ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ವಿಶ್ವ ಮಾನಸಿಕ ಆರೋಗ್ಯ ದಿನ


ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಮನ್ಸುಖ್ ಮಾಂಡವೀಯಾ

ಮಾನಸಿಕ ಆರೋಗ್ಯ ಸಮಸ್ಯೆ ಮಧುಮೇಹದಂತೆಯೇ ಸದ್ದಿಲ್ಲದೆ ಕೊಲ್ಲುವ ಕಾಯಿಲೆ: ಡಾ. ಮಾಂಡವಿಯಾ

ನಿಮ್ಹಾನ್ಸ್ ನಲ್ಲಿಂದು ನಡೆದ 25ನೇ ಘಟಿಕೋತ್ಸವ ಸಮಾರಂಭ

"ಇಂದು ಪದವಿಪಡೆಯುತ್ತಿರುವ ವೈದ್ಯರಿಗೆ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಸಿದ್ಧ ಅವಕಾಶವಿದೆ": ಡಾ. ಮನ್ಸುಖ್ ಮಾಂಡವಿಯಾ

Posted On: 10 OCT 2021 6:46PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಇಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ಬೆಂಗಳೂರು-ಕೇಂದ್ರ ಲೋಕಸಭೆ ಸದಸ್ಯ ಶ್ರೀ ಪಿ.ಸಿ. ಮೋಹನ್, ಹೆಚ್ಚುವರಿ ಕಾರ್ಯದರ್ಶಿ ಮತ್ತು ಅಭಿಯಾನದ ನಿರ್ದೇಶಕ (ರಾಷ್ಟ್ರೀಯ ಆರೋಗ್ಯ ಅಭಿಯಾನದ) ಶ್ರೀ ವಿಕಾಸ್ ಶೀಲ್ ಅವರು ಉಪಸ್ಥಿತರಿದ್ದರು.

ಡಾ. ಮನ್ಸುಖ್ ಮಾಂಡವಿಯಾ ತಮ್ಮ ಭಾಷಣದಲ್ಲಿ, ಮಾನಸಿಕ ಆರೋಗ್ಯ ಸಮಸ್ಯೆ ಸಹ ಮಧುಮೇಹದಂತೆಯೇ ಸದ್ದಿಲ್ಲದೆ ಸಾವು ತರುವ ಕಾಯಿಲೆ ಎಂದು ಎಚ್ಚರಿಕೆ ನೀಡಿದರು: "ಮಧುಮೇಹವು ಕೆಲವೊಮ್ಮೆ ಪತ್ತೆಯಾಗದ ಕಾರಣ ಮಾರಕವಾದರೆ,  ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವ ಜನರು ಸಾಮಾಜಿಕ ಕಳಂಕದ ಭಯದಿಂದ ಚಿಕಿತ್ಸೆಗೆ ಮುಂದೆ ಬರುವುದಿಲ್ಲ."

ಇತ್ತೀಚೆಗೆ ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಕರಣಗಳ ಏರಿಕೆಗೆ ನಮ್ಮ ಜೀವನಶೈಲಿ ಮತ್ತು ಕೌಟುಂಬಿಕ ರಚನೆಯಲ್ಲಿನ ಬದಲಾವಣೆಯು ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದರು. " ಇದಕ್ಕೆ ಆಸ್ಪತ್ರೆಯೇ ಅಂತಿಮ  ಹೆಜ್ಜೆಯಾಗಿದೆ. ಕುಟುಂಬ ಸಹ ಸದಸ್ಯರಲ್ಲಿ ತೊಂದರೆಯ ಆರಂಭಿಕ ಚಿಹ್ನೆಗಳನ್ನು ಗುರುತಿಸಬಹುದು ಮತ್ತು ಸಮಸ್ಯೆ ಉಲ್ಬಣವಾಗುವ ಮೊದಲೇ ವೈದ್ಯರ ನೆರವು ಪಡೆಯಬಹುದು. ಅದೇ ರೀತಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ನಡವಳಿಕೆಯ ಬದಲಾವಣೆಗಳನ್ನು ಗುರುತಿಸಬಹುದು ಮತ್ತು ಪರಿಹಾರಗಳನ್ನು ನೀಡಬಹುದು. ಇವು ಸಮಸ್ಯೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಕ್ರಮಗಳಾಗಿವೆ.”ಎಂದರು.

