ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಯುವಜನರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮೈಕ್ರೋಸಾಫ್ಟ್ ಇಂಡಿಯಾ -ಕಾರ್ಮಿಕ ಸಚಿವಾಲಯದ ಜಂಟಿ ಉಪಕ್ರಮ ಡಿಜಿ ಸಕ್ಷಮ್ ಗೆ ಕೇಂದ್ರ ಸಚಿವ ಶ್ರೀ ಭೂಪೇಂದರ್ ಯಾದವ್ ಚಾಲನೆ
ಡಿಜಿ ಸಕ್ಷಮ್ ಕೌಶಲ್ಯ, ಹೆಚ್ಚಿನ ಕೌಶಲ್ಯ ಮತ್ತು ಮರು ಕೌಶಲ್ಯಕ್ಕೆ ಸಹಾಯ ಮಾಡುತ್ತದೆ, ಉದ್ಯೋಗದ ಕೌಶಲ್ಯಗಳನ್ನು ತಂತ್ರಜ್ಞಾನದೊಂದಿಗೆ ಉನ್ನತೀಕರಿಸುತ್ತದೆ: ಶ್ರೀ ಭೂಪೇಂದರ್ ಯಾದವ್
Posted On:
30 SEP 2021 5:30PM by PIB Bengaluru
ತಂತ್ರಜ್ಞಾನ ಚಾಲಿತ ಯುಗದಲ್ಲಿ ಅಗತ್ಯವಿರುವ ಡಿಜಿಟಲ್ ಕೌಶಲ್ಯಗಳನ್ನು ನೀಡುವ ಮೂಲಕ ಯುವಕರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಡಿಜಿಟಲ್ ಕೌಶಲ್ಯ ಕಾರ್ಯಕ್ರಮ ಡಿಜಿ ಸಕ್ಷಮ್ ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಶ್ರೀ ಭೂಪೇಂದರ್ ಯಾದವ್ ಇಂದು ಚಾಲನೆ ನೀಡಿದರು. ಮೈಕ್ರೋಸಾಫ್ಟ್ ಇಂಡಿಯಾದೊಂದಿಗಿನ ಈ ಜಂಟಿ ಉಪಕ್ರಮವು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಯುವಕರನ್ನು ಬೆಂಬಲಿಸಲು ಸರ್ಕಾರದ ನಡೆಯುತ್ತಿರುವ ಕಾರ್ಯಕ್ರಮಗಳ ವಿಸ್ತರಣೆಯಾಗಿದೆ.
ಡಿಜಿ ಸಕ್ಷಮ್ ಉಪಕ್ರಮದ ಮೂಲಕ, ಮೊದಲ ವರ್ಷದಲ್ಲಿ 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ಮೂಲ ಕೌಶಲ್ಯಗಳು ಮತ್ತು ಉನ್ನತ ಕಂಪ್ಯೂಟಿಂಗ್ ಸೇರಿದಂತೆ ಡಿಜಿಟಲ್ ಕೌಶಲ್ಯಗಳಲ್ಲಿ ಉಚಿತ ತರಬೇತಿಯನ್ನು ನೀಡಲಾಗುವುದು. ಉದ್ಯೋಗಾಕಾಂಕ್ಷಿಗಳು ರಾಷ್ಟ್ರೀಯ ವೃತ್ತಿ ಸೇವೆ (ಎನ್ ಸಿ ಎಸ್) ಪೋರ್ಟಲ್ (www.ncs.gov.in) ಮೂಲಕ ತರಬೇತಿಯನ್ನು ಪ್ರವೇಶಿಸಬಹುದು. ಈ ಉಪಕ್ರಮವು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಕೆಲಸ ಕಳೆದುಕೊಂಡವರು ಸೇರಿದಂತೆ ವಂಚಿತ ಸಮುದಾಯಗಳಿಗೆ ಸೇರಿದ ಅರೆ ನಗರ ಪ್ರದೇಶಗಳ ಉದ್ಯೋಗಾಕಾಂಕ್ಷಿಗಳಿಗೆ ಆದ್ಯತೆ ನೀಡುತ್ತದೆ.
ಚಾಲನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ವೇಗದ ಗತಿಯ ತಂತ್ರಜ್ಞಾನದೊಂದಿಗೆ ಉನ್ನತ ಪದವಿಗಳು, ನಿರಂತರ ಕೌಶಲ್ಯ, ಮರು ಕೌಶಲ್ಯ ಮತ್ತು ಹೆಚ್ಚಿನ ಕೌಶಲ್ಯಗಳು ಅತ್ಯಗತ್ಯವಾಗಿವೆ ಎಂದು ಹೇಳಿದರು.
