ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ 'ಹುಣಸೆ ಹುಚ್ಚ' ಎಂದೇ ಜನಪ್ರಿಯವಾಗಿರುವ ಕರ್ನಾಟಕದ ತಳಮಟ್ಟದ ಸಂಶೋಧಕ

Posted On: 27 JAN 2022 4:00PM by PIB Bengaluru

2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ 107 ಸಾಧಕರ ಪಟ್ಟಿಯಲ್ಲಿ ಕರ್ನಾಟಕದ ಧಾರವಾಡದ ತಳಮಟ್ಟದ ಸಂಶೋಧಕ ಶ್ರೀ ಅಬ್ದುಲ್ ಖಾದರ್ ನಡಕಟ್ಟಿನ್ ಅವರು ಸಹ ಸೇರಿದ್ದಾರೆ. ಖಾದರ್‌ ಅವರು ಇತರೆ (ತಳಮಟ್ಟದ ಸಂಶೋಧನೆ) ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಶ್ರೀ ಅಬ್ದುಲ್ ಖಾದರ್ ನಡಕಟ್ಟಿನ್ ಅವರು  ಸರಣಿ ಸಂಶೋಧಕರು. ಅವರ ಪ್ರಮುಖ ಆವಿಷ್ಕಾರಗಳಲ್ಲಿ ಹುಣಸೆ ಬೀಜಗಳನ್ನು ಬೇರ್ಪಡಿಸುವ ಸಾಧನ, ಉಳುಮೆ ಬ್ಲೇಡ್ ಉತ್ಪಾದನಾ ಯಂತ್ರ, ಬೀಜ ಮತ್ತು ರಸಗೊಬ್ಬರ ಕೂರಿಗೆ , ನೀರು ಕಾಯಿಸುವ ಬಾಯ್ಲರ್, ಸ್ವಯಂಚಾಲಿತ ಕಬ್ಬು ಬಿತ್ತನೆ ಕೂರಿಗೆ ಮತ್ತು ವೀಲ್ ಟಿಲ್ಲರ್ ಸೇರಿವೆ. ಅವರ ಎಲ್ಲಾ ಆವಿಷ್ಕಾರಗಳು ಸುಸ್ಥಿರತೆ, ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಸ್ವೀಕಾರದ ತತ್ವಗಳನ್ನು ಎತ್ತಿ ತೋರುತ್ತವೆ. ಕೃಷಿ ಹವಾಮಾನ ಪರಿಸ್ಥಿತಿಗಳು ಮತ್ತು ಮಣ್ಣಿನ ಗುಣಲಕ್ಷಣಗಳ ಬಗ್ಗೆ ಅವರ ಆಳವಾದ ಜ್ಞಾನವು ಅವರನ್ನು ದೇಶದ ಇತರ ರೈತರಿಗೆ ಸ್ಫೂರ್ತಿಯನ್ನಾಗಿಸಿದೆ. 

