಿ ನಾವೆಲ್ಲ ಭಾರತೀಯರೂ ಒಗ್ಗೂಡಿ ಸ್ವಾವಲಂಬಿ ಭಾರತದ ಕನಸನ್ನು ಖಂಡಿತ ಪೂರ್ತಿಗೊಳಿಸುತ್ತೇವೆ. 
ನನ್ನ ಪ್ರಿಯ ದೇಶಬಾಂಧವರೆ, ಇತ್ತೀಚೆಗೆ ಜರುಗಿದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀವು ಬಾಬಾ ಶಿವಾನಂದ ಅವರನ್ನು ಖಂಡಿತ ನೋಡಿರಬಹುದು. 126 ವರ್ಷ ವಯೋಮಾನದ ಹಿರಿಯರ ಹುಮ್ಮಸ್ಸನ್ನು ಕಂಡು ನನ್ನಂತೆ ಎಲ್ಲರೂ ಆಶ್ಚರ್ಯಚಕಿತರಾಗಿರಬಹುದು. ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ನಂದಿ ಮುದ್ರೆಯಲ್ಲಿ ನಮಸ್ಕರಿಸಿದ್ದನ್ನು ನಾನು ನೋಡಿದೆ. ನಾನು ಕೂಡಾ ತಲೆ ಬಾಗಿ  ಬಾಬಾ ಶಿವಾನಂದರಿಗೆ ನಮಸ್ಕರಿಸಿದೆ. 126 ರ ವಯಸ್ಸು ಮತ್ತು ಬಾಬಾ ಶಿವಾನಂದರ ದೇಹದಾರ್ಢ್ಯತೆ ಇಂದು ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿವೆ. ನಾನು ಸಾಮಾಜಿಕ ಜಾಲತಾಣದಲ್ಲಿ ಹಲವರ ವಿಡಿಯೋಗಳನ್ನು ನೋಡಿದೆ ಬಾಬಾ ಶಿವಾನಂದರು ತಮ್ಮ ಕಾಲು ಭಾಗದ ವಯೋಮಾನದವರಿಗಿಂತ ಸುದೃಢರಾಗಿದ್ದಾರೆ. ಬಾಬಾ ಶಿವಾನಂದರ ಜೀವನ ನಮಗೆಲ್ಲರಿಗೂ ಖಂಡಿತ ಪ್ರೇರಣಾದಾಯಕವಾಗಿದೆ. ಅವರ ದೀರ್ಘಾಯುಷ್ಯಕ್ಕೆ ನಾನು ಪ್ರಾರ್ಥಿಸುತ್ತೇನೆ. ಅವರಿಗೆ ಯೋಗದ ಬಗ್ಗೆ ವಿಶೇಷ ಒಲವಿದೆ ಮತ್ತು ಅವರು ಬಹಳ ಆರೋಗ್ಯವಂತ ಜೀವನ ನಡೆಸುತ್ತಾರೆ.           ಜೀವೇಮ ಶರದಃ ಶತಂ 
ನಮ್ಮ ಸಂಸ್ಕೃತಿಯಲ್ಲಿ ಎಲ್ಲರಿಗೆ ನೂರು ವರುಷಗಳ ಆರೋಗ್ಯಯುತ ಜೀವನದ ಹಾರೈಕೆಯನ್ನು ಮಾಡಲಾಗುತ್ತದೆ. ನಾವು ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತೇವೆ. ಇಂದು ಸಂಪೂರ್ಣ ವಿಶ್ವದಲ್ಲಿ ಆರೋಗ್ಯದ ಕುರಿತು – ಅದು ಯೋಗವಾಗಿರಲಿ ಅಥವಾ ಆಯುರ್ವೇದವಾಗಿರಲಿ ಇವುಗಳೆಡೆ ಒಲವು ಹೆಚ್ಚುತ್ತಿದೆ. ಕಳೆದ ವಾರ ಕತಾರ್ ನಲ್ಲಿ ಒಂದು ಯೋಗಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದನ್ನು ನೀವು ನೋಡಿರಬಹುದು. ಇದರಲ್ಲಿ 114 ದೇಶದ ನಾಗರಿಕರು ಪಾಲ್ಗೊಂಡು ಹೊಸ ವಿಶ್ವದಾಖಲೆಯನ್ನು ಬರೆದರು. ಇದೇ ರೀತಿ ಆಯುಷ್ ಉದ್ಯಮದ ಮಾರುಕಟ್ಟೆಯೂ ನಿರಂತರವಾಗಿ ವಿಸ್ತಾರಗೊಳ್ಳುತ್ತಿದೆ. 6 ವರ್ಷಗಳ ಹಿಂದೆ ಆಯುರ್ವೇದೀಯ ಔಷಧಿಗಳ ಮಾರುಕಟ್ಟೆ ಸುಮಾರು 22 ಸಾವಿರ ಕೋಟಿ ರೂಪಾಯಿಗಳಷ್ಟಿತ್ತು. ಇಂದು ಆಯುಷ್ ಉತ್ಪಾದನಾ ಉದ್ಯಮ ಸುಮಾರು 1 ಲಕ್ಷ 40 ಸಾವಿರ ಕೋಟಿ ರೂಪಾಯಿಗಳಷ್ಟಾಗಿದೆ.  ಅಂದರೆ ಈ ಕ್ಷೇತ್ರದಲ್ಲಿ ಅವಕಾಶಗಳು ನಿರಂತರವಾಗಿ ಹೆಚ್ಚುತ್ತಿವೆ. ಸ್ಟಾರ್ಟ್ ಅಪ್ ಲೋಕದಲ್ಲೂ ಆಯುಷ್ ಆಕರ್ಷಣೆಯ ಕೇಂದ್ರವಾಗುತ್ತಿದೆ. 
