ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತಿನಲ್ಲಿ 11 ನೇ ಖೇಲ್ ಮಹಾಕುಂಭದ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
Posted On:
12 MAR 2022 10:11PM by PIB Bengaluru
ನಮಸ್ಕಾರ!
ಭಾರತ್ ಮಾತಾ ಕೀ ಜೈ!
ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಜೀ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ಜೀ, ನನ್ನ ಸಂಸದೀಯ ಸಹೋದ್ಯೋಗಿ ಮತ್ತು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರಕಾರದ ಕ್ರೀಡಾ ಖಾತೆ ರಾಜ್ಯ ಸಚಿವರಾದ ಶ್ರೀ ಹರ್ಷ ಸಾಂಗ್ವೀ ಜೀ, ನನ್ನ ಸಂಸದೀಯ ಸಹೋದ್ಯೋಗಿ ಶ್ರೀ ಹಸ್ಮುಖ್ ಭಾಯಿ ಪಟೇಲ್, ಶ್ರೀ ನರಹರಿ ಅಮೀನ್ ಮತ್ತು ಅಹ್ಮಾದಾಬಾದಿನ ಮೇಯರ್ ಶ್ರೀ ಕಿರಿಟ್ ಕುಮಾರ್ ಪರ್ಮಾರ್ ಜೀ, ಇತರ ಗಣ್ಯರೇ ಮತ್ತು ಗುಜರಾತಿನ ಮೂಲೆ ಮೂಲೆಗಳಿಂದ ಪಾಲ್ಗೊಂಡಿರುವ ನನ್ನ ಯುವ ಮಿತ್ರರೇ!.
ನನ್ನೆದುರು ಇರುವ ಈ ಉತ್ಸಾಹೀ ಯುವಶಕ್ತಿಯ ಸಾಗರ, ಈ ಚೈತನ್ಯ ಮತ್ತು ಉತ್ಸಾಹದ ಅಲೆಗಳು ಬಹಳ ಸ್ಪಷ್ಟವಾಗಿ ಗುಜರಾತಿನ ಯುವ ಜನತೆ ಈಗಾಗಲೇ ಗಗನ ಮುಟ್ಟಲು ಸಿದ್ಧರಾಗಿರುವುದನ್ನು ತೋರಿಸುತ್ತಿದೆ. ಇದು ಕ್ರೀಡಾ ಮಹಾಕುಂಭ ಮಾತ್ರವಲ್ಲ, ಇದು ಗುಜರಾತಿನ ಯುವಶಕ್ತಿಯ ಮಹಾಕುಂಭ ಕೂಡಾ. 11ನೇ ಖೇಲ್ ಮಹಾಕುಂಭಕ್ಕಾಗಿ ನಾನು ನಿಮಗೆಲ್ಲ ಶುಭವನ್ನು ಹಾರೈಸುತ್ತೇನೆ. ಈ ಬಹಳ ಅದ್ದೂರಿ ಕಾರ್ಯಕ್ರಮಕ್ಕಾಗಿ ಗುಜರಾತ್ ಸರಕಾರಕ್ಕೆ, ವಿಶೇಷವಾಗಿ ಪ್ರಖ್ಯಾತ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಜೀ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೊರೊನಾದಿಂದಾಗಿ ಖೇಲ್ ಮಹಾಕುಂಭವನ್ನು ಎರಡು ವರ್ಷ ಕಾಲ ತಡೆ ಹಿಡಿಯಲಾಗಿತ್ತು. ಆದರೆ ಈ ವರ್ಷ ಭೂಪೇಂದ್ರ ಭಾಯಿ ಅವರು ಉದ್ಘಾಟನೆ ಮಾಡಿ ಹಿಂದಿನ ವೈಭವ ಮರುಕಳಿಸುವಂತೆ ಮಾಡಿರುವುದು ಯುವ ಆಟಗಾರರಿಗೆ ನವ ಚೈತನ್ಯವನ್ನು ತಂದಿದೆ.
ಸ್ನೇಹಿತರೇ,
ನಾನು ಈಗಲೂ ನೆನಪಿಟ್ಟುಕೊಂಡಿದ್ದೇನೆ. 12 ವರ್ಷಗಳ ಹಿಂದೆ 2010 ರಲ್ಲಿ ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಖೇಲ್ ಮಹಾಕುಂಭವನ್ನು ಆರಂಭ ಮಾಡಲಾಯಿತು. ಮತ್ತು ಇಂದು ನಾನು ಹೇಳಬಲ್ಲೆ, ನಾನಂದು ಬಿತ್ತಿದ ಕನಸಿನ ಬೀಜ ಇಂದು ಆಲದ ಮರವಾಗಿದೆ. ಆ ಬೀಜ ಬಹಳ ದೊಡ್ಡ ಆಲದ ಮರವಾಗಿ ರೂಪುಗೊಳ್ಳುತ್ತಿರುವುದನ್ನು ನಾನಿಂದು ಕಾಣುತ್ತಿದ್ದೇನೆ. 