ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಗರಿಷ್ಠ ದಾಸ್ತಾನು ಮಿತಿ ಹೇರಿಕೆ ಸಂಬಂಧ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದ ಕೇಂದ್ರ


ಉತ್ತರ ಪ್ರದೇಶವು ಅಕ್ಟೋಬರ್ 12, 2021ರಂದು ದಾಸ್ತಾನು ಮಿತಿಯನ್ನು ನಿಗದಿಪಡಿಸಿದ್ದು, ಇತರೆ ರಾಜ್ಯಗಳು ಈ ಪ್ರಕ್ರಿಯೆಯಲ್ಲಿ ತೊಡಗಿವೆ

ಕೇಂದ್ರವು ಮಾಡಿದ ಸುಂಕ ಕಡಿತದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆಯಾಗುವಂತೆ ರಾಜ್ಯ ಸರಕಾರಗಳು ಖಾತರಿಪಡಿಸಿಕೊಳ್ಳಬೇಕು

Posted On: 25 OCT 2021 6:58PM by PIB Bengaluru

ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯು(ಡಿಎಫ್‌ಪಿಡಿ) ಖಾದ್ಯ ತೈಲಗಳ ದಾಸ್ತಾನಿನ ಮೇಲೆ ಗರಿಷ್ಠ ಮಿತಿ ಹೇರಿಕೆ ಸಂಬಂಧ ಸ್ಥಿತಿಗತಿಯನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಭೆ ನಡೆಸಿತು.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಇಲಾಖೆಯುಖಾದ್ಯ ತೈಲಗಳ ಮೇಲಿನ ದಾಸ್ತಾನು ಮಿತಿಗೆ ಸಂಬಂಧಿಸಿದಂತೆ 08.10.2021ರಂದು ಹೊರಡಿಸಿದ ಆದೇಶ ಮತ್ತು ಬಳಿಕ 12.10.2021 ಹಾಗೂ 22.10.2021ರಂದು ಹೊರಡಿಸಿದ್ದ ಜ್ಞಾಪನ ಪತ್ರಗಳ ಸಂಬಂಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳ ವಿವರಗಳನ್ನು ಕೇಳಿತು.

ಖಾದ್ಯ ತೈಲಗಳ ಗರಿಷ್ಠ ದಾಸ್ತಾನಿನ ಮೇಲೆ ಮಿತಿ ಹೇರಿರುವ ಕೇಂದ್ರದ ಉಪಕ್ರಮದ ಪ್ರಯೋಜನವನ್ನು ಗ್ರಾಹಕರು ಪಡೆಯುವಂತೆ ಖಾತರಿಪಡಿಸಿಕೊಳ್ಳಲು ಕೇಂದ್ರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಹಬ್ಬದ ಋತುವಿಗೂ ಮುನ್ನ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಸ್ತಾನು ಮಿತಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಸಲಹೆ ನೀಡಿದರು.

ನಿಟ್ಟಿನಲ್ಲಿ ಉತ್ತರ ಪ್ರದೇಶವು ಮುನ್ನಡೆ ಸಾಧಿಸಿದ್ದು, ಈಗಾಗಲೇ ಅಕ್ಟೋಬರ್ 12, 2021ರಂದು ದಾಸ್ತಾನು ಮಿತಿ ಆದೇಶ ಹೊರಡಿಸಿರುವುದಾಗಿಯೂ ಹಾಗೂ ಇದರಿಂದ ಬೆಲೆಗಳು ಇಳಿಕೆಯಾಗಲಿರುವುದಾಗಿಯೂ ಮಾಹಿತಿ ನೀಡಿದೆ.

ಇತರ ರಾಜ್ಯಗಳಲ್ಲಿ ಸಂಬಂಧ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಯುತ್ತಿದೆ ಅಥವಾ ಕೆಲವು ರಾಜ್ಯಗಳಲ್ಲಿ ಈಗಾಗಲೇ ಅನುಮೋದನೆಗಾಗಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಪಾರ್ಥ ಎಸ್ ದಾಸ್ ಅವರು, ರಾಜ್ಯ ಸರಕಾರಗಳು ಆಯಾ ರಾಜ್ಯದ ಬಳಕೆಯ ಮಾದರಿಯನ್ನು ಆಧರಿಸಿ ದಾಸ್ತಾನು ಮಿತಿಯನ್ನು ಹೇರಬೇಕು ಎಂದು ಒತ್ತಿ ಹೇಳಿದರು.