ಸ್ನೇಹಿತರೆ, ಆರೋಗ್ಯ ಕ್ಷೇತ್ರದ ಇನ್ನುಳಿದ ಸ್ಟಾರ್ಟ್ ಅಪ್ ಗಳ ಬಗ್ಗೆ ನಾನು ಹಿಂದೆಯೇ ಮಾತನಾಡಿದ್ದೇನೆ. ಆದರೆ ಈ ಬಾರಿ ಆಯುಷ್ ಸ್ಟಾರ್ಟ್ ಅಪ್ ಬಗ್ಗೆ ವಿಶೇಷವಾಗಿ ಮಾತನಾಡಲಿದ್ದೇನೆ. ಕಪಿವಾ ಎಂಬ ಒಂದು ಸ್ಟಾರ್ಟ್ ಅಪ್ ಇದೆ. ಇದರ ಹೆಸರಲ್ಲೇ ಇದರರ್ಥ ಅಡಗಿದೆ. ಇದರಲ್ಲಿ ಕ ಅಂದರೆ – ಕಫ, ಪಿ ಅಂದರೆ – ಪಿತ್ತ ಮತ್ತು ವಾ ಅಂದರೆ –ವಾತಾ. ಈ ಸ್ಟಾರ್ಟ್ ಅಪ್ ನಮ್ಮ ಮೂಲ ಪರಂಪರೆ ಅನುಸಾರ ಆರೋಗ್ಯಯುತ ಆಹಾರ ಸೇವನೆಯನ್ನು ಆಧರಿಸಿದೆ. ಮತ್ತೊಂದು ಸ್ಟಾರ್ಟ್ ಅಪ್ – ನಿರೋಗ್ ಸ್ಟ್ರೀಟ್ ಕೂಡ ಇದೆ. ಆಯುರ್ವೇದ ಹೆಲ್ತ್ ಕೇರ್ ಇಕೊಸಿಸ್ಟಂನಲ್ಲಿ ಇದೊಂದು ವಿಶಿಷ್ಟ ಉಪಕ್ರಮವಾಗಿದೆ. ಇದರ ತಂತ್ರಜ್ಞಾನ ಆಧಾರಿತ ವೇದಿಕೆ ವಿಶ್ವಾದ್ಯಂತದ ಆಯುರ್ವೇದ ತಜ್ಞರ ಸಂಪರ್ಕವನ್ನು ನೇರವಾಗಿ ಜನರಿಗೆ ಒದಗಿಸುತ್ತದೆ. 50 ಸಾವಿರಕ್ಕೂ ಹೆಚ್ಚು ತಜ್ಞರು ಇದರೊಂದಿಗೆ ಕೈಜೋಡಿಸಿದ್ದಾರೆ. ಇದೇ ರೀತಿ ಆತ್ರೇಯ ಇನ್ನೊವೇಶನ್ಸ್ ಒಂದು ಆರೋಗ್ಯ ರಕ್ಷಣಾ ತಂತ್ರಜ್ಞಾನವಾಗಿದೆ. ಇದು ಸಮಗ್ರ ಸ್ವಾಸ್ಥ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. 
ಇಕ್ಸೊರಿಯಲ್ ಕೇವಲ ಅಶ್ವಗಂಧದ ಉಪಯೋಗದ ಬಗ್ಗೆ ಅರಿವು ಮೂಡಿಸುವುದಲ್ಲದೆ ಅತ್ಯುತ್ತಮ ಗುಣಮಟ್ಟದ ಉತ್ಪಾದನಾ ಪ್ರಕ್ರಿಯೆಯಲ್ಲೂ ಬೃಹತ್ ಪ್ರಮಾಣದ ಹೂಡಿಕೆ ಮಾಡಿದೆ. ಕ್ಯೂರ್ ವೇದಾ ಎಂಬುದು ಗಿಡ ಮೂಲಿಕೆಗಳ ಆಧುನಿಕ ಸಂಶೋಧನೆ ಮತ್ತು ಪಾರಂಪರಿಕ ಜ್ಞಾನವನ್ನು ಮೇಳೈಸಿ  ಸಮಗ್ರ ಜೀವನಕ್ಕಾಗಿ ಪೂರಕ ಆಹಾರವನ್ನು ಸಿದ್ಧಗೊಳಿಸಿದೆ. 
ಸ್ನೇಹಿತರೆ, ಈಗ ನಾನು ಕೆಲವು ಹೆಸರುಗಳನ್ನು ಮಾತ್ರ ಹೆಸರಿಸಿದ್ದೇನೆ, ಈ ಪಟ್ಟಿ ತುಂಬಾ ದೊಡ್ಡದಾಗಿದೆ. ಇದು ಭಾರತದ ಯುವ ಉದ್ಯಮಿಗಳು ಮತ್ತು ಭಾರತದಲ್ಲಿಯ ಸಂಭಾವ್ಯಗಳ ಪ್ರತೀಕವಾಗಿದೆ. ಆರೋಗ್ಯ ಕ್ಷೇತ್ರದ ಸ್ಟಾರ್ಟ್ ಅಪ್ ಗಳು ಅದಲ್ಲೂ ವಿಶೇಷವಾಗಿ ಆಯುಷ್ ಸ್ಟಾರ್ಟ್ ಅಪ್ ಗಳನ್ನು ಒಂದು ವಿಷಯದ ಕುರಿತು ನಾನು ಆಗ್ರಹಿಸುತ್ತೇನೆ. ನೀವು ಆನ್ ಲೈನ್ ನಲ್ಲಿ ಯಾವುದೇ ಪೋರ್ಟಲ್ ಆರಂಭಿಸಿದರೂ ಯಾವುದೇ ವಿಷಯವಸ್ತುವನ್ನು ಸೃಷ್ಟಿಸಿದರೂ ಅದು ವಿಶ್ವ ಸಂಸ್ಥೆಯಿಂದ ಮಾನ್ಯತೆ ಪಡೆದ ಎಲ್ಲ ಭಾಷೆಗಳಲ್ಲು ಒದಗಿಸುವಂತೆ ಪ್ರಯತ್ನಿಸಿ. ವಿಶ್ವದಲ್ಲಿ ಇಂಗ್ಲೀಷ್ ನ್ನು ಅಷ್ಟಾಗಿ ಮಾತನಾಡದ ಅಥವಾ ಅರ್ಥಮಾಡಿಕೊಳ್ಳದ  ಬಹಳಷ್ಟು ಇಂಥ ದೇಶಗಳಿವೆ. ಆ ರಾಷ್ಟ್ರಗಳನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಉತ್ಪನ್ನಗಳ ಕುರಿತಾದ ಪ್ರಚಾರ ಮತ್ತು ಪ್ರಸಾರ ಮಾಡಿ. ಭಾರತದ ಆಯುಷ್ ಸ್ಟಾರ್ಟ್ ಅಪ್ ಗಳು ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ಬಹುಬೇಗ ವಿಶ್ವಾದ್ಯಂತ ಜನಪ್ರಿಯಗೊಳ್ಳಲಿವೆ ಎಂಬ ವಿಶ್ವಾಸ ನನಗಿದೆ. 