2010ರಲ್ಲಿ ಮೊದಲ ಖೇಲ್ ಮಹಾಕುಂಭ ನಡೆದಾಗ, ಗುಜರಾತ್ 16 ಕ್ರೀಡೆಗಳಲ್ಲಿ 13 ಲಕ್ಷ ಕ್ರೀಡಾಳುಗಳಿಂದ ಆರಂಭ ಮಾಡಿತ್ತು. ಭೂಪೇಂದ್ರ ಭಾಯಿ ನನಗೆ ತಿಳಿಸಿದ್ದಾರೆ, 2019ರಲ್ಲಿ ಖೇಲ್ ಮಹಾಕುಂಭ ನಡೆದಾಗ ಅದರಲ್ಲಿ ಭಾಗವಹಿಸಿದವರ ಸಂಖ್ಯೆ 13 ಲಕ್ಷದಿಂದ 40 ಲಕ್ಷಕ್ಕೇರಿದೆ-36 ಕ್ರೀಡೆಗಳಲ್ಲಿ 40 ಲಕ್ಷ ಯುವಜನತೆ, ಮತ್ತು 26 ಪ್ಯಾರಾ-ಕ್ರೀಡೆಗಳು!. ಕಬಡ್ಡಿಯಿಂದ ಖೋ ಖೋ, ಹಗ್ಗ ಜಗ್ಗಾಟದಿಂದ ಯೋಗಾಸನ ಮತ್ತು ಮಲ್ಲ ಕಂಭ; ಸ್ಕೇಟಿಂಗ್ ಮತ್ತು ಟೆನ್ನಿಸ್ ನಿಂದ ಕತ್ತಿ ವರಸೆವರೆಗೆ ನಮ್ಮ ಯುವ ಜನರು ಇಂದು ಪ್ರತೀ ಕ್ರೀಡೆಯಲ್ಲೂ ಅಮೋಘವಾಗಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದಾರೆ.ಮತ್ತು ಈಗ ಈ ಸಂಖ್ಯೆ 40 ಲಕ್ಷದಿಂದ 55 ಲಕ್ಷಕ್ಕೆ ತಲುಪಿದೆ. “ಶಕ್ತಿದೂತ”ದಂತಹ ಕಾರ್ಯಕ್ರಮಗಳ ಮೂಲಕ ಸರಕಾರ ಕೂಡಾ ಖೇಲ್ ಮಹಾಕುಂಭದ ಆಟಗಾರರಿಗೆ ಬೆಂಬಲ ನೀಡುವಂತಹ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಆಟಗಾರರ ಪ್ರಗತಿಯ ಹಿಂದೆ ಬಹಳ ಕಠಿಣ ಪರಿಶ್ರಮ ಇರುತ್ತದೆ. ಮತ್ತು ಈ ಎಲ್ಲಾ ನಿರಂತರ ಪ್ರಯತ್ನಗಳು, ಆಟಗಾರರ ಕಠಿಣ ಪರಿಶ್ರಮ, ಗುಜರಾತಿನ ಜನತೆ ಕೈಗೊಂಡ ದೃಢ ನಿರ್ಧಾರಗಳು ಸಹಿತ ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಈಗ ಜಾಗತಿಕ ಮಟ್ಟದಲ್ಲಿ ಫಲ ನೀಡತೊಡಗಿವೆ.
ನನ್ನ ಯುವ ಮಿತ್ರರೇ,
ಗುಜರಾತಿನ ಈ ಯುವ ಶಕ್ತಿಯ ಬಗ್ಗೆ ನಿಮಗೆ ಹೆಮ್ಮೆ ಇಲ್ಲವೇ?.ಗುಜರಾತಿನ ಆಟಗಾರರು ಬಹಳ ದೊಡ್ಡ ಸಾಧನೆ ಮಾಡುತ್ತಿರುವುದರ ಬಗ್ಗೆ ನಿಮಗೆ ಹೆಮ್ಮೆ ಇಲ್ಲವೇ? ಇಂದು ಖೇಲ್ ಮಹಾಕುಂಭದಿಂದ ರೂಪುಗೊಂಡು ಗುಜರಾತ್ ಮತ್ತು ದೇಶದ ಜನರು ಯುವ ಒಲಿಂಪಿಕ್ಸ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಶ್ಯನ್ ಗೇಮ್ಸ್ ಸಹಿತ ಅನೇಕ ಜಾಗತಿಕ ಕ್ರೀಡಾಕೂಟಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಈ ಮಹಾಕುಂಭದಿಂದಲೂ ಇಂತಹದೇ ಪ್ರತಿಭೆಗಳು ಮೂಡಿ ಬರಲಿವೆ. ಇದು ಯುವ ಆಟಗಾರರನ್ನು ತಯಾರು ಮಾಡುತ್ತದೆ. ಇಂತಹ ಪ್ರತಿಭಾವಂತರು ಆಟದ ಮೈದಾನಗಳಲ್ಲಿ ಮೂಡಿ ಬಂದು ಭಾರತದ ವೈಭವವನ್ನು ಜಗತ್ತಿನ ಸುತ್ತ ಹರಡುತ್ತಾರೆ.
ಮಿತ್ರರೇ,
ಭಾರತದ ಕ್ರೀಡಾ ಗುರುತಿಸುವಿಕೆ ಜಗತ್ತಿನಲ್ಲಿ ಒಂದು ಅಥವಾ ಎರಡು ಕ್ರೀಡೆಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲವೊಂದಿತ್ತು. ಇದರಿಂದಾಗಿ ದೇಶದ ಹೆಮ್ಮೆ ಮತ್ತು ಗುರುತಿಸುವಿಕೆಯಾಗಿದ್ದ ಹಲವು ಕ್ರೀಡೆಗಳು ಮರೆತು ಹೋದವು. ಕ್ರೀಡಾ ಮೂಲಸೌಕರ್ಯವನ್ನು ಆಧುನೀಕರಿಸುವುದಕ್ಕೆ ಮತ್ತು ಕ್ರೀಡಾ ಸಂಬಂಧಿ ಸಂಪನ್ಮೂಲಗಳನ್ನು ಹೆಚ್ಚಿಸುವುದಕ್ಕೆ ಆದ್ಯತೆಯನ್ನು ಕೊಡಬೇಕಾಗಿತ್ತು. ಆದರೆ ಅದು ಇರಲಿಲ್ಲ. ಅಷ್ಟು ಮಾತ್ರವಲ್ಲ, ರಾಜಕೀಯದಲ್ಲಿ ಸ್ವಜನ ಪಕ್ಷಪಾತ ಪ್ರವೇಶಿಸಿದಂತೆ ಆಟಗಾರರ ಆಯ್ಕೆಯಲ್ಲಿಯೂ ನುಸುಳಿ ಪಾರದರ್ಶಕತೆ ಇರಲಿಲ್ಲ. ಇದು ಕೂಡಾ ಕ್ರೀಡಾ ಜಗತ್ತಿನಲ್ಲಿ ಪ್ರಮುಖ ಸಂಗತಿಯಾಗಿ ಕಾಡುತ್ತಿತ್ತು. ಆಟಗಾರರ ಎಲ್ಲಾ ಪ್ರತಿಭೆ ಈ ಸಮಸ್ಯೆಗಳ ಜೊತೆ ಹೋರಾಡುವುದರಲ್ಲಿ ವ್ಯಯವಾಗುತ್ತಿತ್ತು. ಆ ಸುಳಿಗಾಳಿಯಿಂದ ಹೊರಬಂದು ಭಾರತದ ಯುವಜನರು ಇಂದು ಗಗನಕ್ಕೆ ನೆಗೆಯುವಂತಹ ಸಾಧನೆ ಮಾಡುತ್ತಿದ್ದಾರೆ. ಚಿನ್ನದ ಮತ್ತು ಬೆಳ್ಳಿಯ ಪದಕಗಳ ಮಿನುಗುವ ಹೊಳಪು ದೇಶದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿರುವುದು ಮಾತ್ರವಲ್ಲದೆ ಅದ್ಭುತವಾದ ಫಲಿತಾಂಶಗಳನ್ನು ತರುತ್ತಿದೆ. ಜಗತ್ತಿನಲ್ಲಿಯೇ ಅತ್ಯಂತ ಕಿರಿಯ ಜನರು ಹೆಚ್ಚು ಸಂಖ್ಯೆಯಲ್ಲಿರುವ ರಾಷ್ಟ್ರವಾಗಿರುವ ಭಾರತ ಕ್ರೀಡಾ ಕ್ಷೇತ್ರದಲ್ಲಿಯೂ ಬಲಿಷ್ಠ ಶಕ್ತಿಯಾಗಿ ಮೂಡಿ ಬರುತ್ತಿದೆ. ನಮ್ಮ ಅಥ್ಲೀಟ್ ಗಳು ಇದನ್ನು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಸಾಧಿಸಿ ತೋರಿಸಿದ್ದಾರೆ. ಭಾರತ ಇದೇ ಮೊದಲ ಬಾರಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ 7 ಪದಕಗಳನ್ನು ಗೆದ್ದಿದೆ. ಮತ್ತು ಇಂತಹದೇ ದಾಖಲೆಯನ್ನು ಭಾರತದ ಗಂಡು ಮತ್ತು ಹೆಣ್ಣು ಮಕ್ಕಳು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಮಾಡಿದ್ದಾರೆ. ಈ ಜಾಗತಿಕ ಸ್ಪರ್ಧೆಯಲ್ಲಿ ಭಾರತವು 19 ಪದಕಗಳನ್ನು ಗೆದ್ದಿದೆ. ಆದರೆ ಸ್ನೇಹಿತರೇ ಇದು ಬರೇ ಆರಂಭ ಮಾತ್ರ. ಭಾರತ ಇಲ್ಲಿಗೇ ನಿಲ್ಲುವುದಿಲ್ಲ ಮತ್ತು ಆಯಾಸಗೊಳ್ಳುವುದೂ ಇಲ್ಲ. ನನಗೆ ನನ್ನ ದೇಶದ ಯುವ ಶಕ್ತಿಯಲ್ಲಿ ನಂಬಿಕೆ ಇದೆ, ನನಗೆ ನನ್ನ ದೇಶದ ಯುವ ಆಟಗಾರರ ಪರಿಶ್ರಮದಲ್ಲಿ ನಂಬಿಕೆ ಇದೆ.ನನಗೆ ಕನಸುಗಳಲ್ಲಿ, ದೃಢ ನಿರ್ಧಾರಗಳಲ್ಲಿ ಮತ್ತು ನನ್ನ ದೇಶದ ಯುವ ಆಟಗಾರರ ಅರ್ಪಣಾ ಭಾವದಲ್ಲಿ ನಂಬಿಕೆ ಇದೆ. ಆದುದರಿಂದ ಇಂದು ನಾನು ಲಕ್ಷಾಂತರ ಯುವ ಜನರ ಎದುರಿನಲ್ಲಿ ವಿಶ್ವಾಸದಿಂದ ಹೇಳಬಲ್ಲೆ, ಭಾರತದ ಯುವ ಶಕ್ತಿ ಬಹಳ ದೂರ ಸಾಗಲಿದೆ. ವಿವಿಧ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆಲ್ಲುವ ರಾಷ್ಟ್ರಗಳಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವ ದಿನಗಳು ಬಹಳ ದೂರವೇನಿಲ್ಲ.
ಸ್ನೇಹಿತರೇ,
ಈ ಬಾರಿ ಉಕ್ರೇನಿನಿಂದ ಮರಳಿ ಬಂದಿರುವ ಯುವಜನತೆ ಯುದ್ಧ ಭೂಮಿಯಿಂದ ಮರಳಿ ಬಂದಿದ್ದಾರೆ. ಅವರು ಬಾಂಬ್ ಗಳಿಂದ ಮತ್ತು ಗುಂಡುಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಆದರೆ ಅವರು ಮನೆಗೆ ಮರಳಿದ ನಂತರ ಏನು ಹೇಳುತ್ತಿದ್ದಾರೆ?.ಅವರು ಹೇಳಿದ್ದಾರೆ “ನಾವು ಇಂದು ನಮ್ಮ ತ್ರಿವರ್ಣ ಧ್ವಜದ ಹೆಮ್ಮೆಯನ್ನು ಅರಿತುಕೊಂಡಿದ್ದೇವೆ. ನಾವದನ್ನು ಉಕ್ರೇನಿನಲ್ಲಿ ಅರಿತಿದ್ದೇವೆ” . ಆದರೆ ಸ್ನೇಹಿತರೇ, ನಾನು ಇನ್ನೊಂದು ಅಂಶದತ್ತ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ನಮ್ಮ ಆಟಗಾರರು ಪದಕಗಳನ್ನು ಗೆದ್ದು ಪೋಡಿಯಂ ಮೇಲೆ ನಿಂತಾಗ ಮತ್ತು ತ್ರಿವರ್ಣ ಧ್ವಜ ಹಾರಾಡುವಾಗ, ಭಾರತದ ರಾಷ್ಟ್ರಗೀತೆ ಹಾಡಲ್ಪಡುವಾಗ; ನೀವಿದನ್ನು ಟಿ.ವಿ.ಯಲ್ಲಿ ನೋಡಿರಬಹುದು; ಆನಂದಾಶ್ರುಗಳು ಮತ್ತು ಹೆಮ್ಮೆ ನಮ್ಮ ಆಟಗಾರರ ಕಣ್ಣುಗಳಿಂದ ತುಳುಕುತ್ತಿರುತ್ತದೆ. ಇದು ದೇಶಪ್ರೇಮ.
