ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪೋಲೆಂಡ್ ಅಧ್ಯಕ್ಷ ಎಚ್.ಇ. ಆಂಡ್ರೆಜ್ ದುಡಾ ನಡುವೆ ದೂರವಾಣಿ ಸಂಭಾಷಣೆ

Posted On: 01 MAR 2022 10:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪೋಲೆಂಡ್ ಅಧ್ಯಕ್ಷ  ಎಚ್.. ಆಂಡ್ರೆಜ್ ದುಡಾ ಜತೆ ದೂರವಾಣಿ ಮೂಲಕ ಮಾತನಾಡಿದರು.

ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ಪೋಲೆಂಡ್ ಒದಗಿಸಿದ ಸಹಾಯಕ್ಕಾಗಿ ಮತ್ತು ಉಕ್ರೇನ್‌ನಿಂದ ಪೋಲೆಂಡ್‌ಗೆ ದಾಟುವ ಭಾರತೀಯ ನಾಗರಿಕರಿಗೆ ವೀಸಾ ಅವಶ್ಯಕತೆಗಳನ್ನು ಸಡಿಲಿಸುವ ವಿಶೇಷ ಸೂಚಕಕ್ಕಾಗಿ ಪ್ರಧಾನಮಂತ್ರಿ ಅವರು ಅಧ್ಯಕ್ಷ ದುಡಾ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕಷ್ಟದ ಸಮಯದಲ್ಲಿ ಪೋಲಿಂಡ್ ನಾಗರಿಕರು ಭಾರತೀಯ ಪ್ರಜೆಗಳಿಗೆ ನೀಡಿದ ಸ್ವಾಗತ ಮತ್ತು ಅನುಕೂಲಕ್ಕಾಗಿ ಅವರು ತಮ್ಮ ನಿರ್ದಿಷ್ಟ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಉಭಯ ದೇಶಗಳ ನಡುವಿನ ಸಾಂಪ್ರದಾಯಿಕ ಸೌಹಾರ್ದ ಸಂಬಂಧವನ್ನು ಪ್ರಸ್ತಾಪಿಸುತ್ತಾ, 2001 ರಲ್ಲಿ ಗುಜರಾತ್ ಭೂಕಂಪದ ಹಿನ್ನೆಲೆಯಲ್ಲಿ ಪೋಲೆಂಡ್ ನೀಡಿದ ನೆರವನ್ನು ಪ್ರಧಾನಿ ಸ್ಮರಿಸಿದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಹಲವಾರು ಪೋಲಿಂಡ್ ಕುಟುಂಬಗಳು ಮತ್ತು ಯುವ ಅನಾಥರನ್ನು ರಕ್ಷಿಸುವಲ್ಲಿ ಜಾಮ್‌ನಗರದ ಮಹಾರಾಜರು ವಹಿಸಿದ  ಅನುಕರಣೀಯ ಪಾತ್ರವನ್ನು ಅವರು ಸ್ಮರಿಸಿದರು.

ಭಾರತೀಯ ನಾಗರಿಕರ ಸ್ಥಳಾಂತರಿಸುವ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಪೋಲೆಂಡ್‌ನಲ್ಲಿ ಅವರ ವಿಶೇಷ ರಾಯಭಾರಿಯಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ (ಡಾ.) ವಿ.ಕೆ. ಸಿಂಗ್ (ನಿವೃತ್ತ), ಅಲ್ಲಿ ನೆಲೆಸಿದ್ದಾರೆ ಎಂದು ಪ್ರಧಾನಿ ಅವರು ಅಧ್ಯಕ್ಷ ದುಡಾಗೆ ತಿಳಿಸಿದರು.

ಯುದ್ಧವನ್ನು ನಿಲ್ಲಿಸಲು ಮತ್ತು ಮಾತುಕತೆಗೆ ಮರಳಲು ಭಾರತದ ನಿರಂತರ ಮನವಿಯನ್ನು ಪ್ರಧಾನಿ ಪುನರುಚ್ಚರಿಸಿದರು. ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

***


(Release ID: 1802256) Visitor Counter : 203