ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ಭಾರತ ಸರಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಗಾಗಿ ಅಕ್ಟೋಬರ್ 2ರಿಂದ ಅಕ್ಟೋಬರ್ 31, 2021ರ ಅವಧಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಅಭಿಯಾನದ ಫಲಿತಾಂಶವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಪರಿಶೀಲಿಸಿದರು


ರದ್ದಿ ಅಥವಾ ತ್ಯಾಜ್ಯ ವಿಲೇವಾರಿ ಮೂಲಕ ಸರಕಾರ ಸುಮಾರು 40 ಕೋಟಿ ರೂ.ಗಳನ್ನು ಗಳಿಸಿದ್ದು, ಎಂಟು ಲಕ್ಷ ಚದರ ಅಡಿಗೂ ಹೆಚ್ಚು ಸ್ಥಳಾವಕಾಶ ತೆರವುಗೊಂಡಿದೆ ಎಂದು ಸಚಿವರು ಹೇಳಿದ್ದಾರೆ

30 ದಿನಗಳ ಅಲ್ಪಾವಧಿಯಲ್ಲಿ 13 ಲಕ್ಷ73 ಸಾವಿರಕ್ಕೂ ಹೆಚ್ಚು ಕಡತಗಳನ್ನು ಇತ್ಯರ್ಥಗೊಳಿಸಲಾಗಿದೆ ಮತ್ತು 2 ಲಕ್ಷ91 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ: ಡಾ. ಜಿತೇಂದ್ರ ಸಿಂಗ್

Posted On: 01 NOV 2021 3:32PM by PIB Bengaluru

ಕೇಂದ್ರ ಸರಕಾರವು ಸ್ಕ್ರ್ಯಾಪ್ ಅಥವಾ ರದ್ದಿ ವಿಲೇವಾರಿ ಮೂಲಕ ಸುಮಾರು 40 ಕೋಟಿ ರೂ.ಗಳನ್ನು ಗಳಿಸಿದೆ ಮತ್ತು ಭಾರತ ಸರಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಡರಗಳ ವಿಲೇವಾರಿ ಮಾಡಲು ಅಕ್ಟೋಬರ್ 2ರಂದು ಪ್ರಾರಂಭಿಸಲಾದ ವಿಶೇಷ ಅಭಿಯಾನದ ಮೂಲಕ ಎಂಟು ಲಕ್ಷ ಚದರ ಅಡಿಗೂ ಹೆಚ್ಚು ಸ್ಥಳವನ್ನು ತೆರವುಗೊಳಿಸಿದೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಖಾತೆ ಸಹಾಯಕ ಸಚಿವರು(ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಖಾತೆ ಸಚಿವರು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವರೂ ಆಗಿರುವ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. 

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ(ಡಿಎಆರ್‌ಪಿಜಿ) ನೋಡಲ್ ಇಲಾಖೆಯ ಅಡಿಯಲ್ಲಿ ಅಕ್ಟೋಬರ್ 2ರಿಂದ ಅಕ್ಟೋಬರ್ 31, 2021ರ ಅವಧಿಯಲ್ಲಿ ಭಾರತ ಸರಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಗಾಗಿ ಸಚಿವರು 2021ರ ಅಕ್ಟೋಬರ್ 1 ರಂದು ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.


 

