ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
13 DEC 2021 5:25PM by PIB Bengaluru
ಹರ್ ಹರ್ ಮಹಾದೇವ್! ಹರ್ ಹರ್ ಮಹಾದೇವ್! ನಮಃ ಪಾರ್ವತಿ ಪತಯೇ!.ಹರ್ ಹರ್ ಮಹಾದೇವ್! ಮಾತಾ ಅನ್ನಪೂರ್ಣ ಕೀ ಜೈ! ಗಂಗಾ ಮಾಯೀ ಕೀ ಜೈ!.ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ಹಾಜರಿರುವ ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಉತ್ತರಪ್ರದೇಶದ ಕರ್ಮಯೋಗೀ ಮುಖ್ಯಮಂತ್ರಿ ಯೋಗೀ ಆದಿತ್ಯನಾಥ ಜೀ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ನಮ್ಮೆಲ್ಲರ ಮಾರ್ಗದರ್ಶಕರಾಗಿರುವ ಜೆ.ಪಿ.ನಡ್ಡಾ ಜೀ, ಉಪ ಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯಾ ಜೀ, ಮತ್ತು ದಿನೇಶ್ ಶರ್ಮಾ ಜೀ, ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಮಹೇಂದ್ರ ನಾಥ್ ಪಾಂಡೇ ಜೀ, ಉತ್ತರ ಪ್ರದೇಶ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಜೀ, ಕಾಶಿಯನ್ನು ಪ್ರತಿನಿಧಿಸುತ್ತಿರುವ ಸಚಿವರಾದ ನೀಲಕಂಠ ತೀವಾರಿ ಜೀ, ದೇಶದ ಮೂಲೆ ಮೂಲೆಗಳಿಂದ ಬಂದಿರುವ ಪೂಜ್ಯ ಸಂತರೇ, ಕಾಶಿಯ ನನ್ನ ಪ್ರೀತಿಯ ನಿವಾಸಿಗಳೇ ಮತ್ತು ಈ ಕಾರ್ಯಕ್ರಮವನ್ನು ವಿದೇಶಗಳಿಂದ ವೀಕ್ಷಿಸುತ್ತಿರುವ ಈ ದೇಶದ ನಿಷ್ಟಾವಂತರೇ!. ಕಾಶಿಯ ಎಲ್ಲ ಸಹೋದರರ ಜೊತೆ ನಾನು ಬಾಬಾ ವಿಶ್ವನಾಥ ಮತ್ತು ಮಾ ಅನ್ನಪೂರ್ಣ ದೇವರ ಪದತಲದಲ್ಲಿ ಶಿರಬಾಗಿ ನಮಿಸುತ್ತೇನೆ. ನಾನು ಈಗಷ್ಟೇ ಕಾಶಿಯ ಕಾಳಭೈರವಾ ಜೀ “ಕೊತ್ವಾಲ”ರನ್ನು ಭೇಟಿಯಾಗಿ ದೇಶವಾಸಿಗಳಿಗಾಗಿ ಅವರ ಆಶೀರ್ವಾದಗಳನ್ನು ಬೇಡಿದೆ. ಕಾಶಿಯಲ್ಲಿ ಹೊಸತೇನಾದರೂ ಆಗುತ್ತಿದ್ದರೆ ಅಥವಾ ಏನಾದರೂ ವಿಶೇಷವಿದ್ದರೆ ಅವರ ಅನುಮತಿಯನ್ನು ಕೋರುವುದು ಅವಶ್ಯ. ನಾನು ಕಾಶಿಯ ಕೊತ್ವಾಲರ ಪಾದಕ್ಕೆ ಶಿರಬಾಗಿ ನಮಿಸುತ್ತೇನೆ. गंगा तरंग रमणीय जटा-कलापम्, गौरी निरंतर विभूषित वाम-भागम्नारायण प्रिय-मनंग-मदाप-हारम्, वाराणसी पुर-पतिम् भज विश्वनाथम्। ನಾನು ಬಾಬಾ ವಿಶ್ವನಾಥರ ಆಲಯದಿಂದ ದೇಶದ ಜನತೆಗೆ ಮತ್ತು ಜಗತ್ತಿನ ವಿವಿಧೆಡೆಗಳಲ್ಲಿ ಅವರವರ ಸ್ಥಳಗಳಿಂದ ಈ “ಮಾಹಾಯಜ್ಞ” ವನ್ನು ವೀಕ್ಷಿಸುತ್ತಿರುವ ಜನರಿಗೆ ನಮಸ್ಕಾರಗಳನ್ನು ಹೇಳುತ್ತೇನೆ. ಈ ಪವಿತ್ರ ಸಂದರ್ಭಕ್ಕಾಗಿ ತಮ್ಮ ಸಹಕಾರವನ್ನು ನೀಡಿದ ಕಾಶಿಯ ಜನತೆಗೂ ನನ್ನ ನಮಸ್ಕಾರಗಳು. ನಾನು ಬಹಳ ಸಂತೋಷ ಅನುಭವಿಸುತ್ತಿದ್ದೇನೆ. ನಿಮ್ಮೆಲ್ಲರಿಗೂ ಬಹಳ ಅಭಿನಂದನೆಗಳು.
