ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗುಜರಾತ್‌ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


‘ಉಕ್ಕಿನ ಮನುಷ್ಯ’ ಎಂದೇ ಖ್ಯಾತರಾಗಿರುವ ದೇಶದ ಮೊದಲ ಗೃಹ ಸಚಿವ ಸರ್ದಾರ್ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಗೃಹ ಸಚಿವರು

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಂದೇಶ ಪ್ರಸಾರ

ರಾಷ್ಟ್ರದ ಮೊದಲ ಗೃಹ ಸಚಿವ ಮತ್ತು ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಸಂಪ್ರದಾಯವನ್ನು ನಾವು ಮುಂದುವರಿಸುತ್ತಿದ್ದೇವೆ: ಶ್ರೀ ಅಮಿತ್ ಶಾ

ರಾಷ್ಟ್ರದ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಜಾ಼ದಿ ಕಾ ಅಮೃತ ಮಹೋತ್ಸವ ಎಂದು ಆಚರಿಸಲು ಪ್ರಧಾನಿ ನಿರ್ಧರಿಸಿದರು.

ನಾವು ಆಜಾ಼ದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಕಾರಣ ಈ ವರ್ಷದ ರಾಷ್ಟ್ರೀಯ ಏಕತಾ ದಿನವೂ ವಿಶೇಷ ಮಹತ್ವವನ್ನು ಹೊಂದಿದೆ

ಶ್ರೀ ನರೇಂದ್ರ ಮೋದಿ ಅವರು ರೋಮಾಂಚಕ, ಅಭಿವೃದ್ಧಿ ಹೊಂದಿದ, ಸಮೃದ್ಧ, ಸುರಕ್ಷಿತ, ಸುಸಂಸ್ಕೃತ ಮತ್ತು ವಿದ್ಯಾವಂತ ಭಾರತವನ್ನುನಿರ್ಮಿಸುವ ಸಂಕಲ್ಪವನ್ನು ನಮ್ಮ ಮುಂದಿಟ್ಟಿದ್ದಾರೆ

ಶ್ರೀ ಮೋದಿಯವರು ರಾಷ್ಟ್ರೀಯ ಭದ್ರತೆ, ಆರ್ಥಿಕ ಸುಧಾರಣೆಗಳು, ಸ್ವಾವಲಂಬನೆ ಮತ್ತು ಮೇಕ್ ಇನ್ ಇಂಡಿಯಾ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಉಪಕ್ರಮಗಳನ್ನು ಕೈಗೊಂಡಿದ್ದಾರೆ

ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಲು, ನಾವು 15 ಆಗಸ್ಟ್ 1947 ರಿಂದ ಇಂದಿನವರೆಗೆ ಹಲವಾರು ಸಾಧನೆಗಳು, ಗೆಲುವುಗಳು,

Posted On: 31 OCT 2021 4:28PM by PIB Bengaluru

ಭಾರತದೊಳಗೆ ವಿವಿಧ ರಾಜಪ್ರಭುತ್ವಗಳನ್ನು ವಿಲೀನಗೊಳಿಸುವ ಜೊತೆಗೆ, ರಾಷ್ಟ್ರದ ಇನ್ನೊಂದು ಭಾಗವಾದ 'ಲಕ್ಷದ್ವೀಪ'ಕ್ಕೆ ಸರ್ದಾರ್ ಪಟೇಲ್ ಭಾರತೀಯ ನೌಕಾಪಡೆಯನ್ನು ಸೂಕ್ತ ಸಮಯದಲ್ಲಿ ಕಳುಹಿಸಿ ಅದನ್ನು ಭಾರತದ ಭಾಗವಾಗಿಸಿದರು.

ಸ್ವಾತಂತ್ರ್ಯದ ನಂತರ ಸರ್ದಾರ್ ಸಾಹಬ್ ಭಾರತವನ್ನು ಒಂದುಗೂಡಿಸಿದರು, ಆದರೆ ದುರದೃಷ್ಟವಶಾತ್ ಅವರನ್ನು ಮರೆಯುವ ಪ್ರಯತ್ನಗಳು ನಡೆದವು

ಸ್ವಾತಂತ್ರ್ಯದ ನಂತರ, ಅವರ ಕೊಡುಗೆಗೆ ಎಂದಿಗೂ ಸೂಕ್ತ ಗೌರವ ಮತ್ತು ಸ್ಥಾನ ದೊರೆಯಲಿಲ್ಲ, ಅವರಿಗೆ ಭಾರತ ರತ್ನ ಅಥವಾ ಅವರಿಗೆ ಇತರ ಸೂಕ್ತ ಸರಿಯಾದ ಗೌರವವನ್ನು ನೀಡಲಿಲ್ಲ.