ಸ್ನೇಹಿತರೇ,
ಭಾರತದಂತಹ ಯುವ ದೇಶಕ್ಕೆ ದಿಕ್ಕು ದಿಸೆಗಳನ್ನು ನೀಡುವಲ್ಲಿ ನಿಮ್ಮಂತಹ ಯುವಜನತೆಗೆ ಬಹಳ ದೊಡ್ಡ ಪಾತ್ರವಿದೆ. ಭವಿಷ್ಯವನ್ನು ಜೋಡಿಸುವ ಶಕ್ತಿ ಇರುವುದು ಯುವಕರಿಗೆ ಮಾತ್ರ. ಮತ್ತು ಅದಕ್ಕಾಗಿ ದೃಢ ನಿರ್ಧಾರಗಳನ್ನು ಕೈಗೊಂಡು ದೃಢ ಮನಸ್ಸಿನಿಂದ ಮತ್ತು ಅರ್ಪಣಾಭಾವದಿಂದ ಅದರಲ್ಲಿ ಭಾಗಿಯಾಗುವುದು ಯುವಜನತೆಗೆ ಮಾತ್ರ ಸಾಧ್ಯ. ಇಂದು ಈ ಖೇಲ್ ಮಹಾಕುಂಭದಲ್ಲಿ ನಿಮ್ಮಂತಹ ಲಕ್ಷಾಂತರ ಯುವಜನತೆ ಗುಜರಾತಿನ ವಿವಿಧ ಭಾಗಗಳಿಂದ ಬಂದು ಜೊತೆಯಾಗಿದ್ದಾರೆ. ವಿವಿಧ ಗ್ರಾಮಗಳಿಂದ, ನಗರಗಳಿಂದ ಮತ್ತು ಪಟ್ಟಣಗಳಿಂದ ಬಂದವರಿದ್ದಾರೆ ಇಲ್ಲಿ. ನೀವು ನಿಮ್ಮ ಕನಸನ್ನು ಸಾಕಾರಗೊಳಿಸಲು ರಾತ್ರಿ ಹಗಲು ಕೆಲಸ ಮಾಡುತ್ತಿದ್ದೀರಿ. ನಾನು ನಿಮ್ಮ ಪ್ರದೇಶದ ಭವಿಷ್ಯವನ್ನು ನಿಮ್ಮ ಕನಸುಗಳಲ್ಲಿ ಕಾಣುತ್ತಿದ್ದೇನೆ. ನಾನು ನಿಮ್ಮ ಜಿಲ್ಲೆಯ ಭವಿಷ್ಯವನ್ನು ಅದರಲ್ಲಿ ಕಾಣುತ್ತಿದ್ದೇನೆ. ನಾನು ಇಡೀ ಗುಜರಾತಿನ ಭವಿಷ್ಯವನ್ನು, ಮತ್ತು ದೇಶದ ಭವಿಷ್ಯವನ್ನು ನಿಮ್ಮ ಕನಸುಗಳಲ್ಲಿ ಕಾಣುತ್ತಿದ್ದೇನೆ. ಆದುದರಿಂದ ಇಂದು ನವೋದ್ಯಮಗಳಿಂದ ಹಿಡಿದು ಸ್ಟ್ಯಾಂಡಪ್ ಇಂಡಿಯಾದವರೆಗೆ, ಮೇಕ್ ಇನ್ ಇಂಡಿಯಾದಿಂದ ಹಿಡಿದು ಆತ್ಮನಿರ್ಭರ ಭಾರತದವರೆಗೆ ಮತ್ತು ವೋಕಲ್ ಫಾರ್ ಲೋಕಲ್ ವರೆಗೆ; ಭಾರತದ ಯುವಜನತೆ ನವಭಾರತದ ಪ್ರತಿಯೊಂದು ಆಂದೋಲನವನ್ನೂ ಜವಾಬ್ದಾರಿಯಿಂದ ಕೈಗೆತ್ತಿಕೊಂಡು ಬೆಂಬಲಿಸಿದ್ದಾರೆ. ನಮ್ಮ ಯುವಜನತೆ ಭಾರತದ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ!.