ಡಿಜಿಸಕ್ಷಮ್ ಉಪಕ್ರಮದ ಅಡಿಯಲ್ಲಿ, ಮೂಲತಃ ಮೂರು ವಿಧದ ತರಬೇತಿ ಇರುತ್ತದೆ. ಡಿಜಿಟಲ್ ಕೌಶಲ್ಯಗಳು - ಸ್ವಯಂ ಗತಿಯ ಕಲಿಕೆ, ವಿಎಲ್‌ಟಿ ಮೋಡ್ ತರಬೇತಿ (ವರ್ಚುವಲ್ ಬೋಧಕರ ನೇತೃತ್ವ) ಮತ್ತು ಐಎಲ್‌ಟಿ ಮೋಡ್ ತರಬೇತಿ (ಬೋಧಕರ ನೇತೃತ್ವ). ವೈಯಕ್ತಿಕ ತರಬೇತಿಯಾಗಿರುವ ಐಎಲ್‌ಟಿ ತರಬೇತಿಯನ್ನು ದೇಶಾದ್ಯಂತ ಎಸ್ ಸಿ/ಎಸ್ ಟಿ ಸಮುದಾಯಗಳಿಗಾಗಿ ಮಾದರಿ ವೃತ್ತಿ ಕೇಂದ್ರಗಳು (ಎಮ್ ಸಿ ಸಿ) ಮತ್ತು ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರಗಳಲ್ಲಿ (ಎನ್ ಸಿ ಎಸ್ ಸಿ ) ನೀಡಲಾಗುತ್ತದೆ.
ಈ ಉಪಕ್ರಮದ ಮೂಲಕ, ರಾಷ್ಟ್ರೀಯ ವೃತ್ತಿ ಸೇವೆ (ಎನ್ ಸಿ ಎಸ್) ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸುಮಾರು ಒಂದು ಕೋಟಿ ಸಕ್ರಿಯ ಉದ್ಯೋಗಾಕಾಂಕ್ಷಿಗಳಿಗೆ ಜಾವಾ ಸ್ಕ್ರಿಪ್ಟ್, ಡೇಟಾ ದೃಶ್ಯೀಕರಣ, ಅಡ್ವಾನ್ಸ್ ಎಕ್ಸೆಲ್, ಪವರ್ ಬೈ, ಹೆಚ್ ಟಿ ಎಂ ಎಲ್, ಪ್ರೋಗ್ರಾಮಿಂಗ್ ಭಾಷೆಗಳು, ಸಾಫ್ಟ್‌ವೇರ್ ಅಭಿವೃದ್ಧಿ, ಕೋಡಿಂಗ್, ಇತ್ಯಾದಿ, ಡಿಜಿಟಲ್ ಆರ್ಥಿಕತೆಯಲ್ಲಿ ಅಗತ್ಯವಿರುವ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು. ಅಗಾ ಖಾನ್ ಗ್ರಾಮೀಣ ಬೆಂಬಲ ಕಾರ್ಯಕ್ರಮ- ಭಾರತ (ಎಕೆ ಆರ್ ಎಸ್ ಪಿ-ಐ ) ಡಿಜಿ ಸಕ್ಷಮ್ ಅನ್ನು ಅನುಷ್ಠಾನಗೊಳಿಸುತ್ತದೆ.
ಕೇಂದ್ರ ಸಚಿವ ಶ್ರೀ ಯಾದವ್ ಅವರು ಈ ಉಪಕ್ರಮಕ್ಕೆ ಇಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುನೀಲ್ ಬಾರ್ಥ್ವಾಲ್, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವಿಶೇಷ ಕಾರ್ಯದರ್ಶಿ . ಶ್ರೀಮತಿ ಅನುರಾಧ ಪ್ರಸಾದ್, ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷರಾದ ಶ್ರೀ ಅನಂತ ಮಹೇಶ್ವರಿ ಮತ್ತು ಅಗಾ ಖಾನ್ ಗ್ರಾಮೀಣ ಬೆಂಬಲ ಕಾರ್ಯಕ್ರಮ-ಭಾರತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಪೂರ್ವ ಓಜಾ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು.
