ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
Posted On:
19 NOV 2021 11:22AM by PIB Bengaluru
ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ ನಮಸ್ಕಾರ
ಇಂದು ಪವಿತ್ರ ದೇವ್-ದೀಪಾವಳಿ ಹಬ್ಬ. ಜತೆಗೆ, ಪ್ರಗುರು ನಾನಕ್ ದೇವ್ ಜೀ ಅವರ ಪ್ರಕಾಶ್ ಪುರಾಬ್ ಪವಿತ್ರ ಹಬ್ಬವು ಸಹ ಇಂದೇ ಬಂದಿದೆ. ಈ ಪವಿತ್ರ ಹಬ್ಬದ ಅಂಗವಾಗಿ ನಾನು ವಿಶ್ವದ ಎಲ್ಲಾ ಜನರಿಗೆ ಮತ್ತು ಎಲ್ಲಾ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಒಂದೂವರೆ ವರ್ಷಗಳ ನಂತರ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಈಗ ಪುನಾರಂಭವಾಗಿರುವುದು ತುಂಬಾ ಸಂತೋಷಕರ ವಿಷಯವಾಗಿದೆ.
ಸ್ನೇಹಿತರೆ,
'विच्च दुनिया सेव कमाइए ता दरगाह बैसन पाइए' ಎಂದು ಗುರು ನಾನಕ್ ಜೀ ಹೇಳಿದ್ದಾರೆ. ಅಂದರೆ, ಸೇವೆಯ ಮಾರ್ಗವನ್ನು ಅಳವಡಿಸಿಕೊಂಡರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಮ್ಮ ಸರ್ಕಾರವು ಈ ಸೇವಾ ಮನೋಭಾವದಿಂದ ದೇಶವಾಸಿಗಳ ಜೀವನವನ್ನು ಸುಲಭಗೊಳಿಸುವಲ್ಲಿ ತೊಡಗಿದೆ. ಭಾರತವು ಅನೇಕ ತಲೆಮಾರುಗಳ ಕನಸುಗಳನ್ನು ನನಸಾಗಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ಸ್ನೇಹಿತರೆ,
5 ದಶಕಗಳ ನನ್ನ ಸಾರ್ವಜನಿಕ ಜೀವನದಲ್ಲಿ ರೈತರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಆದ್ದರಿಂದ, 2014 ರಲ್ಲಿ ದೇಶವು ನನಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ ನಾವು ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ.
ಸ್ನೇಹಿತರೆ,
ದೇಶದ 100 ರೈತರಲ್ಲಿ 80 ಮಂದಿ ಸಣ್ಣ ರೈತರಿದ್ದಾರೆ ಎಂಬ ಕಟುಸತ್ಯ ಅನೇಕರಿಗೆ ತಿಳಿದಿಲ್ಲ. ಅವರಿಗೆ 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಇದೆ. ದೇಶಾದ್ಯಂತ ಈ ಸಣ್ಣ ರೈತರ ಸಂಖ್ಯೆ 10 ಕೋಟಿಗೂ ಹೆಚ್ಚು ಎಂದು ನೀವು ಊಹಿಸಬಲ್ಲಿರಾ? ಈ ಸಣ್ಣ ತುಂಡು ಭೂಮಿ ಅವರ ಇಡೀ ಜೀವನಕ್ಕೆ ಮೂಲವಾಗಿದೆ. ಇದೇ ಅವರ ಜೀವನವಾಗಿದೆ. ಈ ಸಣ್ಣ ಜಮೀನಿನ ಸಹಾಯದಿಂದಲೇ ಅವರು ಜೀವನ ಸಾಗಿಸುತ್ತಾರೆ ಮತ್ತು ತಮ್ಮ ಕುಟುಂಬ ಸಾಕುತ್ತಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ಕುಟುಂಬಗಳ ವಿಭಜನೆಯು ಈ ಭೂಮಿಯನ್ನು ಮತ್ತಷ್ಟು ಚಿಕ್ಕದಾಗಿಸುತ್ತಿದೆ.