ಭಾರತದ ಏಕತೆಯನ್ನು ಯಾರೂ ಒಡೆಯಲು ಸಾಧ್ಯವಿಲ್ಲ, ಭಾರತದ ಅಖಂಡತೆಗೆ ಭಂಗ ತರಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ನಮ್ಮ ಸಾರ್ವಭೌಮತ್ವಕ್ಕೆ ಯಾರಿಂದಲೂ ಧಕ್ಕೆ ತರಲು ಸಾಧ್ಯವಿಲ್ಲ ಎಂಬುದು ಜಗತ್ತಿಗೆ ಏಕತಾ ಪ್ರತಿಮೆಯ ಸಂದೇಶವಾಗಿದೆ

ದೇಶಾದ್ಯಂತ ರೈತರು ಬಳಸುವ ಸಲಕರಣೆಗಳಿಂದ ಕಬ್ಬಿಣವನ್ನು ಸಂಗ್ರಹಿಸಿ ಸರ್ದಾರ್ ಸಾಹಬ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸುವ ಕಲ್ಪನೆಯನ್ನು ಶ್ರೀ ನರೇಂದ್ರ ಮೋದಿಯವರು ರೂಪಿಸಿದರು

ಈ ಪ್ರತಿಮೆಯಲ್ಲಿ ಬಳಸಿದ ಕಬ್ಬಿಣವು ದೇಶದಾದ್ಯಂತ ಕೋಟಿಗಟ್ಟಲೆ ರೈತರ ನೇಗಿಲು ಅಥವಾ ಇತರ ಕೃಷಿ ಉಪಕರಣವನ್ನು ಕರಗಿಸಿ ತಯಾರಿಸಿದ ಕಬ್ಬಿಣವಾಗಿದೆ ಮತ್ತು ಇದು ಸರ್ದಾರ್ ಸಾಹಬ್‌ಗೆ ನಿಜವಾದ ಗೌರವವಾಗಿದೆ

ಏಕತಾ ಪ್ರತಿಮೆಯ ನಿರ್ಮಾಣವು ಕೇವಲ 46 ತಿಂಗಳಲ್ಲಿ ಪೂರ್ಣಗೊಂಡಿತು

ನಮ್ಮ ಯುವಕರು  ನಮ್ಮ ದೇಶದ ಏಕತೆಯ ತೀರ್ಥಕ್ಷೇತ್ರವಾದ ಇಲ್ಲಿಗೆ ಒಮ್ಮೆ ಭೇಟಿ ನೀಡಿಬೇಕು, ಇಲ್ಲಿ ಅವರು ಪಡೆಯುವ ಅರಿವು ಮತ್ತು ಶಕ್ತಿಯು ರಾಷ್ಟ್ರಕ್ಕಾಗಿ ಕೆಲಸ ಮಾಡಲು ಅವರನ್ನು ಪ್ರೇರೇಪಿಸುತ್ತದೆ

ನಾವು ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಬೇಕು, ಆದರೆ ಅದೇ ಸಮಯದಲ್ಲಿ, 100 ವರ್ಷಗಳ ನಂತರ ದೇಶ ಎಲ್ಲಿರಬೇಕು ಎಂಬ ಸಂಕಲ್ಪವನ್ನು ಇಂದಿನ ಪೀಳಿಗೆ ಮಾಡಬೇಕು.

ಸರ್ದಾರ್ ಪಟೇಲ್ ಅವರು ಕಲ್ಪಿಸಿದ ಅನನ್ಯ ಭಾರತವನ್ನು ನಿರ್ಮಿಸುವ ಆಶಯವು 7 ವರ್ಷಗಳಲ್ಲಿ 130 ಕೋಟಿ ಜನರನ್ನು ಮತ್ತು ವಿಶೇಷವಾಗಿ 60 ಕೋಟಿ ಬಡವರನ್ನು ಜಾಗೃತಗೊಳಿಸಿದೆ