ಸ್ನೇಹಿತರೇ,
ಪುರಾಣಗಳ ಪ್ರಕಾರ ಯಾವುದೇ ವ್ಯಕ್ತಿ ಕಾಶಿಯನ್ನು ಪ್ರವೇಶಿಸಿದಾಕ್ಷಣ ಎಲ್ಲಾ ಬಂಧನಗಳಿಂದ ಮುಕ್ತನಾಗುತ್ತಾನೆ. ನಾವಿಲ್ಲಿಗೆ ಬಂದಾಕ್ಷಣವೇ ವಿಶ್ವನಾಥ ದೇವರ ಆಶೀರ್ವಾದದೊಂದಿಗೆ ಅಲೌಕಿಕ ಶಕ್ತಿಯು ನಮ್ಮ ಅಂತರಾತ್ಮವನ್ನು ಜಾಗೃತಗೊಳಿಸುತ್ತದೆ. ಮತ್ತು ಇಂದು ಈ ಅನಂತ ಅಚಲ ಕಾಶಿಯ ಪ್ರಜ್ಞೆಯಲ್ಲಿ ಒಟ್ಟಾರೆಯಾಗಿ ಬೇರೆಯದೇ ಆದ ಕಂಪನಗಳು ಮೂಡಿವೆ. ಇಂದು ಆದಿ ಕಾಶಿಯ ಅಲೌಕಿಕತೆಯಲ್ಲಿ ಬೇರೆಯದೇ ಆದ ತೇಜಸ್ಸು ಮೂಡಿದೆ!. ಇಂದು ಅಚಲ, ಚಿರಂತನವಾದ ಬನಾರಸಿಯಲ್ಲಿ ವಿಶಿಷ್ಟ ಶಕ್ತಿಯೊಂದು ಗೋಚರಿಸುತ್ತಿದೆ!. ಬನಾರಸಿಯಲ್ಲಿ ಪವಿತ್ರ ಸಂದರ್ಭಗಳಲ್ಲಿ ಬಾಬಾ ಎದುರು ದೈವಿಕ ಶಕ್ತಿಗಳು ಹಾಜರಾಗುತ್ತವೆ ಎಂಬುದನ್ನು ನಾವು ಯಾತ್ರಿಕರ ಗ್ರಂಥಗಳಲ್ಲಿ, ಧರ್ಮಗ್ರಂಥಗಳಲ್ಲಿ ಕೇಳಿದ್ದೇವೆ. ಇಂದು ಬಾಬಾ ಆಸ್ಥಾನಕ್ಕೆ ಹೋದಾಗ ನನಗೂ ಇಂತಹ ಅನುಭವ ಆಗಿದೆ. ನಮ್ಮ ಇಡೀ ಅಂತರಾತ್ಮ, ಪ್ರಜ್ಞೆ ಅದಕ್ಕೆ ಜೋಡಿಸಲ್ಪಟ್ಟಂತಿದೆ. ಬಾಬಾರಿಗೆ ಮಾತ್ರ ಗೊತ್ತು ಅವರ ಮಾಯೆಯ ಶಕ್ತಿ, ಆದರೆ ನಮ್ಮ ದೃಷ್ಟಿಗೆ ಗೋಚರವಾಗುವಂತೆ ಹೇಳುವುದಾದರೆ, ಇಡೀ ವಿಶ್ವವೇ ’ವಿಶ್ವನಾಥ ಧಾಮ”ದ ಈ ಪವಿತ್ರ ಕಾರ್ಯಕ್ರಮದ ಜೊತೆ ಬೆಸೆದಿದೆ.