ಸರ್ಕಾರ ಮತ್ತು ಸಮಾಜ ಸಹಯೋಗದಲ್ಲಿ ಕಾರ್ಯನಿರ್ವಹಿಸಿದಾಗ ಮಾನಸಿಕ ಆರೋಗ್ಯದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಸಬಹುದು, ಅದರ ಮೇಲೆ ಸರ್ಕಾರದ ಭವಿಷ್ಯದ ನೀತಿಯು ಅವಲಂಬಿಸಿರುತ್ತದೆ, ಇದಕ್ಕೆ 1936ರಲ್ಲಿ ಸ್ಥಾಪಿಸಲಾದ ನಿಮ್ಹಾನ್ಸ್ ನಂತಹ ಹಳೆಯ ಮತ್ತು ಪ್ರಸಿದ್ಧ ಸಂಸ್ಥೆಗಳು ಪ್ರಾಮುಖ್ಯ ಪಡೆಯುತ್ತವೆ ಎಂದು ಡಾ. ಮಾಂಡವಿಯಾ  ಹೇಳಿದರು.

ಮಾನಸಿಕ ಆರೋಗ್ಯ ರಕ್ಷಣಾ ವೈದ್ಯರ ಕೊರತೆಯನ್ನು ಉಲ್ಲೇಖಿಸಿದ ಕೇಂದ್ರ ಆರೋಗ್ಯ ಸಚಿವರು, ಕೇವಲ ಅಂಕಗಳ ಕಡೆಗೆ ಮಾತ್ರ ಕೇಂದ್ರೀಕೃತವಾದ ಶಿಕ್ಷಣವು ದೇಶಕ್ಕೆ ನೆರವಾವುದಿಲ್ಲ ಎಂದು ಒತ್ತಿ ಹೇಳಿದರು. ವಿದ್ಯಾರ್ಥಿಗಳು ನಿರ್ದಿಷ್ಟ ಪ್ರಕರಣಗಳನ್ನು ತೆಗೆದುಕೊಂಡು ಆರೈಕೆ ಅಗತ್ಯಇರುವವರಿಗೆ ಚಿಕಿತ್ಸೆ ನೀಡಿ, ರೋಗ ಗುಣಪಡಿಸುವ ಕಲಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ. ಸುಧಾಕರ್ ಮಾತನಾಡಿ, ನಮ್ಮ ಪೂರ್ವಜರಿಂದ ಬಂದಿರುವ ಯೋಗ ಮತ್ತು ಪ್ರಾಣಾಯಾಮದಂತಹ ಕೊಡುಗೆಗಳನ್ನು ಬಳಸಿಕೊಳ್ಳುವುದರಿಂದ ಪ್ರಸ್ತುತ ಒತ್ತಡ ಮತ್ತು ಆತಂಕದ ಪ್ರಪಂಚದ ಸವಾಲು ಎದುರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. "ಹಸಿರು ಉದ್ಯಾನವನದಲ್ಲಿ ಬೆಳಗ್ಗೆ ನಡೆಯುವುದು ಸಹ ಎಂಡಾರ್ಫಿನ್ ಮಟ್ಟವನ್ನು ಹೆಚ್ಚಿಸುತ್ತದೆ," ಎಂದು ಅವರು ಹೇಳಿದರು. ಕೋವಿಡ್-19ರ ಸಮಯದಲ್ಲಿ ಕರ್ನಾಟಕ ಆರೋಗ್ಯ ಆಡಳಿತವು ಕೈಗೊಂಡ ಅನುಕರಣೀಯ ಕಾರ್ಯಗಳ ಬಗ್ಗೆಯೂ ಅವರು ಮಾತನಾಡಿದರು. ನಿಮ್ಹಾನ್ಸ್ ನೆರವಿನಿಂದ ರಾಜ್ಯದ 24 ಲಕ್ಷ ಕೋವಿಡ್ ರೋಗಿಗಳಿಗೆ ಸಮಾಲೋಚನೆ ನಡೆಸಲಾಯಿತು ಎಂದರು. 

