ಉಪರಾಷ್ಟ್ರಪತಿಗಳ ಕಾರ್ಯಾಲಯ
ಬುಡಕಟ್ಟು ಕುಶಲಕರ್ಮಿಗಳ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಂತಹ ಕುಶಲಕರ್ಮಿಗಳನ್ನು ಬೆಂಬಲಿಸಲು ಉಪರಾಷ್ಟ್ರಪತಿ ಕರೆ
ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜಂಜಾತಿಯಾ ಗೌರವ ದಿನವನ್ನಾಗಿ ಘೋಷಿಸಿದ ಸರ್ಕಾರದ ಕ್ರಮ ಶ್ಲಾಘಿಸಿದ ಉಪರಾಷ್ಟ್ರಪತಿ
ಬುಡಕಟ್ಟು ಜನರ ವೈಭವದ ಇತಿಹಾಸ ಬಿಂಬಿಸುವ ವಾರವೀಡಿ ನಡೆಯುವ ಆಚರಣೆಯಲ್ಲಿ ಭಾಗಿಯಾಗಲು ಉಪರಾಷ್ಟ್ರಪತಿ ಜನತೆಗೆ ಕರೆ
ಜಂಜಾತಿಯಾ ಗೌರವ ದಿನ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಭಾರತೀಯ ಮೌಲ್ಯಗಳನ್ನು ಉತ್ತೇಜಿಸುವ ಪ್ರಯತ್ನ ಗುರುತಿಸಲು ಸಹಕಾರಿ: ಉಪರಾಷ್ಟ್ರಪತಿ
ಕರ್ನಾಟಕದ ರಾಜಭವನದಲ್ಲಿ ನಡೆದ ಜಂಜಾತಿಯಾ ಗೌರವ ದಿನ ಆಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಭಾಗಿ
Posted On:
15 NOV 2021 7:21PM by PIB Bengaluru
ಬುಡಕಟ್ಟು ಕುಶಲಕರ್ಮಿಗಳ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಂತಹ ಕುಶಲಕರ್ಮಿಗಳನ್ನು ಬೆಂಬಲಿಸಲು ಮುಂದಾಗಬೇಕು ಎಂದು ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯನಾಯ್ಡು ಜನತೆಗೆ ಕರೆ ನೀಡಿದ್ದಾರೆ. ಬುಡಕಟ್ಟು ಸಮುದಾಯಗಳು ಪರಿಸರ ಸ್ನೇಹಿ ಹಾಗೂ ಸುಸ್ಥಿರವಾದ ನವೀನ ಕರಕುಶಲ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಬುಡಕಟ್ಟು ಜನರ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಮತ್ತು ಅವರ ಆದಾಯ ಮೂಲಗಳನ್ನು ಸುಧಾರಿಸಲು ಬುಡಕಟ್ಟು ಜನರ ಪ್ರಕೃತಿದತ್ತ ಕೌಶಲ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ಶ್ರೀ ವೆಂಕಯ್ಯನಾಯ್ಡು ಪ್ರತಿಪಾದಿಸಿದರು. “ಬುಡಕಟ್ಟು ಕರಕುಶಲಕರ್ಮಿಗಳು ಮತ್ತು ಮಹಿಳೆಯರ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ’’ ಎಂದು ಅವರು ಹೇಳಿದರು.
ಜಂಜಾತಿಯಾ ಗೌರವ ದಿನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ಸ್ವಾತಂತ್ರ್ಯ ಸಂಗ್ರಾಮದ ವೇಳೆ ಆದಿವಾಸಿ ಸಮುದಾಯಗಳು ವಹಿಸಿದ ಪ್ರಾತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು. ಬುಡಕಟ್ಟು ಸಮುದಾಯಗಳು ಬಹಳ ದೊಡ್ಡ ಮಟ್ಟದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿವೆ ಎಂದರು. “ದೇಶದ ನಾನಾ ಮೂಲೆಗಳಲ್ಲಿ ಹುಟ್ಟಿಕೊಂಡ ಈ ಬುಡಕಟ್ಟು ಚಳವಳಿಗಳು ಬ್ರಿಟಿಷರ ಅನ್ಯಾಯದ ಆಡಳಿತದ ವಿರುದ್ಧ ದಂಗೆ ಎಳಲು ಹಲವರಿಗೆ ಸ್ಪೂರ್ತಿ ನೀಡಿದ್ದವು’’ಎಂದು ಹೇಳಿದರು.
ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜಂಜಾತಿಯಾ ಗೌರವ ದಿನವನ್ನಾಗಿ ಘೋಷಿಸಿದ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ, ರಾಣಿ ದುರ್ಗವತಿ, ರಾಣಿ ಗೈದಿನ್ಲಿಯು ಮತ್ತು ಬಾಬಾ ತಿಲ್ಕಾ ಮಾಜ್ಹಿ, ಕೊಮರಂ ಭೀಮ್, ಅಲ್ಲೂರಿ ಸೀತಾರಾಮರಾಜು ಮತ್ತಿತರಂತಹ ಧೀರ ಬುಡಕಟ್ಟು ಹೋರಾಟಗಾರರ ಕತೆಗಳನ್ನು ತಿಳಿಸಿಕೊಡುವುದು ಮುಖ್ಯವಾಗಿದೆ ಎಂದು ಹೇಳಿದರು. ಪ್ರತಿವರ್ಷ ಜಂಜಾತಿಯಾ ಗೌರವ ದಿನ ಆಚರಿಸುವುದರಿಂದ ಮುಂಬರುವ ಪೀಳಿಗೆಗೆ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ಸಾಹಸ, ತ್ಯಾಗ ಮತ್ತು ಬಲಿದಾನದ ಅರಿವಾಗುತ್ತದೆ ಎಂದು ಹೇಳಿದರು.
ಬುಡಕಟ್ಟು ಜನರ 75 ವರ್ಷಗಳ ವೈಭವದ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳನ್ನು ಸ್ಮರಿಸಲು 2021ರ ನವೆಂಬರ್ 15ರಿಂದ ಒಂದು ವಾರವಿಡೀ ನಡೆಯುವ ಆಚರಣೆಗಳ ಬಗ್ಗೆ ಉಪರಾಷ್ಟ್ರಪತಿ ಸಂತಸ ವ್ಯಕ್ತಪಡಿಸಿದರು. ವಾರವೀಡಿ ನಡೆಯುವ ಈ ಆಚರಣೆಗಳನ್ನು ಸಕ್ರಿಯವಾಗಿ ಜನರು ಭಾಗವಹಿಸಬೇಕೆಂದು ಕರೆ ನೀಡಿದ ಉಪರಾಷ್ಟ್ಪಪತಿ ಅವರು “ ಈ ಆಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ವಿಶಿಷ್ಟ ಬುಡಕಟ್ಟು ಸಾಂಸ್ಕೃತಿಕ ಪರಂಪರೆ, ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ, ಅವರ ಪದ್ದತಿಗಳು, ಹಕ್ಕುಗಳು, ಸಂಪ್ರದಾಯಗಳು, ಆಹಾರ, ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯದ ಬಗ್ಗೆ ತಿಳಿದುಕೊಳ್ಳಬೇಕೆಂದು ಪ್ರತಿಯೊಬ್ಬರಿಗೂ ಕರೆ ನೀಡುವುದಾಗಿ’’ ಹೇಳಿದರು.
ಬುಡಕಟ್ಟು ಸಮುದಾಯದವರ ವಿಶಿಷ್ಟತೆಗಳನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಗಳು “ನಮ್ಮ ಬುಡಕಟ್ಟು ಸಮುದಾಯಗಳ ವಿಶೇಷತೆ ಏನೆಂದರೆ, ಅವರು ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಮತ್ತು ಅವರ ಸಂಸ್ಕೃತಿ, ಭಾಷೆ, ಆಚರಣೆ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು’’ಎಂದು ಹೇಳಿದರು. ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಮತ್ತು ಭಾರತೀಯ ಮೌಲ್ಯಗಳ ಪ್ರಚಾರದಲ್ಲಿ ಅವರ ಶ್ರಮವನ್ನು ಗುರುತಿಸಲು ಜಂಜಾತಿಯಾ ಗೌರವ ದಿನ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಆ ಭಾಗದ ಆದಿವಾಸಿ ವಿದ್ಯಾರ್ಥಿ ಸಾಧಕರನ್ನು ಸನ್ಮಾನಿಸಿದ ಶ್ರೀ ಎಂ.ವೆಂಕಯ್ಯನಾಯ್ಡು ಅವರು “ಅವಕಾಶ ನೀಡಿದರೆ ಬುಡಕಟ್ಟು ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಈ ವಿದ್ಯಾರ್ಥಿಗಳ ಯಶಸ್ಸು ಸಾಬೀತುಪಡಿಸುತ್ತದೆ’’ಎಂದರು.
ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ರಾಜಭವನದಲ್ಲಿ ಆಯೋಜಿಸಿದ್ದ ಪ್ರದರ್ಶನಕ್ಕೆ ಉಪರಾಷ್ಟ್ರಪತಿಗಳು ಭೇಟಿ ನೀಡಿ, ವೀಕ್ಷಣೆ ಮಾಡಿದರು. ಇದೇ ವೇಳೆ ವಾಲ್ಮೀಕಿ, ಸಿದ್ದಿ, ಸೋಲಿಗ, ಕುಡಿಯ ಸೇರಿದಂತೆ ಹಲವು ಬುಡಕಟ್ಟು ಆದಿವಾಸಿಗಳು ನಡೆಸಿಕೊಟ್ಟ ಡೊಳ್ಳು ಕುಣಿತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀ ಎಂ.ವೆಂಕಯ್ಯ ನಾಯ್ಡು ಸಾಕ್ಷಿಯಾದರು.
***
(Release ID: 1772130)
Visitor Counter : 167