ಉಪರಾಷ್ಟ್ರಪತಿಗಳ ಕಾರ್ಯಾಲಯ

ಸಸ್ಟೈನಬಲ್‌ ಡೆವೆಲಪ್‌ಮೆಂಟ್‌ ಗೋಲ್ಸ್ (ಎಸ್‌ ಡಿ ಜಿ) - ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಶಿಕ್ಷಣ ಸಂಸ್ಥೆಗಳು ದೊಡ್ಡ ಪಾತ್ರ ವಹಿಸಬೇಕು: ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು


ಎಸ್ ಡಿ ಜಿ ಗಳನ್ನು ಸಾಧಿಸಲು ಬಡತನ ಮತ್ತು ಅನಕ್ಷರತೆ ನಿವಾರಣೆಯಾಗುವ ಅಗತ್ಯವಿದೆ: ಉಪರಾಷ್ಟ್ರಪತಿ

ಎನ್ ಇ ಪಿ- ನ್ಯಾಷನಲ್‌ ಎಜುಕೇಷನ್‌ ಪಾಲಿಸಿ – ರಾಷ್ಟ್ರೀಯ ಶಿಕ್ಷಣ ನೀತಿಯ ಸಮರ್ಥ ಅನುಷ್ಠಾನ ಎಸ್ ಡಿ ಜಿ ಕಾರ್ಯಸೂಚಿಯ ಸಾಧನೆಗೆ ಸಹಾಯಕ : ಉಪರಾಷ್ಟ್ರಪತಿ

ಭಾರತದ ವಿಶ್ವವಿದ್ಯಾನಿಲಯಗಳು ಜಾಗತಿಕ 10 ಅಗ್ರ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯಬೇಕು: ಉಪರಾಷ್ಟ್ರಪತಿ

ಶೈಕ್ಷಣಿಕ ಉತ್ಕೃಷ್ಟತೆಯ ಉನ್ನತ ಗುಣಮಟ್ಟವನ್ನು ಹೊಂದುವಂತೆ ವಿಶ್ವವಿದ್ಯಾಲಯಗಳಿಗೆ ಉಪರಾಷ್ಟ್ರಪತಿ ಕರೆ

ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ವಾರ್ಷಿಕ ಸಭೆಯ ವರ್ಚುವಲ್ ಉದ್ಘಾಟನೆ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ

Posted On: 23 MAR 2022 11:17AM by PIB Bengaluru

ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಗಳನ್ನು ಸಾಧಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ನಿರ್ಣಾಯಕವಾದುದು ಮತ್ತು ಈ ನಿಟ್ಟಿನಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ದೊಡ್ಡ ಪಾತ್ರವನ್ನು ವಹಿಸಬೇಕು ಎಂದು  ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು  ಅವರು ಕರೆಕೊಟ್ಟಿದ್ದಾರೆ.

ಅವರು ಇಂದು ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ (ಎಐಯು) ವಾರ್ಷಿಕ ಸಭೆಯನ್ನು ವರ್ಚುವಲ್ ಮಾದರಿಯಲ್ಲಿ ಉದ್ಘಾಟಿಸಿ ಮತ್ತು 'ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಸುಸ್ಥಿರ ಗುರಿಗಳನ್ನು ಸಾಧಿಸುವುದು' ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿ, ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ನೆರವಾಗುವ ಅಭ್ಯಾಸಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸಂಶೋಧನೆ, ನೀತಿ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಕಾರ್ಯತಂತ್ರಗಳ ಜಾಗೃತಿ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಾಗರಿಕ ಸಮಾಜದೊಂದಿಗೆ ತೊಡಗಿಸಿಕೊಳ್ಳುವಿಕೆಯಂತಹ ವಿಧಾನಗಳ ಮೂಲಕ ಹಲವಾರು ರೀತಿಯಲ್ಲಿ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.