ಸ್ವಾತಂತ್ರ್ಯದ 75 ನೇ ವರ್ಷದ ರಾಷ್ಟ್ರೀಯ ಏಕತಾ ದಿನವಾದ ಇಂದು, ನಮ್ಮ ಜೀವನದಲ್ಲಿ ಸರ್ದಾರ್ ಪಟೇಲ್ ಅವರ ಮಾರ್ಗವನ್ನು ಅನುಸರಿಸುತ್ತೇವೆ ಮತ್ತು ರಾಷ್ಟ್ರವನ್ನು ಸದೃಢವಾಗಿ ಮತ್ತು ಸರ್ದಾರ್ ಪಟೇಲ್ ಅವರ ಕನಸುಗಳ ದೇಶವನ್ನಾಗಿ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ಇಂದು ಗುಜರಾತ್‌ನ ಕೆವಾಡಿಯಾದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಏಕತಾ ಪ್ರತಿಮೆ ಎಂದೂ ಕರೆಯಲಾಗುವ ಸರ್ದಾರ್ ಪಟೇಲ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಅವರು, ‘ಉಕ್ಕಿನ ಮನುಷ್ಯ’ನಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ದೇಶದ ಮೊದಲ ಗೃಹ ಸಚಿವ ಮತ್ತು 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಸಂಪ್ರದಾಯವನ್ನು ನಾವು ಮುಂದುವರಿಸುತ್ತಿದ್ದೇವೆ ಎಂದರು. ಇಂದು ಈ ರಾಷ್ಟ್ರೀಯ ಏಕತಾ ದಿನವು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಈ ವರ್ಷವು ನಮ್ಮ ಸ್ವಾತಂತ್ರ್ಯದ 75 ನೇ ವರ್ಷವಾಗಿದೆ. ನಮ್ಮ ಸ್ವಾತಂತ್ರ್ಯದ 75 ನೇ ವರ್ಷದ ಸಂದರ್ಭದಲ್ಲಿ ಬಂದಿರುವ ಈ ರಾಷ್ಟ್ರೀಯ ಏಕತಾ ದಿನವು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಸ್ವಾತಂತ್ರ್ಯದ ನಂತರ, ಬ್ರಿಟಿಷರು ದೇಶವನ್ನು ಭಾರತ, ಪಾಕಿಸ್ತಾನ ಮತ್ತು 550 ಕ್ಕೂ ಹೆಚ್ಚು ಸಂಸ್ಥಾನಗಳಾಗಿ ದೇಶವನ್ನು ವಿಭಜಿಸಲು ಸಂಚು ರೂಪಿಸಿದ್ದರು. ಸರ್ದಾರ್ ಸಾಹಬ್ ಆ ಪ್ರಯತ್ನಗಳನ್ನು ಸೋಲಿಸಿದರು ಮತ್ತು ಅವರು ಅಖಂಡ ಭಾರತವನ್ನು ರಚಿಸಲು ಸಂಕಲ್ಪ ಮಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ 75ನೇ ವರ್ಷವನ್ನು ಆಜಾದಿ ಕಾ ಅಮೃತ ಮಹೋತ್ಸವವನ್ನಾಗಿ ಆಚರಿಸಲು ಪ್ರಧಾನಮಂತ್ರಿಯವರು ನಿರ್ಧರಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಲು, 15 ಆಗಸ್ಟ್ 1947 ರಿಂದ ಇಲ್ಲಿಯವರೆಗೆ ನಾವು ಹಲವಾರು ಸಾಧನೆಗಳು, ಗೆಲುವುಗಳು, ಹೋರಾಟಗಳು ಮತ್ತು ತ್ಯಾಗಗಳನ್ನು ಹೊಂದಿದ್ದೇವೆ ಮತ್ತು ಅವುಗಳನ್ನು ಹೇಗೆ ಮುಂದುವರಿಸಬೇಕೆಂದು ನಾವು ನಿರ್ಧರಿಸಬೇಕು. ಮತ್ತೊಂದೆಡೆ, 1857 ರಿಂದ 1947 ರವರೆಗೆ ನಾವು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ, ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದವು, ಅನೇಕ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸಬೇಕು, ಅವರನ್ನು ಸ್ಮರಿಸಬೇಕು ಮತ್ತು ಅವರ ತ್ಯಾಗ ಮನೋಭಾವದಿಂದ ಸ್ಫೂರ್ತಿ ಪಡೆಯಬೇಕು. ಯುವಜನತೆ ರಾಷ್ಟ್ರ ನಿರ್ಮಾಣದಲ್ಲಿ ಮುಂದೆ ಬರಬೇಕಿದೆ ಎಂದರು. ಇಂದು ಸರ್ದಾರ್ ಪಟೇಲ್ ಅವರ ಜನ್ಮದಿನವಾಗಿದ್ದು, ಶತಮಾನದಲ್ಲೊಬ್ಬ ಸರ್ದಾರ್ ಇರುತ್ತಾನೆ ಮತ್ತು ಆ ಒಬ್ಬ ಸರ್ದಾರ್ ಶತಮಾನಗಳ ಕಾಲ ಬೆಳಕಾಗುತ್ತಾನೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಸರ್ದಾರ್ ಸಾಹಬ್ ನೀಡಿದ ಸ್ಫೂರ್ತಿ ನಮ್ಮ ದೇಶವನ್ನು ಅಖಂಡವಾಗಿ ಇರಿಸಿದೆ ಮತ್ತು ಅವರ ಸ್ಫೂರ್ತಿ ದೇಶವನ್ನು ಮುನ್ನಡೆಸಲು ನಮ್ಮನ್ನು ಒಗ್ಗೂಡಿಸುತ್ತಿದೆ ಎಂದು ಹೇಳಿದರು.

ಕೆವಾಡಿಯಾ ಎಂಬುದು ಕೇವಲ ಸ್ಥಳದ ಹೆಸರಲ್ಲ, ಇದು ರಾಷ್ಟ್ರೀಯ ಏಕತೆ, ಸಮಗ್ರತೆ, ದೇಶಭಕ್ತಿಯ ತೀರ್ಥಕ್ಷೇತ್ರವಾಗಿದೆ ಮತ್ತು ಸರ್ದಾರ್ ಸಾಹಬ್ ಅವರ ಈ ಬೃಹತ್ ಪ್ರತಿಮೆಯು ಭಾರತದ ಭವಿಷ್ಯವು ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು..

