ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ

ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ `ಪಿಎಂಎಫ್ಎಂಇ’ ಯೋಜನೆಯಡಿ ಆರು ʻಒಂದು ಜಿಲ್ಲೆ ಒಂದು ಉತ್ಪನ್ನ’ ಬ್ರಾಂಡ್ ಗಳಿಗೆ ಚಾಲನೆ


ಅಮೃತ್ ಫಲ್, ಕೊರಿ ಗೋಲ್ಡ್, ಕಾಶ್ಮೀರಿ ಮಂತ್ರ, ಮಧು ಮಂತ್ರ, ಸೋಮ್‌ದಾನ, ಮತ್ತು ಇಡೀ ಗೋಧಿಯಲ್ಲಿ ಮಾಡಿದ ಡಿಲ್ಲಿ ಬೇಕ್ಸ್‌ ಬಿಸ್ಕತ್ತುಗಳಿಗೆ ಈ ಯೋಜನೆಯಡಿ ಚಾಲನೆ ನೀಡಲಾಗಿದೆ


Posted On: 05 JAN 2022 5:13PM by PIB Bengaluru

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀ ಪಶುಪತಿ ಕುಮಾರ್ ಪರಾಸ್ ಮತ್ತು ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ʻನಫೆಡ್‌ʼನ ಹಿರಿಯ ಅಧಿಕಾರಿಗಳು ಇಂದು ನವದೆಹಲಿಯ ಪಂಚಶೀಲ ಭವನದಲ್ಲಿ ʻಪ್ರಧಾನಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳʼ (ಪಿಎಂಎಫ್‌ಎಂಇ) ಯೋಜನೆಯಡಿ ಆರು, ʻಒಂದು ಜಿಲ್ಲೆ, ಒಂದು ಉತ್ಪನ್ನʼ (ಒಡಿಒಪಿ) ಬ್ರಾಂಡ್‌ಗಳಿಗೆ ಚಾಲನೆ ನೀಡಿದರು.

ʻಪಿಎಂಎಫ್‌ಎಂಇʼ ಯೋಜನೆಯ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಘಟಕದ ಅಡಿಯಲ್ಲಿ ಆಯ್ದ ʻಒಂದು ಜಿಲ್ಲೆ ಒಂದು ಉತ್ಪನ್ನʼಗಳ 10 ಬ್ರಾಂಡ್‌ಗಳನ್ನು ಅಭಿವೃದ್ಧಿಪಡಿಸಲು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ʻನಫೆಡ್‌ʼನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇವುಗಳಲ್ಲಿ ಅಮೃತ್ ಫಲ್, ಕೊರಿ ಗೋಲ್ಡ್, ಕಾಶ್ಮೀರಿ ಮಂತ್ರ, ಮಧು ಮಂತ್ರ, ಸೋಮ್‌ದಾನ ಮತ್ತು ಡಿಲ್ಲಿ ಬೇಕ್ಸ್‌ನ ಸಂಪೂರ್ಣ ಗೋಧಿ ಬಿಸ್ಕತ್‌ ಎಂಬ ಆರು ಬ್ರಾಂಡ್‌ಗಳನ್ನು ಇಂದು ಬಿಡುಗಡೆ ಮಾಡಲಾಯಿತು.

ನೆಲ್ಲಿಕಾಯಿ ರಸಕ್ಕಾಗಿ ʻಅಮೃತ್ ಫಲ್ʼ ಎಂಬ ಬ್ರಾಂಡ್ ಅನ್ನು ಹರಿಯಾಣದ ಗುರುಗ್ರಾಮ್‌ಗಾಗಿ ವಿಶೇಷವಾಗಿ ಒಡಿಒಪಿ ಪರಿಕಲ್ಪನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉತ್ಪನ್ನವು ಶುದ್ಧ ನೆಲ್ಲಿಕಾಯಿ ರಸವನ್ನು ಒಳಗೊಂಡಿದ್ದು, ವಿಶಿಷ್ಟ ರುಚಿ ಮತ್ತು ಆರೋಗ್ಯ ಪ್ರಯೋಜನಗಳಿಗಾಗಿ ನಿಂಬೆಯನ್ನು ಸೇರಿಸಿದ ನೈಸರ್ಗಿಕ ಅಮೃತವಾಗಿದೆ. 500 ಮಿ.ಲೀ ಬಾಟಲಿಯ ಬೆಲೆ ರೂ.120/-ಆಗಿದೆ.