ನನ್ನ ಪ್ರೀತಿಯ ಯುವ ಸ್ನೇಹಿತರೇ,
ಇಂದು ಸಾಫ್ಟ್ ವೇರ್ ನಿಂದ ಹಿಡಿದು ಬಾಹ್ಯಾಕಾಶದವರೆಗೆ, ರಕ್ಷಣಾ ಕ್ಷೇತ್ರದಿಂದ ಹಿಡಿದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ವರೆಗೆ ಭಾರತ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ. ಜಗತ್ತು ಭಾರತವನ್ನು ಬಹಳ ದೊಡ್ಡ ಶಕ್ತಿ ಎಂಬಂತೆ ನೋಡುತ್ತಿದೆ. ಕ್ರೀಡಾ ಶಕ್ತಿಯು ಭಾರತದ ಶಕ್ತಿ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಬಲ್ಲದು. ಇದು ಕೂಡಾ ನಿಮ್ಮ ಯಶಸ್ಸಿನ ಮಂತ್ರ. ಮತ್ತು ಆದುದರಿಂದ ನಾನು ಯಾವಾಗಲೂ ಹೇಳುತ್ತಿರುತ್ತೇನೆ, “ಯಾರು ಆಡುತ್ತಾರೋ, ಅರಳುತ್ತಾರೆ”! ಎಲ್ಲಾ ಯುವ ಜನರಿಗೆ ನನ್ನದೊಂದು ಸಲಹೆ ಇದೆ-ಯಶಸ್ಸಿಗೆ ಯಾವುದೇ ಒಳದಾರಿಗಳನ್ನು ಹುಡುಕಬೇಡಿ!. ನೀವು ರೈಲ್ವೇ ಪ್ಲಾಟ್ ಫಾರಂನಲ್ಲಿ ನೋಡಿರಬಹುದು, ಕೆಲವರು ಸೇತುವೆಗಳಲ್ಲಿ ನಡೆಯುವುದಕ್ಕೆ ಬದಲು ರೈಲ್ವೇ ಹಳಿಗಳನ್ನು ದಾಟುತ್ತಾರೆ. ಆದುದರಿಂದ ರೈಲ್ವೇ ಅಧಿಕಾರಿಗಳು ಅಲ್ಲಿ ಸಂದೇಶವನ್ನು ಬರೆದಿರುತ್ತಾರೆ-“ಒಳದಾರಿ ನಿಮ್ಮನ್ನು ಸಣ್ಣದಾಗಿ ಕತ್ತರಿಸುತ್ತದೆ” ಒಳದಾರಿ ಹಾದಿಯ ಆಯುಷ್ಯ ಬಹಳ ಕಡಿಮೆ ಅವಧಿಯದ್ದು.
ಸ್ನೇಹಿತರೇ,
ಯಶಸ್ಸಿಗೆ ಅಲ್ಲಿ ಇರುವುದು ಒಂದೇ ಮಂತ್ರ. “ದೀರ್ಘ ಕಾಲೀನ ಯೋಜನೆ ಮತ್ತು ನಿರಂತರ ಬದ್ಧತೆ” . ಒಂದು ಗೆಲುವು ಅಥವಾ ಒಂದು ಸೋಲು ಎಂದಿಗೂ ಕೂಡಾ ನಮ್ಮ ಕೊನೆಯ ನಿಲ್ದಾಣವಾಗಬಾರದು!. ನಮ್ಮೆಲ್ಲರಿಗೂ ನಮ್ಮ ವೇದಗಳು ಹೇಳಿವೆ - ‘चरैवेति- चरैवेति’. ಇಂದು ದೇಶವು ಹಲವು ಸವಾಲುಗಳ ನಡುವೆಯೂ ಎಲ್ಲಿಯೂ ಸ್ಥಗಿತಗೊಳ್ಳದೆ, ಎಲ್ಲಿಯೂ ಆಯಾಸಗೊಳ್ಳದೆ ಮತ್ತು ಯಾರಿಗೂ ನಡು ಬಗ್ಗಿಸದೆ ಮುನ್ನಡೆಯುತ್ತಿದೆ. ನಾವೆಲ್ಲರೂ ನಿರಂತರ ಕಠಿಣ ಪರಿಶ್ರಮದ ಮೂಲಕ ಅಡೆ ತಡೆ ಇಲ್ಲದೆ ಮುನ್ನಡೆಯಬೇಕು.
ಸ್ನೇಹಿತರೇ,
ಕ್ರೀಡೆಯಲ್ಲಿ ನಾವು ಗೆಲ್ಲಲು 360 ಡಿಗ್ರಿ ಸಾಧನೆಯನ್ನು ಮಾಡಬೇಕಾಗುತ್ತದೆ. ಮತ್ತು ಇಡೀ ತಂಡ ಅತ್ಯುತ್ತಮ ಸಾಧನೆಯನ್ನು ಕೊಡಬೇಕಾಗುತ್ತದೆ. ಇಲ್ಲಿ ಉತ್ತಮ ಕ್ರೀಡಾಳುಗಳಿದ್ದಾರೆ.ನೀವು ಹೇಳಿ, ಕ್ರಿಕೆಟ್ ತಂಡವೊಂದು ಅತ್ಯುತ್ತಮ ಬ್ಯಾಟಿಂಗ್ ನಡೆಸಿ, ಆದರೆ ಅತಿ ಕಳಪೆ ಬೌಲಿಂಗ್ ನಡೆಸಿ ಉತ್ತಮ ಸಾಧನೆ ಮಾಡಲು ಸಾಧ್ಯವಿದೆಯೇ?.ಅವರು ಗೆಲುವು ಸಾಧಿಸಲು ಸಾಧ್ಯವಿದೆಯೇ? ತಂಡದ ಓರ್ವ ಸದಸ್ಯ ಮಾತ್ರವೇ ಉತ್ತಮವಾಗಿ ಆಡಿದರೆ, ಉಳಿದವರು ಉತ್ತಮ ಸಾಧನೆ ತೋರದಿದ್ದರೆ ಗೆಲುವು ಸಾಧ್ಯವೇ?. ಗೆಲ್ಲುವುದಕ್ಕೆ ಬ್ಯಾಟಿಂಗ್, ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆ ಸಹಿತ ಎಲ್ಲ ಕ್ಷೇತ್ರಗಳಲ್ಲಿಯೂ ಇಡೀ ತಂಡ ಉತ್ತಮವಾಗಿ ಆಡಬೇಕಾಗುತ್ತದೆ.
ಸಹೋದರರೇ ಮತ್ತು ಸಹೋದರಿಯರೇ,
ಭಾರತದಲ್ಲಿ ಕ್ರೀಡೆಯನ್ನು ಯಶಸ್ಸಿನ ತುತ್ತತುದಿಗೆ ಕೊಂಡೊಯ್ಯಬೇಕಾಗಿದ್ದರೆ ಇಂದು ದೇಶ ಕೂಡಾ ಇಂತಹದೇ 360 ಡಿಗ್ರಿ “ತಂಡ ಕೆಲಸ”ವನ್ನು ಮಾಡಬೇಕಾದ ಅಗತ್ಯವಿದೆ. ಆದಕ್ಕಾಗಿ ದೇಶವು ಸಮಗ್ರ ಧೋರಣೆಯಲ್ಲಿ ಕೆಲಸ ಮಾಡುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮ ಈ ಪ್ರಯತ್ನಕ್ಕೆ ಒಂದು ದೊಡ್ಡ ಉದಾಹರಣೆ. ಈ ಮೊದಲು ನಮ್ಮ ಪ್ರತಿಬೆಗಳನ್ನು ಹತ್ತಿಕ್ಕಲಾಗುತ್ತಿತ್ತು. ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ನಾವು ದೇಶದ ಪ್ರತಿಭೆಗಳನ್ನು ಗುರುತಿಸಲು ಆರಂಭ ಮಾಡಿದೆವು. ಮತ್ತು ಅವರಿಗೆ ಎಲ್ಲಾ ಅವಶ್ಯ ಬೆಂಬಲವನ್ನು ನೀಡಿದೆವು. ಪ್ರತಿಭೆ ಹೊಂದಿದ್ದಾಗ್ಯೂ ನಮ್ಮ ಯುವಜನತೆ ತರಬೇತಿಯ ಕೊರತೆಯಿಂದ ಹಿಂದುಳಿಯುತ್ತಿದ್ದರು. ಇಂದು ಉತ್ತಮ ಮತ್ತು ಅತ್ಯುತ್ತಮವಾದಂತಹ ತರಬೇತಿ ಸೌಲಭ್ಯಗಳನ್ನು ಆಟಗಾರರಿಗೆ ಒದಗಿಸಲಾಗುತ್ತಿದೆ. ಆಟಗಾರರಿಗೆ ಸಂಪನ್ಮೂಲ ಕೊರತೆಯಾಗದಂತೆ ದೇಶವು ನೋಡಿಕೊಳ್ಳುತ್ತಿದೆ. ಕಳೆದ 7-8 ವರ್ಷಗಳಲ್ಲಿ ಕ್ರೀಡಾ ಬಜೆಟನ್ನು ಸುಮಾರು 70 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆಟಗಾರರ ಭವಿಷ್ಯದ ಬಗ್ಗೆ ಗಂಭೀರವಾದ ಕಳವಳ, ಚಿಂತೆಗಳಿದ್ದವು. ಸುಮ್ಮನೆ ಕಲ್ಪಿಸಿಕೊಳ್ಳಿ, ಆಟಗಾರರಿಗೆ ಆತನ/ಆಕೆಯ ಭವಿಷ್ಯದ ಬಗ್ಗೆ ಖಾತ್ರಿ ಇಲ್ಲದಿದ್ದರೆ, ಆಗ ಆಟಗಾರರಿಗೆ ಆಟಕ್ಕೆ ಶೇ.100ರ ಅಂದರೆ ಸಂಪೂರ್ಣ ಅರ್ಪಣಾಭಾವವನ್ನು ನೀಡಲು ಸಾಧ್ಯವಾಗುತ್ತದೆಯೇ?. ಆದುದರಿಂದ ನಾವು ಪ್ರೋತ್ಸಾಹ ಮತ್ತು ಆಟಗಾರರಿಗೆ ನೀಡುತ್ತಿರುವ ಬಹುಮಾನಗಳನ್ನು 60 ಪ್ರತಿಶತಕ್ಕಿಂತಲೂ ಹೆಚ್ಚಿಸಿದ್ದೇವೆ. ಈಗ ಪದಕ ವಿಜೇತ ಆಟಗಾರರನ್ನು ತಯಾರು ಮಾಡಿದ ಎಲ್ಲ ಕೋಚ್ ಗಳಿಗೂ ವಿವಿಧ ಯೋಜನೆಗಳ ಮೂಲಕ ಬಹುಮಾನವನ್ನು ಕೊಡಲಾಗುತ್ತಿದೆ. ಜೊತೆಗೆ ಇಂದು ದೇಶದ ಗ್ರಾಮೀಣ ಪ್ರದೇಶಗಳಿಂದ, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮಾಜಗಳಿಂದಲೂ ವಿವಿಧ ಪ್ರತಿಭೆಗಳು ಮೂಡಿ ಬರುತ್ತಿವೆ.ಅವರ ಬಗ್ಗೆಯೂ ದೇಶವು ಹೆಮ್ಮೆಪಡುತ್ತಿದೆ.
ಸ್ನೇಹಿತರೇ,
ನಮ್ಮ ದೇಶದಲ್ಲಿಯ ಆಟಗಾರರು ಇನ್ನೊಂದು ಬಹಳ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮೊದಲು ನೀವು ಯಾರಿಗಾದರೂ-“ನಾನು ಕ್ರೀಡಾಳು” ಎಂದು ಹೇಳುತ್ತಿದ್ದರೆ, ಜನರು “ಒಳ್ಳೆಯದು, ನೀವು ಆಟಗಾರರು, ಪ್ರತಿಯೊಂದು ಮಗೂವೂ ಆಡುತ್ತದೆ. ಆದರೆ ನಿಜವಾಗಿಯೂ ನೀವು ಏನು ಮಾಡುತ್ತಿರುವಿರಿ” ಎಂದು ಕೇಳುತ್ತಿದ್ದರು. ಅಂದರೆ, ನಮಗೆ ಇಲ್ಲಿ ಕ್ರೀಡೆಯನ್ನು ವೃತ್ತಿಯಾಗಿ ಒಪ್ಪಿಕೊಳ್ಳುವುದು ಸುಲಭವಾಗಿರಲಿಲ್ಲ.
