ಹಣಕಾಸು ಸಚಿವಾಲಯ

ಹೂಡಿಕೆ, ಮೂಲಸೌಕರ್ಯ ಮತ್ತು ಆರ್ಥಿಕ ಪ್ರಗತಿ ಹೆಚ್ಚಳ ಕುರಿತು ರಾಜ್ಯಗಳ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳ ಜತೆ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದ

Posted On: 15 NOV 2021 10:26PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರದ ಭೌಗೋಳಿಕ-ರಾಜಕೀಯ ವಾಸ್ತವಗಳು ತ್ವರಿತವಾಗಿ ಬದಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಬಲವಾದ ಚೇತರಿಕೆ ಕಂಡುಬರುತ್ತಿರುವ ಜತೆಗೆ ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಪೂರಕವಾಗಿ ದೇಶದ ಹೂಡಿಕೆ ಪರಿಸರ ಹೆಚ್ಚಿಸಲು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳ ಜತೆ ವರ್ಚುವಲ್ ಸಂವಾದ ನಡೆಸಿದರು.

Image

ಅಸ್ಸಾಂ, ಛತ್ತೀಸ್‌ಗಢ, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ತ್ರಿಪುರಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ಗಳು; ಅರುಣಾಚಲ ಪ್ರದೇಶ, ಬಿಹಾರ ಮತ್ತು ದೆಹಲಿಯ ಉಪ ಮುಖ್ಯಮಂತ್ರಿಗಳು, ಆಂಧ್ರ ಪ್ರದೇಶ, ಗುಜರಾತ್, ಕೇರಳ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸಚಿವರು; ಲಡಾಖ್, ಮಹಾರಾಷ್ಟ್ರ, ಜಾರ್ಖಂಡ್, ಅಂಡಮಾನ್ ಮತ್ತು ನಿಕೋಬಾರ್, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಲಕ್ಷದ್ವೀಪ್‌ನ ರಾಜ್ಯ ಸರ್ಕಾರಿ ಅಧಿಕಾರಿಗಳು, ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಕೇಂದ್ರ ಮತ್ತು ರಾಜ್ಯದ ಇತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಆರಂಭಿಕ ಮಾತುಕತೆಯಲ್ಲಿ, ಕೋವಿಡ್-19 ಸಾಂಕ್ರಾಮಿಕ ಸೋಂಕಿನ 2ನೇ ಅಲೆಯ ನಂತರ ದೇಶದ ಆರ್ಥಿಕತೆ ಗಣನೀಯವಾಗಿ ಪ್ರಗತಿ ಕಾಣುತ್ತಿದೆ. ಆಮದು, ರಫ್ತು ವಹಿವಾಟು, ದೇಶದ ಉತ್ಪಾದನೆ, ಡಿಜಿಟಲ್ ಪಾವತಿ ವಹಿವಾಟು ದಿನೇದಿನೆ ಏರಿಕೆ ಕಾಣುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಳ್ಳುವ ಮುನ್ನಾ ಇದ್ದ ಆರ್ಥಿಕ ಪರಿಸ್ಥಿತಿಗಿಂತ ಉತ್ತಮ ಸ್ಥಿತಿಗೆ ದೇಶದ ಅರ್ಥ ವ್ಯವಸ್ಥೆ ಮರುಳುತ್ತಿದೆ ಎಂದು ತಿಳಿಸಿದರು. ಭಾರತದ ಅರ್ಥ ವ್ಯವಸ್ಥೆಯ ಪ್ರಗತಿ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕಾರಾತ್ಮಕ ಗ್ರಹಿಕೆ ಮತ್ತು ಸ್ಪಂದನೆ ವ್ಯಕ್ತವಾಗುತ್ತಿದೆ. ಜತೆಗೆ, ಭಾರತ ಸರ್ಕಾರ ಕೈಗೊಂಡಿರುವ ವಲಯವಾರು ರಚನಾತ್ಮಕ ಹಣಕಾಸು ಸುಧಾರಣೆಗಳಿಂದಾಗಿ ದೇಶದ ಅರ್ಥ ವ್ಯವಸ್ಥೆಯು ರಾಜಮಾರ್ಗದಲ್ಲಿ ಮುನ್ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮತ್ತು ದೇಶೀಯ ಹೂಡಿಕೆದಾರರು ದೇಶದಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ ಹೂಡಿಕೆ ಮತ್ತು ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲು ರಾಜ್ಯಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಂಡವಾಳ (ಸಾರ್ವಜನಿಕ) ವೆಚ್ಚವನ್ನು ಹೆಚ್ಚಿಸಲು ಮತ್ತು ಮೂಲಸೌಕರ್ಯ ಮತ್ತು ಹೂಡಿಕೆ ಆಧರಿತ ಆರ್ಥಿಕ ಪ್ರಗತಿಯನ್ನು ಮುನ್ನಡೆಸಲು ಭಾರತ ಸರ್ಕಾರವು ಸಂಕೀರ್ಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹಣಕಾಸು ಸಚಿವರು ಹೇಳಿದರು.  ಮೂಲಸೌಕರ್ಯ ವಲಯದಲ್ಲಿ ಮಾಡಿದ ಅಧಿಕ  ಹೂಡಿಕೆಯಿಂದ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ, ಮಾರುಕಟ್ಟೆ ಮತ್ತು ಸಾಮಗ್ರಿಗಳ ಲಭ್ಯತೆ, ಸುಧಾರಿತ ಜೀವನದ ಗುಣಮಟ್ಟ ಮತ್ತು ದುರ್ಬಲ ವರ್ಗಗಳ ಸಬಲೀಕರಣ ಸಾಧ್ಯವಾಗಿದೆ. 