ಸ್ನೇಹಿತರೇ,
ಇಂದು, ಅಂದರೆ ಸೋಮವಾರ ಭಗವಾನ್ ಶಿವನಿಗೆ ಬಹಳ ಪ್ರೀತಿಯ ದಿನ. ಇಂದು ವಿಕ್ರಮ ಸಂವತ್ಸರ 2078, ಮಾರ್ಗಶಿರ್ಷ ಶುಕ್ಲ ಪಕ್ಷ, ದಶಮಿ ತಿಥಿ, ಹೊಸ ಚರಿತ್ರೆಯನ್ನು ನಿರ್ಮಾಣ ಮಾಡುತ್ತಿದೆ. ಮತ್ತು ಈ ಸಮಯದ, ಕ್ಷಣಗಳನ್ನು ಸಾಕ್ಷೀಕರಿಸುವ ಅದೃಷ್ಟ ನಮ್ಮದಾಗಿದೆ. ಇಂದು ವಿಶ್ವನಾಥ ಧಾಮ ಕಲ್ಪಿಸಿಕೊಳ್ಳಲಾರದಂತಹ ಮತ್ತು ಮಿತಿ ಇಲ್ಲದಂತಹ ಶಕ್ತಿಯನ್ನು ತುಂಬಿಕೊಂಡಿದೆ. ಅದರ ಕಾಂತಿ, ಪ್ರಕಾಶ ವಿಸ್ತಾರವಾಗುತ್ತಿದೆ. ಅದರ ಮಹತ್ವ ಆಕಾಶವನ್ನು ತಲುಪುತ್ತಿದೆ. ಇಲ್ಲಿ ವಿನಾಶ ಸ್ಥಿತಿಯಲ್ಲಿದ್ದ, ಕಣ್ಮರೆಯಾಗಿದ್ದ ಹಲವಾರು ಪ್ರಾಚೀನ ದೇವಾಲಯಗಳನ್ನು ಮರು ಸ್ಥಾಪನೆ ಮಾಡಲಾಗಿದೆ. ಬಾಬಾ ಅವರು ಶತಮಾನಗಳಿಂದ ತಮ್ಮ ಭಕ್ತಾದಿಗಳ ಈ ಸೇವೆಯಿಂದ ಸಂತುಷ್ಟರಾಗಿದ್ದಾರೆ ಮತ್ತು ಅದರಿಂದಾಗಿ ಅವರು ನಮಗೆ ಈ ದಿನವನ್ನು ಕರುಣಿಸಿದ್ದಾರೆ. ವಿಶ್ವನಾಥ ಧಾಮದ ಈ ಸಂಕೀರ್ಣ ಬರೇ ಬೃಹತ್, ವೈಭವದ ಕಟ್ಟಡ ಮಾತ್ರವಲ್ಲ, ಅದು ಭಾರತದ ಸನಾತನ ಸಂಸ್ಕೃತಿಯ ಪ್ರತೀಕ!. ಇದು ನಮ್ಮ ಆಧ್ಯಾತ್ಮಿಕ ಪ್ರಜ್ಞೆಯ, ಅಂತರಾತ್ಮದ ಸಂಕೇತ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳು, ಶಕ್ತಿ, ಮತ್ತು ಕ್ರಿಯಾಶೀಲತೆಯ ಸಂಕೇತ. ನೀವಿಲ್ಲಿಗೆ ಬರುವಾಗ ನೀವು ನಂಬಿಕೆಯೊಂದಿಗೆ ಮಾತ್ರ ಬರುವುದಲ್ಲ, ನಿಮಗೆ ಇಲ್ಲಿ ನಮ್ಮ ಹಿಂದಿನ ವೈಭವದ ಅನುಭವ ಕೂಡಾ ಆಗುತ್ತದೆ. ವಿಶ್ವನಾಥ ಧಾಮ ಸಂಕೀರ್ಣದಲ್ಲಿ ಹೇಗೆ ಪ್ರಾಚೀನತೆ ಮತ್ತು ನವೀನತೆ ಒಗ್ಗೂಡಿ ಜೀವಕಳೆ ಪಡೆದಿವೆ ಎಂಬುದನ್ನು ನಾವು ಕಾಣಬಹುದು. ಪ್ರಾಚೀನ ಪ್ರೇರಣೆಗಳು ಭವಿಷ್ಯಕ್ಕೆ ಹೇಗೆ ದಿಕ್ಕು ತೋರಿಸಬಲ್ಲವು ಎಂಬುದರ ಇಣುಕು ನೋಟವೂ ಇಲ್ಲಿ ಲಭಿಸುತ್ತದೆ.