ಸ್ನೇಹಿತರೆ, ಆರೋಗ್ಯದ ನೇರ ಸಂಬಂಧ ಸ್ವಚ್ಛತೆಯೊಂದಿಗಿದೆ. ಮನದ ಮಾತಿನಲ್ಲಿ ನಾವು ಎಂದಿಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡವರು ಮಾಡಿದ ಪ್ರಯತ್ನಗಳ ಬಗ್ಗೆ ಖಂಡಿತ ಪ್ರಸ್ತಾಪಿಸುತ್ತೇವೆ. ಚಂದ್ರ ಕಿಶೋರ್ ಪಾಟೀಲ್ ಅವರು ಇಂಥ ಸ್ವಚ್ಛತಾ ಆಂದೋಲನಕಾರರಾಗಿದ್ದಾರೆ. ಇವರು ಮಹಾರಾಷ್ಟ್ರದ ನಾಸಿಕ್ ನಲ್ಲಿ ವಾಸವಾಗಿದ್ದಾರೆ.  ಚಂದ್ರ ಕಿಶೋರ್ ಅವರು ಸ್ವಚ್ಛತೆ ಬಗ್ಗೆ ಬಹಳ ದೃಡವಾದ ಸಂಕಲ್ಪ ಹೊಂದಿದ್ದಾರೆ. ಅವರು ಗೋದಾವರಿ ನದಿಯ ದಡದಲ್ಲಿ ನಿಂತು ನಿರಂತರವಾಗಿ ಜನರು ನದಿಯಲ್ಲಿ ಕಸ ಕಡ್ಡಿ ಎಸೆಯದಂತೆ ಮನವರಿಕೆ ಮಾಡಿಕೊಡುತ್ತಾರೆ. ಯಾರೇ ಇಂಥ ಕೆಲಸ ಮಾಡುತ್ತಿದ್ದರೂ ತಡೆಯುತ್ತಾರೆ. ಈ ಕೆಲಸದಲ್ಲಿ ಚಂದ್ರ ಕಿಶೋರ್ ತಮ್ಮ ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಾರೆ. ಸಂಜೆವರೆಗೆ ಅವರ ಬಳಿ ಜನರು ನದಿಯಲ್ಲಿ ಎಸೆಯಲು ತಂದಿರುವಂತಹ ವಸ್ತುಗಳ ರಾಶಿಯೇ ಸಿದ್ಧವಾಗುತ್ತದೆ. ಚಂದ್ರ ಕಿಶೋರ್ ಅವರ ಈ ಪ್ರಯತ್ನ ಅರಿವು ಮೂಡಿಸುತ್ತದೆ ಮತ್ತು ಪ್ರೇರಣಾದಾಯಕವೂ ಆಗಿದೆ. ಇದೇ ರೀತಿ ಮತ್ತೊಬ್ಬ ಸ್ವಚ್ಛಾಗ್ರಹಿ ಇದ್ದಾರೆ. ಒಡಿಶಾದ ಪುರಿಯ ರಾಹುಲ್ ಮಹಾರಾಣಾ. ರಾಹುಲ್ ಪ್ರತಿ ಭಾನುವಾರ ಬೆಳಿಗ್ಗೆಯೇ ಪವಿತ್ರ ತೀರ್ಥ ಸ್ಥಳಕ್ಕೆ ತೆರಳುತ್ತಾರೆ ಮತ್ತು ಅಲ್ಲಿಯ ಪ್ಲಾಸ್ಟಿಕ್ ಕಸವನ್ನು ಆಯುತ್ತಾರೆ. ಈಗಾಗಲೇ ಅವರು ನೂರಾರು ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಸ್ವಚ್ಛಗೊಳಿಸಿದ್ದಾರೆ. ಪುರಿಯ ರಾಹುಲ್ ಗಿರಲಿ ಅಥವಾ ನಾಸಿಕ್ ನ ಚಂದ್ರ ಕಿಶೋರ್  ಆಗಿರಲಿ ಇವರೆಲ್ಲ ನಮಗೆ ಸಾಕಷ್ಟು ಕಲಿಸುತ್ತಾರೆ.  ನಾಗರಿಕರಾಗಿ ನಾವು ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ. ಅದು ಸ್ವಚ್ಛತೆಯಾಗಿರಲಿ, ಪೋಷಣೆಯಾಗಿರಲಿ, ಲಸಿಕೆ ಹಾಕುವುದಾಗಿರಲಿ, ಈ ಎಲ್ಲ ಪ್ರಯತ್ನಗಳಿಂದ ಆರೋಗ್ಯವಾಗಿರಲು ಅನುಕೂಲವಾಗುತ್ತದೆ. 
ನನ್ನ ಪ್ರಿಯ ದೇಶಬಾಂಧವರೆ, ಬನ್ನಿ ಕೇರಳದ ಮುಪಟ್ಟಮ್ ಶ್ರೀ ನಾರಾಯಣನ್ ಅವರ ಬಗ್ಗೆ ಮಾತನಾಡೋಣ. ಅವರು ‘ಪಾಟ್ಸ್ ಫಾರ್ ಲೈಫ್’ ಎಂಬ ಯೋಜನೆಯೊಂದನ್ನು ಆರಂಭಿಸಿದ್ದಾರೆ. ನೀವು ಈ ಯೋಜನೆ ಬಗ್ಗೆ ತಿಳಿದರೆ ಎಂಥ ಅದ್ಭುತ ಕೆಲಸ ಎಂದುಕೊಳ್ಳುತ್ತೀರಿ    
ಸಂಗಾತಿಗಳೇ, ಮುಪಟ್ಟಮ್ ಶ್ರೀ ನಾರಾಯಣನ್ ಅವರು, ಬೇಸಿಗೆಯ ಕಾರಣದಿಂದ ಪಶು-ಪಕ್ಷಿಗಳಿಗೆ ನೀರಿನ ಅಭಾವ ಉಂಟಾಗದಿರಲಿ ಎಂದು ಮಣ್ಣಿನ ಮಡಕೆ ವಿತರಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಬೇಸಿಗೆಯಲ್ಲಿ ಪಶು-ಪಕ್ಷಿಗಳು ನೀರಿಗಾಗಿ ಎದುರಿಸುವ ತೊಂದರೆಯನ್ನು ನೋಡಿ ಅವರು ಸ್ವಯಂ ಸಮಸ್ಯೆಗೆ ಸಿಲುಕಿದಂತೆ ಚಿಂತಿತರಾಗುತ್ತಿದ್ದರು. ಬಳಿಕ, ಅವರು ತಾವೇ ಏಕೆ ಮಣ್ಣಿನಿಂದ ಮಾಡಿದ ಪಾತ್ರೆಯನ್ನು ವಿತರಿಸುವ ಕಾರ್ಯ ಶುರು ಮಾಡಬಾರದು ಎಂದು ಯೋಚಿಸಿದರು, ಆ ಮಡಕೆಗಳಲ್ಲಿ ಮತ್ತೊಬ್ಬರು ಕೇವಲ ನೀರು ತುಂಬಿಸುವ ಕೆಲಸ ಮಾಡಿದರೆ ಸಾಕು ಎಂದು ಯೋಚನೆ ಮಾಡಿದರು. ನಾರಾಯಣನ್ ಅವರಿಂದ ವಿತರಣೆಯಾದ ಮಣ್ಣಿನ ಮಡಕೆಗಳ ಸಂಖ್ಯೆ ಒಂದು ಲಕ್ಷದ ಗಡಿಯನ್ನು ದಾಟುತ್ತಿದೆ ಎಂದು ತಿಳಿದರೆ ನೀವು ಚಕಿತರಾಗುತ್ತೀರಿ.  ಅಲ್ಲದೆ, ಅವರು ತಮ್ಮ ಅಭಿಯಾನದ ಅಂಗವಾಗಿ ಒಂದು ಲಕ್ಷದನೇ ಮಡಕೆಯನ್ನು ಗಾಂಧೀಜಿ ಅವರಿಂದ ಸ್ಥಾಪಿತವಾಗಿರುವ ಸಾಬರಮತಿ ಆಶ್ರಮಕ್ಕೆ ದಾನ ಮಾಡುತ್ತಿದ್ದಾರೆ. ಇಂದು ಬೇಸಿಗೆ ಕಾಲವು ಹೆಜ್ಜೆಯಿಟ್ಟಿದೆ, ಈ ಸಮಯದಲ್ಲಿ ನಾರಾಯಣನ್ ಅವರ ಈ ಕಾರ್ಯ ನಮಗೆಲ್ಲರಿಗೂ ಪ್ರೇರಣೆ ನೀಡುತ್ತದೆ ಹಾಗೂ ನಾವೂ ಈ ಬೇಸಿಗೆಯಲ್ಲಿ ನಮ್ಮ ಪಶು-ಪಕ್ಷಿ ಮಿತ್ರರಿಗಾಗಿ ನೀರಿನ ವ್ಯವಸ್ಥೆಯನ್ನು ಮಾಡೋಣ.
