ಸಂಸ್ಕೃತಿ ಸಚಿವಾಲಯ
ʻಆಜಾದಿ ಕಾ ಅಮೃತ್ ಮಹೋತ್ಸವ್ʼ ಅಡಿಯಲ್ಲಿ ʻರಾಷ್ಟ್ರೀಯ ಹೆಣ್ಣು ಮಕ್ಕಳ ದಿನʼ ಆಚರಣೆ ಭಾಗವಾಗಿ 'ಉಮಂಗ್ ರಂಗೋಲಿ ಉತ್ಸವʼ ಆಯೋಜಿಸಿದ ಸಂಸ್ಕೃತಿ ಸಚಿವಾಲಯ
70ಕ್ಕೂ ಹೆಚ್ಚು ಸ್ಥಳಗಳಲ್ಲಿ ರಂಗೋಲಿ ಚಿತ್ತಾರಗಳ ಮೂಲಕ ಪ್ರಗತಿಪರ ಭಾರತ @75 ಪ್ರಯಾಣಕ್ಕೆ ಮಹಿಳೆಯರ ಕೊಡುಗೆಗಳನ್ನು ಸಂಭ್ರಮಿಸಲಾಯಿತು
Posted On:
24 JAN 2022 6:41PM by PIB Bengaluru
ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ರಾಷ್ಟ್ರವು ʻಆಜಾದಿ ಕಾ ಅಮೃತ್ ಮಹೋತ್ಸವʼವನ್ನು ಆಚರಿಸುತ್ತಿದೆ. ದೇಶಾದ್ಯಂತ ಈ ಸಂದರ್ಭವನ್ನು ಗುರುತಿಸಲು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಆಚರಣೆಯ ಭಾಗವಾಗಿ, ಸಂಸ್ಕೃತಿ ಸಚಿವಾಲಯವು 2022ರ ಜನವರಿ 24 ರಂದು 'ಉಮಂಗ್ ರಂಗೋಲಿ ಉತ್ಸವʼವನ್ನು ಆಯೋಜಿಸಿತು.
ಪ್ರತಿ ವರ್ಷ ಈ ದಿನವನ್ನು ʻರಾಷ್ಟ್ರೀಯ ಹೆಣ್ಣು ಮಕ್ಕಳ ದಿನʼವಾಗಿ ಆಚರಿಸಲಾಗುತ್ತದೆ, ಈ ವರ್ಷದ ಈ ವಿಶೇಷ ದಿನದ ನೆನಪಿಗಾಗಿ ʻಹೆಣ್ಣು ಮಗುʼವನ್ನು ಆಚರಿಸುವ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದವರು, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಅಥವಾ ದೇಶದ ಮಾದರಿ ಮಹಿಳೆಯರ ಹೆಸರಿನ ರಸ್ತೆಗಳು ಹಾಗೂ ಚೌಕಗಳಲ್ಲಿ ರಂಗೋಲಿ ಅಲಂಕಾರಗಳನ್ನು ಬಿಡಿಸಿದರು. 19 ರಾಜ್ಯಗಳ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ರಂಗೋಲಿ ಅಲಂಕಾರ ಮಾಡಲಾಗಿತ್ತು. ಪ್ರಗತಿಪರ ಭಾರತ@75 ಪ್ರಯಾಣಕ್ಕೆ ಮಹಿಳೆಯರ ಕೊಡುಗೆಗಳನ್ನು ಪ್ರಶಂಸಿಸಲು ಈ ಕಾರ್ಯಕ್ರಮದ ಮೂಲಕ 'ಹೆಣ್ಣು ಮಕ್ಕಳ ದಿನ' ಮತ್ತು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಒಟ್ಟಿಗೆ ಆಚರಿಸಲಾಯಿತು.
