ಪ್ರಧಾನ ಮಂತ್ರಿಯವರ ಕಛೇರಿ

ವಾರಣಾಸಿಯಲ್ಲಿ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಮಿಷನ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 25 OCT 2021 5:41PM by PIB Bengaluru

ಹರ ಹರ ಮಹಾದೇವ್!
ನಾನು ನಿಮ್ಮ ಅನುಮತಿಯೊಂದಿಗೆ ಪ್ರಾರಂಭಿಸಬಹುದೇ! ಹರಹರ ಮಹಾದೇವ, ಬಾಬಾ ವಿಶ್ವನಾಥ್ ಮತ್ತು ತಾಯಿ ಅನ್ನಪೂರ್ಣ ಅವರ ಪುಣ್ಯಭೂಮಿಯಾದ ಕಾಶಿಯ ಎಲ್ಲಾ ಸಹೋದರ ಸಹೋದರಿಯರಿಗೆ ನಮಸ್ಕಾರಗಳು!  ನಿಮಗೆಲ್ಲರಿಗೂ ದೀಪಾವಳಿ, ದೇವ್ ದೀಪಾವಳಿ, ಅನ್ನಕೂಟ, ಭಾಯಿ ದುಜ್, ಪ್ರಕಾಶೋತ್ಸವ ಮತ್ತು ಛತ್ ಶುಭಾಶಯಗಳು!
ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜಿ, ಯುಪಿಯ ಹುರುಪಿನ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಜಿ, ಯುಪಿ ಸರ್ಕಾರದ ಇತರ ಸಚಿವರು, ಕೇಂದ್ರದ ನಮ್ಮ ಸಹೋದ್ಯೋಗಿ ಮಹೇಂದ್ರ ನಾಥ್ ಪಾಂಡೆ ಜಿ, ರಾಜ್ಯ ಸಚಿವರಾದ ಅನಿಲ್ ರಾಜಭಾರ್ ಜಿ, ನೀಲಕಂಠ ತಿವಾರಿ ಜಿ, ರವೀಂದ್ರ ಜೈಸ್ವಾಲ್ ಜಿ , ಇತರ ಮಂತ್ರಿಗಳು, ಸಂಸತ್ತಿನ ನಮ್ಮ ಸಹೋದ್ಯೋಗಿಗಳು ಶ್ರೀಮತಿ ಸೀಮಾ ದ್ವಿವೇದಿ ಜಿ ಮತ್ತು ಬಿ.ಪಿ. ಸರೋಜ್ ಜಿ, ವಾರಣಾಸಿಯ ಮೇಯರ್ ಶ್ರೀಮತಿ ಮೃದುಲಾ ಜೈಸ್ವಾಲ್ ಜಿ, ಇತರ ಸಾರ್ವಜನಿಕ ಪ್ರತಿನಿಧಿಗಳು, ದೇಶಾದ್ಯಂತದ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಸಂಬಂಧಿಸಿದ ಆರೋಗ್ಯ ವೃತ್ತಿಪರರು ಮತ್ತು ಬನಾರಸ್‌ನ ನನ್ನ ಸಹೋದರ ಸಹೋದರಿಯರೇ.
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ದೇಶವು 100 ಕೋಟಿ ಲಸಿಕೆ ಡೋಸ್‌ಗಳ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಬಾಬಾ ವಿಶ್ವನಾಥರ ಆಶೀರ್ವಾದ, ಗಂಗೆಯ ಅಚಲ ಮಹಿಮೆ ಹಾಗೂ ಕಾಶಿಯ ಜನರ ಅಚಲವಾದ ನಂಬಿಕೆಯಿಂದ ಎಲ್ಲರಿಗೂ ಉಚಿತ ಲಸಿಕೆ ಎಂಬ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ.  ನಾನು ನಿಮ್ಮೆಲ್ಲರನ್ನು ಗೌರವಪೂರ್ವಕವಾಗಿ ಅಭಿನಂದಿಸುತ್ತೇನೆ. ಸ್ವಲ್ಪ ಸಮಯದ ಹಿಂದೆ, ಉತ್ತರ ಪ್ರದೇಶಕ್ಕೆ ಒಂಬತ್ತು ಹೊಸ ವೈದ್ಯಕೀಯ ಕಾಲೇಜುಗಳನ್ನು ಅರ್ಪಿಸುವ ಅವಕಾಶ ನನಗೆ ಸಿಕ್ಕಿತು. ಇದು ಪೂರ್ವಾಂಚಲ್ ಮತ್ತು ಇಡೀ ಯುಪಿಯ ಕೋಟ್ಯಂತರ ಬಡವರು, ದಲಿತ-ಹಿಂದುಳಿದ-ಶೋಷಿತರು, ಸಮಾಜದ ಎಲ್ಲಾ ವರ್ಗಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಮತ್ತು ಇತರ ನಗರಗಳಲ್ಲಿನ ದೊಡ್ಡ ಆಸ್ಪತ್ರೆಗಳಿಗೆ ಭೇಟಿ ನೀಡುವ ತೊಂದರೆಗಳಿಂದ ಅವರು ಮುಕ್ತರಾಗುತ್ತಾರೆ .
ಸ್ನೇಹಿತರೇ,
ಒಂದು ಪದ್ಯವಿದೆ:
ಮುಕ್ತಿ ಜನ್ಮ ಮಹಿ ಜಾನಿ,ಜ್ಞಾನ ಖಾನಿಅಘ ಹಾನಿ ಕರ್.
ಜಹಂ ಬಸ್ ಸಂಭು ಭವಾನಿ,ಸೋ ಕಾಸಿ ಸೇಯ ಕಸ್ ನ.
