ನೀತಿ ಆಯೋಗ

ಬಿದಿರು ಅಭಿವೃದ್ಧಿ ಕುರಿತು ರಾಷ್ಟ್ರೀಯ ಕಾರ್ಯಾಗಾರ ಹಮ್ಮಿಕೊಳ್ಳಲಿರುವ ನೀತಿ ಆಯೋಗ

Posted On: 29 DEC 2021 5:16PM by PIB Bengaluru

ನೀತಿ ಆಯೋಗವು ನಾಳೆ ಡಿಸೆಂಬರ್ 30ರಂದು ಬಿದಿರು ಅಭಿವೃದ್ಧಿ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸುತ್ತಿದೆ.

ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್, ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವಾಲಯದ ಸಹಾಯಕ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಕುಮಾರ್, ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಮತ್ತು ಸಿಇಒ ಅಮಿತಾಬ್ ಕಾಂತ್ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.

ಬಿದಿರು ಅಭಿವೃದ್ಧಿಯಲ್ಲಿನ ಅವಕಾಶಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಬಿದಿರು ವಲಯದ ಸಂಪೂರ್ಣ ಮೌಲ್ಯ-ಸರಪಳಿಯಲ್ಲಿ ತಪ್ಪಿದ ಸಂಪರ್ಕ ಕೊಂಡಿಗಳನ್ನು ಅನ್ವೇಷಿಸಲು ಹಾಗೂ ಅದಕ್ಕೆ ಅನುಗುಣವಾಗಿ ಕಾರ್ಯತಂತ್ರಗಳನ್ನು ಮತ್ತು ವಲಯದ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ವಿದೇಶಗಳಿಂದ ಹಲವಾರು ಮಧ್ಯಸ್ಥಗಾರರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ನಾಲ್ಕು ತಾಂತ್ರಿಕ ಅಧಿವೇಶನಗಳು ಇರಲಿವೆ. ಮೊದಲನೆಯದು 'ಉತ್ಪಾದನೆ, ಮೌಲ್ಯವರ್ಧನೆ ಮತ್ತು ಬಿದಿರು ಕುರಿತ ಅಂತರರಾಷ್ಟ್ರೀಯ ಅನುಭವ', ಎರಡನೆಯದು 'ವಿವಿಧ ವಲಯಗಳಲ್ಲಿ ಸರ್ಕಾರಿ ನೀತಿಗಳು, ಕಾರ್ಯಕ್ರಮಗಳು ಮತ್ತು ಅವಕಾಶಗಳು', ಮೂರನೆಯದು 'ಬಿದಿರಿನಲ್ಲಿ ಆವರ್ತನ ಆರ್ಥಿಕತೆ' ಮತ್ತು ಅಂತಿಮ ಅಧಿವೇಶನ 'ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳು'.

ಬಿದಿರಿನ ಬಳಕೆ ಮತ್ತು ವಾಣಿಜ್ಯೀಕರಣವನ್ನು ಹೆಚ್ಚಿಸಲು, ನೀತಿ ಆಯೋಗವು ಭಾರತೀಯ ಬಿದಿರು ಉದ್ಯಮದ ಸಮಗ್ರ ಅಭಿವೃದ್ಧಿಗಾಗಿ ಪ್ರಾಯೋಗಿಕ ನೀತಿಗಳು / ತಂತ್ರಜ್ಞಾನಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ 'ಬಿದಿರು ಅಭಿವೃದ್ಧಿ ಮಿಷನ್ ಡಾಕ್ಯುಮೆಂಟ್' ಎಂಬ ತಾಂತ್ರಿಕ-ವಾಣಿಜ್ಯ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ನೆಡುತೋಪು, ಉತ್ಪಾದನೆ, ಸಂಸ್ಕರಣೆಯಿಂದ ಪ್ರಮಾಣೀಕರಣ ಮತ್ತು ಬಳಕೆಯವರೆಗೆ ಭಾರತದಲ್ಲಿ ಬಿದಿರಿನ ಸಂಪೂರ್ಣ ಮೌಲ್ಯ-ಸರಪಳಿಯನ್ನು ವಿಶ್ಲೇಷಿಸಲು ವರದಿ ಯೋಜಿಸಿದೆ.

ಬಿದಿರು ವಲಯದ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ನೀತಿಯ ಆಯೋಗದ ಪ್ರಯತ್ನಗಳು ಗ್ರಾಮೀಣ ಆರ್ಥಿಕತೆಯಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು, ರೈತರ ಆದಾಯವನ್ನು ದ್ವಿಗುಣಗೊಳಿಸಲು ನೆರವಾಗಲಿವೆ. ಜೊತೆಗೆ ಬಿದಿರಿನ ವಸ್ತುಗಳ ರಫ್ತಿಗೆ ಉತ್ತೇಜನ ನೀಡುವ ಸಲುವಾಗಿ ಅವುಗಳ ಮೌಲ್ಯವರ್ಧನೆಯನ್ನು ಸುಧಾರಿಸಲು ಮತ್ತು ಉತ್ಪನ್ನಗಳ ವೈವಿಧ್ಯತೆ ಹೆಚ್ಚಿಸಲು ಆಯೋಗದ ಕ್ರಮಗಳು ನೆರವಾಗಲಿವೆ.

ಕಾರ್ಯಾಗಾರದ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

***



(Release ID: 1786260) Visitor Counter : 161