ಉಕ್ಕು ಸಚಿವಾಲಯ
azadi ka amrit mahotsav

ಎಂಒಐಎಲ್ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಘೋಷಣೆ

Posted On: 31 OCT 2021 3:56PM by PIB Bengaluru

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗೌರವಾನ್ವಿತ ಶ್ರೀ ನಿತಿನ್ ಗಡ್ಕರಿ ಮತ್ತು ಭಾರತ ಸರ್ಕಾರದ ಉಕ್ಕು ಸಚಿವ ಗೌರವಾನ್ವಿತ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು 2021ರ ಅಕ್ಟೋಬರ್ 31ರಂದು ನಾಗ್ಪುರ್ ದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಎಂಒಐಎಲ್ ಸಿಬ್ಬಂದಿಗೆ ವೇತನ ಪರಿಷ್ಕರಣೆಗೆ ಅನುಮೋದನೆ  ನೀಡಿರುವುದಾಗಿ ಪ್ರಕಟಿಸಿದರು.

ಈ ವೇತನ ಪರಿಷ್ಕರಣೆಯ ಅವಧಿ 10 ವರ್ಷಗಳದ್ದಾಗಿರುತ್ತದೆ, ಅದು 01.08.2017 ರಿಂದ to 31.07.2027 ರವರೆಗೆ ಜಾರಿಯಲ್ಲಿರಲಿದ್ದು, ಕಂಪನಿಯ 5,800 ನೌಕರರಿಗೆ ಪ್ರಯೋಜನವಾಗಲಿದೆ. ಇದು ಆಡಳಿತ ಮಂಡಳಿ ಮತ್ತು ಎಂಒಐಎಲ್ ಕಾರ್ಮಿಕರ ಸಂಘಟನೆ (ಎಂಕೆಎಸ್) ಒಕ್ಕೂಟದ ನಡುವೆ ಏರ್ಪಟ್ಟ ಒಡಂಬಡಿಕೆಯನ್ನು ಆಧರಿಸಿದೆ. ಈ ಪ್ರಸ್ತಾವದಲ್ಲಿ ಶೇ.20ರಷ್ಟು ಫಿಟ್ ಮೆಂಟ್ ಬೆನಿಫಿಟ್ ಮತ್ತು ಶೇ.20ರಷ್ಟು ಭತ್ಯೆ ಹಾಗೂ ಸವಲತ್ತು ಒಳಗೊಂಡಿದೆ. ಮಧ್ಯಂತರ ಪರಿಹಾರವಾಗಿ ಶೇ.12ರಷ್ಟು ಮೂಲವೇತನ ಮತ್ತು ತುಟ್ಟಿಭತ್ಯೆಯನ್ನು ಮೇ 2019ರಿಂದ ಅನ್ವಯವಾಗುವಂತೆ ನೀಡಲಾಗುವುದು.  

ಬಾಕಿ ಪಾವತಿಯನ್ನು ಒಂದೇ ಕಂತಿನಲ್ಲಿ ನೀಡುವುದಾಗಿ ಕಂಪನಿ ಘೋಷಿಸಿದೆ. ಇದರಿಂದಾಗಿ 2017ರ ಆಗಸ್ಟ್ 1 ರಿಂದ 2021ರ ಸೆಪ್ಟೆಂಬರ್ 30ರ ವರೆಗಿನ ಅವಧಿಗೆ ಸುಮಾರು 218 ಕೋಟಿ ರೂ.ಗಳು ಆರ್ಥಿಕ ಹೊರೆ ತಗುಲಲಿದೆ. ಉದ್ದೇಶಿತ ವೇತನ ಪರಿಷ್ಕರಣೆಯಿಂದಾಗಿ ವಾರ್ಷಿಕ 87 ಕೋಟಿ ಆರ್ಥಿಕ ಹೊರೆ ಹೆಚ್ಚಾಗಲಿದೆ. ಎಂಒಐಎಲ್ ಲಿಮಿಟೆಡ್ ಈಗಾಗಲೇ ತನ್ನ ಲೆಕ್ಕಪತ್ರದಲ್ಲಿ ವೇತನ ಹೆಚ್ಚಳಕ್ಕೆ ಸಂಪೂರ್ಣ ಅವಕಾಶ ಮಾಡಿಕೊಂಡಿದೆ.

ಇದಲ್ಲದೆ, 2020-21ನೇ ಸಾಲಿಗೆ ಎಲ್ಲ ಸಿಬ್ಬಂದಿಗೆ ಉತ್ಪಾದನೆ ಆಧಾರಿತ ಬೋನಸ್ 28,000 ರೂ. ನೀಡಲಿದ್ದು, ಅದನ್ನು ದೀಪಾವಳಿಗೂ ಮುನ್ನವೇ ಪಾವತಿಸಲಾಗುವುದು ಎಂದು ಘೋಷಿಸಲಾಗಿದೆ.