ಅಂದರೆ ಶಿವ ಮತ್ತು ಶಕ್ತಿ ಕಾಶಿಯಲ್ಲಿ ನೆಲೆಸಿದ್ದಾರೆ. ಜ್ಞಾನದ ಶಕ್ತಿಕೇಂದ್ರವಾದ ಕಾಶಿ ನಮ್ಮನ್ನು ನೋವು ಮತ್ತು ಸಂಕಟ ಎರಡರಿಂದಲೂ ಮುಕ್ತಿ ಕೊಡುತ್ತದೆ. ಹಾಗಾದರೆ ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಮಹಾ ಯೋಜನೆ ಹಾಗೂ ರೋಗಗಳು ಮತ್ತು ಸಂಕಟಗಳನ್ನು ತೊಡೆದುಹಾಕಲು ಅಂತಹ ಬೃಹತ್ ಸಂಕಲ್ಪವನ್ನು ಪ್ರಾರಂಭಿಸಲು ಕಾಶಿಗಿಂತ ಉತ್ತಮ ಸ್ಥಳ ಯಾವುದು? ಕಾಶಿಯ ನನ್ನ ಸಹೋದರ ಸಹೋದರಿಯರೇ, ಈ ವೇದಿಕೆಯಿಂದ ಎರಡು ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲನೆಯದಾಗಿ,  64,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಭಾರತೀಯ ಸರ್ಕಾರದ ಯೋಜನೆಯನ್ನು ಇಡೀ ದೇಶಕ್ಕಾಗಿ ಇಂದು ಪವಿತ್ರ ಭೂಮಿ ಕಾಶಿಯಿಂದ ಪ್ರಾರಂಭಿಸಲಾಗುತ್ತಿದೆ. ಎರಡನೆಯದಾಗಿ, ಕಾಶಿ ಮತ್ತು ಪೂರ್ವಾಂಚಲದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಉದ್ಘಾಟನೆಯಾಗುತ್ತಿವೆ. ಮತ್ತು ನಾವು ಈ ಎರಡೂ ಯೋಜನೆಗಳನ್ನು ಸೇರಿಸಿದರೆ, ಸುಮಾರು 75,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ ಅಥವಾ ಸಮರ್ಪಿಸಲಾಗುತ್ತಿದೆ ಎಂದು ನಾನು ಹೇಳಬಲ್ಲೆ. ಕಾಶಿಯಿಂದ ಆರಂಭವಾಗುತ್ತಿರುವ ಈ ಯೋಜನೆಗಳಲ್ಲಿ ಮಹಾದೇವನ ಆಶೀರ್ವಾದವೂ ಇದೆ. ಮತ್ತು ಎಲ್ಲಿ ಮಹಾದೇವನ ಆಶೀರ್ವಾದವಿದೆಯೋ ಅಲ್ಲಿ ಯೋಗಕ್ಷೇಮ ಮತ್ತು ಯಶಸ್ಸು ಖಚಿತ. ಮತ್ತು ಮಹಾದೇವನ ಆಶೀರ್ವಾದ ಇದ್ದಾಗ, ದುಃಖದಿಂದ ಮುಕ್ತಿಯೂ ನಿಶ್ಚಯ.
ಸ್ನೇಹಿತರೇ,
ಯುಪಿ ಸೇರಿದಂತೆ ಇಡೀ ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು, ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ನಮ್ಮನ್ನು ಉತ್ತಮವಾಗಿ ಸಿದ್ಧಪಡಿಸಲು ಮತ್ತು ಗ್ರಾಮ ಮತ್ತು ಬ್ಲಾಕ್ ಮಟ್ಟದವರೆಗೆ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನುತರಲು 64,000 ಕೋಟಿ ರೂಪಾಯಿ ಮೌಲ್ಯದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಮಿಷನ್ (ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್) ಅನ್ನು ಕಾಶಿಯಿಂದ ರಾಷ್ಟ್ರಕ್ಕೆ ಅರ್ಪಿಸುವ ಅವಕಾಶ  ನನಗೆ ಸಿಕ್ಕಿತು. ಇಂದು ಕಾಶಿಗೆ 5,000 ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳೂ ಉದ್ಘಾಟನೆಗೊಂಡಿವೆ. ಇದು ಘಾಟ್‌ಗಳ ಸುಂದರೀಕರಣ, ಗಂಗಾ ಮತ್ತು ವರುಣಾ ನದಿಗಳ ಸ್ವಚ್ಛತೆ, ಸೇತುವೆಗಳು, ವಾಹನ ನಿಲುಗಡೆ ಸ್ಥಳಗಳು ಮತ್ತು ಬಿ ಎಚ್‌ ಯು  ನಲ್ಲಿನ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ.  ಜೀವನವನ್ನು ಸುಲಭ, ಆರೋಗ್ಯಕರ ಮತ್ತು ಸಮೃದ್ಧಗೊಳಿಸಲು ಕಾಶಿಯಿಂದ ಈ ಹಬ್ಬದ ಋತುವಿನಲ್ಲಿ ಅಭಿವೃದ್ಧಿಯ ಈ ಹಬ್ಬವು ಇಡೀ ದೇಶಕ್ಕೆ ಹೊಸ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಕಾಶಿ ಸೇರಿದಂತೆ ಹಳ್ಳಿಗಳು ಮತ್ತು ನಗರಗಳಲ್ಲಿ ವಾಸಿಸುವ ಎಲ್ಲಾ 130 ಕೋಟಿ ದೇಶವಾಸಿಗಳಿಗೆ ಅನೇಕ ಅಭಿನಂದನೆಗಳು!
ಸಹೋದರ ಸಹೋದರಿಯರೇ,
ನಮ್ಮ ದೇಶದಲ್ಲಿ ಆರೋಗ್ಯವು ಪ್ರತಿಯೊಂದು ಕ್ರಿಯೆಯ ಮೂಲ ಆಧಾರವಾಗಿದೆ. ಆರೋಗ್ಯಕರ ದೇಹಕ್ಕಾಗಿ ಹೂಡಿಕೆ ಮಾಡುವುದು ಯಾವಾಗಲೂ ಉತ್ತಮ ಹೂಡಿಕೆ ಎಂದು ಪರಿಗಣಿಸಲಾಗಿದೆ. ಆದರೆ ಸ್ವಾತಂತ್ರ್ಯ ಬಂದು ಬಹಳ ದಿನಗಳಾದರೂ ಆರೋಗ್ಯ ಸೌಲಭ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ದೇಶದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ಸರ್ಕಾರಗಳು ದೇಶದ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಬದಲು ನಿರ್ಲಕ್ಷಿಸಿವೆ. ಹಳ್ಳಿಗಳಲ್ಲಿ ಒಂದೋ ಆಸ್ಪತ್ರೆ ಇರಲಿಲ್ಲ ಮತ್ತು ಇದ್ದರೆ ಚಿಕಿತ್ಸೆ ನೀಡಲು ಯಾರೂ ಇರಲಿಲ್ಲ. ಬ್ಲಾಕ್ ಮಟ್ಟದ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಯಾವುದೇ ಸೌಲಭ್ಯವಿರಲಿಲ್ಲ. ಪರೀಕ್ಷೆ ನಡೆದರೂ ಅದರ ನಿಖರತೆಯ ಬಗ್ಗೆ ಅನುಮಾನಗಳಿದ್ದವು. ಜಿಲ್ಲಾಸ್ಪತ್ರೆಗೆ ತಲುಪಿದ ನಂತರ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಗಂಭೀರ ಕಾಯಿಲೆ ಇರುವುದು ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆಗೆ ಅಂತಹ ಯಾವುದೇ ಸೌಲಭ್ಯಗಳಿಲ್ಲದ ಕಾರಣ, ಕಿಕ್ಕಿರಿದು ತುಂಬಿರುವ ದೊಡ್ಡ ಆಸ್ಪತ್ರೆಗೆ ಧಾವಿಸಬೇಕಾಗಿತ್ತು ಮತ್ತು ದೀರ್ಘ ಅವಧಿಯವರೆಗೆ ಕಾಯುವಂತಿತ್ತು. ರೋಗಿಯು ಮತ್ತು ಅವರ ಇಡೀ ಕುಟುಂಬವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು ಮತ್ತು ಅದರ ಪರಿಣಾಮವಾಗಿ ಗಂಭೀರ ಅನಾರೋಗ್ಯವು ಉಲ್ಬಣಗೊಳ್ಳುತ್ತದೆ ಮತ್ತು ಬಡವರ ಮೇಲೆ ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ ಎಂಬುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಸ್ನೇಹಿತರೇ,
ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿನ ದೊಡ್ಡ ಅಂತರವು ಚಿಕಿತ್ಸೆಗೆ ಸಂಬಂಧಿಸಿದಂತೆ ಬಡ ಮತ್ತು ಮಧ್ಯಮ ವರ್ಗದವರಲ್ಲಿ ಶಾಶ್ವತವಾದ ಆತಂಕವನ್ನು ಸೃಷ್ಟಿಸಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ದೇಶದ ಈ ಆರೋಗ್ಯ ವ್ಯವಸ್ಥೆಯ ದೋಷಗಳಿಗೆ ಪರಿಹಾರವಾಗಿದೆ. ನಮ್ಮ ಆರೋಗ್ಯ ವ್ಯವಸ್ಥೆಯನ್ನು ಇಂದು ಸಿದ್ಧಪಡಿಸಲಾಗುತ್ತಿದೆ ಇದರಿಂದ ನಾವು  ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾಧ್ಯವಾಗುತ್ತದೆ. ರೋಗವನ್ನು ಮೊದಲೇ ಪತ್ತೆಹಚ್ಚಲು ಮತ್ತು ತಪಾಸಣೆಯಲ್ಲಿ ಯಾವುದೇ ವಿಳಂಬವಾಗದಂತೆ ಪ್ರಯತ್ನಗಳನ್ನು ಮಾಡಲಾಗುತ್ತದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ದೇಶದಲ್ಲಿ ಗ್ರಾಮದಿಂದ ಬ್ಲಾಕ್, ಜಿಲ್ಲೆ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟಕ್ಕೆ ನಿರ್ಣಾಯಕ ಆರೋಗ್ಯ ರಕ್ಷಣೆ ಜಾಲವನ್ನು ಬಲಪಡಿಸುವುದು ಗುರಿಯಾಗಿದೆ. ವಿಶೇಷವಾಗಿ ನಮ್ಮ ಈಶಾನ್ಯ ಮತ್ತು ಉತ್ತರಾಖಂಡ ಮತ್ತು ಹಿಮಾಚಲದಂತಹ ಗುಡ್ಡಗಾಡು ರಾಜ್ಯಗಳ ಮೇಲೆ,  ಆರೋಗ್ಯ ಸೌಲಭ್ಯಗಳ ಕೊರತೆಯಿರುವ ರಾಜ್ಯಗಳ ಮೇಲೆ ವಿಶೇಷ ಗಮನಹರಿಸಲಾಗಿದೆ.
ಸ್ನೇಹಿತರೇ,
ದೇಶದ ಆರೋಗ್ಯ ಕ್ಷೇತ್ರದಲ್ಲಿನ ವಿವಿಧ  ಅಂತರಗಳನ್ನು ಪರಿಹರಿಸಲು ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ನಲ್ಲಿ ಮೂರು ಪ್ರಮುಖ ಅಂಶಗಳಿವೆ. ಮೊದಲನೆಯದು ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವಿಸ್ತಾರವಾದ ಸೌಲಭ್ಯಗಳ ರಚನೆಗೆ ಸಂಬಂಧಿಸಿದೆ. ಇದರ ಅಡಿಯಲ್ಲಿ ಗ್ರಾಮಗಳು ಮತ್ತು ನಗರಗಳಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ,  ಅಲ್ಲಿ ರೋಗಗಳನ್ನು ಮೊದಲೇ ಪತ್ತೆಹಚ್ಚಲು ಸೌಲಭ್ಯಗಳಿವೆ. ಈ ಕೇಂದ್ರಗಳಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ, ಉಚಿತ ಪರೀಕ್ಷೆಗಳು ಮತ್ತು ಉಚಿತ ಔಷಧಿಗಳಂತಹ ಸೌಲಭ್ಯಗಳು ಲಭ್ಯವಿರುತ್ತವೆ. ರೋಗವು ಸಮಯಕ್ಕೆ ಸರಿಯಾಗಿ ಪತ್ತೆಯಾದರೆ, ಅದು ಮಾರಣಾಂತಿಕವಾಗುವ ಸಾಧ್ಯತೆ ಕಡಿಮೆ. 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ 35,000ಕ್ಕೂ ಹೆಚ್ಚು ಹೊಸ ಹಾಸಿಗೆಗಳನ್ನು ಸಿದ್ಧಪಡಿಸಲಾಗುವುದು. ಉಳಿದ 125 ಜಿಲ್ಲೆಗಳಲ್ಲಿ ರೆಫರಲ್ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಷ್ಟ್ರಮಟ್ಟದಲ್ಲಿ 12 ಕೇಂದ್ರೀಯ ಆಸ್ಪತ್ರೆಗಳಲ್ಲಿ ತರಬೇತಿ ಮತ್ತು ಇತರೆ ಸಾಮರ್ಥ್ಯ ವೃದ್ಧಿಗಾಗಿ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಶಸ್ತ್ರಚಿಕಿತ್ಸಾ ಜಾಲವನ್ನು ಬಲಪಡಿಸಲು ರಾಜ್ಯಗಳಲ್ಲಿ 24x7 ಚಾಲನೆಯಲ್ಲಿರುವ 15 ತುರ್ತು ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ಸಹ ರಚಿಸಲಾಗುತ್ತದೆ.
