ಪರಿಸರ ಮತ್ತು ಅರಣ್ಯ ಸಚಿವಾಲಯ
ಅರಣ್ಯ ಸಮೀಕ್ಷೆ ವರದಿ 2021 ಬಿಡುಗಡೆ; ಕಳೆದ ಎರಡು ವರ್ಷಗಳಲ್ಲಿ ದೇಶದ ಒಟ್ಟು ಅರಣ್ಯ ಮತ್ತು ವೃಕ್ಷ ವ್ಯಾಪ್ತಿಯಲ್ಲಿ 2,261 ಚದರ ಕಿಲೋ ಮೀಟರ್ ಹೆಚ್ಚಳ
ದೇಶದ ಪ್ರದೇಶವಾರುವಿನಂತೆ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅರಣ್ಯ ವ್ಯಾಪ್ತಿ
ಅರಣ್ಯ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶದಲ್ಲಿ(647 ಚ.ಕಿ.ಮೀ) ಗರಿಷ್ಠ ಹೆಚ್ಚಳ, ನಂತರದ ಸ್ಥಾನದಲ್ಲಿ ತೆಲಂಗಾಣ (632 ಚ.ಕಿ.ಮೀ) ಮತ್ತು ಒಡಿಶಾ (53 ಚ.ಕಿ.ಮೀ).
17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶದ ಭೌಗೋಳಿಕ ಪ್ರದೇಶದ ಪೈಕಿ ಶೇಕಡ 33ಕ್ಕಿಂತ ಹೆಚ್ಚು ಅರಣ್ಯ ವ್ಯಾಪ್ತಿಯಲ್ಲಿ
ದೇಶದ ಅರಣ್ಯದಲ್ಲಿ ಒಟ್ಟು ಇಂಗಾಲದ ಸಂಗ್ರಹವು 7,204 ದಶಲಕ್ಷ ಟನ್ ಗಳು ಎಂದು ಅಂದಾಜಿಸಲಾಗಿದ್ದು, ಇದರಲ್ಲಿ 79.4 ದಶಲಕ್ಷ ಹೆಚ್ಚಳವಾಗಿದೆ
ದೇಶದ ಒಟ್ಟು ಮ್ಯಾಂಗ್ರೋವ್ (ಕರಾವಳಿ ತೀರದ ಕಾಡು) ವ್ಯಾಪ್ತಿ 4,992 ಚ.ಕಿ.ಮೀ, 17 ಚ.ಕಿ.ಮೀ ಹೆಚ್ಚಳವಾಗಿರುವುದು ಕಂಡು ಬಂದಿದೆ
ಪರಿಮಾಣಾತ್ಮಕವಾಗಿ ಅರಣ್ಯ ಸಂರಕ್ಷಣೆಗಷ್ಟೇ ಸರ್ಕಾರ ಗಮನ ಹರಿಸಿಲ್ಲ, ಜೊತೆಗೆ ಅದನ್ನು ಗುಣಾತ್ಮಕವಾಗಿ ಉತ್ಕೃಷ್ಟಗೊಳಿಸುತ್ತಿದೆ: ಶ್ರೀ ಭೂಪೇಂದ್ರ ಯಾದವ್
Posted On:
13 JAN 2022 2:51PM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರಿಂದು ದೇಶದ ಅರಣ್ಯ ಮತ್ತು ವೃಕ್ಷ ವ್ಯಾಪ್ತಿಯ ನಿರ್ಧರಣೆ ಮಾಡಲು ಆದೇಶಿತವಾದ ಭಾರತೀಯ ಅರಣ್ಯ ಸಮೀಕ್ಷೆ (ಎಫ್.ಎಸ್.ಐ.) ಸಿದ್ಧಪಡಿಸಿರುವ ‘ಭಾರತದ ಅರಣ್ಯ ವರದಿ 2021’ಯನ್ನು ಬಿಡುಗಡೆ ಮಾಡಿದರು.