ಸ್ನೇಹಿತರೇ,
ಉತ್ತರಾಭಿಮುಖವಾಗಿ ಹರಿಯುವ ಗಂಗಾ ಮಾತೆ ಕಾಶಿಗೆ ಬಂದು ಬಾಬಾರ ಪಾದ ತೊಳೆಯುತ್ತಾಳೆ. ಆಕೆ ಕೂಡಾ ಇಂದು ಸಂತುಷ್ಟಳಾಗಿದ್ದಾಳೆ. ಕಾಶಿ ವಿಶ್ವನಾಥ ಭಗವಾನರ ಪಾದಗಳಿಗೆ ಶಿರಬಾಗಿ ನಮಿಸುವಾಗ, ಪ್ರಾರ್ಥಿಸುವಾಗ ಗಂಗಾ ಮಾತೆಯ ತಂಗಾಳಿ ನಮಗೆ ಆಶೀರ್ವಾದಗಳನ್ನು ಕರುಣಿಸುತ್ತದೆ. ಗಂಗಾ ಮಾತೆ ಸಂತುಷ್ಟಳಾಗಿರುವಾಗ ನಮಗೂ ಗಂಗಾ ಮಾತೆಯ ಅಲೌಕಿಕವಾದಂತಹ ಅಲೆಗಳ ದೈವಿಕ ಅನುಭವ ಬಾಬಾನಲ್ಲಿ ಪ್ರಾರ್ಥನೆ ಸಲ್ಲಿಸುವಾಗ, ಧ್ಯಾನಿಸುವಾಗಲೂ ಲಭಿಸುತ್ತದೆ. ಬಾಬಾ ವಿಶ್ವನಾಥ ಎಲ್ಲರಿಗೂ ಸೇರಿದವರು. ಗಂಗಾ ಮಾತೆ ಕೂಡಾ ಎಲ್ಲರಿಗೂ ಸೇರಿದವರು. ಅವರ ಆಶೀರ್ವಾದ ಎಲ್ಲರಿಗೂ ಲಭಿಸುತ್ತದೆ. ಆದರೆ ಸಮಯದ ನಿರ್ಬಂಧದಿಂದಾಗಿ ಮತ್ತು ಪರಿಸ್ಥಿತಿಗಳಿಂದಾಗಿ ಬಾಬಾ ಮತ್ತು ಗಂಗಾ ಮಾತೆಯ ಸೇವೆಯ ಲಭ್ಯತೆ ಬಹಳ ಕಷ್ಟಸಾಧ್ಯವಾಗಿತ್ತು. ಪ್ರತಿಯೊಬ್ಬರೂ ಇಲ್ಲಿಗೆ ಬರಲಿಚ್ಛಿಸುತ್ತಿದ್ದರು. ಆದರೆ ಇಲ್ಲಿ ಸೂಕ್ತವಾದ ರಸ್ತೆಗಳಿರಲಿಲ್ಲ. ಸಾಕಷ್ಟು ಸ್ಥಳಾವಕಾಶ ಇರಲಿಲ್ಲ. ಇಲ್ಲಿಗೆ ಬರುವುದು ಹಿರಿಯರಿಗೆ ಮತ್ತು ದಿವ್ಯಾಂಗರಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಆದರೆ ಈಗ ವಿಶ್ವನಾಥ ಧಾಮ ಪೂರ್ಣಗೊಂಡಿರುವುದರಿಂದ ಇಲ್ಲಿಗೆ ತಲುಪುವುದು ಪ್ರತಿಯೊಬ್ಬರಿಗೂ ಸುಲಭವಾಗಿದೆ. ನಮ್ಮ ದಿವ್ಯಾಂಗ ಸಹೋದರರು ಮತ್ತು ಸಹೋದರಿಯರು ಹಾಗು ಹಿರಿಯ ಪೋಷಕರು ಈಗ ದೋಣಿಯಿಂದ ನೇರ ಜೆಟ್ಟಿಗೆ ಬರಬಹುದು. ಘಾಟ್ ಗಳಿಂದ ಜೆಟ್ಟಿಗಳನ್ನು ತಲುಪಲು ಎಸ್ಕಲೇಟರುಗಳನ್ನು ಕೂಡಾ ಸ್ಥಾಪಿಸಲಾಗಿದೆ. ಅಲ್ಲಿಂದ ಜನರು ನೇರವಾಗಿ ದೇವಾಲಯಕ್ಕೆ ಬರಬಹುದು. ಈ ಮೊದಲು ಕಿರಿದಾದ ರಸ್ತೆಗಳು ಬಹಳ ದೀರ್ಘ ಕಾಲ ಕಾಯುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದ್ದವು. ಇದು ಕಿರಿಕಿರಿಯ ಸಂಗತಿಯಾಗಿತ್ತು