ಸ್ನೇಹಿತರೇ,
ಯೋಜನೆಯ ಎರಡನೇ ಅಂಶವು ರೋಗನಿರ್ಣಯಕ್ಕಾಗಿ ಪರೀಕ್ಷಾ ಜಾಲಕ್ಕೆ ಸಂಬಂಧಿಸಿದೆ. ಈ ಮಿಷನ್ ಅಡಿಯಲ್ಲಿ, ರೋಗನಿರ್ಣಯ ಮತ್ತು ಮೇಲ್ವಿಚಾರಣೆಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು 730 ಜಿಲ್ಲೆಗಳಲ್ಲಿ ಮತ್ತು ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳನ್ನು ದೇಶದಲ್ಲಿ ಗುರುತಿಸಲಾದ 3,500 ಬ್ಲಾಕ್‌ಗಳಲ್ಲಿ ಸ್ಥಾಪಿಸಲಾಗುವುದು. ರೋಗ ನಿಯಂತ್ರಣಕ್ಕಾಗಿ ಐದು ಪ್ರಾದೇಶಿಕ ರಾಷ್ಟ್ರೀಯ ಕೇಂದ್ರಗಳು, 20 ಮೆಟ್ರೋಪಾಲಿಟನ್ ಘಟಕಗಳು ಮತ್ತು 15 ಬಿ ಎಸ್‌ ಎಲ್ ಪ್ರಯೋಗಾಲಯಗಳು ಈ ಜಾಲವನ್ನು ಮತ್ತಷ್ಟು ಬಲಪಡಿಸುತ್ತವೆ.
ಸಹೋದರ ಸಹೋದರಿಯರೇ,
ಈ ಮಿಷನ್ ನ ಮೂರನೇ ಅಂಶವೆಂದರೆ ಸಾಂಕ್ರಾಮಿಕ ಸಂಬಂಧಿತ ಸಂಶೋಧನಾ ಸಂಸ್ಥೆಗಳ ವಿಸ್ತರಣೆ ಮತ್ತು ಸಬಲೀಕರಣ. ಪ್ರಸ್ತುತ, ದೇಶದಲ್ಲಿ 80 ವೈರಲ್ ಡಯಾಗ್ನೋಸ್ಟಿಕ್ಸ್ ಮತ್ತು ರಿಸರ್ಚ್ ಲ್ಯಾಬ್‌ಗಳಿವೆ. ಇವುಗಳನ್ನು ಮತ್ತಷ್ಟು ಸುಧಾರಿಸಲಾಗುವುದು. ಸಾಂಕ್ರಾಮಿಕ ರೋಗಗಳಲ್ಲಿ ಜೈವಿಕ ಸುರಕ್ಷತಾ ಹಂತ-3 ಪ್ರಯೋಗಾಲಯಗಳ‌ ಅಗತ್ಯವಿದೆ. ಆದ್ದರಿಂದ, ಅಂತಹ 15 ಹೊಸ ಪ್ರಯೋಗಾಲಯಗಳನ್ನು ಕಾರ್ಯಗತಗೊಳಿಸಲಾಗುವುದು. ಇದಲ್ಲದೆ, ದೇಶದಲ್ಲಿ ನಾಲ್ಕು ಹೊಸ ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳು ಮತ್ತು ʼಒಂದು ಆರೋಗ್ಯಕ್ಕಾಗಿ ಒಂದು ರಾಷ್ಟ್ರೀಯ ಸಂಸ್ಥೆʼ ಯನ್ನು ಸಹ ಸ್ಥಾಪಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಂಶೋಧನಾ ವೇದಿಕೆಯು ಈ ಸಂಶೋಧನಾ ಜಾಲವನ್ನು ಬಲಪಡಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ   ಮಿಷನ್ ಮೂಲಕ ದೇಶದ ಪ್ರತಿಯೊಂದು ಭಾಗದಲ್ಲೂ ಚಿಕಿತ್ಸೆಯಿಂದ ಹಿಡಿದು ನಿರ್ಣಾಯಕ ಸಂಶೋಧನೆಯವರೆಗಿನ ಸಂಪೂರ್ಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
ಸ್ನೇಹಿತರೇ,
ಇದನ್ನು ದಶಕಗಳ ಹಿಂದೆಯೇ ಮಾಡಬೇಕಿತ್ತು. ಆದರೆ ನಾನು ಪರಿಸ್ಥಿತಿಯನ್ನು ವಿವರಿಸುವ ಅಗತ್ಯವಿಲ್ಲ. ಕಳೆದ ಏಳು ವರ್ಷಗಳಿಂದ ನಾವು ನಿರಂತರವಾಗಿ ಸುಧಾರಿಸುತ್ತಿದ್ದೇವೆ ಆದರೆ ಈಗ ಇದನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಮತ್ತು ಅತ್ಯಂತ ತೀವ್ರ  ವಿಧಾನದೊಂದಿಗೆ ಮಾಡಬೇಕಾಗಿದೆ. ಕೆಲವು ದಿನಗಳ ಹಿಂದೆ, ನಾನು ದೆಹಲಿಯಿಂದ ಇಡೀ ದೇಶಕ್ಕೆ ಮೆಗಾ ರಾಷ್ಟ್ರವ್ಯಾಪಿ ಮೂಲಸೌಕರ್ಯ ಕಾರ್ಯಕ್ರಮವಾದ ʼಗತಿ ಶಕ್ತಿʼ ಯನ್ನು ಪ್ರಾರಂಭಿಸಿದೆ. ಇಂದು ಆರೋಗ್ಯಕ್ಕಾಗಿ 64,000 ಕೋಟಿ ರೂಪಾಯಿಗಳ ಈ ಎರಡನೇ ದೊಡ್ಡ ಮಿಷನ್ ದೇಶದ ಪ್ರತಿಯೊಬ್ಬ ನಾಗರಿಕರನ್ನು ಆರೋಗ್ಯವಾಗಿಡಲು ಕಾಶಿಯ ಭೂಮಿಯಿಂದ ಪ್ರಾರಂಭಿಸಲಾಗುತ್ತಿದೆ.