ಸಮೀಕ್ಷೆಯ ಫಲಶ್ರುತಿಗಳನ್ನು ಹಂಚಿಕೊಂಡ ಸಚಿವರು, ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು 80.9 ದಶಲಕ್ಷ ಹೆಕ್ಟೇರ್ ಆಗಿದೆ, ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 24.62 ರಷ್ಟಿದೆ. 2019ರ ನಿರ್ಧರಣೆಗೆ ಹೋಲಿಸಿದರೆ, ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ ಎಂದರು.
ಪ್ರಸ್ತುತ ನಿರ್ಧರಣೆಯು 17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಶೇ.33 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವು ಅರಣ್ಯವನ್ನು ಹೊಂದಿವೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ, ಪರಿಮಾಣಾತ್ಮಕವಾಗಿ ಅರಣ್ಯಗಳನ್ನು ಸಂರಕ್ಷಣೆಗಷ್ಟೇ ಸೀಮಿತವಾಗಿಲ್ಲ ಜೊತೆಗೆ ಅದನ್ನು ಗುಣಾತ್ಮಕವಾಗಿ ಉತ್ಕೃಷ್ಟಗೊಳಿಸಲೂ ಶ್ರಮಿಸುತ್ತಿದೆ ಎಂದರು.
ಐ.ಎಸ್.ಎಫ್.ಆರ್-2021 ಅರಣ್ಯ ಪ್ರದೇಶ, ವೃಕ್ಷಗಳ ವ್ಯಾಪ್ತಿ, ಮ್ಯಾಂಗ್ರೋವ್ ವ್ಯಾಪ್ತಿ, ಗ್ರೋಯಿಂಗ್ ಸ್ಟಾಕ್, ಭಾರತದ ಅರಣ್ಯಗಳಲ್ಲಿ ಶೇಖರಣೆಯಾಗುವ ಇಂಗಾಲ, ಕಾಳ್ಗಿಚ್ಚು ನಿಗಾ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಅರಣ್ಯ ಪ್ರದೇಶ, ಎಸ್.ಎ.ಆರ್. ದತ್ತಾಂಶ ಮತ್ತು ಭಾರತದಲ್ಲಿ ಹವಾಮಾನ ಬದಲಾವಣೆಯ ಹಾಟ್ ಸ್ಪಾಟ್ ಗಳನ್ನು ಬಳಸಿಕೊಂಡು ಜೀವರಾಶಿಯ ನೆಲದ ಅಂದಾಜುಗಳ ಮೇಲೆ ಮಾಹಿತಿಯನ್ನು ಒದಗಿಸುತ್ತದೆ.
ಪ್ರಮುಖ ಫಲಶ್ರುತಿಗಳು
- ದೇಶದ ಒಟ್ಟು ಅರಣ್ಯ ಮತ್ತು ವೃಕ್ಷಗಳ ವ್ಯಾಪ್ತಿಯು 80.9 ದಶಲಕ್ಷ ಹೆಕ್ಟೇರ್ ಆಗಿದೆ, ಇದು ದೇಶದ ಭೌಗೋಳಿಕ ಪ್ರದೇಶದ ಶೇ. 24.62ರಷ್ಟಾಗಿದೆ. 2019ರ ನಿರ್ಧರಣೆಗೆ ಹೋಲಿಸಿದರೆ, ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ. ಈ ಪೈಕಿ 1,540 ಚ.ಕಿ.ಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೆ, ವೃಕ್ಷಗಳ ವ್ಯಾಪ್ತಿಯು 721 ಚ.ಕಿ.ಮೀ. ಹೆಚ್ಚಾಗಿದೆ.
- ದಟ್ಟವಾದ ಅರಣ್ಯದ ನಂತರ ಮುಕ್ತ ಅರಣ್ಯದಲ್ಲಿ ಕಾಡಿನ ವ್ಯಾಪ್ತಿಯ ಹೆಚ್ಚಳವನ್ನು ಗಮನಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಹೆಚ್ಚಳವನ್ನು ಕಂಡಿರುವ ಮೊದಲ ಮೂರು ರಾಜ್ಯಗಳು ಆಂಧ್ರ ಪ್ರದೇಶ (647 ಚದರ ಕಿಮೀ) ನಂತರ ತೆಲಂಗಾಣ (632 ಚದರ ಕಿಮೀ) ಮತ್ತು ಒಡಿಶಾ (537 ಚದರ ಕಿಮೀ) ಆಗಿವೆ.