            ಗೌರವಾನ್ವಿತ ಸಚಿವರು ಎಂಒಐಎಲ್ ನ ಹಲವು ಸೌಕರ್ಯಗಳನ್ನು ಅಂದರೆ ಚಿಕ್ಲಾ ಗಣಿಯಲ್ಲಿ ಎರಡನೇ ವರ್ಟಿಕಲ್ ಶಾಫ್ಟ್, 5 ಗಣಿ ಪ್ರದೇಶಗಳಲ್ಲಿ ಆಸ್ಪತ್ರೆಗಳು, ಆಡಳಿತ ಕಚೇರಿ ಕಟ್ಟಡಗಳು ಮತ್ತು ಪದವೀಧರರ ತರಬೇತಿ ಹಾಸ್ಟೆಲ್ ಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಫಗನ್ ಸಿಂಗ್ ಕುಲಸ್ತೆ, ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ, ಕ್ರೀಡಾ ಮತ್ತು ಯುವಜನ ಕಲ್ಯಾಣ ರಾಜ್ಯ ಸಚಿವ ಶ್ರೀ ಸುನಿಲ್ ಕೇದಾರ್, ರಾಜ್ಯಸಭಾ ಸದಸ್ಯರಾದ ಡಾ. ವಿಕಾಸ್ ಮಹಾತ್ಮೆ, ಉಕ್ಕು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರಾದ  ಶ್ರೀಮತಿ ಸುಕ್ರಿತಿ ಲಿಖಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ರುಚಿಕಾ ಗೋವಿಲ್ ಮತ್ತಿತರರು ಉಪಸ್ಥಿತರಿದ್ದರು.

  ಈ ಘೋಷಣೆಯಿಂದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಸಿಬ್ಬಂದಿ ಮತ್ತು ಕಾರ್ಮಿಕ ಸಂಘಟನೆಯ ಸದಸ್ಯರುಗಳು ಸಂತೋಷ ವ್ಯಕ್ತಪಡಿಸಿದರು ಮತ್ತು ಉಕ್ಕು ಸಚಿವಾಲಯಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಉಕ್ಕು ಸಚಿವರಾದ ಗೌರವಾನ್ವಿತ ಶ್ರೀ ಆರ್ ಸಿಪಿ ಸಿಂಗ್, ಸತತವಾಗಿ ಪ್ರಗತಿ ಸಾಧಿಸುತ್ತಿರುವ ಎಂಒಐಎಲ್ ಅನ್ನು ಅಭಿನಂದಿಸಿದರು ಮತ್ತು ಭವಿಷ್ಯದಲ್ಲಿ ಇನ್ನೂ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಲು ಸಜ್ಜಾಗಬೇಕು ಎಂದು ಕರೆ ನೀಡಿದರು.

ಗೌರವಾನ್ವಿತ ಉಕ್ಕು ಸಚಿವರು 2021ರ ನವೆಂಬರ್ 1ರಂದು ಬಾಲಾಘಾಟ್ ಗಣಿಗೆ ಭೇಟಿ ನೀಡಲಿದ್ದಾರೆ. ಆ ಗಣಿ ಅತಿ ದೊಡ್ಡ ಮ್ಯಾಂಗನೀಸ್ ಗಣಿಯಷ್ಟೇ ಅಲ್ಲದೆ, ಏಷ್ಯಾದ ಅತ್ಯಂತ ಆಳದ ಭೂಮಿಯೊಳಗಿನ ಗಣಿಯಾಗಿದೆ.

 

ಎಂಒಐಎಲ್ ಕುರಿತು: ಎಂಒಐಎಲ್ ಲಿಮಿಟೆಡ್ ಶೆಡ್ಯೂಲ್-ಎನಲ್ಲಿರುವ ಮಿನಿರತ್ನ ಕ್ಯಾಟಗರಿ-1 ವರ್ಗದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಇದು ಭಾರತ ಸರ್ಕಾರದ ಉಕ್ಕು ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿದೆ. ಎಂಒಐಎಲ್ ದೇಶದ ಅತಿ ದೊಡ್ಡ ಮ್ಯಾಂಗನೀಸ್ ಅದಿರು ಉತ್ಪಾದನಾ ಕಂಪನಿಯಾಗಿದ್ದು, ಅದು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ರಾಜ್ಯದಲ್ಲಿ 11 ಗಣಿಗಳ ಕಾರ್ಯಚರಣೆಯನ್ನು ನಿರ್ವಹಿಸುತ್ತಿದೆ. ಎಂಒಐಎಲ್ ದೇಶದ ~34% ಮ್ಯಾಂಗನೀಸ್ ಅದಿರು ನಿಕ್ಷೇಪಗಳನ್ನು ಹೊಂದಿದೆ ಮತ್ತು ಅದು ದೇಶೀಯ ಉತ್ಪಾದನೆಗೆ ~ 45%ರಷ್ಟು ಕೊಡುಗೆ ನೀಡುತ್ತಿದೆ. ಕಂಪನಿ 2024-25ನೇ ಹಣಕಾಸು ವರ್ಷದ ವೇಳೆಗೆ ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಿ, 25 ಲಕ್ಷ ಮೆಟ್ರಿಕ್ ಟನ್ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಎಂಒಐಎಲ್ ಗುಜರಾತ್ ರಾಜ್ಯ, ಮಧ್ಯಪ್ರದೇಶ ರಾಜ್ಯದ ಇತರ ಪ್ರದೇಶಗಳು, ರಾಜಸ್ತಾನ ಮತ್ತು ಒಡಿಶಾದಲ್ಲಿ ತನ್ನ ವ್ಯಾಪಾರ ಅವಕಾಶಗಳನ್ನು ವಿಸ್ತರಿಸುವ ಅವಕಾಶಗಳನ್ನು ಅನ್ವೇಷಿಸುತ್ತಿದೆ.

***(Release ID: 1768357) Visitor Counter : 64