ಭಾರತದ ಡಿಜಿಟಲ್ ಅಂತರವನ್ನು ಬೆಸೆಯುವುದು, ದೇಶವನ್ನು ಸೇರ್ಪಡೆಯ ಆರ್ಥಿಕ ಚೇತರಿಕೆಯ ಹಾದಿಯಲ್ಲಿ ಇಡುವುದು ಮತ್ತು ದೇಶೀಯ ಆರ್ಥಿಕತೆಯ ಅಗತ್ಯಗಳಿಗೆ ಮಾತ್ರವಲ್ಲದೆ, ಡಿಜಿಟಲ್ ಭವಿಷ್ಯದಲ್ಲಿ ವಿದೆಶೀ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ಭಾರತದ ಪ್ರತಿಭೆಯನ್ನು ಸಿದ್ಧಪಡಿಸುವಲ್ಲಿ ಕೌಶಲ್ಯದ ಮಹತ್ವದ ಬಗ್ಗೆ ಸಚಿವ ಶ್ರೀ ಯಾದವ್ ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಕ್ರೋಸಾಫ್ಟ್ ಇಂಡಿಯಾದ ಅಧ್ಯಕ್ಷರು, ಭವಿಷ್ಯದ ಕೌಶಲ್ಯಗಳು ಇಂದಿನಿಂದ ಭಿನ್ನವಾಗಿರುತ್ತವೆ ಮತ್ತು ಡಿಜಿಟಲ್ ಕೌಶಲ್ಯ ಇಕ್ವಿಟಿ ಅಂತರವನ್ನು ಕಡಿಮೆ ಮಾಡಲು ಜನರೊಂದಿಗೆ ಕೆಲಸ ಮಾಡುವ ಸರ್ಕಾರಿ ಮತ್ತು ಖಾಸಗಿ ವಲಯದ ಒಳಗೊಳ್ಳುವಿಕೆ ಮುಖ್ಯವಾಗಿದೆ. ಇದು ಭಾರತದ ಡಿಜಿಟಲ್ ಆರ್ಥಿಕತೆಯ ಪರಿವರ್ತನೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದು ಹೇಳಿದರು.
ಡಿಜಿಸಕ್ಷಮ್ ಉಪಕ್ರಮವು ಮೊದಲ ವರ್ಷದಲ್ಲಿ 300,000 ಕ್ಕಿಂತಲೂ ಹೆಚ್ಚು ಯುವಕರನ್ನು ತಾಂತ್ರಿಕ ಕೌಶಲ್ಯದಲ್ಲಿ ಸಜ್ಜುಗೊಳಿಸುತ್ತದೆ ಮತ್ತು ಉದ್ಯೋಗಾಕಾಂಕ್ಷಿಗಳು ಮೈಕ್ರೋಸಾಫ್ಟ್ ಕಲಿಕೆಯ ಸಂಪನ್ಮೂಲಗಳಾದ ಪ್ರೋಗ್ರಾಮಿಂಗ್ ಭಾಷೆಗಳು, ಡೇಟಾ ವಿಶ್ಲೇಷಣೆ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಸುಧಾರಿತ ಡಿಜಿಟಲ್ ಉತ್ಪಾದಕತೆಯನ್ನು ರಾಷ್ಟ್ರೀಯ ವೃತ್ತಿ ಸೇವೆ ಪೋರ್ಟಲ್‌ನಲ್ಲಿ ಪ್ರವೇಶಿಸಬಹುದು. ಈ ಉಪಕ್ರಮವು ಹಿಂದುಳಿದ ಸಮುದಾಯಗಳಿಗೆ ಸೇರಿದ ಅರೆ ನಗರ ಪ್ರದೇಶಗಳ ಉದ್ಯೋಗಾಕಾಂಕ್ಷಿಗಳಿಗೆ, ವಿಶೇಷವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಅಭ್ಯರ್ಥಿಗಳು, ವಂಚಿತ ಸಮುದಾಯಗಳು, ಕೋವಿಡ್ -19 ಸಾಂಕ್ರಾಮಿಕದಿಂದ ಸ್ಥಳಾಂತರಗೊಂಡ ಅಥವಾ ಉದ್ಯೋಗ ಕಳೆದುಕೊಂಡ ಜನರಿಗೆ ಆದ್ಯತೆ ನೀಡುತ್ತದೆ. ಮೈಕ್ರೋಸಾಫ್ಟ್ ಇಂಡಿಯಾವು ಅಗಾ ಖಾನ್ ಗ್ರಾಮೀಣ ಬೆಂಬಲ ಕಾರ್ಯಕ್ರಮ- ಭಾರತ ಮತ್ತು ಅದರ ಜ್ಞಾನ ಪಾಲುದಾರ TMI e2E ಅಕಾಡೆಮಿಯೊಂದಿಗೆ ಈ ಡಿಜಿಟಲ್ ಉಪಕ್ರಮವನ್ನು ಹೊರತಂದಿದೆ. ಡಿಜಿಸಕ್ಷಮ್ ಕಾರ್ಯಕ್ರಮವನ್ನು ಪ್ರಾರಂಭಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಮತ್ತು ಈ ಉಪಕ್ರಮದಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೆ ಯಶಸ್ಸನ್ನು ಕೋರುತ್ತೇನೆ ಎಂದು ಅವರು ಹೇಳಿದರು.