ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ನವೋದ್ಯಮಗಳೊಂದಿಗೆ ದೀಪಾವಳಿ ಆಚರಿಸಿದ ಎಂ.ಇ.ಐ.ಟಿ.ವೈ/ಎಂ.ಎಸ್.ಡಿ.ಇ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್


ಅವರೊಂದಿಗೆ ಸಂವಾದ ನಡೆಸಿ ಭೋಜನ ಮಾಡಿದ ಸಚಿವರು

ಭಾರತದಲ್ಲಿ ಅತ್ಯಂತ ಚೈತನ್ಯಪೂರ್ಣ ನವೋದ್ಯಮ ಪರಿಸರ ವ್ಯವಸ್ಥೆ ಸ್ಥಾಪಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಹಂಚಿಕೊಂಡ ಸಚಿವರು

ಭಾರತದಲ್ಲಿ ಡೀಪ್ ಟೆಕ್ ಪರಿಸರ ವ್ಯವಸ್ಥೆ ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಬಗ್ಗೆ ಚರ್ಚೆ

ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಯಶಸ್ವಿಯಾಗಲು ಮತ್ತು ಬೆಳೆಯಲು ನವೋದ್ಯಮಗಳಿಗೆ ಅಭೂತಪೂರ್ವ ಅವಕಾಶವಿದೆ, ಏಕೆಂದರೆ ಜಗತ್ತು ಭಾರತವನ್ನು ವಿಶ್ವಾಸಾರ್ಹ ತಾಂತ್ರಜ್ಞಾನ ಪಾಲುದಾರನಾಗಿ ನೋಡುತ್ತಿದೆ: ರಾಜೀವ್ ಚಂದ್ರಶೇಖರ್


ಪ್ರಧಾನಮಂತ್ರಿ ಮೋದಿ ಅವರು ಸರ್ಕಾರ ಮತ್ತು ಆರ್ಥಿಕತೆಯ ಡಿಜಿಟಲೀಕರಣವನ್ನು ವೇಗಗೊಳಿಸುತ್ತಿದ್ದಾರೆ: ರಾಜೀವ್ ಚಂದ್ರಶೇಖರ್

Posted On: 06 NOV 2021 5:40PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರು ಮೂಲದ ನವೋದ್ಯಮಗಳೊಂದಿಗೆ ಇಂದು ದೀಪಾವಳಿ ಆಚರಿಸಿದರು. ನಾಸ್ಕಾಂ ಮತ್ತು ಎಸ್.ಟಿ.ಪಿ.ಐ ಬೆಂಗಳೂರಿನಲ್ಲಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು, ನವೋದ್ಯಮಗಳೊಂದಿಗೆ ಸಂವಾದ ನಡೆಸಿ, ಅವರ ಪಯಣ, ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ನವೋದ್ಯಮಗಳಿಗೆ ಸರ್ಕಾರದ ಕಾರ್ಯಕ್ರಮಗಳ ಬೆಂಬಲವನ್ನು ಮತ್ತಷ್ಟು ಬಲಗೊಳಿಸುವುದು ಹೇಗೆ ಎಂಬುದರ ಕುರಿತು ಅವರ ಸಲಹೆಗಳನ್ನೂ ಪಡೆದರು.