ಆದ್ದರಿಂದ, ದೇಶದ ಸಣ್ಣ ರೈತರು ಎದುರಿಸುತ್ತಿರುವ ನಾನಾ ಸವಾಲುಗಳನ್ನು ನಿವಾರಿಸುವ ಸಲುವಾಗಿ ಅವರಿಗೆ ಬಿತ್ತನೆ ಬೀಜಗಳು, ವಿಮೆ ಸೌಲಭ್ಯ, ಮಾರುಕಟ್ಟೆ ಮತ್ತು ಉಳಿತಾಯ ಸೌಕರ್ಯ ಒದಗಿಸಲು ನಾವು ಸರ್ವಾಂಗೀಣವಾಗಿ ಕೆಲಸ ಮಾಡಿದ್ದೇವೆ. ಗುಣಮಟ್ಟದ ಬಿತ್ತನೆ ಬೀಜಗಳ ಜತೆಗೆ ಸರ್ಕಾರವು ರೈತರಿಗೆ ಬೇವು ಲೇಪಿತ ಯೂರಿಯಾ, ಮಣ್ಣಿನ ಆರೋಗ್ಯ ಕಾರ್ಡ್‌ಗಳು, ಸಣ್ಣ ನೀರಾವರಿ ಮತ್ತಿತರ ಸೌಲಭ್ಯಗಳನ್ನು ಒದಗಿಸಿದೆ. ರೈತರಿಗೆ ನಾವು 22 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ನೀಡಿದ್ದೇವೆ. ಈ ಎಲ್ಲಾ ವೈಜ್ಞಾನಿಕ ಅಭಿಯಾನಗಳ ಫಲವಾಗಿ ದೇಶದ ಕೃಷಿ ಉತ್ಪಾದನೆಯೂ ಹೆಚ್ಚಾಗಿದೆ.
ಸ್ನೇಹಿತರೆ,
ಬೆಳೆ ವಿಮೆ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಿದಿದೇವೆ. ಹೆಚ್ಚಿನ ಸಂಖ್ಯೆಯ ರೈತರನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಹಳೆಯ ನಿಯಮಗಳನ್ನು ಸಹ ಬದಲಾಯಿಸಲಾಗಿದೆ. ಇದರಿಂದ ಹೆಚ್ಚು ಹೆಚ್ಚು ರೈತರು ವಿಪತ್ತಿನ ಸಮಯದಲ್ಲಿ ಸುಲಭವಾಗಿ ಪರಿಹಾರ ಪಡೆಯಬಹುದಾಗಿದೆ. ಇದರಿಂದ ನಮ್ಮ ರೈತ ಬಂಧುಗಳು ಕಳೆದ 4 ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಪರಿಹಾರ ಪಡೆದಿದ್ದಾರೆ. ನಾವು ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರಿಗೆ ವಿಮೆ ಮತ್ತು ಪಿಂಚಣಿ ಸೌಲಭ್ಯಗಳನ್ನು ವಿಸ್ತರಿಸಿದ್ದೇವೆ. ಸಣ್ಣ ರೈತರ ಅಗತ್ಯಗಳನ್ನು ಪೂರೈಸಲು 1.62 ಲಕ್ಷ ಕೋಟಿ ರೂಪಾಯಿ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇವೆ.