ʻಕೋರಿ ಗೋಲ್ಡ್ʼ ಬ್ರಾಂಡ್ ಅನ್ನು ಕೊತ್ತಂಬರಿ ಅಥವಾ ಧನಿಯಾ ಪುಡಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ರಾಜಸ್ಥಾನದ ಕೋಟಾಗೆ ಗುರುತಿಸಲಾದ ʻಒಡಿಒಪಿʼ ಆಗಿದೆ. ಈ ಉತ್ಪನ್ನವು ವಿಶಿಷ್ಟ ಪರಿಮಳವನ್ನು ಹೊಂದಿದೆ ಮತ್ತು ಪ್ರಾದೇಶಿಕ ವಿಶೇಷತೆಯನ್ನು ಹೊರತರುತ್ತದೆ. 100 ಗ್ರಾಂ ಪ್ಯಾಕ್ ಬೆಲೆಯನ್ನು ಸ್ಪರ್ಧಾತ್ಮಕವಾಗಿ ರೂ.34/-ಗೆ ನಿಗದಿಪಡಿಸಲಾಗಿದೆ.

ʻಕಾಶ್ಮೀರಿ ಮಂತ್ರʼ ಎಂಬ ಬ್ರಾಂಡ್ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನ ಮಸಾಲೆಗಳ ಸಾರವನ್ನು ಪ್ರಸ್ತುತಪಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಮಸಾಲೆಗಳಿಗಾಗಿ ಒಡಿಒಪಿ ಘಟಕದಅಡಿಯಲ್ಲಿ ʻಕಾಶ್ಮೀರಿ ಲಾಲ್ ಮಿರ್ಚ್ʼ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಉತ್ಪನ್ನವು ವಿಶಿಷ್ಟ ಪರಿಮಳವನ್ನು ಹೊಂದಿದ್ದು, 100ಗ್ರಾಂ ಪ್ಯಾಕ್ ಬೆಲೆ ರೂ.75/-ಆಗಿದೆ.

ʻಮಧು ಮಂತ್ರʼ ಬ್ರಾಂಡ್ ಅನ್ನು ಉತ್ತರ ಪ್ರದೇಶದ ಸಹರಾನ್ಪುರದ ಜೇನುತುಪ್ಪಕ್ಕಾಗಿ ಒಡಿಒಪಿ ಪರಿಕಲ್ಪನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಹು ಹೂವುಗಳ ಜೇನುತುಪ್ಪ ಇದಾಗಿದ್ದು, ಬಂಧಮುಕ್ತಗೊಳಿಸಿದ ಜೇನುನೊಣಗಳು ಸಂಗ್ರಹಿಸಲಾಗುತ್ತದೆ. ಈ ಬ್ರಾಂಡ್‌ನ 500 ಗ್ರಾಂ ಗಾಜಿನ ಬಾಟಲಿಯ ಸ್ಪರ್ಧಾತ್ಮಕ ಬೆಲೆ ರೂ.185/-ಆಗಿದೆ.

ʻಸಂಪೂರ್ಣ ಗೋಧಿ ಬಿಸ್ಕತ್‌ʼ(ಹೋಲ್‌ ವೀಟ್‌) ಎಂಬುದು ʻಡಿಲ್ಲಿ ಬೇಕ್ಸ್ʼ ಬ್ರಾಂಡ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಎರಡನೇ ಉತ್ಪನ್ನವಾಗಿದೆ. ʻಬೇಕರಿ ಒಡಿಒಪಿʼ ಪರಿಕಲ್ಪನೆಯ ಅಡಿಯಲ್ಲಿ ಈ ಬ್ರಾಂಡ್ ಮತ್ತು ಉತ್ಪನ್ನವನ್ನು ದೆಹಲಿಗಾಗಿ ಅಭಿವೃದ್ಧಿಪಡಿಸಲಾಗಿದೆ. ʻನಫೆಡ್‌ʼ ಪ್ರಕಾರ, ಸಂಪೂರ್ಣ ಗೋಧಿ ಕುಕೀ ಒಂದು ವಿಶಿಷ್ಟ ಉತ್ಪನ್ನವಾಗಿದೆ. ಏಕೆಂದರೆ ಇದನ್ನು ಇಡೀ ಗೋಧಿಯನ್ನು ಬಳಸಿ ಮಾಡಲಾಗುತ್ತದೆ. ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಜೊತೆಗೆ ವನಸ್ಪತಿ ಬದಲಿಗೆ ಇದು ಬೆಣ್ಣೆಯನ್ನು ಹೊಂದಿರುತ್ತದೆ. ಇದರ 380 ಗ್ರಾಂ ಪ್ಯಾಕ್ ಬೆಲೆಯನ್ನು ಸ್ಪರ್ಧಾತ್ಮಕವಾಗಿ ರೂ.175/- ನಿಗದಿಪಡಿಸಲಾಗಿದೆ.