ಸ್ನೇಹಿತರೇ, ನಾವು ನಮ್ಮ ಸಂಕಲ್ಪಗಳನ್ನು ಪುನರ್ ಸ್ವೀಕರಿಸೋಣ ಎಂದು ನಾನು ನಮ್ಮ ``ಮನದ ಮಾತು' ಕೇಳುಗರಿಗೂ ಆಗ್ರಹಿಸುತ್ತೇನೆ. ನೀರಿನ ಒಂದೊಂದು ಹನಿಯನ್ನೂ ರಕ್ಷಿಸಲು ಏನೆಲ್ಲ ಮಾಡಲು ಸಾಧ್ಯವೋ ಅವುಗಳೆಲ್ಲವನ್ನೂ ನಾವು ಅಗತ್ಯವಾಗಿ ಮಾಡಬೇಕು. ಇದರ ಹೊರತಾಗಿ, ನೀರಿನ ಮರುಬಳಕೆಯ ಕಡೆಗೂ ನಾವು ಅಷ್ಟೇ ಆದ್ಯತೆ ನೀಡಬೇಕಾಗಿದೆ. ಮನೆಯಲ್ಲಿ ಬಳಕೆ ಮಾಡಿದ ನೀರನ್ನು ಹೂಕುಂಡಗಳಿಗೆ ಬಳಸಲು ಬರುತ್ತದೆ, ಕೈತೋಟಗಳಿಗೂ ಬಳಸಬಹುದು. ಒಟ್ಟಿನಲ್ಲಿ ನೀರನ್ನು ಅಗತ್ಯವಾಗಿ ಮತ್ತೊಂದು ಬಾರಿ ಬಳಕೆ ಮಾಡಬೇಕಾಗಿದೆ. ಚಿಕ್ಕದಾದ ಇಂಥ ಪ್ರಯತ್ನದಿಂದ ತಾವು ತಮ್ಮ ಮನೆಗಳಲ್ಲಿ ಒಂದು ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಬಲ್ಲಿರಿ. ರಹೀಂ ದಾಸ್ ಅವರು ಶತಮಾನಗಳ ಹಿಂದೆಯೇ ಕೆಲವು ಉದ್ದೇಶಗಳನ್ನು ಹೇಳಿ ನಡೆದಿದ್ದಾರೆ, ಅದೇನೆಂದರೆ, ``ರಹೀಮನ ನೀರನ್ನು ಉಳಿಸಿಕೊಳ್ಳಿ. ನೀರಿಲ್ಲದಿದ್ದರೆ ಎಲ್ಲವೂ ಶೂನ್ಯ' ಎಂದು ಹೇಳಿದ್ದಾರೆ. ಮತ್ತು ನೀರನ್ನು ಉಳಿತಾಯ ಮಾಡುವ ಈ ಕೆಲಸದಲ್ಲಿ ನನಗೆ ಮಕ್ಕಳಿಂದಲೂ ಬಹಳ ನಿರೀಕ್ಷೆಯಿದೆ. ಸ್ವಚ್ಛತೆಯನ್ನು ಹೇಗೆ ನಮ್ಮ ಮಕ್ಕಳು ಆಂದೋಲನವನ್ನಾಗಿ ರೂಪಿಸಿದರೋ, ಅದೇ ರೀತಿ ``ಜಲ ಯೋಧ'ರಾಗಿ ನೀರನ್ನು ಉಳಿಸುವ ಕಾರ್ಯದಲ್ಲಿ ಅವರು ಸಹಾಯ ಮಾಡಬಲ್ಲರು. 