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಷ್ಟ್ರೀಯ ವೃತ್ತಿ ಸೇವೆ (ಎನ್ ಸಿ ಎಸ್) ಯೋಜನೆಯನ್ನು ರಾಷ್ಟ್ರೀಯ ಉದ್ಯೋಗ ಸೇವೆಯಲ್ಲಿನ ಪರಿವರ್ತನೆಗಾಗಿ ಮಿಷನ್ ಮೋಡ್ ಪ್ರಾಜೆಕ್ಟ್ ಆಗಿ ಅನುಷ್ಠಾನಗೊಳಿಸುತ್ತಿದೆ. ಉದ್ಯೋಗ ಹೊಂದಾಣಿಕೆ, ವೃತ್ತಿ ಸಮಾಲೋಚನೆ, ವೃತ್ತಿ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳ ಮಾಹಿತಿ, ಅಪ್ರೆಂಟಿಸ್‌ಶಿಪ್, ಇಂಟರ್ನ್‌ಶಿಪ್‌ಗಳು ಇತ್ಯಾದಿ ಎನ್ ಸಿ ಎಸ್ ಅಡಿಯಲ್ಲಿನ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ. ಇದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು. ಪೋರ್ಟಲ್‌ನಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳು ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ತರಬೇತಿ ನೀಡುವವರು ಮತ್ತು ಉದ್ಯೋಗ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರಿಗೆ ಉಚಿತವಾಗಿವೆ. ಎನ್ ಸಿ ಎಸ್ ಪೋರ್ಟಲ್ ಅನ್ನು ನೇರವಾಗಿ ಅಥವಾ ಉದ್ಯೋಗ ಕೇಂದ್ರಗಳು (ಉದ್ಯೋಗ ವಿನಿಮಯ ಕೇಂದ್ರಗಳು), ಸಾಮಾನ್ಯ ಸೇವಾ ಕೇಂದ್ರಗಳು, ಅಂಚೆ ಕಚೇರಿಗಳು, ಮೊಬೈಲ್ ಸಾಧನಗಳು, ಸೈಬರ್ ಕೆಫೆಗಳು ಇತ್ಯಾದಿಗಳಿಂದ ಪ್ರವೇಶಿಸಬಹುದು.
ವೃತ್ತಿ ಸಮಾಲೋಚನೆ ಸೇವೆಯ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದ್ದು, ಸಚಿವಾಲಯವು 700 ಕ್ಕೂ ಹೆಚ್ಚು ವೃತ್ತಿ ಸಲಹೆಗಾರರ ನೆಟ್‌ವರ್ಕ್ ಅನ್ನು ರಚಿಸಿದೆ. ಅವರು ತಮ್ಮ ವೇಳಾಪಟ್ಟಿಯನ್ನು ನಿಯಮಿತವಾಗಿ ಎನ್ ಸಿ ಎಸ್ ಪೋರ್ಟಲ್‌ನಲ್ಲಿ ಪ್ರಕಟಿಸುತ್ತಿದ್ದಾರೆ. ವೃತ್ತಿ ಸಮಾಲೋಚನೆ ವಿಷಯದ ಜ್ಞಾನ ಭಂಡಾರವನ್ನು ಈಗಿರುವ ಸಮಾಲೋಚನೆ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸುವ ಮೂಲಕ ಮತ್ತು ಮಧ್ಯಸ್ಥಗಾರರಿಂದ ಕಾಲಕಾಲಕ್ಕೆ ಅಪ್‌ಡೇಟ್ ಮಾಡಲು ಅನುಕೂಲವಾಗುವಂತೆ ಮತ್ತು ವಿವಿಧ ಬಳಕೆದಾರರಿಗೆ ಲಭ್ಯವಾಗುವಂತೆ ರಚಿಸಲಾಗಿದೆ. ಉದ್ಯೋಗಗಳ ರಾಷ್ಟ್ರೀಯ ವರ್ಗೀಕರಣ 2015 ರ ಆಧಾರದ ಮೇಲೆ 3600 ಕ್ಕಿಂತ ಹೆಚ್ಚು ಉದ್ಯೋಗಗಳ ಬಗ್ಗೆ ಔದ್ಯೋಗಿಕ ಮಾಹಿತಿಯು ಉದ್ಯೋಗ ಮಾಹಿತಿಯ ಅಡಿಯಲ್ಲಿ ಲಭ್ಯವಿದೆ.
