ರಾಷ್ಟ್ರಪತಿಗಳ ಕಾರ್ಯಾಲಯ

ಎಲ್ಲವನ್ನೂ ಒಳಗೊಂಡ, ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು: ಉಪರಾಷ್ಟ್ರಪತಿ


ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಖಾಸಗಿ ಶಾಲೆಗಳು ನೀತಿಗಳನ್ನು ರೂಪಿಸಬೇಕೆಂದು ಉಪರಾಷ್ಟ್ರಪತಿ ಕರೆ

ಸಮುದಾಯ ಸೇವೆಯನ್ನು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡುವಂತೆ ಶಾಲೆಗಳಿಗೆ ಉಪರಾಷ್ಟ್ರಪತಿ ಕರೆ

ನಮ್ಮ ಶ್ರೀಮಂತ ಮತ್ತು ವೈವಿಧ್ಯಮಯ ಕಲಾ ಪ್ರಾಕಾರಗಳ ಸಂರಕ್ಷಣೆ ಮತ್ತು ಉತ್ತೇಜನ ನಮ್ಮ ಕರ್ತವ್ಯ: ಉಪರಾಷ್ಟ್ರಪತಿ

ಬೆಂಗಳೂರಿನ ಗ್ರೀನ್ ವುಡ್ ಹೈ ಇಂಟರ್ ನ್ಯಾಷನಲ್  ಸ್ಕೂಲ್ ನಲ್ಲಿ ಒಳ ಕ್ರೀಡಾಂಗಣ ಮತ್ತು ಕಲಾ ಕೇಂದ್ರವನ್ನು ಉದ್ಘಾಟಿಸಿದ ಉಪರಾಷ್ಟ್ರಪತಿ

Posted On: 26 FEB 2022 1:23PM by PIB Bengaluru

ಎಲ್ಲವನ್ನೊಳಗೊಂಡ, ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು ಎಂದು ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಇಂದು ಪ್ರತಿಪಾದಿಸಿದರು. ಅವರು ದುರ್ಬಲ ವರ್ಗದ ಮತ್ತು ಅಗತ್ಯ ಇರುವ ಮಕ್ಕಳಿಗೆ ಸಹಾಯ ನೀಡಲು ಖಾಸಗಿ ಶಾಲೆಗಳು ನೀತಿಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು. ಅಗತ್ಯವಿರುವವರಿಗೆ ಮತ್ತು ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಸಹಾಯದ ನೆರವು ನೀಡುವುದು ಆದ್ಯತೆಯ ಕೆಲಸವಾಗಬೇಕು ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿಂದು ಗ್ರೀನ್ ವುಡ್ ಹೈ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಮತ್ತು ಕಲೆ, ನಾಟಕ ಹಾಗೂ ಸಂಗೀತಕ್ಕೆ ಮೀಸಲಾದ ಕಲಾಕೇಂದ್ರವನ್ನು ಉದ್ಘಾಟಿಸಿದ ನಂತರ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಚಿಕ್ಕ ವಯಸ್ಸಿಯನಲ್ಲೇ ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸುವುದು ಅತ್ಯಗತ್ಯ ಎಂದು ಶ್ರೀ ವೆಂಕಯ್ಯನಾಯ್ಡು ಪ್ರತಿಪಾದಿಸಿದರು. ಶಾಲೆಗಳು, ಸಮುದಾಯ ಸೇವೆಯನ್ನು ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಬೇಕು. ಇದರಿಂದ ಮಕ್ಕಳು ಚಿಕ್ಕವಯಸ್ಸಿನಲ್ಲೇ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳಸಿಕೊಳ್ಳಲಿದ್ದಾರೆ ಎಂದರು.

