ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಪ್ರಧಾನಮಂತ್ರಿ ಶ್ರೇಷ್ಠತಾ ಪ್ರಶಸ್ತಿಯ ಪರಿಕಲ್ಪನೆ ಮತ್ತು ಸ್ವರೂಪದಲ್ಲಿ 2014 ರಿಂದ ಕ್ರಾಂತಿಕಾರಿ ಬದಲಾವಣೆಗಳಾಗಿವೆ: ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್


ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ 2021-22 ನೇ ಸಾಲಿನ ಪ್ರಧಾನ ಮಂತ್ರಿಯವರ ಪ್ರಶಸ್ತಿಗಳ ವೆಬ್ ಪೋರ್ಟಲ್ ಗೆ ಚಾಲನೆ ನೀಡಿದ ಸಚಿವರು

ನಾಗರಿಕ ಸೇವೆಯ ಅಧಿಕಾರಿಗಳು ಜನಸಾಮಾನ್ಯರ "ಜೀವನವನ್ನು ಸುಲಭಗೊಳಿಸಲು" ನೆರವಾಗಬೇಕು: ಡಾ ಜಿತೇಂದ್ರ ಸಿಂಗ್

2021 ರಲ್ಲಿ ಪ್ರಧಾನ ಮಂತ್ರಿಯವರ ಶ್ರೇಷ್ಠತಾ ಪ್ರಶಸ್ತಿಯ ಬಹುಮಾನದ ಮೊತ್ತವು 10 ಲಕ್ಷ ರೂ. ಗಳಿಂದ 20 ಲಕ್ಷಕ್ಕೆ ದ್ವಿಗುಣವಾಗಿದೆ

Posted On: 03 JAN 2022 5:47PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವರು; ಭೂ ವಿಜ್ಞಾನ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವರು; ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರು ಇಂದು ಪ್ರಧಾನ ಮಂತ್ರಿಯವರ ಶ್ರೇಷ್ಠತಾ ಪ್ರಶಸ್ತಿಯ ವೆಬ್ ಪೋರ್ಟಲ್ ಗೆ ಚಾಲನೆ ನೀಡಿದರು. ಈ ಪ್ರಶಸ್ತಿಗಳ ನೋಂದಣಿ ಇಂದಿನಿಂದ ಪ್ರಾರಂಭವಾಗುತ್ತದೆ.

ಚಾಲನೆಯ ಬಳಿಕ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರರ ನೇತೃತ್ವದಲ್ಲಿ 2014 ರಿಂದ ಪ್ರಧಾನ ಮಂತ್ರಿಗಳ ಶ್ರೇಷ್ಠತಾ ಪ್ರಶಸ್ತಿಯ ಸಂಪೂರ್ಣ ಪರಿಕಲ್ಪನೆ ಮತ್ತು ಸ್ವರೂಪವು ಕ್ರಾಂತಿಕಾರಿ ಬದಲಾವಣೆಗೆ ಒಳಗಾಗಿದೆ ಎಂದರು. 2021-2022 ರ ಸಾರ್ವಜನಿಕ ಆಡಳಿತದ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಯವರ ಪ್ರಶಸ್ತಿಯ ಪೋರ್ಟಲ್‌  www.pmawards.gov.in ಆಗಿದೆ.

ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ಭಾರತದ ಆಡಳಿತ ಮಾದರಿಯು ಜನಾಂದೋಲನವಾಗಿ ಮಾರ್ಪಟ್ಟಿದೆ, ಪ್ರಮುಖ ಯೋಜನೆಗಳಲ್ಲಿ ಜನರ ಭಾಗೀದಾರಿ ಎಂಬ ಪ್ರಧಾನ ಮಂತ್ರಿಯವರ ಕರೆಗೆ ಜನರು ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ನಾಗರಿಕ ಸೇವೆಯ ಅಧಿಕಾರಿಗಳು ನಿಯಂತ್ರಕರ ಪಾತ್ರದಿಂದ ಪ್ರೋತ್ಸಾಹಕ ಘಟಕವಾಗಿ ಬದಲಾಗಬೇಕು ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹಿತವಚನವನ್ನು ಉಲ್ಲೇಖಿಸಿದ ಡಾ ಜಿತೇಂದ್ರ ಸಿಂಗ್, ಅಧಿಕಾರಿಗಳು ಜನಸಾಮಾನ್ಯರ "ಜೀವನವನ್ನು ಸುಲಭಗೊಳಿಸಲು" ನೆರವಾಗಬೇಕು ಎಂದರು.