- ಪ್ರದೇಶವಾರು ರೀತ್ಯ ಮಧ್ಯಪ್ರದೇಶವು ಅತಿ ಹೆಚ್ಚು ಅರಣ್ಯವನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶ, ಛತ್ತೀಸಗಢ, ಒಡಿಶಾ ಮತ್ತು ಮಹಾರಾಷ್ಟ್ರ ಇವೆ. ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾವಾರು ಅರಣ್ಯ ಪ್ರದೇಶದ ಪ್ರಕಾರ, ಅಗ್ರ ಐದು ರಾಜ್ಯಗಳು ಮಿಜೋರಾಂ (ಶೇ.84.53), ಅರುಣಾಚಲ ಪ್ರದೇಶ (ಶೇ.79.33), ಮೇಘಾಲಯ (ಶೇ.76.00), ಮಣಿಪುರ (ಶೇ.74.34) ಮತ್ತು ನಾಗಾಲ್ಯಾಂಡ್ (ಶೇ.73.90) ಆಗಿದೆ.
- 17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅರಣ್ಯ ವ್ಯಾಪ್ತಿಯಲ್ಲಿರುವ ಭೌಗೋಳಿಕ ಪ್ರದೇಶದ ಶೇಕಡಾ 33ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಲಕ್ಷದ್ವೀಪ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ ಮತ್ತು ಮೇಘಾಲಯದ ಐದು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಶೇಕಡಾ 75ಕ್ಕಿಂತ ಹೆಚ್ಚು ಅರಣ್ಯವನ್ನು ಹೊಂದಿದ್ದರೆ, 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ ಮಣಿಪುರ, ನಾಗಾಲ್ಯಾಂಡ್, ತ್ರಿಪುರಾ, ಗೋವಾ, ಕೇರಳ, ಸಿಕ್ಕಿಂ, ಉತ್ತರಾಖಂಡ, ಛತ್ತೀಸಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಹಾಗೂ ಡಿಯು, ಅಸ್ಸಾಂ, ಒಡಿಶಾ, ಶೇಕಡಾ 33 ರಿಂದ 75 ರಷ್ಟು ಅರಣ್ಯವನ್ನು ಹೊಂದಿವೆ.
- ದೇಶದ ಒಟ್ಟು ಮ್ಯಾಂಗ್ರೋವ್ ವ್ಯಾಪ್ತಿ 4,992 ಚದರ ಕಿ.ಮೀ. 2019ರ ಹಿಂದಿನ ನಿರ್ಧರಣೆಗೆ ಹೋಲಿಸಿದರೆ ಮ್ಯಾಂಗ್ರೋವ್ ವ್ಯಾಪ್ತಿಯಲ್ಲಿ 17 ಚದರ ಕಿಮೀ ಹೆಚ್ಚಳವನ್ನು ಗುರುತಿಸಲಾಗಿದೆ. ಮ್ಯಾಂಗ್ರೋವ್ ವ್ಯಾಪ್ತಿಯ ಹೆಚ್ಚಳವನ್ನು ತೋರಿಸುವ ಪ್ರಮುಖ ಮೂರು ರಾಜ್ಯಗಳು ಒಡಿಶಾ (8 ಚದರ ಕಿಮೀ), ಮಹಾರಾಷ್ಟ್ರ (4 ಚದರ ಕಿಮೀ) ಮತ್ತು ಕರ್ನಾಟಕ (3 ಚದರ ಕಿಮೀ) ಆಗಿದೆ.
- ದೇಶದ ಕಾಡಿನಲ್ಲಿ ಒಟ್ಟು ಇಂಗಾಲದ ದಾಸ್ತಾನು 7,204 ದಶಲಕ್ಷ ಟನ್ ಗಳು ಎಂದು ಅಂದಾಜಿಸಲಾಗಿದೆ ಮತ್ತು 2019ರ ಕೊನೆಯ ನಿರ್ಧರಣೆಗೆ ಹೋಲಿಸಿದರೆ ದೇಶದ ಇಂಗಾಲದ ಸಂಗ್ರಹದಲ್ಲಿ 79.4 ದಶಲಕ್ಷ ಟನ್ ಗಳ ಹೆಚ್ಚಳವಾಗಿದೆ. ಇಂಗಾಲದ ದಾಸ್ತಾನು ವಾರ್ಷಿಕ ಹೆಚ್ಚಳ 39.7 ದಶಲಕ್ಷ ಟನ್ ಗಳಾಗಿವೆ.