ರಾಜಸ್ಥಾನ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳು ಈಗಾಗಲೇ ಪ್ರಸ್ತಾಪವನ್ನು ರಾಜ್ಯ ಸರಕಾರಕ್ಕೆ ಸಿಲ್ಲಿಸಿದ್ದು, ಶೀಘ್ರದಲ್ಲೇ ದಾಸ್ತಾನು ಮಿತಿಯನ್ನು ಹೇರಿಕೆ ಜಾರಿಯಾಗುವ ನಿರೀಕ್ಷೆಯಿದೆ. ಮಹಾರಾಷ್ಟ್ರ, ಒಡಿಶಾ, ಕೇರಳ, ಜಾರ್ಖಂಡ್, ಛತ್ತೀಸ್‌ಗಢ, ಆಂಧ್ರಪ್ರದೇಶ, ತಮಿಳುನಾಡು, ತ್ರಿಪುರಾ, ಚಂಡೀಗಢ ಈಗಾಗಲೇ ದಾಸ್ತಾನು ಮಿತಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು ಶೀಘ್ರದಲ್ಲೇ ಸಂಬಂಧ ಆದೇಶ ಹೊರಡಿಸಲಿವೆ.

ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ, ಖಾದ್ಯ ತೈಲಗಳ ಬೆಲೆ ಏರಿಕೆಯಿಂದ ಗ್ರಾಹಕರಿಗೆ ತಕ್ಷಣದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರವು ಸುಂಕ ಕಡಿತ ಮಾಡಿದ್ದು, ಇದರ ಸಂಪೂರ್ಣ ಪ್ರಯೋಜನ ಗ್ರಾಹಕರಿಗೆ ತಲುಪುವಂತೆ ನೋಡಬೇಕು ಎಂದು ಹಿಂದೆ ತನ್ನ ಆದೇಶದಲ್ಲಿ ಕೇಂದ್ರ ಸರಕಾರ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಇದರಿಂದ ಆಹಾರ ಹಣದುಬ್ಬರವನ್ನು ಕಡಿಮೆ ಮಾಡಲು ಮತ್ತು ಖಾದ್ಯ ತೈಲಗಳ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಸಾಮಾನ್ಯ ಗ್ರಾಹಕರಿಗೆ ಪರಿಹಾರ ಒದಗಿಸಲು ಸಹಾಯಕವಾಗಲಿದೆ.

ಖಾದ್ಯ ತೈಲಗಳ ಬೆಲೆಗಳು ಮತ್ತು ಗ್ರಾಹಕರಿಗೆ ಅದರ ಲಭ್ಯತೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮುಂಬರುವ ಹಬ್ಬದ ಋತುವಿನ ಸಂದರ್ಭದಲ್ಲಿ ಖಾದ್ಯ ತೈಲಗಳ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಇದು ಅತ್ಯಂತ ಮುಖ್ಯವಾಗಿದೆ. ಎಲ್ಲಾ ರಾಜ್ಯಗಳು ಮತ್ತು ಖಾದ್ಯ ತೈಲ ಉದ್ಯಮ ಸಂಘಗಳೊಂದಿಗಿನ ಸಮಾಲೋಚನೆ ಆಧಾರದ ಮೇಲೆ ಸರಕಾರವು ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ದಾಸ್ತಾನು ಬಹಿರಂಗಪಡಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ದೇಶದಲ್ಲಿ ವಾರಕ್ಕೊಮ್ಮೆ ಖಾದ್ಯ ತೈಲಗಳು /ಎಣ್ಣೆಬೀಜಗಳ ದಾಸ್ತಾನು ಮೇಲ್ವಿಚಾರಣೆ ಮಾಡಲು ಇಲಾಖೆಯು ಪೋರ್ಟಲ್ ಅನ್ನು ರಚಿಸಿದೆ.

***



(Release ID: 1766903) Visitor Counter : 188


Read this release in: English , Urdu , Hindi , Marathi