ಸರ್ದಾರ್ ಸಾಹಬ್ ಅವರ ಜೀವನ ನಮಗೆಲ್ಲರಿಗೂ ವಿಶೇಷವಾಗಿ ಮಕ್ಕಳು ಮತ್ತು ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸರ್ದಾರ್ ಸಾಹಬ್ ಬಡ ರೈತ ಕುಟುಂಬದಲ್ಲಿ ಜನಿಸಿದರು ಮತ್ತು ಶಿಕ್ಷಣವನ್ನು ಮುಗಿಸಿ ಬ್ಯಾರಿಸ್ಟರ್ ಆಗಿದ್ದಾಗ ಅವರು ತಮ್ಮ ವೃತ್ತಿಜೀವನವನ್ನು ತೊರೆದರು ಮತ್ತು ಗಾಂಧೀಜಿಯವರ ಕರೆಯ ಮೇರೆಗೆ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ದೇಶವು ಸ್ವತಂತ್ರವಾದಾಗ, ಬ್ರಿಟಿಷರು ಅನೇಕ ಬಿಕ್ಕಟ್ಟುಗಳೊಂದಿಗೆ ಭಾರತವನ್ನು ತೊರೆದರು. ಒಂದು ಕಡೆ ವಿಭಜನೆಯ ಬಿಕ್ಕಟ್ಟು ಇತ್ತು, ಹೊಸ ಆಡಳಿತ ವ್ಯವಸ್ಥೆಯನ್ನು ರಚಿಸುವ  ಪ್ರಶ್ನೆ ಇತ್ತು, ಹೊಸ ಸಂವಿಧಾನವನ್ನು ರೂಪಿಸಬೇಕಿತ್ತು ಮತ್ತು ಭಾರತದ ಒಕ್ಕೂಟದಲ್ಲಿ 500 ಕ್ಕೂ ಹೆಚ್ಚು ರಾಜಪ್ರಭುತ್ವಗಳನ್ನು ಸೇರಿಸುವ ದೊಡ್ಡ ಸವಾಲಿತ್ತು. ಸರ್ದಾರ್ ಸಾಹಬ್ ತಮ್ಮ ಆರೋಗ್ಯ ಹದಗೆಟ್ಟಿದ್ದರೂ ಈ ಕೆಲಸವನ್ನು ಪೂರ್ಣಗೊಳಿಸಿದರು ಮತ್ತು ಸರ್ದಾರ್ ಪಟೇಲ್ ಅವರು ಸ್ವತಂತ್ರ ಭಾರತವು ಅನೇಕ ಭಾಗಗಳಾಗಿ ಛಿದ್ರವಾಗುತ್ತದೆ ಎಂದು ಭಾವಿಸಿದವರ ಉದ್ದೇಶವನ್ನು ಸೋಲಿಸಿ ಅಖಂಡ ಭಾರತವನ್ನು ನಿರ್ಮಿಸಿದರು. ಸರ್ದಾರ್ ಸಾಹಬ್ ಅವರ ಜೀವನ, ಅವರ ವ್ಯಕ್ತಿತ್ವ ಯಾವಾಗಲೂ ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತದೆ. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ರೈತರ ಪರ ದನಿ ಎತ್ತಿದರು, ಸಹಕಾರಿ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು ಮತ್ತು ಸ್ವಾತಂತ್ರ್ಯ ಚಳವಳಿಯ ಪ್ರಾಯೋಗಿಕ ಭಾಗವನ್ನು ಮುನ್ನಡೆಸಿದರು. ಯಾವುದೇ ವಿಷಯವನ್ನು ವ್ಯಕ್ತಪಡಿಸಲು ಅವರು ಎಂದಿಗೂ ಹಿಂಜರಿಯಲಿಲ್ಲ. ಇಂದು ನಾವು ನೋಡುತ್ತಿರುವ ಅಖಂಡ ಭಾರತವು ಸರ್ದಾರ್ ಸಾಹಬ್ ಅವರ ಕಾರ್ಯಗಳಿಂದ ಆಗಿರುವುದು ಎಂದು ಅವರು ಹೇಳಿದರು.

ರಾಜರ ಅಧೀನದಲ್ಲಿದ್ದ ರಾಜ್ಯಗಳನ್ನು ಭಾರತ ಒಕ್ಕೂಟದೊಂದಿಗೆ ವಿಲೀನಗೊಳಿಸುವಾಗ, ಸರ್ದಾರ್ ಸಾಹಬ್ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಆದರೂ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದರು. ಭಾರತದೊಂದಿಗೆ ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸುವುದರೊಂದಿಗೆ ದೇಶದ ಮತ್ತೊಂದು ಭಾಗವಾದ 'ಲಕ್ಷದ್ವೀಪ'ಕ್ಕೆ ಭಾರತೀಯ ನೌಕಾಪಡೆಯನ್ನು ಸರಿಯಾದ ಸಮಯದಲ್ಲಿ  ಕಳುಹಿಸಿದ ಸರ್ದಾರ್ ಪಟೇಲ್ ಅದನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡಿದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಸ್ವಾತಂತ್ರ್ಯದ ನಂತರ ಸರ್ದಾರ್ ಸಾಹಬ್ ಭಾರತವನ್ನು ಒಂದುಗೂಡಿಸಿದರು, ಆದರೆ ದುರದೃಷ್ಟವಶಾತ್ ಸರ್ದಾರ್ ಸಾಹಿಬ್ ಅವರನ್ನು ಮರೆಯುವ ಪ್ರಯತ್ನಗಳು ನಡೆದವು ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ವಾತಂತ್ರ್ಯದ ನಂತರ, ಅವರ ಕೊಡುಗೆಗೆ ಸೂಕ್ತ ಗೌರವ ಮತ್ತು ಸ್ಥಾನಮಾನ ಸಿಗಲಿಲ್ಲ. ಅವರಿಗೆ ಭಾರತ ರತ್ನ ಅಥವಾ ಸೂಕ್ತ ಗೌರವವನ್ನು ನೀಡಲಿಲ್ಲ. ಆದರೆ ಮೋಡಗಳು ಸೂರ್ಯನನ್ನು ಎಷ್ಟು ಸಮಯದವರೆಗೆ ಮುಚ್ಚಿಡಬಹುದು? ಪರಿಸ್ಥಿತಿ ಬದಲಾಗಿದೆ, ದೇಶ ಬದಲಾಗಿದೆ ಮತ್ತು ಇಂದು ಸರ್ದಾರ್ ಸಾಹಬ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿದೆ ಮತ್ತು ವಿಶ್ವದ ಅತಿ ಎತ್ತರದ ಪ್ರತಿಮೆ ನಮ್ಮೆಲ್ಲರ ಮುಂದಿದೆ. ಭಾರತದ ಏಕತೆಯನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ, ಭಾರತದ ಅಖಂಡತೆಗೆ ಭಂಗ ತರಲು ಯಾರಿಂದಲೂ ಸಾಧ್ಯವಿಲ್ಲ ಮತ್ತು ನಮ್ಮ ದೇಶದ ಸಾರ್ವಭೌಮತ್ವವನ್ನು ಯಾರೂ ಹಾಳುಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಏಕತಾ ಪ್ರತಿಮೆ ಜಗತ್ತಿಗೆ ಸಾರಿದೆ. ಈ 182 ಮೀಟರ್ ಎತ್ತರದ ಏಕತಾ ಪ್ರತಿಮೆಯು ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಎತ್ತರವಾಗಿದೆ. ಪ್ರಧಾನಮಂತ್ರಿ ಮತ್ತು ಗುಜರಾತ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಿದಾಗ, ಸರ್ದಾರ್ ಸಾಹಬ್ ಅವರ ಕಾರ್ಯ ವಿಧಾನಕ್ಕೆ ಅನುಗುಣವಾಗಿ ಏಕತಾ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಹೇಳಿದ್ದರು. ಅವರು ತಮ್ಮ ಇಡೀ ಜೀವನವನ್ನು ರೈತರ ಪರಧ್ವನಿ ಎತ್ತುವಲ್ಲಿ ಕಳೆದರು, ಬ್ರಿಟಿಷರ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಅನೇಕ ರೈತ ಸತ್ಯಾಗ್ರಹಗಳನ್ನು ನಡೆಸಿದರು. ಬಾರ್ಡೋಲಿ ಸತ್ಯಾಗ್ರಹದಿಂದಾಗಿ ಅವರು ಸರ್ದಾರ್ ಎಂಬ ಬಿರುದನ್ನು ಪಡೆದರು. ದೇಶಾದ್ಯಂತ ರೈತರು ಬಳಸುವ ಉಪಕರಣಗಳಿಂದ ಕಬ್ಬಿಣವನ್ನು ಸಂಗ್ರಹಿಸಿ ಸರ್ದಾರ್ ಸಾಹಬ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸುವ ಕಲ್ಪನೆಯನ್ನು ಶ್ರೀ ನರೇಂದ್ರ ಮೋದಿಯವರು ರೂಪಿಸಿದರು. ಪ್ರತಿಮೆಯನ್ನು ನಿರ್ಮಿಸಲು ಬಳಿಸಿದ ಕಬ್ಬಿಣವು ದೇಶಾದ್ಯಂತ ಕೋಟ್ಯಂತರ ರೈತರು ಬಳಸಿದ ನೇಗಿಲು ಅಥವಾ ಇತರ ಯಾವುದೇ ಕೃಷಿ ಉಪಕರಣವನ್ನು ಕರಗಿಸಿ ತಯಾರಿಸಲ್ಪಟ್ಟಿದೆ ಮತ್ತು ಇದು ಸರ್ದಾರ್ ಸಾಹಬ್ ಅವರಿಗೆ ನಿಜವಾದ ಗೌರವವಾಗಿದೆ ಎಂದರು.