2021-22ರ ಕೇಂದ್ರ ಬಜೆಟ್ ನಲ್ಲಿ ಬಂಡವಾಳ ವೆಚ್ಚ ಗಾತ್ರವಾಗಿ 5.54 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕಳೆದ ವರ್ಷದ ಬಜೆಟ್ ಗೆ ಹೋಲಿಸಿದರೆ 34.5%  ಬಂಡವಾಳ ವೆಚ್ಚ ಹೆಚ್ಚಿಸಲಾಗಿದೆ. ಜತೆಗೆ, ರಾಜ್ಯಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಬಂಡವಾಳ ವೆಚ್ಚವಾಗಿ ಸುಮಾರು 2 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದಕ್ಕಿಂತ ಹೆಚ್ಚಾಗಿ, ಭಾರತ ಸರ್ಕಾರವು 2021-22ರ ಆರ್ಥಿಕ ವರ್ಷದಲ್ಲಿ  ನಿಗದಿಪಡಿಸಿದ ಗುರಿಗೆ ಪ್ರತಿಯಾಗಿ 1 ನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಕನಿಷ್ಠ 15 %, 2 ನೇ ತ್ರೈಮಾಸಿಕದ ಅಂತ್ಯದ ವೇಳೆಗೆ 45%, 3 ನೇ ತ್ರೈಮಾಸಿಕದ ಅಂತ್ಯದ ವೇಳೆಗೆ 70% ಗುರಿ ಸಾಧಿಸುವ ರಾಜ್ಯಗಳಿಗೆ ಹೊಸ ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರ ನೀಡಿರುವ ಗುರಿಯನ್ನು ಸಾಧಿಸುವ ರಾಜ್ಯಗಳು ಹೆಚ್ಚುವರಿ ಸಾಲಸೌಲಭ್ಯ ಪಡೆಯಲು ಅರ್ಹತೆ ಪಡೆಯುತ್ತವೆ. ಮೊದಲ ತ್ರೈಮಾಸಿಕ ಅವಧಿ ಅಂತ್ಯದ ನಂತರ ಈಗಾಗಲೇ 11 ರಾಜ್ಯಗಳು ಹೆಚ್ಚುವರಿಯಾಗಿ 15,271 ಕೋಟಿ ರೂ. ಸಾಲ ಕ್ರೋಡೀಕರಣಕ್ಕೆ ಅನುಮತಿ ಪಡೆದಿವೆ ಎಂದು ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಾರಂಭಿಸಿದ ರಾಷ್ಟ್ರೀಯ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ (ಮಾನೆಟೈಸೇಷನ್) ಯೋಜನೆಯು ಕೇಂದ್ರ ಸರ್ಕಾರದ ಸ್ವತ್ತುಗಳನ್ನು ಮಾತ್ರ ಒಳಗೊಂಡಿದೆ. ಆದರೆ ರಾಜ್ಯದ ಸ್ವತ್ತುಗಳು ಈಗ ಅದರ ವ್ಯಾಪ್ತಿಯಿಂದ ಹೊರಗಿವೆ. ಆದರೆ ರಾಜ್ಯಗಳಲ್ಲೂ ಸಹ ಅಪಾರ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಬಹುದಾದ ಗಣನೀಯ ಪ್ರಮಾಣದ ಸಂಭಾವ್ಯ ಸ್ವತ್ತು ಲಭ್ಯವಿದ್ದು, ಇದರಿಂದ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ, ಬರುವ ಆದಾಯವನ್ನು ಹೊಸ ಮೂಲಸೌಕರ್ಯ ಸೃಷ್ಟಿ ಮತ್ತು ಇತರೆ ಸಾಮಾಜಿಕ ವಲಯದ ಆದ್ಯತೆಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮುಂಬರುವ ವರ್ಷಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲು ಹೊರಹೊಮ್ಮಲು ರಾಜ್ಯಗಳು ಸಹಾಯ ಮಾಡಬೇಕು. ಹೂಡಿಕೆ ಆಕರ್ಷಣೆ ಮತ್ತು ವ್ಯವಹಾರ ಸುಲಭಗೊಳಿಸುವ ಕ್ರಮಗಳನ್ನು ತ್ವರಿತಗೊಳಿಸಬೇಕು. AT&C ಮತ್ತು ACS-RRR ಕಡಿತಕ್ಕೆ ಸಂಬಂಧಿಸಿದ ವಿದ್ಯುತ್ ಸುಧಾರಣೆಗಳನ್ನು ಕೈಗೊಳ್ಳಬೇಕು. ಮೂಲಸೌಕರ್ಯ ಯೋಜನೆಗಳನ್ನು ಆರಂಭಿಸಲು ಅಗತ್ಯವಾದ ಭೂಮಿ ಪಡೆಯುವುದೇ ಪ್ರಮುಖ ಅಡಚಣೆ ಆಗಿರುವುದರಿಂದ, ರಾಜ್ಯಗಳು ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಸುಗಮಗೊಳಿಸಬೇಕು. ಭೂ ಬ್ಯಾಂಕ್‌ಗಳನ್ನು ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳಿಗೆ ಸಲಹೆ ನೀಡಿದರು. ನಗರ ಸ್ಥಳೀಯ ಸಂಸ್ಥೆಗಳಿಗೆ ಮೊದಲಿಗಿಂತ ಹೆಚ್ಚಿನ ಪ್ರಮಾಣದ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಜತೆಗೆ, ಸಂಪನ್ಮೂಲ ಕ್ರೋಢೀಕರಣ ಮುಂದುವರಿಸಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಅಂಶದ ಹಿನ್ನೆಲೆಯಲ್ಲಿ ರಾಜ್ಯಗಳು ತಮ್ಮ ನಗರ ಸ್ಥಳೀಯ ಸಂಸ್ಥೆಗಳನ್ನು (ಯುಎಲ್‌ಬಿ) ಬಲಪಡಿಸಬೇಕು ಎಂದು ಹಣಕಾಸು ಸಚಿವರು ಒತ್ತಾಯಿಸಿದರು.

ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಸಂಪನ್ಮೂಲಗಳ ಜೊತೆಗೆ ತಾಂತ್ರಿಕ ಸಹಾಯದ ಅಗತ್ಯವಿರುವುದರಿಂದ, ಭಾರತ ಸರ್ಕಾರದ ಸಂಬಂಧಿತ  ಸಚಿವಾಲಯಗಳು ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯು ರಾಜ್ಯಗಳಿಗೆ ತಾಂತ್ರಿಕ ಅಥವಾ ಸಲಹಾ ಸಹಾಯಕ್ಕಾಗಿ ಸಾಧ್ಯವಿರುವ ಎಲ್ಲ ಸಹಕಾರ ನೀಡಲಿವೆ ಎಂದು ಸೀತಾರಾಮನ್ ಹೇಳಿದರು. ಮೇಲಾಗಿ, ಕಾರ್ಯಸಾಧ್ಯತೆಯ ಅಂತರ ನಿಧಿಯ ನಿಬಂಧನೆಯು ಸಾಮಾಜಿಕವಾಗಿ ಪ್ರಸ್ತುತವೆನಿಸುವ, ಆದರೆ ಆರ್ಥಿಕವಾಗಿ ಕಾರ್ಯಸಾಧುವಲ್ಲದ ಯೋಜನೆಗಳಿಗೆ ವಿಶೇಷವಾಗಿ ಸಾಮಾಜಿಕ ವಲಯದ ಕಾರ್ಯಕ್ರಮಗಳಿಗೆ ಹಣಕಾಸು ಸಹಾಯ ಮಾಡುತ್ತದೆ ಎಂದು ಸಚಿವರು ತಿಳಿಸಿದರು.