ವಿಧಾನಶಾಸ್ತ್ರ
ಭಾರತ ಸರ್ಕಾರದ ಡಿಜಿಟಲ್ ಇಂಡಿಯಾದ ದೃಷ್ಟಿಕೋನ ಮತ್ತು ಡಿಜಿಟಲ್ ದತ್ತಾಂಶ ಗುಚ್ಛಗಳ ಏಕೀಕರಣದ ಅಗತ್ಯಕ್ಕೆ ಅನುಗುಣವಾಗಿ, ಎಫ್.ಎಸ್.ಐ ವಿವಿಧ ಆಡಳಿತಾತ್ಮಕ ಘಟಕಗಳ ಪ್ರಮಾಣ ಮತ್ತು ದಿಕ್ಕಿನ ಎಲ್ಲೆಯ ಪದರಗಳನ್ನು ಜಿಲ್ಲೆಗಳ ಮಟ್ಟದವರೆಗೆ ಬಳಸುವುದನ್ನು ಅಳವಡಿಸಿಕೊಂಡಿದೆ ಮತ್ತು 2011ರ ಜನಗಣತಿಯಲ್ಲಿ ವರದಿ ಮಾಡಿದಂತೆ ಭೌಗೋಳಿಕ ಪ್ರದೇಶಗಳೊಂದಿಗೆ ಸಮಗ್ರ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸಮೀಕ್ಷಾ ಸಂಸ್ಥೆ, ಡಿಜಿಟಲ್ ಮುಕ್ತ ಸರಣಿ ಟೋಪೋ ಶೀಟ್ ಗಳೊಂದಿಗೆ ಒದಗಿಸಿದೆ.
ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯ ವ್ಯಾಪ್ತಿ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಮಧ್ಯಮ-ರೆಸಲ್ಯೂಶನ್ ನ ಉಪಗ್ರಹ ದತ್ತಾಂಶವನ್ನು ಬಳಸಿಕೊಂಡ ದೇಶದ ಅರಣ್ಯ ವ್ಯಾಪ್ತಿಯ ದ್ವೈವಾರ್ಷಿಕ ನಿರ್ಧರಣೆಯು ಭಾರತೀಯ ದೂರ ಸಂವೇದಿ ಉಪಗ್ರಹ ದತ್ತಾಂಶದಿಂದ (ರಿಸೋರ್ಸ್ ಸ್ಯಾಟ್-II) 1:50,000 ವ್ಯಾಖ್ಯಾನದ ಪ್ರಮಾಣದೊಂದಿಗೆ 23.5 ಮೀಟರ್ ಗಳ ಪ್ರಾದೇಶಿಕ ರೆಸಲ್ಯೂಶನ್ ನೊಂದಿಗೆ ಎಲ್.ಐ.ಎಸ್.ಎಸ್.-III ದತ್ತಾಂಶದ ವ್ಯಾಖ್ಯಾನವನ್ನು ಆಧರಿಸಿದೆ.
ಈ ಮಾಹಿತಿಯು ವಿವಿಧ ಜಾಗತಿಕ ಮಟ್ಟದ ಇನ್ವೆಂಟರಿಗಳಿಗೆ, ಉದಾಹರಣೆಗೆ ಜಿಎಚ್.ಜಿ. ಇನ್ವೆಂಟರಿ, ಗ್ರೋಯಿಂಗ್ ಇನ್ವೆಂಟರಿ, ಕಾರ್ಬನ್ ಸಂಗ್ರಹ, ಅರಣ್ಯ ಉಲ್ಲೇಖ ಮಟ್ಟ (ಎಫ್.ಆರ್.ಎಲ್.) ಮತ್ತು ಸಿಬಿಡಿ ಜಾಗತಿಕ ಅರಣ್ಯ ಸಂಪನ್ಮೂಲ ನಿರ್ಧರಣೆ (ಜಿಎಫ್.ಆರ್.ಎ.) ಅಡಿಯಲ್ಲಿ ಅರಣ್ಯಗಳ ಯೋಜನೆ ಮತ್ತು ವೈಜ್ಞಾನಿಕ ನಿರ್ವಹಣೆಗಾಗಿ ವಿಶ್ವ ಸಂಸ್ಥೆಯ ಎಫ್.ಸಿ.ಸಿ.ಸಿ. ಗುರಿಗಳಿಗೆ ಅಂತಾರಾಷ್ಟ್ರೀಯ ವರದಿಗಳಿಗೆ ಇನ್ ಪುಟ್ ಗಳನ್ನು ಒದಗಿಸುತ್ತದೆ.