ಅವರು ಉದ್ಯಮದ ಪ್ರಮುಖರ ಜೊತೆಗೆ ಕರ್ನಾಟಕ ಮೂಲದ ಡೀಪ್‌ ಟೆಕ್, ಟೆಕ್‌ ವೀ ಮತ್ತು ಎಸ್‌.ಟಿ.ಪಿ.ಐ. ಐಒಟಿ ಓಪನ್ ಲ್ಯಾಬ್ ನವೋದ್ಯಮಗಳೊಂದಿಗೆ ತೊಡಗಿಸಿಕೊಂಡು ಸಂವಾದಾತ್ಮಕ ಸಂಭಾಷಣೆಯನ್ನು ನಡೆಸಿದರು. ಸಚಿವರು ನವೋದ್ಯಮಗಳ ಗೇಮ್ ಚೇಂಜಿಂಗ್ ಪರಿಹಾರಗಳನ್ನು ಮತ್ತು ಅವರ ಡಿಜಿಟಲ್ ಸೇರ್ಪಡೆ ಪ್ರಯಾಣದಲ್ಲಿ ಅವರು ಜನರ ಮೇಲೆ ಪ್ರಭಾವ ಬೀರಿರುವುದನ್ನು ವೀಕ್ಷಿಸಿದರು. 2026 ರ ವೇಳೆಗೆ ಭಾರತದಲ್ಲಿ ಡೀಪ್ ಟೆಕ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರಗಳ ಕುರಿತು ಸಹ ಚರ್ಚೆ ನಡೆಸಿದರು.

ಸಭೆಯನ್ನುದ್ದೇಶಿಸಿ ರಾಜೀವ್ ಚಂದ್ರಶೇಖರ್ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಬಗ್ಗೆಯೂ ಮಾತನಾಡಿದರು. "ಮಾನ್ಯ ಪ್ರಧಾನಮಂತ್ರಿಯವರು 2015 ರಲ್ಲಿ 3 ಸ್ಪಷ್ಟ ಉದ್ದೇಶಗಳೊಂದಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇದು ತಂತ್ರಜ್ಞಾನವನ್ನು - i) ಜನರ ಜೀವನವನ್ನು ಪರಿವರ್ತಿಸುವುದಕ್ಕೆ ii) ಆರ್ಥಿಕ ಅವಕಾಶಗಳನ್ನು ವಿಸ್ತರಿಸುವುದಕ್ಕೆ iii) ಕೆಲವು ವ್ಯೂಹಾತ್ಮಕ ತಂತ್ರಜ್ಞಾನಗಳಲ್ಲಿ ಸಾಮರ್ಥ್ಯಗಳನ್ನು ರಚಿಸುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು. ಕೋವಿಡ್ ನಂತರ ಭಾರತದ ಆರ್ಥಿಕತೆ ಯಾವ ರೀತಿ ಪುಟಿದೆದ್ದಿದೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಪ್ರಧಾನಮಂತ್ರಿಯವರು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಹಾಕಿರುವ ಭದ್ರ ಬುನಾದಿಯನ್ನು ಬಲಪಡಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕು ಎಂದರು. ದೇಶದ ದೂರದ ಪ್ರದೇಶದಲ್ಲಿರುವ ಜನರನ್ನು ಕೂಡ ಒಂದು ಗುಂಡಿ ಒತ್ತುವ ಮೂಲಕ ತಲುಪಬಹುದಾಗಿದೆ ಮತ್ತು ಪ್ರತಿಯೊಂದು ನಯಾ ಪೈಸೆಯೂ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತಿದೆ ಎಂದರು. 

ಕಳೆದ 18 ತಿಂಗಳುಗಳಲ್ಲಿ ಡಿಜಿಟಲ್ ಆರ್ಥಿಕತೆಯ ಪ್ರಚಂಡ ವಿಸ್ತರಣೆಯನ್ನು ಉಲ್ಲೇಖಿಸಿದ ರಾಜೀವ್ ಚಂದ್ರಶೇಖರ್, "ನವೋದ್ಯಮಗಳಿಗೆ ಈಗಿನಷ್ಟು ಉತ್ತಮ ಸಮಯ ಎಂದಿಗೂ ಇರಲಿಲ್ಲ. ನವೋದ್ಯಮಗಳು ಬ್ರಹ್ಮಾಂಡದಷ್ಟು ಅವಕಾಶಗಳನ್ನು ಹೊಂದಿವೆ ಮತ್ತು ಜಗತ್ತು ಈಗ ಭಾರತದಂತಹ ಹೊಸ ವಿಶ್ವಾಸಾರ್ಹ ಪೂರೈಕೆದಾರರನ್ನು ಹುಡುಕುತ್ತಿದೆ. ತನ್ನ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣ ಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ ಮತ್ತು ಇದು ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದರು.