ಹೂಡಿಕೆ ಹೆಚ್ಚಿಸಲು ರಾಜ್ಯಗಳು ಅಳವಡಿಸಿಕೊಂಡಿರುವ, ಅನುಸರಿಸುತ್ತಿರುವ ಆಲೋಚನೆಗಳು, ಪರಿಕಲ್ಪನೆಗಳು ಮತ್ತು ಯೋಜನೆಗಳನ್ನು ಆಲಿಸಲು ಮತ್ತು ಅರ್ಥ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಹಣಕಾಸು ಸಚಿವರು ತಿಳಿಸಿದರು.

ವರ್ಚುವಲ್ ಸಂವಾದದಲ್ಲಿ, ಈ ಸಲಹಾ ರೂಪದ ಸಂವಾದ ಆಯೋಜಿಸಿದ್ದಕ್ಕಾಗಿ ರಾಜ್ಯಗಳು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದವು. ಉತ್ತಮ ಆಡಳಿತ ಸ್ಥಾಪಿಸಲು ಮತ್ತು ಹೂಡಿಕೆಗಳನ್ನು ಸುಗಮಗೊಳಿಸಲು ರಾಜ್ಯಗಳು ಅನುಸರಿಸುತ್ತಿರುವ ಸುಧಾರಣೆಗಳು ಮತ್ತು ಪರ-ಸಕ್ರಿಯ ನೀತಿಗಳನ್ನು ಸಂವಾದದಲ್ಲಿ ಪಟ್ಟಿ ಮಾಡಿದವು.

ಹೂಡಿಕೆ ಉತ್ತೇಜನಕ್ಕೆ ಅನುಕೂಲವಾಗುವಂತೆ ರಾಜ್ಯಗಳು ಹಂಚಿಕೊಂಡಿರುವ ಪ್ರಮುಖ ವಿಚಾರಗಳು ಮತ್ತು ಮನವಿಗಳು ಈ ಕೆಳಗಿನಂತಿವೆ:

  • ಅಫಿಡವಿಟ್-ಆಧಾರಿತ ಕ್ಲಿಯರೆನ್ಸ್ ಸಿಸ್ಟಮ್ – ಕರ್ನಾಟಕ ಮತ್ತು ಉತ್ತರಪ್ರದೇಶ ಸರ್ಕಾರಗಳು ಈ ವ್ಯವಸ್ಥೆ ಅಳವಡಿಸಿಕೊಂಡಿದೆ. ಇದೇ ರೀತಿಯ ವ್ಯವಸ್ಥೆಯು ಯೋಜನೆ ಅನುಮೋದನೆ, ಭೂಮಿ ಗುರುತಿಸುವಿಕೆ, ಭೂಮಿ ಪರಿವರ್ತನೆ, ಪರಿಸರ ಅನುಮೋದನೆಗಳು ಮತ್ತು ಹೊಸ ಉದ್ಯಮಗಳಿಗೆ ವಿದ್ಯುತ್ ಸರಬರಾಜು ಸೇರಿದಂತೆ ಎಲ್ಲಾ ಅನುಮತಿಗಳನ್ನು ಸಮಯಕ್ಕೆ ಅನುಗುಣವಾಗಿ ಒದಗಿಸಲು. ಮೂಲಭೂತವಾಗಿ ಮೂಲಸೌಕರ್ಯಗಳು ಜಾರಿಗೆ ಬಂದ ನಂತರ ಅಫಿಡವಿಟ್ ಆಧಾರಿತ ಕ್ಲಿಯರೆನ್ಸ್ ಅನ್ನು ಮುಂಗಡವಾಗಿ ನೀಡಲಾಗುತ್ತದೆ.
  • ಹೂಡಿಕೆಯ ಅನುಕೂಲಕ್ಕಾಗಿ ಪಾರದರ್ಶಕ ಕಾರ್ಯವಿಧಾನ:  ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಭಾರತ ಸರ್ಕಾರದ ಸಂಪರ್ಕದಲ್ಲಿರುವ ನಿರೀಕ್ಷಿತ ಹೂಡಿಕೆದಾರರು, ತಂತ್ರಜ್ಞಾನ ಅಳವಡಿಕೆ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
  • ಪರಿಸರ ಮತ್ತು ಅರಣ್ಯ ಅನುಮೋದನೆಗಳಿಗೆ ಭಾರತ ಸರ್ಕಾರದ ಸ್ಪಷ್ಟ ನೀತಿ ಅಗತ್ಯ. ಪರಿಸರ-ಅರ್ಥಶಾಸ್ತ್ರಕ್ಕೆ ಅನುಗುಣವಾಗಿ ಅರಣ್ಯ ಮತ್ತು ಪರಿಸರ ಅನುಮೋದನೆ ವಿಷಯಗಳಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ.
  • ಜಿಲ್ಲಾ ಖನಿಜ ನಿಧಿ ನೀತಿಯನ್ನು ಜಿಲ್ಲೆಗೆ ಸೀಮಿತಗೊಳಿಸುವ ಬದಲು ಇಡೀ ರಾಜ್ಯಾದ್ಯಂತ ಸದುಪಯೋಗಪಡಿಸಿಕೊಳ್ಳಲು ನಿಧಿಯ ಬಳಕೆಗಾಗಿ ಮರುಮೌಲ್ಯಮಾಪನ ಮಾಡಬೇಕಾಗಿದೆ.
  • ಭಾರತ ಸರ್ಕಾರದ ಬಾಹ್ಯ ನೆರವಿನ ಯೋಜನೆಗಳಿಗೆ ತ್ವರಿತ ಅನುಮೋದನೆ, ಮುಂಗಡ ವಿಧಾನದಲ್ಲಿ ಮರುಪಾವತಿ ವ್ಯವಸ್ಥೆಗೆ ಮನವಿ.
  • ಕರಾವಳಿ ರಾಜ್ಯಗಳ ಎಲ್ಲಾ ಕರಾವಳಿ ವಲಯಗಳಿಗೆ ಒಂದೇ ರೀತಿಯ ನಿಯಮಾವಳಿಗಳ ಚೌಕಟ್ಟು ರೂಪಿಸಲು ಮನವಿ.
  • ಹಲವು ವಿಧದ ಜಮೀನುಗಳನ್ನು ಕೈಗಾರಿಕಾ ಪಾರ್ಕ್‌ಗಳಾಗಿ ಪರಿವರ್ತಿಸುವ ಕಾನೂನುಬದ್ಧತೆಗೆ ಕಾನೂನು ಮರುಮೌಲ್ಯಮಾಪನ ಮತ್ತು ಮಧ್ಯಸ್ಥಿಕೆ ಅಗತ್ಯ.