17 ಎಸ್‌ಡಿಜಿಗಳನ್ನು ಒಳಗೊಂಡಿರುವ ಸುಸ್ಥಿರ ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಕಾರ್ಯಸೂಚಿ-2030 ಅನ್ನು ಉಲ್ಲೇಖಿಸಿದ ಅವರು, 2021 ರಲ್ಲಿ ಎಸ್‌ಡಿಜಿ ಸೂಚ್ಯಂಕದಲ್ಲಿ ಭಾರತವು 120 ನೇ ಸ್ಥಾನದಲ್ಲಿತ್ತು ಎಂದು ಹೇಳಿದರು. ವಿವಿಧ ಎಸ್‌ಡಿಜಿಗಳನ್ನು ಸಾಧಿಸುವಲ್ಲಿ ಬಡತನ ಮತ್ತು ಅನಕ್ಷರತೆಯಂತಹ ಸವಾಲುಗಳನ್ನು ಗೆಲ್ಲುವ ಅಗತ್ಯವನ್ನು ಒತ್ತಿಹೇಳಿದ ಅವರು, ನಾಗರಿಕ ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರು ಈ ಬಗ್ಗೆ  ಸಂಘಟಿತ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಸುಮಾರು 1050 ವಿಶ್ವವಿದ್ಯಾನಿಲಯಗಳು, 10,000 ಕ್ಕೂ ಹೆಚ್ಚು ವೃತ್ತಿಪರ ತಾಂತ್ರಿಕ ಸಂಸ್ಥೆಗಳು ಮತ್ತು 42,343 ಕಾಲೇಜುಗಳನ್ನು ಹೊಂದಿರುವ ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ವಿಶ್ವದ ಮೂರನೇ ಅತಿದೊಡ್ಡ ಕ್ಷೇತ್ರವಾಗಿದೆ ಎಂದ ಉಪರಾಷ್ಟ್ರಪತಿಯವರು, ಇವರೆಲ್ಲರೂ ಗುರಿಗಳ ಸಾಧನೆಗೆ ಕೊಡುಗೆ ನೀಡಿದರೆ, ಅದು ಒಟ್ಟಾರೆ ವಿಶ್ವ ಪರಿಸ್ಥಿತಿಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಜ್ಞಾನ ಸೃಷ್ಟಿ, ಅನ್ವಯ ಮತ್ತು ಅದನ್ನು ಪ್ರಪಂಚಕ್ಕೆ ಪಸರಿಸುವಲ್ಲಿ ಭಾರತದ ಅದ್ಭುತ ಗತಕಾಲವನ್ನು ಸ್ಮರಿಸಿದ ಅವರು, ನಮ್ಮ ಜ್ಞಾನ ವ್ಯವಸ್ಥೆಗಳು ಮತ್ತು ಸಂಸ್ಕೃತಿಯ ಬಹುಮುಖತೆ ಹಾಗೂ ಅವುಗಳ ನಿರಂತರ ಮಹತ್ವವು ಅವುಗಳನ್ನು ಶಾಶ್ವತವಾಗಿಸುತ್ತದೆ ಎಂದು ಹೇಳಿದರು. ಖಾಸಗಿ ವಲಯದ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಭಾರತೀಯ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಉತ್ಕೃಷ್ಟತೆಗೆ ಶ್ರಮಿಸಬೇಕು ಮತ್ತು ಭಾರತವನ್ನು ಮತ್ತೆ ‘ವಿಶ್ವಗುರು’ಮಾಡಬೇಕೆಂದು ಅವರು ಕರೆಕೊಟ್ಟರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ದೂರದೃಷ್ಟಿಯ ದಾಖಲೆಯಾಗಿದೆ ಎಂದ ಉಪರಾಷ್ಟ್ರಪತಿಯವರು, ಪುಸ್ತಕ ಮತ್ತು ಮನಸ್ಸಿನಲ್ಲಿ  ಅದರ ಅನುಷ್ಠಾನವು ಎಸ್ ಡಿ ಜಿ ಕಾರ್ಯಸೂಚಿಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಭಾರತದ ವಿಶ್ವವಿದ್ಯಾನಿಲಯಗಳು ವಿಶ್ವದ ಅಗ್ರ 10 ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನ ಪಡೆಯಬೇಕೆಂಬ ತಮ್ಮ "ಗಾಢವಾದ ಆಶಯವನ್ನು" ವ್ಯಕ್ತಪಡಿಸಿದ ಶ್ರೀ ನಾಯ್ಡು, ಎಲ್ಲಾ ವಿಶ್ವವಿದ್ಯಾನಿಲಯಗಳು ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಖಾತ್ರಿಪಡಿಸುವುದರೊಂದಿಗೆ ಸಂಶೋಧನೆ, ಜ್ಞಾನ ಸೃಷ್ಟಿ ಸೇರಿದಂತೆ ಉನ್ನತ ಮಟ್ಟದ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್, ಎಐಯು ಅಧ್ಯಕ್ಷ ಕರ್ನಲ್ ಡಾ ಜಿ ತಿರುವಾಸಗಂ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಎಐಯು ಪ್ರಧಾನ ಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