ಸಂಗಾತಿಗಳೇ, ನಮ್ಮ ದೇಶದಲ್ಲಿ ಜಲ ಸಂರಕ್ಷಣೆ, ಜಲಮೂಲಗಳ ಸುರಕ್ಷತೆಗಳೆಲ್ಲವೂ ಶತಮಾನಗಳಿಂದ ಸಮಾಜದ ಸ್ವಭಾವದ ಭಾಗವಾಗಿದೆ. ನನಗೆ ಸಂತಸವಿದೆ, ಏನೆಂದರೆ, ದೇಶದಲ್ಲಿ ಬಹಳಷ್ಟು ಜನರು ``ಜಲ ಸಂರಕ್ಷಣೆ'ಯನ್ನು ಜೀವನದ ಕಾರ್ಯಯೋಜನೆಯನ್ನಾಗಿ ಮಾಡಿದ್ದಾರೆ. ಚೆನ್ನೈನ ಒಬ್ಬರು ಸ್ನೇಹಿತರಿದ್ದಾರೆ ಅರುಣ್ ಕೃಷ್ಣಮೂರ್ತಿ ಎಂದು. ಅರುಣ್ ಅವರು ತಮ್ಮ ಪ್ರದೇಶಗಳಲ್ಲಿರುವ ಕೆರೆ-ಕೊಳಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಅವರು 150ಕ್ಕೂ ಹೆಚ್ಚು ಹೊಂಡ ಮತ್ತು ಕೆರೆಗಳ ಸ್ವಚ್ಛತೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು ಹಾಗೂ ಅವರು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 
ಇದೇ ರೀತಿ ಮಹಾರಾಷ್ಟ್ರದ ಒಬ್ಬ ಸ್ನೇಹಿತ ರೋಹನ್ ಕಾಳೆ ಇದ್ದಾರೆ. ರೋಹನ್ ಅವರು ಒಬ್ಬ ಮಾನವ ಸಂಪನ್ಮೂಲ ವೃತ್ತಿಯಲ್ಲಿದ್ದಾರೆ. ಅವರು ಮಹಾರಾಷ್ಟ್ರದ ನೂರಾರು ಸ್ಟೆಪ್ ವೆಲ್ ಅರ್ಥಾತ್ ಮೆಟ್ಟಿಲುಗಳುಳ್ಳ ಹಳೆಯ ಬಾವಿಗಳ ಸಂರಕ್ಷಣೆಯ ಆಂದೋಲನ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವು ಬಾವಿಗಳಂತೂ ನೂರಾರು ವರ್ಷಗಳಷ್ಟು ಹಿಂದಿನವು. ಅಲ್ಲದೆ ಅವು ನಮ್ಮ ಪರಂಪರೆಯ ಭಾಗವಾಗಿವೆ. ಸಿಕಂದರಾಬಾದ್ ನಲ್ಲಿ ಬನ್ಸಿಲಾಲ್ ಪೇಟೆಯಲ್ಲಿ ಒಂದು ಇದೇ ರೀತಿಯ ಮೆಟ್ಟಿಲುಗಳ ಬಾವಿಯಿದೆ. ವರ್ಷಗಳ ಕಾಲ ಉಪೇಕ್ಷೆ ಮಾಡಿದ್ದರಿಂದ ಈ ಬಾವಿ ಮಣ್ಣು ಮತ್ತು ಕಸದಿಂದ ತುಂಬಿ ಹೋಗಿತ್ತು. ಆದರೆ, ಅಲ್ಲಿ ಈಗ ಈ ಬಾವಿಯ ಪುನರುಜ್ಜೀವಗೊಳಿಸುವ ಅಭಿಯಾನ ಜನರ ಸಹಯೋಗದೊಂದಿಗೆ ಆರಂಭವಾಗಿದೆ. 

ಸ್ನೇಹಿತರೇ, ನಾನು ಸದಾ ನೀರಿನ ಅಭಾವ ಇರುವ ರಾಜ್ಯದಿಂದ ಬಂದಿದ್ದೇನೆ. ಗುಜರಾತಿನಲ್ಲಿ ಈ ರೀತಿಯ ಮೆಟ್ಟಿಲುಗಳ ಬಾವಿಗೆ ವಾವ್ ಎಂದು ಕರೆಯುತ್ತಾರೆ. ಗುಜರಾತ್ ನಂತಹ ರಾಜ್ಯದಲ್ಲಿ ವಾವ್ ಗಳು ಮಹತ್ವದ ಪಾತ್ರ ವಹಿಸಿವೆ. ಈ ಬಾವಿಗಳು ಅಥವಾ ಮೆಟ್ಟಿಲುಗಳನ್ನು ಹೊಂದಿರುವ ಕೊಳಗಳ ರಕ್ಷಣೆಯಲ್ಲಿ ಜಲ ಮಂದಿರ ಯೋಜನೆಯು ದೊಡ್ಡ ಪಾತ್ರ ನಿಭಾಯಿಸಿದೆ. ಇಡೀ ಗುಜರಾತಿನಲ್ಲಿ ಅನೇಕ ಮೆಟ್ಟಿಲು ಕೊಳಗಳನ್ನು ಪುನರುಜ್ಜೀವಗೊಳಿಸಲಾಗಿದೆ. ಇದರಿಂದ ಈ ಪ್ರದೇಶಗಳಲ್ಲಿ ಅಂತರ್ಜಲ ಸುಧಾರಿಸಲು ಸಹ ಸಾಕಷ್ಟು ಸಹಾಯವಾಗಿದೆ. ಇಂಥದ್ದೇ ಅಭಿಯಾನವನ್ನು ತಾವೂ ಸಹ ಸ್ಥಳೀಯ ಮಟ್ಟದಲ್ಲಿ ನಡೆಸಬಹುದಾಗಿದೆ. ಚೆಕ್ ಡ್ಯಾಂ ಗಳನ್ನು ನಿರ್ಮಿಸುವುದಾಗಲೀ ಮಳೆ ನೀರು ಸಂಗ್ರಹ ವ್ಯವಸ್ಥೆಯಾಗಲೀ ಇವುಗಳಲ್ಲಿ ವ್ಯಕ್ತಿಗತ ಪ್ರಯತ್ನ ಕೂಡ ಮುಖ್ಯವಾಗಿದೆ. ಮತ್ತು ಸಾಮೂಹಿಕ ಪ್ರಯತ್ನದ ಅಗತ್ಯವೂ ಇದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ ನಮ್ಮ ದೇಶದ ಪ್ರತಿ ಜಿಲ್ಲೆಯಲ್ಲಿ ಕಡಿಮೆ ಎಂದರೂ 75 ಅಮೃತ ಸರೋವರಗಳನ್ನು ನಿರ್ಮಿಸಬಹುದಾಗಿದೆ. ಕೆಲವು ಪುರಾತನ ಕೆರೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಕೆಲವು ಹೊಸ ಕೆರೆಗಳನ್ನು ನಿರ್ಮಿಸಬಹುದಾಗಿದೆ. ತಾವು ಈ ನಿಟ್ಟಿನಲ್ಲಿ ಅಗತ್ಯವಾಗಿ ಏನಾದರೊಂದು ಪ್ರಯತ್ನ ಮಾಡುತ್ತೀರಿ ಎನ್ನುವ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಬಹು ಭಾಷೆಗಳು, ಉಪಭಾಷೆಗಳ ಸಂದೇಶ ನನಗೆ ಲಭ್ಯವಾಗುತ್ತದೆ, ಇದು ``ಮನದ ಮಾತು' ಕಾರ್ಯಕ್ರಮದ ಸೌಂದರ್ಯವೂ ಆಗಿದೆ. ಹಲವು ಜನರು ಆಡಿಯೋ ಸಂದೇಶವನ್ನು ಸಹ ಕಳುಹಿಸುತ್ತಾರೆ. ಭಾರತದ ಸಂಸ್ಕೃತಿ, ನಮ್ಮ ಭಾಷೆಗಳು, ನಮ್ಮ ಉಪಭಾಷೆಗಳು, ನಮ್ಮ ಜೀವನ ರೀತಿ, ವಿಭಿನ್ನ ರೀತಿಯ ಆಹಾರ ಸೇವನೆ ಈ ಎಲ್ಲ ವೈವಿಧ್ಯಗಳು ನಮ್ಮ ಬಹುದೊಡ್ಡ ಶಕ್ತಿಯಾಗಿವೆ. ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗಿನ ಈ ವೈವಿಧ್ಯ ಭಾರತವನ್ನು ಏಕತೆಯಿಂದ ರೂಪಿಸುತ್ತದೆ. ಏಕ ಭಾರತ-ಶ್ರೇಷ್ಠ ಭಾರತವನ್ನಾಗಿ ಮಾಡುತ್ತದೆ. ಇದರಲ್ಲಿಯೂ ನಮ್ಮ ಐತಿಹಾಸಿಕ ಸ್ಥಳಗಳು ಮತ್ತು ಪೌರಾಣಿಕ ಕಥೆಗಳು ಎರಡರದ್ದೂ ಬಹಳ ಮುಖ್ಯವಾದ ಕೊಡುಗೆಯಿದೆ. ನಾನು ಈಗ ತಮ್ಮ ಬಳಿ ಈ ಮಾತನ್ನು ಏಕೆ ಹೇಳುತ್ತಿರುವೆ ಎಂದು ತಾವು ಯೋಚಿಸುತ್ತಿರಬಹುದು. ಇದರ ಕಾರಣವೆಂದರೆ, ಮಾಧವಪುರ ಮೇಳ. ಮಾಧವಪುರ ಮೇಳ ಎಲ್ಲಿ ನಡೆಯುತ್ತದೆ, ಯಾಕಾಗಿ ನಡೆಯುತ್ತದೆ, ಇದು ಹೇಗೆ ಭಾರತದ ವಿವಿಧತೆಯೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮನದ ಮಾತು ಶ್ರೋತೃಗಳಿಗೆ ತುಂಬ ಆಸಕ್ತಿದಾಯಕ ಎನಿಸಬಹುದು.