ಇಡೀ ದೇಶದ ಉಪಗ್ರಹ ದತ್ತಾಂಶವನ್ನು ಎನ್.ಆರ್.ಎಸ್.ಸಿ.ಯಿಂದ ಅಕ್ಟೋಬರ್ ನಿಂದ ಡಿಸೆಂಬರ್ 2019ರ ಅವಧಿಗೆ ಸಂಗ್ರಹಿಸಲಾಗಿದೆ. ಉಪಗ್ರಹ ದತ್ತಾಂಶ ವ್ಯಾಖ್ಯಾನವನ್ನು ವ್ಯಾಪಕ ಭೂ ಮಾಪನದ ಮೂಲಕ ಅನುಸರಿಸಲಾಗುತ್ತದೆ. ವ್ಯಾಖ್ಯಾನಿಸಲಾದ ಚಿತ್ರದ ನಿಖರತೆಯನ್ನು ಸುಧಾರಿಸಲು ಇತರ ಮೇಲಾಧಾರ ಮೂಲಗಳಿಂದ ಮಾಹಿತಿಯನ್ನು ಸಹ ಬಳಸಲಾಗುತ್ತದೆ.
ಪ್ರಸ್ತುತ ನಿರ್ಧರಣೆಯಲ್ಲಿ ಸಾಧಿಸಿದ ನಿಖರತೆಯ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಿದೆ. ಅರಣ್ಯ ವ್ಯಾಪ್ತಿಯ ವರ್ಗೀಕರಣದ ನಿಖರತೆಯನ್ನು ಶೇ.92.99 ನಿರ್ಧರಣೆ ಮಾಡಲಾಗಿದೆ. ಅರಣ್ಯ ಮತ್ತು ಅರಣ್ಯೇತರ ವರ್ಗಗಳ ನಡುವಿನ ವರ್ಗೀಕರಣದ ನಿಖರತೆಯನ್ನು ಶೇ.95.79ರಷ್ಟು ನಿರ್ಣಯಿಸಲಾಗಿದೆ, ಇದು ಶೇ.85ಕ್ಕಿಂತ ಹೆಚ್ಚು ವರ್ಗೀಕರಣದ ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ನಿಖರತೆಗೆ ಪ್ರತಿಯಾಗಿದೆ. ವ್ಯಾಪಕವಾದ ಕ್ಯು.ಸಿ. ಮತ್ತು ಕ್ಯು.ಎ. ಕಸರತ್ತನ್ನೂ ಸಹ ನಡೆಸಲಾಗಿದೆ.