  • ವಿವಾದ ಪರಿಹಾರ ಕಾರ್ಯವಿಧಾನ ಬಲಪಡಿಸುವ ಅಗತ್ಯವಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಸೌಕರ್ಯ ಪರಿಸರ ಬಲಪಡಿಸಲು ರಿಯಾಯಿತಿ ಒಪ್ಪಂದಗಳಿಗೆ ಅವಕಾಶ ನೀಡಬೇಕು.
  • ಈಶಾನ್ಯ ರಾಜ್ಯಗಳಲ್ಲಿ ರಸ್ತೆ ಸಂಪರ್ಕ ಹೆಚ್ಚಿಸಲು ವಿಶೇಷ ಒತ್ತು ನೀಡಲಾಗಿದೆ. ಈ ರಾಜ್ಯಗಳು ಬಿದಿರಿನಂತಹ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ, ಇದನ್ನು ಉದ್ಯಮದಲ್ಲಿ ಸಮರ್ಥವಾಗಿ ಬಳಸಿಕೊಳ್ಳಬಹುದು. ಆದರೆ ರಸ್ತೆ ಮತ್ತು ಹೆದ್ದಾರಿ ಸಂಪರ್ಕ ಕೊರತೆಯಿಂದ ಇದು ಸಾಧ್ಯವಾಗಿಲ್ಲ.
  • ರಾಜ್ಯಗಳ್ಲಲಿ ಹೊಸ ಬ್ಯಾಂಕಿಂಗ್ ಮೂಲಸೌಕರ್ಯಗಳ ಅನುಪಸ್ಥಿತಿ ನಡುವೆ, ಮಾನವ ಸಂಪನ್ಮೂಲ ಮತ್ತು ವ್ಯವಸ್ಥೆಗಳ ವಿಷಯದಲ್ಲಿ ಅಸ್ತಿತ್ವದಲ್ಲಿರುವ ಬ್ಯಾಂಕ್‌ಗಳನ್ನು ಬಲಪಡಿಸುವುದು ಅತ್ಯಗತ್ಯ.
  • ಈಶಾನ್ಯ ರಾಜ್ಯಗಳಲ್ಲಿ ರಾಜ್ಯ-ನಿರ್ದಿಷ್ಟ ಅಂತಾರಾಷ್ಟ್ರೀಯ ವ್ಯಾಪಾರ ನೀತಿ ಅಭಿವೃದ್ಧಿಪಡಿಸಲು ಆ ರಾಜ್ಯಗಳೊಂದಿಗೆ ಭಾರತ ಸರ್ಕಾರ ತೊಡಗಿಸಿಕೊಳ್ಳಬೇಕು.
  • ದೇಶಾದ್ಯಂತ ಕೃಷಿ-ನಿರ್ದಿಷ್ಟ ಮೂಲಸೌಕರ್ಯಗಳ (ಜಿಐ ಲ್ಯಾಬ್‌ಗಳು, ಕೋಲ್ಡ್ ಸ್ಟೋರೇಜ್, ರೈತರ ಮಾರುಕಟ್ಟೆ) ಅಭಿವೃದ್ಧಿ, ಅದರಲ್ಲೂ ವಿಶೇಷವಾಗಿ ಹಚ್ಚಿನ ಜನರು ಕೃಷಿಯ ಮೇಲೆ ಅವಲಂಬಿತವಾಗಿರುವ ಈಶಾನ್ಯ ರಾಜ್ಯದಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಅಗತ್ಯ.
  • ಪ್ರವಾಸೋದ್ಯಮ ಭವಿಷ್ಯವನ್ನು ಬೆಂಬಲಿಸಲು ಹಿಮಾಲಯ ರಾಜ್ಯಗಳಿಗೆ ಹೆಚ್ಚಿನ ವಾಯು ಸಂಪರ್ಕಕ್ಕೆ ಒತ್ತು.
  • ಸಾಗರೋತ್ತರ ಪವನ ಶಕ್ತಿಯ ಸ್ಪಷ್ಟ ನೀತಿ ಅಗತ್ಯ.
  • ಬಂಡವಾಳ ವೆಚ್ಚಕ್ಕಾಗಿ ಇರುವ ಕೇಂದ್ರದ ಸಾಲ ಯೋಜನೆಯನ್ನು ಪ್ರಸಕ್ತ ಹಣಕಾಸು ವರ್ಷದ ನಂತರವೂ ಮುಂದುವರಿಕೆ ಅಗತ್ಯ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ವರ್ಚುವಲ್ ಸಭೆಯು ಧನ್ಯವಾದ ಅರ್ಪಣೆಯೊಂದಿಗೆ ಮುಕ್ತಾಯವಾಯಿತು.

***



(Release ID: 1772288) Visitor Counter : 255