ಉಪರಾಷ್ಟ್ರಪತಿಯವರ ಭಾಷಣದ ಪೂರ್ಣಪಾಠ:

“ಸೋದರಿಯರೇ ಮತ್ತು ಸೋದರರೇ!

ದೇಶದ ಶೈಕ್ಷಣಿಕ ವ್ಯವಸ್ಥೆಯ ಕ್ಯಾಪ್ಟನ್‌ಗಳಾಗಿರುವ ಮೇಧಾವಿಗಳ ಇಂತಹ ಪ್ರತಿಷ್ಠಿತ ಸಭೆಯನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ. ಈ ಸಭೆಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ (ಎಸ್ ಡಿ ಜಿ) ಗಳಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಪರ್ಯಾಲೋಚಿಸಲು ಉಪಕುಲಪತಿಗಳ ಜೊತೆಗೆ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ಮುಖ್ಯಸ್ಥರು ಮತ್ತು ಭಾರತೀಯ ವಿಶ್ವವಿದ್ಯಾಲಯಗಳ ಹಿರಿಯ ಬೋಧಕರು ಇಲ್ಲಿ ಕೂಡ ಸೇರಿದ್ದಾರೆ ಎಂದು ನನಗೆ ತಿಳಿಸಲಾಗಿದೆ.

ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೊದಲು, ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ (ಎಐಯು) ಆಯೋಜಿಸಿರುವ ಈ ಸಭೆಯ ಭಾಗವಾಗಿರುವ ಪ್ರತಿಯೊಬ್ಬರನ್ನೂ ನಾನು ಅಭಿನಂದಿಸುತ್ತೇನೆ.

ಈ ಪ್ರತಿಷ್ಠಿತ ಸಂಸ್ಥೆಯು ಜಗತ್ತಿನ ವಿಶ್ವವಿದ್ಯಾನಿಲಯಗಳ ಅತ್ಯಂತ ಹಳೆಯ ಮಹತ್ವದ ಸಂಸ್ಥೆಗಳಲ್ಲಿ ಒಂದಾಗಿದೆ ಎಂಬ ವಿಷಯ ಸಂತಸ ನೀಡಿದೆ. ಡಾ.ಶ್ಯಾಮಪ್ರಸಾದ್ ಮುಖರ್ಜಿ, ಡಾ.ಸರ್ವೆಪಲ್ಲಿ ರಾಧಾಕೃಷ್ಣನ್, ಡಾ.ಜಾಕೀರ್ ಹುಸೇನ್, ಡಾ.ಎ.ಎಲ್.ಮುದಲಿಯಾರ್ ಮತ್ತು ಇನ್ನೂ ಅನೇಕ ಖ್ಯಾತ ಶಿಕ್ಷಣತಜ್ಞರು ಮತ್ತು ಸೂಕ್ಷ್ಮಮತಿ ರಾಜಕಾರಣಿಗಳು ಈ ಸಂಸ್ಥೆಯನ್ನು ಅಧ್ಯಕ್ಷರಾಗಿ ಅಲಂಕರಿಸಿರುವುದು ಸಂತೋಷದ ವಿಷಯ. ಇಂದು, ಎಐಯು ತನ್ನ 96 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವಾಗ, ವಿಶ್ವಸಂಸ್ಥೆಯು ನಿಗದಿಪಡಿಸಿದ ಎಸ್‌ಡಿಜಿಗಳನ್ನು ಸಾಕಾರಗೊಳಿಸುವಲ್ಲಿ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬ ಬಗ್ಗೆ ಮಾತನಾಡುವುದು ನನಗೆ ಗೌರವದ ವಿಷಯವಾಗಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ, 17 ಎಸ್‌ಡಿಜಿಗಳನ್ನು ಒಳಗೊಂಡಿರುವ ಸುಸ್ಥಿರ ಅಭಿವೃದ್ಧಿ ಕುರಿತಾದ ವಿಶ್ವಸಂಸ್ಥೆಯ ಕಾರ್ಯಸೂಚಿ-2030 ಕ್ಕೆ ಏಳು ವರ್ಷಗಳ ಹಿಂದೆ ಹೆಚ್ಚಿನ ದೇಶಗಳು ಸಹಿ ಹಾಕಿವೆ. ಇತ್ತೀಚಿನ ವಿಶ್ವಸಂಸ್ಥೆ ವರದಿಗಳು ಈ ಗುರಿಗಳಲ್ಲಿ ಸಾಧಿಸಿದ ಪ್ರಗತಿಯು ಅಸಮಾನವಾಗಿದೆ ಮತ್ತು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿವೆ. 2021 ರ ಎಸ್‌ಡಿಜಿ ಸೂಚ್ಯಂಕದ ಪ್ರಕಾರ, ಮೂರು ನಾರ್ಡಿಕ್ ದೇಶಗಳು ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ಡೆನ್ಮಾರ್ಕ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಜರ್ಮನಿ, ಆಸ್ಟ್ರೇಲಿಯಾ, ಯುಕೆ ಮತ್ತು ಸ್ಪೇನ್‌ನಂತಹ ದೇಶಗಳು ಪಟ್ಟಿಯಲ್ಲಿ ಅಗ್ರ 20 ರಲ್ಲಿವೆ. ಭಾರತ 120ನೇ ಸ್ಥಾನದಲ್ಲಿದೆ.