2014 ರ ನಂತರ, ಪ್ರಧಾನ ಮಂತ್ರಿಯವರ ಶ್ರೇಷ್ಠತಾ ಪ್ರಶಸ್ತಿಯ ಪ್ರಕ್ರಿಯೆ ಮತ್ತು ಆಯ್ಕೆಯನ್ನು ಸಾಂಸ್ಥಿಕಗೊಳಿಸಲಾಗಿದೆ ಮತ್ತು ಈಗ ಇದು ಜಿಲ್ಲಾಧಿಕಾರಿ ಅಥವಾ ಯಾವುದೇ ಅಧಿಕಾರಿಯ ವೈಯಕ್ತಿಕ ದಕ್ಷತೆಗಿಂತ ಹೆಚ್ಚಾಗಿ ಜಿಲ್ಲೆಯ ಕಾರ್ಯಕ್ಷಮತೆಯನ್ನು ಆಧರಿಸಿದೆ. ಜಿಲ್ಲೆಯ ಪ್ರಮುಖ ಯೋಜನೆಗಳ ಅನುಷ್ಠಾನದ ಪ್ರಮಾಣ ಮತ್ತು ರೇಟಿಂಗ್ ಅನ್ನು ನಿರ್ಣಯಿಸಲು ಮತ್ತೊಂದು ಸುಧಾರಣೆಯನ್ನು ತರಲಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

ಪ್ರಶಸ್ತಿ ಪಡೆದ ಜಿಲ್ಲೆ/ಸಂಸ್ಥೆಗೆ ಈ ವರ್ಷ ಬಹುಮಾನದ ಹಣವನ್ನು ರೂ.10 ಲಕ್ಷದಿಂದ ರೂ.20 ಲಕ್ಷಕ್ಕೆ ದ್ವಿಗುಣಗೊಳಿಸಲಾಗಿದೆ ಎಂದು ಸಚಿವರು ಹೇಳಿದರು, ಇದನ್ನು ಯೋಜನೆ/ಕಾರ್ಯಕ್ರಮದ ಅನುಷ್ಠಾನಕ್ಕೆ ಅಥವಾ ಸಾರ್ವಜನಿಕ ಕಲ್ಯಾಣದ ಯಾವುದೇ ಕ್ಷೇತ್ರದಲ್ಲಿ ಸಂಪನ್ಮೂಲ ಅಂತರವನ್ನು ಕಡಿಮೆ ಮಾಡಲು ಬಳಸಲಾಗುವುದು ಎಂದರು. ಈಗ ಎಲ್ಲ ಜಿಲ್ಲಾಧಿಕಾರಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 2015ರಲ್ಲಿದ್ದ 80 ಜಿಲ್ಲೆಗಳಿಂದ ಕಳೆದ ಎರಡು-ಮೂರು ವರ್ಷಗಳಿಂದ ಎಲ್ಲ ಜಿಲ್ಲೆಗಳೂ ಪ್ರಶಸ್ತಿ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

2021 ರಲ್ಲಿ, ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿಯವರ ಪ್ರಶಸ್ತಿಗಳ ಯೋಜನೆಯು ನಾಗರಿಕ ಸೇವೆ ಅಧಿಕಾರಿಗಳ ಕೊಡುಗೆಯನ್ನು ಈ ಕ್ಷೇತ್ರಗಳಲ್ಲಿ ಗುರುತಿಸುವ ಗುರಿಯನ್ನು ಹೊಂದಿದೆ: 1) “ಜನ ಭಾಗೀದಾರಿ”ಅಥವಾ ಪೋಷಣಾ ಅಭಿಯಾನದಲ್ಲಿ ಜನರ ಭಾಗವಹಿಸುವಿಕೆ 2) ಖೇಲೋ ಇಂಡಿಯಾ ಯೋಜನೆ ಮೂಲಕ ಕ್ರೀಡೆ ಮತ್ತು ಕ್ಷೇಮದಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸುವುದು 3) ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಡಿಜಿಟಲ್ ಪಾವತಿಗಳು ಮತ್ತು ಉತ್ತಮ ಆಡಳಿತ 4) ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಮೂಲಕ ಸಮಗ್ರ ಅಭಿವೃದ್ಧಿ 5) ಮಾನವ ಹಸ್ತಕ್ಷೇಪವಿಲ್ಲದೆಯೇ ಸೇವೆಗಳ ತಡೆರಹಿತ ವಿತರಣೆ ಮತ್ತು 6) ನಾವೀನ್ಯತೆಗಳು

ಪ್ರಶಸ್ತಿಗಾಗಿ ಅರ್ಜಿಗಳು ಸಮಗ್ರ ರೀತಿಯಲ್ಲಿ ಯೋಜನೆಯ ಅನುಷ್ಠಾನದ ಎಲ್ಲಾ ಅಂಶಗಳನ್ನು ಉದಾಹರಣೆಗೆ, ಉತ್ಪಾದನಾ ಹಂತ, ಗುಣಮಟ್ಟ ನಿಯಂತ್ರಣ, ಆಡಳಿತ ಮತ್ತು ಫಲಿತಾಂಶಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಒಳಗೊಂಡಿರಬೇಕು.