ಸ್ನೇಹಿತರೆ,
ರೈತರ ಶ್ರಮಕ್ಕೆ ಪ್ರತಿಯಾಗಿ ಬೆಳೆಗೆ ಸಮರ್ಪಕ ಮತ್ತು ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ಗ್ರಾಮೀಣ ಮಾರುಕಟ್ಟೆ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. ನಾವು ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಹೆಚ್ಚಿಸಿದ್ದಲ್ಲದೆ, ದಾಖಲೆಯ ಸರ್ಕಾರಿ ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ. ನಮ್ಮ ಸರ್ಕಾರದ ಕೃಷಿ ಉತ್ಪನ್ನಗಳ ದಾಸ್ತಾನು ಪ್ರಮಾಣವು ಕಳೆದ ಹಲವು ದಶಕಗಳ ದಾಖಲೆಗಳನ್ನು ಮುರಿದಿದೆ. ಇ-ನಾಮ್ ಯೋಜನೆಯೊಂದಿಗೆ ದೇಶದ 1,000 ಕ್ಕೂ ಹೆಚ್ಚು ಮಂಡಿಗಳನ್ನು ಸಂಪರ್ಕಿಸುವ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ನಾವು ವೇದಿಕೆ ಕಲ್ಪಿಸಿದ್ದೇವೆ. ಇದರೊಂದಿಗೆ ದೇಶಾದ್ಯಂತ ಕೃಷಿ ಮಂಡಿಗಳ ಆಧುನೀಕರಣಕ್ಕೂ ಕೋಟ್ಯಂತರ ರೂ. ವೆಚ್ಚ ಮಾಡಿದ್ದೇವೆ.
ಸ್ನೇಹಿತರೆ,
ಇದೀಗ, ಕೇಂದ್ರ ಸರ್ಕಾರದ ಕೃಷಿ ಬಜೆಟ್ ಅನುದಾನ ಹಂಚಿಕೆ ಪ್ರಮಾಣವು ಮೊದಲಿಗಿಂತ 5 ಪಟ್ಟು ಹೆಚ್ಚಾಗಿದೆ. ಪ್ರತಿ ವರ್ಷ ಕೃಷಿ ರಂಗಕ್ಕೆ 1.25 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ. ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೃಷಿ ಮೂಲಸೌಕರ್ಯ ನಿಧಿಯಡಿ, ಹಳ್ಳಿಗಳು ಮತ್ತು ಹೊಲಗಳ ಬಳಿ ಉತ್ಪನ್ನಗಳ ಸಂಗ್ರಹಣೆ ಮತ್ತು ಕೃಷಿ ಉಪಕರಣಗಳನ್ನು ತ್ವರಿತವಾಗಿ ಲಭ್ಯವಾಗುವಂತೆ ಅನೇಕ ಸೌಲಭ್ಯಗಳನ್ನು ವಿಸ್ತರಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ದೇಶದ ಸಣ್ಣ ಮತ್ತು ಅತಿಸಣ್ಣ ಸಾಗುವಳಿದಾರರನ್ನು ಸಬಲೀಕರಿಸಲು 10,000 ರೈತ ಉತ್ಪಾದಕರ ಸಂಘಟನೆ(ಎಫ್‌ಪಿಒ)ಗಳನ್ನು ಸ್ಥಾಪಿಸುವ ಅಭಿಯಾನವೂ ಭರದಿಂದ ಸಾಗಿದೆ. ಇದಕ್ಕಾಗಿ ಸುಮಾರು 7,000 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಸೂಕ್ಷ್ಮ ನೀರಾವರಿ ನಿಧಿಯ ಹಂಚಿಕೆಯನ್ನು ದ್ವಿಗುಣಗೊಳಿಸಿ, 10,000 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಬೆಳೆ ಸಾಲವನ್ನು ಸಹ ದ್ವಿಗುಣಗೊಳಿಸಿ, ಈ ವರ್ಷ 16 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಿದ್ದೇವೆ. ಈಗ ಮೀನು ಸಾಕಾಣಿಕೆಗೆ ಸಂಬಂಧಿಸಿದಂತೆ, ನಮ್ಮ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಪ್ರಯೋಜನ ಪಡೆಯಲಾರಂಭಿಸಿದ್ದಾರೆ. ಅಂದರೆ ನಮ್ಮ ಸರ್ಕಾರ ರೈತರ ಹಿತದೃಷ್ಟಿಯಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರ ಸಾಮಾಜಿಕ ಸ್ಥಾನಮಾನವನ್ನು ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ.