ರಾಜೀವ್ ಚಂದ್ರಶೇಖರ್ ಅವರು ಸಣ್ಣ ನಗರಗಳಿಗೆ ಉದ್ಯಮಶೀಲತೆಯನ್ನು ಹರಡುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಮುಂದಿನ ಹಂತದ ಉದ್ಯಮಶೀಲತೆಯನ್ನು ಬೆಂಬಲಿಸಲು ಸಹ-ಅಭಿವೃದ್ಧಿ/ಸಹ-ಕಾರ್ಯ ಮಾದರಿಯೊಂದಿಗೆ ಹೊರಗುತ್ತಿಗೆ ಮಾದರಿಯನ್ನು ಬದಲಿಸಬೇಕು ಎಂದರು.

ತಮ್ಮ ಭಾಷಣವನ್ನು ಪರಿಸಮಾಪ್ತಿಗೊಳಿಸುತ್ತಾ, ರಾಜೀವ್ ಚಂದ್ರಶೇಖರ್ ಅವರು ನವೋದ್ಯಮ ಪರಿಸರ ವ್ಯವಸ್ಥೆಗೆ ನರೇಂದ್ರ ಮೋದಿ ಸರ್ಕಾರದ ಬೆಂಬಲವನ್ನು ಪುನಃ ದೃಢಪಡಿಸಿದರು ಮತ್ತು ಎಲ್ಲಾ ಅಗತ್ಯ ನೀತಿ ಬೆಂಬಲದೊಂದಿಗೆ ಮತ್ತು ಮಾರುಕಟ್ಟೆ ಸಂಪರ್ಕವನ್ನು ಸುಲಭಗೊಳಿಸುವ ಮೂಲಕ ಅವರಿಗೆ ಸಹಾಯ ಮಾಡುವಲ್ಲಿ ಸರ್ಕಾರವು ಸಕ್ರಿಯ ಪಾತ್ರವನ್ನು ವಹಿಸಲು ಸಿದ್ಧವಾಗಿದೆ ಎಂಬ ಭರವಸೆ ನೀಡಿದರು.

ವಿಚಾರಗಳು ಮತ್ತು ಅನುಭವಗಳ ಮುಕ್ತ ವಿನಿಮಯವನ್ನು ಉತ್ತೇಜಿಸಲು ಸಂವಾದಾತ್ಮಕ ಅಧಿವೇಶನವನ್ನು ಅನೌಪಚಾರಿಕವಾಗಿ  ಆಯೋಜಿಸಲಾಗಿತ್ತು. ಇದು ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೆಚ್ಚು ಚೈತನ್ಯಶೀಲಗೊಳಿಸಲು ತಮ್ಮ ಅನುಭವಗಳು, ಸವಾಲುಗಳು ಮತ್ತು ಸಲಹೆಗಳನ್ನು ಹಂಚಿಕೊಂಡ ಉದ್ಯಮಿಗಳಿಂದ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಅಧಿವೇಶನದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರೋತ್ಸಾಹಿಸಿದ ಮಹಿಳಾ ಆಧರಿತ ನವೋದ್ಯಮಗಳನ್ನೂ ಒಳಗೊಂಡಿತ್ತು.

ಈ ಸಂವಾದಾತ್ಮಕ ಅಧಿವೇಶನ ಭೋಜನದೊಂದಿಗೆ ಪರಿಸಮಾಪ್ತಿಯಾಯಿತು, ಇದರಲ್ಲಿ ಉದ್ಯಮಿಗಳು, ನವೋದ್ಯಮಗಳು ಸಚಿವರೊಂದಿಗೆ ಸ್ಥಳೀಯ ಭಕ್ಷ್ಯಗಳನ್ನು ಸವಿದು ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡರು.

***



(Release ID: 1769755) Visitor Counter : 215


Read this release in: English , Urdu , Hindi , Tamil , Telugu