2021 ರ ಪ್ರಧಾನಮಂತ್ರಿಯವರ ಪ್ರಶಸ್ತಿಗಳಿಗೆ  ನಾಮನಿರ್ದೇಶನಗಳನ್ನು ಸಲ್ಲಿಸುವ ಅರ್ಹತೆಯು ಈ ಕೆಳಗಿನವರಿಗೆ ಮುಕ್ತವಾಗಿರುತ್ತದೆ: 1, 2, 3 ಮತ್ತು 4 ನೇ ಯೋಜನೆಯ ಪ್ರಶಸ್ತಿಗಳು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ, ಯೋಜನೆ 5 ರ ಪ್ರಶಸ್ತಿಗಳು ಜಿಲ್ಲೆಗಳಿಗೆ ಮತ್ತು ಸೇವೆ ಒದಗಿಸುವ ಯಾವುದೇ ಕೇಂದ್ರ ಅಥವಾ ರಾಜ್ಯದ ಇಲಾಖೆ/ಸಂಸ್ಥೆಗೆ ಮುಕ್ತವಾಗಿರುತ್ತವೆ. ಇವು ಜಿಲ್ಲೆಗೆ ಒಂದು ಪ್ರಶಸ್ತಿ ಮತ್ತು ಇತರರಿಗೆ ಒಂದು ಪ್ರಶಸ್ತಿ ಇರುತ್ತವೆ. ನಾವೀನ್ಯತೆಗಾಗಿ ಪ್ರಶಸ್ತಿಗಳು: ಕೇಂದ್ರ/ರಾಜ್ಯ ಸರ್ಕಾರಗಳು/ಜಿಲ್ಲೆಗಳು/ಅನುಷ್ಠಾನ ಘಟಕಗಳ ಸಂಸ್ಥೆಗಳು.

ಪ್ರಶಸ್ತಿಗಾಗಿ ಪರಿಗಣನೆಯ ಅವಧಿಯು 1ನೇ ಏಪ್ರಿಲ್ 2019 ರಿಂದ 31ನೇ ಡಿಸೆಂಬರ್, 2021. ಸಾರ್ವಜನಿಕ ಆಡಳಿತದಲ್ಲಿನ ಶ್ರೇಷ್ಠತೆಗಾಗಿ 2021 ರ ಪ್ರಧಾನ ಮಂತ್ರಿಯ ಪ್ರಶಸ್ತಿಗಳ ಅಡಿಯಲ್ಲಿ ಒಟ್ಟು 18 ಪ್ರಶಸ್ತಿಗಳನ್ನು ನೀಡಲಾಗುವುದು.

2021 ರ ಪ್ರಧಾನ ಮಂತ್ರಿಯವರ ಪ್ರಶಸ್ತಿಗಳ ಮೌಲ್ಯಮಾಪನದ ಮಾನದಂಡಗಳು: ಸಚಿವಾಲಯಗಳು/ಇಲಾಖೆಗಳೊಂದಿಗೆ ಸಮಾಲೋಚಿಸಿ ಪೂರ್ವ-ನಿರ್ಧರಿತ ಸೂಚಕಗಳ ಆಧಾರದ ಮೇಲೆ (ನಾವೀನ್ಯತೆ ಹೊರತುಪಡಿಸಿ). ಯೋಜನೆಗಳಾದ್ಯಂತ ಸಾಮಾನ್ಯ ಮಾನದಂಡಗಳು ಮತ್ತು ಸಂಬಂಧಿತ ಸಚಿವಾಲಯಗಳು/ಇಲಾಖೆಗಳು ಒದಗಿಸುವ ಮಾನದಂಡಗಳ ಮಿಶ್ರಣವಿರುತ್ತದೆ. ಪಾಲುದಾರರ ಅವಶ್ಯಕತೆಗಳನ್ನು ಪೂರೈಸಲು ನವೀನ ಕಲ್ಪನೆ/ಯೋಜನೆ/ಕಾರ್ಯಕ್ರಮವನ್ನು ಪರಿಚಯಿಸುವ ಮತ್ತು ಅನುಷ್ಠಾನಗೊಳಿಸುವ ಆಧಾರದ ಮೇಲೆ ನಾವೀನ್ಯತೆ ವರ್ಗದ ಪ್ರಶಸ್ತಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.