ಈ ಕಾರ್ಯಕ್ರಮದ ನಂತರ ಮಧ್ಯಾಹ್ನ ನಿಮ್ಹಾನ್ಸ್ ನ 25ನೇ ಘಟಿಕೋತ್ಸವ ಸಮಾರಂಭ ನಡೆಯಿತು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಎಸ್. ಬೊಮ್ಮಾಯಿ, ಉಪಸ್ಥಿತರಿದ್ದರು. ಅವರೊಂದಿಗೆ ಬೆಂಗಳೂರು-ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಶ್ರೀ ತೇಜಸ್ವಿ  ಸೂರ್ಯ ಮತ್ತು ಇತರ ಗಣ್ಯರು  ಹಾಜರಿದ್ದರು.

ಇಂದು ಪದವಿ ಪಡೆಯುತ್ತಿರುವವರನ್ನು ಅಭಿನಂದಿಸಿದ ಡಾ. ಮನ್ಸುಖ್ ಮಾಂಡವಿಯಾ, "ಪೊಲೀಸ್ ಇಲಾಖೆಯ ಪ್ರಕಾರ ಸುಮಾರು 1.36 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದಲೇ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಾವು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸಬೇಕು. ಆರೋಗ್ಯವಂತ ನಾಗರಿಕರಿಂದ ಮಾತ್ರ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದು, ಆರೋಗ್ಯವಂತರಿಂದ  ಆರೋಗ್ಯಕರ ರಾಷ್ಟ್ರವನ್ನು ನಿರ್ಮಾಣವಾಗುತ್ತದೆ. ಆರೋಗ್ಯವಂತ ರಾಷ್ಟ್ರ ಮಾತ್ರವೇ ಆದರ್ಶ ರಾಷ್ಟ್ರವಾಗಲು ಸಾಧ್ಯ, ಇದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸು ಎಂದರು. "ಇಂದು ಪದವಿ ಪಡೆದು ಮಾನಸಿಕ ಆರೋಗ್ಯ ಕೇಂದ್ರದಿಂದ ಹೊರಬರುತ್ತಿರುವ ವೈದ್ಯರಿಗೆ, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಸಿದ್ಧ ಅವಕಾಶವಿದೆ" ಎಂದು ಅವರು ಹೇಳಿದರು. ಕೋವಿಡ್ ನಂತಹ ಕಠಿಣ ಸಮಯದಲ್ಲಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಯುವಕರು ಮಾಡಿದ ಸಮರ್ಪಿತ ಮತ್ತು ಪ್ರಶಂಸನೀಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಮುಖ್ಯಮಂತ್ರಿ ಶ್ರೀ ಬೊಮ್ಮಾಯಿ ಇಂದು ಉತ್ತೀರ್ಣರಾಗಿ ಪದವಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವೈದ್ಯರು ಕೇವಲ ವೈಯಕ್ತಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯಕ್ತಿಯಲ್ಲ, ಆದರೆ ಎಲ್ಲಾ ದುಷ್ಪರಿಣಾಮಗಳನ್ನು ಗುಣಪಡಿಸುವ ಮೂಲಕ ಸಮಾಜಕ್ಕೆ ಭದ್ರ ಅಡಿಪಾಯವನ್ನು ಅವರು ಹಾಕುತ್ತಾರೆ ಎಂದು ಅಭಿಪ್ರಾಯಪಟ್ಟರು.

ನಿಮ್ಹಾನ್ಸ್ ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕರ್ನಾಟಕ ರಾಜ್ಯದ ಹಿರಿಯ ಆರೋಗ್ಯ ಅಧಿಕಾರಿಗಳು ಸಂಸ್ಥೆಯ ಬೋಧಕರು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ಕೆಳಗಿನ ಸಂಪರ್ಕಗಳ ಮೂಲಕ ವೆಬ್ ಕಾಸ್ಟ್ ಆಯಿತು:

ವಿಶ್ವ ಮಾನಸಿಕ ಆರೋಗ್ಯ ದಿನ: https://youtu.be/kjnmTFcczPs   

ಘಟಿಕೋತ್ಸವ: https://www.youtube.com/watch?v=jzOwXue9zBw

***(Release ID: 1762768) Visitor Counter : 409