ಐ.ಎಸ್.ಎಫ್.ಆರ್. 2021ರ ಇತರ ಗಣನೀಯ ಅಂಶಗಳು
ಪ್ರಸ್ತುತ ಐ.ಎಸ್.ಎಫ್.ಆರ್. 2021ರಲ್ಲಿ, ಎಫ್.ಎಸ್.ಐ. ಭಾರತದ ಹುಲಿ ಸಂರಕ್ಷಿತ ಪ್ರದೇಶಗಳು, ಕಾರಿಡಾರ್ ಗಳು ಮತ್ತು ಸಿಂಹ ಸಂರಕ್ಷಣಾ ಪ್ರದೇಶದಲ್ಲಿ ಅರಣ್ಯ ವ್ಯಾಪ್ತಿಯ ನಿರ್ಧರಣೆಗೆ ಸಂಬಂಧಿಸಿದ ಹೊಸ ಅಧ್ಯಾಯವನ್ನು ಸೇರಿಸಿದೆ. ಈ ಸಂದರ್ಭದಲ್ಲಿ, ಹುಲಿ ಸಂರಕ್ಷಿತ ಪ್ರದೇಶಗಳು, ಕಾರಿಡಾರ್ ಗಳು ಮತ್ತು ಸಿಂಹ ಸಂರಕ್ಷಣಾ ಪ್ರದೇಶದಲ್ಲಿನ ಅರಣ್ಯ ವ್ಯಾಪ್ತಿಯ ಬದಲಾವಣೆಯ ದಶಮಾನದ ನಿರ್ಧರಣೆಯು ಸಂರಕ್ಷಣಾ ಕ್ರಮಗಳು ಮತ್ತು ವರ್ಷಗಳಿಂದ ಜಾರಿಗೆ ಬಂದಿರುವ ನಿರ್ವಹಣೆಯ ಮಧ್ಯಸ್ಥಿಕೆಗಳ ಪರಿಣಾಮವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ.
ದಶಮಾನದ ನಿರ್ಧರಣೆಗಾಗಿ, ಐ.ಎಸ್.ಎಫ್.ಆರ್.2011 (ದತ್ತಾಂಶ ಅವಧಿ 2008 ರಿಂದ 2009) ಮತ್ತು ಪ್ರಸ್ತುತ ಚಕ್ರದಲ್ಲಿ (ಐ.ಎಸ್.ಎಫ್.ಆರ್ 2021, ದತ್ತಾಂಶ ಅವಧಿ 2019-2020) ನಡುವಿನ ಅವಧಿಯಲ್ಲಿ ಅರಣ್ಯ ವ್ಯಾಪ್ತಿಯ ಬದಲಾವಣೆಯನ್ನು ಪ್ರತಿ ಹುಲಿ ಸಂರಕ್ಷಿತ ಪ್ರದೇಶದೊಳಗೆ ವಿಶ್ಲೇಷಿಸಲಾಗಿದೆ.
ಎಫ್.ಎಸ್.ಐ.ಹೊಸ ಉಪಕ್ರಮವನ್ನು ಅಧ್ಯಾಯದ ರೂಪದಲ್ಲಿ ದಾಖಲಿಸಲಾಗಿದೆ, ಅಲ್ಲಿ 'ನೆಲದ ಮೇಲಿನ ಜೀವರಾಶಿ' ಅಂದಾಜಿಸಲಾಗಿದೆ. ಎಫ್.ಎಸ್.ಐ., ಬಾಹ್ಯಾಕಾಶ ಆನ್ವಯಿಕಗಳ ಕೇಂದ್ರ (ಎಸ್.ಎ.ಸಿ.), ಇಸ್ರೋ, ಅಹಮದಾಬಾದ್ ನ ಸಹಯೋಗದೊಂದಿಗೆ, ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್.ಎ.ಆರ್.) ದತ್ತಾಂಶದ ಎಲ್-ಬ್ಯಾಂಡ್ ಅನ್ನು ಬಳಸಿಕೊಂಡು ಭಾರತದಾದ್ಯಂತ ಭೂಮಿಯ ಮೇಲಿನ ಜೀವರಾಶಿ (ಎ.ಜಿ.ಬಿ.)ಯ ಅಂದಾಜಿಗಾಗಿ ವಿಶೇಷ ಅಧ್ಯಯನವನ್ನು ಪ್ರಾರಂಭಿಸಿತು. ಅಸ್ಸಾಂ ಮತ್ತು ಒಡಿಶಾ ರಾಜ್ಯಗಳ (ಹಾಗೆಯೇ ಎ.ಜಿ.ಬಿ. ನಕ್ಷೆಗಳು) ಫಲಿತಾಂಶಗಳನ್ನು ಐ.ಎಸ್.ಎಫ್.ಆರ್. 2019 ರಲ್ಲಿ ಮೊದಲು ಪ್ರಸ್ತುತಪಡಿಸಲಾಗಿದೆ. ಇಡೀ ದೇಶಕ್ಕಾಗಿ ಎ.ಜಿ.ಬಿ. ಅಂದಾಜುಗಳ (ಮತ್ತು ಎ.ಜಿ.ಬಿ. ನಕ್ಷೆಗಳು) ಮಧ್ಯಂತರ ಫಲಿತಾಂಶಗಳನ್ನು ಐ.ಎಸ್.ಎಫ್.ಆರ್.2021 ರಲ್ಲಿ ಹೊಸ ಅಧ್ಯಾಯವಾಗಿ ಪ್ರಸ್ತುತಪಡಿಸಲಾಗುತ್ತಿದೆ. ಅಧ್ಯಯನ ಪೂರ್ಣಗೊಂಡ ನಂತರ ವಿವರವಾದ ವರದಿಯನ್ನು ಪ್ರಕಟಿಸಲಾಗುವುದು.