ಮಹಾರಾಷ್ಟ್ರದ ಥಾಣೆಯಿಂದ ಸಿರಿಧಾನ್ಯಗಳ ʻಒಡಿಒಪಿʼ ಪರಿಕಲ್ಪನೆಯ ಅಡಿಯಲ್ಲಿ ʻಸೋಮ್‌ದಾನʼ ಬ್ರಾಂಡ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ರಾಗಿ ಹಿಟ್ಟು ಸಂಪೂರ್ಣ ಗ್ಲುಟೆನ್ ಮುಕ್ತವಾಗಿದ್ದು, ಕಬ್ಬಿಣ, ನಾರು ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವುದರಿಂದ ಇದು ವಿಶಿಷ್ಟ ಉತ್ಪನ್ನವಾಗಿದೆ. 500 ಗ್ರಾಂ ಪ್ಯಾಕ್ ಬೆಲೆ ರೂ.60/-ಆಗಿದೆ.

ʻನಫೆಡ್‌ʼ ಪ್ರಕಾರ, ಗ್ರಾಹಕರ ಅನುಕೂಲಕ್ಕಾಗಿ ಈ ಎಲ್ಲಾ ಉತ್ಪನ್ನಗಳು ವಿಶಿಷ್ಟ ಮತ್ತು ಆಕರ್ಷಕ ಪ್ಯಾಕೇಜಿಂಗ್‌ನಲ್ಲಿ ದೊರೆಯುತ್ತವೆ. ಈ ಪ್ಯಾಕೇಜಿಂಗ್‌ ತೇವಾಂಶ ಮತ್ತು ಸೂರ್ಯನ ಬೆಳಕನ್ನು ದೂರವಿರಿಸುತ್ತದೆ, ಜೊತೆಗೆ ಉತ್ಪನ್ನದ ಗುಣಮಟ್ಟ ಮತ್ತು ತಾಜಾತನವನ್ನು ದೀರ್ಘಕಾಲ ಖಾತರಿಪಡಿಸುತ್ತದೆ.

ಪ್ರತಿ ಉತ್ಪನ್ನವನ್ನು ʻನಫೆಡ್‌ʼನ ವ್ಯಾಪಕ ಮಾರುಕಟ್ಟೆ ಪರಿಣತಿಯ ಜ್ಞಾನ ಹಾಗೂ ಪರಂಪರೆಯೊಂದಿಗೆ ತಯಾರಿಸಲಾಗಿದೆ. ಸಂಸ್ಕರಣೆ, ಪ್ಯಾಕೇಜಿಂಗ್, ಪೂರೈಕೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ʻನಫೆಡ್‌ʼನ ಸಾಮರ್ಥ್ಯಗಳು ಹಾಗೂ ಅದರ ಅನುಭವವು ಈ ಉತ್ಪನ್ನಗಳ ಅಭಿವೃದ್ಧಿಗೆ ಜೊತೆಯಾಗಿವೆ. ಇದಲ್ಲದೆ, ಪ್ರತಿ ಬ್ರಾಂಡ್ಗೂ ಅದಕ್ಕೆ ಸಂಬಂಧಿಸಿದ ಮಾರುಕಟ್ಟೆಗಳಲ್ಲಿ ಬ್ರಾಂಡ್‌ ಸಂವಹನಕ್ಕೆ ಹೆಚ್ಚಿದ ಹೂಡಿಕೆಗಳನ್ನು ಮಾಡಲಾಗುವುದು. ಜೊತೆಗೆ ಮೌಲ್ಯ ಸರಪಳಿಯಾದ್ಯಂತ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಬೆಂಬಲಿಸಲಾಗುವುದು.