ಸ್ನೇಹಿತರೇ,
ಇದರಿಂದ ವಿಚಲಿತರಾಗಬೇಡಿ. ಈ ಸಮಸ್ಯೆಯನ್ನು ಎದುರಿಸುತ್ತಿರುವವರು ನೀವು ಮಾತ್ರವಲ್ಲ. ನಮ್ಮ ದೇಶದ ದೊಡ್ಡ ದೊಡ್ಡ ಆಟಗಾರರೂ ಇದನ್ನು ಎದುರಿಸಬೇಕಾಗಿತ್ತು.
ನನ್ನ ಯುವ ಸ್ನೇಹಿತರೇ,
ನಮ್ಮ ಆಟಗಾರರ ಯಶಸ್ಸು ಈಗ ಸಮಾಜದ ಈ ಮನಸ್ಥಿತಿಯನ್ನು ಬದಲಾಯಿಸಲು ಆರಂಭ ಮಾಡಿದೆ. ಈಗ ಜನರು ಕೂಡಾ ಕ್ರೀಡೆಯಲ್ಲಿ ಸಾಧನೆ ಎಂದರೆ ಜಗತ್ತಿನಲ್ಲಿ ನಂಬರ್ ಒನ್ ಆಗುವುದೊಂದೇ ಅಲ್ಲ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ. ಯುವ ಜನರು ಕ್ರೀಡೆಗೆ ಸಂಬಂಧಿಸಿದ ಅಸಂಖ್ಯಾತ ಕ್ಷೇತ್ರಗಳಲ್ಲಿಯೂ ತಮ್ಮ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳಬಹುದು. ಕೆಲವರು ಕೋಚ್ ಆಗಬಹುದು. ಕ್ರೀಡಾ ಸಾಫ್ಟ್ವೇರ್ ನಲ್ಲಿ ಅದ್ಭುತವಾದುದನ್ನು ಮಾಡಬಹುದು. ಕ್ರೀಡಾಡಳಿತ ನಿರ್ವಹಣೆ ಕೂಡಾ ಕ್ರೀಡೆಗೆ ಸಂಬಂಧಿಸಿದ ಪ್ರಮುಖ ಕ್ಷೇತ್ರ. ಅನೇಕ ಯುವ ಜನರು ಕ್ರೀಡಾ ಬರಹವನ್ನು ಬಹಳ ದೊಡ್ಡ ವೃತ್ತಿಯನ್ನಾಗಿಸುತ್ತಿದ್ದಾರೆ. ಅದೇ ರೀತಿ ಕ್ರೀಡೆಯ ಜೊತೆಗೆ ತರಬೇತುದಾರರಾಗಿ, ಫಿಸಿಯೋ ಥೆರಪಿಸ್ಟ್ ಆಗಿ ಮತ್ತು ಆಹಾರ ತಜ್ಞರಾಗಿ ಕೆಲಸ ಮಾಡಲು ಅನೇಕ ಅವಕಾಶಗಳು ಲಭ್ಯವಾಗಲಿವೆ. ಯುವಜನತೆ ಈ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆದುಕೊಂಡು ಮುನ್ನಡೆಯಬಹುದು. ಇದಕ್ಕಾಗಿ ದೇಶವು ವೃತ್ತಿಪರ ಸಂಸ್ಥೆಗಳನ್ನು ಸ್ಥಾಪಿಸುತ್ತಿದೆ. ಉದಾಹರಣೆಗೆ 2018ರಲ್ಲಿ ನಾವು ದೇಶದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಮಣಿಪುರದಲ್ಲಿ ಆರಂಭ ಮಾಡಿದೆವು. ಕ್ರೀಡೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಉತ್ತರ ಪ್ರದೇಶದಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯ ಆರಂಭಗೊಳ್ಳುತ್ತಿದೆ. ಐ.ಐ.ಎಂ. ರೋಹ್ಟಕ್ ಕೂಡಾ ಕ್ರೀಡಾ ಆಡಳಿತದಲ್ಲಿ ಪಿ.ಜಿ. ಡಿಪ್ಲೊಮಾವನ್ನು ಆರಂಭ ಮಾಡಿದೆ. ಗುಜರಾತಿನ ಸ್ವರ್ಣಿಮ್ ಗುಜರಾತ್ ಕ್ರೀಡಾ ವಿಶ್ವವಿದ್ಯಾಲಯವು ಇಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ. ಕ್ರೀಡಾ ಪರಿಸರ ವ್ಯವಸ್ಥೆಯನ್ನು ಮತ್ತು ಮೂಲಸೌಕರ್ಯವನ್ನು ಇನ್ನಷ್ಟು ವಿಸ್ತರಿಸಲು ಗುಜರಾತ್ ಸರಕಾರ ತಾಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸುತ್ತದೆ ಎಂಬುದಾಗಿ ನನಗೆ ತಿಳಿಸಲಾಗಿದೆ. ಇವೆಲ್ಲಾ ಪ್ರಯತ್ನಗಳು ಜಾಗತಿಕ ಕ್ರೀಡೆಯಲ್ಲಿ ಭಾರತದ ವೃತ್ತಿಪರ ಹಾಜರಾತಿಯನ್ನು ಇನ್ನಷ್ಟು ಬಲಗೊಳಿಸಲಿವೆ. ಗುಜರಾತ್ ವಿಸ್ತಾರವಾದ ಕರಾವಳಿ ಸಂಪನ್ಮೂಲಗಳನ್ನು ಹೊಂದಿರುವುದರಿಂದ ನನ್ನದೊಂದು ಸಲಹೆ ಇದೆ. ನಾವು ಬಹಳ ಉದ್ದದ ಕರಾವಳಿ ತೀರವನ್ನು ಹೊಂದಿದ್ದೇವೆ. ಈಗ ನಾವು ನಮ್ಮ ಕರಾವಳಿ ತೀರಕ್ಕೆ ಸಂಬಂಧಿಸಿದ ಕ್ರೀಡೆಗಳ ನಿಟ್ಟಿನಲ್ಲಿ ಮುನ್ನಡೆಯಬೇಕು. ನಾವು ಇಲ್ಲಿ ಬಹಳ ಸುಂದರವಾದಂತಹ ಬೀಚ್ ಗಳನ್ನು ಹೊಂದಿದ್ದೇವೆ. ಖೇಲ್ ಮಹಾಕುಂಭದಲ್ಲಿ ಬೀಚ್ ಕ್ರೀಡೆಗಳ ಸಾಧ್ಯತೆಯ ಬಗ್ಗೆಯೂ ಚಿಂತಿಸಬಹುದು.