ಅಭಿಯಾನದ ಫಲಿತಾಂಶದ ಬಗ್ಗೆ ʻಡಿಎಆರ್‌ಪಿಜಿʼಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ವಿಶೇಷ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು,  ಈ ಉದ್ದೇಶಕ್ಕಾಗಿ ಗುರುತಿಸಲಾದ 15 ಲಕ್ಷ23 ಸಾವಿರದ 464 ಕಡತಗಳಲ್ಲಿ 13 ಲಕ್ಷ73 ಸಾವಿರ, 204 ಕ್ಕೂ ಹೆಚ್ಚು ಕಡತಗಳು ವಿಲೇವಾರಿಯಾಗಿವೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು. ಅದೇ ರೀತಿ ಉದ್ದೇಶಿತ 3,28,234 ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ ಗುರಿಯಲ್ಲಿ 30 ದಿನಗಳ ಅಲ್ಪಾವಧಿಯಲ್ಲಿ 2,91,692 ಕುಂದುಕೊರತೆಗಳನ್ನು ಪರಿಹರಿಸಲಾಯಿತು ಎಂದರು. ಸಂಸದರು ಶಿಫಾರಸು ಮಾಡಿದ 11,057 ಪ್ರಕರಣಗಳಲ್ಲಿ 8,282 ಅನ್ನು ಪರಿಹರಿಸಲಾಗಿದೆ. ಇದಲ್ಲದೆ, ಉದ್ದೇಶಿತ 834 ನಿಯಮಗಳು ಮತ್ತು ಪ್ರಕ್ರಿಯೆಗಳ ಪೈಕಿ 685 ಅನ್ನು ಈ ಅವಧಿಯಲ್ಲಿ ಸರಳೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಸರಕಾರದ ವಿವಿಧ ಸಚಿವಾಲಯ/ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಗಾಗಿ ಈ ವಿಶೇಷ ಅಭಿಯಾನವನ್ನು ನಡೆಸಲಾಯಿತು. ಈ ಅಭಿಯಾನದ ಪ್ರಗತಿಯ ಕುರಿತಾದ ವರದಿಯನ್ನು ಈ ವಾರ ಅವರಿಗೆ ಪ್ರಸ್ತುತಪಡಿಸಲಾಗುವುದು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಸಾರ್ವಜನಿಕ ಕುಂದುಕೊರತೆಗಳು, ಸಂಸತ್ ಸದಸ್ಯರು ಮತ್ತು ರಾಜ್ಯ ಸರಕಾರಗಳ ಶಿಫಾರಸುಗಳು, ಅಂತರ ಸಚಿವಾಲಯ ಸಮಾಲೋಚನೆಗಳು ಮತ್ತು ಸಂಸದೀಯ ಆಶ್ವಾಸನೆಗಳನ್ನು ಪ್ರತಿ ಸಚಿವಾಲಯ/ಇಲಾಖೆ ಹಾಗೂ  ಅದರ ಅಧೀನ ಕಚೇರಿಗಳು  ನಿಗದಿತ ಅವಧಿಯಲ್ಲಿ ಸಕಾಲದಲ್ಲಿ ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಬೇಕೆಂಬ ಗುರಿಯನ್ನು ಈ ವಿಶೇಷ ಅಭಿಯಾನದ ಅಡಿಯಲ್ಲಿ ಹೊಂದಲಾಗಿತ್ತು ಎಂದು ಅವರು ಹೇಳಿದರು. ಈ ವಿಶೇಷ ಅಭಿಯಾನದ ಸಮಯದಲ್ಲಿ, ತಾತ್ಕಾಲಿಕ ಸ್ವರೂಪದ ಕಡತಗಳನ್ನು ಗುರುತಿಸಿ ವಿಲೇವಾರಿ ಮಾಡಲಾಯಿತು ಮತ್ತು ಕೆಲಸದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಸುಧಾರಿಸಲು ಅನಗತ್ಯ ರದ್ದಿ ವಸ್ತುಗಳು ಮತ್ತು ಹಳತಾದ ವಸ್ತುಗಳನ್ನು ಹೊರ ಹಾಕಲಾಯಿತು ಎಂದು ಸಚಿವರು ಮಾಹಿತಿ ನೀಡಿದರು.

ದೇಶದಲ್ಲಿ ಜನ ಆಂದೋಲನವಾಗಿ ಮಾರ್ಪಟ್ಟ ಮೋದಿ ಅವರ ʻಸ್ವಚ್ಛ ಭಾರತ ಅಭಿಯಾನʼ  ಸ್ಫೂರ್ತಿಯೊಂದಿಗೆ ಕೆಲಸದ ಸ್ಥಳಗಳನ್ನು ಸ್ವಚ್ಛ, ಗೊಂದಲಮುಕ್ತ ಹಾಗೂ ಆರೋಗ್ಯಕರವಾಗಿಸಲು  ಭವಿಷ್ಯದಲ್ಲಿ ಈ ಅಭ್ಯಾಸವನ್ನು ಮುಂದುವರಿಸುವುದಾಗಿ ಡಾ. ಜಿತೇಂದ್ರ ಸಿಂಗ್ ಭರವಸೆ ನೀಡಿದರು. ವಿವಿಧ ಬಗೆಯ ಕಡತಗಳ ವಿಲೇವಾರಿಗೆ ಭಾರತ ಸರಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳು ಅನುಸರಿಸಿದ ವಿಧಾನಗಳನ್ನು ತುಲನಾತ್ಮಕ ವಿಶ್ಲೇಷಣೆ ಮಾಡುವಂತೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲು ಅಂತಹ ಉತ್ತಮ ಕಾರ್ಯವಿಧಾನಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತೆ ʻಡಿಎಆರ್‌ಪಿಜಿʼಗೆ ಸೂಚನೆ ನೀಡಿದರು. ಬಾಕಿ ಕಡಿತಗಳ ವಿಲೇವಾರಿಯು ನಿರಂತರ ಪ್ರಕ್ರಿಯೆಯಾಗಿರುವ ಕಾರಣ ಅಭಿಯಾನ ಮುಗಿದ ನಂತರವೂ ಅದರ ಹಿಂದಿನ ಪ್ರೇರಣೆ ಉಳಿಯಬೇಕು ಎಂದು ಸಚಿವರು ಪುನರುಚ್ಚರಿಸಿದರು.

ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು ಇಲಾಖೆ (ಡಿಎಆರ್‌ಪಿಜಿ) ಈ ಅಭಿಯಾನದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ನೋಡಲ್ ಸಚಿವಾಲಯವಾಗಿತ್ತು. ಇದಕ್ಕಾಗಿ ವಿಶೇಷವಾದ ಡ್ಯಾಶ್ ಬೋರ್ಡ್ ರಚಿಸಲಾಗಿತ್ತು. ಈ ನಿಟ್ಟಿನಲ್ಲಿ ಭಾರತ ಸರಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳಿಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಯಿತು. ಪ್ರತಿಯೊಂದು ಸಚಿವಾಲಯ/ಇಲಾಖೆಯು ವಿಶೇಷ ಅಭಿಯಾನಕ್ಕಾಗಿ ನೋಡಲ್ ಅಧಿಕಾರಿಯನ್ನು ನಿಯೋಜಿಸಿತ್ತು. ಕಾರ್ಯದರ್ಶಿಗಳು/ಇಲಾಖಾ ಮುಖ್ಯಸ್ಥರು ಪ್ರತಿದಿನ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಗುರುತಿಸಲಾದ ಮಾನದಂಡಗಳ ಪ್ರಕಾರ ದತ್ತಾಂಶವನ್ನು ಒದಗಿಸಲು ಸಚಿವಾಲಯಗಳಿಗೆ ಅನುವು ಮಾಡಿಕೊಡಲು https://pgportal.gov.in/scdpm ಎಂಬ ವಿಶೇಷ ಪೋರ್ಟಲ್ ರಚಿಸಲಾಗಿದ್ದು, 22 ಸೆಪ್ಟೆಂಬರ್ 2021 ರಿಂದಲೇ ಈ ಪೋರ್ಟಲ್‌ ಅನ್ನು ಕಾರ್ಯಗತಗೊಳಿಸಲಾಗಿದೆ. 

**********


(Release ID: 1768671) Visitor Counter : 212