ಸ್ನೇಹಿತರೇ,
ಅಂತಹ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದಾಗ, ಅದು ಆರೋಗ್ಯ ಸೇವೆಯನ್ನು ಸುಧಾರಿಸುತ್ತದೆ, ಇದು ಸಂಪೂರ್ಣ ಉದ್ಯೋಗದ ವಾತಾವರಣವನ್ನು ಸಹ ಸೃಷ್ಟಿಸುತ್ತದೆ. ವೈದ್ಯರು, ಅರೆವೈದ್ಯರು, ಲ್ಯಾಬ್‌ಗಳು, ಔಷಧಾಲಯಗಳು, ಸ್ವಚ್ಛತೆ, ಕಚೇರಿಗಳು, ಪ್ರಯಾಣ ಮತ್ತು ಸಾರಿಗೆ, ಆಹಾರ ಮಳಿಗೆಗಳು ಮತ್ತು ಇತರ ಉದ್ಯೋಗಗಳನ್ನು ಈ ಯೋಜನೆಯ ಮೂಲಕ ಸೃಷ್ಟಿಸಲಾಗುವುದು. ದೊಡ್ಡ ಆಸ್ಪತ್ರೆಯೊಂದು ನಿರ್ಮಾಣವಾದರೆ ಅದರ ಸುತ್ತ ಇಡೀ ನಗರವೇ ನೆಲೆಸಿದ್ದು, ಆಸ್ಪತ್ರೆಗೆ ಸಂಬಂಧಿಸಿದ ಚಟುವಟಿಕೆಗಳ ಜೀವನಾಧಾರವಾಗುವುದನ್ನು ನಾವು ನೋಡಿದ್ದೇವೆ. ಇದು ದೊಡ್ಡ ಆರ್ಥಿಕ ಚಟುವಟಿಕೆಯ ಕೇಂದ್ರವಾಗುತ್ತದೆ. ಆದ್ದರಿಂದ, ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಆರೋಗ್ಯ ಮತ್ತು ಆರ್ಥಿಕ ಸ್ವಾವಲಂಬನೆಯ ಮಾಧ್ಯಮವಾಗಿದೆ. ಇದು ಸಮಗ್ರ ಆರೋಗ್ಯ ರಕ್ಷಣೆಗಾಗಿ ಮಾಡಲಾಗುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ. ಸಮಗ್ರ ಆರೋಗ್ಯ ಸೇವೆ ಎಂದರೆ ಅದು ಎಲ್ಲರಿಗೂ ದೊರಕಬಹುದಾದ ಮತ್ತು ಕೈಗೆಟುಕುವಂತಿರಬೇಕು. ಹೋಲಿಸ್ಟಿಕ್ ಹೆಲ್ತ್‌ಕೇರ್ ಎಂದರೆ ಆರೋಗ್ಯ ಮತ್ತು ಕ್ಷೇಮದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಸ್ವಚ್ಛ ಭಾರತ ಅಭಿಯಾನ, ಜಲ ಜೀವನ್ ಮಿಷನ್, ಉಜ್ವಲ ಯೋಜನೆ, ಪೋಷಣ ಅಭಿಯಾನ, ಮಿಷನ್ ಇಂದ್ರಧನುಷ್, ಇಂತಹ ಹಲವಾರು ಅಭಿಯಾನಗಳು ದೇಶದ ಕೋಟ್ಯಂತರ ಬಡವರನ್ನು ರೋಗಗಳಿಂದ ರಕ್ಷಿಸಿವೆ. ಆಯುಷ್ಮಾನ್ ಭಾರತ್ ಯೋಜನೆಯು ಎರಡು ಕೋಟಿಗೂ ಹೆಚ್ಚು ಬಡವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಮೂಲಕ ಚಿಕಿತ್ಸೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ.
ಸಹೋದರ ಸಹೋದರಿಯರೇ,
ನಮಗಿಂತ ಬಹಳ ಹಿಂದೆ ಸರ್ಕಾರದಲ್ಲಿದ್ದವರಿಗೆ ಆರೋಗ್ಯ ರಕ್ಷಣೆ ಹಣ ಗಳಿಸುವ ಸಾಧನವಾಗಿತ್ತು. ಅವರು ಬಡವರ ಕಷ್ಟಗಳನ್ನು ನೋಡಿ ದೂರ ಓಡಿಹೋಗುತ್ತಿದ್ದರು. ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಡವರು, ದೀನದಲಿತರು, ತುಳಿತಕ್ಕೊಳಗಾದವರು, ಹಿಂದುಳಿದವರು, ಮಧ್ಯಮ ವರ್ಗದವರು, ಎಲ್ಲರ ನೋವನ್ನು ಅರ್ಥಮಾಡಿಕೊಳ್ಳುವ ಸರಕಾರವಿದೆ.  ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ನಾವು ಇಪ್ಪತ್ತ ನಾಲ್ಕು ಗಂಟೆ ಕೆಲಸ ಮಾಡುತ್ತಿದ್ದೇವೆ.  ಮೊದಲು ದೇಶದಲ್ಲಿ   ಸಾರ್ವಜನಿಕರ ಹಣ ವಂಚನೆಗೆ ಒಳಗಾಗುತ್ತಿತ್ತು, ವಂಚಕರ ತಿಜೋರಿಗಳನ್ನು ಸೇರುತ್ತಿತ್ತು,  ಇಂದು ಮೆಗಾ ಪ್ರಾಜೆಕ್ಟ್ ಗಳಲ್ಲಿ ಹಣ ತೊಡಗಿಸಲಾಗುತ್ತಿದೆ. ಆದ್ದರಿಂದ, ಇಂದು ದೇಶವು ಇತಿಹಾಸದಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ.
ಸ್ನೇಹಿತರೇ,
ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವಾಗ, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆಯನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸುವುದು ಅವಶ್ಯಕ. ಯುಪಿಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಪ್ರಾರಂಭವಾಗುತ್ತಿರುವ ವೇಗವು ವೈದ್ಯಕೀಯ ಸೀಟುಗಳು ಮತ್ತು ವೈದ್ಯರ ಸಂಖ್ಯೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸೀಟುಗಳ ಸಂಖ್ಯೆ ಹೆಚ್ಚಿರುವುದರಿಂದ ಈಗ ಬಡ ತಂದೆ ತಾಯಿಯರ ಮಗುವೂ ವೈದ್ಯನಾಗುವ ಕನಸನ್ನು ನನಸಾಗಿಸಿಕೊಳ್ಳುವಂತಾಗಿದೆ.
ಸಹೋದರ ಸಹೋದರಿಯರೇ,
ಸ್ವಾತಂತ್ರ್ಯಾನಂತರ 70 ವರ್ಷಗಳಲ್ಲಿ ದೇಶದಲ್ಲಿರುವ ವೈದ್ಯರ ಸಂಖ್ಯೆಗಿಂತ ಹೆಚ್ಚಿನ ವೈದ್ಯರು ಮುಂದಿನ 10-12 ವರ್ಷಗಳಲ್ಲಿ ದೇಶಕ್ಕೆ ಬರಲಿದೆ. ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಯಾವ ರೀತಿಯ ಕೆಲಸ ನಡೆಯುತ್ತಿದೆ ಎಂಬುದನ್ನು ನೀವು ಊಹಿಸಬಹುದು. ವೈದ್ಯರು ಹೆಚ್ಚು ಇದ್ದಾಗ ದೇಶದ ಮೂಲೆ ಮೂಲೆಗಳಲ್ಲಿ ಸುಲಭವಾಗಿ ದೊರಕುತ್ತಾರೆ. ಕೊರತೆಯನ್ನು ಮೀರಿ ಸಾಗುವ ಮೂಲಕ ಪ್ರತಿಯೊಂದು ಆಕಾಂಕ್ಷೆಯನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿರುವ ನವ ಭಾರತ ಇದಾಗಿದೆ.