ಅವರ ಮೊದಲ ಆವಿಷ್ಕಾರವೆಂದರೆ “ನೀರಿನ ಅಲಾರಂ”. ಪ್ರತಿದಿನ ಬೆಳಗಿನ ಹೊತ್ತು ತಡವಾಗಿ ಏಳುವ ತಮ್ಮ ಅಭ್ಯಾಸಕ್ಕೆ ಪರಿಹಾರವಾಗಿ ನಡೆಸಿದ ವೈಯಕ್ತಿಕ ಮಟ್ಟದ ಪ್ರಯತ್ನ ಇದಾಗಿತ್ತು. ಅವರು ಅಲಾರಂನ ಕೀಲಿಯ ತುದಿಯಲ್ಲಿ ತೆಳುವಾದ ಹಗ್ಗವನ್ನು ಕಟ್ಟುತ್ತಿದ್ದರು. ಕೀಲಿಯು ಸುರುಳಿ ಬಿಚ್ಚಿಕೊಂಡಾಗ, ಕೀಲಿಗೆ ಕಟ್ಟಿದ ದಾರವು ಬಿಚ್ಚಿಕೊಳ್ಳುತ್ತಿತ್ತು. ಆ ದಾರವನ್ನು ನೀರಿನಿಂದ ತುಂಬಿದ ಬಾಟಲಿಗೆ ಕಟ್ಟಲಾಗಿತ್ತು. ಕೀಲಿ ಸಮೇತ ಹಗ್ಗವು ಸಂಪೂರ್ಣವಾಗಿ ಬಿಚ್ಚಿಕೊಂಡಾಗ, ಬಾಟಲಿಯು ವಾಲಿ, ಅದರಲ್ಲಿದ್ದ ನೀರು ಖಾದರ್‌ ಅವರ ಮುಖದ ಮೇಲೆ ಬೀಳುತ್ತಿತ್ತು. ಇದಾದ ಬಳಿಕ ನಂತರ ಅವರು ಕೃಷಿ ತಂತ್ರಜ್ಞಾನಗಳು ಮತ್ತು ಸಲಕರಣೆಗಳನ್ನು ಅಭಿವೃದ್ಧಿಪಡಿಸಿದರು. ಇದು ಆಧುನಿಕ ಕೃಷಿಯೊಂದಿಗೆ ಪ್ರಸ್ತುತತೆಯನ್ನು ಕಾಯ್ದುಕೊಂಡ ಈ ಸಂಶೋಧನೆಗಳು ಸ್ಥಳೀಯ ಜನರ ವಿವಿಧ ಅಗತ್ಯಗಳನ್ನು ಪೂರೈಸಿದವು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ  (ಡಿಎಸ್‌ಟಿ) ಅಡಿಯ ಸ್ವಾಯತ್ತ ಸಂಸ್ಥೆಯಾದ ʻಭಾರತದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ʼ(ಎನ್‌ಐಎಫ್) ಬೆಂಬಲದೊಂದಿಗೆ, 2015ರಲ್ಲಿ ʻಎನ್‌ಐಎಫ್ 8ನೇ ತಳಮಟ್ಟದ ಆವಿಷ್ಕಾರ ಮತ್ತು ಅತ್ಯುತ್ತಮ ಸಾಂಪ್ರದಾಯಿಕ ಜ್ಞಾನ ಪ್ರಶಸ್ತಿʼಗಳ ಪ್ರದಾನದ ಸಂದರ್ಭದಲ್ಲಿ ಶ್ರೀ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ಅಂದಿನ ಗೌರವಾನ್ವಿತ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅವರ ತಳಮಟ್ಟದ ಮನೋಭಾವಕ್ಕೆ ತಕ್ಕಂತೆ ಮತ್ತು ಪ್ರಶಸ್ತಿಯ ಗೌರವದ ಸಂಕೇತವಾಗಿ, ಅವರು ಪ್ರಶಸ್ತಿ ಸ್ವೀಕರಿಸಲು ಬರಿಗಾಲಿನಲ್ಲೇ ಹೆಜ್ಜೆ ಹಾಕಿದರು. ಆ ಮೂಲಕ ದೇಶದ "ಬರಿಗಾಲಿನ ವಿಜ್ಞಾನಿ" ಎಂದೂ ಪ್ರಸಿದ್ಧರಾದರು.
ಹುಣಸೆಗೆ ಸಂಬಂಧಿಸಿದ ಆವಿಷ್ಕಾರಗಳು, ಸಾಧನೆಗಳ ಹಿನ್ನೆಲೆಯಲ್ಲಿ ಜನರು ಅವನನ್ನು"ಹುಣಸೆ ಹುಚ್ಚ" ಎಂದು ಕರೆಯಲು ಆರಂಭಿಸಿದರು. ಅಲ್ಪ ಮತ್ತು ಕ್ಷಾರೀಯ ನೀರಿನಿಂದ ಹುಣಸೆಯನ್ನು ಬೆಳೆಯುವಲ್ಲಿ ಅವರ ಯಶಸ್ಸಿನೊಂದಿಗೆ ಈ ಸಾಧನೆಯ ಹಾದಿ ಪ್ರಾರಂಭವಾಯಿತು. ಮರದಿಂದ ಹುಣಸೆಯನ್ನು ಕೊಯ್ಲು ಮಾಡುವ ತಂತ್ರಗಾರಿಕೆ ಮತ್ತು ಹುಣಸೆ ಬೀಜಗಳನ್ನು ಬೇರ್ಪಡಿಸಲು ಅತ್ಯಂತ ಸರ್ವಸಮ್ಮತ ಯಂತ್ರದಂತಹ ಪ್ರಯೋಗಗಳ ಮೂಲಕ ಅವರು ಸಾಧನೆಯಲ್ಲಿ ಮತ್ತಷ್ಟು ಮೇಲೇರಿದರು. ಇದು ಹುಣಸೆಯನ್ನು ಕತ್ತರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಲು ಅವರಿಗೆ ಸ್ಫೂರ್ತಿ ನೀಡಿತು. ಹುಣಸೆಯೊಂದಿಗೆ ಯಶಸ್ಸನ್ನು ಮುಂದುವರಿಸಿದ ಅವರು, ಆಳವಾದ ಉಳುಮೆ, ಬೀಜಗಳ ಬಿತ್ತನೆ ಕೂರಿಗೆ ಮತ್ತು ಕಡಿಮೆ ಇಂಧನ ಬಳಸುವ ನೀರು ಕಾಯಿಸುವ ಬಾಯ್ಲರ್‌ನಂತಹ ಕೃಷಿ ಆಧರಿತ ಆವಿಷ್ಕಾರಗಳನ್ನು ಮಾಡಿದರು.
ಈಗ್ಗೆ ಹಲವು ವರ್ಷಗಳಿಂದಲೂ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಾ ಪ್ರಶಸ್ತಿಗೆ ತಳಮಟ್ಟದ ಸಂಶೋಧಕರನ್ನು ಆಯ್ಕೆ ಮಾಡಲಾಗುತ್ತಿದೆ. ಸಾಹಿತ್ಯ ಮತ್ತು ಶಿಕ್ಷಣ, ಕಲೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ಯಮ, ನಾಗರಿಕ ಸೇವೆಗಳು, ಸಾರ್ವಜನಿಕ ವ್ಯವಹಾರಗಳು, ಕ್ರೀಡೆ,  ಮತ್ತು ಔಷಧ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಈ ಪ್ರಶಸ್ತಿಯು ಯುವ ಪೀಳಿಗೆಯನ್ನು ಮತ್ತಷ್ಟು ಆವಿಷ್ಕಾರಮಾಡಲು ಪ್ರೇರೇಪಿಸುತ್ತದೆ!

Description: C:\Users\dell\Downloads\Inspiring the generation_ Grassroots Innovators of India.png
 
ಶ್ರೀ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ʻಎನ್ಐಎಫ್ʼನ 8ನೇ ರಾಷ್ಟ್ರೀಯ ತಳಮಟ್ಟದ ಆವಿಷ್ಕಾರ ಮತ್ತು ಅತ್ಯುತ್ತಮ ಸಾಂಪ್ರದಾಯಿಕ ಜ್ಞಾನ ಪ್ರಶಸ್ತಿಗಳ ಪ್ರದಾನʼ ಸಂದರ್ಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಂದಿನ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಪ್ರದಾನ ಮಾಡಿದರು. 
***


(Release ID: 1792983) Visitor Counter : 350


Read this release in: English , Urdu , Hindi , Telugu