ʻಪಿಎಂಎಫ್‌ಎಂಇʼ ಯೋಜನೆಯಡಿ ಈ ಉಪಕ್ರಮದ ಮೂಲಕ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ದೇಶಾದ್ಯಂತದ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳನ್ನು (ಎಂಎಫ್‌ಪಿಇ) ಔಪಚಾರಿಕಗೊಳಿಸಲು, ನವೀಕರಿಸಲು ಮತ್ತು ಬಲಪಡಿಸಲು ಮತ್ತು ಅವುಗಳನ್ನು ʻಆತ್ಮನಿರ್ಭರ್ ಭಾರತʼಕ್ಕೆ ಒಂದು ಹೆಜ್ಜೆ ಹತ್ತಿರವಾಗಿ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ. ಈ ಕುರಿತಾಗಿ ಸರಕಾರದ ದೂರದೃಷ್ಟಿ, ಪ್ರಯತ್ನಗಳು ಮತ್ತು ಉಪಕ್ರಮಗಳ ಬಗ್ಗೆ ಉತ್ತೇಜನ ನೀಡುವ ಗುರಿಯನ್ನು ಸಚಿವಾಲಯ ಹೊಂದಿದೆ. ʻನಫೆಡ್‌ʼನಿಂದ ಈ ಬ್ರಾಂಡ್‌ಗಳ ಮಾರ್ಕೆಟಿಂಗ್ ಹಕ್ಕುಗಳನ್ನು ಬಳಸುವುದು ಸೇರಿದಂತೆ ಈ ಉಪಕ್ರಮದ ಅಡಿಯಲ್ಲಿ ಬ್ರಾಂಡಿಂಗ್ ಬೆಂಬಲವನ್ನು ಪಡೆಯಲು ‘ಎಂಎಫ್‌ಪಿʼಗಳನ್ನು ಉತ್ತೇಜಿಸಲಾಗುತ್ತಿದೆ.

ಈ ಎಲ್ಲಾ ಉತ್ಪನ್ನಗಳು ʻನಫೆಡ್‌ʼ ಬಜಾರ್‌ಗಳು, ಇ-ಕಾಮರ್ಸ್ ವೇದಿಕೆಗಳು ಮತ್ತು ಭಾರತದಾದ್ಯಂತ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರಲಿವೆ.

ʻಪಿಎಂಎಫ್‌ಎಂಇʼ ಯೋಜನೆಯ ಬಗ್ಗೆ:

ʻಆತ್ಮನಿರ್ಭರ ಭಾರತ ಅಭಿಯಾನʼದ ಅಡಿಯಲ್ಲಿ ಪ್ರಾರಂಭಿಸಲಾದ ʻಪ್ರಧಾನಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳʼ (ಪಿಎಂಎಫ್ಎಂಇ) ಯೋಜನೆಯು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಆಹಾರ ಸಂಸ್ಕರಣಾ ಉದ್ಯಮದ ಅಸಂಘಟಿತ ವಿಭಾಗದಲ್ಲಿ ಅಸ್ತಿತ್ವದಲ್ಲಿರುವ ಬಿಡಿ ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ಈ ವಲಯದ ಔಪಚಾರಿಕತೆಯನ್ನು ಉತ್ತೇಜಿಸುವ ಗುರಿಯನ್ನು ಯೋಜನೆ ಹೊಂದಿದೆ. ಇದರ ಜೊತೆಗೆ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಉತ್ಪಾದಕರ ಸಹಕಾರಿ ಸಂಸ್ಥೆಗಳಿಗೆ ಅವುಗಳ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಇಂತಹ ಆಹಾರ ಸಂಸ್ಕರಣಾ ಘಟಕಗಳ ಮೂಲಕ ಬೆಂಬಲ ನೀಡುವುದೂ ಇದರ ಮತ್ತೊಂದು ಉದ್ದೇಶವಾಗಿದೆ. 2020-21 ರಿಂದ 2024-25ರ ವರೆಗಿನ ಐದು ವರ್ಷಗಳ ಅವಧಿಯಲ್ಲಿ 10,000 ಕೋಟಿ ರೂ.ಗಳ ವೆಚ್ಚದೊಂದಿಗೆ, ಅಸ್ತಿತ್ವದಲ್ಲಿರುವ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಉನ್ನತೀಕರಣಕ್ಕೆ ಹಣಕಾಸು, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲವನ್ನು ಒದಗಿಸಲು ಉದ್ದೇಶಿಸಲಾಗಿದೆ. ಇದರ ಭಾಗವಾಗಿ 2,00,000 ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ನೇರವಾಗಿ ಸಹಾಯ ಮಾಡಲು ಈ ಯೋಜನೆ ಆಶಿಸಿದೆ.

ಹೆಚ್ಚಿನ ವಿವರಗಳಿಗಾಗಿ, ಭೇಟಿ: www.pmfme.mofpi.gov.in

***



(Release ID: 1787766) Visitor Counter : 327