ಮೌಲ್ಯಮಾಪನ ಪ್ರಕ್ರಿಯೆಯು ಇವುಗಳನ್ನು ಒಳಗೊಂಡಿರುತ್ತದೆ; (i) ಪರಿಶೀಲನಾ ಸಮಿತಿಯಿಂದ ಜಿಲ್ಲೆಗಳು/ಸಂಸ್ಥೆಗಳ ಮೊದಲ ಪಟ್ಟಿ (ಮೊದಲ ಮತ್ತು ಎರಡನೇ ಹಂತ); (ii) ತಜ್ಞರ ಸಮಿತಿ ಮತ್ತು (iii) ಸಶಕ್ತ ಸಮಿತಿಯಿಂದ ಮೌಲ್ಯಮಾಪನ. ಪ್ರಶಸ್ತಿಗಳಿಗಾಗಿ ಸಶಸಕ್ತ ಸಮಿತಿಯ ಶಿಫಾರಸುಗಳಿಗೆ ಪ್ರಧಾನ ಮಂತ್ರಿಯವರ ಅನುಮೋದನೆಯನ್ನು ಪಡೆದುಕೊಳ್ಳಲಾಗುತ್ತದೆ.

2021 ರ ಪ್ರಧಾನ ಮಂತ್ರಿಯವರ ಪ್ರಶಸ್ತಿಗಳು ಇವುಗಳನ್ನು ಒಳಗೊಂಡಿರುತ್ತವೆ:(i) ಪ್ರಶಸ್ತಿ ಫಲಕ, (ii) ಪ್ರಶಸ್ತಿ ಪತ್ರ ಮತ್ತು (iii) ಯೋಜನೆ/ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಅಥವಾ ಯಾವುದೇ ಸಾರ್ವಜನಿಕ ಕಲ್ಯಾಣ ಕ್ಷೇತ್ರದ ಸಂಪನ್ಮೂಲಗಳ ಅಂತರವನ್ನು ಕಡಿಮೆ ಮಾಡಲು ಬಳಸಿಕೊಳ್ಳಲು ಪ್ರಶಸ್ತಿ ಪಡೆದ ಜಿಲ್ಲೆ/ಸಂಸ್ಥೆಗೆ ರೂ.20 ಲಕ್ಷಗಳ ಪ್ರೋತ್ಸಾಹಧನ. ಮಾನ್ಯತೆಯ ಪ್ರಮಾಣಪತ್ರ, ಅದರ ಪ್ರತಿಯನ್ನು ನಾಮನಿರ್ದೇಶನವನ್ನು ಸಲ್ಲಿಸುವ ಅಧಿಕಾರಿ/ತಂಡದ ಎಪಿಎಆರ್‌ (ವಾರ್ಷಿಕ ಕಾರ್ಯಕ್ಷಮತೆಯ ಮೌಲ್ಯಮಾಪನ ದಾಖಲೆ) ನಲ್ಲಿ ಇರಿಸಲಾಗುತ್ತದೆ. ಉಪಕ್ರಮಕ್ಕೆ ಕೊಡುಗೆ ನೀಡಿದ ಅಧಿಕಾರಿಗಳಿಗೆ ಕಾರ್ಯದರ್ಶಿ (ARPG) ಅವರು ಮುಖ್ಯ ಕಾರ್ಯದರ್ಶಿ / ಸಂಬಂಧಪಟ್ಟ ಕೇಂದ್ರ ಸಚಿವಾಲಯ / ಇಲಾಖೆಯ ಕಾರ್ಯದರ್ಶಿಗಳಿಗೆ ಪ್ರತಿಯೊಂದಿಗೆ ನೀಡಬೇಕಾದ ಪ್ರಶಂಸಾ ಪತ್ರ. ಅಧಿಕಾರಿಯ ಕಾರ್ಯಕ್ಷಮತೆಯ ಮೌಲ್ಯಮಾಪನ ದಾಖಲೆಯಲ್ಲಿ ಇರಿಸಲು ಡಿಒಪಿಟಿಗೆ ಕಳುಹಿಸಬೇಕಾದ ಪತ್ರದ ಪ್ರತಿ.

ಡಿಎಆರ್‌ಪಿಜಿಯ ಹಿರಿಯ ಅಧಿಕಾರಿಗಳು ವೆಬ್ ಪೋರ್ಟಲ್ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಿಎಆರ್‌ಪಿಜಿ ಕಾರ್ಯದರ್ಶಿ ವಿ.ಶ್ರೀನಿವಾಸ್ ಈ ಸಂದರ್ಭದಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಿಲ್ಲೆಗಳು/ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ವಿನೂತನ ಕಾರ್ಯಗಳನ್ನು ಗುರುತಿಸಲು ಮತ್ತು ಪುರಸ್ಕರಿಸಲು 2021 ರ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದರು.

***



(Release ID: 1787278) Visitor Counter : 228