ಗ್ರಾಮೀಣಾಭಿವೃದ್ಧಿ ಸಚಿವಾಲಯ

ಭೂ ಸ್ವಾಧೀನ ಯೋಜನೆಗಳಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕ ನಿಗದಿ ಮಾಡುವ ಕುರಿತ ಎಂ.ಐ.ಎಸ್ ಪೋರ್ಟಲ್ ಗೆ ಕೇಂದ್ರ ಸಚಿವ ಶ್ರೀ ಗಿರಿರಾಜ್ ಸಿಂಗ್ ಚಾಲನೆ


ಇದು ಕೇವಲ ಎಂ.ಐ.ಎಸ್ ಪೋರ್ಟಲ್ ಅಲ್ಲ, ಇದು “ಭಾರತ ವಿಕಾಸದ ಪೋರ್ಟಲ್: ಸಚಿವ ಶ್ರೀ ಗಿರಿರಾಜ್ ಸಿಂಗ್

ಪೋರ್ಟಲ್ ನಲ್ಲಿ ಶ‍್ರೇಯಾಂಕ ಆಧರಿಸಿ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ಮೊದಲ 3 ಬಹುಮಾನ ನೀಡಲಾಗುತ್ತದೆ

Posted On: 16 DEC 2021 5:19PM by PIB Bengaluru

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 2013 ರ ಆರ್.ಎಫ್.ಸಿ.ಟಿ.ಎಲ್.ಎ.ಆರ್.ಆರ್ [ಸೂಕ್ತ ಪರಿಹಾರದ ಹಕ್ಕು ಮತ್ತು ಭೂ ಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ಪುನರ್ ಪಾವತಿ ಕುರಿತ ಕಾಯ್ದೆ – 2013] ನಡಿ ಎಂ.ಐ.ಎಸ್ [ಮಾಹಿತಿ ವ್ಯವಸ್ಥೆಯ ನಿರ್ವಹಣೆ] ಕುರಿತ ಪೋರ್ಟಲ್ ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್ ಚಾಲನೆ ನೀಡಿದರು. ಕಾರ್ಯಕ್ಷಮತೆ ಮತ್ತು ಶ್ರೇಯಾಂಕ ಆಧರಿಸಿ ಮೊದಲ ಮೂರು ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಪ್ರಕಟಿಸಿದರು

ಇದನ್ನು “ವಿಕಾಸ ಪೋರ್ಟಲ್” ಎಂದು ಬಣ್ಣಿಸಿದ ಶ್ರೀ ಗಿರಿರಾಜ್ ಸಿಂಗ್, ಎಂ.ಐ.ಎಸ್ ಪೋರ್ಟಲ್ ಕೇವಲ ದತ್ತಾಂಶ ಮತ್ತು ಅಂಕಿ ಅಂಶಗಳನ್ನಷ್ಟೇ ಪ್ರದರ್ಶಿಸುವುದಿಲ್ಲ. ಇದು ದೇಶದ ಅಭಿವೃದ್ಧಿಯ ವೇಗವನ್ನು ತೋರಿಸುತ್ತದೆ. ಗತಿಶಕ್ತಿ ಅಭಿಯಾನಕ್ಕೆ ಉತ್ತೇಜನ ನೀಡುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಇದು ಇರುವುದಾಗಿ ಹೇಳಿದರು.  

ದೇಶದಲ್ಲಿ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ನಿಧಾನಗತಿಯಿಂದ ಯೋಜನಾ ವೆಚ್ಚ ಹೆಚ್ಚಾಗುತ್ತದೆ ಮತ್ತು ಯೋಜನೆಯ ವೇಗಕ್ಕೆ ಅಡ್ಡಿಯಾಗುತ್ತದೆ. ಎಲ್ಲಾ ರಾಜ್ಯಗಳಲ್ಲಿ ಶ್ರೇಯಾಂಕದ ಮಾಹಿತಿ ಇದ್ದರೆ ಇದರಿಂದ ಅಭಿವೃದ್ಧಿಯ ಪ್ರಗತಿಯ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ. ಜತೆಗೆ ಯೋಜನೆಗಳ ಅನುಷ್ಠಾನದ ವೇಗ ಹೆಚ್ಚಾಗುತ್ತದೆ ಮತ್ತು ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.  

