ಹಣಕಾಸು ಸಚಿವಾಲಯ

ಕರ್ನಾಟಕದಲ್ಲಿ ಶೋಧಕಾರ್ಯ ನಡೆಸಿದ ಆದಾಯ ತೆರಿಗೆ ಇಲಾಖೆ

Posted On: 03 NOV 2021 11:27AM by PIB Bengaluru

ವಿವಿಧ ರಸ್ತೆಗಳು ಹಾಗೂ ನೀರಾವರಿ ಯೋಜನೆಗಳ ಕಾಮಗಾರಿಗಳಲ್ಲಿ ತೊಡಗಿರುವ ಕರ್ನಾಟಕದ ಪ್ರಮುಖ ಉದ್ಯಮಸಮೂಹವೊಂದಕ್ಕೆ ಸೇರಿದ ಉತ್ತರ ಕರ್ನಾಟಕದ ವಿವಿಧ ಸ್ಥಳಗಳಲ್ಲಿ 28.10.2021 ರಂದು ಆದಾಯ ತೆರಿಗೆ ಇಲಾಖೆಯು ಶೋಧ ಹಾಗೂ ಜಪ್ತಿ ಕಾರ್ಯಾಚರಣೆ ನಡೆಸಿತು.

ಸಮೂಹವು ಸಾಮಗ್ರಿಗಳ ಖರೀದಿ, ಕಾರ್ಮಿಕ ವೆಚ್ಚಗಳು ಮತ್ತು ಉಪ-ಗುತ್ತಿಗೆದಾರರಿಗೆ ಮಾಡಿದ ಪಾವತಿಯಲ್ಲಿ ನಕಲಿ ವೆಚ್ಚಗಳನ್ನು ತೋರಿಸುವ ಮೂಲಕ ತನ್ನ ಲಾಭವನ್ನು ಮರೆಮಾಚಿರುವುದು ಶೋಧ ಕಾರ್ಯಾಚರಣೆ ವೇಳೆ ಬಯಲಾಗಿದೆ.

ಅಂತಹ ವೆಚ್ಚಗಳ ನಕಲಿ ಕ್ಲೇಮ್‌ಗಳನ್ನು ಸೂಚಿಸುವ ಡಿಜಿಟಲ್ ಸಾಕ್ಷ್ಯಗಳು ಸೇರಿದಂತೆ ಅಪರಾಧಕ್ಕೆ ಪೂರಕವಾದ ವಿವಿಧ ದಾಖಲೆಗಳನ್ನು ಪತ್ತೆ ಮಾಡಿ, ವಶಪಡಿಸಿಕೊಳ್ಳಲಾಗಿದೆ. ಸಮೂಹದ ಪ್ರಮುಖ ವ್ಯಕ್ತಿಯು ಅಂತಹ ಮಾರಾಟಗಾರರು/ ಸಾಮಗ್ರಿಗಳ ಪೂರೈಕೆದಾರರಿಂದ ಲೆಕ್ಕರಹಿತ ಅಕ್ರಮ ಹಣವನ್ನು ಪಡೆದಿರುವುದು ದಾಖಲೆಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ಸಮೂಹದ ಪ್ರಮುಖ ವ್ಯಕ್ತಿಯ ಸಂಬಂಧಿಕರು/ ಸ್ನೇಹಿತರು/ ಉದ್ಯೋಗಿಗಳನ್ನು ಉಪ-ಗುತ್ತಿಗೆದಾರರ ಹೆಸರಿನಲ್ಲಿ ಬೇನಾಮಿಗಳಾಗಿ ಬಳಸಲಾಗಿದೆ. ಇಂತಹ ವ್ಯಕ್ತಿಗಳು ಯಾವುದೇ ಕೆಲಸವನ್ನು ಕಾರ್ಯಗತಗೊಳಿಸಲಿಲ್ಲ ಅಥವಾ ಕೆಲಸವನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಹೊಂದದಿರುವುದು ತಿಳಿದುಬಂದಿದೆ. ವಹಿವಾಟುಗಳ ಮೂಲಕ ಸಮೂಹವು ಅಕ್ರಮವಾಗಿ ಲೆಕ್ಕರಹಿತ ಹಣವನ್ನು ಸೃಷ್ಟಿಸಿದೆ.

ಶೋಧ ಕಾರ್ಯಾಚರಣೆಯಿಂದ 70 ಕೋಟಿ ರೂ.ಗಿಂತಲೂ ಅಧಿಕ ಲೆಕ್ಕರಹಿತ ಅಕ್ರಮ ಆದಾಯವು ಪತ್ತೆಯಾಗಿದ್ದು, ಇದನ್ನು ಸದರಿ ಸಮೂಹವು ಅಘೋಷಿತ ಆದಾಯವೆಂದು ಒಪ್ಪಿಕೊಂಡಿದೆ.

ಪ್ರಕರಣದ ತನಿಖೆ ಮುಂದುವರಿದಿದೆ.

***



(Release ID: 1769198) Visitor Counter : 176


Read this release in: Urdu , Hindi , English , Tamil , Telugu