ಶೈಕ್ಷಣಿಕ ಸಂಸ್ಥೆಗಳು, ಓದು, ಕ್ರೀಡೆ, ಸಹ ಪಠ್ಯ ಮತ್ತು ಮನರಂಜನಾ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು. ಅಂತಹ ಮನೋಭಾವದಿಂದಾಗಿ ಮಕ್ಕಳ ಸಮಗ್ರ ವಿಕಸನವಾಗುತ್ತದೆ ಮತ್ತು ಅವರು ವಿಶ್ವಾಸಾರ್ಹ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು. ಮಕ್ಕಳನ್ನು ಕೈತೋಟ, ಉದ್ಯಾನವನ, ಸಸಿಗಳನ್ನು ನೆಡುವುದು ಮತ್ತು ಜಲಸಂರಕ್ಷಣೆಯಂತಹ ಚಟುವಟಿಕೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಬಳಸಿಕೊಳ್ಳಬೇಕು ಎಂಬುದು ತಮ್ಮ ಬಯಕೆಯಾಗಿದೆ ಎಂದರು. ಇದರಿಂದ ಮಕ್ಕಳು ಪ್ರಕೃತಿಗೆ ಹತ್ತಿರವಾಗುತ್ತಾರೆ ಎಂದ ಅವರು, ಜಲಸಂರಕ್ಷಣೆಗೆ ಸಂಬಂಧಿಸಿದಂತೆ 3ಆರ್ ಅಂದರೆ ರೆಡ್ಯೂಸ್ (ತಗ್ಗಿಸುವುದು), ರಿಯೂಸ್ (ಮರುಬಳಕೆ) ಮತ್ತು ರಿಸೈಕಲ್ (ಮರುಸಂಸ್ಕರಣೆ)–ಇವುಗಳಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ-2020 ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಪ್ರತಿಪಾದಿಸಿದ ಶ್ರೀ ಎಂ. ವೆಂಕಯ್ಯನಾಯ್ಡು ಅವರು ಕ್ರೀಡೆ, ಸಹ ಪಠ್ಯ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವುದಕ್ಕೆ ಆದ್ಯತೆ ನೀಡುವಂತೆ ಎಲ್ಲ ರಾಜ್ಯಗಳಿಗೆ ಕರೆ ನೀಡಿದರು.

ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಅವರು, ವಿದ್ಯಾರ್ಥಿಗಳು ನಮ್ಮ ನಾಗರಿಕತೆಯ ಮೌಲ್ಯಗಳನ್ನು ಪಾಲಿಸಬೇಕು ಮತ್ತು ಭಾರತದ ವೈಭವದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು. “ನಾವು ಮೌಲ್ಯಗಳನ್ನು ಮರುಸ್ಥಾಪಿಸಬೇಕು, ನಮ್ಮ ಪರಂಪರೆ ಸಂರಕ್ಷಿಸಬೇಕು, ನಮ್ಮ ಸಂಸ್ಕೃತಿ ಉತ್ತೇಜಿಸಬೇಕು ಮತ್ತು ಭಾರತೀಯ ಎಂಬ ಹೆಮ್ಮೆಯ ಭಾವನೆ ಹೊಂದಬೇಕು’’ ಎಂದು ಅವರು ಹೇಳಿದರು.

ಒಂದು ಕಾಲದಲ್ಲಿ ಭಾರತ ‘ವಿಶ್ವ ಗುರು’ವಾಗಿತ್ತು ಎಂದು ಹೇಳಿದ ಶ್ರೀ ವೆಂಕಯ್ಯನಾಯ್ಡು ಅವರು, ದೀರ್ಘಕಾಲದ ವಸಾಹತು ಆಡಳಿತ ನಮ್ಮ ಗತವೈಭವವನ್ನು ಮರೆಯುವಂತೆ ಮಾಡಿದೆ ಎಂದರು. “ಭಾರತ ಇಂದು ಮುನ್ನಡೆಯ ಹಾದಿಯಲ್ಲಿದೆ ಮತ್ತು ನಾವು ನಮ್ಮ ಬೇರುಗಳತ್ತ ವಾಪಸ್ಸಾಗಲು ಇದು ಸಕಾಲ” ಎಂದು ಅವರು ಹೇಳಿದರು.