ಭೂ ಸಂಪನ್ಮೂಲ ಇಲಾಖೆ ಎಂ.ಐ.ಎಸ್. ಈ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಭೂ ಸ್ವಾಧೀನದ ವಿವಿಧ ನಿಯತಾಂಕಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಇದು ತಂತ್ರಾಂಶ ಆಧಾರಿತವಾಗಿದ್ದು, ಶ್ರೇಯಾಂಕ ನೀಡಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಇದರ ಅಗತ್ಯವಿದೆ. ಅಭಿವೃದ್ಧಿ ಯೋಜನೆಗಳಿಗೆ ಭೂ ಸ್ವಾಧೀನ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಪೋರ್ಟಲ್ ಅನ್ನು ಯಾವುದೇ ವೆಚ್ಚವಿಲ್ಲದೇ ಎನ್.ಐ.ಸಿ ಅಭಿವೃದ್ಧಿಪಡಿಸಿದೆ. ಪೋರ್ಟಲ್ ನ ಲಿಂಗ್ larr.dolr.gov.in

ಮೊದಲ ಹಂತದಲ್ಲಿ 2013 ರ ಆರ್.ಎಫ್.ಸಿ.ಟಿ.ಎಲ್.ಎ.ಆರ್.ಆರ್ ಕಾಯ್ದೆಯಡಿ 01.01.2014 ರ ನಂತರ ಆಗಿರುವ ಎಲ್ಲಾ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಶ‍್ರೇಯಾಂಕದ ಉದ್ದೇಶಕ್ಕೆ ಪರಿಗಣಿಸಲಾಗುವುದು. ಬಳಿಕ ಇದು ನಿರಂತರ ಪ್ರಕ್ರಿಯೆಯಾಗಲಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಲಾದ ಸಲಹೆಗಳು, ಸೂಚನೆಗಳನ್ನು ಶ್ರೇಯಾಂಕದ ಮಾನದಂಡಗಳಲ್ಲಿ ಸೇರ್ಪಡೆ ಮಾಡಲಾಗಿದೆ. ಇದಕ್ಕಾಗಿ ಒಟ್ಟು 140 ಅಂಕಗಳನ್ನು ನಿಗದಿಪಡಿಸಿದ್ದು, ಪ್ರತಿಯೊಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶ ಅಂಕಗಳನ್ನು ಗಳಿಸಲಿದೆ. ಅನುಷ್ಠಾನದಲ್ಲಿ ವಿಳಂಬ ಮಾಡಿದರೆ ನಕಾರಾತ್ಮಕ ಅಂಕಗಳನ್ನು ನೀಡುವ ನಿಬಂಧನೆಗಳನ್ನು ಸಹ ಇದರಡಿ ಸೇರ್ಪಡೆ ಮಾಡಲಾಗಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಸಾಧ್ವಿ ನಿರಂಜನ್ ಜ್ಯೋತಿ ಅವರು ಸಹ ರಾಜ್ಯಗಳು ಭೂ ಸ್ವಾಧೀನ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ತಮಗೆ ಸಾಧ್ಯವಿರುವುದನ್ನು ಮಾಡಲು ಮತ್ತು ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಪ್ರರೇಪಿಸಿದರು.  

ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ಅಜಯ್ ಟಿರ್ಕಿ ಮಾತನಾಡಿ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಡುವೆ ಈ ಪೋರ್ಟಲ್ ಆರೋಗ್ಯಕರ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪೋರ್ಟಲ್ ನಲ್ಲಿ ದತ್ತಾಂಶ ಮತ್ತು ಅಂಕಿ ಅಂಶಗಳನ್ನು ಹಂಚಿಕೊಳ್ಳಬೇಕು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅನುಕ್ರಮವಾಗಿ ನೀಡುವ ವಿವರಗಳ ಆಧಾರದ ಮೇಲೆ ಶ್ರೇಯಾಂಕ ಅಭಿವೃದ್ದಿಯಾಗಲಿದೆ. ಶ್ರೇಯಾಂಕ ವ್ಯವಸ್ಥೆ ಸಂಪೂರ್ಣವಾಗಿ ಸ್ವಯಂ ಚಾಲಿತವಾಗಿದ್ದು, ಇದರಲ್ಲಿ ಇಲಾಖೆಯ ಯಾವುದೇ ಕ್ಷೇಪ ಇರುವುದಿಲ್ಲ. ವಿವಿಧ ಇಲಾಖೆಗಳಲ್ಲಿ ಸಮಗ್ರ ದತ್ತಾಂಶದ ಆಧಾರದ ಮೇಲೆ ಪೋರ್ಟಲ್ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.     

ಹೆಚ್ಚುವರಿ ಕಾರ್ಯದರ್ಶಿ ಶ್ರೀ ಹುಕುಮ್ ಚಂದ್ ಮೀನಾ ಅವರು ಶ್ರೇಯಾಂಕ ನೀಡುವ ವಿವಿಧ ನಿಯತಾಂಕಗಳು ಮತ್ತು ಮಾನದಂಡಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸೊನ್ಮಣಿ ಬೋರಾ, ಜಂಟಿ ಕಾರ್ಯದರ್ಶಿ ಶ್ರೀ ಉಮಾ ಕಾಂಗ್, ಎನ್.ಐ.ಸಿಯ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.  

***



(Release ID: 1782429) Visitor Counter : 191


Read this release in: English , Marathi , Hindi , Bengali