ಸಹೋದರ ಸಹೋದರಿಯರೇ,
ಹಿಂದೆ ದೇಶದಲ್ಲಾಗಲಿ ಉತ್ತರಪ್ರದೇಶದಲ್ಲಾಗಲಿ ಇದ್ದಂತಹ ಕಾಮಗಾರಿಯ ವೇಗವೇ ಮುಂದುವರಿದಿದ್ದರೆ ಇಂದು ಕಾಶಿಯ ಪರಿಸ್ಥಿತಿ ಏನಾಗುತ್ತಿತ್ತು? ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ವಿಶ್ವದ ಅತ್ಯಂತ ಪುರಾತನ ನಗರ ಕಾಶಿಯನ್ನು ಅವರು ಅದರ ಪಾಡಿಗೆ ಹಾಗೆಯೇ ಬಿಟ್ಟಿದ್ದರು. ನೇತಾಡುವ ವಿದ್ಯುತ್ ತಂತಿಗಳು, ತೇಪೆ ರಸ್ತೆಗಳು, ಘಟ್ಟಗಳು ಮತ್ತು ಗಂಗಾನದಿಗಳ ದುಸ್ಥಿತಿ, ಜಾಮ್, ಮಾಲಿನ್ಯ, ಅವ್ಯವಸ್ಥೆ ಇವೇ ಆಗಿದ್ದವು. ಇಂದು ಕಾಶಿಯ ಹೃದಯ ಮತ್ತು ಆತ್ಮ ಒಂದೇ, ಆದರೆ ಅದರ ದೇಹವನ್ನು ಸುಧಾರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಾರಣಾಸಿಯಲ್ಲಿ ಕಳೆದ ಏಳು ವರ್ಷಗಳಲ್ಲಿ ಮಾಡಿದ ಕೆಲಸ ಕಳೆದ ಹಲವು ದಶಕಗಳಲ್ಲಿ ಆಗಿಲ್ಲ.
ಸಹೋದರ ಸಹೋದರಿಯರೇ,
ರಿಂಗ್ ರೋಡ್ ಇಲ್ಲದಿರುವಾಗ ಕಾಶಿಯಲ್ಲಿ ಹಲವು ವರ್ಷಗಳಿಂದ ಜಾಮ್‌ಗಳನ್ನು ಅನುಭವಿಸಿದ್ದೀರಿ. ‘ನೋ ಎಂಟ್ರಿ’ ತೆರೆಯುವಿಕೆಗೆ ಕಾಯುವುದು ಬನಾರಸ್ ಜನರ ಅಭ್ಯಾಸವಾಗಿ ಹೋಗಿತ್ತು. ಈಗ ರಿಂಗ್ ರಸ್ತೆಯನ್ನು ತೆರೆಯುವುದರೊಂದಿಗೆ, ಪ್ರಯಾಗ್‌ರಾಜ್, ಲಕ್ನೋ, ಸುಲ್ತಾನ್‌ಪುರ, ಅಜಂಗಢ, ಗಾಜಿಪುರ, ಗೋರಖ್‌ಪುರ, ದೆಹಲಿ, ಕೋಲ್ಕತ್ತಾ ಅಥವಾ ದೇಶದ ಯಾವ ಜಾಗಕ್ಕೂ ಪ್ರಯಾಣಿಸುವಾಗ ನಗರದ ಜನರಿಗೆ ತೊಂದರೆಯಾಗಬೇಕಾಗಿಲ್ಲ. ಮೇಲಾಗಿ, ರಿಂಗ್ ರೋಡ್ ಈಗ ಗಾಜಿಪುರದ ಬಿರ್ನಾನ್ ವರೆಗೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಹೊಂದಿದೆ. ವಿವಿಧೆಡೆ ಸರ್ವೀಸ್ ರಸ್ತೆ ಸೌಲಭ್ಯವೂ ಇದೆ. ಇದು ಪ್ರಯಾಗ್‌ರಾಜ್, ಲಕ್ನೋ, ಗೋರಖ್‌ಪುರ, ಬಿಹಾರ ಮತ್ತು ನೇಪಾಳದ ಅನೇಕ ಹಳ್ಳಿಗಳಲ್ಲಿ ಸಾರಿಗೆಯನ್ನು ಸುಗಮಗೊಳಿಸಿದೆ. ಇದರಿಂದ ಪ್ರಯಾಣ ಸುಲಭವಾಗುವುದಲ್ಲದೆ, ವ್ಯಾಪಾರಕ್ಕೆ ಉತ್ತೇಜನ ದೊರೆಯುತ್ತದೆ ಮತ್ತು ಸಾರಿಗೆ ವೆಚ್ಚವೂ ಕಡಿಮೆಯಾಗುತ್ತದೆ.
ಸಹೋದರ ಸಹೋದರಿಯರೇ,
ದೇಶದಲ್ಲಿ ಮೀಸಲಾದ ಮೂಲಸೌಕರ್ಯ ಇಲ್ಲದಿದ್ದರೆ, ಅಭಿವೃದ್ಧಿಯ ವೇಗವು ಅಪೂರ್ಣವಾಗಿ ಉಳಿಯುತ್ತದೆ. ವರುಣಾ ನದಿಯ ಎರಡು ಹೊಸ ಸೇತುವೆಗಳಿಂದ ಹತ್ತಾರು ಹಳ್ಳಿಗಳಿಗೆ ನಗರಕ್ಕೆ ಪ್ರಯಾಣಿಸಲು ಸುಲಭವಾಗಿದೆ. ಇದು ಪ್ರಯಾಗ್‌ರಾಜ್, ಭದೋಹಿ ಮತ್ತು ಮಿರ್ಜಾಪುರದ ಜನರಿಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಹೆಚ್ಚು ಅನುಕೂಲವಾಗುತ್ತದೆ. ಕಾರ್ಪೆಟ್ ಉದ್ಯಮಕ್ಕೆ ಸಂಬಂಧಿಸಿದವರಿಗೂ ಲಾಭವಾಗಲಿದೆ. ವಿಮಾನ ನಿಲ್ದಾಣದಿಂದ ನೇರವಾಗಿ ಮಿರ್ಜಾಪುರಕ್ಕೆ ಹೋಗುವ ಮೂಲಕ ಮಾ ವಿಂಧ್ಯವಾಸಿನಿಗೆ ಭೇಟಿ ಮಾಡಲು ಬಯಸುವ ಭಕ್ತರಿಗೆ ಇದು ಅನುಕೂಲವಾಗುತ್ತದೆ. ರಸ್ತೆಗಳು, ಸೇತುವೆಗಳು ಮತ್ತು ವಾಹನ ನಿಲುಗಡೆಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಇಂದು ಕಾಶಿಯ ನಿವಾಸಿಗಳಿಗೆ ಅರ್ಪಿಸಲಾಗಿದೆ, ಇದು ನಗರ ಮತ್ತು ಸುತ್ತಮುತ್ತಲಿನ ಜೀವನವನ್ನು ಸುಲಭಗೊಳಿಸುತ್ತದೆ. ರೈಲ್ವೇ ನಿಲ್ದಾಣದಲ್ಲಿ ಆಧುನಿಕ ಎಕ್ಸಿಕ್ಯುಟಿವ್ ಲಾಂಜ್ ಪ್ರಯಾಣಿಕರ ಅನುಕೂಲವನ್ನು ಇನ್ನಷ್ಟು ಹೆಚ್ಚಿಸಲಿದೆ.