ಮಾತೃಭಾಷೆಯ ಉತ್ತೇಜನ ಮತ್ತು ಅದನ್ನು ಜನಪ್ರಿಯಗೊಳಿಸುವ ತಮ್ಮ ಕರೆಯನ್ನು ಪುನಃ ಪ್ರತಿಪಾದಿಸಿದ ಉಪರಾಷ್ಟ್ರಪತಿ, ಪ್ರತಿಯೊಬ್ಬರೂ ಸಾಧ್ಯವಾದಷ್ಟು ಹಲವು ಭಾಷೆಗಳನ್ನು ಕಲಿಯಬೇಕು. ಆದರೆ ಮಾತೃಭಾಷೆ ಕಲಿಕೆ ಸದಾ ಅವರ ಆದ್ಯತೆಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ದಿನನಿತ್ಯದ ಜೀವನದಲ್ಲಿ ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ಪ್ರಾಮುಖ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಎಂ. ವೆಂಕಯ್ಯನಾಯ್ಡು ಅವರು, ಫಿಟ್ ಇಂಡಿಯಾ ಅಭಿಯಾನ ಪ್ರತಿಯೊಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಪಂಚಾಯತ್ ಮತ್ತು ಗ್ರಾಮವನ್ನು ತಲುಪಿದೆ ಎಂದು ಹೇಳಿದರು.

ಕಲೆಗೆ ಮಿತಿ ಎಂಬುದಿಲ್ಲ ಎಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ಕಲೆ ನಮ್ಮ ಕಲ್ಪನೆಗೆ ಆಕಾರ ನೀಡುತ್ತದೆ ಮತ್ತು ಅದು ಯಾವುದೇ ಗಡಿಗಳಿಲ್ಲದ ಸಾರ್ವತ್ರಿಕ ಭಾಷೆಯನ್ನು ಮಾತನಾಡುತ್ತದೆ ಎಂದರು. ಭಾರತದ ವಿಭಿನ್ನ ಮತ್ತು ವೈವಿಧ್ಯಮಯ ನೃತ್ಯ ಕಲಾ ಪ್ರಾಕಾರಗಳನ್ನು ಉಲ್ಲೇಖಿಸಿದ ಶ್ರೀ ಎಂ. ವೆಂಕಯ್ಯನಾಯ್ಡು ಅವರು, ಭರತನಾಟ್ಯ, ಕೂಚುಪುಡಿ ಮತ್ತು ಕಥಕ್ಕಳಿ ಸೇರಿದಂತೆ ಕೆಲವು ಪುರಾತನ ಕಲಾ ಪ್ರಾಕಾರಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಾಗುತ್ತಾ ಬಂದಿವೆ ಎಂದರು. “ಭಾರತದ ಕಲೆ, ಸಂಗೀತ ಮತ್ತು ನಾಟಕ ಜಗತ್ತಿಗೇ ಅತ್ಯಂತ ಶ್ರೇಷ್ಠ ಉಡುಗೊರೆಯಾಗಿವೆ ಮತ್ತು ನಮ್ಮ ಶ್ರೀಮಂತ ಮತ್ತು ವಿಭಿನ್ನ ಕಲಾ ಪ್ರಾಕಾರಗಳನ್ನು ಉತ್ತೇಜಿಸುವುದು ಮತ್ತು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಅವರು ಹೇಳಿದರು. 

ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಸಚಿವರಾದ ಶ್ರೀ ಮುನಿರತ್ನ, ಗ್ರೀನ್ ವುಡ್ ಹೈ ಇಂಟರ್  ನ್ಯಾಷನಲ್ ಸ್ಕೂಲ್ ನ ಮುಖ್ಯಸ್ಥರಾದ ಶ್ರೀ ಬಿಜಾಯ್ ಅಗರ್ ವಾಲ್, ಪ್ರಾಂಶುಪಾಲರದ ಅಲೋಶಿಯಸ್ ಡಿ ಮೆಲ್ಲೊ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

***



(Release ID: 1801338) Visitor Counter : 215