ಎಫ್.ಎಸ್.ಐ ಬಿರ್ಲಾ ತಾಂತ್ರಿಕ ಮತ್ತು ವಿಜ್ಞಾನ ಸಂಸ್ಥೆ (ಬಿಟ್ಸ್) ಪಿಲಾನಿ, ಗೋವಾ ಕ್ಯಾಂಪಸ್ ನ ಸಹಯೋಗದೊಂದಿಗೆ 'ಭಾರತೀಯ ಅರಣ್ಯಗಳಲ್ಲಿನ ಹವಾಮಾನ ಬದಲಾವಣೆಯ ಹಾಟ್ ಸ್ಪಾಟ್ ಗಳ ಮ್ಯಾಪಿಂಗ್' ಆಧಾರಿತ ಅಧ್ಯಯನವನ್ನು ನಡೆಸಿದೆ. ಭವಿಷ್ಯದ ಮೂರು ಅವಧಿಗಳಿಗೆ ಅಂದರೆ 2030, 2050 ಮತ್ತು 2085ಕ್ಕೆ ಕಂಪ್ಯೂಟರ್ ಮಾದರಿ ಆಧಾರಿತ ತಾಪಮಾನ ಮತ್ತು ಮಳೆಯ ದತ್ತಾಂಶದ ಅಂದಾಜನ್ನು ಬಳಸಿಕೊಂಡು ಭಾರತದಲ್ಲಿನ ಅರಣ್ಯ ಪ್ರದೇಶದ ಮೇಲೆ ಹವಾಮಾನ ಹಾಟ್ ಸ್ಪಾಟ್ ಗಳನ್ನು ನಕ್ಷೆ ಮಾಡುವ ಉದ್ದೇಶದಿಂದ ಸಹಯೋಗದ ಅಧ್ಯಯನವನ್ನು ಕೈಗೊಳ್ಳಲಾಗಿತ್ತು.
ವರದಿಯು ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವಿಧ ನಿಯತಾಂಕಗಳ ಮಾಹಿತಿಯನ್ನು ಒಳಗೊಂಡಿದೆ. ಬೆಟ್ಟ, ಬುಡಕಟ್ಟು ಜಿಲ್ಲೆಗಳು ಮತ್ತು ಈಶಾನ್ಯ ಪ್ರದೇಶದಂತಹ ಅರಣ್ಯ ವ್ಯಾಪ್ತಿಯ ವಿಶೇಷ ವಿಷಯಾಧಾರಿತ ಮಾಹಿತಿಯನ್ನು ವರದಿಯಲ್ಲಿ ಪ್ರತ್ಯೇಕವಾಗಿ ನೀಡಲಾಗಿದೆ.
ವರದಿಯಲ್ಲಿ ನೀಡಲಾದ ಮಾಹಿತಿಯು ದೇಶದಲ್ಲಿ ಅರಣ್ಯ ಮತ್ತು ವೃಕ್ಷ ಸಂಪನ್ಮೂಲಗಳ ನೀತಿ, ಯೋಜನೆ ಮತ್ತು ಸುಸ್ಥಿರ ನಿರ್ವಹಣೆಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪೂರ್ಣ ವರದಿಯು ಈ ಕೆಳಗಿನ ಯು.ಆರ್.ಎಲ್.ನಲ್ಲಿ ಲಭ್ಯ: https://fsi.nic.in/forest-report-2021-details
***
(Release ID: 1789791)
Visitor Counter : 4534