ಸ್ನೇಹಿತರೆ,
ರೈತರ ಸ್ಥಿತಿಗತಿ ಸುಧಾರಿಸಲು ಈ ಮಹಾನ್ ಅಭಿಯಾನದ ಭಾಗವಾಗಿ ಪ್ರಮುಖ 3 ಕೃಷಿ ಕಾನೂನುಗಳನ್ನು ಪರಿಚಯಿಸಲಾಯಿತು. ದೇಶದ ರೈತರು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಸಬಲೀಕರಣಗೊಳ್ಳಬೇಕು ಮತ್ತು ಅವರ ಕೃಷಿಉತ್ಪನ್ನಗಳಿಗೆ ಸಮರ್ಪಕ ಮತ್ತು ನ್ಯಾಯಯುತ ಬೆಲೆ ದೊರಕಿಸಲು, ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳನ್ನು ಪಡೆಯಬೇಕು ಎಂಬುದು ನಮ್ಮ ಗುರಿಯಾಗಿತ್ತು. ಹಲವು ವರ್ಷಗಳ ಈ ಬೇಡಿಕೆಯನ್ನು ಈಡೇರಿಸಲು ನಾಡಿನ ರೈತರು, ಕೃಷಿ ತಜ್ಞರು, ಕೃಷಿ ಅರ್ಥಶಾಸ್ತ್ರಜ್ಞರು ಮತ್ತು ರೈತ ಸಂಘಟನೆಗಳು ನಿರಂತರವಾಗಿ ಕೆಲಸ ಮಾಡುತ್ತಲೇ ಬಂದಿವೆ. ಈ ಹಿಂದೆಯೂ ಹಲವು ಸರಕಾರಗಳು ಈ ವಿಚಾರದಲ್ಲಿ ಚಿಂತನ ಮಂಥನ ನಡೆಸಿದ್ದವು. ಈ ಬಾರಿಯೂ ಸಂಸತ್ತಿನಲ್ಲಿ ಚರ್ಚೆ ನಡೆಸಿ, ಈ ಕಾನೂನುಗಳನ್ನು ಮಂಡಿಸಲಾಯಿತು. ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ರೈತರು ಮತ್ತು ಹಲವಾರು ರೈತ ಸಂಘಟನೆಗಳು ಇದನ್ನು ಸ್ವಾಗತಿಸಿ ಬೆಂಬಲಿಸಿದವು. ಅವರೆಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
ಸ್ನೇಹಿತರೆ,
ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ, ಕೃಷಿ ರಂಗ ಮತ್ತು ದೇಶದ ಹಿತದೃಷ್ಟಿಯಿಂದ ಮತ್ತು ಗ್ರಾಮೀಣ ಬಡವರ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಉದ್ದೇಶ, ಪ್ರಾಮಾಣಿಕತೆ ಮತ್ತು ಸಂಪೂರ್ಣ ಸಮರ್ಪಣೆಯೊಂದಿಗೆ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಪರಿಶುದ್ಧವಾದ ಮತ್ತು ರೈತರ ಹಿತದೃಷ್ಟಿಯಿಂದ ತಂದ ಇಂತಹ ಪವಿತ್ರವಾದ ವಿಷಯವನ್ನು ನಮ್ಮೆಲ್ಲಾ ಪ್ರಯತ್ನಗಳ ಹೊರತಾಗಿಯೂ ಕೆಲವು ರೈತರಿಗೆ ವಿವರಿಸಲು ಸಾಧ್ಯವಾಗಿಲ್ಲ.
ಆದಾಗ್ಯೂ, ಒಂದು ವರ್ಗದ ರೈತರು ಮಾತ್ರ ಪ್ರತಿಭಟನೆ ನಡೆಸಿದರು. ಅದು ಸಹ ನಮಗೆ ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ನಮ್ಮ ಕೃಷಿ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ಪ್ರಗತಿಪರ ರೈತರು ಅವರಿಗೆ ಕೃಷಿ ಕಾನೂನಿನ ಮಹತ್ವವನ್ನು ಅರ್ಥಮಾಡಿಸಲು ಶ್ರಮಿಸಿದರು. ನಾವು ಅತ್ಯಂತ ನಮ್ರತೆಯಿಂದ ಮತ್ತು ಮುಕ್ತ ಮನಸ್ಸಿನಿಂದ ಅವರಿಗೆ ವಿವರಿಸುತ್ತಲೇ ಇದ್ದೆವು. ವಿವಿಧ ಮಾಧ್ಯಮಗಳ ಮೂಲಕ ವೈಯಕ್ತಿಕ ಮತ್ತು ಗುಂಪು ಸಂವಹನಗಳು ಮುಂದುವರೆದವು. ಕಾಯಿದೆ ಕುರಿತ ರೈತರ ವಾದವನ್ನು ಅರ್ಥಮಾಡಿಕೊಳ್ಳಲು ನಾವು ಹಿಂದೆ ಬೀಳಲಿಲ್ಲ.