ಭಾರತ ಸರ್ಕಾರವು ಮಾದರಿ ವೃತ್ತಿ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಹಣಕಾಸಿನ ನೆರವು ನೀಡಿದೆ ಮತ್ತು ಈಗಾಗಲೇ 207 ಮಾದರಿ ವೃತ್ತಿ ಕೇಂದ್ರಗಳನ್ನು (7 ಅನುದಾನರಹಿತ ಎಂಸಿಸಿಗಳನ್ನು ಒಳಗೊಂಡಂತೆ) ಅನುಮೋದಿಸಿದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಇನ್ನೂ 200 ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ವೃತ್ತಿ ಮತ್ತು ಉದ್ಯೋಗ ಸಂಬಂಧಿತ ಸೇವೆಗಳ ವಿತರಣೆಗಾಗಿ ಸಂಸ್ಥೆಗಳು ಮತ್ತು ಸಂಸ್ಥೆಗಳ ಪಾಲುದಾರಿಕೆಗಾಗಿ ಎನ್ ಸಿ ಎಸ್ ಪೋರ್ಟಲ್ ಮುಕ್ತ ಅವಕಾಶ ಒದಗಿಸಿದೆ. ಕ್ವಿಕ್ರ್ ಜಾಬ್ಸ್, Monster.com, ಫ್ರೆಶರ್ಸ್ ವರ್ಲ್ಡ್, ಫಸ್ಟ್ ಜಾಬ್, ಮೇರಾ ಜಾಬ್, ಸಿನರ್ಜಿ ರಿಲೇಶನ್‌ಶಿಪ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ವಿಎಸ್ಎಸ್ ಟೆಕ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ Monter.com, ಸರಳ್ ರೋಜ್ಗರ್, ಕ್ಯಾಸಿಯಸ್ ಟೆಕ್ನಾಲಜೀಸ್ ಪ್ರವೇಟ್ ಲಿಮಿಟೆಡ್, Shine.com ನಂತಹ ಕೆಲವು ಪ್ರಮುಖ ಸಂಸ್ಥೆಗಳೊಂದಿಗೆ ನಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಚಿವಾಲಯವು ತೊಡಗಿಸಿಕೊಂಡಿದೆ. ಎನ್ ಸಿ ಎಸ್ ಪೋರ್ಟಲ್ ಈಗ MSDE, MHRD, AICTE ಮುಂತಾದ ಇತರ ಸಚಿವಾಲಯಗಳು/ ಇಲಾಖೆಗಳೊಂದಿಗೆ ಸಂಯೋಜನೆಗೊಳ್ಳುತ್ತಿದೆ.
ಇಂದಿನ ಉದ್ಯೋಗ ಮಾರುಕಟ್ಟೆಯು ಹೆಚ್ಚು ಸ್ಪರ್ಧಾತ್ಮಕವಾಗಿದೆ ಮತ್ತು ಉದ್ಯೋಗದಾತರು ತಮ್ಮ ಸಂಭಾವ್ಯ ಉದ್ಯೋಗಿಗಳಲ್ಲಿ ವಿಷಯ ಪರಿಣತಿಯ ಅಗತ್ಯದೊಂದಿಗೆ ಉದ್ಯೋಗದ ಕೌಶಲ್ಯಗಳನ್ನು ನೋಡುತ್ತಾರೆ. ಉದ್ಯೋಗದ ಕೌಶಲ್ಯಗಳು ಅರ್ಹತೆಗಳು ಮತ್ತು ಅನುಭವವನ್ನು ಮೀರಿದ ಕೌಶಲ್ಯಗಳಾಗಿವೆ.
***
(Release ID: 1759791)
Visitor Counter : 280