ಸ್ನೇಹಿತರೇ, ಮಾಧವಪುರ ಮೇಳ ಗುಜರಾತಿನ ಪೋರ್ ಬಂದರ್ ನ ಸಮುದ್ರದ ಬಳಿ ಇರುವ ಮಾಧವಪುರ ಗ್ರಾಮದಲ್ಲಿ ಜರುಗುತ್ತದೆ. ಆದರೆ, ಇದಕ್ಕೆ ಹಿಂದುಸ್ತಾನದ ಪೂರ್ವ ಭಾಗದಿಂದಲೂ ಸಂಬಂಧವಿದೆ. ಇದು ಹೇಗೆ ಸಾಧ್ಯ ಎಂದು ತಾವು ಯೋಚಿಸುತ್ತಿರಬಹುದು. ಇದಕ್ಕೆ ಉತ್ತರ ಕೂಡ ಒಂದು ಪೌರಾಣಿಕ ಕಥೆಯಿಂದಲೇ ದೊರೆಯುತ್ತದೆ. ಸಾವಿರಾರು ವರ್ಷಗಳ ಮೊದಲು ಭಗವಾನ್ ಶ್ರೀ ಕೃಷ್ಣನ ಮದುವೆ ಈಶಾನ್ಯ ಭಾಗದ ರಾಜಕುಮಾರಿ ರುಕ್ಮಿಣಿಯೊಂದಿಗೆ ನಡೆದಿತ್ತು ಎಂದು ಹೇಳಲಾಗುತ್ತದೆ. ಈ ಮದುವೆ ಪೋರಬಂದರಿನ ಮಾಧವಪುರದಲ್ಲಿ ಸಂಪನ್ನಗೊಂಡಿತ್ತು ಹಾಗೂ ಅದೇ ವಿವಾಹದ ಪ್ರತೀಕದ ರೂಪದಲ್ಲಿ ಇಂದಿಗೂ ಅಲ್ಲಿ ಮಾಧವಪುರ ಮೇಳವನ್ನು ಆಯೋಜಿಸಲಾಗುತ್ತದೆ. ಪೂರ್ವ ಮತ್ತು ಪಶ್ಚಿಮದ ಈ ಆಳವಾದ ಸಂಬಂಧ ನಮ್ಮ ಪರಂಪರೆಯಾಗಿದೆ. ಸಮಯದ ಜತೆಜತೆಗೇ ಈಗ ಜನರ ಪ್ರಯತ್ನದಿಂದ ಮಾಧವಪುರ ಮೇಳದಲ್ಲಿ ಹೊಸ ಹೊಸ ಚಟುವಟಿಕೆಗಳೂ ಜೋಡಿಸಲ್ಪಟ್ಟಿವೆ. ನಮ್ಮ ಈ ಭಾಗದಲ್ಲಿ ಕನ್ಯೆಯ ಕಡೆಯವರನ್ನು ಘರಾತಿ ಎಂದು ಕರೆಯಲಾಗುತ್ತದೆ. ಹಾಗೂ ಈ ಮೇಳಕ್ಕೆ ಈಗ ಈಶಾನ್ಯ ಪ್ರದೇಶದ ಬಹಳಷ್ಟು ಘರಾತಿಗಳೂ ಬರಲು ಆರಂಭಿಸಿದ್ದಾರೆ. ಒಂದು ವಾರ ಕಾಲ ನಡೆಯುವ ಮಾಧವಪುರ ಮೇಳಕ್ಕೆ ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಕಲಾವಿದರು ಬಂದು ತಲುಪುತ್ತಾರೆ. ಕರಕುಶಲ ಕಲೆಗೆ ಸಂಬಂಧಿಸಿದ ಕಲಾವಿದರು ಆಗಮಿಸುತ್ತಾರೆ. ಮತ್ತು ಈ ಮೇಳದ ಹೊಳಪು ನಾಲ್ಕು ಪಟ್ಟು ವೃದ್ಧಿಸುತ್ತದೆ. ಒಂದು ವಾರ ನಡೆಯುವ, ಭಾರತದ ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಗಳ ಸಂಗಮವಾಗಿರುವ ಈ ಮಾಧವಪುರ ಮೇಳ ಏಕ ಭಾರತ-ಶ್ರೇಷ್ಠ ಭಾರತ ಪರಿಕಲ್ಪನೆಯ ಬಹಳ ಸುಂದರ ಉದಾಹರಣೆಯಾಗಿ ಗೋಚರಿಸುತ್ತದೆ. ತಾವೂ ಸಹ ಈ ಮೇಳದ ಕುರಿತು ಓದಿ ಮತ್ತು ತಿಳಿದುಕೊಳ್ಳಿ ಎಂದು ನಾನು ತಮ್ಮಲ್ಲಿ ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಈಗ ಜನರ ಸಹಭಾಗಿತ್ವದೊಂದಿಗೆ ಹೊಸ ಮಾದರಿಯಾಗಿ  ನಿಂತಿದೆ. ಕೆಲವು ದಿನಗಳ ಮೊದಲು ಮಾರ್ಚ್ ೨೩ರಂದು ಹುತಾತ್ಮರ ದಿನದಂದು ದೇಶದ ವಿವಿಧ ಭಾಗಗಳಲ್ಲಿ ಅನೇಕ ಕಾರ್ಯಕ್ರಮಗಳು ಜರುಗಿದವು. ದೇಶದಲ್ಲಿ ಜನರು ತಮ್ಮ ಸ್ವಾತಂತ್ರ ಹೋರಾಟದ ನಾಯಕ-ನಾಯಕಿಯರನ್ನು ಸ್ಮರಿಸಿಕೊಂಡರು, ಶ್ರದ್ಧಾಪೂರ್ವಕವಾಗಿ ನೆನಪಿಸಿಕೊಂಡರು. ಇದೇ ದಿನ ನನಗೆ ಕೋಲ್ಕತದಲ್ಲಿ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಬಿಪ್ಲೋಬಿ ಭಾರತ ಗ್ಯಾಲರಿಯನ್ನು ಲೋಕಾರ್ಪಣೆಗೊಳಿಸುವ ಅವಕಾಶ ದೊರೆತಿತ್ತು. ಭಾರತದ ವೀರ ಕ್ರಾಂತಿಕಾರಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇದು ನಮ್ಮ ಅತ್ಯಂತ ಅನನ್ಯವಾಗಿರುವ ಗ್ಯಾಲರಿಯಾಗಿದೆ. ಯಾವಾಗಲಾದರೂ ಅವಕಾಶ ಸಿಕ್ಕಾಗ ಇದನ್ನು ವೀಕ್ಷಿಸಲು