ʻಹೆಣ್ಣು ಮಕ್ಕಳ ದಿನʼವು ದೇಶದಲ್ಲಿ ಹೆಣ್ಣು ಮಗುವಿನ ಪ್ರಾಮುಖ್ಯ ಮತ್ತು ಅವಳ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಅಪಾರ ಮಹತ್ವವನ್ನು ಹೊಂದಿದೆ. ಈ ಕಾರ್ಯಕ್ರಮವು 'ಬೇಟಿ ಬಚಾವೋ, ಬೇಟಿ ಪಡಾವೋ', 'ಬೇಟಿ ಜಿಂದಾಬಾದ್' ಮುಂತಾದ ಉಪಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸಿತು. ಈ ಕಾರ್ಯಕ್ರಮವು ಲಿಂಗ ಅನುಪಾತ ಅಸಮತೋಲನ ಕಡಿಮೆ ಮಾಡಲು ಮತ್ತು ಪ್ರತಿ ಹೆಣ್ಣು ಮಗುವಿಗೆ ಬೆಳೆಯಲು, ಕನಸುಗಳನ್ನು ಕಟ್ಟಿಕೊಳ್ಳಲು ಮತ್ತು ಅವುಗಳ ಪೂರೈಕೆಗೆ ಸಮಾನ ಅವಕಾಶವನ್ನು ನೀಡಲು ಎಲ್ಲರಿಗೂ ನೆನಪು ಮಾಡಿತು.
ಭಾರತವನ್ನು ಸ್ವತಂತ್ರಗೊಳಿಸಲು ವೀರಾವೇಶದಿಂದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳು ಸಹ ಈ ಕಾರ್ಯಕ್ರಮದ ಭಾಗವಾಗಿದ್ದವು. ಅಂತಹ ಒಂದು ಸ್ಥಳವೆಂದರೆ ಮಧ್ಯಪ್ರದೇಶದ ರಾಜ್‌ಗಢ. ಇಲ್ಲಿ ಕುನ್ವರ್ ಚೈನ್ ಸಿಂಗ್ ಅವರ ಕುಟುಂಬದ ಉಪಸ್ಥಿತಿಯಿಂದ ಈ ಕಾರ್ಯಕ್ರಮ ವಿಶೇಷವಾಗಿ ಗಮನ ಸೆಳೆಯಿತು. ಕುನ್ವರ್ ಚೈನ್ ಸಿಂಗ್ ಅವರು 1824ರಲ್ಲಿ ಬ್ರಿಟಿಷರೊಂದಿಗೆ ಹೋರಾಡಿದ ನರಸಿಂಗ್‌ಗಢದ ರಾಜಕುಮಾರರಾಗಿದ್ದರು ಮತ್ತು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು.
ಜೌನ್‌ಪುರದಲ್ಲಿ 'ಉಮಂಗ್ ರಂಗೋಲಿ ಉತ್ಸವ'ವು ಸ್ವಾತಂತ್ರ್ಯ ಹೋರಾಟಗಾರ ಶ್ರೀ ರಾಮೇಶ್ವರ್ ಪ್ರಸಾದ್ ಸಿಂಗ್ ಅವರ ಪತ್ನಿ 119 ವರ್ಷದ ಮಹಾರಾಣಿ ದೇವಿ ಜೀ ಅವರ ಉಪಸ್ಥಿತಿಯೊಂದಿಗೆ ಕಳೆಗಟ್ಟಿತು.
ಈ ಕಾರ್ಯಕ್ರಮದಲ್ಲಿ ʻಯೂನಿಟಿಕ್ರಿಯೇಟಿವಿಟಿʼ#unityincreativity ಚಾಲೆಂಜ್ʼನ ಭಾಗಿದಾರರು, ಕಲಾವಿದರ ಸಂಘಟನೆಗಳು ಮತ್ತು ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಥಳೀಯ ಸಮುದಾಯಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 'ಜನ ಭಾಗಿದಾರಿ' ಆಶಯವನ್ನು ಉತ್ತೇಜಿಸಿದರು. ಜೊತೆಗೆ 'ಹೆಣ್ಣು ಮಗುವಿನ ಶಕ್ತಿʼ ಸಂದೇಶವನ್ನು ಹರಡುವಲ್ಲಿ ಯಶಸ್ವಿಯಾದರು.
***
(Release ID: 1792311)
Visitor Counter : 301