ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ನಿಮ್ಹಾನ್ಸ್ ನ 25ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ
"ಇಂದಿನ ವೈದ್ಯರಿಗೆ, ನವ ಭಾರತದ ನಿರ್ಮಾಣದಲ್ಲಿ ಬಹು ಮಹತ್ವದ ಪಾತ್ರವಿದೆ": ನಿಮ್ಹಾನ್ಸ್ ನ 25ನೇ ಘಟಿಕೋತ್ಸವ ಸಮಾರಂಭದಲ್ಲಿ ಶ್ರೀ ಮನ್ಸುಖ್ ಮಾಂಡವಿಯಾ
"ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ಮಾಹಿತಿಯುಕ್ತ ಸಾಮಾಜಿಕ ಚರ್ಚೆಯ ಅಗತ್ಯವಿದೆ": ವಿಶ್ವ ಮಾನಸಿಕ ಆರೋಗ್ಯ ದಿನದಂದು ಕೇಂದ್ರ ಆರೋಗ್ಯ ಸಚಿವರು
ಬೆಂಗಳೂರಿನಲ್ಲಿ 90 ಹಾಸಿಗೆಗಳ ಮಾಡ್ಯುಲರ್ ಫೀಲ್ಡ್ ಕೋವಿಡ್ ಆಸ್ಪತ್ರೆ ಉದ್ಘಾಟಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
Posted On:
10 OCT 2021 8:35PM by PIB Bengaluru
ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನ 25ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್. ಬೊಮ್ಮಾಯಿ ಅವರು ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. 227 ಸ್ನಾತಕೋತ್ತರ ಪದವೀಧರರು ವಿವಿಧ ಪದವಿಗಳು ಮತ್ತು ಪ್ರಮಾಣಪತ್ರಗಳನ್ನು ಪಡೆದರು; ಮತ್ತು 13 ಮಂದಿ ಘಟಿಕೋತ್ಸವ ಸಮಾರಂಭದಲ್ಲಿ ಪ್ರತಿಭಾ ಪ್ರಶಸ್ತಿಗಳೊಂದಿಗೆ ಪುರಸ್ಕೃತರಾದರು. ರಜತ ಮಹೋತ್ಸವ ನೆನಪಿನ ಘಟಿಕೋತ್ಸವದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಕೇಂದ್ರ ಆರೋಗ್ಯ ಸಚಿವರು, ನವ ಭಾರತದ ನಿರ್ಮಾಣದಲ್ಲಿ ಇಂದಿನ ವೈದ್ಯರು ಬಹು ಮಹತ್ವದ ಪಾತ್ರ ವಹಿಸಬೇಕಿದೆ ಮತ್ತು ನಿಜವಾದ ಬದ್ಧತೆ ಮತ್ತು ಸಮರ್ಪಣೆ ಇದನ್ನು ಸಾಧ್ಯವಾಗಿಸುತ್ತದೆ ಎಂದು ಹೇಳಿದರು.
ರಜತ ಮಹೋತ್ಸವ ಆಚರಣೆಯ ಅಂಗವಾಗಿ, ನಿಮ್ಹಾನ್ಸ್ ನಲ್ಲಿ ವಿವಿಧ ಹೊಸ ಸೌಲಭ್ಯಗಳನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಉದ್ಘಾಟಿಸಿದರು. ವಿಶ್ವದ ಅತ್ಯಂತ ಸುಧಾರಿತ ಮತ್ತು ನಿಖರವಾದ ಕಾರ್ನಿಯಲ್ ರೇಡಿಯೋ ಸರ್ಜರಿ ವ್ಯವಸ್ಥೆಯಾದ ಗಾಮಾ ನೈಫ್ ಐಕಾನ್ ಅನ್ನು ಸಚಿವರು ರಾಷ್ಟ್ರಕ್ಕೆ ಸಮರ್ಪಿಸಿದರು. ಸಾಂಪ್ರದಾಯಿಕ ಭಾರತೀಯ ಆರೋಗ್ಯ ಆರೈಕೆ ವಿಧಾನವನ್ನು ಸಾಕ್ಷ್ಯಾಧಾರಿತ ಆಧುನಿಕ ಜೈವಿಕ ಔಷಧ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಸಮಗ್ರ ವೈದ್ಯಕೀಯ ಇಲಾಖೆ ಮತ್ತು ದಾದಿಯರ ಹಾಸ್ಟೆಲ್ ಅನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಸಚಿವರು ನಿಮ್ಹಾನ್ಸ್ ನಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಮಾನಸಿಕ ಆರೋಗ್ಯ ಪ್ರದರ್ಶನವನ್ನು ಅವರು ವೀಕ್ಷಿಸಿದರು. ವಿಶ್ವ ಮಾನಸಿಕ ಆರೋಗ್ಯ ಸಂಸ್ಮರಣಾ ದಿನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವರು, ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ಮಾಹಿತಿಯುಳ್ಳ ಸಾಮಾಜಿಕ ಚರ್ಚೆಯ ಅಗತ್ಯವನ್ನು ಒತ್ತಿ ಹೇಳಿದರು. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಮತ್ತು ಚಿಕಿತ್ಸೆ ನೀಡಲು ಸಾಧ್ಯ ಎಂದು ಅವರು ಹೇಳಿದರು. ಕೇಂದ್ರ ಸಚಿವರು ನಿಮ್ಹಾನ್ಸ್ ನಲ್ಲಿ 'ತಂಬಾಕು ತ್ಯಜಿಸಿ, ಹೀರೋ ಆಗಿ' ಅಭಿಯಾನಕ್ಕೂ ಚಾಲನೆ ನೀಡಿದರು.
ಇದಕ್ಕೂ ಮುನ್ನ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರು ಬೆಂಗಳೂರಿನಲ್ಲಿ 90 ಹಾಸಿಗೆಗಳ ಮಾಡ್ಯುಲರ್ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಸಚಿವ ಶ್ರೀ ಕೆ. ಸುಧಾಕರ್ ಮತ್ತಿತರ ಗಣ್ಯರು ಹಾಜರಿದ್ದರು. ಟೆಕ್ಸಾಸ್ ಇನ್ ಸ್ಟ್ರುಮೆಂಟ್ಸ್, ನೋಕಿಯಾ, ಸ್ವಸ್ತಿ, ವಿಯಾಟ್ರಿಸ್ ಸಹಯೋಗದೊಂದಿಗೆ 90 ಹಾಸಿಗೆಗಳ ಮಾಡ್ಯುಲರ್ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು 26 ದಿನಗಳ ದಾಖಲೆಯ ಸಮಯದಲ್ಲಿ ಸ್ಥಾಪಿಸಲಾಗಿದೆ, ಇದು ಅವರ ಸಿ.ಎಸ್.ಆರ್. ಉಪಕ್ರಮಗಳ ಭಾಗವಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವರು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅತ್ಯುತ್ತಮವಾಗಿ ಲಸಿಕೆ ಅಭಿಯಾನ ನಡೆಸುತ್ತಿರುವುದಕ್ಕಾಗಿ ಕರ್ನಾಟಕ ರಾಜ್ಯವನ್ನು ಅಭಿನಂದಿಸಿದರು. ಸಿ.ಎಸ್.ಆರ್. ಉಪಕ್ರಮದ ಹಿಂದಿನ ಪ್ರಮುಖ ವ್ಯಕ್ತಿಗಳನ್ನು ಕೇಂದ್ರ ಸಚಿವರು ಸನ್ಮಾನಿಸಿದರು.
ಕೇಂದ್ರ ಆರೋಗ್ಯ ಸಚಿವರು ಕರ್ನಾಟಕದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಆಜಾ಼ದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಎಂಬಿಜೆಪಿ ದೇಶಾದ್ಯಂತ 8,300+ ಮಳಿಗೆಗಳೊಂದಿಗೆ ಹೊಸ ಎತ್ತರವನ್ನು ಏರುತ್ತಿದೆ, ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತಿದೆ ಮತ್ತು ಜನೌಷಧಿಗಳ ಬಳಕೆ ದೇಶದಲ್ಲಿ ಶೇ.2 ರಿಂದ ಶೇ.10 ಕ್ಕೆ ಏರಿದೆ ಎಂದು ಹೇಳಿದರು.
***
(Release ID: 1762789)
Visitor Counter : 281