ತಾವು ಅಗತ್ಯವಾಗಿ ಹೋಗಿ. ಸ್ನೇಹಿತರೇ, ಏಪ್ರಿಲ್ ತಿಂಗಳಲ್ಲಿ ನಾವು ಇಬ್ಬರು ಶ್ರೇಷ್ಠ ಮಹನೀಯರ ಜಯಂತಿಯನ್ನು ಆಚರಿಸುತ್ತೇವೆ. ಇವರಿಬ್ಬರೂ ಭಾರತೀಯ ಸಮಾಜದ ಮೇಲೆ ತಮ್ಮ ಆಳವಾದ ಪ್ರಭಾವ ಬೀರಿದ್ದಾರೆ. ಈ ಶ್ರೇಷ್ಠ ಮಹನೀಯರೆಂದರೆ ಮಹಾತ್ಮಾ ಫುಲೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್. ಮಹಾತ್ಮಾ ಫುಲೆ ಅವರ ಜಯಂತಿಯನ್ನು ಏಪ್ರಿಲ್ ೧೧ರಂದು ಹಾಗೂ ಬಾಬಾ ಸಾಹೇಬ್ ಅವರ ಜಯಂತಿಯನ್ನು ಏಪ್ರಿಲ್ ೧೪ರಂದು ಆಚರಿಸುತ್ತೇವೆ. ಈ ಇಬ್ಬರೂ ಮಹಾಪುರುಷರು ಭೇದಭಾವ ಹಾಗೂ ಅಸಮಾನತೆಯ ವಿರುದ್ಧ ಬಹುದೊಡ್ಡ ಹೋರಾಟ ಮಾಡಿದರು. ಮಹಾತ್ಮಾ ಫುಲೆ ಅವರು ಇದರ ಅಂಗವಾಗಿ ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ಹೆಣ್ಣು ಮಗು ಹತ್ಯೆಯ ವಿರುದ್ಧ ದನಿ ಎತ್ತಿದರು. ಅವರು ನೀರಿನ ಸಮಸ್ಯೆ ನಿವಾರಣೆಗಾಗಿಯೂ ಸಹ ಮಹತ್ವದ ಅಭಿಯಾನವನ್ನು ನಡೆಸಿದರು.
ಸ್ನೇಹಿತರೇ, ಮಹಾತ್ಮಾ ಫುಲೆ ಅವರ ಕುರಿತ ಈ ಚರ್ಚೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಉಲ್ಲೇಖವೂ ಅಷ್ಟೇ ಮುಖ್ಯವಾಗಿದೆ. ಸಾವಿತ್ರಿಬಾಯಿ ಫುಲೆ ಅವರು ಹಲವಾರು ಸಾಮಾಜಿಕ ಸಂಸ್ಥೆಗಳನ್ನು ಸ್ಥಾಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದರು. ಒಬ್ಬ ಶಿಕ್ಷಕಿ ಹಾಗೂ ಒಬ್ಬ ಸಮಾಜ ಸುಧಾರಕರ ರೂಪದಲ್ಲಿ ಅವರಿಬ್ಬರು ಸಮಾಜದಲ್ಲಿ ಅರಿವನ್ನು ಮೂಡಿಸಿದರು ಹಾಗೂ ಅದರ ಸ್ಥೈರ್ಯವನ್ನೂ ಹೆಚ್ಚಿಸಿದರು. ಇಬ್ಬರೂ ಜತೆ ಸೇರಿ ಸತ್ಯಶೋಧಕ ಸಮಾಜದ ಸ್ಥಾಪನೆ ಮಾಡಿದರು. ಜನರ ಸಶಕ್ತೀಕರಣಕ್ಕಾಗಿ ಪ್ರಯತ್ನಿಸಿದರು. ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾರ್ಯಗಳಲ್ಲಿ ಸಹ ಮಾಹಾತ್ಮಾ ಫುಲೆ ಅವರ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಯಾವುದೇ ಸಮಾಜದ ಅಭಿವೃದ್ಧಿಯ ಮೌಲ್ಯಮಾಪನವನ್ನು ಆ ಸಮಾಜದ ಮಹಿಳೆಯರ ಸ್ಥಿತಿಗತಿಯನ್ನು ನೋಡಿ ಮಾಡಬಹುದು ಎಂದು ಬಾಬಾಸಾಹೇಬ್  ಹೇಳುತ್ತಿದ್ದರು. ಮಹಾತ್ಮಾ ಫುಲೆ, ಸಾವಿತ್ರಿಬಾಯಿ ಫುಲೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದಿಂದ ಪ್ರೇರಣೆ ಪಡೆಯುತ್ತ, ನಿಮ್ಮ ಹೆಣ್ಣುಮಕ್ಕಳಿಗೆ ಅಗತ್ಯವಾಗಿ ಶಿಕ್ಷಣ ನೀಡಿ ಎಂದು ಎಲ್ಲ ತಾಯಿ-ತಂದೆಯರು ಮತ್ತು ಪೋಷಕರಲ್ಲಿ ನಾನು ಮನವಿ ಮಾಡುತ್ತೇನೆ. ಶಾಲೆಯಲ್ಲಿ ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಿಸಲೆಂದು ಕೆಲವು ದಿನಗಳ ಮೊದಲು ಕನ್ಯಾ ಶಿಕ್ಷಾ ಪ್ರವೇಶ ಉತ್ಸವ ಎನ್ನುವ ಕಾರ್ಯಕ್ರಮವನ್ನು ಆರಂಭ ಮಾಡಲಾಗಿದೆ. ಆ ಮೂಲಕ, ಒಂದೊಮ್ಮೆ ಹೆಣ್ಣುಮಕ್ಕಳ ಶಿಕ್ಷಣ ಯಾವುದೇ ಕಾರಣದಿಂದ ಸ್ಥಗಿತವಾಗಿದ್ದರೂ ಅವರನ್ನು ಮತ್ತೊಮ್ಮೆ ಶಾಲೆಗೆ ಕರೆತರಲು ಆದ್ಯತೆ ನೀಡಲಾಗುತ್ತಿದೆ.  
ಸ್ನೇಹಿತರೇ, ಬಾಬಾ ಸಾಹೇಬ್ ಅವರೊಂದಿಗೆ ಗುರುತಿಸಲಾಗುವ ಐದು ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರಿಗೂ ಸೌಭಾಗ್ಯದ ವಿಚಾರವಾಗಿದೆ. ಅವರ ಜನ್ಮಸ್ಥಳ ಮಹೂ ಇರಲಿ, ಮುಂಬೈನಲ್ಲಿರುವ ಚೈತ್ಯಭೂಮಿಯಾಗಲಿ, ಲಂಡನ್ ನಲ್ಲಿರುವ ಅವರ ನಿವಾಸವಾಗಲೀ, ನಾಗಪುರದ ದೀಕ್ಷಾ ಸ್ಥಳವಾಗಲಿ ಅಥವಾ ದೆಹಲಿಯಲ್ಲಿರುವ ಬಾಬಾಸಾಹೇಬ್ ಅವರ ಮಹಾ ಪರಿನಿರ್ವಾಣ ಸ್ಥಳವಾಗಿರಲಿ. ನನಗೆ ಎಲ್ಲ ಪ್ರದೇಶಗಳಿಗೂ, ಎಲ್ಲ ಕ್ಷೇತ್ರಗಳಿಗೂ ಭೇಟಿ ನೀಡುವ ಸೌಭಾಗ್ಯ ದೊರೆತಿದೆ. ಮಹಾತ್ಮಾ ಫುಲೆ, ಸಾವಿತ್ರಿಬಾಯಿ ಫುಲೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಗುರುತಿಸಲಾಗುವ ಸ್ಥಳಗಳ ದರ್ಶನವನ್ನು ಖಂಡಿತವಾಗಿ ಮಾಡಿ ಎಂದು ನಾನು ``ಮನದ ಮಾತು' ಕೇಳುಗರನ್ನು ಆಗ್ರಹಿಸುತ್ತೇನೆ. ತಮಗೆ ಅಲ್ಲಿ ಬಹಳಷ್ಟು ಕಲಿಯಲು ಸಿಗುತ್ತದೆ.  
ನನ್ನ ಪ್ರೀತಿಯ ದೇಶವಾಸಿಗಳೇ, ``ಮನದ ಮಾತು' ಕಾರ್ಯಕ್ರಮದಲ್ಲಿ ಈ ಬಾರಿ ಕೂಡ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಮುಂದಿನ ತಿಂಗಳಲ್ಲಿ ಅನೇಕ ಉತ್ಸವ, ಹಬ್ಬಗಳು ಬರುತ್ತಿವೆ. ಕೆಲವೇ ದಿನಗಳ ಮಾತು, ನವರಾತ್ರಿ ಹತ್ತಿರವಾಗುತ್ತಿದೆ. ನವರಾತ್ರಿಯಲ್ಲಿ ನಾವು ವ್ರತ, ಉಪವಾಸ, ಶಕ್ತಿಯ ಸಾಧನೆಗಳನ್ನು ಮಾಡುತ್ತೇವೆ. ಶಕ್ತಿಯ ಪೂಜೆಯನ್ನು ಮಾಡುತ್ತೇವೆ. ಅಂದರೆ, ನಮ್ಮ ಪರಂಪರೆಗಳು ನಮಗೆ ಸಂತೋಷವನ್ನೂ ನೀಡುತ್ತವೆ ಹಾಗೂ ಸಂಯಮವನ್ನೂ ಕಲಿಸುತ್ತವೆ. ಸಂಯಮ ಮತ್ತು ತಪಗಳು ನಮಗೆ ಹಬ್ಬಗಳೂ  ಹೌದು. ಹೀಗಾಗಿಯೇ ನವರಾತ್ರಿಯು ಎಂದಿನಿಂದಲೂ ನಮ್ಮೆಲ್ಲರಿಗೂ ಬಹಳ ವಿಶೇಷವಾಗಿದೆ. ನವರಾತ್ರಿಯ ಮೊದಲ ದಿನವೇ ನೂತನ ವರ್ಷಾರಂಭವಾದ ``ಗುಡಿ ಪಡ್ವಾ' ಹಬ್ಬವೂ ಇದೆ. ಏಪ್ರಿಲ್ ನಲ್ಲಿಯೇ ಈಸ್ಟರ್ ಹಬ್ಬವೂ ಬರುತ್ತದೆ ಹಾಗೂ ರಮ್ ಜಾನಿನ ಪವಿತ್ರ ದಿನವೂ ಆರಂಭವಾಗುತ್ತದೆ. ತಾವು ಎಲ್ಲ ಜತೆಗೂಡಿ ತಮ್ಮ ಹಬ್ಬವನ್ನು ಆಚರಿಸಿ. ಭಾರತದ ವೈವಿಧ್ಯವನ್ನು ಸಶಕ್ತಗೊಳಿಸಿ. ಎಲ್ಲರದ್ದೂ ಇದೇ ಆಶಯವಾಗಿದೆ. ಈ ಬಾರಿಯ ``ಮನದ ಕಾರ್ಯಕ್ರಮದಲ್ಲಿ ಇಷ್ಟೇ ವಿಚಾರಗಳು. ಮುಂದಿನ ತಿಂಗಳು ತಮ್ಮೊಂದಿಗೆ ಹೊಸ ವಿಷಯಗಳೊಂದಿಗೆ ಪುನಃ ಭೇಟಿ ಆಗುತ್ತೇನೆ.

ಅನಂತ ಧನ್ಯವಾದ.
 

****


(Release ID: 1810370) Visitor Counter : 281