135 ಮೀಟರ್ ಎತ್ತರದಲ್ಲಿ ಸಂದರ್ಶಕರ ಗ್ಯಾಲರಿ ಇದ್ದು, 200 ಜನರು ರುದ್ರರಮಣೀಯ ನೋಟವನ್ನು ಆನಂದಿಸಬಹುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕೇವಲ 46 ತಿಂಗಳಲ್ಲಿ ಪ್ರತಿಮೆಯ ನಿರ್ಮಾಣ ಪೂರ್ಣಗೊಂಡಿದೆ. 70,000 ಮೆಟ್ರಿಕ್ ಟನ್ ಸಿಮೆಂಟ್, 6 ಸಾವಿರ ಮೆಟ್ರಿಕ್ ಟನ್ ಸ್ಟ್ರಕ್ಚರಲ್ ಸ್ಟೀಲ್ ಮತ್ತು 18,500 ಮೆಟ್ರಿಕ್ ಟನ್ ಬಲವರ್ಧನೆಯ ಬಾರ್‌ಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು.

ಸರ್ದಾರ್ ಸರೋವರ ಅಣೆಕಟ್ಟಿನಿಂದ 3.5 ಕಿಮೀ ದೂರದಲ್ಲಿರುವ ಸುಂದರವಾದ ಸ್ಥಳದಲ್ಲಿ ಏಕತಾ ಪ್ರತಿಮೆಯನ್ನು ನಿರ್ಮಿಸಲಾಗಿದೆ. ದೇಶದ ಯುವಕರು ನಮ್ಮ ದೇಶದ ಏಕತೆಯ ತೀರ್ಥಕ್ಷೇತ್ರವಾದ ಈ ತಾಣಕ್ಕೆ ಒಮ್ಮೆ ಭೇಟಿ ನೀಡಬೇಕು. ಅವರು ಇಲ್ಲಿ ಪಡೆಯುವ ಅರಿವು ಮತ್ತು ಶಕ್ತಿಯು ದೇಶಕ್ಕಾಗಿ ಕೆಲಸ ಮಾಡಲು ಅವರನ್ನು ಪ್ರೇರೇಪಿಸುತ್ತದೆ ಎಂದರು. ಉದ್ಘಾಟನೆಯಾದ 30 ತಿಂಗಳೊಳಗೆ 50 ಲಕ್ಷ ಜನರು ಪ್ರತಿಮೆಗೆ ಭೇಟಿ ನೀಡಿದ್ದಾರೆ. ಇಂದು 15 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಪ್ರತಿದಿನ ಭೇಟಿ ನೀಡಿ ಸರ್ದಾರ್ ಸಾಹಿಬ್‌ಗೆ ಗೌರವ ಸಲ್ಲಿಸುತ್ತಿದ್ದಾರೆ. ಈ ಸ್ಥಳವು ನಮ್ಮ ಪ್ರಧಾನಮಂತ್ರಿಯವರ ದೂರದೃಷ್ಟಿಯ ಫಲವಾಗಿದೆ ಮತ್ತು ಮುಂದಿನ ಪೀಳಿಗೆಗಳು ದೇಶದ ಏಕತೆಯನ್ನು ಕಾಪಾಡಿಕೊಳ್ಳಲು ಇದರಿಂದ ಸ್ಫೂರ್ತಿ ಪಡೆಯಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು.

ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ 2014 ರಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ, ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಸರ್ದಾರ್ ಪಟೇಲ್ ಅವರ ಹೋರಾಟ ಮತ್ತು ನಂತರ ದೇಶವನ್ನು ಐಕ್ಯವಾಗಿಡಲು ನಮ್ಮ ಯುವ ಪೀಳಿಗೆಗೆ ಸ್ಫೂರ್ತಿ ನೀಡುವಂತೆ ಇದನ್ನು ಮಾಡಲಾಗಿದೆ ಮತ್ತು ಸಾರ್ವಜನಿಕರ ಸಹಕಾರದಿಂದ ನಿರ್ಮಿಸಲಾದ ಈ ಪ್ರತಿಮೆಯು ಸಹಕಾರದ ಸಂಕೇತವಾಗಿದೆ. ನಮ್ಮ ಏಕತೆಯನ್ನು ಪ್ರದರ್ಶಿಸುವ ಏಕತತಾ ಓಟವೂ ಅದೇ ದಿನ ಪ್ರಾರಂಭವಾಗುತ್ತದೆ ಮತ್ತು ಎಲ್ಲರೂ ರಾಷ್ಟ್ರೀಯ ಏಕತಾ ಓಟದಲ್ಲಿ ಭಾಗವಹಿಸುತ್ತಾರೆ ಎಂದು ಶ್ರೀ ಶಾ ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ವರ್ಷವು ನಮಗೆಲ್ಲರಿಗೂ ಮುಖ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಾವು ನಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಪಡಬೇಕು, ಆದರೆ ಅದೇ ಸಮಯದಲ್ಲಿ, 100 ವರ್ಷಗಳ ನಂತರ ದೇಶ ಎಲ್ಲಿರಬೇಕು ಎಂಬ ಸಂಕಲ್ಪವನ್ನು ಇಂದಿನ ಪೀಳಿಗೆ ಮಾಡಬೇಕು. ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಂಡಾಗ, ದೇಶ ಎಲ್ಲಿರಬೇಕು ಎಂಬ ನಿರ್ಧಾರ ಮತ್ತು ನಿರ್ಣಯವನ್ನು ನಮ್ಮ ದೇಶದ ಜನರು, ವಿಶೇಷವಾಗಿ ಯುವ ಪೀಳಿಗೆ ಮಾಡಬೇಕು ಎಂದು ಶ್ರೀ ಶಾ ಹೇಳಿದರು. ಪ್ರತಿಯೊಬ್ಬರು ಒಂದು ಸಂಕಲ್ಪವನ್ನು ಕೈಗೊಂಡು ಅದನ್ನು ಜೀವನದುದ್ದಕ್ಕೂ ಅನುಸರಿಸಿದರೆ ದೇಶವು ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ರೋಮಾಂಚಕ, ಅಭಿವೃದ್ಧಿ ಹೊಂದಿದ, ಸಮೃದ್ಧ, ಸುರಕ್ಷಿತ, ಸುಸಂಸ್ಕೃತ ಮತ್ತು ವಿದ್ಯಾವಂತ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ನಮ್ಮ ಮುಂದಿಟ್ಟಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಂಕಲ್ಪವನ್ನು ಈಡೇರಿಸಲು, ನಾವು ಆಜಾದಿ ಕಾ ಅಮೃತ ಮಹೋತ್ಸವದ ವರ್ಷವನ್ನು ಸಂಕಲ್ಪದ ವರ್ಷವಾಗಿ ಆಚರಿಸಬೇಕು. ನಾವೆಲ್ಲರೂ ನಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಕೈಗೊಳ್ಳಬೇಕು. ಒಂದು ವೇಳೆ ಮಗು ಒಂದು ಕಾಳು ಆಹಾರವನ್ನು ವ್ಯರ್ಥ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ ಮತ್ತು 12 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನ್ನ ಜೀವನದುದ್ದಕ್ಕೂ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ನಿರ್ಧರಿಸಿದರೆ ಎಷ್ಟು ಬದಲಾವಣೆಗಳಾಗುತ್ತವೆ ಊಹಿಸಿ ಎಂದು ಅವರು ಹೇಳಿದರು. ಇದರಿಂದ ದೇಶಕ್ಕೆ ಅನುಕೂಲವಾಗಲಿದೆ. 130 ಕೋಟಿ ಜನರು ಈ ರೀತಿ ಸಂಕಲ್ಪ ಕೈಗೊಂಡರೆ 130 ಕೋಟಿ ಸಂಕಲ್ಪಗಳು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಖಂಡಿತವಾಗಿಯೂ ಸಾಧ್ಯವಾಗುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು ಅನೇಕ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದಿದ್ದಾರೆ ಎಂದು ಶ್ರೀ ಶಾ ಹೇಳಿದರು. ಶ್ರೀ ಮೋದಿಯವರು ರಾಷ್ಟ್ರೀಯ ಭದ್ರತೆ, ಆರ್ಥಿಕ ಸುಧಾರಣೆಗಳು, ಸ್ವಾವಲಂಬನೆ ಮತ್ತು ಮೇಕ್ ಇನ್ ಇಂಡಿಯಾ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಉಪಕ್ರಮಗಳನ್ನು ಕೈಗೊಂಡಿದ್ದಾರೆ. 7 ವರ್ಷಗಳಲ್ಲಿ, ಸರ್ದಾರ್ ಪಟೇಲ್ ಅವರು ಕಲ್ಪಿಸಿದ ಅನನ್ಯ ಭಾರತವನ್ನು ನಿರ್ಮಿಸುವ ಆಶಯವು ದೇಶದ 130 ಕೋಟಿ ಜನರನ್ನು ವಿಶೇಷವಾಗಿ ದೇಶದ 60 ಕೋಟಿ ಬಡ ಜನರ ಮನಸ್ಸನ್ನು ಜಾಗೃತಗೊಳಿಸಿದೆ. ದೇಶದ 60 ಕೋಟಿ ಬಡವರಿಗೆ ಈ 7 ವರ್ಷಗಳನ್ನು ಮೀಸಲಿಡಲಾಗಿದೆ ಎಂದರು. ಈ 7 ವರ್ಷಗಳಲ್ಲಿ ದೇಶದ 60 ಕೋಟಿ ಬಡವರನ್ನು ಭಾರತದ ಆಂದೋಲನದಲ್ಲಿ ಜೋಡಿಸಲು ಶ್ರೀ ಮೋದಿ ಪ್ರಯತ್ನಿಸಿದ್ದಾರೆ. ಸ್ವಾತಂತ್ರ್ಯದ 70 ವರ್ಷಗಳವರೆಗೆ, ದೇಶದ ಕೋಟಿಗಟ್ಟಲೆ ಬಡ ನಾಗರಿಕರು ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ. 7 ವರ್ಷಗಳಲ್ಲಿ, ಮೋದಿಯವರು ಅವರಿಗೆ ವಿದ್ಯುತ್, ಶೌಚಾಲಯ, ಗ್ಯಾಸ್ ಸಿಲಿಂಡರ್ ಮತ್ತು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್‌ನಂತಹ ಅನೇಕ ಯೋಜನೆಗಳ ಪ್ರಯೋಜನವನ್ನು ಒದಗಿಸಿದ್ದಾರೆ. 2022 ರ ವೇಳೆಗೆ ಪ್ರತಿ ಮನೆಗೆ ನಲ್ಲಿಯಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾರ್ಯವನ್ನು ಪ್ರಧಾನ ಮಂತ್ರಿಗಳು ಕೈಗೆತ್ತಿಕೊಂಡಿದ್ದಾರೆ. ಈಗ ದೇಶದ 60 ಕೋಟಿ ಬಡವರು ದೇಶದ ಅಭಿವೃದ್ಧಿಯ ಪಯಣದ ಭಾಗವಾಗಿದ್ದಾರೆ ಮತ್ತು ಅವರು ರಾಷ್ಟ್ರಕ್ಕೆ ಕೊಡುಗೆ ನೀಡುತ್ತಿದ್ದಾರೆ. 60 ಕೋಟಿ ಬಡವರು ಸೇರಿದಂತೆ 130 ಕೋಟಿ ನಾಗರಿಕರನ್ನು ದೇಶದ ಅಭಿವೃದ್ಧಿ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಪಯಣದೊಂದಿಗೆ ಸಂಪರ್ಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಕೆಲಸವು ನಮ್ಮ ‘ಉಕ್ಕಿನ ಮನುಷ್ಯ’ ಸರ್ದಾರ್ ಪಟೇಲ್ ಅವರ ಕನಸನ್ನು ಖಂಡಿತವಾಗಿಯೂ ನನಸಾಗಿಸುತ್ತದೆ ಇದರಿಂದ ಭಾರತಕ್ಕೆ ವಿಶ್ವದಲ್ಲಿ ಸೂಕ್ತ ಸ್ಥಾನ ಸಿಗಲಿದೆ ಎಂದು ಅವರು ಹೇಳಿದರು.