ಸ್ನೇಹಿತರೇ,
ಗಂಗಾ ಜಿಯ ಸ್ವಚ್ಛತೆ ಮತ್ತು ಪರಿಶುದ್ಧತೆಗಾಗಿ ಕಳೆದ ಕೆಲವು ವರ್ಷಗಳಿಂದ ವ್ಯಾಪಕವಾದ ಕೆಲಸವನ್ನು ನಡೆಸಲಾಗಿದೆ, ಅದರ ಪರಿಣಾಮ ಇಂದು ನಮ್ಮ ಮುಂದೆ ಇದೆ. ಮನೆಗಳ ಕೊಳಕು ನೀರು ಗಂಗಾನದಿ ಸೇರದಂತೆ ನೋಡಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ಇದೀಗ ರಾಮನಗರದಲ್ಲಿ ಐದು ಚರಂಡಿಗಳಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಲು ಆಧುನಿಕ ಶುದ್ಧೀಕರಣ ಘಟಕ ಕಾರ್ಯಾರಂಭ ಮಾಡಿದೆ. ಇದರಿಂದ 50 ಸಾವಿರಕ್ಕೂ ಹೆಚ್ಚು ಮಂದಿ ನೇರ ಲಾಭ ಪಡೆಯುತ್ತಿದ್ದಾರೆ. ಗಂಗಾ ನದಿ ಜತೆಗೆ ವರುಣದ ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತಿದೆ. ಬಹಳ ದಿನಗಳಿಂದ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದ ವರುಣ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತದಲ್ಲಿತ್ತು. ವರುಣವನ್ನು ಉಳಿಸಲು ವಾಹಿನಿ ಯೋಜನೆ ರೂಪಿಸಲಾಗಿದೆ. ಇಂದು ಶುದ್ಧ ನೀರು ಕೂಡ ವರುಣ ತಲುಪುತ್ತಿದ್ದು, 13 ಸಣ್ಣ ಮತ್ತು ದೊಡ್ಡ ಚರಂಡಿಗಳನ್ನು ಕೂಡ ಸಂಸ್ಕರಿಸಲಾಗುತ್ತಿದೆ. ವರುಣ ನದಿಯ ಎರಡೂ ದಡಗಳಲ್ಲಿ ಮಾರ್ಗಗಳು, ಹಳಿಗಳು, ದೀಪಗಳು, ಪಕ್ಕಾ ಘಾಟ್‌ಗಳು, ಮೆಟ್ಟಿಲುಗಳು, ಇಂತಹ ಅನೇಕ ಸೌಲಭ್ಯಗಳು ಸಹ ಪೂರ್ಣಗೊಂಡಿವೆ.
ಸ್ನೇಹಿತರೇ,
ಕಾಶಿ ಆಧ್ಯಾತ್ಮಿಕ ಮತ್ತು ಗ್ರಾಮೀಣ ಆರ್ಥಿಕತೆಯ ಪ್ರಮುಖ ಕೇಂದ್ರವಾಗಿದೆ. ಕಾಶಿ ಸೇರಿದಂತೆ ಇಡೀ ಪೂರ್ವಾಂಚಲದ ರೈತರ ಉತ್ಪನ್ನಗಳನ್ನು ದೇಶ ವಿದೇಶಗಳ ಮಾರುಕಟ್ಟೆಗಳಿಗೆ ತಲುಪಿಸಲು ಕಳೆದ ಕೆಲವು ವರ್ಷಗಳಲ್ಲಿ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೊಳೆಯುವ ಸರಕು ನಿರ್ವಹಣಾ ಕೇಂದ್ರಗಳಿಂದ ಪ್ಯಾಕೇಜಿಂಗ್ ಮತ್ತು ಸಂಸ್ಕರಣೆಯವರೆಗಿನ ಆಧುನಿಕ ಮೂಲಸೌಕರ್ಯವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಅಂಗವಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಆಧುನೀಕರಣಗೊಳಿಸಿ ನವೀಕರಣಗೊಳಿಸಲಾಗಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಶಹನ್‌ಶಾಪುರದಲ್ಲಿ ಬಯೋ-ಸಿಎನ್‌ಜಿ ಸ್ಥಾವರ ನಿರ್ಮಾಣದಿಂದ ರೈತರಿಗೆ ಸಾವಿರಾರು ಮೆಟ್ರಿಕ್‌ ಟನ್‌ಗಳಷ್ಟು ಸಾವಯವ ಗೊಬ್ಬರದ ಜತೆಗೆ ಜೈವಿಕ ಅನಿಲವೂ ಲಭ್ಯವಾಗಲಿದೆ.