ಅವರು ಹೊರಹಾಕಿದ ಆಕ್ಷೇಪಣೆಗಳಿಗೆ ಸಂಬಂಧಿಸಿದ ಕಾನೂನುಗಳ ನಿಬಂಧನೆಗಳನ್ನು ಬದಲಾಯಿಸಲು ಸಹ ಸರ್ಕಾರ ಒಪ್ಪಿಕೊಂಡಿತು. ಈ ಕಾನೂನುಗಳನ್ನು 2 ವರ್ಷಗಳ ಕಾಲ ಮುಂದೂಡಲು ನಾವು ಪ್ರಸ್ತಾಪಿಸಿದ್ದೇವೆ. ಈ ಮಧ್ಯೆ, ಈ ವಿಷಯವು ಸುಪ್ರೀಂ ಕೋರ್ಟ್ ಅಂಗಣದಲ್ಲಿದೆ. ಈ ಎಲ್ಲಾ ವಿಷಯಗಳು ದೇಶದ ಮುಂದೆ ಇವೆ, ಆದ್ದರಿಂದ ನಾನು ಈ ವಿಷಯ ಕುರಿತು ಹೆಚ್ಚಿನ ಪ್ರಸ್ತಾಪ ಮಾಡಲು ಬಯಸುವುದಿಲ್ಲ.
ಸ್ನೇಹಿತರೆ,
ದೇಶವಾಸಿಗಳಲ್ಲಿ ಕ್ಷಮೆ ಯಾಚಿಸುವ ಭರದಲ್ಲಿ, ನಾನು ಮನಪೂರ್ವಕವಾಗಿ ಹೇಳಲು ಬಯಸುವುದೇನೆಂದರೆ, ಬಹುಶಃ ನಮ್ಮ ವಿವರಣೆಯಲ್ಲಿ ಏನಾದರೂ ಕೊರತೆಗಳು ಇದ್ದಿರಬಹುದೆಂದು, ರೈತ ಬಂಧುಗಳಿಗೆ ದೀಪದ ಬೆಳಕಿನಂತೆ ಸತ್ಯವನ್ನು ವಿವರಿಸಲು ಸಾಧ್ಯವಾಗಲಿಲ್ಲ ಎಂಬುದು.
ಇಂದು ಗುರುನಾನಕ್ ದೇವ್ ಜಿ ಅವರ ಪ್ರಕಾಶ್ ಪುರಬ್ ಪವಿತ್ರ ಹಬ್ಬ. ಯಾರನ್ನೂ ದೂಷಿಸುವ ಸಮಯ ಇದಲ್ಲ. ಇಂದು ನಾನು ನಿಮಗೆ, ಇಡೀ ದೇಶಕ್ಕೆ ಹೇಳಲು ಬಯಸುವುದೇನೆಂದರೆ, ನಾವು ಎಲ್ಲಾ 3 ಕೃಷಿ ಕಾಯಿದೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಈ 3 ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸುತ್ತೇವೆ.