ಶ್ರೀ ಮೋದಿಯವರು ಟ್ರಿಲಿಯನ್ ಡಾಲರ್ ಆರ್ಥಿಕತೆ, ಹೊಸ ಶಿಕ್ಷಣ ನೀತಿಯ ಮೂಲಕ ಸುರಕ್ಷಿತ ಮತ್ತು ಸುಶಿಕ್ಷಿತ ಭಾರತದ ಗುರಿಯನ್ನು ಹೊಂದಿದ್ದಾರೆ, ಜೊತೆಗೆ ನಮ್ಮ ಭಾಷೆಗಳಿಗೆ ಹೆಮ್ಮೆ ತರುವ  ಗುರಿಯನ್ನು ಹೊಂದಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. ಇಂದು ನಮ್ಮೆಲ್ಲರಿಗೂ ಅತ್ಯಂತ ಮಹತ್ವದ ದಿನವಾಗಿದೆ. ಇಂದು, ನಮ್ಮ ಸ್ವಾತಂತ್ರ್ಯದ 75 ನೇ ವರ್ಷದ ರಾಷ್ಟ್ರೀಯ ಏಕತಾ ದಿನದಂದು, ನಾವು ನಮ್ಮ ಜೀವನದಲ್ಲಿ ಸರ್ದಾರ್ ಪಟೇಲ್ ಅವರ ಮಾರ್ಗವನ್ನು ಅನುಸರಿಸುತ್ತೇವೆ ಮತ್ತು ರಾಷ್ಟ್ರವನ್ನು ಸದೃಢವಾಗಿ ಮತ್ತು ಸರ್ದಾರ್ ಪಟೇಲ್ ಅವರ ಕನಸುಗಳ ದೇಶವಾಗಿ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ಶ್ರೀ ಅಮಿತ್ ಶಾ ಹೇಳಿದರು.

**


(Release ID: 1768457) Visitor Counter : 763