ಸಹೋದರ ಸಹೋದರಿಯರೇ,
ಕಳೆದ ವರ್ಷಗಳಲ್ಲಿ ಕಾಶಿ ಮತ್ತೊಂದು ದೊಡ್ಡ ಸಾಧನೆಯಾಗಿದ್ದರೆ, ಅದು ಬಿಎಚ್‌ ಯು ಮತ್ತೆ ವಿಶ್ವದ ಶ್ರೇಷ್ಠತೆಯತ್ತ ಪ್ರಗತಿಯಾಗಿರುವುದಾದೆ. ಇಂದು, ತಂತ್ರಜ್ಞಾನದಿಂದ ಆರೋಗ್ಯದವರೆಗೆ, ಬಿಎಚ್‌ ಯುನಲ್ಲಿ ಅಭೂತಪೂರ್ವ ಸೌಲಭ್ಯಗಳನ್ನು ರಚಿಸಲಾಗುತ್ತಿದೆ. ದೇಶದ ವಿವಿಧೆಡೆಯಿಂದ ಯುವಜನರು ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಇಲ್ಲಿ ನಿರ್ಮಿಸಲಾಗಿರುವ ವಸತಿ ಸೌಲಭ್ಯಗಳು ಯುವ ಜನರಿಗೆ ನೆರವಾಗಲಿದೆ. ನೂರಾರು ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಹಾಸ್ಟೆಲ್ ಸೌಲಭ್ಯವು ಮಾಳವಿಯಾಜಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ. ಹೆಣ್ಣು ಮಕ್ಕಳಿಗೆ ಉನ್ನತ ಮತ್ತು ಆಧುನಿಕ ಶಿಕ್ಷಣವನ್ನು ಒದಗಿಸುವ ಅವರ ದೃಷ್ಟಿಕೋನವನ್ನು ಅರಿತುಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ.
ಸಹೋದರ ಸಹೋದರಿಯರೇ,
ಈ ಎಲ್ಲಾ ಅಭಿವೃದ್ಧಿ ಯೋಜನೆಗಳು ಸ್ವಾವಲಂಬನೆಯ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸಲಿವೆ. ಕಾಶಿ ಮತ್ತು ಇಡೀ ಪ್ರದೇಶವು ಅದ್ಭುತವಾದ ಮಣ್ಣಿನ ಕಲಾವಿದರು, ಕುಶಲಕರ್ಮಿಗಳು ಮತ್ತು ಬಟ್ಟೆಯ ಮೇಲೆ ಅಧ್ಬುತವನ್ನು ರಚಿಸುವ ನೇಕಾರರಿಗೆ ಹೆಸರುವಾಸಿಯಾಗಿದೆ. ವಾರಣಾಸಿಯಲ್ಲಿ ಖಾದಿ ಮತ್ತು ಇತರ ಗುಡಿ ಕೈಗಾರಿಕೆಗಳ ಉತ್ಪಾದನೆಯು ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳಿಂದ ಸುಮಾರು ಶೇಕಡಾ 60 ಮತ್ತು ಮಾರಾಟವು ಸುಮಾರು ಶೇಕಡಾ 90ರಷ್ಟು ಹೆಚ್ಚಾಗಿದೆ. ಆದ್ದರಿಂದ, ಈ ಸಹಚರರ ದೀಪಾವಳಿಯ ಬಗ್ಗೆಯೂ ಕಾಳಜಿ ವಹಿಸಬೇಕೆಂದು ನಾನು ಎಲ್ಲಾ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ. ನಮ್ಮ ಮನೆಗಳ ಅಲಂಕಾರದಿಂದ ಹಿಡಿದು, ನಮ್ಮ ಬಟ್ಟೆ ಮತ್ತು ದೀಪಾವಳಿ ದೀಪಗಳವರೆಗೆ ನಾವು ʼವೋಕಲ್‌ ಫೋರ್‌ ಲೋಕಲ್‌ʼ ಆಗಬೇಕು. ಧನ್‌ ತೆರಾಸ್‌ನಿಂದ ದೀಪಾವಳಿಯವರೆಗೆ ನೀವು ಸ್ಥಳೀಯವಾಗಿ ಖರೀದಿಗಳನ್ನು ಮಾಡಿದರೆ, ಪ್ರತಿಯೊಬ್ಬರ ದೀಪಾವಳಿಯು ಸಂತೋಷದಿಂದ ತುಂಬಿರುತ್ತದೆ. ಮತ್ತು ನಾನು ʼವೋಕಲ್‌ ಫೋರ್‌ ಲೋಕಲ್‌ʼ ಬಗ್ಗೆ ಮಾತನಾಡುವಾಗ, ನಮ್ಮ ಟಿವಿ ಮಾಧ್ಯಮಗಳು ಕೇವಲ ಮಣ್ಣಿನ ದೀಪಗಳನ್ನು ತೋರಿಸುವುದನ್ನು ನಾನು ನೋಡಿದ್ದೇನೆ. ವೋಕಲ್‌ ಫೋರ್‌ ಲೋಕಲ್‌ ಸ್ಥಳೀಯ  ದೀಪಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ನನ್ನ ದೇಶವಾಸಿಗಳ ಬೆವರು ಇರುವ ಮತ್ತು ನನ್ನ ದೇಶದ ಮಣ್ಣಿನ ಪರಿಮಳವನ್ನು ಹೊಂದಿರುವ ಎಲ್ಲಾ ಉತ್ಪನ್ನಗಳನ್ನು ಒಳಗೊಂಡಿದೆ. ಮತ್ತು ಸ್ವದೇಶೀ ಉತ್ಪನ್ನಗಳನ್ನು ಖರೀದಿಸುವುದು ಅಭ್ಯಾಸವಾದರೆ, ಉತ್ಪಾದನೆಯೂ ಹೆಚ್ಚಾಗುತ್ತದೆ ಮತ್ತು ಉದ್ಯೋಗವೂ ಹೆಚ್ಚಾಗುತ್ತದೆ ಮತ್ತು ಬಡವರಿಗೂ ಕೆಲಸ ಸಿಗುತ್ತದೆ. ನಾವು ಇದನ್ನು ಒಟ್ಟಾಗಿ ಮಾಡಬಹುದು ಮತ್ತು ಪ್ರತಿಯೊಬ್ಬರ ಪ್ರಯತ್ನದಿಂದ ನಾವು ದೊಡ್ಡ ಬದಲಾವಣೆಯನ್ನು ತರಬಹುದು.
ಸ್ನೇಹಿತರೇ,
ಮತ್ತೊಮ್ಮೆ, ಇಡೀ ದೇಶಕ್ಕೆ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಮತ್ತು ಅನೇಕ ಅಭಿವೃದ್ಧಿ ಯೋಜನೆಗಳಿಗಾಗಿ ಹಾಗು ಕಾಶಿಗೆ ಅಭಿನಂದನೆಗಳು. ಮತ್ತೊಮ್ಮೆ ಮುಂಬರುವ ಎಲ್ಲಾ ಹಬ್ಬಗಳಿಗೆ ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು.  ಬಹಳ ಧನ್ಯವಾದಗಳು!
 
ಸೂಚನೆ : ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***



(Release ID: 1768416) Visitor Counter : 165