ಸ್ನೇಹಿತರೇ,
ನೀವು ಆಡುವಾಗ ಸುದೃಢರಾಗಿರಿ, ಆರೋಗ್ಯವಂತರಾಗಿರಿ, ಆಗ ಮಾತ್ರ ನೀವು ದೇಶದ ಸಾಮರ್ಥ್ಯದ ಜೊತೆ ಒಂದಾಗುವಿರಿ. ಆಗ ಮಾತ್ರ ನೀವು ದೇಶದ ಶಕ್ತಿಯ ಮೌಲ್ಯವರ್ಧನೆಗೆ ಕಾರಣರಾಗುತ್ತೀರಿ. ಮತ್ತು ಆಗ ಮಾತ್ರ ನೀವು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಸಮರ್ಥರಾಗಿರುತ್ತೀರಿ. ನಿಮ್ಮಂತಹ ಎಲ್ಲಾ ತಾರೆಯರು ಖೇಲ್ ಮಹಾಕುಂಭದ ಅಯಾ ಕ್ಷೇತ್ರಗಳಲ್ಲಿ ಮಿಂಚುತ್ತೀರಿ. ಮತ್ತು ನವ ಭಾರತದ ಕನಸುಗಳನ್ನು ನನಸು ಮಾಡಲು ಶಕ್ತರಾಗುತ್ತೀರಿ ಎಂಬ ಬಗ್ಗೆ ನನಗೆ ಭರವಸೆ ಇದೆ. ನಾನು ಇಂದು ಯುವಜನತೆಯ ಎಲ್ಲಾ ಕುಟುಂಬದ ಸದಸ್ಯರಿಗೆ ಮನವಿ ಮಾಡಲು ಇಚ್ಛಿಸುತ್ತೇನೆ. ಕಾಲ ಬಹಳ ಬದಲಾಗಿದೆ. ನಿಮಗೆ ಮಗುವಿದ್ದರೆ ಅದು ಹೆಣ್ಣಾಗಲಿ ಗಂಡಾಗಿರಲಿ; ಅವರು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರೆ, ಆ ಪ್ರತಿಭೆಯನ್ನು ಹುಡುಕಿ ಮತ್ತು ಆ ಮಗುವನ್ನು ಆಸಕ್ತಿಯಿಂದ ಪ್ರೋತ್ಸಾಹಿಸಿ. ಆ ಮಗುವಿಗೆ ಮುನ್ನಡೆಯಲು ಪ್ರೋತ್ಸಾಹ ನೀಡಿ. ಅವರನ್ನು ಪುಸ್ತಕಗಳಿಗಾಗಿ ಹಿಂದೆ ಎಳೆಯಬೇಡಿ. ಮತ್ತು ಇದೇ ರೀತಿ ಖೇಲ್ ಮಹಾಕುಂಭದ ಮೊದಲ ದಿನದಿಂದಲೇ ನಾನು ಹೇಳುತ್ತಿದ್ದೆ, ಖೇಲ್ ಮಹಾಕುಂಭ ಗ್ರಾಮದಲ್ಲಿ ನಡೆಯುತ್ತಿರುವಾಗ ಇಡೀ ಗ್ರಾಮವೇ ಅಲ್ಲಿ ಹಾಜರಿರಬೇಕು. ಚಪ್ಪಾಳೆ ಮತ್ತು ಪ್ರೋತ್ಸಾಹದ ಘೋಷಣೆಗಳು ಆಟಗಾರರಿಗೆ ಉತ್ತೇಜನ, ಸ್ಫೂರ್ತಿ ನೀಡಬಲ್ಲವು.ಗುಜರಾತಿನ ಪ್ರತಿಯೊಬ್ಬ ನಾಗರಿಕರೂ ಖೇಲ್ ಮಹಾಕುಂಭದಲ್ಲಿ ಭೌತಿಕವಾಗಿ ಭಾಗವಹಿಸಬೇಕು. ನೀವು ನೋಡಿ, ಗುಜರಾತ್ ತನ್ನ ಕೀರ್ತಿಪತಾಕೆಯನ್ನು ಕ್ರೀಡಾ ಜಗತ್ತಿನಲ್ಲಿ ಹಾರಾಡುವಂತೆ ಮಾಡಲಿದೆ. ಗುಜರಾತಿನ ಆಟಗಾರರು ಕೂಡಾ ಶೀಘ್ರವೇ ಭಾರತದ ಆಟಗಾರರಾಗಲಿದ್ದಾರೆ. ಈ ನಿರೀಕ್ಷೆಗಳೊಂದಿಗೆ ನಾನು ಮತ್ತೊಮ್ಮೆ ಭೂಪೇಂದ್ರ ಭಾಯಿ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಯುವಜನತೆಗೆ ನಾನು ಶುಭವನ್ನು ಹಾರೈಸುತ್ತೇನೆ. ನನ್ನೊಂದಿಗೆ ಗಟ್ಟಿಯಾಗಿ ಹೇಳಿ, ಭಾರತ್ ಮಾತಾ ಕೀ ಜೈ!.
ಭಾರತ್ ಮಾತಾ ಕೀ ಜೈ!.
ಭಾರತ್ ಮಾತಾ ಕೀ ಜೈ!.
ಭಾರತ್ ಮಾತಾ ಕೀ ಜೈ!.
ಬಹಳ ಬಹಳ ಧನ್ಯವಾದಗಳು!.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
(Release ID: 1806068)
Visitor Counter : 217
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam