ಸಂಪುಟ ಕಾರ್ಯಾಲಯ
azadi ka amrit mahotsav

ಬಂಗಾಳಕೊಲ್ಲಿಯಲ್ಲಿ ಬಂದೆರಗಲಿರುವ ಚಂಡಮಾರುತ ಹಿನ್ನೆಲೆ; ಸಂಪುಟ ಕಾರ್ಯದರ್ಶಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ(ಎನ್ ಸಿಎಂಸಿ)ಯಿಂದ ಪೂರ್ವಸಿದ್ಧತಾ ಪರಾಮರ್ಶೆ ಸಭೆ

Posted On: 01 DEC 2021 9:58PM by PIB Bengaluru

ಬಂಗಾಳಕೊಲ್ಲಿಯಲ್ಲಿ ಬಂದೆರಗಲಿರುವ ಚಂಡಮಾರುತದಿಂದ ಎದುರಾಗಬಹುದಾದ ಪ್ರತಿಕೂಲ ಪರಿಣಾಮಗಳು ಮತ್ತು ಪರಿಸ್ಥಿತಿಗಳನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಪೂರ್ವಸಿದ್ಧತೆಗಳ ಕುರಿತು ಕೇಂದ್ರ ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬ ಅಧ್ಯಕ್ಷತೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯು ಕೇಂದ್ರದ ವಿವಿಧ ಸಚಿವಾಲಯಗಳು, ನಾನಾ ಇಲಾಖೆಗಳು ಮತ್ತು ರಾಜ್ಯ ಸರಕಾರಗಳ ಜತೆ ಪರಾಮರ್ಶೆ ಸಭೆ ನಡೆಸಿತು.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಸದ್ಯದ ಸ್ಥಿತಿಗತಿ ಮತ್ತು ಅದು ಡಿಸೆಂಬರ್ 3ರಂದು ಪ್ರಬಲ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಬೆಳವಣಿಗೆಗಳ ಕುರಿತು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಎನ್ ಸಿ ಎಂ ಸಿ ಸಮಿತಿಗೆ ವಿವರ ನೀಡಿದರು.

ಪ್ರಬಲ ಚಂಡಮಾರುತವು ಮತ್ತಷ್ಟು ತೀವ್ರಗೊಂಡು ಡಿಸೆಂಬರ್ 4ರಂದು ಬೆಳಗ್ಗೆ ಆಂಧ್ರ ಪ್ರದೇಶ ಮತ್ತು ಒಡಿಶಾ ಕರಾವಳಿ ಮೇಲೆ ಬಂದೆರಗಲಿದೆ. ಅದು ತಾಸಿಗೆ 90-100 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಎರಡು ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿಯಿಂದ ಕೂಡಿದ ಜೋರು ಮಳೆ ಸುರಿಯಲಿದೆ. ಆಂಧ್ರ ಪ್ರದೇಶದ ಶ್ರೀಕಾಕುಳಂ, ವಿಶಾಖಪಟ್ಟಣ ಮತ್ತು ವಿಜಯನಗರ ಜಿಲ್ಲೆ ಮತ್ತು ಒಡಿಶಾ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿ ಮತ್ತು ಮಳೆಯೊಂದಿಗೆ ಹೆಚ್ಚಿನ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ. ಜತೆಗೆ, ಪಶ್ಚಿಮ ಬಂಗಾಳದ ಕರಾವಳಿ ಮತ್ತು ಗಂಗಾ ನದಿ ಪಾತ್ರಗಳಲ್ಲಿ ಭಾರಿ ಹಾನಿ ಉಂಟುಮಾಡುವ ಸಾಧ್ಯತೆ ಇದೆ.

ಚಂಡಮಾರುತ ಅಪ್ಪಳಿಸುವ ಮಾರ್ಗದಲ್ಲಿ ನೆಲೆಸಿರುವ ಜನರನ್ನು ರಕ್ಷಿಸಲು ಕೈಗೊಳ್ಳಲಾಗುತ್ತಿರುವ ಪೂರ್ವಸಿದ್ಧತಾ ಕ್ರಮಗಳ ಬಗ್ಗೆ ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್‌ನ ಮುಖ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಎನ್ ಸಿ ಎಂ ಸಿ ಸಮಿತಿಗೆ ಮಾಹಿತಿ ನೀಡಿದರು. ಅಲ್ಲದೆ, ಚಂಡಮಾರುತ ಅಪ್ಪಳಿಸಿದ ನಂತರ ಆಗಬಹುದಾದ ಸಂಭಾವ್ಯ ಹಾನಿಯನ್ನು ಕನಿಷ್ಠಗೊಳಿಸಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರ ನೀಡಿದರು.

ಆಂಧ್ರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳು ಮತ್ತು ಗಂಗಾ ನದಿ ಪಾತ್ರಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ ಡಿಆರ್ ಎಫ್) 32 ತಂಡಗಳನ್ನು ನಿಯೋಜಿಸಲಾಗಿದೆ. ಜತೆಗೆ, ಹೆಚ್ಚುವರಿ ತುಕಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಅಗತ್ಯ ಬಿದ್ದರೆ, ಹಡಗುಗಳು ಮತ್ತು ವಿಮಾನಗಳೊಂದಿಗೆ ಭಾರತೀಯ ಭೂಸೇನೆ ಮತ್ತು ನೌಕಾಪಡೆಯ ರಕ್ಷಣಾ ಮತ್ತು ಪರಿಹಾರ ತಂಡಗಳು ನಿಯೋಜನೆಗೆ ಸಿದ್ಧವಾಗಿವೆ.

ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪೂರ್ವಸಿದ್ಧತೆ ಮತ್ತು ಸನ್ನದ್ಧತೆಯ ಕ್ರಮಗಳನ್ನು ಪರಿಶೀಲಿಸಿದ ಸಂಪುಟ ಕಾರ್ಯದರ್ಶಿ  ರಾಜೀವ್ ಗೌಬಾ ಅವರು, ಚಂಡಮಾರುತ ಎರಗುವ ಮುನ್ನ ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ಸಂಬಂಧಪಟ್ಟ ಸಂಸ್ಥೆಗಳು ಹಾನಿ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು. ಜೀವ ಮತ್ತು ಆಸ್ತಿ ಹಾನಿ, ಮೂಲಸೌಕರ್ಯ ಮತ್ತು ಬೆಳೆ ಹಾನಿ ಉಂಟಾಗುವುದನ್ನು ತಡೆಗಟ್ಟಲು ಮತ್ತು ಕನಿಷ್ಠಗೊಳಿಸಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು. ಅಲ್ಲದೆ, ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರು ಮತ್ತು ದೋಣಿಗಳು ತಕ್ಷಣವೇ ಸಾಗರ ದಂಡೆಗೆ ಮರಳುವಂತೆ ರಾಜ್ಯ ಸರ್ಕಾರಗಳು ಕೂಡಲೇ ಮುನ್ಸೂಚನೆ ನೀಡಬೇಕು. ಸಾಗರ ತಟದಲ್ಲಿ ನೆಲೆಸಿರುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವುದನ್ನು ಖಾತ್ರಿಪಡಿಸಬೇಕು ಎಂದು ಸೂಚಿಸಿದ ಸಂಪುಟ ಕಾರ್ಯದರ್ಶಿ, ರಾಜ್ಯಗಳ ಎಲ್ಲಾ ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳಿಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ನೆರವು ನೀಡಲು ಸಿದ್ಧವಾಗಿವೆ, ಅವು ಸದಾಕಾಲ ನಿಮ್ಮ ಸೇವೆಗೆ ಲಭ್ಯವಿರಲಿವೆ ಎಂದು ಭರವಸೆ ನೀಡಿದರು.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ, ಮೀನುಗಾರಿಕೆ ಸಚಿವಾಲಯ, ದೂರಸಂಪರ್ಕ ಸಚಿವಾಲಯ, ಇಂಧನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು, ಎನ್ ಡಿಆರ್ ಎಫ್ ಮಹಾನಿರ್ದೇಶಕರು, ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು, ತಾಂತ್ರಿಕ ಪರಿಣತರು ಸಭೆಯಲ್ಲಿ ಪಾಲ್ಗೊಂಡಿದ್ದರು.

***


(Release ID: 1777544) Visitor Counter : 188