ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಏಮ್ಸ್‌, ಕಲ್ಯಾಣಿ ಇದರ 2021 ರ ಸಾಲಿನ ಎಂ.ಬಿ.ಬಿ.ಎಸ್. ಬ್ಯಾಚ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಡಾ ಭಾರತಿ ಪ್ರವೀಣ್ ಪವಾರ್ ಅವರು ವಹಿಸಿದರು.


" ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ಸಮಾಜಗಳಿಗೆ ಉತ್ತಮ ಭವಿಷ್ಯವಿದೆ"

"ಏಮ್ಸ್, ಕಲ್ಯಾಣಿಯು ಪಶ್ಚಿಮ ಬಂಗಾಳದ ಆರೋಗ್ಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಲಿದೆ ಮತ್ತು ಶೀಘ್ರದಲ್ಲೇ ಶ್ರೇಷ್ಠತೆಯ ಸಂಸ್ಥೆಯಾಗಿ ಹೊರಹೊಮ್ಮಲಿದೆ": ಡಾ ಭಾರತಿ ಪ್ರವೀಣ್ ಪವಾರ್

Posted On: 07 MAR 2022 2:42PM by PIB Bengaluru

ಕಲ್ಯಾಣಿಯ ಏಮ್ಸ್‌ನ 2021 ರ ಎಂ.ಬಿ.ಬಿ.ಎಸ್. ಬ್ಯಾಚ್‌ ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಡಾ ಭಾರತಿ ಪ್ರವೀಣ್ ಪವಾರ್ ಅವರು ವಹಿಸಿದರು.

ಕಲ್ಯಾಣಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ ನ 2021 ರ ಮೂರನೇ ಶೈಕ್ಷಣಿಕ ಅಧಿವೇಶನದ ಪ್ರಾರಂಭದಲ್ಲಿ, 125 ಎಂಬಿಬಿಎಸ್ ವಿದ್ಯಾರ್ಥಿಗಳ ಬ್ಯಾಚ್‌ ನೊಂದಿಗೆ ಪ್ರಾರಂಭವಾಗುತ್ತಿರುವ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವರು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಆಡಳಿತವನ್ನು ಅಭಿನಂದಿಸಿದರು.

ಏಮ್ಸ್‌ ನ ಇತಿಹಾಸವನ್ನು ಪುನರುಚ್ಚರಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವರು, ಪ್ರತಿ ರಾಜ್ಯದಲ್ಲಿ ಏಮ್ಸ್‌ ಅನ್ನು ಸ್ಥಾಪಿಸುವುದು ನಮ್ಮ ಮಾನ್ಯ ಪ್ರಧಾನ ಮಂತ್ರಿಗಳ ದೂರದೃಷ್ಟಿಯಾಗಿದೆ ಎಂದು ಹೇಳಿದರು. ಇದರ ಪರಿಣಾಮವಾಗಿ, ಇದುವರೆಗೆ ಒಟ್ಟು 22 ಎ.ಐ.ಐ.ಎಂ.ಎಸ್. ಅನುಮೋದನೆಗಳನ್ನು ಸ್ವೀಕರಿಸಲಾಗಿದೆ. ಏಮ್ಸ್ ಸ್ಥಾಪನೆಯ ಜೊತೆಗೆ, ಆಧುನಿಕ ಚಿಕಿತ್ಸಾ ಸೌಲಭ್ಯಗಳ ಅಭಿವೃದ್ಧಿ ಮತ್ತು ನುರಿತ ವೈದ್ಯರ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ, ಇದರಿಂದ ಬಡವರಿಗೆ ಕೈಗೆಟುಕುವ ಚಿಕಿತ್ಸೆ ನೀಡಬಹುದು ಎಂದು ಸಚಿವರು ಹೇಳಿದರು.

“ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭವಿಷ್ಯವು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ಸಮಾಜಗಳಿಗೆ ಸೇರಿದ್ದು ಎಂಬ ವಿಶ್ವಾಸ ಹೊಂದಿದ್ದಾರೆ. ರೂ.1,754 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣಿ ಏಮ್ಸ್, 179.82 ಎಕರೆ ಪ್ರದೇಶದಲ್ಲಿ 960 ಹಾಸಿಗೆಗಳ ಆಸ್ಪತ್ರೆಯಾಗಲಿದೆ. ವಿವಿಧ ವಿಷಯಗಳಲ್ಲಿ ವೈದ್ಯಕೀಯ ಶಿಕ್ಷಣ, ಬಯೋಮೆಡಿಕಲ್ ವಿಜ್ಞಾನದಲ್ಲಿ ಸಂಶೋಧನೆ ಮತ್ತು ಉನ್ನತ ಮಟ್ಟದ ವೈದ್ಯಕೀಯ ಸೇವೆಯನ್ನು ಒದಗಿಸುವುದು ಎಂಬ ಮೂರು ಆಧಾರ ಸ್ತಂಭಗಳನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹೊಂದಿದೆ. ಸಧ್ಯದಲ್ಲೇ ಪಶ್ಚಿಮ ಬಂಗಾಳದ ಆರೋಗ್ಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿ ಏಮ್ಸ್ ಕಲ್ಯಾಣಿ ಆಸ್ಪತ್ರೆಯು ಸಾಬೀತುಪಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಇದು ಶೀಘ್ರದಲ್ಲೇ ಶ್ರೇಷ್ಠತೆಯ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಸಚಿವರು ಹೇಳಿದರು.

 2021 ರ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಮತ್ತು ಏಮ್ಸ್ ಕಲ್ಯಾಣಿಯ ಎ.ಐ.ಐ.ಎಂ.ಎಸ್. ಕೋರ್ಸ್‌ಗೆ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು. ಇದರೊಂದಿಗೆ, ತಮ್ಮ ಮಕ್ಕಳಲ್ಲಿ ಮಾನವ ಸೇವಾ ಮನೋಭಾವವನ್ನು ತುಂಬಿದ ಭಾರತದ ಈ ಭವಿಷ್ಯದ ವೈದ್ಯರ ಪೋಷಕರನ್ನು ಅವರು ಅಭಿನಂದಿಸಿದರು. ಮತ್ತು, ಜನರು ಒಟ್ಟಾಗಿ ಕೆಲಸ ಮಾಡಲು ಮತ್ತು ಏಮ್ಸ್, ಕಲ್ಯಾಣಿ ಆ ನಿಟ್ಟಿನಲ್ಲಿ ಪೂರ್ಣ ಸಾಮರ್ಥ್ಯರೂಪದಲ್ಲಿ ಕೆಲಸ ಮಾಡುವಂತೆ ಸಚಿವರು ವಿನಂತಿಸಿದರು. ಎ.ಐ.ಐ.ಎಂ.ಎಸ್. ಕಲ್ಯಾಣಿಯು ಬಂಗಾಳದ ಜನರಿಗೆ ಕೈಗೆಟುಕುವ ವೈದ್ಯಕೀಯ ಸೇವೆಗಳನ್ನು ಒದಗಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಕೇಂದ್ರ ರಾಜ್ಯ ಸಚಿವರು ಹೇಳಿದರು, ಇದರಿಂದಾಗಿ ಸಾಲಿನ ಸರತಿಯ ಕೊನೆಯ ವ್ಯಕ್ತಿಗೂ ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ದೂರದೃಷ್ಟಿಯು ಶೀಘ್ರವಾಗಿ ಸಾಕಾರಗೊಳ್ಳುತ್ತದೆ.

ದೆಹಲಿಯ ಏಮ್ಸ್‌ ನ ಮಾಜಿ ಸಂಶೋಧನಾ ಡೀನ್ ಮತ್ತು ಏಮ್ಸ್ ಕಲ್ಯಾಣಿ ಅಧ್ಯಕ್ಷೆ ಡಾ ಚಿತ್ರಾ ಸರ್ಕಾರ್, ಎ.ಐ.ಐ.ಎಂ.ಎಸ್. ಕಲ್ಯಾಣಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರಾಮ್‌ ಜಿ ಸಿಂಗ್ ಮತ್ತು ಇತರ ಹಿರಿಯ ಪ್ರಾಧ್ಯಾಪಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಎಲ್ಲಾ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

****



(Release ID: 1803611) Visitor Counter : 284