ಈ ಗ್ರಹವನ್ನು ಉಳಿಸುವುದು ಎಲ್ಲಾ ದೇಶಗಳ ಸಾಮೂಹಿಕ ಪ್ರಯತ್ನವಾಗಬೇಕು ಎಂಬ ಅಂಶವನ್ನು ನಾವು ನೆನಪಿನಲ್ಲಿಡಬೇಕು. ಈ ಸಂದರ್ಭದಲ್ಲಿ ‘ವಸುಧೈವ ಕುಟುಂಬಕಂ’ಎಂಬ ಮಾತಿನ ಪ್ರಸ್ತುತತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು.

ಎರಡನೇ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಭಾರತವು ನಿರ್ಣಾಯಕ ರಾಷ್ಟ್ರಗಳಲ್ಲಿ ಒಂದಾಗಿದೆ, ಮುಂದಿನ ದಶಕದಲ್ಲಿ 2030 ರ ಕಾರ್ಯಸೂಚಿಯನ್ನು ಸಾಕಾರಗೊಳಿಸಲು ಎಸ್‌ಡಿಜಿಗಳ ಸಾಧನೆಯು ಅತ್ಯಗತ್ಯವಾಗಿರುತ್ತದೆ. ಬಡತನ ಮತ್ತು ಅನಕ್ಷರತೆ ಸವಾಲುಗಳಾಗಿದ್ದು, ಎಸ್‌ಡಿಜಿಗಳನ್ನು ಸಾಧಿಸುವ ನಮ್ಮ ಪಯಣದಲ್ಲಿ ನಾವು ಒಂದು ಸಮಾಜವಾಗಿ ಹೊರಹೊಮ್ಮಬೇಕಾಗಿದೆ. ಮಕ್ಕಳ ಅಪೌಷ್ಟಿಕತೆ, ಲಿಂಗ ಅಸಮಾನತೆ, ಸುರಕ್ಷಿತ ನೀರಿನ ಸಮಾನ ಲಭ್ಯತೆ ಮತ್ತು ಪರಿಸರ ಮಾಲಿನ್ಯದಂತಹ ಇತರ ಅಂಶಗಳು ನಮ್ಮ ಪ್ರಗತಿಗೆ ಅಡ್ಡಿಯಾಗುತ್ತಿವೆ. ಹೀಗಾಗಿ, ಎಸ್‌ಡಿಜಿ ಕಾರ್ಯಸೂಚಿ 2030 ಅನ್ನು ಸಾಧಿಸಲು ಭಾರತದ ಪಯಣ ಸುದೀರ್ಘವಾಗಿದೆ.

ಭಾರತದಲ್ಲಿ, ನೀತಿ ಆಯೋಗವು ಎಸ್‌ಡಿಜಿಗಳ ಸಾಧನೆಗೆ ಕೆಲಸ ಮಾಡಲು ರಾಷ್ಟ್ರೀಯ ಚೌಕಟ್ಟನ್ನು ರಚಿಸಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಇತರ ಸಚಿವಾಲಯಗಳೊಂದಿಗೆ ಸಂವಹನ ನಡೆಸಲು ಮತ್ತು ಎಸ್‌ಡಿಜಿ ಗುರಿಗಳು ಮತ್ತು ಗುರಿಗಳ ಮೇಲೆ ಸೂಚಕಗಳನ್ನು ಅಭಿವೃದ್ಧಿಪಡಿಸಲು ನೀತಿ ಆಯೋಗಕ್ಕೆ ಸಹಾಯ ಮಾಡುತ್ತಿದೆ. ಎಸ್‌ಡಿಜಿಗಳನ್ನು ಸಾಧಿಸುವುದು ಯಾವುದೇ ನಿರ್ದಿಷ್ಟ ಸಂಸ್ಥೆ, ಸಚಿವಾಲಯ ಅಥವಾ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ನಾಗರಿಕ ಸಮಾಜ, ಕೈಗಾರಿಕೆಗಳು, ಎನ್‌ಜಿಒಗಳು ಮತ್ತು ಮುಖ್ಯವಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರಿಂದ ಸಂಘಟಿತ ಪ್ರಯತ್ನದ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳ ಕೊಡುಗೆ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಎಸ್‌ಡಿಜಿಗಳ ಸಾಧನೆಗೆ ಕಾರಣವಾಗುವ ಅಭ್ಯಾಸಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ದೊಡ್ಡ ಮತ್ತು ಪ್ರಮುಖ ಪಾತ್ರವನ್ನು ಹೊಂದಿವೆ. 21ನೇ ಶತಮಾನದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದರ ಹೊರತಾಗಿ, ಸುಸ್ಥಿರ ಅಭಿವೃದ್ಧಿ ಕಾರ್ಯತಂತ್ರಗಳ ಅರಿವು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅವರು ಸಂಶೋಧನೆ, ನೀತಿ ಅಭಿವೃದ್ಧಿ ಮತ್ತು ಸಮಾಜಗಳೊಂದಿಗೆ ತೊಡಗಿಸಿಕೊಳ್ಳುವಂತಹ ಹಲವಾರು ರೀತಿಯಲ್ಲಿ ಕೊಡುಗೆ ನೀಡಬಹುದು.

ನಿಮಗೆ ತಿಳಿದಿರುವಂತೆ, ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ವಿಶ್ವದಲ್ಲಿ ಮೂರನೇ ಅತಿ ದೊಡ್ಡದಾಗಿದೆ. ಇದು ಸುಮಾರು 1050 ವಿಶ್ವವಿದ್ಯಾನಿಲಯಗಳು, 10,000 ಕ್ಕೂ ಹೆಚ್ಚು ವೃತ್ತಿಪರ ತಾಂತ್ರಿಕ ಸಂಸ್ಥೆಗಳು ಮತ್ತು 42,343 ಕಾಲೇಜುಗಳೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಸ್ಪಂದನಾಶೀಲ ಶೈಕ್ಷಣಿಕ ಕೇಂದ್ರವಾಗಿದೆ. ನಮ್ಮ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಗುರಿಗಳ ಸಾಧನೆಗೆ ಕೊಡುಗೆ ನೀಡಲು ಮುಂದೆ ಬಂದರೆ, ನಮ್ಮ ಸಾಧನೆಯು ಬಹಳ ಮಹತ್ವದ್ದಾಗಿರುತ್ತದೆ ಮತ್ತು ಅದು ಒಟ್ಟಾರೆ ಪ್ರಪಂಚದ ಸನ್ನಿವೇಶದಲ್ಲಿ ಪ್ರಮುಖ ಪರಿಣಾಮವನ್ನು ಬೀರುತ್ತದೆ.

ದುರದೃಷ್ಟವಶಾತ್, ಇಲ್ಲಿಯವರೆಗೆ, ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಎಸ್‌ಡಿಜಿ ಕಾರ್ಯಸೂಚಿ 2030 ರಿಂದ ಬಹುತೇಕ ಸಂಪರ್ಕ ಕಡಿದುಕೊಂಡಿವೆ. ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯಾಚರಣೆಗಳಲ್ಲಿ ಎಸ್‌ಡಿಜಿಗಳ ಸಂಯೋಜನೆಯ ವಿಷಯಕ್ಕೆ ಬಂದಾಗ, ನಾವು ಇನ್ನೂ ಬಹಳಷ್ಟು ಸಾಧಿಸಬೇಕಾಗಿದೆ.

ಎಸ್‌ಡಿಜಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸೆಮಿನಾರ್‌ನಲ್ಲಿ ಈ ಚಿಂತನಾ ಅಧಿವೇಶನಗಳನ್ನು ನಡೆಸುತ್ತಿರುವುದಕ್ಕೆ ನಾನು ಭಾರತೀಯ ವಿಶ್ವವಿದ್ಯಾಲಯಗಳ ಸಂಘವನ್ನು ಅಭಿನಂದಿಸುತ್ತೇನೆ.

ಆತ್ಮೀಯ ಉಪಕುಲಪತಿಗಳೇ ಮತ್ತು ಗಣ್ಯ ಗುರುಗಳೇ,

ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತವು ಜ್ಞಾನ ಸೃಷ್ಟಿ, ಅನ್ವಯ ಮತ್ತು ಅದನ್ನು ಪ್ರಪಂಚಕ್ಕೆ ಪಸರಿಸುವಲ್ಲಿ ಅದ್ಭುತವಾದ ಗತಕಾಲವನ್ನು ಹೊಂದಿದೆ. ಪ್ರಾಚೀನ ಭಾರತದಲ್ಲಿ ನಳಂದ, ತಕ್ಷಶಿಲಾ, ವಿಕ್ರಮಶಿಲಾ, ವಲ್ಲಭಿ ಮತ್ತು ಓಡಂತಪುರಿಯಂತಹ ವಿಶ್ವವಿದ್ಯಾನಿಲಯಗಳ ಅಸ್ತಿತ್ವವು ಭಾರತವನ್ನು ಒಂದು ಕಾಲದಲ್ಲಿ ವಿಶ್ವಗುರುವನ್ನಾಗಿ ಮಾಡಿದ ಶಿಕ್ಷಣ ಮತ್ತು ಕಲಿಕೆಯ ಪ್ರಾಚೀನ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ.

ವೇದಗಳು ಮತ್ತು ಉಪನಿಷತ್ತುಗಳು, ಪುರಾಣಗಳು ಮತ್ತು ಇತಿಹಾಸಗಳ ರೂಪದಲ್ಲಿ ಭಾರತದ ಪ್ರಾಚೀನ ಜ್ಞಾನ ವ್ಯವಸ್ಥೆಗಳ ಸಾರ, ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಮತ್ತು ಭಾರತೀಯರ ಸಾಂಪ್ರದಾಯಿಕ ಜೀವನಶೈಲಿಯನ್ನು ಪೀಳಿಗೆಯಿಂದ ಪೀಳಿಗೆಗೆ ಇಂದಿನವರೆಗೆ ಸಾಗಿಸಲಾಗಿದೆ.

ನಮ್ಮ ಜ್ಞಾನ ವ್ಯವಸ್ಥೆಗಳು ಮತ್ತು ಸಂಸ್ಕೃತಿಯ ಬಹುಮುಖತೆ ಮತ್ತು ಅವುಗಳ ನಿರಂತರ ಮಹತ್ವವು ಅವುಗಳನ್ನು ಶಾಶ್ವತವಾಗಿಸಿವೆ. ಉದಾಹರಣೆಗೆ, ಸರ್ವೇ ಭವಂತು ಸುಖಿನಃ, ಭಾರತೀಯರ ಅತ್ಯಂತ ಜನಪ್ರಿಯ ಪ್ರಾರ್ಥನೆಯಾದ ಇದರಲ್ಲಿ ನಾವು ದೇವರನ್ನು 'ಎಲ್ಲಾ ಜೀವಿಗಳನ್ನು ಸಂತೋಷವಾಗಿರಿಸುವಂತೆ' ಪ್ರಾರ್ಥಿಸುತ್ತೇವೆ, ಇದು ಎಲ್ಲಾ ವ್ಯಕ್ತಿಗಳು ಮತ್ತು ಸಮಾಜಗಳ ಶಾಶ್ವತ ಆಶಯವಾಗಿರುತ್ತದೆ.

ಇಂದು, ಭಾರತವು ಐತಿಹಾಸಿಕ ಸಾಧ್ಯತೆಗಳು ಮತ್ತು ಅವಕಾಶಗಳ ಜಗತ್ತಿನ ಹೊಸ್ತಿಲಲ್ಲಿ ನಿಂತಿದೆ. ಇದು ಈಗ ಸುಧಾರಿತ ಶಿಕ್ಷಣ, ಸಂಪನ್ಮೂಲಗಳು ಮತ್ತು ಉದ್ಯೋಗಗಳ ಅಭಿವೃದ್ಧಿ, ಉತ್ತಮ ಮೂಲಸೌಕರ್ಯ ಮತ್ತು ಆರೋಗ್ಯ ರಕ್ಷಣೆಯೊಂದಿಗೆ ಉದಯೋನ್ಮುಖ ಸೂಪರ್ ಪವರ್‌ಗಳಲ್ಲಿ ಒಂದಾಗಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶದ ಶೈಕ್ಷಣಿಕ ಸನ್ನಿವೇಶವನ್ನು ಪರಿವರ್ತಿಸುವ ದೂರದೃಷ್ಟಿಯ ದಾಖಲೆಯಾಗಿದೆ. ಇದರ ಶಿಫಾರಸುಗಳು ೆಸ್ ಡಿ ಜಿ ಯೊಂದಿಗೆ ಜೋಡಿಸಲ್ಪಟ್ಟಿವೆ ಮತ್ತು ಅದರ ವ್ಯಾಪ್ತಿ ಮತ್ತು ದೃಷ್ಟಿ ಭಾರತೀಯ ಶೈಕ್ಷಣಿಕ ವ್ಯವಸ್ಥೆಯನ್ನು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗಿನ ಪಠ್ಯಕ್ರಮದ ಸುಧಾರಣೆಯೊಂದಿಗೆ ಹಂತ ಹಂತವಾಗಿ ಸಾಂಸ್ಥಿಕ ಸುಧಾರಣೆಯನ್ನು ಒಳಗೊಳ್ಳುತ್ತದೆ.

ಈ ನೀತಿಯನ್ನು ಪುಸ್ತಕ ಮತ್ತು ಮನಸ್ಸಿನಲ್ಲಿ ಅನುಷ್ಠಾನಗೊಳಿಸುವುದರಿಂದ ಎಸ್ ಡಿ ಜಿ ಕಾರ್ಯಸೂಚಿಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ.

ನನಗೆ ತಿಳಿದಿರುವಂತೆ, ಎಸ್ ಡಿ ಜಿ ಗಳನ್ನು ಸಾಧಿಸುವ ದೊಡ್ಡ ಉದ್ದೇಶಕ್ಕೆ ಉತ್ತೇಜನ ನೀಡುವಲ್ಲಿ ಪ್ರಾಥಮಿಕವಾಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಪಾತ್ರದ ಬಗ್ಗೆ ಇಲ್ಲಿ ವಿವಿಧ ಸೆಷನ್ ಗಳಲ್ಲಿ ಎಲ್ಲಾ ಎಸ್ ಡಿ ಜಿ ಗಳ ಕುರಿತು ಚರ್ಚೆಗಳು ನಡೆಯುತ್ತವೆ.

ಇದಲ್ಲದೆ, ಈ ಗುರಿಗಳ ಸಾಧನೆಯ ಜಾಗತಿಕ ಪ್ರಗತಿಯ ಮೌಲ್ಯಮಾಪನ ಇರುತ್ತದೆ ಎಂದು ನಾನು ತಿಳಿದಿದ್ದೇನೆ. ಜ್ಞಾನ ಹಂಚಿಕೆ, ಯಶೋಗಾಥೆಗಳು ಮತ್ತು ಉತ್ತಮ ಅಭ್ಯಾಸಗಳಿಗೆ ಪ್ರಾಮುಖ್ಯತೆ ನೀಡುವುದು ಮುಖ್ಯವಾಗಿದೆ.

ಅದೇ ಸಮಯದಲ್ಲಿ, ಕಳವಳ ಮತ್ತು ಸವಾಲುಗಳ ಕ್ಷೇತ್ರಗಳನ್ನು ಗುರುತಿಸುವುದು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು, ಸರ್ಕಾರ ಮತ್ತು ಇತರ ಪಾಲುದಾರರಿಗೆ ಕ್ರಿಯೆಯ ಅಂಶಗಳ ವಿಷಯದಲ್ಲಿ ಮುಂದಿನ ಮಾರ್ಗವನ್ನು ಸೂಚಿಸುವುದು ಸಹ ಪ್ರಮುಖವಾಗಿದೆ.

ಒಂದು ಸ್ವಾಗತಾರ್ಹ ಅಂಶವೆಂದರೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕ್ರಿಯೆಯ ಅಂಶಗಳು ಹೆಚ್ ಇ ಐ ಗಳ ಎಲ್ಲಾ ಮೂರು ಆಯಾಮಗಳನ್ನು -ಬೋಧನೆ, ಸಂಶೋಧನೆ ಮತ್ತು ಸಮುದಾಯ ಅಭಿವೃದ್ಧಿ- ಒಳಗೊಂಡಿರುತ್ತವೆ.

ನನ್ನ ಇನ್ನೊಂದು ಬಲವಾದ ಆಶಯವನ್ನು ಹಂಚಿಕೊಳ್ಳುತ್ತೇನೆ. ಅದೆಂದರೆ, ಭಾರತೀಯ ವಿಶ್ವವಿದ್ಯಾನಿಲಯಗಳು ವಿಶ್ವದ ಅಗ್ರ 10 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯುವುದನ್ನು ನೋಡುವುದು. ಎಲ್ಲಾ ವಿಶ್ವವಿದ್ಯಾನಿಲಯಗಳು ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಖಾತ್ರಿಪಡಿಸುವುದರೊಂದಿಗೆ ಸಂಶೋಧನೆ, ಜ್ಞಾನ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಗಮನಹರಿಸುವುದು ಸೇರಿದಂತೆ ಶೈಕ್ಷಣಿಕ ಉತ್ಕೃಷ್ಟತೆಯ ಉನ್ನತ ಗುಣಮಟ್ಟವನ್ನು ಸಾಧಿಸಬೇಕು.

ಈ ಉಪಕುಲಪತಿಗಳ ಸಭೆಯು ಯಶಸ್ಸು ಕಾಣಲಿ ಎಂದು ನಾನು ಮನಃಪೂರ್ವಕವಾಗಿ ಆಶಿಸುತ್ತೇನೆ. ಈ ವಿಸ್ತೃತ ಚಿಂತನಾಸಭೆಯಿಂದ ಎಲ್ಲಾ ಪಾಲುದಾರರಿಗೆ ಸಹಾಯ ಮಾಡುವ ಕೆಲವು ಸ್ಪಷ್ಟವಾದ ಶಿಫಾರಸುಗಳು ಹೊರಹೊಮ್ಮುತ್ತವೆ ಎಂದು ನನಗೆ ಖಾತ್ರಿಯಿದೆ.

96 ವರ್ಷಗಳ ಯಶಸ್ವಿ ಪ್ರಯಾಣಕ್ಕಾಗಿ ನಾನು ಎಐಯುವನ್ನು ಅಭಿನಂದಿಸುತ್ತೇನೆ ಮತ್ತು ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಜೈ ಹಿಂದ್!”

***



(Release ID: 1808714) Visitor Counter : 224