ಸ್ನೇಹಿತರೆ,
ನಾನು ಪ್ರತಿಭಟನಾನಿರತ ರೈತ ಬಾಂಧವರಿಗೆ ಒತ್ತಾಯಿಸುವುದೇನೆಂದರೆ, ಇಂದು ಗುರುಪುರಬ್ ಪವಿತ್ರ ದಿನ. ಆದ್ದರಿಂದ ನೀವೆಲ್ಲಾ ನಿಮ್ಮ ಮನೆಗಳಿಗೆ, ಹೊಲಗಳಿಗೆ ಮತ್ತು ನಿಮ್ಮ ಕುಟುಂಬಗಳಿಗೆ ಹಿಂದಿರುಗಬೇಕು. ನಾವೆಲ್ಲಾ ಇದೇ ಹೊಸ ಆರಂಭಕ್ಕೆ ನಾಂದಿ ಹಾಡೋಣ. ಹೊಸ ಆರಂಭದೊಂದಿಗೆ ಮುನ್ನಡೆಯೋಣ.
ಸ್ನೇಹಿತರೆ,
ಇಂದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಶೂನ್ಯ ಬಂಡವಾಳ ಕೃಷಿ ಅಂದರೆ ನೈಸರ್ಗಿಕ (ಸಾವಯವ) ಕೃಷಿಗೆ ಉತ್ತೇಜನ ನೀಡುವುದು, ದೇಶದ ಬದಲಾಗುತ್ತಿರುವ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆ ಮಾದರಿಯನ್ನು ವೈಜ್ಞಾನಿಕವಾಗಿ ಬದಲಾಯಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸುವುದು ಮತ್ತಿತರ ವಿಷಯಗಳ ಬಗ್ಗೆ ನಿರ್ಧರಿಸಲು ನೂತನ ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರು ಇರುತ್ತಾರೆ.
ಸ್ನೇಹಿತರೆ,
ನಮ್ಮ ಸರ್ಕಾರ ರೈತರ ಹಿತಾಸಕ್ತಿಗಳನ್ನು ಕಾಪಾಡಲು ಕೆಲಸ ಮಾಡುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ. ನಾನು ನನ್ನ ಭಾಷಣವನ್ನು ಗುರು ಗೋಬಿಂದ್ ಸಿಂಗ್ ಜೀ ಅವರ ಸ್ಫೂರ್ತಿಯ ಸಂದೇಶದೊಂದಿಗೆ ಕೊನೆಗೊಳಿಸುತ್ತೇನೆ.
‘देह सिवा बरु मोहि इहै सुभ करमन ते कबहूं न टरों।‘
“ಓ ದೇವಿಯೇ, ಸತ್ಕಾರ್ಯಗಳನ್ನು ಮಾಡುವುದರಿಂದ ನಾನು ಎಂದಿಗೂ ಹಿಂದೆ ಸರಿಯದಂತೆ ವರವನ್ನು ಕೊಡು”
ನಾನೇನು ಮಾಡಿದ್ದೇನೆಯೋ ಅದನ್ನು ರೈತರಿಗಾಗಿ ಮಾಡಿದ್ದೇನೆ. ನಾನು ಏನನ್ನು ಮಾಡುತ್ತಿದ್ದೇನೆಯೋ, ಅದನ್ನು ದೇಶಕ್ಕಾಗಿ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಹಿಂದೆಯೂ ನನ್ನ ಶ್ರಮಕ್ಕೆ ಯಾವುದೇ ಕೊರತೆ ಉಂಟಾಗಲಿಲ್ಲ. ನಿಮ್ಮ ಕನಸುಗಳು ನನಸಾಗಲು, ದೇಶದ ಕನಸುಗಳು ಸಾಕಾರಗೊಳ್ಳಲು ನಾನು ಈಗ ಇನ್ನೂ ಹೆಚ್ಚಿನ ಶ್ರಮ ಹಾಕುತ್ತೇನೆ ಎಂದು ನಿಮ್ಮೆಲ್ಲರಿಗೂ ಭರವಸೆ ನೀಡುತ್ತೇನೆ.
ಎಲ್ಲರಿಗೂ ಧನ್ಯವಾದಗಳು! ನಮಸ್ಕಾರ!
ಸೂಚನೆ: ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅನುವಾದ ಇದಾಗಿದ್ದು, ಇದರ ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.
***
(Release ID: 1774134)
Visitor Counter : 216
Read this release in:
English
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam